ನನ್ನ ಹೊಟ್ಟೆಯ ಕತೆ

ನನ್ನ ತೋಟ, ಮನೆಕೆಲಸಕ್ಕೆ ಬರುವ ಹೆಂಗಸರು ಯಾವ ಡಯಟನ್ನೂ ಮಾಡುವುದಿಲ್ಲ. ನಾನು ಕೊಟ್ಟ ಸಿಹಿತಿನಸು, ಎಣ್ಣೆತಿಂಡಿ, ರಾಶಿಅನ್ನ ಎಲ್ಲವನ್ನೂ ಚೂರೂ ಬಿಡದೆ ಪ್ರಸಾದವೆಂಬಂತೆ ತಿನ್ನುತ್ತಾರೆ. ಆದರೂ ಅವರ ಹೊಟ್ಟೆ ಚಪ್ಪಟೆ. ಇದು ಹೇಗೆ ಸಾಧ್ಯ?

ಲ್ಲರೂ ನನ್ನನ್ನು ಸುಂದರಿ ಎಂದು ಯಾವ ಅಳತೆಮಾಪನ ಇಟ್ಟು ಹೇಳುತ್ತಾರೋ ಗೊತ್ತಿಲ್ಲ. ಏಕೆಂದರೆ ನನ್ನ ಹೊಟ್ಟೆಯನ್ನು ಅಲ್ಲಲ್ಲ ಹೊಟ್ಟೆಯ ಗಾತ್ರವನ್ನು ನೋಡುವಾಗ ನನಗೇ ನಾಚಿಕೆಯಾಗುತ್ತದೆ. ಅದುವರೆಗೂ ಬೆನ್ನಿಗೆ ಅಂಟಿಕೊಡಿದ್ದ ಹೊಟ್ಟೆ ಮದುವೆಯಾಗಿ ಮಕ್ಕಳಾದ ಮೇಲೆ ಅದ್ಹೇಗೆ ಬಲೂನು ಅಡಗಿಸಿಟ್ಟುಕೊಂಡಂತೆ ಉಬ್ಬಿತು ಎಂದು ನನಗೆ ದಪ್ಪಗಾಗುತ್ತಿರುವ ಸಮಯದಲ್ಲಿ ಗೊತ್ತಾಗಲಿಲ್ಲ. ಪೂರ್ಣ ಚಂದಿರನಂತೆ ಹೊಟ್ಟೆ ದೊಡ್ಡದಾದ ಮೇಲೆಯೇ ಅದರ ಅರಿವಾದದ್ದು. ಈಗ ನನ್ನ ಎಲ್ಲ ಚಿಂತೆಗೂ ಮೂಲಕಾರಣ ಈ ಗರ್ಭಿಣಿ ಆಕಾರದ ಹೊಟ್ಟೆಯೇ.

ಸಿಹಿತಿಂಡಿ, ಕರಿದ ತಿಂಡಿ ನನಗೆ ಪ್ರಾಣವಾದರೂ ಅವುಗಳನ್ನು ತಿನ್ನಬೇಕಾದರೆ ಯೋಚಿಸಿ ಒಂದು ಅಥವಾ ಎರಡು ತುಂಡು ಬಾಯಿಗೆ ಹಾಕಿಕೊಳ್ಳುತ್ತೇನೆ. ಈ ವಿಷಯದಲ್ಲಿ `ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧನ ಮಾತನ್ನು ಶಿರಸಾ ಪಾಲಿಸುತ್ತೇನೆ. ಕೆಲವರು `ತಿನ್ನಲಿಕ್ಕಾಗಿಯೇ ಹುಟ್ಟಿದವರು’ ಎನ್ನುವಂತೆ ಇಡೀ ದಿನ ಆಡಿನಂತೆ ಸಿಕ್ಕಿದ್ದನ್ನೆಲ್ಲ ಮೆಲ್ಲುತ್ತಲೇ ಇರುತ್ತಾರೆ. ಎಷ್ಟು ತಿಂದರೂ ಅವರ ಹೊಟ್ಟೆ ದಬ್ಬಣದಲ್ಲಿ ಸುರಿಯುವ ಹಾಗೆ ಇರುತ್ತದೆ. ಅಂತವರನ್ನು ಕಂಡಾಗ ನನಗೆ ಅಸೂಯೆ. ಅವರು ತಿಂದದ್ದೆಲ್ಲ ಎಲ್ಲಿಗೆ ಹೋಗುತ್ತದೋ!

ಆಧುನಿಕ ಉಡುಪುಗಳಾದ ಜೀನ್ಸ್ ಪ್ಯಾಂಟ್, ಚೂಡಿದಾರ್, ಶರ್ಟ್, ಬನಿಯನ್ ಧರಿಸಲು ನನಗೆ ಬೆಟ್ಟದಷ್ಟು ಆಸೆಯಿದ್ದರೂ ಸೀರೆಯೇ ನನ್ನ ಅಧಿಕೃತ ಪೋಷಾಕು. ಕಾರಣ ಇಷ್ಟೆ. ಈ ಹಂಡೆ ಗಾತ್ರದ ಹೊಟ್ಟೆಯಿಂದಾಗಿ ಅವುಗಳನ್ನು ಹಾಕಿದರೆ ನಾನು ನಾಟಕದ ಪಾತ್ರಧಾರಿಯಂತೆ ಕಾಣಿಸುತ್ತೇನೆ. ಆದರೆ ನೋಡಿದವರು, `ನೀನು ಚೂಡಿದಾರ ಹಾಕಿದರೆ ಇರುವುದಕ್ಕಿಂತ ಹತ್ತು ವರ್ಷ ಚಿಕ್ಕವಳಾಗಿ ಕಾಣಿಸುತ್ತಿ’ ಎಂದು ಹೇಳುತ್ತಾರೆ. ಇದು ನನ್ನನ್ನು ಮೆಚ್ಚಿಸಲು ಇರಬಹುದೆಂದು ನನ್ನ ಅನಿಸಿಕೆ. ಹೊಕ್ಕಳು ಕಾಣುವಂತೆ ಸ್ಟೈಲ್ ಆಗಿ ಸೀರೆ ಉಡಬೇಕೆಂದಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಹೀಗೆ ಉಟ್ಟರೆ ಕಣ್ಣಿಗೆ ರಾಚುವುದು ಹೊಕ್ಕಳು ಅಲ್ಲ ಹೊಟ್ಟೆಯೇ!

`ಹೆಣ್ಣಿಗೆ ಹೆರಿಗೆ, ಹಾರ್ಮೋನು ವ್ಯತ್ಯಾಸ, ವಂಶ ಪಾರಂಪರ್ಯ ಇತ್ಯಾದಿಗಳಿಂದ ಹೊಟ್ಟೆ ಬರುತ್ತದೆ. ಯೋಗದಿಂದ ಹೊಟ್ಟೆ ತೆಳ್ಳಗಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ’.

ಹೀಗಿರುವಾಗ ವಾಕಿಂಗ್ ಹೋದರೆ ಹೊಟ್ಟೆ ತಗ್ಗುತ್ತದೆ ಎಂದು ಯಾರೋ ಸಲಹೆ ಕೊಟ್ಟರು. ಸರಿ ಎಂದು ನಾನು ಒಂದು ಶುಭ ಮುಂಜಾನೆ ಬೇಗನೆ ಎದ್ದು ಅರ್ಧ ಲೀಟರ್ ನೀರು ಕುಡಿದು ವಾಕಿಂಗ್ ಶುರು ಮಾಡಿದೆ. ಆದರೆ ಅದನ್ನು ಮುಂದುವರಿಸಲು ಆಗಲಿಲ್ಲ. ಅದಕ್ಕೆ ಕಾರಣಗಳು ಹಲವು. ಒಂದು ದಿನ ಮನೆ ತುಂಬ ನೆಂಟರಿದ್ದರು. ಮತ್ತೊಂದು ದಿನ ನನಗೆ ಬೆಳಗ್ಗೆಯೆ ಎಲ್ಲೋ ಹೋಗಲು ಇತ್ತು. ಮಗದೊಂದು ದಿನ ಹೊಸಿಲು ದಾಟಲಾರದಷ್ಟು ಮಳೆ. ನಾನು ಊರಲ್ಲಿರದ ದಿನಗಳೂ ಇದ್ದವು ಹೀಗೆ.

ಯೋಗ ಮಾಡಿದರೆ ಹೊಟ್ಟೆ ಖಂಡಿತ ಕಮ್ಮಿಯಾಗುತ್ತದೆ ಎಂದರು ಒಬ್ಬರು. ಯೋಗ ಎಂಬ ಶಬ್ದ ಗೊತ್ತಿತ್ತೇ ವಿನಾ ಯೋಗ ಎಂದರೇನು? ಮಾಡುವುದು ಹೇಗೆ? ಎಂದು ಗೊತ್ತಿರಲಿಲ್ಲ. ಅದಕ್ಕಾಗಿ ಯೋಗ ತರಗತಿಗೆ ಸೇರಿದೆ. ಪ್ರಥಮ ತರಗತಿಯಲ್ಲೇ ಭ್ರಮನಿರಸನ. ಆ ನನ್ನ ಯೋಗ ಅಧ್ಯಾಪಕಿಗೆ ನನಗಿಂತ ದೊಡ್ಡ ಹೊಟ್ಟೆ! ನನ್ನ ಸಂಶಯವನ್ನು ಅವರಲ್ಲಿ ಹೇಳಿದೆ. ಅವರು ಹೇಳಿದರು: `ಹೆಣ್ಣಿಗೆ ಹೆರಿಗೆ, ಹಾರ್ಮೋನು ವ್ಯತ್ಯಾಸ, ವಂಶ ಪಾರಂಪರ್ಯ ಇತ್ಯಾದಿಗಳಿಂದ ಹೊಟ್ಟೆ ಬರುತ್ತದೆ. ಯೋಗದಿಂದ ಹೊಟ್ಟೆ ತೆಳ್ಳಗಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ’. ನನಗೆ ಯಾವ ಕಾಯಿಲೆಯೂ ಇಲ್ಲ. ಸಣ್ಣಪುಟ್ಟ ಶೀತ, ಜ್ವರ ಬಂದದ್ದು ಬಿಟ್ಟರೆ ನಾನು ಹುಷಾರಿಲ್ಲವೆಂದು ಒಂದು ದಿನವೂ ಮಲಗಿದವಳಲ್ಲ. ಮತ್ತೇಕೆ ನನಗೆ ಈ ಯೋಗ? ಎಂದು ಯೋಗಕ್ಕೆ ದೊಡ್ಡ ನಮಸ್ಕಾರ ಹಾಕಿದೆ.

ಒಮ್ಮೆ ನಾನು ಒಂದು ಮದುವೆಗೆ ಹೋಗಿದ್ದೆ. ಅಲ್ಲಿಗೆ ನನ್ನ ದೂರದ ಸಂಬಂಧಿಯೊಬ್ಬರು ಬಂದಿದ್ದರು. ಪಕ್ಕನೆ ಅವರ ಗುರುತು ಹತ್ತಿರಲಿಲ್ಲ. ಕಾರಣ ಗಣಪತಿಯಂತಿದ್ದ ಅವರು ಈಗ ಗಾಳಿಗೆ ಹಾರಿ ಹೋಗುವ ಹಾಗೆ ಆಗಿದ್ದರು. `ಹೇಗೆ ಸ್ಲಿಮ್ ಆದಿರಿ? ನನಗೂ ಸ್ವಲ್ಪ ಹೇಳಿ’ ಎಂದೆ. `ಮತ್ತೇನಿಲ್ಲ, ನಾನು ಊಟದಲ್ಲಿ ಅನ್ನ ತಿನ್ನುವಷ್ಟು ತರಕಾರಿ ತಿನ್ನುತ್ತೇನೆ. ತರಕಾರಿ ತಿನ್ನುವಷ್ಟು ಅನ್ನ ತಿನ್ನುತ್ತೇನೆ’ ಅಂದರು. `ಬಿಡಿಸಿ ಹೇಳಿ’ ಅಂದೆ. `ಅನ್ನಕ್ಕಿಂತ ಜಾಸ್ತಿ ತರಕಾರಿ ಬಳಸಿದರೆ ಹೊಟ್ಟೆ ಇಳಿಯುತ್ತದೆ. ಅಷ್ಟು ಮಾಡಿದರೆ ಸಾಕು. ವ್ಯಾಯಾಮ, ನಡಿಗೆ ಬೇಕಾಗಿಲ್ಲ’ ಎಂದು ತಮ್ಮ ಅನುಭವ ಹೇಳಿದರು. ನನಗೆ ಬಹಳ ಖುಷಿಯಾಯಿತು.

ಇರುವ ದೊಡ್ಡ ಕೆರೆ, ಅದರಲ್ಲಿ ಆಟವಾಡುವ ಗೂಸ್ ಹಕ್ಕಿಗಳು, ಕಾರಂಜಿ ಮನಕ್ಕೆ ಮುದ ನೀಡುತ್ತಿದ್ದವು. ಅಲ್ಲಿನ ಇನ್ನೊಂದು ಪ್ರಧಾನ ಆಕರ್ಷಣೆಯೆಂದರೆ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಯುವ ಈಜುಕೊಳ.

ಇನ್ನು ನಾನು ಐಶ್ವರ್ಯ ರೈಯಂತೆ ಬಳುಕಬಹುದು ಎಂದು ಅಂದುಕೊಂಡು ನಮ್ಮ ಹಿತ್ತಲಲ್ಲಿ ಬೆಳೆಯುವ ಬದನೆ, ಹೀರೆಕಾಯಿ, ತೊಂಡೆಕಾಯಿ, ಪಡುವಲ, ಹರಿವೆ, ಅವರೆ, ಬೆಂಡೆಕಾಯಿ, ಅಲಸಂದೆ ಎಲ್ಲವನ್ನೂ ಒಟ್ಟು ಹಾಕಿ ಪಲ್ಯ, ಸಾಂಬಾರ್ ಮಾಡತೊಡಗಿದೆ. ಅವುಗಳ ಹೋಳು ಒಂದು ದೊಡ್ಡ ಬಟ್ಟಲು, ಒಂದು ಹಿಡಿಯಷ್ಟೇ ಅನ್ನ ತಿನ್ನತೊಡಗಿದೆ. ಸ್ವಲ್ಪ ಸಮಯ ಸುಮ್ಮನಿದ್ದ ಗಂಡ, ಮಕ್ಕಳು ಆಮೇಲೆ ಹೇಳಲು ಶುರುಮಾಡಿದರು `ನೀನು ಹೀಗೆ ಹಸುಗಳಿಗೆ ಬೇಯಿಸುವಂತೆ ಎಲ್ಲ ತರಕಾರಿಗಳನ್ನು ಒಟ್ಟಿಗೆ ಕೊಚ್ಚಿ ಹಾಕಿ ಬೇಯಿಸಿದರೆ ತಿನ್ನಲು ಕಷ್ಟವಾಗುತ್ತದೆ. ಸ್ವಲ್ಪಇದ್ದರೂ ಪರವಾಗಿಲ್ಲ ಒಂದೊಂದೇ ತರಕಾರಿ ಬಳಸಿ ಅಡುಗೆ ಮಾಡು. ರುಚಿ ಮುಖ್ಯ’. ಒಂದೊಂದೇ ಬಳಸಿ ಮಾಡುವಷ್ಟು ಹೇರಳವಾಗಿ ತರಕಾರಿ ಗಿಡದಲ್ಲಿ ಇರುತ್ತಿರಲಿಲ್ಲ. ಪೇಟೆಯಿಂದ ತರಕಾರಿ ತರುವ ಕ್ರಮ ರೈತರಾದ ನಮ್ಮ ಮನೆಯಲ್ಲಿ ಇಲ್ಲ. ಗಿಡ ತುಂಬ ಇದ್ದರೂ ದಿನಾ ಅಷ್ಟೂ ತರಕಾರಿ ಕತ್ತರಿಸಲು ಬೇಕಾದ ಸಮಯವೂ ನನಗೆ ಸಿಗಬೇಕಲ್ಲ? ಅಲ್ಲಿಗೆ ಹೊಟ್ಟೆ ತೆಳುವಾಗಿಸುವ ನನ್ನ ಈ ಪ್ರಯೋಗವೂ ನಿಂತಿತು.

ನಾನು ಈಗ ಹೇಳುವ ಘಟನೆ ನಡೆದದ್ದು ಅಮೆರಿಕದ ಪುಟ್ಟ ಊರು ಸಾಂಟಾಕ್ಲಾರದಲ್ಲಿರುವ ಸೆಂಟ್ರಲ್ ಪಾರ್ಕ್‍ನಲ್ಲಿ. ನಾನು ಎರಡು ವರ್ಷದ ಹಿಂದೆ ಎರಡೂವರೆ ತಿಂಗಳು ಅಮೆರಿಕದಲ್ಲಿ ಇದ್ದೆ. ಪುಟ್ಟ ಊರಿನಲ್ಲಿಯೂ ದೊಡ್ಡ ಪಾರ್ಕ್‍ಗಳಿರುವುದು ಅಲ್ಲಿನ ವಿಶೇಷ. ನಾನು ಹಲವು ಬಾರಿ ಆ ಪಾರ್ಕಿಗೆ ಹೋಗಿದ್ದೆ. ಗಂಡ, ಮಕ್ಕಳ ನೆನಪಾದಾಗ ಸೀದಾ ಎದ್ದು ಅಲ್ಲಿಗೆ ಹೊರಟು ಬಿಡುತ್ತಿದ್ದೆ. ಅಲ್ಲಿ ಇರುವ ದೊಡ್ಡ ಕೆರೆ, ಅದರಲ್ಲಿ ಆಟವಾಡುವ ಗೂಸ್ ಹಕ್ಕಿಗಳು, ಕಾರಂಜಿ ಮನಕ್ಕೆ ಮುದ ನೀಡುತ್ತಿದ್ದವು. ಅಲ್ಲಿನ ಇನ್ನೊಂದು ಪ್ರಧಾನ ಆಕರ್ಷಣೆಯೆಂದರೆ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಯುವ ಈಜುಕೊಳ.

ಒಮ್ಮೆ ನಾನು ಅಲ್ಲಿಗೆ ಹೋದಾಗ ಗಂಡು, ಹೆಣ್ಣು ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ಸೇರಿ ಈಜುತ್ತಿದ್ದರು. ಒಂದು ಟ್ರಾಕ್‍ನೊಳಗೆ ಇಬ್ಬರು ಈಜಬಹುದು. ಅದಕ್ಕೆ ಫೀಸ್ ಎಂದು ಇರಲಿಲ್ಲ. ಆಸಕ್ತರು ಯಾರು ಬೇಕಾದರೂ ಈಜಬಹುದಿತ್ತು. ನಾನು ಅಲ್ಲಿ ಹೆಂಗಸರು ಯಾವ ಸಂಕೋಚವೂ ಇಲ್ಲದೆ ಸಾರ್ವಜನಿಕವಾಗಿ ಮೇಲುಡುಪು ಕಳಚಿ ಬರೀ ಒಳ ಉಡುಪಿನಲ್ಲಿ ನೀರಿಗೆ ಹಾರಿ ಮೀನಿನಂತೆ ಈಜುವುದನ್ನು ಅದ್ಭುತವೆಂಬಂತೆ ನೋಡಲು ಶುರುಮಾಡಿದೆ.

‘ಆ…ದ…ರೆ… ಆ…ದ…ರೆ… ನೀವು ದಪ್ಪಗಿದ್ದೀರಲ್ಲ. ನಿಮ್ಮ ಹೊಟ್ಟೆ…’ ನಾನು ತೊದಲಿದೆ. ಅದಕ್ಕೆ ಅವಳು ಉತ್ತರವನ್ನೇ ಕೊಡದೆ ನನ್ನನ್ನೇ ಕೆಕ್ಕರಿಸಿ ನೋಡಿದಳು. ಒಂದೇ ನೆಗೆತಕ್ಕೆ ನೀರಿಗೆ ಹಾರಿ ಮರೆಯಾದಳು.

ನನ್ನ ಕುತೂಹಲವನ್ನು ಗಮನಿಸಿದ ಅವರಲ್ಲೊಬ್ಬಳು ‘ಏನು ನೋಡುತ್ತೀರಿ? ನೀವೂ ನಮ್ಮ ಜೊತೆ ಈಜಲು ಬನ್ನಿ’ ಎಂದು ನೀರಿನೊಳಗಿಂದಲೇ ಹೇಳಿದಳು. ನಾನು ‘ನನಗೆ ಈಜು ಬರಲ್ಲ’ ಎಂದೆ. ‘ಅದರಲ್ಲೇನಿದೆ? ಸುಲಭ. ಹೇಳಿಕೊಡುತ್ತೇನೆ. ನೀರಿಗೆ ಇಳಿಯಿರಿ’ ಎಂದಳು. ಅದು ಚಳಿಗಾಲದ ಸಮಯವಾದ್ದರಿಂದ ಜೋರು ಚಳಿ ಇತ್ತು. ಸ್ವೆಟರ್ ಹಾಕಿದರೂ ನಡುಗುತ್ತಿದ್ದೆ. ‘ಓಹ್, ನನಗೆ ಚಳಿ’ ಎಂದೆ ನೀರನ್ನೇ ನೊಡುತ್ತ. ‘ನೀರು ಬೆಚ್ಚಗಿದೆ. ಇಲ್ಲಿನ ಎಲ್ಲ ಈಜುಕೊಳದಲ್ಲಿ ವಾತಾವರಣಕ್ಕೆ ತಕ್ಕಂತೆ ನೀರನ್ನು ತಣ್ಣಗೆ, ಬಿಸಿ ಮಾಡಲಾಗುತ್ತದೆ. ಧೈರ್ಯ ಮಾಡಿ ಬನ್ನಿ’ ಎಂದು ಒತ್ತಾಯಿಸಿದಳು. ನಾನು ಮತ್ತೂ ನಿಂತೇ ಇರುವುದನ್ನು ಕಂಡು ‘ಈಜುವುದು ಒಳ್ಳೆ ವ್ಯಾಯಾಮ. ದೇಹದ ಎಲ್ಲ ಅಂಗಾಂಗಗಳಿಗೆ ಕೆಲಸ ಸಿಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ಹೊಟ್ಟೆ ತಗ್ಗುತ್ತದೆ. ಶರೀರದ ಕೊಬ್ಬು ಕರಗಿ ಬಳುಕುವ ದೇಹ ನಮ್ಮದಾಗುತ್ತದೆ’ ಎಂದು ಹೇಳಿದಳು. `ಹೊಟ್ಟೆ ತಗ್ಗುತ್ತದೆ’ ಎಂಬ ಮಾತು ಕಿವಿಗೆ ಬಿದ್ದದ್ದೇ ತಡ ನಾನು ಈಜಲು ತಯಾರಾದೆ. ನನಗೆ ನೆರವಾಗಲು ಅವಳು ನೀರಿನಿಂದ ಮೇಲೆದ್ದು ಬಂದಳು.

ಅವಳನ್ನು ಕಂಡು ನನಗೆ ಶಾಕ್. ಡೊಳ್ಳು ಹೊಟ್ಟೆ ಹೊತ್ತ ಅವಳು ಆನೆಮರಿಯಂತಿದ್ದಳು. ‘ಆ…ದ…ರೆ… ಆ…ದ…ರೆ… ನೀವು ದಪ್ಪಗಿದ್ದೀರಲ್ಲ. ನಿಮ್ಮ ಹೊಟ್ಟೆ…’ ನಾನು ತೊದಲಿದೆ. ಅದಕ್ಕೆ ಅವಳು ಉತ್ತರವನ್ನೇ ಕೊಡದೆ ನನ್ನನ್ನೇ ಕೆಕ್ಕರಿಸಿ ನೋಡಿದಳು. ಒಂದೇ ನೆಗೆತಕ್ಕೆ ನೀರಿಗೆ ಹಾರಿ ಮರೆಯಾದಳು.

ನನ್ನ ಅತ್ತೆ ಹೇಳುವುದೇನೆಂದರೆ ಬಾಣಂತಿ ಆಗಿರುವಾಗ ಸೊಂಟಕ್ಕೆ ಗಟ್ಟಿಯಾಗಿ ಬಟ್ಟೆಯಿಂದ ಬಿಗಿದರೆ ಹೊಟ್ಟೆ ದೊಡ್ಡದಾಗುವುದಿಲ್ಲ ಎಂದು. ಈ ಮಾತಿನ ಮೇಲೆ ನನಗೆ ನಂಬಿಕೆ ಇಲ್ಲ. ಏಕೆಂದರೆ ನಾನು ಬಾಣಂತಿಯಾಗಿದ್ದಾಗ ಅಭ್ಯಂಜನ ಸ್ನಾನ ಮುಗಿಸಿ ಸೊಂಟಕ್ಕೆ ಬಟ್ಟೆ ಸುತ್ತಿಸಿಕೊಂಡೆನೆಂದರೆ ಮತ್ತೆ ಅದನ್ನು ಬಿಚ್ಚುತ್ತಿದ್ದದ್ದು ಮರುದಿನ ಸ್ನಾನಕ್ಕೆ ಇಳಿದಾಗಲೇ!

`ಭ್ರಷ್ಟಾಚಾರಕ್ಕೂ ಹೊಟ್ಟೆ ಉಬ್ಬಿರುವುದಕ್ಕೂ ಸಂಬಂಧ ಇದೆ. ರಾಜಕಾರಣಿಗಳು ಭ್ರಷ್ಟಾಚಾರಿಗಳು. ಸಾರ್ವಜನಿಕರ ದುಡ್ಡು ತಿಂದೂ ತಿಂದೂ ಅವರ ಹೊಟ್ಟೆ ಗುಡಾಣದಂತೆ ಬೆಳೆದಿರುವುದು’ ಎಂದು ಜನರು ಆಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಆದರೆ ನಾನು ರಾಜಕಾರಣಿ ಅಲ್ಲ. ರಾಜಕೀಯದ ಗಂಧಗಾಳಿಯೂ ನನಗೆ ಇಲ್ಲ.

ನನಗೆ ಒಂದು ವಿಷಯ ಮಾತ್ರ ವಿಸ್ಮಯ! ನನ್ನ ತೋಟ, ಮನೆಕೆಲಸಕ್ಕೆ ಬರುವ ಹೆಂಗಸರು ಯಾವ ಡಯಟನ್ನೂ ಮಾಡುವುದಿಲ್ಲ. ನಾನು ಕೊಟ್ಟ ಸಿಹಿ ತಿನಸು, ಎಣ್ಣೆ ತಿಂಡಿ, ರಾಶಿ ಅನ್ನ ಎಲ್ಲವನ್ನೂ ಚೂರೂ ಬಿಡದೆ ಪ್ರಸಾದವೆಂಬಂತೆ ತಿನ್ನುತ್ತಾರೆ. ಆದರೂ ಅವರ ಹೊಟ್ಟೆ ಚಪ್ಪಟೆ. ಇದು ಹೇಗೆ ಸಾಧ್ಯ? ಅವರಲ್ಲಿ ಕೇಳಿದರೆ ನಗುತ್ತಾರೆ. ನಾನೂ ಅವರ ಜೊತೆ ಮನೆ, ತೋಟ, ಹಟ್ಟಿಕೆಲಸ ಮಾಡಿದರೂ ನನ್ನ ಹೊಟ್ಟೆ ಸಣ್ಣಗಾಗುತ್ತಿಲ್ಲ. ಬಹುಶಃ ನಾನು ಯಜಮಾನಿ ಎಂಬುದನ್ನು ತೋರಿಸಿಕೊಳ್ಳಲು ನನ್ನ ಹೊಟ್ಟೆ ಸೊಕ್ಕಿನಿಂದ ಉಬ್ಬಿರಬಹುದು ಅಲ್ಲವೇ?

*ಲೇಖಕಿ ಮಡಿಕೇರಿ ತಾಲೂಕು ಬಾಲಂಬಿ ಗ್ರಾಮದಲ್ಲಿ ಸ್ವತಃ ಕೃಷಿಯಲ್ಲಿ ನಿರತರಾಗಿರುವ ಗೃಹಿಣಿ; ಕವಯತ್ರಿ.

Leave a Reply

Your email address will not be published.