ಧಾರವಾಡ: ಹಲವು ತಲೆಮಾರುಗಳ ಸಂಗೀತ ಶಾಲ್ಮಲೆ

ವಿದ್ಯಾರ್ಥಿ ದೆಸೆಯಿಂದಲೂ ಧಾರವಾಡದ ದಿವ್ಯ ಪರಿಸರದಲ್ಲಿ ಬೆಳೆದವನು ನಾನು. ನನ್ನ ಫೋಟೊಗ್ರಫಿ ವೃತ್ತಿಯಿಂದಾಗಿ ಅನೇಕ ಸಾಹಿತಿಗಳ, ವಿದ್ವಜ್ಜನರ, ಕಲಾವಿದರ, ಸಂಗೀತಗಾರರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತಲ್ಲ. ಅದು ನನ್ನ ಜೀವನದ ಪರಮ ಸೌಭಾಗ್ಯ.

-ಶಶಿ ಸಾಲಿ

ಧಾರವಾಡದ ಕಣ ಕಣದಲ್ಲೂ ಸಂಗೀತ ಅನುರುಣಿಸುತ್ತದೆ. ಅನೇಕ ತಲೆಮಾರುಗಳಿಂದ, ತಮ್ಮ ಸಂಗೀತದ ಪ್ರತಿಭೆ, ಪ್ರಭೆಯಿಂದ ಈ ನೆಲದ ಕಣ ಕಣವನ್ನು ಸಂಗೀತಮಯವಾಗಿ ಮಾಡಿ ಸಿರಿಗಂಧವನ್ನು ಹರಡಿದವರಿದ್ದಾರೆ. ‘ಭಾರತರತ್ನ’ ಪ್ರಶಸ್ತಿ ಪುರಸ್ಕøತ ಡಾ.ಭೀಮಸೇನ ಜೋಶಿ ಅವರ ಗುರುಗಳಾಗಿದ್ದ ಸವಾಯಿ ಗಂಧರ್ವರಿಂದ ಆರಂಭವಾಗಿದ್ದ ಈ ಸಂಗೀತದ ಸಾಂಸ್ಕøತಿಕ ಪರಂಪರೆಗೆ ಕೊಡುಗೆ ನೀಡಿ ಶ್ರೀಮಂತ ಗೊಳಿಸಿದವರು ಅನೇಕರು.

ಅಂಧ ಸಂತ ಪಂಚಾಕ್ಷರ ಗವಾಯಿಗಳು, ಅವರ ಶಿಷ್ಯ ಪುಟ್ಟರಾಜ ಗವಾಯಿಗಳು, ಪದ್ಮವಿಭೂಷಣ ಡಾ.ಮಲ್ಲಿಕಾರ್ಜುನ ಮನಸೂರ, ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್, ಪದ್ಮಭೂಷಣ ಡಾ.ಬಸವರಾಜ ರಾಜಗುರು, ಸಿತಾರ ರತ್ನ ರಹಿಮತಖಾನರ ಮಗ ಅಬ್ದುಲ್ ಕರೀಮ್ ಖಾನ್ ಅವರ ಮಗ ಉಸ್ತಾದ ಬಾಲೇಖಾನ,  ಜಮಖಂಡಿ ಸಂಸ್ಥಾನದ ಆಸ್ಥಾನ ಸಂಗೀತಗಾರರಾಗಿದ್ದ ಗಣಪತರಾವ ಗುರವ, ಅವರ ಮಗ ಸಂಗಮೇಶ ಗುರವ, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಸೋಮನಾಥ ಮರಡೂರ, ಇನ್ನೂ ಅನೇಕರು ಈ ನೆಲದಲ್ಲಿ ಸಂಗೀತವನ್ನು ಬಿತ್ತಿ ಅಮೋಘವಾಗಿ ಬೆಳೆಯುವಂತೆ ಮಾಡಿದರು.

ಸವಾಯಿ ಗಂಧರ್ವರ ನೇರ ಶಿಷ್ಯರಾದ ಭೀಮಸೇನ ಜೋಶಿಯವರ ಮಗ ಶ್ರೀನಿವಾಸ ಸಂಗೀತ ಕ್ಷೇತ್ರದಲ್ಲಿ ಕಾಲಿಡದಿದ್ದರೂ ಅವರ ಮಗ, ಭೀಮಣ್ಣನ ಮೊಮ್ಮಗ ವಿರಾಜ್ ಆ ಪರಂಪರೆಯನ್ನು ಮುಂದುವರೆಸಿದ್ದಾರೆ. ಭೀಮಸೇನ ಜೋಶಿಯವರ ಶಿಷ್ಯರಲ್ಲಿ ಆನಂದ ಭಾಟೆ, ಹರೀಶ್ ತಿವಾರಿ ಅತ್ಯಂತ ಪ್ರತಿಭಾನ್ವಿತರು. ಹರೀಶ್ ತಿವಾರಿಯಂತು ಹಾಡುಗಾರಿಕೆಯಲ್ಲಿ ಭೀಮಣ್ಣನ ಪ್ರತಿರೂಪವೆ. 

ಡಾ.ಗಂಗೂಬಾಯಿ ಹಾನಗಲ್ಲ ಅವರ ಮಗಳು ಕೃಷ್ಣಾ ಹಾನಗಲ್ಲ ಬಿಟ್ಟರೇ ಅವರ ಮಕ್ಕಳ್ಯಾರೂ ಅವರನ್ನು ಪ್ರತಿನಿಧಿಸಲಿಲ್ಲ. ಇದೀಗ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ಲ, ಸೊಸೆ (ಮೊಮ್ಮಗ ದಿನೇಶ ಅವರ ಹೆಂಡತಿ) ವೀಣಾ ಹಾನಗಲ್ಲ ಈ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಸುಲಭಾದತ್ತ ನೀರಲಗಿ, ನಾಗನಾಥ ಒಡೆಯರ, ಅಶೋಕ ನಾಡಗೇರ, ಗಂಗೂಬಾಯಿ ಅವರ ನೇರ ಶಿಷ್ಯರು.

ಪದ್ಮವಿಭೂಷಣ ಡಾ.ಮಲ್ಲಿಕಾರ್ಜುನ ಮನಸೂರ ಅತ್ಯಂತ ಸರಳ ಸಜ್ಜನಿಕೆಯ ಸಂಗೀತಗಾರರಾಗಿದ್ದರು. ಪಂ.ಅಲ್ಲಾದಿಯಾ ಖಾನರ ನೇರ ಶಿಷ್ಯರಾಗಿದ್ದ ಮಲ್ಲಿಕಾರ್ಜುನ ಮನಸೂರ ರಾಷ್ಟ್ರದ ತುಂಬೆಲ್ಲಾ ಹೆಸರು ಮಾಡಿದವರು. ಅವರ ಸಹೋದರ ಬಸವರಾಜ ಮನಸೂರ ಸಂಗೀತ ಪ್ರವೀಣರಾಗಿದ್ದರೂ ಅವರ ಒಲವು ನಾಟಕ ಮತ್ತು ರಂಗಗೀತೆಗಳಿಗೆ ಸೀಮಿತವಾಗಿ ಆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದರು. ಮಗ ಡಾ.ರಾಜಶೇಖರ ಮನಸೂರ ಒಳ್ಳೆಯ ಹಾಡುಗಾರರು. ಆದರೆ ಅವರು ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ ಈ ಕ್ಷೇತ್ರವನ್ನು ಸ್ವಲ್ಪ ಅಲಕ್ಷಿಸಿದರೆನೋ… ಮನಸೂರ ಅವರು ತಮ್ಮ ಜೀವಿತಾವಧಿವರೆಗೂ ತಮ್ಮ ಗುರು ಪಂ.ಅಲ್ಲಾದಿಯಾ ಖಾನರ ಪುಣ್ಯತಿಥಿಯನ್ನು ರಾಷ್ಟ್ರದ ಶ್ರೇಷ್ಠ ಸಂಗೀತಗಾರರನ್ನು ಧಾರವಾಡಕ್ಕೆ ಕರೆಯಿಸಿ ಅಹೋರಾತ್ರಿ ಸಂಗೀತ ಕಛೇರಿ ನಡೆಸುವುದರ ಮೂಲಕ ಆಸಕ್ತರಿಗೆ ರಸಗವಳ ನೀಡುತ್ತಿದ್ದರು. ಇದೀಗ ಆ ಪರಂಪರೆಯನ್ನು ಮಗ ಪ್ರೊ.ರಾಜಶೇಖರ ಮನಸೂರ ಮುಂದುವರೆಸಿದ್ದಾರೆ. ಮನಸೂರರ ಮಗಳ ನೀಲಮ್ಮ ಕೊಡ್ಲಿ ಸಂಗೀತಗಾರರಾಗಿ ಹೊರಹೊಮ್ಮಿದ್ದು ಅಳಿಯ ಪ್ರೊ.ಎ.ಯು.ಪಾಟೀಲ ಕೂಡ ಸಂಗೀತ ಸೇವೆ ಮಾಡಿದವರೆ. 

ಇನ್ನು ಪಂಚಾಕ್ಷರ ಗವಾಯಿ, ಪಂ.ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಪಳಗಿದ ಪದ್ಮಭೂಷಣ ಡಾ.ಬಸವರಾಜ ರಾಜಗುರು ದೇಶದ ಉದ್ದಗಲಕ್ಕೂ ತಮ್ಮ ಘರಾಣೆಯಿಂದ ಹೆಸರು ಮಾಡಿದವರು. ಅವರ ಮಗ ನಿಜಗುಣ ರಾಜಗುರು ಸಂಗೀತಗಾರನಾಗದಿದ್ದರೂ, ತಂದೆಯ ಹೆಸರಿನಲ್ಲಿರುವ ಟ್ರಸ್ಟ್ ಮೂಲಕ ಸಂಗೀತ ಸೇವೆಯನ್ನು ಮುಂದುವರಿಸಿದ್ದಾರೆ. ಆದರೆ ರಾಜಗುರು ಅವರ ಶಿಷ್ಯ, ಪ್ರಶಿಷ್ಯರ, ಗುಂಪು ದೊಡ್ಡದು. ಉತ್ತಮ ಸಾಧನೆಯ ಮೂಲಕ ಪ್ರಖ್ಯಾತರಾಗಿ ಗುರು ಪರಂಪರೆಯನ್ನು ಮುಂದುವರಿಸಿದ್ದಾರೆ.

ಗಣಪತಿಭಟ್ಟ ಹಾಸಣಗಿ ದೇಶದಲ್ಲಿ ಪ್ರಖ್ಯಾತ ಹೆಸರು ಪಡೆದಿರುವದಷ್ಟೇ ಅ¯್ಲ ತಮ್ಮ ಗುರುಗಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವದರ ಮೂಲಕ ಪರಂಪರೆಯ ಹರಿಕಾರರಾಗಿ, ಅನೇಕ ಶಿಷ್ಯರನ್ನು ಬೆಳೆಸುತ್ತಿದ್ದಾರೆ. ಕರ್ನಾಟಕವಷ್ಟೇ ಅಲ್ಲದೇ ದೇಶದ ತುಂಬಾ ಪ್ರಖ್ಯಾತವಾಗಿರುವ ಸಂಗೀತಾ ಕಟ್ಟಿ ಶಾಸ್ರ್ತೀಯ ಸಂಗೀತದ ಜೊತೆಯಲ್ಲದೇ ಡಾ.ರಾಜಕುಮಾರ್ ಹಾಗೂ ಬಹುಭಾಷಾ ಸಂಗೀತ ಪ್ರವೀಣರಾದ ಪಂ.ಬಾಲಮುರಳಿ ಕೃಷ್ಣ ಅವರ ಜೊತೆ ಯುಗಳ ಗೀತೆಯಲ್ಲಿ ಭಾಗವಹಿಸಿ, ಸಂಗೀತ ಕ್ಷೇತ್ರದ ವಿವಿಧ ಮಜಲುಗಳಲ್ಲ್ಲಿ ತಮ್ಮ ಛಾಪನ್ನು ಮುಂದುವರಿಸಿದ್ದಾರೆ. ರಾಜಗುರು ಅವರ ಇನ್ನೋರ್ವ ಶಿಷ್ಯೆ ಪೂರ್ಣಿಮಾ ಭಟ್ ರಾಷ್ಟ್ರವ್ಯಾಪಿ ಖ್ಯಾತಿ ಪಡೆದಿದ್ದಾರೆ.

ಧಾರವಾಡದ ಪಂಚಾಕ್ಷರ ಸ್ವಾಮಿ ಮತ್ತಿಗಟ್ಟಿ, ಅವರ ಶಿಷ್ಯ ಹವಾಲ್ದಾರ ಮತ್ತು ಅನೇಕ ಶಿಷ್ಯರು ಧಾರವಾಡ ಸಂಗೀತ ಪರಂಪರೆಯ ಹಳೆಯ ಕೊಂಡಿಗಳೇ. ಧಾರವಾಡದ ಪ್ರತಿಭೆಗಳಲ್ಲಿ ಸೋಮನಾಥ ಮರಡೂರ ಅವರದು ವಿಶೇಷ. ಆರಂಭದ ಹಂತದಲ್ಲೇ ಬಂಗಾರದ ಪದಕ ಪಡೆದ ಪ್ರತಿಭಾವಂತ ಗಾಯಕ. ಈ ಪ್ರತಿಭಾವಂತ ಗಾಯಕರ ಮಕ್ಕಳಾದ ವಾಣಿ ಮರಡೂರ, ವೀಣಾ ಮರಡೂರ, ಕುಮಾರ ಮರಡೂರ ಅಪ್ಪಟ ಮರಡೂರರ ಸಂಗೀತ ಕುಡಿಗಳಾಗಿ ಹೊರಹೊಮ್ಮಿದ್ದಾರೆ.

ಧಾರವಾಡದ ನೂರಾರು ಪ್ರತಿಭೆಗಳಿಗೆ ನಿಜವಾದ ಶ್ರೇಷ್ಠ ಸಂಗೀತದ ಗುರುಗಳೆನಿಸಿಕೊಂಡವರು ಪುರಾಣಿಕಮಠ. ಹಾಡುಗಾರಿಕೆಯಲ್ಲಿ ಅವರ ಸೊಂಪು, ಇಂಪು, ಲಾಲಿತ್ಯ, ಬಸವರಾಜ ರಾಜಗುರುಗಳಿಗೆ ಸಮವಾಗಿತ್ತೇನೋ. ಪುರಾಣಿಕಮಠರ ಗರಡಿಯಲ್ಲೇ ಸಂಗೀತಾ ಕಟ್ಟಿಯ ಸಂಗೀತದ ಓನಾಮ ಶುರುವಾಗಿದ್ದು.

ಜಮಖಂಡಿ ಸಂಸ್ಥಾನದಲ್ಲಿ ಆಸ್ಥಾನ ಸಂಗೀತಗಾರರಾಗಿದ್ದ ಗಣತಿರಾವ ಗುರುವ ಅತ್ಯಂತ ಖ್ಯಾತಿ ಪಡೆದ ಸಂಗೀತಗಾರರಾಗಿದ್ದರು. ಅವರ ಮಗ ಹಿಂದುಸ್ಥಾನಿ ಗಾಯಕ ಸಂಗಮೇಶ ಗುರವ ಕೆಲಕಾಲ ಬೆಳಗಾವಿಯಲ್ಲಿದ್ದು ಧಾರವಾಡಕ್ಕೆ ಬಂದು ನೆಲೆಸಿದರು. ಸಂಗಮೇಶ ಅವರ ಮಕ್ಕಳಲ್ಲಿ ಹಿರಿಯವರಾದ ನಂದಿಕೇಶ್ವರ ಗುರವ ತಬಲಾ ಪಟುವಾದರೆ, ಎರಡನೆಯ ಮಗ ಕೈವಲ್ಯ ಗುರವ ಬಹುದೊಡ್ಡ ಸಂಗೀತಗಾರರು. ಮಹಾರಾಷ್ಟ್ರದಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಮಗಳು ಸುಜಾತಾ ಗುರವ ಸಂಗೀತ ಪ್ರವೀಣೆ. ಇವರೆಲ್ಲ ಗುರವ ಮನೆತನದ ಮೂರನೇ ತಲೆಮಾರು.

ಮೈಸೂರು ಮಹಾರಾಜರ ದಸರಾ ಸಂಗೀತೋತ್ಸವದಲ್ಲಿ ಭಾಗವಹಿಸಲು ಇಂಧೋರನಿಂದ ಬಂದಿದ್ದ ಸಿತಾರರತ್ನ ರಹಿಮತ್ ಖಾನ, ಮೈಸೂರಿಗೆ ತೆರಳುವ ದಾರಿಯಲ್ಲಿ ಧಾರವಾಡದ ರೈಲು ನಿಲ್ದಾಣದಲ್ಲಿ ವಿಳಂಬವಾಗಿ ಕೆಲಕಾಲ ಕಳೆದರಂತೆ. ಧಾರವಾಡದ ಪರಿಸರ ಅವರನ್ನು ಮಂತ್ರಮುಗ್ಧರಾಗಿನ್ನಾಗಿಸಿತಂತೆ. ಮುಂದೆ ಧಾರವಾಡಕ್ಕೆ ಬಂದು ನೆಲೆಸಿದ ರಹಿಮತ್ ಖಾನರ ಮನೆತನದ ಸಂಗೀತ ಪರಂಪರೆಯೇ ಕೌತುಕವಾದದ್ದು. ರೇಲ್ವೆ ನಿಲ್ದಾಣದ ಸಮಿಪವೇ ಅವರು ಸ್ಥಾಪಿಸಿದ ಭಾರತೀಯ ಸಂಗೀತ ವಿದ್ಯಾಲಯವನ್ನು ಮಗ ಅಬ್ದುಲ್ ಕರಿಂಖಾನ ಸಾಹೇಬರು ಮುಂದುವರಿಸಿದರು. ಈ ಮನೆತನದ ಪ್ರತಿ ಸದಸ್ಯರು ಸಿತಾರವಾದನದಲ್ಲಿ ಅತ್ಯಂತ ನಿಷ್ಣಾತರು. ಸುಮಾರು ಆರೋ ಎಳನೆಯ ತಲೆಮಾರಿಗೆ ಮುಂದುವರಿದಿರುವ ಈ ಖಾನ್ ಸಾಹೇಬರ ಮನೆತನದಲ್ಲಿ ಇದೀಗ 13 ಜನ ಸಿತಾರವಾದಕರು ಇದ್ದಾರೆ.

ಕರೀಂಖಾನ ಸಾಹೇಬರ ಹಿರಿಯ ಮಗ ಉಸ್ತಾದ ಬಾಲೇಖಾನ ಆಕಾಶವಾಣಿ ಕಲಾವಿದರಲ್ಲದೇ ದೇಶವಿದೇಶಗಳಲ್ಲಿ ಸಂಗೀತ ಕಛೇರಿ ನಡೆಸಿದ ಪ್ರತಿಭಾವಂತರು. ಅವರ ಅಜ್ಜ ಸಿತಾರರತ್ನ ರಹಿಮತ ಖಾನರ ಪುಣ್ಯತಿಥಿ ಸಂಗೀತೋತ್ಸವವನ್ನು ಕಳೆದ ಅರವತ್ತೈದು ವರ್ಷಗಳಿಂದ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ದೇಶದ ಸುವಿಖ್ಯಾತ ಸಂಗೀತಗಾರರೆಲ್ಲ ಈ ಪುಣ್ಯತಿಥಿ ಸಂಗೀತೋತ್ಸವದಲ್ಲಿ ಭಾಗಿಯಾಗಿ ಹೆಮ್ಮೆ ಪಟ್ಟಿರುವುದು ಧಾರವಾಡದ ಸಂಗೀತ ಪರಂಪರೆಯ ದಂತ ಕಥೆಯಾಗಿದೆ.

ಖಾನ್ ಸಾಹೇಬರ ಮನೆತನದ ಉಸ್ಮಾನ್ ಖಾನ್, ಹಫೀಜ್ ಖಾನ್, ಬಾಲೇ ಖಾನ್, ಹಮೀದ್ ಖಾನ್, ಚೋಟೆ ರಹಿಮತ್ ಖಾನ್, ಮುಂದಿನ ತಲೆಮಾರಿನ, ರಯೀಸ್ ಖಾನ್, ರಫೀಕ ಖಾನ, ಶಪೀಕ ಖಾನ್, ಮೊಹಸಿನ್ ಖಾನ್ ಹೀಗೆ ಪರಂಪರೆಯ ಕೊಂಡಿಗಳು ಒಂದಕ್ಕೊಂದು ಬೆಸೆಯುತ್ತಲೇ ಸಾಗಿರುವದು ಸಂಗೀತ ಸಂಸ್ಕೃತಿಯು ಆರೋಗ್ಯಕರ ಬೆಳವಣಿಗೆ ಎನಿಸುವದಿಲ್ಲವೇ? ಇಷ್ಟಕ್ಕೆ ನಿಲ್ಲದ ಈ ಯಶೋಗಾಥೆ ಇದೀಗ ಖಾನ್ ಕುಟುಂಬದ ಸಿತಾರವಾದನ ಕಲೆಗೆ ‘ಧಾರವಾಡ ಘರಾಣಾ’ ಎಂಬ ಖ್ಯಾತಿ ಬಂದಿರುವುದು ಮುಕುಟಪ್ರಾಯವಾದ ಸಂಗತಿ. 

ಜಗದ್ವಿಖ್ಯಾತ ಕೊಳಲುವಾದಕ ಪ್ರವೀಣ ಗೋಡಖಿಂಡಿ ಧಾರವಾಡದವರೇ, ಅವರ ತಂದೆ ವೆಂಕಟೇಶ ಗೋಡಖಿಂಡಿ. ಪ್ರವೀಣ ಕೊಳಲು ವಾದನದಲ್ಲಿ, ಅನೇಕ ಹೊಸ ಪ್ರಯೋಗಗಳನ್ನು, ಫ್ಯೂಝನ್ ಸಂಗೀತವನ್ನು ಅಳವಡಿಸಿದ ಕೀರ್ತಿಗೆ ಭಾಜನರಾದವರು. ಇದೀಗ ಮೂರನೆಯ ತಲೆಮಾರಿನ ಷಡ್ಜ ಪ್ರವೀಣ ಅವರ ಮಗ, ಕೊಳಲು ವಾದನದಲ್ಲಿ ಹೊಸ ಅಲೆಯ ಸಂಗೀತಗಾರನಾಗಿ ಭರವಸೆ ಮೂಡಿಸುತ್ತಿರುವದು ಸಂತಸದ ವಿಷಯವೇ.

ಧಾರವಾಡದ ಗುರುರಾವ್ ದೇಶಪಾಂಡೆ ಸಂಗೀತ ಪರಂಪರೆಯಲ್ಲಿ ವಿಶಿಷ್ಟವಾಗಿ ಕೇಳಿಬರುವ ಹೆಸರು ಅವರ ಮಗಳು ಪ್ರೊ.ಮಾಲಾ ದಿಕ್ಷಿತ್. ಅವರ ಶಿಷ್ಯ ಪಂ.ವಿನಾಯಕ ತೊರ್ವಿ ತಮ್ಮ ಮಗ ಮತ್ತು ಅನೇಕ ಶಿಷ್ಯರೊಂದಿಗೆ, ಗುರುರಾವ್ ದೇಶಪಾಂಡೆ ಅವರ ಸಂಗೀತ ಪರಂಪರೆಯನ್ನು ಮುಂದುವರೆಸಿದ್ದಾರೆ.  

ಸಂಗೀತ ದಿಗ್ಗಜರಿಗೆ ಸಾಥ್ ನೀಡಿ ‘ವಾಹ್’ ಎನಿಸಿಕೊಂಡ ಸಂಗೀತಜ್ಞರನ್ನು ನೆನೆಯಲೇಬೇಕು. ತಬಲಾ ವಾದನದಲ್ಲಿ ಅಗ್ರಗಣ್ಯ ಹೆಸರು ಬಸವರಾಜ ಬೆಂಡಿಗೇರಿ, ಗಂಗೂಬಾಯಿ ಹಾನಗಲ್ ಅವರ ಸಹೋದರ ಪಂಡಿತ ಶೇಷಗಿರಿ ಹಾನಗಲ್ ಹಾಗೂ ಪಂಡಿತ ರವೀಂದ್ರ ಯಾವಗಲ್ ಅಗ್ರಗಣ್ಯರು. ವಸಂತ ಕನಕಾಪುರ ಹಾರ್ಮೋನಿಯಮ್ ವಾದಕರು.    

ತಬಲಾವಾದನದಲ್ಲಿ ತಮ್ಮತನದ ಛಾಪನ್ನು ಮೂಡಿಸಿದ ಮತ್ತು ಆ ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಸಲ್ಲಬೇಕಾಗಿರುವದು ಅರ್ಜುನಸಾ ನಾಕೋಡ ಅವರಿಗೆ. ಅರ್ಜುನಸಾ ನಾಕೋಡ ಅವರು ಅದ್ಭುತ ಗಾಯಕರು. ಅವರ ಮಗ ಭಾಲಚಂದ್ರ ನಾಕೋಡ ಗಾಯಕಿಯನ್ನು ಮುಂದುವರೆಸಿದ್ದಾರೆ. ನಾಕೋಡ ಹೆಸರು ಕೇಳಿದರೆ ತಬಲಾದ “ಧುನ್” ಕೇಳಿದಂತೆನಿಸುವದು ಅತಿಶಯೋಕ್ತಿಯ ಮಾತಲ್ಲ, ರಘುನಾಥ ನಾಕೋಡ, ರಾಜೇಂದ್ರ ನಾಕೋಡ, ಭಾಲಚಂದ್ರ ನಾಕೋಡ, ವಿಶ್ವನಾಥ ನಾಕೋಡ, ಕಿರಣ ನಾಕೋಡ, ತಬಲಾ ಪರಂಪರೆಯ ಮೂರನೆಯ ಕೊಂಡಿಯಾದರೆ, ನಾಲ್ಕನೆಯ ಕೊಂಡಿಗಳಾಗಿ, ರಘುನಾಥ ನಾಕೋಡ ಅವರ ಮಗ ರವಿಕಿರಣ ನಾಕೋಡ ಭಾಲಚಂದ್ರ ನಾಕೋಡ ಅವರ ಮಗ ರಾಘವೇಂದ್ರ ನಾಕೋಡ, ಅದ್ಭುತ ತಬಲಾ ಪಟುಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನೂ ವಿಶೇಷವೆಂದರೆ ರಾಘವೇಂದ್ರ ನಾಕೋಡ, ಸಾಫ್ಟ್‍ವೇರ್ ಎಂಜಿನಿಯರ್ ಎಂಬುದು.

ಸವಾಯಿ ಗಂಧರ್ವರ ಹೆಸರಿನಲ್ಲಿ ಸಂಸ್ಕೃತಿಕ ಸಮುಚ್ಛಯ, ಬಸವರಾಜ ರಾಜಗುರು ಅವರ ಸ್ಮರಣಿಯಲ್ಲಿ ಬಯಲು ರಂಗಮಂದಿರ, ಮಲ್ಲಿಕಾರ್ಜುನ ಮನಸೂರರ ಹೆಸರಿನಲ್ಲಿ ಕಲಾಭವನಗಳು, ಚಿರಸ್ಮರಣೀಯ ಕುರುಹುಗಳಾಗಿ ಕಂಗೊಳಿಸಿದರೆ ಗಂಗೂಬಾಯಿ ಹಾನಗಲ್ ಅವರ ಹೆರಿನಲ್ಲಿ ಸಂಗೀತದ ಗುರುಕುಲವಿದೆ.

ಸುಮಾರು ನಾಲ್ಕು ದಶಕಗಳ ಹಿಂದೆ ಮಲ್ಲಿಕಾರ್ಜುನ ಮನಸೂರ, ಡಾ.ಬಸವರಾಜ ರಾಜಗುರು, ಡಾ.ಗಂಗೂಬಾಯಿ ಹಾನಗಲ್, ಪಂ.ಸಂಗಮೇಶ ಗುರವ ಅವರು ಧಾರವಾಡವನ್ನು ಪ್ರತಿನಿಧಿಸಿದ್ದಂತೆ. ಇಂದು ಅದೇ ಪಂಪರೆಯನ್ನು ಪದ್ಮಭೂಷಣ ಪಂಡಿತ ವೆಂಕಟೇಶಕುಮಾರ, ಕೈವಲ್ಯಕುಮಾರ ಗುರವ, ಜಯತೀರ್ಥ ವೇವುಂಡಿ, ಪಂಡಿತ ಗಣಪತಿಭಟ್ಟ ಹಾಸಣಗಿ ಮುಂತಾದವರು ಮುಂದುವರಿಸಿದ್ದಾರೆ.

ಧಾರವಾಡದ ಸಂಗೀತ ಪರಂಪರೆಗೆ ‘ಅಣ್ಣಾಜೀ ರಾವ್ ಶಿರೂರ ರಂಗಮಂದಿರ’ದ ಕೊಡುಗೆ ಬಹುದೊಡ್ಡದು. ನಂದನ್ ನೀಲೇಕಣಿ, ಆರ್ಯ ಆಚಾರ್ಯ ಅವರ ಆಸಕ್ತಿಯಿಂದಾಗಿ, ಧಾರವಾಡದವರೆ ಆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಗಿರೀಶ ಕಾರ್ನಾಡ ಅವರ ಮುತುವರ್ಜಿಯಿಂದಾಗಿ ಅತ್ಯುತ್ತಮ ವ್ಯವಸ್ಥೆಗಳಿಂದ ಕೂಡಿದ “ಸೃಜನಾ ರಂಗಮಂದಿರ” ಸ್ಥಾಪಿತವಾಗಿದೆ. ಧಾರವಾಡದ ಸಿಂಹಪಾಲು ಸಂಗೀತೋತ್ಸವಗಳು, ಸಾಂಸ್ಕೃತಿಕ  ಕಾರ್ಯಕ್ರಮಗಳು ಸೃಜನಾದಲ್ಲಿ ಜರುಗುತ್ತವೆ.

ಭೀಮಸೇನರ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಇದೀಗ ಧಾರವಾಡದ ಮನೋಹರ ಗ್ರಂಥಮಾಲೆಯ, ಸಮೀರ ಜೋಶಿ “ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್” ಸ್ಥಾಪಿಸಿದ್ದಾರೆ. ಜೋಶಿ ಕುಟುಂಬ ವರಸೆಯಲ್ಲಿ ಭೀಮಸೇನ್ ಜೋಶಿ ಕುಟುಂಬದ ಸಂಬಂಧಿಕರೇ. ಸಾಲದು ಎಂಬಂತೆ ಸಮೀರ ಜೋಶಿ ತಮ್ಮ ಆಪ್ತ, ವೃತ್ತಿಪರ ಕೇಳುಗರಾದ ಅನಂತ ಹರಿಹರ ಅವರೊಂದಿಗೆ ಭಾರತರತ್ನ ಪಂ.ಭೀಮಸೇನ ಜೋಶಿಯವರ ಶತಮಾನದ ಆಚರಣೆಯನ್ನು ವಿಭಿನ್ನವಾಗಿ ಸಂಘಟಿಸಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಭೀಮಣ್ಣನ ಹೆಸರಿನಲ್ಲಿ ನಾಡಿನ ಖ್ಯಾತ ಸಂಗೀತಜ್ಞರನ್ನು ಕರೆಯಿಸಿ ಸಂಗೀತದ ರಸದೌತಣ ನೀಡುತ್ತಿದ್ದಾರೆ.

ಧಾರವಾಡದ ವೃತ್ತಿಪರ ಕೇಳುಗರು!

ನಿಮಗೆಲ್ಲಾ ವೃತ್ತಿಪರ ಕಲಾವಿದರು, ಗಾಯಕರು ಗೊತ್ತಿರಬಹುದು. ಅದೇ ರೀತಿ ‘ವೃತ್ತಿಪರ ಕೇಳುಗರು’ ಕೂಡಾ ಧಾರವಾಡದಲ್ಲಿ ಇದ್ದರು!

ಯಾವುದೇ ಅತಿರಥ ಮಹಾರಥ ಹಾಡುಗಾರರು ಬಂದು ಧಾರವಾಡದಾಗ ಕಛೇರಿ ಮಾಡಿದಾಗ ಈ ಸಂಗೀತೋಪಾಸಕರು “ವ್ಹಾ ಏನ್ ಹಾಡತಾನೋ / ಹಾಡತಾಳೋ” ಅಂದ್ರು ಅಂದ್ರ ಅದು ಹಾಡುಗಾರರಿಗೆ ಆಲ್ ಇಂಡಿಯಾ ಮೆಡಲ್ ಇದ್ದಂಗ. ಯಾರದೇ ಕಛೇರಿ ಇರಲಿ, ಈ “ಪ್ರೊಫೆಶನಲ್ ಲಿಸನರ್ಸ್” ಹಾಜರಾಗಿ ತಾಸ ಮೊದಲೇ ಅವರ ಎದುರಿಗಿನ ಸೀಟನ್ನು ಅಲಂಕರಿಸುತ್ತಿದ್ದರು. ರಂಗಣ್ಣಾ ಜೋಶಿ, ಶ್ರೀಪತಿ ಪಾಡಿಗಾರ, ಮಾಧವ ಗುಡಿ, ಅಗ್ನಿಹೋತ್ರಿ, ರಮೇಶ ಪಾಟೀಲ, ಆಯಿ, ಅನಂತ ಹರಿಹರ, ರೊಟ್ಟಿ ಶಿವಪ್ಪ ಇವರಲ್ಲಿ ಪ್ರಮುಖರು. “ಏ ತಪ್ಪಾಕತ್ತಿ ನೋಡು” ಎಂದು ಹೇಳುವಷ್ಟು, ‘ಇವರ ಹಾಡಿನ್ಯಾಗ ಜಾದೂ ಐತಿ ನೋಡು’, ‘ಇವರೂ ಅವರಂಗ ಹಾಡತಾರ ನೋಡು’ ಎಂದು ಹೇಳುವಷ್ಟು, ಸಮರ್ಥಿಸುವಷ್ಟು ಸಂಗೀತ ಪರಿಜ್ಞಾನ ಇವರಿಗಿತ್ತು. “ಏನಲೇಪಾ ಇಂವಾ” ಅಂತ ಇವ್ರು ಎದ್ದು ಹೊರಟ್ರ್ರು ಅಂದ್ರೆ ಕಲಾವಿದರ ಗಾಯಕಿ ಸರಿಯಿಲ್ಲಾ ಅನ್ನೊ ಮೇಸೆಜು ಕುಳಿತವರಿಗೆ ತಲುಪುತ್ತಿತ್ತು.

ತಾರಾ ನಿವಾಸದಲ್ಲಿ ಸಂಗೀತ ರಸಸಂಜೆ!

ಅದು 80ರ ದಶಕ. ಅಲ್ಲೊಂದು ಪ್ರೊ.ಸದಾನಂದ ಕನವಳ್ಳಿಯವರ ನೇತೃತ್ವದ ಸಂಗೀತಪ್ರೇಮಿಗಳ ಗುಂಪು. ಬಾಲೆಖಾನ ದೇಸಾಯಿ, ಅನಂತ ಹರಿಹರ, ರಮೇಶ ಪಾಟೀಲ, ಪಾಂಡುರಂಗ ಆದಿ, ಗಣಪತಿ ಭಟ್ಟ, ಶ್ರೀನಿವಾಸ ಜೋಶಿ ಮುಂತಾದವರು ಈ ಗುಂಪಿನ ಸದಸ್ಯರು. ಇದರಲ್ಲಿ ನಾನೂ ಇದ್ದೆ. ನಾವು ಸೇರುತ್ತಿದ್ದುದ್ದು, ಧಾರವಾಡದ ಸ್ಟೇಶನ್ ರಸ್ತೆಯಲ್ಲಿರುವ (ಅದು ಬಸವರಾಜ ರಾಜಗುರು ಅವರ ಮನೆಗೆ ಸಮೀಪ) ತಾರಾ ನಿವಾಸದಲ್ಲಿ. ಕನವಳ್ಳಿ ಸರ್ ಪತ್ರ ಬಂದೇತಿ ಎನ್ನುವ ಮಾಹಿತಿ ರವಾನೆಯಾಗುತ್ತಿತ್ತು. ರಾತ್ರಿ 9 ಗಂಟೆಗೆ ಸರಿಯಾಗಿ ಜಮೆಯಾಗುತ್ತಿದ್ದೆವು. ನಮಗೆ ಜಿಹ್ವಾ ಚಾಪಲ್ಯವನ್ನು ತಣಿಸುವ ರಸಗವಳ, ಮನಮುದಗೊಳಿಸುವ ಸಂಗೀತ ಸಿದ್ಧವಾಗಿರುತ್ತಿತ್ತು.

ಕನವಳ್ಳಿಯವರು ಆಗ ಲಕ್ಷ್ಮೇಶ್ವರದ ಮುನಿಸಿಪಲ್ ಕಾಲೇಜಿನ ಪ್ರಿನ್ಸಿಪಾಲರು. ಸಂಜೆ ಬಂದು ಸೇರುತ್ತಿದ್ದ ಅವರು ಒಂದು ಆಳನ್ನು ಕರೆದುಕೊಂಡು, ಮೊಳಕಾಲೆತ್ತರದ ರೊಟ್ಟಿಗಂಟು, ಉದುರಬೇಳೆ, ಬದನೆಕಾಯಿ ಎಣ್ಣೆಗಾಯಿ, ಜುಣಕದ ವಡೆ, ಕೆಂಪಿಂಡಿ, ಬೆಣ್ಣೆ, ಕೆನೆಮೊಸರು, ಶೇಂಗಾ, ಗುರೆಳ್ಳು, ಕಡ್ಲಿ, ಅಗಸಿಚಟ್ನಿಗಳು, ಕರಿಂಡಿ, ಶೆಂಡಗಿ, ಉಪ್ಪಿನಕಾಯಿ, ಮೊಸರು ಬುತ್ತಿ, ಸವಣೂರು ವೀಳ್ಯೆದೆಲೆ, ಬಣ್ಣಕಟ್ಟಿದ ರಾಶಿ ಅಡಕಿ, ಲವಂಗ ಏಲಕ್ಕೆ. ನಡುವೆ ಎಲ್ಲವನ್ನೂ ಇಟ್ಟು ಸುತ್ತಲೂ ಕುಳಿತು ಅವರವರ ಯೋಗ್ಯತಾನುಸಾರ ನಾಲ್ಕರಿಂದ ಆರೋ, ಎಂಟೋ ರೊಟ್ಟಿ ತಿನ್ನುವದು ಊಟ ಮುಗಿಯುತ್ತಿದ್ದಂತೆ ವೀಳ್ಯ ಜೊತೆಗೆ ಮಾತು ಸಂಗೀತದತ್ತ. ಮುಂದೊಂದು ಗಂಟೆ ಖಾನ ಸಾಹೇಬರದಾಗಲಿ, ಗಣಪತಿ ಭಟ್ಟರದಾಗಲಿ ಸಂಗೀತ.

ಸಂಗೀತ ಕೇಳಬೇಕು ಎಂದುಕೊಂಡಾಗಲೆಲ್ಲ ಸದಾನಂದ ಕನವಳ್ಳಿಯವರ ಈ ತೆರನಾದ ಔತಣ ಕೂಟ ಏರ್ಪಡುತ್ತಿತ್ತು.

Leave a Reply

Your email address will not be published.