ನಕಲಿ ಜಾತ್ಯಾತೀತರು ಜಾತೀಯತೆಯ ಉತ್ಪಾದಕರು!

-ಡಾ.ಬಿ.ವಿ.ವಸಂತಕುಮಾರ್

ಮತೀಯತೆ ಮತ್ತು ಜಾತೀಯತೆಗಳನ್ನು ಮೀರುವುದೇ ನಿಜವಾದ ಹಿಂದುತ್ವ. ಅದೊಂದೇ ಇಂದು ದೇಶದ ಮುಂದಿರುವ ಆಶಾವಾದ. ಹಿಂದುತ್ವಕ್ಕೂ ಮತೀಯತೆ-ಜಾತೀಯತೆ ಮೀರಲಾಗದಿದ್ದರೆ ಭಾರತಕ್ಕೆ ಉಜ್ವಲವಾದ ಭವಿಷ್ಯವಿಲ್ಲವೆಂದೇ ಅರ್ಥ.

ಜಾತಿ ಮತ್ತು ಜಾತೀಯತೆ ಎಂಬುವು ಇತ್ತೀಚಿನ ರೋಗಗಳಲ್ಲ. ಇವು ಭಾರತದ ಅತ್ಯಂತ ಹಳೆಯ ರೋಗಗಳು. ಆದರೆ, ಅವು ವೇದ, ಉಪನಿಷತ್ ಕಾಲದಲ್ಲಿ ಇರಲಿಲ್ಲ ಎಂಬುದೂ ಅಷ್ಟೇ ಸತ್ಯ. ಇಲ್ಲದಿದ್ದರೆ ವಾಲ್ಮೀಕಿ, ವ್ಯಾಸ, ಕಾಳಿದಾಸಾದಿ ಕವಿಗಳು ರಾಮ, ಕೃಷ್ಣ, ಶಿವಾದಿ ದೈವಗಳು, ಚಂದ್ರಗುಪ್ತ, ಹರ್ಷವಧÀðನ, ಮಯೂರಶರ್ಮ, ಶ್ರೀಕೃಷ್ಣದೇವರಾಯರಂತಹ ರಾಜರು ನಮ್ಮ ನಾಡಿನ ಆತ್ಮಶಕ್ತಿಯೂ, ಆತ್ಮಸಾಕ್ಷಿಯೂ ಆಗುತ್ತಿರಲಿಲ್ಲ. ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಜಾತೀಯತೆಯನ್ನು ಮೆಟ್ಟಿ ನಿಂತಾಗಲೆಲ್ಲ ನಮ್ಮ ದೇಶ, ಸಮಾಜ, ಸಂಸ್ಕೃತಿ ಉತ್ಥಾನವನ್ನು ಕಂಡಿದೆ. ಜಾತೀಯತೆಗೆ ದಾಸರಾಗಿ ಮೇಲು-ಕೀಳುಗಳಿಂದ ಕೊಳೆತ ಹೃದಯ-ಮೆದುಳು-ನಡವಳಿಕೆಗಳಿಗೆ ಬಲಿಯಾದಾಗಲೆಲ್ಲ ವಿಚ್ಛಿದ್ರಕಾರಿ ಮತ್ತು ಕೀಳರಿಮೆಗಳಿಂದ ಪತನವನ್ನು ಕಂಡಿವೆ.

ಸ್ವಾತAತ್ರ‍್ಯಪೂರ್ವ ಭಾರತದ ಸಂದರ್ಭದಲ್ಲಿ ಜ್ಯೋತಿಬಾ ಪುಲೆ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಇವರು ಕ್ರಮವಾಗಿ ಶೂದ್ರ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಅಸ್ಪೃಶ್ಯ ಸಮಾಜಗಳಿಂದ ಬಂದರೂ ಅವರವರ ಜಾತಿ ವರ್ಣಗಳ ಪ್ರಜ್ಞೆಯನ್ನು ಬೆಳೆಸದೆ ಮಾನವೀಯತೆ ಹಾಗೂ ರಾಷ್ಟಿçÃಯತೆಗಳನ್ನು ಸಮ್ಮಿಲನಗೊಳಿಸಿ ಅಸ್ಪೃಶ್ಯತೆ, ಜಾತೀಯತೆ, ಪ್ರತ್ಯೇಕತೆ ಮುಕ್ತವಾದ ಭಾರತವನ್ನು ಕಟ್ಟಬಯಸಿದರು. ವ್ಯಕ್ತಿ ಆಧ್ಯಾತ್ಮಿಕ, ನೈತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳನ್ನು ಶಿಕ್ಷಣದ ಮೂಲಕ ಪಡೆದು ಸುಸಂಸ್ಕೃತನಾಗಬೇಕು. ಆ ಮೂಲಕ ರಾಷ್ಟç, ಸಮಾಜ, ಕುಟುಂಬ, ವ್ಯಕ್ತಿ ಸಪ್ತ ಸಾಮಾಜಿಕ ಪಾಪಗಳಿಲ್ಲದ ಬದುಕನ್ನು ನಡೆಸಬೇಕು ಎಂದು ಬಯಸಿದರು, ಬರೆದರು, ಅಂತೆಯೇ ಬದುಕಿದರು. ಅವರಿಂದ ನವೋದಯ ಕನ್ನಡ ಸಾಹಿತ್ಯ ಅಪಾರ ಪ್ರೇರಣೆ ಪಡೆಯಿತು. ಒಂದು ಆದರ್ಶಮಯವಾದ ಅಂತ್ಯೋದಯ, ಸರ್ವೋದಯ, ಸಮನ್ವಯದ ಸಿದ್ಧಾಂತಗಳನ್ನು ಮಂಡಿಸಿದರು.

ಮಹಮ್ಮದಾಲಿ ಜಿನ್ನಾರಿಗೆ ಮಹಾತ್ಮಾ ಗಾಂಧೀಜಿ ಹಾಗೂ ರಾಷ್ಟಿçÃಯ ಕಾಂಗ್ರೆಸ್ ಹಿಂದುತ್ವದ ಪ್ರತಿನಿಧಿ ಎಂದೆನಿಸಿತು. ನಕಲಿಯಾದ ಜಾತ್ಯಾತೀತತೆಯ ಹೆಸರಿನಲ್ಲಿಯೇ ದೇಶ ವಿಭಜನೆಯಾಯಿತು. ಇದು ಹಿಂದೂ ಎಂದರೆ ಕೋಮುವಾದಿ; ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ವಿರೋಧಿ ಎಂದರೆ ಜಾತ್ಯಾತೀತ ಎಂಬ ಹುಸಿ ಪರಿಕಲ್ಪನೆಗಳನ್ನು ಹುಟ್ಟು ಹಾಕಿತು. ಆ ಸಂದರ್ಭಕ್ಕೆ ಸರಿಯಾಗಿ ಮಹಾತ್ಮಾ ಗಾಂಧೀಜಿಯ ದೈಹಿಕ ಹತ್ಯೆಯನ್ನು ಗೋಡ್ಸೆ ಮಾಡಿದರೆ, ಗಾಂಧೀವಾದದ ಹತ್ಯೆಯನ್ನು ಎಲ್ಲರೂ ಸೇರಿ ಮಾಡಿದರು.

1910ರಲ್ಲೇ ಭಾರತದ ಜನಗಣತಿಯ ಸಂದರ್ಭದಲ್ಲಿ ಮುಸ್ಲಿಂ ಲೀಗ್, ದಲಿತರನ್ನು ಹಿಂದೂಗಳೆAದು ಪರಿಗಣಿಸಬಾರದೆಂದು ಮನವಿಯನ್ನು ಸಲ್ಲಿಸಿತು. ಒಡೆದು ಆಳುವ ರಾಜನೀತಿಯ ಬ್ರಿಟಿಷರು ಆ ಕಾಲದಲ್ಲಿ ಹಿಂದೂ, ಮುಸ್ಲಿಂ ಎಂದು ಒಂದು ವಿಭಜನೆ ಮಾಡಿದರೆ, ಹಿಂದೂಗಳನ್ನು ಸ್ಪೃಶ್ಯ-ಅಸ್ಪೃಶ್ಯ ಎಂದು ವಿಭಜಿಸುವ ಮೂಲಕ ಭಾರತದಲ್ಲಿ ಮುಸ್ಲಿಮರು, ಸವರ್ಣೀಯರು, ಅವರ್ಣೀಯರು ಎಂಬ ಕೇಂದ್ರಗಳನ್ನು ಶಾಶ್ವತಗೊಳಿಸಿದರು. ಆದರೆ, 1932ರಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವಿನ ಪೂನಾ ಒಪ್ಪಂದ ಸವರ್ಣೀಯರು ಮತ್ತು ಅವರ್ಣೀಯರನ್ನು ಒಂದಾಗಿ ಬದುಕುವಂತೆ ಮಾಡಿತು. ಅದರ ಕಾನೂನಿನ ಸ್ವರೂಪ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಂಡಿಸಿದAತಹ ಹಿಂದೂ ಕೋಡ್ ಬಿಲ್ ಮತ್ತು ಅದರ ಸಾಂಸ್ಕೃತಿಕ ಸ್ವರೂಪ ಡಾ.ಹೆಡಗೇವಾರ್ ರೂಪಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದುತ್ವ.

ಸ್ವಾತAತ್ರ‍್ಯೋತ್ತರ ಭಾರತದಲ್ಲಿ ಬ್ರಾಹ್ಮಣ-ಅಬ್ರಾಹ್ಮಣ; ಆರ್ಯ-ದ್ರಾವಿಡ ವಾದವನ್ನು ಪೆರಿಯಾರ್ ಮೊದಲಾದವರು ಬಲವಾಗಿ ಹುಟ್ಟುಹಾಕಿದರು. 1920-30ರ ದಶಕದಲ್ಲೇ ಕರ್ನಾಟಕದಲ್ಲಿ ಲಿಂಗಾಯತರು, ಆನಂತರದಲ್ಲಿ ಒಕ್ಕಲಿಗರು ಸಂಘಟಿತರಾದರು. ರಾಜಕೀಯ ಅಧಿಕಾರವನ್ನೂ ಹಿಡಿದರು. ಅಂದು ಅದು ನಮಗೆ ಜಾತೀವಾದ ಎಂದೆನಿಸದೆ ಶೂದ್ರ ಪ್ರಜ್ಞೆಯಾಗಿ ಕೇಳಿಸಿತು. ರಾಷ್ಟಿçÃಯತೆಯನ್ನೇ ಉಸಿರಾಗಿಸಿಕೊಂಡಿದ್ದ ಕಾಂಗ್ರೆಸ್ “ಜಾತ್ಯಾತೀತ” ಎಂಬ ಪದವನ್ನು “ಹಿಂದುತ್ವ”ಕ್ಕೆ ವಿರುದ್ಧವಾದ ಆಯುಧವಾಗಿ ಬಳಸುತ್ತಾ ಮುಸ್ಲಿಂ ತುಷ್ಟೀಕರಣವನ್ನು ಒಂದೆಡೆ ಮಾಡಿದರೆ ಮತ್ತೊಂದೆಡೆ ದಲಿತ ಮತಬ್ಯಾಂಕ್ ಸೃಷ್ಟಿಸಿತು. ಅದರ ಪರಿಣಾಮ ಮೇಲ್ಜಾತಿ ಹಾಗೂ ಮಧ್ಯಮ ಜಾತಿಯ ಜಮೀನ್ದಾರರ ಪಕ್ಷವಾಗಿ ಜನತಾ ಪಕ್ಷ, ಜನತಾ ದಳ ಇತ್ಯಾದಿ ಶೂದ್ರ ಪ್ರಜ್ಞೆಯ ಹೆಸರಿನಲ್ಲಿ ಜಾತೀವಾದವೇ ರಾಜಕೀಯ ಪಕ್ಷಗಳನ್ನು ಮುನ್ನಡೆಸಿತು. ಆದರೂ ಅದು ಜಾತ್ಯಾತೀತವೇ ಎಂದೆನಿಸಿತು. ಒಡಲಲ್ಲಿ ಜಾತೀಯತೆಯನ್ನೇ ತುಂಬಿಕೊAಡಿತು.

ಪ್ರಸ್ತುತ ಮುಸ್ಲಿಂ ತುಷ್ಟೀಕರಣ, ಶೂದ್ರಪ್ರಜ್ಞೆ, ದಲಿತವಾದ ಮೊದಲಾದವುಗಳಿಗಿಂತ ಭಿನ್ನವಾದ ಸಿದ್ಧಾಂತ, ಸಂಘಟನೆ, ರಾಜನೀತಿಯನ್ನು ಪ್ರತಿಪಾದಿಸುತ್ತಾ ಬಂದಿರುವ ಹಿಂದುತ್ವ ರಾಜಕೀಯ ನೇತೃತ್ವವನ್ನು ವಹಿಸಿಕೊಂಡಿದೆ. ಹಿಂದುತ್ವ ಎಂದರೆ ಹಿಂದೂಸ್ಥಾನದ ರಾಷ್ಟಿçÃಯತೆ ಎಂದೇ ಬಲವಾಗಿ ಪ್ರತಿಪಾದಿಸಿದೆ. ಆದರೆ, ಎಡಪಂಥೀಯರು, ನಕಲಿ ಜಾತ್ಯಾತೀತರು ಅದನ್ನು ಜಾತೀವಾದ, ಬ್ರಾಹ್ಮಣವಾದ, ಕೋಮುವಾದ ಎಂಬ ಹುಸಿ ಪ್ರಚಾರವನ್ನು ಕೈಗೊಳ್ಳುತ್ತಾ, ಬರೆಯುತ್ತಾ ವಿಶ್ವವಿದ್ಯಾಲಯಗಳ ಮೂಲಕ ಪ್ರತಿಷ್ಠಾಪಿಸುತ್ತಾ ಬಂದರು. ಆದರೆ, ಇಂದು ಹುಸಿ ಜಾತ್ಯಾತೀತರು ಮತ್ತು ನಿಜ ಜಾತ್ಯಾತೀತರ ನಡುವೆ ನಿರ್ಣಾಯಕ ಸಂಘರ್ಷ ಏರ್ಪಟ್ಟಿದೆ.

ಒಂದು ಕಾಲದ ಜಾತ್ಯಾತೀತರೇ ಇಂದು ಜಾತೀವಾದದ ನೇತೃತ್ವ ವಹಿಸುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ಒಂದು ಎನ್ನುತ್ತಾ ಬಂದ ಹಿಂದುತ್ವವಾದದಲ್ಲಿಯೂ ಜಾತೀ ನಾಯಕತ್ವದ ಸಂಘರ್ಷ ಕಂಡುಬರುತ್ತಿದೆ. ಒಂದರ್ಥದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷದ ಒಡಲ ಮಡಿಲಲ್ಲಿ ಪ್ರಬಲ ಜಾತಿಗಳ, ಬಹುಸಂಖ್ಯಾತ ಜಾತಿ-ಮತಗಳ ಬೆಂಕಿಯ ಉಂಡೆ ಸಿಡಿಮದ್ದಿನಂತೆ ಅಡಗಿ ಕುಳಿತಿದೆ. ಕಾರಣ, ಸೈದ್ಧಾಂತಿಕ ರಾಜಕಾರಣವು ದುರ್ಬಲವಾಗುತ್ತಾ ಅಧಿಕಾರ ರಾಜಕಾರಣವು ಮೇಲುಗೈ ಸಾಧಿಸುತ್ತಿದೆ. ಇದು ಒಂದು ದಿನ, ಒಂದು ವರ್ಷ ನಡೆದಿರುವ ಇತ್ತೀಚಿನ ವಿದ್ಯಮಾನವಲ್ಲ.

ಆದರೆ, ಇತ್ತೀಚೆಗೆ ದಲಿತರಲ್ಲೇ ಎಡಗೈ-ಬಲಗೈ-ದಕ್ಕಲಿಗರಾದಿಯಾದಂತಹ ಎಲ್ಲ ಸಣ್ಣ ಸಣ್ಣ ಜಾತಿಗಳಲ್ಲೂ ರಾಜಕೀಯ ಎಚ್ಚರ, ಸಂಘಟನೆ, ಹಕ್ಕೊತ್ತಾಯ ಕಾಣಿಸುತ್ತಿರುವುದರಿಂದ ಮೇಲ್ಜಾತಿ, ಮೇಲ್ವರ್ಗದವರಿಗೆ ಇತ್ತೀಚೆಗೆ ಜಾತೀಯತೆ, ಜಾತೀವಾದ ವಿಜೃಂಭಿಸುತ್ತಿದೆ ಎಂದೆನಿಸುತ್ತಿದೆ ಅಥವಾ ಹಾಗೆ ಪ್ರಚಾರ ಮಾಡುತ್ತಿದ್ದಾರೆ. ಜಯಂತಿಗಳು ಜಾತಿ ಜಯಂತಿಗಳಾಗುತ್ತಿವೆ ರದ್ದು ಮಾಡಬೇಕೆಂದು ಗುಲ್ಲನ್ನು ಎಬ್ಬಿಸುತ್ತಿದ್ದಾರೆ. ಆದರೆ, ಅದು ಜಾತೀಯತೆ ಅಥವಾ ಜಾತೀವಾದ ಅಲ್ಲ. ಈವರೆಗೆ ಜಾತೀಯತೆ, ಜಾತೀವಾದಕ್ಕೆ ಬಲಿಯಾಗಿದ್ದವರು ಎದ್ದುನಿಂತು ನಡೆಯುತ್ತಿದ್ದಾರೆ, ಸಂಘಟಿತರಾಗುತ್ತಿದ್ದಾರೆ. ತಮ್ಮ ಹಕ್ಕುಗಳಿಗೆ ಒತ್ತಾಯಿಸುತ್ತಿದ್ದಾರೆ.

ಅದರಿಂದಾಗಿ ಬ್ರಾಹ್ಮಣಾದಿ ಲಿಂಗಾಯತ, ಒಕ್ಕಲಿಗ, ಕುರುಬ, ವಾಲ್ಮೀಕಿಯಂತಹ ಬಲಿಷ್ಠ ಬಹುಸಂಖ್ಯಾತ ಜಾತಿಯವರು ತಳಮಳಗೊಳ್ಳುತ್ತಿದ್ದಾರೆ. ಆದರೆ, ಆ ತಳಮಳವನ್ನು ಸಾಮಾಜಿಕ ನ್ಯಾಯದಿಂದ, ಮಾನವೀಯ ಅಂತಃಕರಣದಿAದ, ನೈತಿಕ ಪ್ರಜ್ಞೆಯಿಂದ, ಆಧ್ಯಾತ್ಮಿಕ ಔದಾರ್ಯದಿಂದ ಕಾಣುವ, ಸಮಾಧಾನಪಡಿಸುವ ರಾಜನೀತಿ ಬೇಕಾಗಿದೆ.

ಈಗ ನಾವು ಆರ್ಯ-ದ್ರಾವಿಡ, ಬ್ರಾಹ್ಮಣ-ಅಬ್ರಾಹ್ಮಣ; ಶೂದ್ರ-ದಲಿತ; ಎಡಗೈ-ಬಲಗೈ ಎಂಬ ಪ್ರಜ್ಞೆಯನ್ನು ಮೀರಿ ಹಿಂದುತ್ವದ, ಬಂಧುತ್ವದ ಪ್ರಜ್ಞೆಯಲ್ಲಿ ಒಂದಾಗುತ್ತಿದ್ದೇವೆ. ಅದರ ಅರ್ಥ ಯಥಾಸ್ಥಿತಿಯ ವಾದವಲ್ಲ. ನಿಜವಾದ ಅರ್ಥದಲ್ಲಿ ಸಾಮಾಜಿಕ ಸಾಮರಸ್ಯದ ಮೂಲಕ ಜಾತೀಯತೆ ಎಂಬ ರೋಗವನ್ನು ದೂರಗೊಳಿಸಿ ಮತೀಯತೆ, ಮತಾಂಧತೆ, ಭಯೋತ್ಪಾದಕತೆಗಳನ್ನು ಇಲ್ಲವಾಗಿಸಿ ರಾಷ್ಟಿçÃಯತೆ, ಅಂತ್ಯೋದಯ, ಸರ್ವೋದಯ, ಸಮನ್ವಯ ಎಂಬ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಬಹುರೂಪಿ ಏಕಾತ್ಮದ ರಾಜನೀತಿ ನಮ್ಮನ್ನು ಮುನ್ನಡೆಸುವಂತಾಗಬೇಕು.

ಮತೀಯತೆ ಮತ್ತು ಜಾತೀಯತೆಗಳನ್ನು ಮೀರುವುದೇ ನಿಜವಾದ ಹಿಂದುತ್ವ. ಅದೊಂದೇ ಇಂದು ದೇಶದ ಮುಂದಿರುವ ಆಶಾವಾದ. ಹಿಂದುತ್ವಕ್ಕೂ ಮತೀಯತೆ- ಜಾತೀಯತೆಯನ್ನು ಮೀರಲಾಗದಿದ್ದರೆ ಭಾರತಕ್ಕೆ ಉಜ್ವಲವಾದ ಭವಿಷ್ಯವಿಲ್ಲವೆಂದೇ ಅರ್ಥ. ಹಿಂದೂಸ್ಥಾನದಲ್ಲಿರುವ ಪರಂಪರೆಗೆ ವಾರಸುದಾರರು, ಈ ನೆಲ-ಸಂಸ್ಕೃತಿಗೆ ಸೇರಿದವರು ನಾವು ಎಂಬುದೇ ಹಿಂದುತ್ವ.

*ಲೇಖಕರು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರು; ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

Leave a Reply

Your email address will not be published.