ನನ್ನ ಕೊಡಗಿನ ಘೋರ ಆಘಾತಗಳು!

ನಮ್ಮೂರು ಕೊಡಗು. ಅದೊಂದು ಪ್ರಕೃತಿಯ ಬೆಡಗು ಎಂದು ಹೇಳುತ್ತಲೇ ಅಲ್ಲಿನ ಅವಘಡಗಳನ್ನು ಬಿಡಿಸಿಡುತ್ತಾರೆ ಅಲ್ಲಿಯವರೇ ಆದ ಹಿರಿಯ ಪರಿಸರಪ್ರೇಮಿ ಡಾ.ಕೆ.ಎಂ.ಬೋಜಪ್ಪ.

-ಕಾವೇರಿ ಮನೆ ಬೋಜಪ್ಪ

ಈ ಲೇಖನ ಬರೆಯಲು ನನ್ನನ್ನು ಪ್ರೇರೇಪಿಸಿದ ನಮ್ಮೂರು ಕೊಡಗಿನ ಇತ್ತೀಚಿನ ಘೋರ ಸಮಸ್ಯೆಗಳು/ಘಟನೆಗಳೆಂದರೆ:

ಒಂದು, ಮನುಷ್ಯರ ಹಾಗೂ ಕಾಡುಪ್ರಾಣಿಗಳ ಮಧ್ಯೆ ಹೋರಾಟ-ಕಾದಾಟ ಹಾಗೂ ಸಾವು-ನೋವು.

ಎರಡನೆಯದು, ಇತ್ತೀಚೆಗಿನ ವರ್ಷಗಳಲ್ಲಿ ಇಡೀ ಕೊಡಗನ್ನೇ ಅಲ್ಲಾಡಿಸಿದ ಘೋರ ಪ್ರಕೃತಿ ವಿಕೋಪಗಳು.

ಇಂಥ ಸಮಸ್ಯೆಗಳು ಕೇವಲ ಇತ್ತೀಚೆಗಿನವುಗಳು ಮಾತ್ರವಲ್ಲ! ಹಿಂದೆ ಯಾರ ಗಮನಕ್ಕೂ ಬಾರದೆ ಅನೇಕ ಘಟನೆಗಳು ಆಗಿರಲೇಬೇಕು. ಅದಲ್ಲದೆ ಇವು ಕೊಡಗಿಗೆ ಮಾತ್ರ ಸೀಮಿತವಾಗಿರದೆ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ನಾನಾ ಕಡೆ ನಡೆದಿರಬೇಕು. ಅವುಗಳಲ್ಲಿ ಕೆಲವೊಂದನ್ನು ನೀವು ಕೇಳಿರಲೂಬಹುದು ನೋಡಿರಲೂಬಹುದು.

ಫೆಬ್ರವರಿ 20-21ರಲ್ಲಿ ಕೊಡಗಿನ ಪೊನ್ನಂಪೇಟೆ ಹತ್ತಿರದ ಅರಣ್ಯದಿಂದ ಭಾರೀ ಗಾತ್ರದ ಹುಲಿಯೊಂದು ಊರು ನುಗ್ಗಿ ಇಬ್ಬರನ್ನು, ಹಾಗೆಯೇ ಮಾರ್ಚ್ 8ರಂದು ಮತ್ತೊಬ್ಬರನ್ನು ಕೊಂದು ಚಿಂದಿ ಚಿಂದಿ ಮಾಡಿರುವುದಲ್ಲದೆ, ಇತರ ಅನೇಕರಿಗೆ ತೀವ್ರ ಗಾಯಗೊಳಿಸಿರುವುದು ತಿಳಿದುಬಂದಿದೆ. ಇವೆಲ್ಲವೂ ಘೋರ ಘಟನೆಗಳಾಗಿದ್ದು ಜನರು ರೊಚ್ಚಿಗೆದ್ದು ಅನೇಕ ಅನಾಹುತಗಳಾಗಿವೆ.

ಮಾರ್ಚ್ 22ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಒಂದು ಹಳ್ಳಿಯಲ್ಲಿ ಬೆಳಗ್ಗೆ ತಾಯಿ-ಮಗ ಜಮೀನಿಗೆ ಹೋಗಿದ್ದಾಗ ಇದ್ದಕ್ಕಿದ್ದ ಹಾಗೆ ಕಾಡಿನಿಂದ ಧಾವಿಸಿ ಬಂದ ಒಂದು ದೊಡ್ಡ ಚಿರತೆ ತಾಯಿ ಮೇಲೆರಗಿ ಕಚ್ಚುತ್ತಿತ್ತು. ಮಗ ಕಿರಣ ಚಿರತೆ ತನ್ನನ್ನು ಕಚ್ಚಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ, ಕೈಯಲ್ಲಿ ಯಾವುದೇ ಆಯುಧ ಇಲ್ಲದಿದ್ದರೂ ಧೈರ್ಯದಿಂದ ಬರಿಕೈಯಿಂದಲೇ ಅದರ ಕುತ್ತಿಗೆಯನ್ನು ನೆಲಕೊತ್ತಿ ಹಿಡಿದುಕೊಂಡ. ಆ ವೀರ ಯುವಕ 15 ನಿಮಿಷ ತನಕ ಸತತ ಕಾದಾಟ ನಡೆಸಿ ಚಿರತೆಯನ್ನು ಕೊಂದು ಹಾಕಿದ. ಈ ವೀರನನ್ನು ನಾವು ಮೆಚ್ಚಲೇಬೇಕಲ್ಲವೇ. ಕರ್ನಾಟಕದ ಇಂಥ ಧೀರ ಯುವಕರನ್ನು ಸರ್ಕಾರದವರು ಗುರುತಿಸಿ ಶೌರ್ಯಪ್ರಶಸ್ತಿ ನೀಡಿ ಬೆನ್ನು ತಟ್ಟುವ ಅಗತ್ಯವಿದೆ.

ಇಲ್ಲಿ ಚಿತ್ರಿಸಿರುವ ಘಟನೆಗಳು ಕೇವಲ ಸಮುದ್ರದ ಒಂದು ತೊಟ್ಟು ನೀರಿನಷ್ಟೇ. ಇಂಥ ಅನೇಕಾನೇಕ ಸಮಸ್ಯೆಗಳು-ಘಟನೆಗಳು ಬಹಳ ಹಿಂದಿನಿಂದಲೇ ಕೊಡಗಿನಲ್ಲಾಗಲೀ, ಮಲೆನಾಡಿನ ಇತರ ಕಡೆಗಳಾಗಲೀ ನಡೆದೇ ಬಂದಿವೆ. ಈ ತರಹದ ಘಟನೆಗಳಲ್ಲಿ ಅದೆಷ್ಟು ಜೀವಗಳು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿ ನಾಶವಾಗಿವೆಯೋ ಆ ದೇವರಿಗೆ ಗೊತ್ತು.

ಇನ್ನು, ಎರಡು ವರ್ಷಗಳಿಂದೀಚೆಗೆ ಸತತವಾಗಿ ಇಡೀ ಕೊಡಗು ಹಾಗೂ ಇತರ ಪ್ರದೇಶಗಳನ್ನೇ ಅಲ್ಲಾಡಿಸಿದ ಘೋರ ಪ್ರಕೃತಿ ವಿಕೋಪ. ಪ್ರಕೃತಿ ವಿಕೋಪದಿಂದ ಎಡೆಬಿಡದೆ 3-4 ದಿನಗಳವರೆಗೆ ಸುರಿದ ಜಡಿ ಮಳೆಯಿಂದಾಗಿ ಭಾರೀ-ಭಾರೀ ಪ್ರಳಯವಾಗಿ ಕಾಡು, ಬೆಟ್ಟ, ಗುಡ್ಡಗಳೇ ಇದ್ದಕ್ಕಿದ್ದ ಹಾಗೆ ಜರಿದುಬಿದ್ದು ಅನೇಕ ಸಾವುಗಳು ಸಂಭವಿಸಿದವು. ಅದೆಷ್ಟೋ ಮನೆ-ಮಠಗಳು, ಆಸ್ತಿ-ಪಾಸ್ತಿಗಳು, ತೋಟ, ದನ-ಕರುಗಳು ನಾಶಗೊಂಡವು. ಸೇತುವೆಗಳು, ರಸ್ತೆಗಳು, ಗದ್ದೆಗಳು ಕೊಚ್ಚಿ ಹೋಗಿ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮಂಗಮಾಯ. ಬಿದ್ದವರು ಬಿದ್ದಲ್ಲೇ, ಇದ್ದವರು ಇದ್ದಲ್ಲೇ. ಅವರ ಗೋಳಾಟ ಕೇಳುವವರ್ಯಾರು?

ಹೊಟ್ಟೆಗೆ ಊಟವಿಲ್ಲ- ಮೈಗೆ ಬಟ್ಟೆಯಿಲ್ಲ. ಇದ್ದದ್ದೆಲ್ಲಾ ಸರ್ವ ನಾಶ. ಇಂಥ ಕಠಿಣ ಪ್ರಸಂಗಗಳಲ್ಲಿ ಸಾರ್ವಜನಿಕರಾಗಲೀ, ಸರ್ಕಾರದವರಾಗಲೀ ಅದೆಷ್ಟು ಸಹಾಯ ಮಾಡಲು ಸಾಧ್ಯ? ಆದರೂ, ಇವರೆಲ್ಲರೂ ಶಕ್ತಿ ಮೀರಿ ಸಹಾಯ ಮಾಡಿರುವುದೆಂತು ಸತ್ಯ. ಕಷ್ಟದಲ್ಲಿ ನರಳಾಡುತ್ತಿರುವವರಿಗೆ ಹೊಟ್ಟೆಗಿಷ್ಟು ಹಿಟ್ಟು, ಮೈಗಿಷ್ಟು ಬಟ್ಟೆ, ಉಳಿದುಕೊಳ್ಳಲು ತಾತ್ಕಾಲಿಕ ವಸತಿ, ಜೀವ ಕಳೆದುಕೊಂಡವರ ಸಂಸಾರಕ್ಕಿಷ್ಟು ಹಣ ಸಹಾಯ ಹೀಗೆ ಸಾಧ್ಯವಾದುದನ್ನೆಲ್ಲಾ ಒದಗಿಸಿಕೊಟ್ಟಿದ್ದಾರೆ.

ಆದರೆ, ಇದು ಶಾಶ್ವತ ಪರಿಹಾರವಲ್ಲ. ಬದಲಿಗೆ ಸರ್ಕಾರ ಹಾಗೂ ಕೊಡಗಿನ ಸಾರ್ವಜನಿಕರು ಸೇರಿ ಇಂಥ ಸಮಸ್ಯೆಗಳಿಗೆ ಮೂಲ ಕಾರಣಗಳನ್ನು ಕಂಡುಹಿಡಿಯುವಲ್ಲಿ ಆಳವಾಗಿ ಯೋಚಿಸಬೇಕಾಗಿದೆ. ಇವೆಲ್ಲಾ ಪ್ರಕೃತಿಯ ಸ್ವಾಭಾವಿಕ ಘಟನೆಗಳೋ ಅಥವಾ ಬೇರೆ ಯಾರಾದರೂ ಕಾರಣಕರ್ತರೋ ಎಂಬುದನ್ನು ಪತ್ತೆ ಹೆಚ್ಚಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಇವುಗಳನ್ನು ಸ್ವಲ್ಪ ಮುಟ್ಟಿಗೆ ತಡೆ ಹಿಡಿಯಲು ಸಾಧ್ಯವಾಗಬಹುದು. ಇದನ್ನು ಬಿಟ್ಟು ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆಯನ್ನು ಪಾಲಿಸಲು ಹೋರಟರೆ ಅದರಿಂದೇನು ಫಲ?

ಈ ಸಮಸ್ಯೆಗಳ ಬಗ್ಗೆ ನಾನು ದೀರ್ಘವಾಗಿ ಯೋಚಿಸಿ ಕೆಲವೊಂದು ವಿಷಯಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ:

ಪ್ರಕೃತಿ ಈ ಪ್ರಪಂಚವನ್ನು ಸೃಷ್ಟಿಸಿದಾಗ ಇದನ್ನು ಅಖಂಡವಾಗಿಡದೆ ಕೆಲವೊಂದು ಭಾಗಗಳಾಗಿ ವಿಂಗಡಿಸಿ, ಯಾವ ಜೀವಿ ಯಾವ ಭಾಗಗಳಲ್ಲಿ ಮಾತ್ರ ಜೀವಿಸತಕ್ಕದ್ದು ಎಂಬ ಕಟ್ಟಾಜ್ಞೆ ವಿಧಿಸಿತ್ತೇನೋ… ಯಾವ ಜೀವಿಯೂ ತನಗೆ ಮೀಸಲಿಟ್ಟ ಭಾಗದಲ್ಲಿ ಮಾತ್ರ ಜೀವಿಸಬೇಕಲ್ಲದೆ ಇತರರ ಮನೆಗೆ ನುಗ್ಗುವಂತಿಲ್ಲ. ಇದಕ್ಕೆ ಪ್ರಕೃತಿ ಸರಿಯಾಗಿಯೇ ಕಂಡುಕೊಂಡಿದ್ದ ಕಾರಣವೆಂದರೆ- ಎಲ್ಲಾ ಜೀವಿಗಳು ಒಂದೇ ಕಡೆ ಜೀವಿಸಿದರೆ ಒಂದಲ್ಲ ಒಂದು ದಿನ ಅವುಗಳೊಳಗೆ ವೈಷಮ್ಯ, ಕಾದಾಟ, ಹೋರಾಟ, ಹೊಡೆದಾಟ, ನಡೆದು ಇಡೀ ಪ್ರಪಂಚವೇ ಶಾಂತಿಯನ್ನು ಕಳೆದುಕೊಂಡು ತಲೆಕೆಳಗಾಗಬಹುದು.

ಈ ಹಿನ್ನೆಲೆಯಲ್ಲಿ ಅಖಂಡ ಪ್ರಪಂಚವನ್ನು ಮುಖ್ಯವಾಗಿ 3 ಭಾಗಗಳಾಗಿ (ಅಂದರೆ ವನ, ನೆಲ, ಜಲ) ವಿಂಗಡಿಸಿಯೇ ಸೃಷ್ಟಿಸಿರಬೇಕೆಂದು ನನ್ನ ಭಾವನೆ.

  1. ವನವೆಂದರೆ ಗಿಡ-ಮರ, ಕಾಡು-ಅರಣ್ಯ, ಕಲ್ಲು-ಗುಡ್ಡ-ಬೆಟ್ಟ ಹಾಗೂ ಶಿಖರ ಮುಂತಾದವು. ಇಲ್ಲಿ ಎಲ್ಲಾ ತರಹದ ವನ್ಯಜೀವಿಗಳು ಮಾತ್ರ ಜೀವಿಸತಕ್ಕದ್ದು. ಈ ಸ್ಥಳ ಇವುಗಳಿಗೆ ಮಾತ್ರ ಸೀಮಿತ. ಇವು ಹೊರದಾಟುವಹಾಗಿಲ್ಲ. ಇತರ ಜೀವಿಗಳು ಇಲ್ಲಿಗೆ ಬರುವಂತಿಲ್ಲ.
  2. ನೆಲವೆಂದರೆ ಅಗಾಧ ಬಯಲು ಪ್ರದೇಶ ಯಾ ಭೂಮಿ. ಇಲ್ಲಿ ಸರ್ವ ನರಜನ್ಮ ಹಾಗೂ ಅವನು ಸಾಕಿ ಸಲಹಿದ ಪ್ರಾಣಿ-ಪಕ್ಷಿಗಳು ಮಾತ್ರ ಜೀವಿಸತಕ್ಕದ್ದು.
  3. ಜಲ ಎಂದರೆ ಹೊಳೆ, ನದಿ, ಕೆರೆ, ಕುಂಟೆ, ಸಾಗರ ಮುಂತಾದವು. ಇವು ಎಲ್ಲಾ ತರಹದ ನೀರಿನಲ್ಲೇ ಜೀವಿಸುವ ಜಲಚರಗಳಿಗೆ ಸೀಮಿತ.

ಪ್ರಕೃತಿಯ ಈ ಆದೇಶದಂತೆ ಎಲ್ಲವೂ ಹಿಂದಿನಿಂದ ನಡೆದು ಬರುತ್ತಿವೆ. ಈಗಲೂ ಅದೇ ರೀತಿಯಲ್ಲಿ ನಡೆಯುತ್ತಿದೆಯೇ ಎಂದು ಕೇಳಿದರೆ, ನಿಮಗೆ ಸಿಗುವ ಉತ್ತರ ‘ಇಲ್ಲ’. ಹಾಗಾದರೆ ಈಗ ಏನಾಗುತ್ತಿದೆ ಎಂದು ನಾವು ದೀರ್ಘವಾಗಿ ಯೋಚಿಸುವ ಕಾಲ ಬಂದೇ ಬಿಟ್ಟಿದೆ.

ನನ್ನ ಅಭಿಪ್ರಾಯದಲ್ಲಿ ಇಂದು ಕೊಡಗಿನಲ್ಲಾಗಲೀ ಅಥವಾ ಇತರ ಕಡೆಗಳಲ್ಲಾಗಲೀ ಆಗಾಗ್ಗೆ ಎದ್ದು ಕಾಣುತ್ತಿರುವ ಘೋರ ಸಮಸ್ಯೆಗಳಿಗೆ ಹೆಚ್ಚಿನದಾಗಿ, ಅತಿ ದುರಾಶೆಯ ಮನುಷ್ಯ ವರ್ಗವೇ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಈ ದುರಾಸೆಯ ವ್ಯಕ್ತಿಗಳು, ಅದರಲ್ಲೂ ಹೆಚ್ಚಿನದಾಗಿ ಹಣವಂತರು, ಶ್ರೀಮಂತರು, ಅಹಂಕಾರಿಗಳು, ಪ್ರಭಾವಶಾಲಿಗಳು, ರಾಜಕೀಯ ಧುರೀಣರು, ಭ್ರಷ್ಟಾಚಾರರು ಹೀಗೆ ಅನೇಕರು, ಅವರ ಅತಿಯಾದ ದುರಾಶೆಯಿಂದ

ಇತರರಿಗೆ ಸೀಮಿತವಾಗಿದ್ದ ಮನೆಗಳಿಗೆ (ವನ, ಜಲ) ನುಗ್ಗಿ ಅಲ್ಲಿಯ ಸರ್ವಸಂಪತ್ತನ್ನು ಕೊಳ್ಳೆ ಹೊಡೆದು, ಅವರ ಡೊಳ್ಳು ಹೊಟ್ಟೆಯನ್ನು ತುಂಬಿಸಿಕೊಂಡಿದ್ದರಿಂದ ಅಲ್ಲಿಯ ಜೀವಿಗಳ ಹೊಟ್ಟೆ ಬರಿದಾಗಿದೆ. ಇಂಥ ಸಂದರ್ಭದಲ್ಲಿ ಅಲ್ಲಿಯ ಜೀವಿಗಳೇನು ಮಾಡಬೇಕು? ಕ್ರೂರ ಕಾಡು ಪ್ರಾಣಿಗಳು ಊರಿನ ಕಡೆ ಧಾವಿಸಿ ಬಂದಾಗ ಆಗುತ್ತಿರುವುದೇ ಮನುಷ್ಯ-ಪ್ರಾಣಿಗಳ ಮಧ್ಯದ ಘರ್ಷಣೆ, ಕಾದಾಟ, ಹೋರಾಟ ಹಾಗೂ ಸಾವು. ಇದೇ ಈ ಹೊತ್ತು ಕೊಡಗಿನ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ.

ಮತ್ತೊಂದು ಕಡೆ, ಪ್ರಕೃತಿ ವಿಕೋಪಗಳೂ ಆಗಾಗ್ಗೆ ನಡೆಯಬೇಕಾದರೆ ಅಲ್ಲಿಯೂ ಈ ದುರಾಶೆಯ ಗುಂಪಿನ ವ್ಯಕ್ತಿಗಳೇ ಹೆಚ್ಚಿನದಾಗಿ ಕಾರಣ. ಇಂದು ಕಾಡು-ಬೆಟ್ಟಗಳೆಲ್ಲಾನಾಶ, ಎಲ್ಲೆಲ್ಲೂ ಅಂದರೆ, ಬೆಟ್ಟದ ತುದಿಯಲ್ಲಿಯೂ, ಕಲ್ಲಿನ ಮೇಲೂ ಮನೆಗಳು, ಬಂಗ್ಲೆಗಳು, ಪ್ರವಾಸಿ ಮಂದಿರಗಳು. ಕೊಡಗಿನ ಪ್ರಕೃತಿಗನುಸಾರವಾಗಿ ಹೆಚ್ಚಿನ ಮನೆ-ಮಠಗಳು, ದಟ್ಟ ಕಾಡು-ಬೆಟ್ಟಗಳ ಪಕ್ಕದಲ್ಲಿಯೇ ಬೆಳೆದು ಬಂದಿರುವುದರಿಂದ ಅಲ್ಲಿನ ಕಾಡು-ಬೆಟ್ಟಗಳೇ ನಾಶವಾಗುತ್ತಿರುವ ಸಂದರ್ಭದಲ್ಲಿ, ಘೋಗರ್ಸಿ ಬರುತ್ತಿರುವ ಮಳೆಗೆ ಸಡಿಲವಾದ ಬೆಟ್ಟವೇ ಜಾರಿ ಬೀಳುವಂತಾಗಿದೆ. ಇಂತಹ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟ ಕಷ್ಟಗಳನ್ನು ಪರಿಹರಿಸಲು ಸಾಧ್ಯವೇ ಎಂದು ಎಲ್ಲರೂ ಯೋಚಿಸಬೇಕಾಗಿದೆ.

ಹೇಳುವುದನ್ನೆಲ್ಲಾ ಹೇಳಿಯಾಯಿತು. ಈಗ ಈ ಕೆಳಗಿನ ಕೆಲವೊಂದು ಪರಿಹಾರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

  1. ಯಾವುದೇ ಕಾರಣಕ್ಕಾಗಲೀ ಪ್ರಕೃತಿ ನಿರ್ಮಿತ ಕೊಡಗಿನ ಪರಿಸರ ಹಾಳಾಗದಂತೆ ಹಾಗೂ ವನಸಂಪತ್ತನ್ನು ಯಾರೂ ಒಳನುಗ್ಗಿ ಕೊಳ್ಳೆ ಹೊಡೆಯದಂತೆ ಕರ್ನಾಟಕ ಸರ್ಕಾರ ಹಾಗೂ ಇಲ್ಲಿಯ ನಿವಾಸಿಗಳು ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಪರಾಧಿಗಳಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಬೇಕು.
  2. ಕೊಡಗಿನ ಒಳ್ಳೆಯ ಆಡಳಿತ ಹಾಗೂ ಸರ್ವತೋಮುಖ ಅಭಿವೃದ್ಧಿ ಅಲ್ಲಿಯ ಡೆಪ್ಯೂಟಿ ಕಮೀಷನರ್ ಜವಾಬ್ದಾರಿಯಾಗಿದೆ. ಅದರೊಟ್ಟಿಗೆನೇ ಅವರೊಬ್ಬ ಪರಿಸರ ಪ್ರೇಮಿ ಹಾಗೂ ಅದರ ಜ್ಞಾನಿಯಾಗಿದ್ದು ಪರಿಸರವನ್ನು ಕಾಪಾಡಬೇಕಾಗಿದೆ. ಇವೆರಡರ ಕೊರತೆ ಅವರಲ್ಲಿ ಕಂಡುಬಂದರೆ ಪರಿಸರ ತಜ್ಞರು ಅವರಿಗೆ ಬೋಧಿಸಬೇಕಾಗುತ್ತದೆ.
  3. ಎಷ್ಟೇ ಸರ್ತಿ ಅಭಿವೃದ್ಧಿಯ ನೆಪದಲ್ಲಿ ಸ್ಥಳೀಯ ನಿವಾಸಿಗಳಿಗೆ ಬೇಡವಾದರೂ ಸರ್ಕಾರದವರು ಕೆಲವೊಂದು ಕಾರ್ಯಕ್ರಮಗಳನ್ನು ಮುಂದುವರಿಸುತ್ತಾರೆ. ಉದಾಹರಣೆಗೆ ಕಾಡು ಮಧ್ಯೆ ಹೆದ್ದಾರಿಗಳನ್ನೋ, ಪ್ರವಾಸಿ ಮಂದಿರಗಳನ್ನೋ, ರೈಲ್ವೆ ಮಾರ್ಗಗಳನ್ನೋ ನಿರ್ಮಿಸಿ ಅಲ್ಲಿಯ ಪರಿಸರವನ್ನು ಹಾಳು ಮಾಡುತ್ತಾರೆ. ಇದರಿಂದ ಕ್ರೂರ ಪ್ರಾಣಿಗಳು ಕೆರಳುವುದು ಸಹಜ. ಅವುಗಳ ದಾಳಿಯನ್ನು ಪಕ್ಕದ ಊರಿನವರು ಅನುಭವಿಸಬೇಕಾಗುತ್ತದೆ. ಇಂಥ ಯೋಜನೆಗಳಿಗೆ ತಡೆ

ಹಾಕಬೇಕಾಗಿದೆ.

  1. ಮರಳು ದಂಧೆಯರು ದಿಢೀರ್ ಹಣ ಸಂಪಾದಿಸಲು, ಸರ್ಕಾರವನ್ನು ವಂಚಿಸುತ್ತಾ, ಕಾಡು-ಊರು ಎಲ್ಲಾ ಕಡೆ ನುಗ್ಗಿ ಮರಳು ಹಾಗೂ ಇತರ ವನಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ತಡೆ ಹಿಡಿಯಬೇಕಾಗಿದೆ.
  2. ಕಡೆಯದಾಗಿ ಆದರೂ ಮುಖ್ಯವಾಗಿ ಹೇಳುವುದಾದರೆ, ಸರ್ಕಾರದವರು ಹಾಗೂ ಸಾರ್ವಜನಿಕರು ಅದೆಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದರೂ, ಪ್ರಕೃತಿ ವಿಕೋಪವನ್ನು ತಡೆ ಹಿಡಿಯುವುದು ಕಷ್ಟದ ಕೆಲಸ. ಅತಿವೃಷ್ಟಿ, ಅನಾವೃಷ್ಟಿ ಎಂಬುದು (ಐಚಿತಿ oಜಿ ಓಚಿಣuಡಿe) ಮೇಲೆ-ಕೆಳಗೆ ಓಡಾಡುವ ಉಯ್ಯಾಲೆ ಇದ್ದಂತೆ.

ಈ ಎಲ್ಲಾ ಕಾರಣಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗಿನ ಜನರು ಇನ್ನು ಮುಂದೆ ಮನೆ-ಮಠ ಕಟ್ಟುವಾಗ ಕಾಡು-ಬೆಟ್ಟಗಳ ಇಳಿಜಾರಿನಲ್ಲಿ ಕಟ್ಟುವುದನ್ನು ನಿಲ್ಲಿಸಿದರೆ ಈಗ ಆಗುತ್ತಿರುವ ಅನಾಹುತಗಳಿಂದ ಸ್ವಲ್ಪ ಮಟ್ಟಿಗಾದರೂ ಪಾರಾಗಬಹುದೆಂದು ನನ್ನ ದೃಢ ನಂಬಿಕೆ.

*ಲೇೀಖಕರು ಕೊಡಗಿನವರು, ಕೃಷಿ ವಿಶ್ವವಿದ್ಯಾಲದ ನಿವೃತ್ತ ಪ್ರಾಧ್ಯಾಪಕರು. ಬೆಂಗಳೂರಿನ ನಗೆಕೂಟ ಚಟುವಟಿಕೆಗಳಲ್ಲಿ ಸಕ್ರಿಯರು.

Leave a Reply

Your email address will not be published.