‘ನಮ್ಮ ಸರ್ಕಾರ ಸಂಚಾರ ದಟ್ಟಣೆ ಪರಿಹಾರಕ್ಕೆ ಬದ್ಧವಾಗಿದೆ’

ಸಮಾಜಮುಖಿ ಕೈಗೆತ್ತಿಕೊಳ್ಳುವ ಮುಖ್ಯಚರ್ಚೆಯ ವಿಷಯ ಕೇವಲ ಓದುಗರ ಅಭಿಪ್ರಾಯ ಮತ್ತು ಅಕಾಡೆಮಿಕ್ ವಿಶ್ಲೇಷಣೆಯ ಪ್ರಕಟಣೆಗೆ ಸೀಮಿತಗೊಳ್ಳಬಾರದಲ್ಲವೇ? ಅಂತೆಯೇ ಸಂಚಾರ ದಟ್ಟಣೆ ಸಮಸ್ಯೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮಾತಿಗೆಳೆದಾಗ…

– ಬಸವರಾಜ ಬೊಮ್ಮಾಯಿ

ನಮ್ಮ ಪೀಳಿಗೆ ಕರ್ನಾಟಕದಲ್ಲಿ ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕೂಡಾ ಒಂದು. ಈ ಸಮಸ್ಯೆಯ ಗಂಭೀರತೆ ಬಗ್ಗೆ ನಿಮಗೇನು ಅನಿಸುತ್ತಿದೆ?

ಖಂಡಿತವಾಗಿಯೂ ಬೆಂಗಳೂರು ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಸಂಚಾರ ದಟ್ಟಣೆ ಒಂದು ಬಹುಮುಖ್ಯ ಅಂಶ. ಹಲವಾರು ದಶಕಗಳಿಂದ ನಮ್ಮ ನಿರ್ಣಯಗಳ ಪರಿಣಾಮವಾಗಿ ಯೋಜನಾಬದ್ಧವಾದ ನಗರವನ್ನು ನಿರ್ಮಾಣ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ. ಆದ್ದರಿಂದ ಎಲ್ಲ ದೃಷ್ಟಿಯಿಂದಲೂ ಇವತ್ತು ತೊಂದರೆಯಾಗಿದೆ. ಅದರಲ್ಲಿ ಸಂಚಾರ ದಟ್ಟಣೆ ಕೂಡಾ ಒಂದು.

ಸಂಚಾರ ದಟ್ಟಣೆ ಆರ್ಥಿಕ ಆಯಾಮದ ಜೊತೆಗೆ ಸಾಮಾಜಿಕವಾಗಿ ಮತ್ತು ಮಾನಸಿಕ ಬೇನೆ ಕೂಡಾ ಬೆಂಗಳೂರಿನಲ್ಲಿ ಸೃಷ್ಟಿಮಾಡಿದೆ. ಸಾಂಸ್ಕತಿಕ ಚಟುವಟಿಕೆ ಮಾಡಲಾಗುತ್ತಿಲ್ಲ, ದೈನಂದಿನ ಓಡಾಟ ನಡೆಸಲೂ ಆಗುತ್ತಿಲ್ಲ. ಅವರ ಜೀವನವೇ ಒಂದು ರೀತಿ ಕುಗ್ಗಿಹೋಗುತ್ತಿದೆ…?

ಮೊದಲನೆಯದಾಗಿ, ನೇರವಾಗಿ ಅದರ ಪರಿಣಾಮ ಆರ್ಥಿಕತೆಯ ಮೇಲೆ ಬೀಳುತ್ತದೆ. ಒಂದು ದೇಶ ಆರ್ಥಿಕವಾಗಿ ಬೆಳೆಯಬೇಕಾದರೆ ಸಾರಿಗೆ ಬಹಳ ಮುಖ್ಯವಾಗುತ್ತದೆ. ಹೊರಗಿನಿಂದ ಬಂದ ಜನ ಮತ್ತು ಸರಕುಗಳು ನಗರ ಪ್ರದೇಶದಲ್ಲಿ ಸುಗಮವಾಗಿ ಪ್ರಯಾಣಿಸಲು ಸಾಧ್ಯವಾಗಬೇಕು. ಇವತ್ತು ಅದು ಆಗದೇ ಇದ್ದರೆ, ಸಮಯಕ್ಕೆ ಸರಿಯಾಗಿ ತಲುಪದೇ ಇದ್ದರೆ, ಖಂಡಿತವಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಹಲವಾರು ಸಾಂಸ್ಕತಿಕ ಕಾರ್ಯಕ್ರಮಗಳ ರಂಗಮಂದಿರಗಳು ನಗರ ಮಧ್ಯದಲ್ಲಿವೆ. ಬೇರೆ ಬೇರೆ ಭಾಗದ ಜನರು ಬರುತ್ತಾರೆ. ಹೊರಗಡೆಯಿಂದಲೂ ಜನ ಬರುತ್ತಾರೆ. ಸಹಜವಾಗಿ ಸಂಚಾರದಟ್ಟಣೆ ನಿಯಂತ್ರಣದ ಅವಶ್ಯಕತೆ ಇದೆ.

ನಗರ ಬದುಕಿನ ಅವಿಭಾಜ್ಯ ಅಂಗ ಎನ್ನಿಸಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ ಇಲ್ಲವೇ?

ಇದೊಂದು ಸವಾಲು ಎಂದ ಮೇಲೆ ತಾಂತ್ರಿಕ ದೃಷ್ಟಿಯಿಂದ ದೀರ್ಘಕಾಲದ ಹಾಗೂ ಅಲ್ಪಕಾಲದ ಪರಿಹಾರ ಎಂಬ ಎರಡು ದೃಷ್ಟಿಕೋನ ಇಟ್ಟುಕೊಂಡು ಸುಗಮ ಸಂಚಾರ ಅನುಭವ ಜನರಿಗೆ ಸಿಗುವಂತೆ ನಾವು ಕೆಲಸ ಮಾಡಬಹುದು. ದಿನನಿತ್ಯ ಕನಿಷ್ಟ 5000 ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಹೀಗಾಗಿ ನಾವು ದೀರ್ಘಕಾಲದ ಪರಿಹಾರವನ್ನು ಮಾಡಬೇಕಿದೆ. ಅಲ್ಲದೆ ಸುಗಮ ಸಂಚಾರಕ್ಕಾಗಿ ಕೂಡಲೇ ಕೆಲವು ನಿರ್ಬಂಧಗಳನ್ನು ತೆಗೆದು ಪ್ರಯತ್ನಗಳನ್ನು ಮಾಡಬೇಕು ಎಂಬ ಚಿಂತನೆಯನ್ನು ಈಗಾಗಲೇ ಮಾಡಿದ್ದೇವೆ, ಆ ಪ್ರಕಾರ ಯೋಜನೆಯನ್ನು ರೂಪಿಸುತ್ತಿದ್ದೇವೆ.

ಪ್ರಪಂಚದ ಮಹಾನಗರಗಳಿಗೂ ಸಂಚಾರ ದಟ್ಟಣೆ ಆಗಿತ್ತು. ಅದಕ್ಕೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಅಂತಹ ಪರಿಹಾರ ಕ್ರಮವನ್ನ್ನು ಎರವಲು ಪಡೆಯಬಹುದಲ್ಲ?

ಸಂಪೂರ್ಣವಾಗಿ ಎರವಲು ಸಾಧ್ಯವಿಲ್ಲ. ಸಾಮಾನ್ಯವಾದದ್ದನ್ನಷ್ಟೇ ಪಡೆಯಬಹುದು. ಏಕೆಂದರೆ ನಮ್ಮ ನಗರದ ಭೌಗೋಳಿಕ ಆಯಾಮದ ಆಧಾರದ ಮೇಲೆ ಸಂಚಾರದ ಸಂಗತಿಗಳನ್ನು ನಿರ್ಧರಿಸಬೇಕಾಗುತ್ತದೆ, ನಿಯಮಗಳನ್ನು ತರಬೇಕಾಗುತ್ತದೆ. ಇವತ್ತು ಬೆಂಗಳೂರಿನ ಮೇಲೆ ಬಹಳಷ್ಟು ಒತ್ತಡಗಳಿವೆ. ಆದ್ದರಿಂದ ಹಲವಾರು ಇಲಾಖೆಗಳ ಸಂಯೋಗದೊಂದಿಗೆ ಮಾತ್ರ ನಾವು ಯೋಜನೆ ಮಾಡಲು ಸಾಧ್ಯ. ಬಿ.ಬಿ.ಎಂ.ಪಿ., ಪಿಡಬ್ಲ್ಯುಡಿ. ಬಿಡಬ್ಲ್ಯುಎಸ್‍ಎಸ್‍ಬಿ ಇವೆ. ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಿಡಬ್ಲ್ಯುಡಿ ಸಂಯೋಗದೊಂದಿಗೆ ನಾವು ಗ್ರೇಟರ್ ರಿಂಗ್ ರಸ್ತೆಯನ್ನು ಮಾಡಬೇಕು.

ಈಗಿರುವ ಮೆಟ್ರೊ ಜಾಲ ಗಮನಿಸಿದರೆ, ಇದರ ಹತ್ತರಷ್ಟು ಮೆಟ್ರೊ ನಮಗೆ ಅಗತ್ಯವಿದೆ. ಇದರ ಬಗ್ಗೆ ಸರ್ಕಾರದ ಕ್ರಮ?

ಮೆಟ್ರೊಗೆ ನಾವು ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದೇವೆ. ಅದಕ್ಕೆ ದುಡ್ಡಿನ ಕೊರತೆಯೂ ಇಲ್ಲ. ಆದರೆ ಇಲ್ಲಿ ಸಮಸ್ಯೆ ಇರುವುದು ಭೂಸ್ವಾಧೀನ, ಸಂಯೋಜನೆ ಹಾಗೂ ಹಲವು ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು. ಬಿಬಿಎಂಪಿ ಮತ್ತು ಮೆಟ್ರೊ ನಡುವೆಯೂ ಹೊಂದಾಣಿಕೆ ಇಲ್ಲ. ಇವೆಲ್ಲದರ ಹೊಂದಾಣಿಕೆ ಅವಶ್ಯಕತೆ ಇದೆ ಎಂದು ನನಗನಿಸುತ್ತಿದೆ. ಇವುಗಳನ್ನು ಸರಿಪಡಿಸಿದರೆ ಬೇಗ ಆಗುತ್ತವೆ. ಈಗ ವರ್ಷಕ್ಕೆ 2ರಿಂದ 4 ಕಿ.ಮೀ.ನಷ್ಟು ಮಾಡುತ್ತಿದ್ದು, ಇದು ಬಹಳ ಕಡಿಮೆ. ವರ್ಷದಲ್ಲಿ ಕನಿಷ್ಟ 10ಕಿ.ಮೀ.ನಷ್ಟಾದರೂ ಮಾಡಿದರೆ ನಮಗೆ ಅನುಕೂಲ.

ಈಗಾಗಲೇ ಒಂದು ಪೆರಿಫೆರಲ್(ಬಾಹ್ಯ) ರಸ್ತೆ ಇದೆ. ಅದು ನಗರದ ಒಳಗೆ ಬಂದುಬಿಟ್ಟಿದೆ. ಇನ್ನೊಂದು ದೊಡ್ಡ ಪ್ರಮಾಣದಲ್ಲಿ ಪೆರಿಫೆರಲ್ ರಸ್ತೆಯನ್ನು ಅಳವಡಿಸಿಕೊಳ್ಳಬೇಕು ಎಂಬ ತೀರ್ಮಾನವನ್ನು ಮೊನ್ನೆ ಕ್ಯಾಬಿನೆಟ್‍ನಲ್ಲಿ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 4ರಿಂದ ಹೈದರಾಬಾದ್ ಮತ್ತು ತಮಿಳುನಾಡು ಕಡೆ ಹೋಗುವ ವಾಹನಗಳೆಲ್ಲ ನಗರದೊಳಗೆ ಬರುವ ಸ್ಥಿತಿ ಇದೆ. ಅವು ಹೊರಗಡೆ ಹೋದರೆ ಬಹಳಷ್ಟು ಸರಕು ವಾಹನಗಳನ್ನು ನಗರ ಪ್ರದೇಶದಿಂದ ಹೊರತಾಗಿಸಬಹುದು. ಇನ್ನೊಂದು, ಬಿಬಿಎಂಪಿ ಆಂತರಿಕವಾಗಿ ಹರಡಿರುವ ರಸ್ತೆ ಜಾಲ. ಅದಕ್ಕೆ ಹಲವಾರು ಕಡೆ ಲಿಂಕೇಜ್‍ಗಳಿಲ್ಲ. ಹಲವಾರು ಕಡೆ ಸರ್ಕಲ್‍ಗಳಲ್ಲಿ ತಿರುವು ತೆಗೆದುಕೊಳ್ಳುವುದಕ್ಕೆ ಅವಕಾಶ, ಫ್ಲೈಓವರ್ಸ್ ಇತ್ಯಾದಿಗಳನ್ನು ಅವರ ಸಂಯೋಗದೊದಿಗೆ ಮಾಡಿದರೆ ಖಂಡಿತವಾಗಿ ಒಂದು ಪರಿಣಾಮಕಾರಿಯಾದ ಪರಿಹಾರ ಕೊಡಬಹುದು.

ನೀವು ಹೇಳಿದಂತೆ ಸಂಯೋಗವಾಗಿ ಕೆಲಸ ಮಾಡುವುದು ಸರಿ. ಆದರೆ ಒಟ್ಟಾರೆಯಾಗಿ ಎಲ್ಲ ಸಂಘಸಂಸ್ಥೆಗಳು ಸೇರಿ ಸಮಗ್ರವಾಗಿ ಆಲೋಚನೆ ಮಾಡಿ ಯೋಜನೆ ಮಾಡಬೇಕು.

ಮೊನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಸಂಚಾರದಟ್ಟಣೆಯ ಡೆನ್ಸಿಟಿ ಇರುವ 12 ವಲಯಗಳ ಜೊತೆಗೆ ಸಿಬಿಡಿ (ಬೆಂಗಳೂರು ಕೇಂದ್ರ) ಯನ್ನು ನಾವು ಆಯ್ಕೆ ಮಾಡಿದ್ದೇವೆ. ಅಲ್ಲಿ ಈಗಾಗಲೇ ಬಿಬಿಎಂಪಿ ಅವರ ಜತೆ ಚರ್ಚಿಸುತ್ತಿದ್ದೇವೆ. ಪಿಡಬ್ಲ್ಯುಡಿ, ಬಿಡಬ್ಲ್ಯುಎಸ್‍ಎಸ್‍ಬಿ ಇವೆಲ್ಲಾ ಏಜೆನ್ಸಿಗಳು ಯಾವ ರಸ್ತೆಗಳ ಕೆಲಸ ಮಾಡುತ್ತವೆಯೋ ಅವರೆಲ್ಲರ ಜತೆಗೂ ಕುಳಿತು ಒಂದು ಟಾಸ್ಕ್ ಫೋರ್ಸ್ ಮಾಡುತ್ತಿದ್ದೇವೆ. ನಿರಂತರ ಸಂಪರ್ಕ ಇಟ್ಟುಕೊಂಡು, ಎಲ್ಲವನ್ನೂ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ಈ ಕಾರ್ಯವನ್ನು ಒಪ್ಪಿಕೊಂಡಿದ್ದಾರೆ, ಆ ಕೆಲಸ ಪ್ರಾರಂಭ ಮಾಡುತ್ತಿದ್ದೇವೆ.

ಮೊದಲನೇ ಹಂತದಲ್ಲಿ ನಾವು ತೆಗೆದುಕೊಳ್ಳುತ್ತಿರುವುದು 12 ಹೈ ಡೆನ್ಸಿಟಿ (ಅಧಿಕ ಸಂದಣಿ) ಇರುವ ಸಂಚಾರ ದಟ್ಟಣೆ. ಅವೆಲ್ಲವೂ ನಗರದ ಹೊರಗಡೆಯಿಂದ ನಗರದ ಮಧ್ಯಭಾಗಕ್ಕೆ ಬರುವಂತಹ ರಸ್ತೆಗಳು. ಬೆಂಗಳೂರು-ಹೊಸೂರು ರಸ್ತೆ, ಬೆಂಗಳೂರು-ಬನ್ನೇರುಘಟ್ಟ ರಸ್ತೆ, ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡ ಕಡೆ ಹೋಗುವ ಮಾರ್ಗ, ಹೈದರಾಬಾದ್, ಚೆನ್ನೈ ಕಡೆಗೆ ಹೋಗುವ ರಸ್ತೆ… ಈ ರೀತಿ ಎಲ್ಲಾ ಪ್ರಮುಖ ರಸ್ತೆಗಳು. ಒಂದೊಂದು ರಸ್ತೆ ಸುಮಾರು 20-30 ಕಿ.ಮೀ. ಇವೆ. ಇಲ್ಲಿ ಸಂಚಾರ ದಟ್ಟಣೆ ಬಹಳ ಇದೆ ಮತ್ತು ಸಿಗ್ನಲ್‍ಗಳ ಕೊರತೆ ಇದೆ. ಇವುಗಳಿಗೆ ಹೆಚ್ಚಿನ ಒತ್ತು ನೀಡಿ, ಅದಕ್ಕೆ ಬೇಕಾಗುವಷ್ಟು ಖರ್ಚನ್ನು ಅಂದಾಜು ಮಾಡಲಾಗಿದೆ. ಬಜೆಟ್‍ನಲ್ಲಿ ವಿಶೇಷ ಅನುದಾನ ಒದಗಿಸಲಾಗಿದೆ. ಈ 12 ರಸ್ತೆಗಳಲ್ಲಿ ಸಿಗ್ನಲ್ ಫ್ರೀ ವ್ಯವಸ್ಥೆಯನ್ನು ಮಾಡುವಂಥದ್ದು, ಕನಿಷ್ಟ ವೇಗವನ್ನು ಗುರುತಿಸುವಂಥದ್ದು.. ಆ ನಿಟ್ಟಿನಲ್ಲಿ ಎಲ್ಲ್ಲಾ ಅಡಚಣೆಗಳನ್ನು ತೆಗೆದುಹಾಕಿದರೆ ಬಹಳಷ್ಟು ಮಟ್ಟಿಗೆ ಸಂಚಾರದಟ್ಟಣೆ ಕಡಿಮೆ ಆಗುತ್ತದೆ. ಹಾಗೆಂದ ಮಾತ್ರಕ್ಕೆ ಸಂಪೂರ್ಣ ಪರಿಹಾರವಾಗುತ್ತದೆ ಎಂದಲ್ಲ. ಬಹಳಷ್ಟು ಕಡೆ ಈ ಲೋಡು ಪಕ್ಕದ ಮುಖ್ಯರಸ್ತೆಗಳಿಗೆ ವರ್ಗಾವಣೆಯಾಗುತ್ತೆ. ಅದಕ್ಕೂ ಕೂಡಾ ಯೋಜನೆಯನ್ನು ರೂಪಿಸುತ್ತಿದ್ದೇವೆ.

ಪಾರ್ಕಿಂಗ್ ಸ್ಥಳ ಇಲ್ಲದವರು ವಾಹನ ಖರೀದಿಸಬಾರದು ಎನ್ನುವ ನಿಟ್ಟಿನಲ್ಲಿ ಆಲೋಚನೆ ಮಾಡುವ ಅಗತ್ಯವಿದೆಯಲ್ಲಯೇ?

ಖಂಡಿತವಾಗಿಯೂ ಪಾರ್ಕಿಂಗ್ ಬಹಳ ದೊಡ್ಡ ಸಮಸ್ಯೆ. ಪಾರ್ಕಿಂಗ್‍ನಿಂದಲೇ ಸಂಚಾರ ಸಮಸ್ಯೆ ಹೆಚ್ಚಾಗುವಂಥದ್ದು. ರಾತ್ರಿ ವೇಳೆ ರಸ್ತೆ ತುಂಬಾ ವಾಹನಗಳಿರುತ್ತದೆ. ಹೀಗಾಗಿ ಪಾರ್ಕಿಂಗ್ ವಿಚಾರವನ್ನು ಮುಖ್ಯವಾಗಿಸುವ ಅಗತ್ಯವಿದೆ. ಮೊದಲನೇ ಹಂತವಾಗಿ ನಾವು ಸಿಬಿಡಿಯನ್ನು ತೆಗೆದುಕೊಂಡಿದ್ದೇವೆ. ಅಲ್ಲಿ ಹೊಸ ಪಾರ್ಕಿಂಗ್ ನೀತಿಯನ್ನು ಅಳವಡಿಸುತ್ತಿದ್ದೇವೆ. ಅಲ್ಲಿ ಯಶಸ್ವಿಯಾದರೆ ಬೇರೆಲ್ಲಾ ಕಡೆ ಅಳವಡಿಸಿಕೊಳ್ಳಲಾಗುತ್ತದೆ. ನೀವು ಹೇಳಿದಂತೆ ಖಾಸಗಿ ಪಾರ್ಕಿಂಗ್‍ಗೆ ಜಾಗವನ್ನು ಗುರುತಿಸಿ ಹೊಸ ವಾಹನ ಖರೀದಿ ಮಾಡುವ ವಿಚಾರದಲ್ಲಿ ಚಿಂತನೆ ನಡೆಸಬೇಕಿದೆ. ಬೇರೆ ದೇಶಗಳಲ್ಲಿ ಈ ರೀತಿಯ ನಿಯಮ ಇದೆ. ನಮ್ಮಲ್ಲಿ ಅದರ ಸಾಧಕ ಬಾಧಕಗಳನ್ನು ನೋಡಿ ತೀರ್ಮಾನ ಮಾಡಬೇಕಿದೆ.

ಸಾರ್ವಜನಿಕ ಜಾಗಗಳಲ್ಲಿ ಜನರು ಪಾರ್ಕಿಂಗ್ ಮಾಡುತ್ತಾರೆ. ಇದಕ್ಕೂ ಶುಲ್ಕ ವಿಧಿಸುವುದರಿಂದ ಅದರ ಪರಿಣಾಮ ಜನರಿಗೆ ಅರ್ಥವಾಗುತ್ತದೆ…

ಮೊದಲು ಶುಲ್ಕ ವಿಧಿಸುತ್ತಿದ್ದೆವು. ಆದರೆ ಅದನ್ನು ಯಾರು ಯಾರೋ ದುರುಯೋಗ ಮಾಡಿಕೊಂಡು ಖಾಸಗೀಕರಣ ಮಾಡಿ, ಬಹಳಷ್ಟು ದೌರ್ಜನ್ಯವಾಗುತ್ತದೆ ಎನ್ನುವ ಕಾರಣ, ಹಿಂದಿನ ಸರ್ಕಾರ ಅದನ್ನು ತೆಗೆದು ಹಾಕಿತ್ತು. ಈಗ ಸಿಬಿಡಿ ಜಿಲೆಯಲ್ಲಿ 20ಕಿ.ಮೀ. ವರೆಗೆ ಈ ಹೊಸ ಪಾರ್ಕಿಂಗ್ ನೀತಿಯನ್ನು ಅಳವಡಿಸಿ ಶುಲ್ಕ ವಿಧಿಸುವ ಚಿಂತನೆ ನಡೆಸಲಿದ್ದೇವೆ.

ಮೆಟ್ರೊ ಸುತ್ತಮುತ್ತ ಪಾರ್ಕಿಂಗ್‍ಗೆ ಬಹಳ ಕಡಿಮೆ ಅನುಕೂಲವಿದೆ. ಅದಕ್ಕೆ ಪರಿಹಾರವಾಗಿ ‘ಬೆಂಗಳೂರು ಪಾರ್ಕಿಂಗ್ ಕಾರ್ಪೊರೇೀಷನ್’ ಮಾಡಿ ಪಾರ್ಕಿಂಗ್ ಸೃಷ್ಟಿ ಮಾಡಬೇಕು. ಈ ನಿಟ್ಟನಲ್ಲಿ ಯೋಚನೆ ಮಾಡಬೇಕಲ್ಲವೇ?

ಮೆಟ್ರೊದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಿದರೂ, ಅಲ್ಲಿಂದ ಮತ್ತೆ ಆಟೊ ಅಥವಾ ಸ್ವಂತ ವಾಹನಗಳ ಮೂಲಕ ರಸ್ತೆಗೇ ಬರಬೇಕಿದೆ. ಮೆಟ್ರೊ ಇರುವಲ್ಲಿ ಬಹಳಷ್ಟು ಕಡೆ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ನಗರದ ಮುಖ್ಯ ಭಾಗಗಳಲ್ಲಿ ಹಾದುಹೋಗುವ ಕೆಲವು ಕಡೆ ವ್ಯವಸ್ಥೆ ಇಲ್ಲ. ಅದಕ್ಕಾಗಿ ಬಿಬಿಎಂಪಿ ಮತ್ತು ಮೆಟ್ರೊ ನಡುವೆ ಹೊಂದಾಣಿಕೆ ಮುಖ್ಯ. ಅಲ್ಲದೆ ಭೂಸ್ವಾಧೀನ ಸಮಸ್ಯೆ ಕೂಡಾ ಅಲ್ಲಿದೆ. ಅದನ್ನು ಸರಿಪಡಿಸಬೇಕು.

ಬೆಂಗಳೂರಿನಲ್ಲಿ ಹಲವೆಡೆ ಚಿಕನ್ಸ್‍ನೆಕ್, ಬಾಟಲ್ ನೆಕ್ ಪರಿಕಲ್ಪನೆಯ ಪ್ರದೇಶಗಳಿವೆ. ಅಲ್ಲೆಲ್ಲಾ ರಕ್ಷಣಾ ಇಲಾಖೆ ಭೂಮಿಯಿದೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಆ ಭೂಮಿ ಪಡೆಯುವ ಕೆಲಸ ಆಗಬೇಕಲ್ಲ?

ಹಾಗೇನಿಲ್ಲ. ಹಲವಾರು ಕಡೆ ಡಿಫೆನ್ಸ್ ಲಾಂಡ್‍ನ್ನು ನಾವು ಹಿಂದೆಯೂ ಪಡೆದಿದ್ದೇವೆ, ಈಗಲೂ ಪಡೆಯುತ್ತೇವೆ. ಈಗ ಮೆಟ್ರೊ ಮೂರನೇ ಹಂತ ಮಾಡುವಾಗ ಇನ್ನಷ್ಟು ಪಡೆಯುವ ಅಗತ್ಯವಿದೆ. ಯೋಜನೆಯ ಪೂರ್ವದಲ್ಲೇ ಭೂಮಿಯನ್ನು ಪಡೆದುಕೊಳ್ಳುವುದನ್ನು ಯೋಜನೆಯ ಭಾಗವಾಗಿಯೇ ನಾವು ಮಾಡುತ್ತಿದ್ದೇವೆ. ಬಹುತೇಕವಾಗಿ ಹಿಂದಿನಂತೆ ಯಾವುದೂ ತಡೆಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.

ಉಪನಗರ ರೈಲು ಮತ್ತು ಸಕ್ರ್ಯುಲರ್ ರೈಲು ಕೂಡಾ ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದಾಗ ಆಗಿದ್ದು…

ಸಬ್‍ಅರ್ಬನ್ ರೈಲು ಈಗ ಫಾಸ್ಟ್‍ಟ್ರಾಕ್‍ನಲ್ಲಿದೆ. ರೈಲು ನಿಲ್ದಾಣದ ಕಿರು ಅಂತರವನ್ನು ಫಾಸ್ಟ್‍ಟ್ರಾಕ್‍ನಲ್ಲಿ ಸಾಗಿಸುತ್ತಿದ್ದೇವೆ.

ಬೆಂಗಳೂರಿನ ರಸ್ತೆಗಳು ಮತ್ತು ವೃತ್ತಗಳ ಮರುನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆ ಮಾಡಬಹುದಲ್ಲ…?

ಹದಿನೈದು ವರ್ಷಗಳ ಹಿಂದೆ ಸ್ವಲ್ಪ ಬದಲಾವಣೆಯ ಬಗ್ಗೆ ಮಾತುಗಳಾಗಿದ್ದು ಬಿಟ್ಟರೆ ಬಳಿಕ ದೊಡ್ಡ ಪ್ರಮಾಣದಲ್ಲಿ ಗಮನ ಹರಿಸಿಲ್ಲ. ಈಗ ಸೀಮ್‍ಲೆಸ್ ರಸ್ತೆ ಮಾಡುವಾಗ ಇವೆಲ್ಲವೂ ಬದಲಾಗುತ್ತವೆ.

ನೀವು ಸಂಚಾರ ದಟ್ಟಣೆಯ ಪರಿಹಾರಕ್ಕೆ ವಿಶೇಷವಾದ, ಹೊಸತಾದ ಆಲೋಚನೆ ಮಾಡುವುದಾದರೆ…?

ಬಹುತೇಕ ಬೆಂಗಳೂರಿನ ಸಿಗ್ನಲ್‍ಗಳಲ್ಲಿ ಟೈಮರ್ ಇಲ್ಲ. ದಿಲ್ಲಿ ಮತ್ತು ಮುಂಬೈಗಳಲ್ಲಿ ಟೈಮರ್ ಇರುವುದರಿಂದ ವಾಹನಗಳು ಕನಿಷ್ಟ ವೇಗದಲ್ಲಿ ಚಲಿಸುತ್ತವೆ. ಆ ನಿಟ್ಟಿನಲ್ಲಿ ಅದಕ್ಕೆ 30 ಲಕ್ಷ ವ್ಯಯಿಸುತ್ತಿದ್ದೇವೆ. ಯೋಜನೆಗೆ ಕೈಗೆತ್ತಿಕೊಂಡ ಹನ್ನೆರಡು ವಲಯಗಳಲ್ಲಿ ಸೀಮ್‍ಲೆಸ್ ಸಿಗ್ನಲ್ ಅಳವಡಿಸಲಾಗುತ್ತದೆ. ಅದರ ಪಕ್ಕದ ವೃತ್ತಗಳಿಗೆ ಟೈಮರ್ ಹಾಗೂ ಇಂಟೆಲಿಜೆಂಟ್ ಕ್ಯಾಮೆರಾ ಅಳವಡಿಸುತ್ತೇವೆ.

20 ವರ್ಷಗಳ ಹಿಂದಿನ ಟ್ರಕ್ ಟರ್ಮಿನಲ್ ಯೋಜನೆ ಮುಂದುವರೆಯಲಿಲ್ಲ…

ಟ್ರಕ್ ಟರ್ಮಿನಲ್‍ನಲ್ಲಿ ಎರಡು ಸಮಸ್ಯೆಗಳಿವೆ. ನಾಲ್ಕು ಭಾಗದಲ್ಲಿ ಮಾಡಬೇಕಿತ್ತು, ಆದರೆ ಒಂದು ಭಾಗದಲ್ಲಿ ಆಗಿದೆ. ಆದರೆ ಅದನ್ನೂ ಸರಿಯಾಗಿ ಉಪಯೋಗಿಸುತ್ತಿಲ್ಲ. ಸಾರಿಗೆ ಇಲಾಖೆ ಜತೆ ಮಾತನಾಡಿ ಸರಿಪಡಿಸುತ್ತೇವೆ.

ಒಟ್ಟಾರೆ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇರುವುದು ನಾವು ಪಾದಚಾರಿಗಳನ್ನು ಗೌರವಿಸಿದಾಗ ಮತ್ತು ಅವರ ಹಕ್ಕನ್ನು ಗಮನಿಸಿದಾಗ. ಪಾದಚಾರಿಗಳ ರಸ್ತೆಯನ್ನು, ಸೈಕಲ್ ಪಥಗಳನ್ನು ಮರುವಿನ್ಯಾಸಗೊಳಿಸಬೇಕು. ಕಡೇಪಕ್ಷ ಸಿಬಿಡಿಯಲ್ಲಾದರೂ ಇದನ್ನು ಮಾಡಬಹುದಲ್ಲ?

ಸಿಬಿಡಿಯಲ್ಲಿ ಎಲ್ಲವನ್ನೂ ಅಳವಡಿಸಿಕೊಂಡಿರುತ್ತೇವೆ. ಸಂಚಾರ ನಿರ್ವಹಣೆಗೆ ಸಿಬಿಡಿ ಒಂದು ಮಾದರಿಯಾಗಲಿದೆ.

ಸಂಚಾರ ದಟ್ಟಣೆ ಪರಿಹಾರ ಕುರಿತು ಸರ್ಕಾರಕ್ಕೆ ಬದ್ಧತೆ ಇದೆಯೇ?

ನಾವು ಸಂಚಾರ ದಟ್ಟಣೆ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ಪರಿಹಾರ ರೂಪಿಸಿದ್ದೇವೆ. ಅದನ್ನು ಅನುಷ್ಠಾನ ಮಡುತ್ತೇವೆ. ಪಾದಚಾರಿಗಳಿಂದ ಹಿಡಿದು ಎಲ್ಲ ಜನರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ, ನಿರ್ಬಂಧಗಳಿಲ್ಲದಂತೆ ಕ್ರಮ ಕೈಗೊಳ್ಳುವುದಕ್ಕೆ ನಾವು ಬದ್ಧರಾಗಿದ್ದೇವೆ. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಅವರು ಅನುಭವಿಸುತ್ತಾರೆ, ವಿಶ್ವಾಸವಿಡಿ. ನಾವು ಆ ಕಾರ್ಯವನ್ನು ಖಂಡಿತವಾಗಿಯೂ ಅತ್ಯಂತ ಯಶಸ್ವಿಯಾಗಿ ಮಾಡುತ್ತೇವೆ.

Leave a Reply

Your email address will not be published.