ನಂಬಿಕೆಯೇ ಬಹು ದೊಡ್ಡ ಭರವಸೆ

-ಪದ್ಮರಾಜ ದಂಡಾವತಿ

ಭವಿಷ್ಯಕ್ಕೆ ಒಂದು ಭರವಸೆ ಬೇಕು. ಆದರೆ ಅಂಥ ಭರವಸೆಯ ಬೀಜಗಳು ಭೂತಕಾಲದಲ್ಲಿ ನೆಟ್ಟಿರಬೇಕು. ಹಾಗೆ ನೆಟ್ಟಿದ್ದರೆ ಅದರ ಫಲಗಳು ನಮಗೆ ಸಿಗುತ್ತವೆ. ಹೆಚ್ಚೆಂದರೆ, ನಮಗೆ ನೂರು ವರ್ಷ ಆಯುಷ್ಯವಿದ್ದರೂ ಸಾವಿರ ವರ್ಷ ಬದುಕುತ್ತೇವೆ ಎಂಬ ಭರವಸೆಯಲ್ಲಿಯೇ ಬದುಕುತ್ತ ಇರುತ್ತೇವೆ! ಆದರೆ, ಇನ್ನೇನು ಹತ್ತು ಇಪ್ಪತ್ತು ದಿನಗಳಲ್ಲಿ ನಾವು ಹೊಸ ವರ್ಷಕ್ಕೆ ಕಾಲು ಇರಿಸುತ್ತೇವೆ. ಈ ವರ್ಷ ನಾವು ಪಟ್ಟ ಕಷ್ಟ ಕೋಟಲೆ ನೋಡಿದರೆ ಮುಂದಿನ ವರ್ಷ ಅದು ಅಂಥ ಭರವಸೆಯ ವರ್ಷ ಆಗಿರುತ್ತದೆ ಎಂದು ನನಗೆ ಅನಿಸುವುದಿಲ್ಲ. ಇದು ಕೇವಲ ನಿರಾಶಾವಾದವಲ್ಲ. ಅದಕ್ಕಾಗಿ ಆರಂಭದಲ್ಲಿಯೇ ನಮ್ಮ ಭರವಸೆಗೆ, ಆಶೆಗಳಿಗೆ ಈ ವರ್ಷವೇ ಬೀಜ ನೆಟ್ಟಿರಬೇಕು ಎಂದು ನಾನು ಹೇಳಿದೆ.

ಈ ವರ್ಷ ಆರಂಭವಾಗಿ ಇನ್ನೂ ಮೂರು ತಿಂಗಳು ಕಳೆದಿರಲಿಲ್ಲ. ಎಲ್ಲಿಂದಲೋ ಕೊರೊನಾ ಎಂಬ ಮಹಾಮಾರಿ ಬಂದು ದೇಶವನ್ನು ಅಪ್ಪಳಿಸಿತು. ಮಾರ್ಚ್ ಮೂರನೇ ವಾರದಲ್ಲಿ ದೇಶದ ಉದ್ದಗಲಕ್ಕೂ ಸರಪಳಿ ಹಾಕಿ ಬಿಗಿದು ಬೀಗ ಜಡಿಯಲಾಯಿತು. ನಮಗೆ ಲಾಕ್ ಡೌನ್ ಎಂದರೆ ಏನು ಎಂದು ಗೊತ್ತಿರಲಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎಲ್ಲಿ ಬೇಕಾದರೂ ಓಡಾಡಿಕೊಂಡಿರಲು ಸ್ವತಂತ್ರರಾಗಿದ್ದ ನಾವು ನಮ್ಮ ಮನೆಯಿಂದ ಹೊರಗೆ ಕಾಲು ಇಡಲು ಹೆದರಬೇಕಾಯಿತು. ಮನೆಯಲ್ಲಿ ಬೆಚ್ಚಗೆ ಇರಲು ಎಷ್ಟು ಜನರಿಗೆ ಭಾಗ್ಯ ಇರುತ್ತದೆ? ಮನೆಯಿಂದ ಕೆಲಸ ಮಾಡುವ ಅವಕಾಶ ಎಷ್ಟು ಜನರಿಗೆ ಇರುತ್ತದೆ? “ಕೆಲಸದಿಂದ ತೆಗೆಯಬೇಡಿ, ಸಂಬಳ ನಿಲ್ಲಿಸಬೇಡಿ” ಎಂದು ಸರ್ಕಾರವೇನೋ ಹೇಳಿತು. ಕೊಡಬೇಕಾದರೆ ಅವರ ಕೈಯಲ್ಲಿಯೂ ಹಣ ಇರಬೇಕಲ್ಲ!

ಅಂದೇ ದುಡಿದು ಅಂದೇ ತಿನ್ನುವವರ ಕಥೆ ಏನಾಗಿರಬಹುದು? ಲಾಕ್‍ಡೌನ್ ಮುಗಿಯುತ್ತಿದ್ದಂತೆಯೇ ಅವರೆಲ್ಲ ತಮ್ಮ ಊರಿಗೆ ಮರಳಿ ಹೋಗಿದ್ದಾರೆ. ಬಿಹಾರದ, ರಾಜಸ್ತಾನದ, ಉತ್ತರ ಪ್ರದೇಶದ ಮತ್ತು ಆಚಿನ ನೇಪಾಳದ ಈ ಜನರು ತಮ್ಮ ಊರಿನಲ್ಲಿ ಎಲ್ಲ ಸುಖವಾಗಿದ್ದರೆ ಮುಂಬೈಗೆ, ಬೆಂಗಳೂರಿಗೆ ಏಕೆ ಬರುತ್ತಿದ್ದರು? ಅವರೆಲ್ಲ ಈಗ ಹೇಗೆ ಬದುಕುತ್ತ ಇರಬಹುದು? ಭಾರತದಲ್ಲಿ ಹತ್ತು ಕೋಟಿ ಜನರು ಬಡತನದ ರೇಖೆಗಿಂತ ಮೇಲೆ ಜೀವಿಸುತ್ತಿದ್ದಾರೆ ಎಂಬ ಒಂದು ಅಂದಾಜು ಇದೆ. ಅವರಲ್ಲಿ ಬಹುತೇಕರು ಈಗ ಬಡತನದ ರೇಖೆಗಿಂತ ಕೆಳಗೆ ಇಳಿಯುತ್ತಾರಂತೆ; ಅಥವಾ ಇಳಿದಿದ್ದಾರಂತೆ.  ನಮ್ಮ ದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಇರುವಂತೆ ನಗರ ಉದ್ಯೋಗ ಖಾತರಿ ಯೋಜನೆಗಳು ಇಲ್ಲ. ಬಹುಶಃ ಅದಕ್ಕೇ ಹೇಳುತ್ತ ಇರಬಹುದು: ಕೊರೊನಾದಿಂದ ಸತ್ತವರಿಗಿಂತ ಹೆಚ್ಚು ಜನ ಲಾಕ್‍ಡೌನ್‍ನಿಂದ ಸತ್ತರು ಎಂದು. ಹಾಗೆಂದು ಲಾಕ್‍ಡೌನ್ ಘೋಷಣೆ ಮಾಡದೇ ಇರಲು ಆಗುತ್ತಿರಲಿಲ್ಲ. “ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು” ಎಂದು ಹೇಳುವುದೆಲ್ಲ ಆಫ್ಟರ್ ಥಾಟ್ ಅಷ್ಟೇ.

ಭಾರತದಲ್ಲಿ ಲಾಕ್‍ಡೌನ್ ಘೋಷಿಸುವ ವೇಳೆಗಾಗಲೇ ಚೀನಾದ ವುಹಾನ್ ನಗರದಲ್ಲಿ ಮನೆಯ ಒಳಗೆ ಜನರನ್ನು ಹಾಕಿ ಬಾಗಿಲಿಗೆ ಕಟ್ಟಿಗೆಯ ರೀಪುಗಳನ್ನು ಬಡಿದು ಮೊಳೆ ಹೊಡೆಯುವ ದೃಶ್ಯಗಳನ್ನು ನಾವು ನಮ್ಮ ಮೊಬೈಲ್ ಪರದೆಯ ಮೇಲೆ ನೋಡಿದ್ದೆವು. ಸ್ಪೇನಿನಲ್ಲಿ, ಇಟಲಿಯಲ್ಲಿ ಜನರು ಬೀದಿ ಬದಿಯಲ್ಲಿ ಬಿದ್ದು ಸಾಯುವುದನ್ನೂ ನೋಡಿದ್ದೆವು. “ನಿಮಗೂ ಹೀಗೆಯೇ ಆಗುತ್ತದೆ, ಎಚ್ಚರ” ಎಂದು ಆ ದೇಶಗಳಲ್ಲಿ ಇರುವ ನಮ್ಮ ಬಂಧುಗಳು ಅದೇ ವಾಟ್ಸ್ ಆಪ್ ಸಂದೇಶಗಳಲ್ಲಿ ಎಚ್ಚರಿಸುತ್ತಿದ್ದರು. ನಾವು ಎಷ್ಟು ಎಚ್ಚರ ವಹಿಸಿದೆವೋ ಏನು ಸುಡುಗಾಡೋ? ಅತ್ಯಂತ ಮುಂದುವರಿದ ಅಮೆರಿಕ ದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಸೋಂಕಿತರ ಸಂಖ್ಯೆಯೂ ಕಡಿಮೆ. ಸತ್ತವರ ಸಂಖ್ಯೆಯೂ ಕಡಿಮೆ. ಇದು ಏನನ್ನು ಹೇಳುತ್ತ ಇರಬಹುದು? ಕಡು ಬಡವರೇ ಹೆಚ್ಚು ಇರುವ ನಮ್ಮ ದೇಶದ ಜನರ ರೋಗ ನಿರೋಧಕ ಶಕ್ತಿಯನ್ನೇ? ಅಥವಾ ಸರ್ವ ರೋಗಾಪಹಾರಿಯಾದ ನಮ್ಮ ಅದ್ಭುತ ಆಹಾರ ಪದ್ಧತಿಯನ್ನೇ? ಎರಡೂ ಇರಬಹುದು.

ಹಾಗೆಂದು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ, ಕಲ್ಯಾಣ ಕಾರ್ಯಕ್ರಮಗಳಲ್ಲಿ ತೀವ್ರ ಬಿರುಕುಗಳು (ಫಾಲ್ಸ್ ಲೈನ್ಸ್) ಇಲ್ಲ ಎಂದು ಅಲ್ಲ. ಹಾಗೆ ನೋಡಿದರೆ ಅವು ಬಹಳ ಆಳವಾಗಿವೆ. ಆಸ್ಪತ್ರೆಗೆ ಹೋದವರು 22 ಲಕ್ಷ ಹಣ ತೆತ್ತರೂ ಹೆಣವಾಗಿ ಬಂದರು. ಅಷ್ಟು ಹಣವನ್ನು ಹೆಣಕ್ಕೆ ಕೊಡುವುದು ಎಷ್ಟು ಜನರಿಗೆ ಸಾಧ್ಯ? ಹದಿ ಹರೆಯದವರಿಗೆ ಜೀವನ ಕಠೋರ ಎನಿಸಿತು. ನೇಣು ಹಾಕಿಕೊಂಡರು. ಅನೇಕರು ನೌಕರಿ ಕಳೆದುಕೊಂಡು ಮನೆಗೆ ಹೋದರು. ಕೆಲವರು ಇನ್ನೂ ಚಿಕ್ಕವರು ಇದ್ದರು. ಕೆಲವರು ಮಧ್ಯ ವಯಸ್ಸಿಗೆ ಬಂದಿದ್ದರು. ಅವರು ಮನೆ ಕೊಂಡಿದ್ದರು. ಮಕ್ಕಳ ಮದುವೆ ಮಾಡಲು ಸಿದ್ಧರಾಗಿದ್ದರು. ಅವರಲ್ಲಿ ಒಬ್ಬರೇ ದುಡಿಯುವ ಗಂಡಸಾಗಿದ್ದರು ಅಥವಾ ಹೆಂಡತಿಯಾಗಿದ್ದರು; ಮಗನಾಗಿದ್ದರು ಅಥವಾ ಮಗಳಾಗಿದ್ದರು. ಅದರಲ್ಲಿ ಲಿಂಗ ತಾರತಮ್ಯ ಎನ್ನುವುದು ಇರಲಿಲ್ಲ.

ಕೊರೊನಾ ಹೀಗೆ ಎಲ್ಲದರ ಮತ್ತು ಎಲ್ಲರ ಬಗೆಗೆ ನಿರ್ದಯವಾಗಿತ್ತು. ಅದಕ್ಕೆ ಲಿಂಗಭೇದ ಇರಲಿಲ್ಲ. ಜಾತಿ ಭೇದವೂ ಇರಲಿಲ್ಲ. ಆದರೆ, ಕೊರೊನಾ ಭಾರತೀಯ ಸಮುದಾಯಗಳನ್ನು ಅಡ್ಡಡ್ಡ ಸೀಳಿ ಹಾಕಿತು. ಇದು ಆರಂಭದಲ್ಲಿಯೇ ಆಯಿತು. “ಒಂದು ನಿರ್ದಿಷ್ಟ ಸಮುದಾಯದ, ನಂಬಿಕೆಯ ಜನರು ಕೊರೊನಾ ಹರಡಲು ಕಾರಣ” ಎಂಬ ಸುದ್ದಿ ಹಬ್ಬಿದ್ದು ಮಾರಕ ಪರಿಣಾಮ ಬೀರಿತು. ಹೀಗೆ ಸುದ್ದಿಗಳು, ವದಂತಿಗಳು ಹಬ್ಬುವುದರ ಹಿಂದೆ ರಾಜಕೀಯ ಕಾರಣಗಳು ಇದ್ದುವು. ಆದರೆ, ಅದು ನೇರವಾಗಿ ಕಾಣುವಂತೆ ಇರಲಿಲ್ಲ. ಆಶ್ಚರ್ಯ ಅಥವಾ ಸಮಾಧಾನಕರ ಎನ್ನುವಂತೆ ಆರ್‍ಎಸ್‍ಎಸ್ ಸಂಘಟನೆಯ ಮುಖ್ಯಸ್ಥರು, “ಹಾಗೆ ಒಂದು ಸಮುದಾಯವನ್ನು ಹೊಣೆ ಮಾಡಬಾರದು” ಎಂದು ಹೇಳಿದರು. ಆದರೆ, ಆಗುವ ಅಪಾಯ ಆಗಿ ಹೋಗಿತ್ತು. ದುರಂತ ಎಂದರೆ ಅದಕ್ಕೆ ನಮ್ಮ ಬಹುಪಾಲು ಮಾಧ್ಯಮಗಳು ತಮ್ಮ ಹೆಗಲಿನ ನೆರವು ಕೊಟ್ಟಿದ್ದುವು!

ಇದಕ್ಕೆಲ್ಲ ರಾಜಕೀಯ ಕಾರಣಗಳು ಇದ್ದುವು ಎಂದೆ. ಬಹುಶಃ ಅದೇ ಕಾರಣಕ್ಕಾಗಿ, “ಹೀಗೆ ಒಂದು ಸಮುದಾಯವನ್ನು ಹೊಣೆ ಮಾಡಬಾರದು” ಎಂಬ ಹೇಳಿಕೆ ದೇಶ ಆಳುವ ರಾಜಕೀಯ ಪಕ್ಷದಿಂದ ಬರಲಿಲ್ಲ. ಯಾವುದೇ ಪ್ರಭುತ್ವಕ್ಕೆ ಸಾಮ್ರಾಜ್ಯ ವಿಸ್ತರಣೆಯ ಅದಮ್ಯ ಇಚ್ಛೆ ಇರುತ್ತದೆ. ಇದರಲ್ಲಿ ಆ ಪಕ್ಷ, ಈ ಪಕ್ಷ ಎಂಬ ಭೇದ ಇರುವುದಿಲ್ಲ. ನಿಜಾಮುದ್ದೀನ್ ಆಳುವ ಒಂದು ಪಕ್ಷ ಹೈದರಾಬಾದ್ ಅನ್ನೂ ಆಳಬೇಕು ಎನ್ನುತ್ತದೆ ಎಂಬುದಕ್ಕೆ ಕೇವಲ ರಾಜಕೀಯ ಆಕಾಂಕ್ಷೆ ಮಾತ್ರ ಇರುತ್ತದೆಯೇ ಅಥವಾ ಅದಕ್ಕಿಂತ ಹೆಚ್ಚಿನ ಸಾಮ್ರಾಜ್ಯಶಾಹಿ ದಾಹಗಳು ಇರುತ್ತವೆಯೇ? ಹೈದರಾಬಾದ್‍ನಲ್ಲಿ ಬಿಜೆಪಿ ಸ್ಪರ್ಧಿಸಿ ಅಪೂರ್ವ ಜಯ ಸಾಧಿಸಿದ್ದಕ್ಕೆ ಮತ್ತು ಇನ್ನು ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದಕ್ಕೆ ಆಳವಾದ ಸಂಬಂಧಗಳು ಇವೆ. ಇದರ ಬೇರುಗಳು ವರ್ಷದ ಆರಂಭದಲ್ಲಿ, “ಕೋವಿಡ್ ಹರಡಲು ಒಂದು ಸಮುದಾಯ ಕಾರಣ” ಎಂದು ದೂಷಿಸಿದ್ದರಲ್ಲಿ ಇವೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಿರುಕುಗಳು (ಪಾಲ್ಟ್ ಲೈನ್‍ಗಳು) ಇರುವ ಹಾಗೆಯೇ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಇವೆ. ಮತ್ತು ಸಾಮಾಜಿಕ ಬಂಧು(ರ)ತ್ವದಲ್ಲಿನ ಭೇದಗಳು ಹೆಚ್ಚು ಅಗಲವಾಗುತ್ತಿವೆ!

ಏನೋ, ಯಾವ ಗ್ರಹಣವೂ ಹೆಚ್ಚು ಹೊತ್ತು ಇರುವುದಿಲ್ಲ ಎನ್ನುತ್ತಾರೆ. ರಾಹುವಿನ ಹಿಡಿತದಿಂದ ಚಂದ್ರ ಬಿಡುಗಡೆಯಾಗಿ ತಿಂಗಳ ಬೆಳಕು ಕಾಣುವಂತೆ ಯಾವು ಯಾವುದೋ ಕಂಪೆನಿಯ ಲಸಿಕೆಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಆ ಲಸಿಕೆಗಳೂ ನಮ್ಮ ಮೇಲೆ ಪ್ರಯೋಗ ಮಾಡುವಂತೆ ಕಾಣುತ್ತಿದೆ. ಫೈಜರ್ ಲಸಿಕೆ ತೆಗೆದುಕೊಂಡ ನಾಲ್ವರು ಸ್ವಯಂ ಸೇವಕರಿಗೆ ಬೆಲ್ಸ್ ಪಾಲ್ಸಿ (ಅರ್ಧ ಮುಖದ ಪಾಶ್ರ್ವ ವಾಯು) ಬಡಿದಿದೆ ಎಂದು ವರದಿಯಾಗಿದೆ. ಅಂದರೆ, ಇನ್ನೇನು ನಮ್ಮ ರಟ್ಟೆ ಸೇರುವ ಲಸಿಕೆ ಎಷ್ಟು ಸುರಕ್ಷಿತವಾದುದು ಎಂದು ಖಚಿತವಿಲ್ಲ.

ಹಳ್ಳಿಗಾಡಿನ ಜನ ಎಷ್ಟು ಬಿಂದಾಸ್ ಇದ್ದಾರೆ ಎಂದರೆ ಅವರಿಗೆ ಕೊರೊನಾ ಎಂಬ ಒಂದು ಮಾರಕ ಜಾಗತಿಕ ರೋಗ ಬಂದಿದೆ ಎಂಬ ಖಬರು ಆದರೂ ಇದೆಯೇ? ಮಾಸ್ಕ್ ಇಲ್ಲ ಪೀಸ್ಕ್ ಇಲ್ಲ. ಅಂತರ ಪಿಂತರ ಮೊದಲೇ ಇಲ್ಲ! “ಇವನವ್ವನ ಅದೇನ್ ಮಾಡ್ತದರೀ” ಎನ್ನುವ ನಮ್ಮ ಜನರದು ಹುಂಬ ಧೈರ್ಯ ಎನ್ನಬೇಕೇ ಅಥವಾ ಕೊರೊನಾ ಮಾರಿ ಅಷ್ಟು ಭಯಂಕರ ಇಲ್ಲದೇ ಇರಬಹುದೇ ಅಥವಾ ಸಾವಿರ ವರ್ಷ ಬದುಕುತ್ತೇವೆ ಎಂಬ ನಮ್ಮ ನಂಬಿಕೆಯೇ ದೊಡ್ಡದು ಇರಬಹುದೇ?

ಜೀವಿಸಲು ಇದಕ್ಕಿಂತ ದೊಡ್ಡ ಭರವಸೆ ಇನ್ನೇನು ಇರಲು ಸಾಧ್ಯ?

Leave a Reply

Your email address will not be published.