ನನ್ನ ಸೃಜನಶೀಲತೆಯ ಸೆಲೆ

ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯ ಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಈಗಿದೆ ಎನಿಸುತ್ತದೆ.

ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ತಾಣ ಮಾತ್ರವಾಗಿರದೇ ಆಗಾಗ ಶಾಲೆ ತಪ್ಪಿಸಿ ಅಂಡಲೆಯುವ ನೆಲವೂ ಆಗಿತ್ತು. ಮನೆಯಲ್ಲಿ ಅಪ್ಪ-ಅವ್ವ ಹೇಳಿಕೊಟ್ಟ ಮೌಲ್ಯಗಳಿಗಿಂತಲೂ, ಶಾಲೆಯಲ್ಲಿ ಮೇಷ್ಟರು ಹೇಳಿಕೊಟ್ಟದ್ದಕ್ಕಿಂತಲೂ ಅಗಾಧವಾದುದನ್ನು ನನಗೆ ಈ ಊರು ಕಲಿಸಿಕೊಟ್ಟಿದೆ. ಹಾಗೆಯೇ ಇದರ ಸಹವಾಸದಲ್ಲಿರುವ ನೂರಾರು ಹಳ್ಳಿಗಳಲ್ಲಿ ಹತ್ತಾರು ಊರುಗಳೊಂದಿಗೆ ಮತ್ತೆ ಮತ್ತೆ ನಾನು ಒಡನಾಡಿ ಬೆಳೆದ ಕಾರಣ, ನನ್ನ ಬಾಲ್ಯದ ಬುನಾದಿಯಲ್ಲಿ ಚೀಪುಗಲ್ಲುಗಳಂತೆ ಅವು ಕೆಲಸ ಮಾಡಿರುವುದಿದೆ. ಕಟ್ಟಡ ಎಷ್ಟೇ ದೊಡ್ಡದಾಗಿದ್ದರೂ ಈ ಚೀಪುಗಲ್ಲುಗಳ ಪಾತ್ರ ನಗಣ್ಯವಂತೂ ಅಲ್ಲ.

ನನಗೆ ತಿಳಿವಳಿಕೆ ಬಂದ ನಂತರ ನಾನು ದಿಟ್ಟಿಸಿದ್ದು ನನ್ನ ಆ ವಿಶಾಲ ಮನೆಯನ್ನು. ಅದು ನಮ್ಮ ಮುತ್ತಜ್ಜ ಕಟ್ಟಿಸಿದ್ದು. ಭವ್ಯವಾದ ಅರಮನೆಯಂತಿರುವ ಆ ಮನೆಯಲ್ಲಿ ಆಗ ನಾಲ್ಕು ಸಂಸಾರಗಳು. ನಮ್ಮ ಅಪ್ಪ ಮೂರನೆಯವರು. ಅವರಿಗೆ ನಾನು ಐದನೆಯ ಸಂತಾನ. ಬರೊಬ್ಬರಿ ಲೆಕ್ಕ ಒಪ್ಪಿಸುವಂತೆ ಮೂರು ಗಂಡು ಮೂರು ಹೆಣ್ಣು ಮಕ್ಕಳಿಗೆ ಜನುಮ ನೀಡಿದ ಜನುಮದಾತ. ಮಿಕ್ಕಂತೆ ನಮ್ಮ ಚಿಕ್ಕಪ್ಪ, ದೊಡ್ಡಪ್ಪ ಅವರಿಗೂ ಹೀಗೆ ಐದೈದು ಆರಾರು ಮಕ್ಕಳು. ಹೆಚ್ಚೂಕಡಿಮೆ ಮನೆ ತುಂಬ ಮಕ್ಕಳು. ಇಂಥಾ ಭವ್ಯ ಮನೆಯನ್ನು ಕಟ್ಟಿದ್ದು ಕರಿ ಕಲ್ಲಿನಲ್ಲಿ. ಮನೆಗೆ ಬರುವವರೆಲ್ಲಾ ಅದರ ಗೋಡೆಯ ಗಾತ್ರ, ಕಂಬಗಳ ಕೆತ್ತನೆ, ತೊಲೆ ಬಾಗಿಲು ಅದರ ಮೇಲೆ ಎರಡೂ ಬದಿ ಇರುವ ಕುದುರೆಯ ಮುಖ, ತೊಲೆಗೆ ಸಾಲಾಗಿ ಬಡಿದ ಹಿತ್ತಾಳೆಯ ಹೂವುಗಳು, ಮಧ್ಯದಲ್ಲಿ ಗಣಪತಿಯ ಕೆತ್ತನೆ, ಕೆಳಗಿನ ಹೊಸ್ತಲಿನ ಮಧ್ಯಭಾಗದಲ್ಲಿ ಆಮೆಯ ಚಿತ್ರ… ಹೀಗೆ ಇಡೀ ಮನೆಯೇ ಒಂದು ರೀತಿಯಲ್ಲಿ ಕಲಾತ್ಮಕವಾಗಿತ್ತು.

ಒಕ್ಕಲುತನದ ಕುಟುಂಬವಾಗಿದ್ದರಿಂದ ಒಳಗೆ ಪ್ರವೇಶಿಸುತ್ತಿರುವಂತೆ ಹುಲ್ಲು, ಜೋಳದ ಕಣಿಕೆ, ಉರುವಲು ಕಟ್ಟಿಗೆ, ಅಲ್ಲಲ್ಲಿ ಗೂಟಗಳಿಗೆ ನೇತು ಹಾಕಿದ ಹಳಗಿನ ಹಗ್ಗಗಳು, ಕೊಟ್ಟಿಗೆಯಲ್ಲಿ ನಿಲ್ಲಿಸಿದ ಬಲರಾಮು, ಎಡೆ ಹೊಡೆಯುವ ದಿಂಡು, ಕುಂಟಿ ದಿಂಡು, ನೊಗ, ಲೊಗ್ಗಾಣಿ, ಬಾರುಕೋಲು, ವತಗೀಲ, ಜತ್ತಗಿ, ಮಗಡ, ದಾಂಡು, ದನಗಳ ಬಾಯಿಗೆ ಹಾಕುವ ಚಿಕ್ಕಾ, ದಾವಣಿಯಲ್ಲಿ ಕಲ್ಲಿನಲ್ಲೇ ಮಾಡಿದ ಗೂಟಗಳು, ಕಟ್ಟಿದ ಸರಪಳಿಗಳು ಹೀಗೆ ಮನೆಯೊಳಗಡೆ ಕೃಷಿ ಪರಿಕರಗಳೇ ತುಂಬಿರುತ್ತಿದ್ದವು. ಪಡಸಾಲೆಯಲ್ಲಿ ಬೀಜಕ್ಕೆ ಹಿಡಿದ ಬದನೆಕಾಯಿ, ಹೀರೆಕಾಯಿ, ಕುಂಬಳಕಾಯಿಯನ್ನು ಅಲ್ಲಲ್ಲಿ ಜಂತಿಗೆ ಜೋತು ಬಿಟ್ಟದ್ದು ಸಾಮಾನ್ಯವಾಗಿರುತಿತ್ತು. ಹೊಸ ಬೆಳೆ ಬಂದಾಗ ಅದರ ಸ್ಯಾಂಪಲ್‍ನ್ನು ಅಲ್ಲಲ್ಲಿ ಕಟ್ಟಲಾಗಿರುತ್ತಿತ್ತು. ಒಂದೈದು ಜೋಳದ ತೆನೆ, ಸಜ್ಜಿಯ ತೆನೆ, ನವಣಿ ತೆನೆ, ಸಾವಿಯ ತೆನೆ, ಬಳ್ಳೊಳ್ಳಿ, ಉಳ್ಳಾಗಡ್ಡಿ, ಗೋವಿನ ಜೋಳದ ತೆನೆ ಹೀಗೆ ತರಾವರಿ ಬೆಳೆಯೇ ಅಲ್ಲಿರುತ್ತಿತ್ತು.

ಪಡಸಾಲೆಯಲ್ಲಿ ಜೋಳದ ಚೀಲಗಳ ತೆಪ್ಪೆ ಹಚ್ಚುತ್ತಿದ್ದರು. ಇನ್ನು  ಆ ಬಾರಿ ಬಂಪರ್ ಬೆಳೆ ಬಂದಿದೆ ಎಂತಾದರೆ ಉಳಿದ ಜೋಳವನ್ನು ಅಂಗಳದಲ್ಲಿರುವ ಎರಡು ದೊಡ್ದದಾದ ಹಗೆಯೊಳಗೆ ಸುರುವಲಾಗುತ್ತಿತ್ತು. ನೂರಾರು ಚೀಲ ಅನಾಮತ್ತಾಗಿ ನುಂಗುವ ಈ ಹಗೆಗಳದ್ದೇ ಒಂದು ದೊಡ್ಡ ಕತೆ. ಗಾಡಿ ಅನ್ನ ಉಣ್ಣುವ ಭಕಾಸುರನಿಗಿಂತಲೂ ಇವು ಮಿಗಿಲು. ಇವುಗಳ ಒಳಗಿಳಿದು ಜೋಳ ತೆಗೆಯುವವನು ಸಾಮಾನ್ಯ ಆಸಾಮಿ ಆಗಿರುವಂತಿಲ್ಲ. ಅಲ್ಲಿಯ ಝಳವನ್ನು ಧಕ್ಕಿಸಿಕೊಳ್ಳುವ ಗಟ್ ಉಳ್ಳವನಾಗಿರಬೇಕು.

ಅವ್ವನ ಅಡುಗೆ ಮನೆಯಲ್ಲಿ ಇಣುಕಿದರೆ ಒಂದೆರಡು ಒಲೆ. ಮೂಲೆಯಲ್ಲಿ ಮೊಸರಿಡಲು ಒಂದೆರಡು ನಿಲುವುಗಳು, ರೊಟ್ಟಿ ಬಡಿದಾದ ನಂತರ ಬುಟ್ಟಿಗೆ ಹಾಕಿ ಮೇಲೆ ಎತ್ತಿಡುವ ಒಂದೆರಡು ಮಾಡುಗಳು, ನುಚ್ಚು ಮಾಡುವ ಮಡಿಕೆಗಳು, ಹಿಂಡಿಪಲ್ಲೆ, ಪುಂಡಿಪಲ್ಲೆ ಮಾಡುವ ಮಡಿಕೆ, ಮುಗುಚುವ ಹುಟ್ಟು, ರೊಟ್ಟಿ ಬಡಿಯುವ ಕಲ್ಲು, ಹಂಚು, ಒಲೆಗೆ ಹಾಕಲು ವಡಗಟಿಕೆ ಇಲ್ಲವೇ ಚಿಪಾಟಿ. ಕುಂಡಾಳಿಯಲ್ಲಿ ಈರುಳ್ಳಿ ಮೆಣಸಿನಕಾಯಿ, ಬಳ್ಳೊಳ್ಳಿ ಹಾಕಿ ಕುಟ್ಟಿದ ಕೆಂಪು ಚಟ್ನಿ, ಗೂಟಕ್ಕೆ ಸಿಗಿಸಿದ ಕುಸುಬಿ ಎಣ್ಣೆಯ ಬಾಟಲಿ, ಕಾರಬ್ಯಾಳಿ ತೆಗೆದುಕೊಂಡು ಹೊಲಕ್ಕೆ ಹೋಗಲು ಸಜ್ಜಾಗಿರುವ ಕಿಟ್ಲಿ -ಇವಿಷ್ಟು ಅಡುಗೆ ಮನೆಗೆ ಇಣುಕಿದರೆ ಕಾಣುವ ಚಿತ್ರಣ.

ಅತಿ ಮುಖ್ಯವಾಗಿ ಅಡುಗೆ ಮನೆಯ ಬಗ್ಗೆ ಮಾತಾಡುತ್ತಿರುವುದರಿಂದ ಒಂದರ ಬಗ್ಗೆ ಹೇಳಲೇ ಬೇಕು. ಅದು ಮುಟಗಿ. ನಮ್ಮ ಭಾಗದಲ್ಲಿ ರೊಟ್ಟಿ ಬಡಿಯುವ ವೇಳೆಯಲ್ಲಿ ಮಾಡೋ ಒಂದು ಬಗೆಯ ಆಹಾರ. ಇದು ತುಂಬಾ ಮಜಭೂತಾದ ಆಹಾರ ಅನ್ನೋ ನಂಬುಗೆ. ಹಾಗಾಗಿಯೇ ಇದನ್ನು ಮಾಡಿ ಹಾಲು ಸಾಲುವದಿಲ್ಲ, ಕಡಿಮೆ ಬೀಳುತ್ತವೆ ಎನಿಸಿದ  ಎಮ್ಮೆಯ ಕರುಗಳಿಗೆ ತಿನ್ನಿಸಲಾಗುತ್ತಿತ್ತು. ಇದನ್ನು ಮಾಡುವ ವಿಧಾನವೂ ಸರಳವೇ. ತುಸು ದಪ್ಪನೆಯ ಜೋಳದ ರೊಟ್ಟಿಯನ್ನು ಮಾಡಿ ಹಂಚಿಗೆ ಹಾಕುವುದು. ಅದು ಬೇಯುತ್ತಿರುವಾಗಲೇ ಕಲಿಗಲ್ಲಿನಲ್ಲಿ ಬೆಳ್ಳೊಳ್ಳಿ, ಉಪ್ಪು, ಮೆಣಸಿನಕಾಯಿ, ಜೀರಗಿ ಹಾಕಿ ಹದವಾಗಿ ಕುಟ್ಟಬೇಕು. ರೊಟ್ಟಿ ಬೇಯಿದ ಮೇಲೆ ಅದನ್ನೆತ್ತಿ ಆ ಕಲಗಲ್ಲಿಗೆ ಹಾಕಬೇಕು. ಅದನ್ನು ಹದವಾಗಿ ಕುಟ್ಟಿ ಗುಂಡಗೆ ಮುದ್ದೆ ಮಾಡಿ ಅದರ ಹೊಟ್ಟೆಗೊಂದು ತೂತು ಹಾಕಿ ಅದರಲ್ಲಿ ಒಂದಷ್ಟು ಕುಸುಬಿ ಎಣ್ಣೆ ಸುರಿದು ತಿಂದರೆ ಅದರ ರುಚಿ ಹೆಳಲಿಕ್ಕಾಗಲ್ಲ… ಅಷ್ಟು ಸ್ವಾದ! ಕೇವಲ ಇದು ಮಾತ್ರವಲ್ಲ ಜೊಳದ ನುಚ್ಚು, ಕಿಚಡಿ, ನವಣಿ ಅನ್ನ, ಸಾವಿ ಬಾನ, ಮಜ್ಜಗಿ ಆಂಬರ, ಹುಳ್ಳಾನುಚ್ಚು, ಸಂಗಟಿ, ಹುರುಳಿ ಖಾಡೆ ಹೀಗೆ ಅವ್ವ ತಯಾರಿಸೋ ಆ ಆಹಾರದ ರುಚಿವೈವಿಧ್ಯ ಈಗ ಬರೀ ನೆನಪು ಮಾತ್ರ.

ನಮ್ಮ ಮನೆಯ ಎದುರು ದೊಡ್ದದಾದ ಒಂದು ಬಸರೀ ಗಿಡವಿತ್ತು. ಬಿರುಬಿಸಿಲಿನ ನೆಲವಾದ ನನ್ನೂರಲ್ಲಿ ಬೇಸಿಗೆಯಲ್ಲಂತೂ ಅದಕ್ಕೆ ವಿಪರೀತ ಬೇಡಿಕೆ. ಓಣಿಯಲ್ಲಿರುವ ದಮ್ಮಿನ ರೋಗಿಗಳು ಉಶ್.. ಉಶ್.. ಅನ್ನುತ್ತಾ ಅದರ ನೆರಳಿಗೆ ಬರುವರು. ಅದಾಗಲೇ ಕೆಲವು ಮಹಿಳೆಯರು ಅಲ್ಲಿ ಕುಳಿತು ಕೌದಿ ಹೊಲೆಯುವವರು, ಮತ್ತೆ ಕೆಲವರು ಲ್ಯಾವಿ ಗಂಟು ಬಿಚ್ಚಿ ತಮ್ಮ ಕೌದಿಯ ನೀಲನಕ್ಷೆ ತಯಾರಿಸುವವರು, ಗರ್ದಿ ಗಮ್ಮತ್ತಿನವನು, ಹೇರಪಿನ್, ಸೂಜಿ, ದಬ್ಬಣ ಮಾರುವವರು, ಬೊಂಬಾಯಿ ಮಿಟಾಯಿ ಮಾರುವವ, ಲಾಲವಾಲಾ ಮಾರುವವ ಹೀಗೆ ಆ ಗಿಡದ ನೆರಳು ಅದೆಷ್ಟು ಬದುಕುಗಳಿಗೆ ಆಸರೆಯಾಗಿತ್ತೋ ಗೊತ್ತಿಲ್ಲ. ಊರು ಉರುಳಿದಂತೆ ಎಲ್ಲವೂ ಬದಲಾಗಿ ಈ ಆ ಗಿಡವೂ ಉರುಳಿತು. ಆ ಗಿಡದ ನೆರಳಿಗೆ ಬರುವ ಜೀವಗಳೂ ಉರುಳಿದವು.

ನಮ್ಮೂರಲ್ಲಿ ನೀಲಗಂಗವ್ವ ಎನ್ನುವ ಗ್ರಾಮದೇವತೆಯ ಜಾತ್ರೆ ವರ್ಷಕ್ಕೊಮ್ಮೆ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಜರುಗುತ್ತದೆ. ಈ ಜಾತ್ರೆ ಈಗಿನಂತೆ ಕೇವಲ ವ್ಯಾಪಾರ- ವಹಿವಾಟಿನ ಇಲ್ಲವೇ ಪೋರ-ಪೋರಿ ಯರ ಸುತ್ತಾಟದ ನೆಲೆಯಾಗಿರಲಿಲ್ಲ. ಅದನ್ನು ಮೀರಿ ಒಂದು ಜನ  ಸಮುದಾಯದ ಸಾಂಸ್ಕೃತಿಕ ಸಡಗರ, ಆಚರಣೆಯ ಭಾಗವಾಗಿತ್ತು. ಅದು ಸಂಪ್ರದಾಯಕ್ಕಿಂತಲೂ ಮಿಗಿಲಾಗಿ ಒಂದು ಪರಂಪರೆಯೇ ಆಗಿತ್ತು. ಅಲ್ಲಿ ಸೇರುವ ಮಿಠಾಯಿ ಅಂಗಡಿಗಳು, ತೊಟ್ಟಿಲು, ಚಿರಕೀಗಾಣ, ಆಟಿಕೆ ಸಾಮಾನುಗಳ ಅಂಗಡಿ, ಗುಡಗುಡಿ ಆಟಗಳು, ಟೆಂಟ್ ಸಿನೇಮಾ, ನಾಟಕ, ಎರಡು ತಲೆಯ ಮನುಷ್ಯ, ಬಳೆ ಅಂಗಡಿ, ಬೆಂಡುಬತ್ತಾಸು, ಚುರುಮುರಿ ಚೀಲಗಳು, ಬಟ್ಟೆ ಅಂಗಡಿಗಳು, ಬಲೂನು.. ಪೀಪಿಗಳು, ಗೊಂಬೆಗಳು ಹೀಗೆ ಒಂದೇ ಎರಡೇ ಇಡೀ ಒಂದು ವಾರ ನನ್ನಂಥಾ ಹುಡುಗರಿಗೆ ಕನಸಾಗಿ ಕಾಡುವ ಈ ಜಾತ್ರೆ ಮುಗಿಯುತ್ತಿದ್ದಂತೆ ಬೇಸರ ಆವರಿಸಿಕೊಳ್ಳುತ್ತಿತ್ತು.

ಇಂದು ಗ್ರಾಮೀಣ ಪ್ರದೇಶಗಳಲ್ಲಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಮುಂಚಿನಂತಿಲ್ಲ. ಅಲ್ಲೀಗ ನಾವು ಬಾಲ್ಯದಲ್ಲಿ ಆಡಿದ ಆಟಗಳಿಲ್ಲ, ನೋಡಿದ ನೋಟಗಳಿಲ್ಲ. ಊರ ಮುಂದಿನ ಅನೇಕ ಮಾವಿನ ತೋಟಗಳು ಹಣದ ಹಪಾಪಿತನಕ್ಕೆ ಸೈಟ್ ಆಗಿ ಮಾರ್ಪಟ್ಟಿವೆ. ಎಲ್ಲರ ಮನೆಯಲ್ಲೂ ಆಕಳುಗಳಿವೆ, ಎಮ್ಮೆಗಳಿವೆ. ಆದರೆ ಯಾರಾದರೂ ಮನೆಗೆ ಅತಿಥಿಗಳು ಬಂದರೆ ಚಾ ಮಾಡಲು ಹಾಲಿಲ್ಲ ಎಲ್ಲರೂ ಡೈರಿಗೆ ಹಾಕುವವರೇ. ಮನೆಯ ಪಡಸಾಲೆಯಲ್ಲಿರುವ ಟಿ.ವಿ.ಯಲ್ಲಿಯ ಜಾಹೀರಾತುಗಳು ಇವತ್ತು ಗ್ರಾಮೀಣರನ್ನೂ ಕೂಡಾ ಒಂದು ‘ಕಮಾಡಿಟಿ’ಯ ಮಟ್ಟದಲ್ಲಿ ತಂದು ನಿಲ್ಲಿಸಿಬಿಟ್ಟಿವೆ. ಪರಿಣಾಮವಾಗಿ ಅಲ್ಲೂ ಕೂಡಾ ಮನುಷ್ಯ ಸಂಬಂಧಗಳು ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಆಲ್ಬರ್ಟ್ ಕಾಮು 1946ರ ಸಂದರ್ಭದಲ್ಲಿ ಹೇಳಿರುವಂಥಾ ಮಾತು ನೆನಪಾಗುತ್ತಿದೆ. ‘ಮನುಷ್ಯ ಮುಂಬರುವ ದಿನಗಳಲ್ಲಿ ನಡುಗಡ್ಡೆಯಂತೆ ಬದುಕುತ್ತಾನೆ.’ ಎನ್ನುವ ಮಾತು ಈಗ ಸತ್ಯವಾಗಿದೆ. ಇಂದಿನ ಸೃಜನಶೀಲ ಬರಹಗಾರರಿಗೆ ಗ್ರಾಮೀಣ ಮತ್ತು ನಗರ ಬದುಕಿನ ಮಧ್ಯೆ ಇರುವ ಸಾಂಸ್ಕೃತಿಕ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಹೀಗಾಗಿ ಖರೆಖರೆ ಹಳ್ಳಿಗಳ ಸಾಂಸ್ಕೃತಿಕ ಚಹರೆಯನ್ನು ಕಟ್ಟಿಕೊಡುವುದು ಅವರಿಂದ ಸಾಧ್ಯವಾಗುತ್ತಿಲ್ಲ.

ಒಂದು ಗ್ರಾಮದ ಬಗೆಗಿನ ಕೃತಿಯನ್ನು ಓದಿ ಅದನ್ನು ಗ್ರಹಿಸುವುದಕ್ಕೂ, ಖುದ್ದಾಗಿ ಗ್ರಾಮದ ಜೀವನಾನುಭವವನ್ನು ಅಂತರಂಗೀಕರಣಗೊಳಿಸಿಕೊಂಡು ಸೃಜನಶೀಲ ಬರವಣಿಗೆಯನ್ನು ಮಾಡುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಮೊದಲನೆಯದು ಕುರುಡರು ಆನೆಯನ್ನು ಗ್ರಹಿಸುವ ಪರಿಯಾದರೆ, ಇನ್ನೊಂದು ಮಾವುತ ಆನೆಯನ್ನು ಗ್ರಹಿಸುವ ಪರಿ. ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಜಾಗತೀಕರಣದ ಹಾವಳಿಯ ಸಂದರ್ಭದಲ್ಲಿ ಗ್ರಾಮಗಳನ್ನು ಸಂಸ್ಕೃತಿ ಸಂಘೋಷಣಾ ತಾಣಗಳೆಂದು ಕರೆಯಲು ಸಾಧ್ಯವಾಗುತ್ತಿಲ್ಲ. ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಈಗಿದೆ ಎನಿಸುತ್ತದೆ. ನನ್ನ ಊರು, ಅದರೊಂದಿಗಿನ ಬಾಲ್ಯದ ಒಡನಾಟ ನನ್ನ ಬಹುತೇಕ ಬರವಣಿಗೆಗಳ ಹಿಂದಿನ ಜೀವಸೆಲೆಯಾಗಿ ಕೆಲಸ ಮಾಡಿದೆ ಎನ್ನುವುದಂತೂ ಹೌದು. ಅದು ಒಬ್ಬ ಬರಹಗಾರನ ಸೃಜನಶೀಲ ಬರವಣಿಗೆ ಎನ್ನಬೇಕೋ ಅಥವಾ ಅವನಿಗೆ ದಕ್ಕಿದ ಹಸಿಹಸಿ ಜೀವನಾನುಭವದ ತಿರುಳು ಎನ್ನಬೇಕೋ ತಿಳಿಯದು. ಕೊನೆಯದಾಗಿ ಹೇಳುವುದಾದರೆ ಗ್ರಾಮೀಣ ಪರಿಸರದ ಒಡನಾಟ ಮತ್ತು ಸಂಸ್ಕೃತಿಯ ಸಹವಾಸವಿಲ್ಲದ ಬರಹ ಒಂದು ಸುಂದರವಾದ ಪ್ಲಾಸ್ಟಿಕ್ ಹೂವನ್ನು ಮಾತ್ರ ರೂಪಿಸಲು ಸಾಧ್ಯ.

*ಲೇಖಕರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಗ್ರಾಮೀಣ ಯುವಕರು ಮತ್ತು ಬದಲಾವಣೆ ವಿಷಯದಲ್ಲಿ ಸಂಶೋಧನೆ ಮಾಡಿದ್ದಾರೆ. ಸಮಾಜಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ 32 ಕೃತಿಗಳು, 6 ಕಥಾ ಸಂಕಲನಗಳು, 5 ಅಂಕಣ ಬರಹಗಳ ಸಂಕಲನಗಳು, 1 ಕಾದಂಬರಿ ಪ್ರಕಟವಾಗಿವೆ.

One Response to " ನನ್ನ ಸೃಜನಶೀಲತೆಯ ಸೆಲೆ

ಡಾ.ಎಸ್.ಬಿ.ಜೋಗುರ

"

Leave a Reply

Your email address will not be published.