ನನ್ನ ಲೇಖನ ಅನರ್ಹವಾಗಿತ್ತೇ…?

ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು.

‘ಸಮಾಜಮುಖಿ’ ಪತ್ರಿಕೆಯ ಮಾರ್ಚ್ ಸಂಚಿಕೆಯನ್ನು ಇಂದು ಓದಿದೆ. ಇದರಲ್ಲಿನ ಲೇಖನಗಳು ಉತ್ಕೃಷ್ಟ ವಾಗಿವೆ. ದಂಡಾವತಿ ಅವರ ಲೇಖನ ಮೀಸಲಾತಿ ಬಗ್ಗೆ ಚಾರಿತ್ರಿಕ ನೋಟವನ್ನು ಹಾಗೂ ಪ್ರಸ್ತುತ ಗೊಂದಲದ ಚಿತ್ರವನ್ನು ನೀಡುತ್ತದೆ. ಇದೇ ರೀತಿಯಲ್ಲಿ ಆರ್.ಎಸ್.ಎಸ್. ಬಗೆಗಿನ ಪ್ರತಿಕ್ರಿಯೆಗಳು ಸೃಜನಶೀಲವಾಗಿವೆ, ಚಿಂತನಾ ಪ್ರಧಾನವಾಗಿವೆ.

ಇದರ ಬಗ್ಗೆ ನಾನೂ ನನ್ನ ಪ್ರತಿಕ್ರಿಯೆ ಕಳುಹಿಸಿದ್ದೆ (ಐ ಟೂ ರ್ಯಾನ್ ಎಂದಂತೆ). ಅದು ಪ್ರಕಟವಾಗಿಲ್ಲ. ಸಂಪಾದಕರ ಆಯ್ಕೆಯ ಸ್ವಾತಂತ್ರ್ಯವನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ ಇದಕ್ಕೆ ತಮ್ಮ ಸಂಪಾದಕೀಯ ನಿಯಮದಲ್ಲಿ ಅವಕಾಶವಿದ್ದರೆ ನನಗೆ ಉತ್ತರ ಬೇಕು. ಈಗ ಪ್ರಕಟವಾಗಿರುವ ಪ್ರತಿಕ್ರಿಯೆಗಳಿಗಿಂತಲೂ ಸ್ಟಾಂಡರ್ಡ್ ಪ್ರತಿಕ್ರಿಯೆಯಾಗಿತ್ತಾ ಅದು? ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ ಎಂಬ ಉತ್ತರವೂ ತಮ್ಮಿಂದ ಬರಬಹುದು. ಇದು ನನ್ನ ಊಹೆ. ಇದು ನಿಜವಾಗದಿರಲಿ! ಅದರಲ್ಲಿ ನನಗೆ ಆಸಕ್ತಿಯಿಲ್ಲ. ಯಾವ ಸಂಕೋಚವಿಲ್ಲದೆ ತಾವು ಸದರಿ ಪ್ರತಿಕ್ರಿಯೆಯು ಪ್ರಕಟಿಸಲು ಅರ್ಹವಾಗಿರಲಿಲ್ಲ ಎಂದು ತಿಳಿಸಬಹುದು. ಸ್ನೇಹದ ಬಿಡೆಯ ಅಗತ್ಯವಿಲ್ಲ. ಬೇರೆ ಮತ್ತಾವುದೋ ಸದುದ್ದೇಶದಿಂದ ಇದನ್ನು ತಾವು ಪ್ರಕಟಿಸದೆ ಇರಬಹುದು. ಅದರ ಬಗ್ಗೆಯೂ ನನಗೆ ಆಸಕ್ತಿಯಿಲ್ಲ.

ನನ್ನ ಆರ್.ಎಸ್.ಎಸ್. ಬಗೆಗಿನ ಪ್ರತಿಕ್ರಿಯೆಯು ಮಾರ್ಚ್ ತಿಂಗಳ ಸಮಾಜಮುಖಿಯಲ್ಲಿ ಪ್ರಕಟಣೆಗೆ ಅನರ್ಹವಾಗಿತ್ತೇ ಎಂಬುದನ್ನು ತಿಳಿದುಕೊಳ್ಳುವ ಕೆಟ್ಟ ಕುತೂಹಲ. ಇದು ನಿಜವೇ ಆಗಿದ್ದರೆ ನನ್ನ ಬರವಣೆಗೆಯನ್ನು ಡಾ.ಬಿ.ವಿ.ವಸಂತಕುಮಾರ್ ಅವರಿಗಿಂತ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಲು ಮಾರ್ಗದರ್ಶಿಯಾಗುತ್ತದೆ.

ಔಪಚಾರಿಕವಾದ ಅಥವಾ ಬಿಡೆಯಿಂದ ಕೂಡಿದ ಅಥವಾ ಪತ್ರಿಕಾ ಧರ್ಮದ ಉತ್ತರ ನನಗೆ ಬೇಡ. ಅನ್ಯಥಾ ಭಾವಿಸಬೇಡಿ.

ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು.

[ನೀವು ನಿಮ್ಮ ಪತ್ರದ ಕೊನೆಯಲ್ಲಿ, ‘ನಮ್ಮ ಸ್ನೇಹ ಎಂದಿನಂತೆ ಮುಂದುವರಿಯಲಿ. ಇದು ಚಂದ್ರಕಾಂತ ವಡ್ಡು ಅವರಿಗೆ ವೈಯುಕ್ತಿಕ -ಕಾನ್ಫಿಡೆನ್ಸಿಯಲ್- ಪತ್ರ’ ಎಂದು ಬರೆದಿದ್ದರೂ ನನಗೆ ಇದರಲ್ಲಿ ಯಾವುದೇ ಖಾಸಗಿ ಅಂಶವೂ ಗೋಚರಿಸಿಲ್ಲ. ಹಾಗಾಗಿ ‘ಪ್ರಶ್ನೆ ಮಾಡುವುದಿಲ್ಲ’, ‘ನನಗೆ ಉತ್ತರ ಬೇಕು’, ‘ತಿಳಿಯುವ ಕೆಟ್ಟ ಕುತೂಹಲ’, ‘ಪತ್ರಿಕಾ ಧರ್ಮದ ಉತ್ತರ ಬೇಡ’, ‘ಪ್ರಕಟಿಸದಿರುವ ಸದುದ್ದೇಶ ತಿಳಿಯುವ ಬಗ್ಗೆ ಆಸಕ್ತಿಯಿಲ್ಲ’, ‘ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗುವ ಬಗ್ಗೆಯೂ ಆಸಕ್ತಿಯಿಲ್ಲ’, ‘ಔಪಚಾರಿಕವಾದ-ಬಿಡೆಯ ಉತ್ತರ ಬೇಡ’ ಎನ್ನುವ ನಿಮ್ಮ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಿ-ಉತ್ತರಿಸಿ ನಾನು ನಂಬಿದ, ನೀವು ಅಪೇಕ್ಷಿಸದ ಪತ್ರಿಕಾ ಧರ್ಮ ಮೆರೆದಿದ್ದೇನೆ.

ನಿಮಗೆ ಗೊತ್ತಿರುವಂತೆ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಲು/ಪ್ರಕಟವಾಗದಿರಲು ಹಲವಾರು ಕಾರಣಗಳಿರುತ್ತವೆ. ಮುಖ್ಯಚರ್ಚೆಯ ಸಮತೋಲನದ ದೃಷ್ಟಿಯಿಂದ, ವಿಷಯವನ್ನು ಬಹುನೆಲೆಗಳಿಂದ ನಿಕಷಕ್ಕೆ ಒಡ್ಡುವ ಉದ್ದೇಶದಿಂದ ವಿವಿಧ ಲೇಖಕರನ್ನು ಆಯ್ಕೆಮಾಡಿಕೊಳ್ಳುತ್ತೇವೆ. ಹೀಗೆ ಆಹ್ವಾನಿಸಿದ ಲೇಖನಗಳಿಗೆ ಸಹಜವಾಗಿಯೇ ಆದ್ಯತೆ ನೀಡಬೇಕಾಗುತ್ತದೆ (ಅನೇಕ ಬಾರಿ ನಿಮ್ಮಿಂದಲೂ ಲೇಖನ/ಅನುವಾದ ಕೋರಿ ತರಿಸಿ ಪ್ರಕಟಿಸಿದ್ದು ನಿಮಗೆ ನೆನಪಿರಬಹುದು). ಮಾರ್ಚ್ ಸಂಚಿಕೆಯ ಚರ್ಚೆಗೆ ನೀವು ಕಳುಹಿಸಿದ ಲೇಖನ ಪ್ರಕಟವಾಗದಿರಲು ಇದು ಒಂದು ಕಾರಣ. ಮುಖ್ಯಚರ್ಚೆಯ ವಿಷಯ ನಿಮ್ಮ ಲೇಖನ ಪ್ರಸ್ತಾಪಿಸುವ ಆರ್.ಎಸ್.ಎಸ್. ಸಿದ್ಧಾಂತದ ಸರಿ-ತಪ್ಪಿನ ವಿಶ್ಲೇಷಣೆಯಲ್ಲ; ಸಂಘ ತನ್ನ ಘೋಷಿತ ಸಿದ್ಧಾಂತಕ್ಕೆ ಎಷ್ಟು ಬದ್ಧ ಎಂಬುದರ ಪರಿಶೀಲನೆಯಾಗಿತ್ತು. ಇದು ಇನ್ನೊಂದು ಕಾರಣ. ಹಾಗೆಯೇ ಈ ಸಂಚಿಕೆಯ ಮುಂದುವರಿದ ಚರ್ಚೆಯಲ್ಲಿ ನಿಮ್ಮ ಲೇಖನ ಪ್ರಕಟವಾಗಲು ನಿಮ್ಮ ಈ ಪತ್ರ ಕಾರಣವಲ್ಲ! ನಿಮ್ಮ ವಿಪರೀತಾರ್ಥ, ಊಹೆ, ಅನುಮಾನಗಳಿಗೆ ನಾನು ನಿರುತ್ತರಿ. ಸಾಧ್ಯವಾದರೆ ಮಾರ್ಚ್ ಸಂಚಿಕೆಯ ಸಂಪಾದಕೀಯ ಗಮನಿಸಿ. ನಮ್ಮ ಸ್ನೇಹ ಮತ್ತು ಸಂವಾದ ಎಂದಿನಂತೆ ಖಂಡಿತಾ ಮುಂದುವರಿಯುತ್ತದೆ.

ಸಂ]

 

Leave a Reply

Your email address will not be published.