ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ ಸಾಂಸ್ಕೃತಿಕ ಅಧ್ಯಯನ

ಪಿಎಚ್.ಡಿ ವಿಷಯ : ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ: ಸಾಂಸ್ಕೃತಿಕ ಅಧ್ಯಯನ
ಸಂಶೋಧಕರು : ಡಾ.ರಾಜಶೇಖರ ಚಂ. ಡೊಂಬರಮತ್ತೂರ, ಜಾನಪದ ಅಧ್ಯಯನ ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಮಾರ್ಗದರ್ಶಕರು : ಪ್ರೊ.ಕೆ.ಆರ್.ದುರ್ಗಾದಾಸ್, ವಿಶ್ರಾಂತ ಪ್ರಾಧ್ಯಾಪಕರು, ಡಾ.ಆರ್.ಸಿ.ಎಚ್.ಕನ್ನಡ
ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಜಾನಪದ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜಾನಪದ ಕ್ಷೇತ್ರ ವಿಸ್ತಾರವೂ ವೆವಿಧ್ಯಮಯವೂ ಆಗಿರುವುದು. ಕಳೆದ ಶತಮಾನದಲ್ಲಿ ಆರಂಭವಾದ ಜಾನಪದ ಅಧ್ಯಯನ ಮೊದಲಿಗೆ ಅದರ ವಾಚಿಕ ರೂಪವನ್ನು ಮಾತ್ರ ಆಧರಿಸಿತ್ತು. ಬರಬರುತ್ತ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯತೊಡಗಿ ಕ್ರೀಡೆ, ಕಲೆ, ವಾಸ್ತು, ವೇಷಭೂಷಣ, ನಂಬಿಕೆ, ಆಚ ರಣೆಗಳಂಥ ಕ್ರಿಯಾತ್ಮಕ ಜಾನಪದವನ್ನು ಅಧ್ಯಯನ ಮಾಡುವುದಕ್ಕೆ ಮೊದಲಾಯಿತು. ಇತ್ತೀಚೆಗಂತೂ ಮಾನವಶಾಸ್ತ್ರದ ವಿದ್ವಾಂಸರು, ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಜಾನಪದವನ್ನು ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿ ಅಧ್ಯಯನ ನಡೆಸುತ್ತಿದ್ದಾರೆ. ಹೀಗಿದ್ದರೂ ಜಾನಪದ ಕ್ಷೇತ್ರದ ಅಧ್ಯಯನ ಮಾಡುವವರಿಗೆ ವಿಪುಲವಾದ ಅವಕಾಶಗಳು ಇವೆ.

ಜಾನಪದದ ಯಾವುದೇ ಪ್ರಕಾರವನ್ನು ಕುರಿತು ಅಧ್ಯಯನ ಮಾಡುವಾಗ ಅದರ ಮುಖ್ಯ ಲಕ್ಷಣಗಳಾದ ಪ್ರಾದೇಶಿಕತೆ (Regional) ಮತ್ತು ಮೌಖಿಕ ಪ್ರಸಾರಣೆ(Oral Transmission)ಗಳು ಗಮನ ಸೆಳೆಯುತ್ತವೆ. ಜಗತ್ತಿನ ಎಲ್ಲ ಪ್ರದೇಶದ ಸಮುದಾಯಗಳು ಜಾನಪದವನ್ನು ಒಂದು ಪರಂಪರೆಯಾಗಿ ಉಳಿಸಿ ಬೆಳೆಸಿಕೊಂಡುಬಂದಿವೆ. ಆಯಾ ಜನಸಮುದಾಯಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಜಾನಪದ ಪರಂಪರೆಯಿಂದ ಹೆಚ್ಚು ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ದೇಶದ ವಿವಿಧ ಸಮುದಾಯಗಳು ಕೂಡ ತಮ್ಮದೇ ಆದ ಜಾನಪದ ಪರಂಪರೆಯನ್ನು ಹೊಂದಿವೆ.

ಕರ್ನಾಟಕದಲ್ಲಿ ಅನೇಕ ಸಮುದಾಯಗಳಿದ್ದು ಪ್ರಾದೇಶಿಕವಾಗಿ ತಮ್ಮದೇಯಾದ ಸಾಂಸ್ಕೃತಿಕ ಕಲಾ ಪರಂಪರೆಯನ್ನು ಹೊಂದಿವೆ. ವಿಶಾಲ ಕರ್ನಾಟಕದ ಭೂಪ್ರದೇಶವನ್ನು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕವೆಂದು ಗುರುತಿಸಲಾಗಿದೆ. ಪಶ್ಚಿಮ ಕರಾವಳಿ ಪ್ರದೇಶ ಅಲ್ಲಿನ ಭೌಗೋಳಿಕ ಮತ್ತು ನೈಸರ್ಗಿಕ ಕಾರಣಗಳಿಂದಾಗಿ ವಿಭಿನ್ನ ಜಾನಪದ ಪರಂಪರೆಯನ್ನು ಹೊಂದಿದೆ. ಈ ಕಾರಣದಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಜಾನಪದ ಕ್ಷೇತ್ರದ ಸಂಶೋಧನೆಗಳು ಪ್ರಾದೇಶಿಕ ಮಟ್ಟದಲ್ಲಿಯೂ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ‘ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ: ಸಾಂಸ್ಕೃತಿಕ ಅಧ್ಯಯನ’ವನ್ನು ಕೈಗೊಂಡು ಪ್ರಬಂಧವನ್ನು ಸಿದ್ಧಪಡಿಸಿದ್ದು, ಅದರ ಒಂದು ಸಾರಾಂಶವನ್ನು ಸಮಾಜಮುಖಿ ಪತ್ರಿಕೆಯ ಮುಖಾಂತರ ಓದುಗರ ಮುಂದೆ ಇಡುತ್ತಿದ್ದೇನೆ.

ಚಿತ್ರಕಲೆ ಆದಿಮಾನವ ಕಾಲದಿಂದ ಸೃಷ್ಟಿಯಾಗಿ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ರೂಪಗಳನ್ನು ಪಡೆದು ಆಧುನಿಕ ಕಾಲದಲ್ಲಿಯೂ ಹೆಚ್ಚು ಮಹತ್ವವನ್ನು ಪಡೆದಿರುವ ಕಲೆಯಾಗಿದೆ. ಆದಿಮಾನವ ಸಮಾಜದಲ್ಲಿ ಭಾಷೆ ಹುಟ್ಟುವುದರ ಪೂರ್ವದಲ್ಲಿಯೇ ಚಿತ್ರಕಲೆ ಸೃಷ್ಟಿಯಾಗಿದ್ದುದಕ್ಕೆ ಅನೇಕ ನಿದರ್ಶನಗಳಿವೆ. ಗುಹೆಗಳಲ್ಲಿ, ಕಲ್ಲುಬಂಡೆಗಳಲ್ಲಿ ರೇಖೆಗಳ ರೂಪದಲ್ಲಿ ಕೊರೆದಿರುವ ಚಿತ್ರಗಳು ಆದಿಮಾನವನ ಆರಂಭದ ಸೃಷ್ಟಿಗಳು ಎನ್ನಬಹುದು. ಬೇಟೆಯಾಡುವುದು ಸಾಮಾನ್ಯವಾಗಿದ್ದ ಆ ಕಾಲದಲ್ಲಿ ಬೇಟೆ ಆಡಬೇಕಾದ ಪ್ರಾಣಿಯ ಚಿತ್ರ ಮತ್ತು ಆಯುಧಗಳ ಚಿತ್ರಗಳನ್ನು ಬಂಡೆಗಳ ಮೇಲೆ ಬರೆಯುತ್ತಿದ್ದ. ಇದರ ಮೂಲಕ ತನ್ನ ಸಹಚರರಿಗೆ ತನ್ನ ಭಾವನೆಗಳನ್ನು ತಿಳಿಯಪಡಿಸುತ್ತಿದ್ದ.

ಚಿತ್ರಕಲೆಗೆ ಮುಖ್ಯ ಪ್ರೇರಣೆ ನಿಸರ್ಗವೇ ಆಗಿದ್ದು ಪ್ರಕೃತಿ ಸಂಪನ್ಮೂಲದಲ್ಲಿಯೇ ತನ್ನ ಕಲೆಯನ್ನು ವ್ಯಕ್ತಪಡಿಸಿದ್ದಾನೆ. ಇಂತಹ ಕಲೆಗಳನ್ನು ಕುರಿತು ಜಾಗತಿಕ ಮಟ್ಟದಲ್ಲಿ 18ನೇ ಶತಮಾನದಿಂದಲೇ ಅಧ್ಯಯನವು ಆರಂಭವಾಗಿರುವುದು ಕಂಡುಬರುತ್ತದೆ. ಮೊದಲಿಗೆ ಆರ್.ಎಸ್. ಬಾಗ್ಸ್ ಅವರು ಲೋಹ, ಕಲ್ಲು, ಕಬ್ಬಿಣ, ಮರ, ನೇಯ್ಗೆ, ಹಚ್ಚೆ ಮೊದಲಾದವುಗಳನ್ನು ಹೆಸರಿಸಿ ಚಿತ್ರಕಲೆಯನ್ನು ಗುರುತಿಸುವ ಪ್ರಯತ್ನ ಮಾಡಿರುವರು. ತರುವಾಯ ಲಾರ್ಕಿನ್ ಸಿ.ಡಬ್ಲ್ಯೂ. ಅವರು ಅಮೆರಿಕಾದ ಪೂರ್ವ ಮನುಷ್ಯರ ಬದುಕಿನ ರೀತಿ-ನೀತಿಗಳ ಜೊತೆಗೆ ಸಮಾಧಿಗಳ ಮೇಲೆ ನಿರ್ಮಿಸಲಾದ ಫಲಕಗಳಲ್ಲಿ ಬಿಡಿಸಿದ ಚಿತ್ತಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ.

ಅನಂತರದಲ್ಲಿ ಸೆಡ್ರಿಕ್ ಡೋವರ್ ಅವರ ‘American Nigro Art’ (1960), ಜೆರಾಲ್ಡ್ ಬೆರ್ರಿಯವರ ‘Man the Artist his Creative Imagination’ (1964), ಜೇಮ್ಸ್ ಥಾಮಸ್ ಫ್ಲೆಕ್ಸನೇರ್ ಅವರ `The Pocket History of American Paintings’(1967), ಪಿ.ಆರ್.ತಿಪ್ಪೇಸ್ವಾಮಿ ಅವರು `ಚಿತ್ರಕಲಾ ಪ್ರಪಂಚ’ (1993) ಹಾಗೂ ಬಿ.ಪಿ. ಬಾಯರಿ ಅವರು ‘ಜಾಗತಿಕ ಚಿತ್ರಕಲೆ’ (1995) ಎಂಬ ಮೊದಲಾದ ಕೃತಿಗಳು ಜಗತ್ತಿನ ಜನಪದ ಚಿತ್ರಕಲೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಒದಗಿಸುತ್ತವೆ. ಜೊತೆಗೆ ದೇಸೀಮಟ್ಟದಲ್ಲಿ ಶಿವರಾಮ ಕಾರಂತರ ‘ಭಾರತೀಯ ಚಿತ್ರಕಲೆ’, ಅ.ನ.ಕೃ. ಅವರ `ಚಿತ್ರಕಲೆ’, ಪ್ರಭಾಕರ ಮಾಚೀವ್ ಅವರ `Creative Arts and Communication’, ವೆರ್ರಿಯರ್ ಎಲ್ವಿನ್ ಅವರ `Tribal Arts of Middle India’, ಸೌಂದರ್ಯ ರಾಜನ್ ಅವರ`The Art of South India’, ರಾಜೇಂದ್ರ ಪ್ರಸಾದ ಅವರ `Arts of South India’, ಪರ್ಸಿ ಬ್ರೌನ್ ಅವರ `Arts and Crafts of India’, ಅನಂತಕೃಷ್ಣ ಅಯ್ಯರ್ ಅವರ `Mysore Tribes and Caste’, ಬಾಲಸುಬ್ರಹ್ಮಣ್ಯಂ ಅವರ `ಕಲೆಗಳು ಮತ್ತು ಮಾನವ’, ಪಿ.ಆರ್.ತಿಪ್ಪೇಸ್ವಾಮಿ ಅವರ `ಬೆಳೆದು ಬಂದ ಭಾರತದ ಚಿತ್ರಕಲೆ’, ಎಸ್.ಸಿ.ಪಾಟೀಲ ಅವರ `ಕರ್ನಾಟಕದ ಜನಪದ ಚಿತ್ರಕಲೆ’ ಹೀಗೆ ಅನೇಕ ವಿದ್ವಾಂಸರು ಜನಪದ ಚಿತ್ರಕಲೆಯನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಆದರೆ ಧಾರವಾಡ ಜಿಲ್ಲೆಯನ್ನೇ ಕೇಂದ್ರೀಕರಿಸಿಕೊಂಡು ಸಮಗ್ರವಾದ ಅಧ್ಯಯನ ನಡೆದಿಲ್ಲ. ಆ ಒಂದು ಕೊರತೆಯನ್ನು ನನ್ನ ಸಂಶೋಧನೆಯ ಮುಖಾಂತರ ನೆರವೇರಿಸಲು ಪ್ರಯತ್ನಿಸಿದ್ದೇನೆ.

ವಿಶ್ರಾಂತಿ ಕಾಲದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಕಸೂತಿ, ಕೌದಿ, ಮದರಂಗಿ, ಹಚ್ಚೆ ಹಾಕಿಸಿಕೊಳ್ಳುವ ಚಟುವಟಿಕೆಗಳು ನಡೆಯುತ್ತವೆ. ಜೊತೆಗೆ ಜಿಲ್ಲೆಯ ಪ್ರತಿ ಹಳ್ಳಿ, ತಾಲೂಕುಗಳಲ್ಲಿ ವರ್ಷದ ಹನ್ನೆರಡು ತಿಂಗಳೂ ನಡೆಯುವ ಹಬ್ಬ-ಹರಿದಿನ, ಜಾತ್ರೆ, ತೇರು, ಉರುಸುಗಳಂಥ ಧಾರ್ಮಿಕ ಆಚರಣೆ, ವಿಧಿವಿಧಾನಗಳ ಸಂದರ್ಭದಲ್ಲಿ ಬಿತ್ತರಗೊಳ್ಳುವ ಆಚರಣಾತ್ಮಕ ಚಿತ್ರಕಲೆಗಳು ವ್ಯಕ್ತಿಯ ಸೃಜನಶೀಲ ಕಲಾ ಚಟುವಟಿಕೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.

ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ ಅಧ್ಯಯನದ ಒಟ್ಟು ಐದು ಅಧ್ಯಾಯಗಳಲ್ಲಿ ಸಂಶೋಧನೆಯ ವಿಷಯವನ್ನು ತಿಳಿಸಿದ್ದು, ವಿಷಯದ ಸ್ಪಷ್ಟತೆಗಾಗಿ ಪ್ರತಿಯೊಂದು ಅಧ್ಯಾಯದಲ್ಲಿಯೂ ಮತ್ತೆ ಉಪಶೀರ್ಷಿಕೆಗಳನ್ನು ಮಾಡಿಕೊಂಡು ವಿವರಿಸಲಾಗಿದೆ. ಈ ಪ್ರದೇಶದ ಜನರ ಸೌಂದರ್ಯ ಪ್ರಜ್ಞೆ ಮತ್ತು ಅವರ ಸೃಷ್ಟ್ಯಾತ್ಮಕತೆಯ ಎಳೆಗಳನ್ನು ಹಂತಹಂತವಾಗಿ ತಿಳಿಸಲಾಗಿದೆ. ಈ ಜಿಲ್ಲೆಯ ಹೆಣ್ಣುಮಕ್ಕಳು ತಮ್ಮ ಮನೆಯ ಅಂಗಳವನ್ನು ಶುಚಿಯಾಗಿಟ್ಟುಕೊಳ್ಳುವುದು, ಗೋಡೆ, ಬಾಗಿಲುಗಳಿಗೆ ಚಿತ್ರಗಳನ್ನು ಬಿಡಿಸುವುದು, ಅಂಗಳದಲ್ಲಿ ರಂಗೋಲಿ ಹಾಕುವುದು ಮುಂತಾದ ಚಟುವಟಿಕೆಗಳು ಅವರಲ್ಲಿರುವ ಚಿತ್ರಕಲಾಸಕ್ತಿಗೆ ಕಾರಣವಾಗಿವೆ.

ಪುರುಷರೂ ಸಹ ಹಲವು ಬಗೆಯ ಕಲಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂಬುದನ್ನು ಕಾರಹುಣ್ಣಿಮೆಯಲ್ಲಿ ಎತ್ತುಗಳ ಅಲಂಕಾರ, ಎತ್ತುಗಳ ಮೈಮೇಲೆ ಹಾಕುವ ಜೂಲು, ಕೃಷಿ ಸಲಕರಣೆಗಳ ಮಾಟ ಮುಂತಾದವುಗಳ ಉದಾಹರಣೆ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿದ್ದೇನೆ. ವಿಶ್ರಾಂತಿ ಕಾಲದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಕಸೂತಿ, ಕೌದಿ, ಮದರಂಗಿ, ಹಚ್ಚೆ ಹಾಕಿಸಿಕೊಳ್ಳುವ ಚಟುವಟಿಕೆಗಳು ನಡೆಯುತ್ತವೆ. ಜೊತೆಗೆ ಜಿಲ್ಲೆಯ ಪ್ರತಿ ಹಳ್ಳಿ, ತಾಲೂಕುಗಳಲ್ಲಿ ವರ್ಷದ ಹನ್ನೆರಡು ತಿಂಗಳೂ ನಡೆಯುವ ಹಬ್ಬ-ಹರಿದಿನ, ಜಾತ್ರೆ, ತೇರು, ಉರುಸುಗಳಂಥ ಧಾರ್ಮಿಕ ಆಚರಣೆ, ವಿಧಿವಿಧಾನಗಳ ಸಂದರ್ಭದಲ್ಲಿ ಬಿತ್ತರಗೊಳ್ಳುವ ಆಚರಣಾತ್ಮಕ ಚಿತ್ರಕಲೆಗಳು ವ್ಯಕ್ತಿಯ ಸೃಜನಶೀಲ ಕಲಾ ಚಟುವಟಿಕೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.

ಇವುಗಳಿಗೆ ಜೊತೆಯಾಗಿ ವೃತ್ತಿ ಆಧಾರಿತ ಆಯಗಾರರು ತಮ್ಮತಮ್ಮ ವೃತ್ತಿಗಳಲ್ಲಿ ತೋರುವ ಕಲಾಕೌಶಲಗಳು ಚಿತ್ರಕಲೆಯ ಬೆಳವಣಿಗೆಗೆ ನಿದರ್ಶನವಾಗಿವೆ. ಚಪ್ಪಲಿ, ದನಗಳ ಕೊರಳ ಪಟ್ಟಿ, ಬಾರುಕೋಲು, ಜತ್ತಿಗೆ ಮುಂತಾದ ವಸ್ತುಗಳ ನಿರ್ಮಾಣದಲ್ಲಿ ಚಮ್ಮಾರರ ಕಲಾಕೌಶಲ್ಯ; ಕುಂಬಾರರು ತಯಾರಿಸುವ ವಿವಿಧ ಆಕಾರದ ಗಡಿಗೆಗಳು, ಕೊಡ, ಮಗಿ, ಹೂವಿನ ಕುಂಡ ಮುಂತಾದವುಗಳನ್ನು ತಯಾರಿಸುವಲ್ಲಿ ಅವರ ಕೌಶಲ್ಯ ಎದ್ದುಕಾಣುತ್ತದೆ. ಹಾಗೆಯೇ ಕಮ್ಮಾರರು, ಚಿನಿವಾರರು, ಬಡಿಗಾರರು ಮುಂತಾದವರೆಲ್ಲ ವೃತ್ತಿಯ ಜೊತೆಗೆ ತಮ್ಮಿಂದ ಸಿದ್ಧಗೊಳ್ಳುವ ವಸ್ತುಗಳಿಗೆ ಕಲಾತ್ಮಕತೆಯನ್ನು ಪ್ರಕಟಿಸುತ್ತಾರೆ. ಇದು ಅವರ ಕಲಾಪ್ರಜ್ಞೆಗೆ ಸಾಕ್ಷಿಯಾಗಿರುವಂತೆ ಅವರ ವಸ್ತುಗಳನ್ನು ಕೊಳ್ಳುವ ಗ್ರಾಹಕರಲ್ಲಿಯೂ ಸೌಂದರ್ಯಪ್ರಜ್ಞೆಯನ್ನು ಬೆಳೆಸುತ್ತದೆ. ಪುರುಷರಿಂದ ರಚಿತವಾಗುವ ವಸ್ತುಗಳಲ್ಲಿ ಕಾಣುವ ಸೌಂದರ್ಯಪ್ರಜ್ಞೆ ಹಾಗೂ ಸ್ತ್ರೀಯರಿಂದ ರಚಿತವಾಗುವ ವಸ್ತುಗಳಲ್ಲಿ ಕಾಣುವ ಸೌಂದರ್ಯಪ್ರಜ್ಞೆಯನ್ನು ಪ್ರತ್ಯೇಕವಾಗಿ ಗುರುತಿಸಿ ಜಿಲ್ಲೆಯ ಕಲೆಗಳನ್ನು ಪರಿಚಯಿಸಿದ್ದೇನೆ.

ಬೆಳದಿಂಗಳ ಚಿತ್ರಗಳನ್ನು ಬಿಡಿಸುವ ಮಹಿಳೆಯರು ಅವಿವಾಹಿತವಾಗಿದ್ದರೆ ಕಂಕಣಭಾಗ್ಯ, ಮದುವೆಯಾದವರಿಗೆ ಮುತ್ತೈದೆಭಾಗ್ಯ, ಮಕ್ಕಳಭಾಗ್ಯ ಪ್ರಾಪ್ತವಾಗುವುದೆಂಬ ನಂಬಿಕೆಯಿದೆ. ರಂಗೋಲಿ ಮತ್ತು ಚಿತ್ರಗಳನ್ನು ಬಿಡಿಸುವ ಮಹಿಳೆಯ ದುಗುಡ-ದುಮ್ಮಾನಗಳು ಕಳೆದು ಹೋಗಿ ಅವಳ ಮನಸ್ಸು ಹಗುರಾಗುತ್ತದೆ. ಆ ಚಿತ್ರಗಳನ್ನು ನೋಡುವುದರಿಂದ ಮನಸ್ಸು ಶಾಂತತೆಯಿಂದ ಪ್ರಫುಲ್ಲಗೊಳ್ಳುತ್ತದೆ.

ಈ ಚಿತ್ರಕಲೆಯು ಜನಪದರ ಜನಜೀವನದಲ್ಲಿ ಹೊಂದಿರುವ ಮಹತ್ವ ಎಂತಹುದೆಂಬುದನ್ನು ಅರುಹುವುದರೊಂದಿಗೆ ಚಿತ್ರಕಲೆಯಿಂದ ದೊರಕುವ ಪ್ರಯೋಜನಗಳ ವಿವರಣೆಯನ್ನು ಕೊಟ್ಟಿರುವೆನು. ಉದಾಹರಣೆಗೆ ಬೆಳದಿಂಗಳ ಚಿತ್ರಗಳನ್ನು ಬಿಡಿಸುವ ಮಹಿಳೆಯರು ಅವಿವಾಹಿತವಾಗಿದ್ದರೆ ಕಂಕಣಭಾಗ್ಯ, ಮದುವೆಯಾದವರಿಗೆ ಮುತ್ತೈದೆಭಾಗ್ಯ, ಮಕ್ಕಳಭಾಗ್ಯ ಪ್ರಾಪ್ತವಾಗುವುದೆಂಬ ನಂಬಿಕೆಯಿದೆ. ರಂಗೋಲಿ ಮತ್ತು ಚಿತ್ರಗಳನ್ನು ಬಿಡಿಸುವ ಮಹಿಳೆಯ ದುಗುಡ-ದುಮ್ಮಾನಗಳು ಕಳೆದು ಹೋಗಿ ಅವಳ ಮನಸ್ಸು ಹಗುರಾಗುತ್ತದೆ. ಆ ಚಿತ್ರಗಳನ್ನು ನೋಡುವುದರಿಂದ ಮನಸ್ಸು ಶಾಂತತೆಯಿಂದ ಪ್ರಫುಲ್ಲಗೊಳ್ಳುತ್ತದೆ.

ಜನಪದ ಕಲೆಯ ಬಣ್ಣಗಾರಿಕೆಯ ಬಗ್ಗೆ ತಿಳಿಸುತ್ತಾ, ಜನಪದರ ಚಿತ್ರಕಲೆಯಲ್ಲಿ ಬಣ್ಣದ ಬಳಕೆ ತುಂಬ ಪ್ರಾಚೀನವಾದುದು; ಲಭ್ಯವಿರುವ ಪ್ರಾಕೃತಿಕ ಸಂಪನ್ಮೂಲಗಳಾದ ವಿವಿಧ ಗಿಡದ ಬೇರು, ಕಾಂಡ, ಎಲೆ, ಮಣ್ಣು ಮುಂತಾದವುಗಳನ್ನು ಬಳಸಿಕೊಂಡು ಯಾವ ಯಾವ ರೀತಿಯ ಬಣ್ಣಗಳನ್ನು ನಮ್ಮ ಪೂರ್ವಜರು ತಯಾರಿಸುತ್ತಿದ್ದರು ಎಂಬುದನ್ನು ಗುರುತಿಸಿದ್ದೇನೆ. ಈ ಬಣ್ಣಗಳು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಬಹುದೊಡ್ಡ ಮಾಧ್ಯಮವಾಗಿದ್ದರಿಂದ ಯಾವ ಯಾವ ಆಕೃತಿಗೆ ಯಾವ ಯಾವ ಬಣ್ಣವನ್ನು ಬಳಸಬೇಕೆಂಬುದನ್ನು ಜನಪದರು ಬಳಸಿದ್ದನ್ನು ಸೂಕ್ಷ್ಮವಾಗಿ ತಿಳಿಸಿದ್ದೇನೆ.

ಜಾನಪದದ ಯಾವುದೇ ಕಲಾಪ್ರಕಾರವನ್ನು ಕುರಿತು ಅಧ್ಯಯನ ಮಾಡುವಾಗ ಅಲ್ಲಿ ಮೂರು ಘಟಕಗಳು ಆಯಾ ಕಲಾಪ್ರಕಾರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕಂಡುಬರುತ್ತದೆ.

  1. ಪ್ರಾದೇಶಿಕತೆ (Regionality),
  2. ಮೌಖಿಕ ಪ್ರಸರಣ (Oral Transmission),
  3. ಕಾಲ (Era). ಜಾನಪದವು ವಿಶ್ವದೆಲ್ಲೆಡೆ ಕಂಡುಬರುವ ಸಾಂಸ್ಕೃತಿಕ ಘಟಕವಾಗಿದೆ. ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆಯು ವಿಶ್ವದಾದ್ಯಂತ ಪ್ರಚಲಿತವಿರುವ ಚಿತ್ರಕಲೆಯ ಸಾಮಾನ್ಯ ಲಕ್ಷಣಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಸಲಾಗಿದೆ.

ಒಂದು ಜಿಲ್ಲೆಯ ಪ್ರದೇಶದ ಗರ್ಭದಲ್ಲಿ ಜನಪದ ಕಲಾವಿದರ ಭಾವನೆಗಳು ಅಡಗಿಕೊಂಡು ಅವುಗಳನ್ನು ಹಬ್ಬ, ಹುಣ್ಣಿಮೆ, ಜಾತ್ರೆ, ಉತ್ಸವಾದಿ ಸಂದರ್ಭಗಳಲ್ಲಿ ಹೊರಹಾಕಿ ತಮ್ಮ ಸೌಂದರ್ಯಪ್ರಜ್ಞೆಯನ್ನು ವ್ಯಕ್ತಪಡಿಸುತ್ತಾರೆ. ಹಾಗಾಗಿ ಈ ಬಗೆಯ ಅಧ್ಯಯನ ಉಳಿದ ಜಿಲ್ಲೆಗಳನ್ನೂ ಕೇಂದ್ರವಾಗಿಟ್ಟುಕೊಂಡು ಅಲ್ಲಿನ ಜನಪದ ಚಿತ್ರಕಲೆಯ ಕುರಿತು ಸಂಶೋಧನೆ ಮಾಡಲು ಈ ಮಹಾಪ್ರಬಂಧ ಪ್ರೇರಣೆಯಾಗಬಹುದೆಂಬ ಸದಾಶಯದ ಹುಮ್ಮಸ್ಸಿನಲ್ಲಿದ್ದೇನೆ.

*ಲೇಖಕರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಜಾನಪದ’ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದಿದ್ದಾರೆ. ಚಿತ್ರಕಲೆ, ಸಾಹಿತ್ಯ, ಫೋಟೋಗ್ರಫಿಯಲ್ಲಿ ಆಸಕ್ತಿ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

One Response to " ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ ಸಾಂಸ್ಕೃತಿಕ ಅಧ್ಯಯನ

ಡಾ.ರಾಜಶೇಖರ ಡೊಂಬರಮತ್ತೂರ

"

Leave a Reply

Your email address will not be published.