ನಮ್ಮ ಸಾಧನೆಗಳು – ಸೋಲುಗಳು

ಡಾ.ಟಿ.ಆರ್.ಚಂದ್ರಶೇಖರ

ಜಿಡಿಪಿ ಮತ್ತು ತಲಾ ಜಿಡಿಪಿಗಳು ಅಭಿವೃದ್ಧಿಯ ಸೂಚಕವಾದರೆ ನೆರೆಹೊರೆಯ ದೇಶಗಳ ನಡುವೆಯಾದರೂ ತೌಲನಿಕವಾಗಿ ನಾವು ಪ್ರಗತಿ ಸಾಧಿಸಿದ್ದೇವೆಯೇ?

ಮೊದಲನೆಯದಾಗಿ ಜಿಡಿಪಿ/ತಲಾ ಜಿಡಿಪಿಗಳನ್ನು ಅಭಿವೃದ್ಧಿಯ ಮಾಪಕಗಳಾಗಿ ಬಳಸುವ ಕ್ರಮವನ್ನು 1990ರಲ್ಲಿಯೇ ತಿರಸ್ಕರಿಸಲಾಗಿದೆ. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) 1990ರಲ್ಲಿ ಮೆಹಬೂಬ್ ಉಲ್ ಹಕ್ ಅವರ ನೇತೃತ್ವ್ವದಲ್ಲಿ ಪ್ರಕಟಿಸಿದ ಮೊಟ್ಟಮೊದಲ ಮಾನವ ಅಭಿವೃದ್ಧಿ ವರದಿಯಲ್ಲಿವರಮಾನವು ಜನರ ಬದುಕಿನ ಒಟ್ಟು ಮೊತ್ತವಲ್ಲಎಂದು ಘೋಷಿಸಿದ್ದರು. ಅಭಿವೃದ್ಧಿಯನ್ನು ವರಮಾನದ ಜೊತೆಗೆ ಸಾಕ್ಷರತೆ/ಶಿಕ್ಷಣ ಮತ್ತು ಆರೋಗ್ಯಗಳ ಆಧಾರದಲ್ಲಿ ಮಾಪನ ಮಾಡುವ ಮಾನವ ಅಭಿವೃದ್ಧಿ ಸೂಚ್ಯಂಕ ಎಂಬ ಮಾಪಕದಿಂದ ಅಳೆಯುವ ಕ್ರಮವನ್ನು ರೂಪಿಸಲಾಗಿದೆ.

ಪೂರ್ವ ಏಷ್ಯಾದ ಸೌತ್ ಕೊರಿಯಾ, ಥೈವಾನ್, ಹಾಂಕ್ಕಾಂಗ್ ಮತ್ತು ಸಿಂಗಪುರ ದೇಶಗಳು ಬಡತನ ನಿವಾರಣೆಗೆ, ಭೂಸುಧಾರಣೆಗೆ, ಅಸಮಾನತೆ ನಿವಾರಣೆಗೆ, ಶಿಕ್ಷಣಕ್ಕೆ, ಸ್ಪರ್ಧಾತ್ಮಕ ಆಡಳಿತ ವರ್ಗಕ್ಕೆ ಆದ್ಯತೆ ನೀಡುವುದರ ಮೂಲಕ 1965-1990 ಅವಧಿಯಲ್ಲಿ ಪವಾಡಸದೃಶ ಅಭಿವೃದ್ಧಿಯನ್ನು ಸಾಧಿಸಿಕೊಂಡವು. ಇಂದು ಅವು ಆರ್ಥಿಕ ಅಭಿವೃದ್ಧಿ (ಜಿಡಿಪಿ ಪ್ರಣೀತ) ಹಾಗೂ ಮಾನವ ಅಭಿವೃದ್ಧಿ (ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ, ವರಮಾನದಲ್ಲಿ ಕೆಲಮಟ್ಟದ ಅಸಮಾನತೆ ಇತ್ಯಾದಿ) –ಎರಡೂ ದೃಷ್ಟಿಯಿಂದ ಜಗತ್ತಿನಲ್ಲಿ ಉತ್ತಮ ಸ್ಥಾನದಲ್ಲಿವೆ.

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಎಲ್ಲರಿಗೂ ಉಚಿತಉತ್ತಮ ಶಿಕ್ಷಣವನ್ನು ನೀಡುವುದು ನಮಗೆ ಸಾಧ್ಯವಾಗಿಲ್ಲ. ಉದಾ: ಕಳೆದ ಒಂದುಒಂದೂವರೆ ವರ್ಷಗಳಿಂದ ಕೊರೊನಾ ಮಹಾರೋಗದ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣಮಂತ್ರಿ ಪರೀಕ್ಷೆ ನಡೆಸುವುದರ ಬಗ್ಗೆ, ಪಠ್ಯಕ್ರಮವನ್ನು ತಮ್ಮ ಮೂಗಿನನೇರಕ್ಕೆ ಮರುರೂಪಿಸುವುದರ ಬಗ್ಗೆ ಸಭೆಗಳ ಮೇಲೆ ಸಭೆಗಳನ್ನು ನಡೆಸಿದರೆ ವಿನಾ ಗ್ರಾಮೀಣ ಪ್ರದೇಶದಲ್ಲಿನ ಬಡ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ (ಆನ್ಲೈನ್/ಆಫ್ಲೈನ್) ಏನೆಲ್ಲ ಸೌಲಭ್ಯ ನೀಡಬೇಕು ಎಂಬುದರ ಬಗ್ಗೆ ಸೌಜನ್ಯಕ್ಕಾದರೂ ಒಂದು ಮಾತು ಹೇಳಲಿಲ್ಲ. ಉಳ್ಳವರ ಮಕ್ಕಳು ಎಂತದ್ದೇ ವ್ಯತಿರಿಕ್ತ ಸಂದರ್ಭದಲ್ಲಿಯೂ ಶೈಕ್ಷಣಿಕವಾಗಿ ಮುಂದುವರಿಯಬಹುದು. ಆದರೆ ಸರಿಸುಮಾರು 60 ಲಕ್ಷಕ್ಕೂ (2011 ಜನಗಣತಿ) ಹೆಚ್ಚಿರುವ ಭೂರಹಿತ ದಿನಗೂಲಿ ಕೂಲಿಕಾರರ ಮಕ್ಕಳ ಬಗ್ಗೆ ಸರ್ಕಾರ, ಶಿಕ್ಷಣ ಮಂತ್ರಿಗಳು ಮಾತನಾಡಿದ್ದುಂಟೆ!

ಬಡಜನರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಏನನ್ನೂ ಹೇಳದಿರುವುದೇ ವಾಸಿ. ನಮ್ಮ ಒಕ್ಕೂಟ ಸರ್ಕಾರವು ವ್ಯಸನದಂತೆ ಜಿಡಿಪಿ ಬಗ್ಗೆ, ಜಗತ್ತಿನಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದೂ, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದರ ಬಗ್ಗೆ, ಬಂಡವಾಳವೇ ಸರ್ವಸ್ವ ಎನ್ನುವುದರ ಬಗ್ಗೆ ಮಾತನಾಡಿತೆ ವಿನಾ ಬಡವರ ಬದುಕಿನ ಬಗ್ಗೆ, ಕೂಲಿಕಾರರ ಜೀವನೋಪಾಯದ ಬಗ್ಗೆ, ಮಕ್ಕಳುಮಹಿಳೆಯರಲ್ಲಿನ ಅಪೌಷ್ಟಿಕತೆ ಬಗ್ಗೆ (ಉದಾ: ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮುಂತಾದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯಾದಿಂದ ನರಳುತ್ತಿರುವ ಮಕ್ಕಳ ಪ್ರಮಾಣ ಶೇ.70ಕ್ಕಿಂತ ಅಧಿಕ (ಎನ್ಎಚ್ಎಫ್ಎಸ್ 5. 2019-2020). ಮಕ್ಕಳು ಯಾವ ಬಗೆಯಲ್ಲಿ ಉಳ್ಳವರ ಮಕ್ಕಳ ಜೊತೆಗೆ ಸ್ಪರ್ಧಿಸಬಲ್ಲರು? ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸುವ ಕಾರ್ಯಕ್ರಮದ ಬಗ್ಗೆ ಶಿಕ್ಷಣಮಂತ್ರಿ ಸುರೇಶ್ ಕುಮಾರ್ ಒಮ್ಮೆಯಾದರೂ, ಮಾತನಾಡಿದ್ದಾರೆಯೇ?

ಉಳ್ಳವರ ಮಕ್ಕಳ ಶೈಕ್ಷಣಿಕ ಪ್ರಗತಿ ಎಲ್ಲಿ ವ್ಯತ್ಯಯವಾಗುತ್ತದೋ ಎನ್ನುವ ಆತಂಕದಲ್ಲಿ ಇವರು ಬರೀ ಪರೀಕ್ಷ್ಷೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿನ ಸರ್ಕಾರಗಳಿಗೆ ಅಸಮಾನತೆ, ಬಡತನ, ನಿರುದ್ಯೋಗ, ಆಹಾರ ಭದ್ರತೆ, ಕಾರ್ಮಿಕರ ಹಿತಾಸಕ್ತಿಗಳು ಮುಂತಾದವು ಅಸಹ್ಯ ಹುಟ್ಟಿಸುವ ತಿರಸ್ಕಾರದ ನುಡಿಗಳಾಗಿ ಬಿಟ್ಟಿವೆ. ವಿಷಯಗಳ ಬಗ್ಗೆ ಮಾತನಾಡುವ ನಮ್ಮಂತಹವರನ್ನು ಆಳುವ ವರ್ಗವು ಕೀಳಾಗಿ ಕಾಣುತ್ತದೆ ಮತ್ತು ಸರ್ಕಾರಿ ಅರ್ಥಶಾಸ್ತ್ರಜ್ಞರು ನಮ್ಮ ಬಗ್ಗೆ ಕಟಕಿಯಾಡುತ್ತಾರೆ.

ವರಮಾನದಲ್ಲಿ ನೆರೆಯ ದೇಶಗಳಿಗಿಂತ ನಮ್ಮ ದೇಶ ಕಡಿಮೆ/ಜಾಸ್ತಿ ಸ್ಥಾನದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೇರಳ. ತಮಿಳುನಾಡು ಸ್ವಲ್ಪಮಟ್ಟಿಗೆ ಕರ್ನಾಟಕ ಜನಸ್ಪಂದಿ ನೀತಿಗಳನ್ನು ಪಾಲಿಸುತ್ತಿರುವುದರಿಂದ ದೇಶದಲ್ಲಿ ಜನರ ಬದುಕುಪರವಾಗಿಲ್ಲಎನ್ನುವ ಸ್ಥಿತಿಯಲ್ಲಿದೆ. ಗುಜರಾತ್ ಮಾದರಿಯನ್ನು ಸೇರಿಸಿಕೊಂಡು ಯಾವ ರಾಜ್ಯಗಳು ನಮಗೆ ಯಾವುದರಲ್ಲಿಯೂ ಆದರ್ಶವಾಗುವುದು ಸಾಧ್ಯವಿಲ್ಲ. ಬಗ್ಗೆ ಮಾತನಾಡುವ ನಮ್ಮ ರಾಜ್ಯದ ಮಂತ್ರಿಮಹೋದಯರಿಗೆ ಒಂದೊ ಕರ್ನಾಟಕದ ಆರ್ಥಿಕಸಾಮಾಜಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಯಿಲ್ಲ ಅಥವಾ ಯಾರನ್ನೋ ಓಲೈಸುವುದಕ್ಕಾಗಿ ಉತ್ತರ ಪ್ರದೇಶದÀ ಜನಸಂಖ್ಯಾ ನೀತಿಯನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕೆಂಬ ದಡ್ಡತನದ ಮಾತನಾಡುತ್ತಾರೆ. ಇಂದು ಜಾಗತಿಕವಾಗಿ ಒಪ್ಪಿಕೊಂಡಿರುವಂತೆ ಅಭಿವೃದ್ಧಿ ಎಂದರೆ ಜನರ ಬದುಕಿನ ಸಮೃದ್ಧತೆ ವಿನಾ ಆರ್ಥಿಕ ಸಮೃದ್ಧತೆಯಲ್ಲ.

ನಮ್ಮಲ್ಲಿ ಚಮಚ ಬಂಡವಾಳಶಾಹಿ ಮತ್ತು ಭ್ರಷ್ಟಾಚಾರಿ/ ಸ್ವಜನಪಕ್ಷಪಾತಿ ಪ್ರಗತಿ ಮಾದರಿಗಳು ಏಕೆ ಯಶಸ್ವಿಯಾಗಿವೆ?

ಇಲ್ಲ. ಪ್ರಮೇಯ ತಪ್ಪು. ಚಮಚ/ಸ್ವಜನಪಕ್ಷಪಾತಿ/ಭ್ರಷ್ಟಾಚಾರಿ ಮಾದರಿಗಳು ನಮ್ಮಲ್ಲಿ ಯಶಸ್ವಿಯಾಗಿಲ್ಲ. ಮಾಹಿತಿಯ ಕೊರತೆಯಿಂದಾಗಿ ಜನಲೋಲುಪಪಾಪ್ಯುಲಿಸ್ಟ್ ಆರ್ಥಿಕ ನೀತಿಯನ್ನು ಅನುಸರಿಸುತ್ತಿವೆ ಎಂದು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ/ತೆಲಂಗಾಣ ರಾಜ್ಯಗಳನ್ನು ಆಳುವ ವರ್ಗ ಮತ್ತು ಅದರ ತಜ್ಞವರ್ಗ ಟೀಕಿಸುತ್ತದೆ. ನೀತಿಯ ದೋಷಗಳ ಹಿನ್ನೆಲೆಯಲ್ಲಿಯೂ ಅವುಗಳ ಮೂಲಕ ಸದರಿ ರಾಜ್ಯಗಳು ಜನರ ಬದುಕನ್ನು ಉತ್ತಮಪಡಿಸುವಲ್ಲಿ ಸ್ವಲ್ಪಮಟ್ಟಿಗಾದರೂ ಯಶಸ್ವಿಯಾಗಿವೆ.

ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್, ಮಧ್ಯಪ್ರದೇಶ (ಹಿಂದಿ ಬೆಲ್ಟ್) ರಾಜ್ಯಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳು ವರಮಾನ ಮತ್ತು ಜನರ ಬದುಕಿನ ಸಮೃದ್ಧತೆಯ ದೃಷ್ಟಿಯಿಂದ ಉತ್ತಮ ಸ್ಥಿತಿಯಲ್ಲಿವೆ. ಇದಕ್ಕೆ ಕಾರಣ ಇಲ್ಲಿನ ಜನಸ್ಪಂದಿ, ಸಮಾನತೆಸ್ನೇಹಿ, ಮಹಿಳಾಪರ ನೀತಿಗಳು. ಇಲ್ಲಿ ಎಲ್ಲವೂ ಸರಿಯಾಗಿದೆ ಎಂದು ನಾನು ಹೇಳುತ್ತಿಲ್ಲ. ಭ್ರಷ್ಟಾಚಾರ ಇಲ್ಲಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಬಡತನ ನಿವಾರಣೆ, ಸಾಕ್ಷರತೆಯನ್ನು ಉತ್ತಮಪಡಿಸುವುದು (ಮಹಿಳೆಯರ), ಆಹಾರ ಭದ್ರತೆ, ಹಿಂದುಳಿದ ವರ್ಗಗಳ ಹಿತಾಸಕ್ತಿ ಮುಂತಾದ ವಿಷಯಗಳಿಗೆ 1950ರಿಂದಲೂ ದಕ್ಷಿಣ ಭಾರತದ ರಾಜ್ಯಗಳು, ತಮ್ಮೆಲ್ಲ ಇತಿಮಿತಿಗಳ ನಡುವೆ ಆದ್ಯತೆಯನ್ನು ನೀಡುತ್ತಾ ಬಂದಿವೆ. ಎಲ್ಲೊ ಒಂದು ಕಡೆ ರಾಜ್ಯಗಳಲ್ಲಿ ಅಭಿವೃದ್ಧಿ ನೀತಿಗಳ ಮೇಲೆ ಬಸವಣ್ಣ, ಶ್ರೀನಾರಾಯಣಗುರು, ಪೆರಿಯಾರ್ ಮುಂತಾದವರ ಬೋಧನೆ, ತತ್ವ ಪ್ರಭಾವ ಬೀರಿರಲು ಸಾಕು.

ಉಳ್ಳವರ ಮತ್ತು ಸಾಮಾನ್ಯರ ನಡುವನ ಆದಾಯ/ಸಂಪತ್ತಿನ ಅಂತರ ಹಿಗ್ಗುತ್ತಿದ್ದರೂ ನಮ್ಮ ಸಮಾಜವೇಕೆ ಅದನ್ನು ಗಂಭೀರ ಮತ್ತು ಅಪಾಯಕಾರಿಯೆಂದು ಪರಿಗಣಿಸಿಲ್ಲ?

ಚಾತುರ್ವರ್ಣದಲ್ಲಿ ಸಮಾನತೆಗೆ ಅವಕಾಶವೇ ಇಲ್ಲ. ತಾರತಮ್ಯವನ್ನೇ ಮೂಲ ತತ್ವವನ್ನಾಗಿ ಇಟ್ಟುಕೊಂಡಿರುವ ಸಿದ್ಧಾಂತವನ್ನು ಇಂದು ನಮ್ಮ ಆಳುವ ವರ್ಗ ಪಾಲಿಸುತ್ತಿದೆ. ದೇವಾಲಯ ಕಟ್ಟುವುದು ಸರ್ಕಾರದ ಕಾರ್ಯವಾಗಿ ಬಿಟ್ಟಿದೆ. ಹೋಮಹವನಗಳನ್ನು ಪ್ರಧಾನಮಂತ್ರಿಯವರು ಖುದ್ದಾಗಿ ಆಚರಿಸುತ್ತಾರೆ. ಅಸಮಾನತೆಯು ಇಂದಿನ ಆಳುವ ವರ್ಗಕ್ಕೆ ಸಮಸ್ಯೆಯೇ ಅಲ್ಲ. ಅದರ ಬಗ್ಗೆ ಮಾತನಾಡುವವರನ್ನು ನಕ್ಸಲಿಯರೆಂದು, ಬುದ್ಧಿಜೀವಿಗಳೆಂದು, ಕಮ್ಯುನಿಷ್ಟರೆಂದು ಹೀಯಾಳಿಸುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂದರೆ 2020ರಲ್ಲಿ ಒಕ್ಕೂಟ ಹಾಗೂ ಕರ್ನಾಟಕ ಸರ್ಕಾರಗಳು ತಂದ ಭೂಸುಧಾರಣೆ ತಿದ್ದುಪಡಿ ಕಾಯಿದೆ. ಇದರ ಬಗ್ಗೆ ಆಳುವ ವರ್ಗ ಹೇಳುವುದೇನು? ಯಾರು ಬೇಕಾದರೂ, ಎಷ್ಟು ಬೇಕಾದರೂ ಭೂಮಿಯನ್ನು ಕೊಳ್ಳಬಹುದು. ಇದು ನಮ್ಮ ಸಂವಿಧಾನದ ಭಾಗ 4ರಲ್ಲಿನ ರಾಜ್ಯ ನಿರ್ದೇಶ ತತ್ವದ ಪರಿಚ್ಛೇದ 38 ಸೆಕ್ಷನ್ 2 ಖುಲ್ಲಂಖುಲ್ಲಾ ಉಲ್ಲಂಘನೆಯಾಗಿದೆ.

ಬಂಡವಳಿಗರನ್ನುವೆಲ್ಥ್ ಕ್ರಿಯೇಟರ್ಸ್ಎಂದು ಕಾರ್ಮಿಕ ವರ್ಗದ ಬೆವರಿನಕಣ್ಣೀರಿನರಕ್ತದ ಕಾಣಿಕೆಯನ್ನು ಕಡೆಗಣಿಸಿ ಖಾಸಗಿ ವಲಯವನ್ನು, ಕಾರ್ಪೋರೇಟ್ ಕುಳಗಳನ್ನು ಸರ್ಕಾರವೇ ವೈಭವೀಕರಿಸುತ್ತಿರುವಾಗ ಅಸಮಾನತೆಯನ್ನು ತಗ್ಗಿಸುವುದು ಹೇಗೆ ಸಾಧ್ಯವಾಗುತ್ತದೆ? ಸಾರ್ವಜನಿಕ ವಲಯವನ್ನು ನಾಶ ಮಾಡುವ ಕ್ರಮಗಳನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳುತ್ತಿರುವಾಗ, ಅದಕ್ಕೆ ಪರಿಣಾಮಕಾರಿ ವಿರೋಧ ಇಲ್ಲದಿರುವಾಗ ಅದು ಉಲ್ಬಣಗೊಳ್ಳದೆ ಇರುವುದು ಹೇಗೆ ಸಾಧ್ಯ?

ನಮ್ಮ ವಿತ್ತ ಮಂತ್ರಿ 2020-21 ಬಜೆಟ್ ಭಾಷಣದಲ್ಲಿಸರ್ಕಾರಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಸಾರ್ವಜನಿಕ ಆಸ್ತಿಯನ್ನು, ಸಾರ್ವಜನಿಕ ವಲಯದ ಉದ್ದಿಮೆಗಳನ್ನು, ಸಾರ್ವಜನಿಕ ಭೂಮಿಯನ್ನುಮಾನಿಟೈಸ್(ಮಾರಾಟ) ಮಾಡುವುದರ ಮೂಲಕ ಸಂಗ್ರಹಿಸುತ್ತೇವೆ ಎಂದು ಹೇಳುತ್ತಿರುವುದರ ಒಳಮರ್ಮವೇನು? ಅಂದರೆ ಸಂಪತ್ತನ್ನು ಗುಡ್ಡೆ ಹಾಕಿಕೊಳ್ಳುತ್ತಿರುವ ಬಿಲಿಯನ್ನರುಗಳುಮಿಲಿಯನ್ನರುಗಳ ಮೇಲೆ ತೆರಿಗೆ ಹಾಕುವುದಕ್ಕೆ ಪ್ರತಿಯಾಗಿ ತೆರಿಗೆ ವಿನಾಯಿತಿ, ರಿಯಾಯಿತಿ ನೀಡುವ ಆರ್ಥಿಕ ನೀತಿ ಅಸಮಾನತೆಯನ್ನು ಉಲ್ಬಣಗೊಳಿಸದೆ ಕಡಿಮೆ ಮಾಡುವುದು ಸಾಧ್ಯವೆ?

ಕೊರೊನಾ ಮಹಾರೋಗದ ಸಂದರ್ಭದಲ್ಲಿ ನಮ್ಮ ಆರ್ಥಿಕತೆಯ ಬಂಡವಳಿಗರ ಸಂಪತ್ತು ರೂ 12 ಲಕ್ಷ ಕೋಟಿಗೆ ಏರಿಕೆಯಾಗಿತ್ತು ಎನ್ನಲಾಗಿದೆ. ಒಮ್ಮೆ ನಾವೆಲ್ಲ ಯೋಚಿಸೋಣ: ಒಕ್ಕೂಟ ಸರ್ಕಾರ ಪ್ರತಿಗಾಮಿಯಾದ ಪರೋಕ್ಷ ತೆರಿಗೆಯಾದ ಜಿಎಸ್ಟಿ ಬಗ್ಗೆ ಏನೆಲ್ಲ ಮಾತನಾಡುತ್ತಿದೆಯೋ ಅದರ ಶೇ, 10 ರಷ್ಟನ್ನು ಪ್ರತ್ಯಕ್ಷ ತೆರಿಗೆ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಸಮಾಜವೂ ಮೌನವಾಗಿ ಒಪ್ಪಿಕೊಂಡಂತೆ ಕಾಣುತ್ತದೆ. ಏಕೆಂದರೆ ಇಂದು ಗೌರವಯುತ ಸ್ಥಾನ ಪಡೆದುಕೊಳ್ಳುತ್ತಿರುವ ಮತ್ತು ಒಕ್ಕೂಟ ಸರ್ಕಾರದ ನೇರ ಸಮ್ಮತಿಯಿರುವ ಚಾತುರ್ವರ್ಣ ಸಿದ್ಧಾಂತದ ಪ್ರಭಾವ ಸಮಾಜದ ಮೇಲೆ ತೀವ್ರವಾಗಿದೆ. ನಮ್ಮ ಸಮಾಜವು ಇಂದು ಸಂಪತ್ತಿನಆದಾಯದ ಅಂತರವನ್ನು ಸಹಿಸಿಕೊಳ್ಳುತ್ರಿರುವುದರ ಹಿಂದೆ ಚಾತುರ್ವರ್ಣ ಪ್ರಣೀತ ಭ್ರಾಮಕ ಧಾರ್ಮಿಕತೆಯ ಪಾತ್ರವಿದೆ.

ದೇಶೀಯ ಸಾಂಸ್ಥಿಕ ಬಿಕ್ಕಟ್ಟು ಮತ್ತು ಮುಕ್ತ ಉದ್ಯಮಶೀಲತೆಗೆ ಒದಗಿರುವ ಅಡೆತಡೆಗಳನ್ನು ನಾವೇಕೆ ಗುರುತಿಸುತ್ತಿಲ್ಲ?

ಇಲ್ಲಿರುವ ಬಹುಮುಖ್ಯ ಅಡ್ಡಿಯೆಂದರೆ ಭ್ರಷ್ಟಾಚಾರ. ಯಾವುದನ್ನು ಅರ್ಥಶಾಸ್ತ್ರದಲ್ಲಿರೆಂಟ್ ಸೀಕಿಂಗ್ಎನ್ನುತ್ತೇವೆಯೋ ಅಂತಹ ಮಹಾರೋಗದಲ್ಲಿ ನಮ್ಮ ಆಡಳಿತಾಂಗ ಮತ್ತು ಉದ್ದಿಮೆರಂಗ ಮುಳುಗಿ ಬಿಟ್ಟಿವೆ. ಭ್ರಷ್ಟಾಚಾರವು ಉಳ್ಳವರಿಗೆ ಸಮಸ್ಯೆಯೇ ಅಲ್ಲ. ಏಕೆಂದರೆ ಅದರಿಂದ ಉಂಟಾಗಬಹುದಾದ ಪಾಪವನ್ನು ದೇವಸ್ಥಾನಗಳಿಗೆ ಕಾಣಿಕೆ ಸಲ್ಲಿಸುವುದರ ಮೂಲಕ ಪರಿಹರಿಸಿಕೊಳ್ಳಬಹುದು. ಸಾವಿರಾರು ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆಯಲ್ಲಿ ಸೆರೆಮನೆವಾಸವನ್ನೂ ಅನುಭವಿಸಿದರಿಪಬ್ಲಿಕ್ ಆಫ್ ಬಳ್ಳಾರಿಚಕ್ರವರ್ತಿ ಗಾಲಿ ಜನಾರ್ದನ ರೆಡ್ಡಿ ತಿರುಪತಿ ದೇವಸ್ಥಾನಕ್ಕೆ ರೂ. 45 ಕೋಟಿ ಮೌಲ್ಯದ ವಜ್ರದ ಆಭರಣವನ್ನು ಕಾಣಿಕೆಯಾಗಿ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭ್ರಷ್ಟಾಚಾರ ಒಂದು ಅನೈತಿಕ ನಡವಳಿಕೆಯೇನಲ್ಲ. ಅದೊಂದು ಆಡಳಿತಾತ್ಮಕ ಅಗತ್ಯ. ಉದ್ಯಮಶೀಲತೆಯೆನ್ನುವುದು ಭ್ರಷ್ಟಾಚಾರದ ಮೂಲವಾಗಿಬಿಟ್ಟಿದೆ. ಉದಾ: ಬಳ್ಳಾರಿ ಜಿಲೆಯಲ್ಲಿ ಅಕ್ರಮ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ದೇಶದಲ್ಲಿನ ಸಂಘಟಿತ ವಲಯದ ಬೃಹತ್ ಉದ್ದಿಮೆ ಜೆಎಸ್ಡಬ್ಲೂ ಎಂತಹ ಅಕ್ರಮಗಳಲ್ಲಿ ತೊಡಗಿತ್ತು ಎಂಬುದನ್ನು ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿದ ಕರ್ನಾಟಕ ಲೋಕಾಯುಕ್ತರ ವರದಿಯಲ್ಲಿ ಬಹಿರಂಗವಾಗಿದೆ (ವಿವರಗಳಿಗೆ ನೋಡಿ: ಕರ್ನಾಟಕ ಲೋಕಾಯುಕ್ತ ವರದಿ, ಭಾಗ 2, ಅಧ್ಯಾಯ 22. ‘ಮೆ. ಸೌತ್ ವೆಸ್ಟ್ ಮೈನಿಂಗ್ ಕಂಪನಿ ಲಿಮಿಟೆಡ್ಅಧ್ಯಾಯ 23. ‘ಓವರ್ ಲೊಡ್ ಮೂಲಕ ಅಧಿಕೃತ ಪರಿಮಾಣಕ್ಕಿಂತÀ ಅಧಿಕ ಅದಿರನ್ನು ಅಕ್ರಮವಾಗಿ ಪಡೆದ ಜೆ.ಎಸ್.ಡಬ್ಲೂ. ಸ್ಟಿಲ್ಸ್ ಪ್ರೈವೆಟ್ ಲಿಮಿಟೆಡ್, ಪುಟ 362-378). ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ನೀಡಬೇಕಾಯಿತು.

ನಮ್ಮ ಕೃಷಿ ಬಿಕ್ಕಟ್ಟು, ನಗರೀಕರಣದ ಅಸ್ತವ್ಯಸ್ತ ಸ್ಥಿತಿ, ನಿರುದ್ಯೋಗ ಮತ್ತು ದಲಿತಹಿಂದುಳಿದವರ ಅಸಹಾಯಕತೆ ನಮ್ಮನ್ನೇಕೆ ಬೆಚ್ಚಿಬೀಳಿಸುತ್ತಿಲ್ಲ?

ಅಮತ್ರ್ಯ ಸೆನ್ ಒಂದು ಕಡೆ ಹೇಳಿರುವಂತೆ ಯಾರು ಶೋಷಣೆಗೆ ಒಳಗಾಗಿರುತ್ತಾರೋ ಅವರು ಶೋಷಣೆ ಮಾಡುತ್ತಿರುವವರ ಪರ ನಿಂತರೆ ಅಲ್ಲಿ ಶೋಷಣೆಯ ನಿವಾರಣೆಗೆ ಪ್ರಯತ್ನಿಸುವುದು ಕಷ್ಟಸಾಧ್ಯ. ಮೂರನೆಯ ಪ್ರಶ್ನೆಗೆ ಇದು ಸರಿಯಾದ ಉತ್ತರ ಎಂದು ನಾನು ಭಾವಿಸಿದ್ದೇನೆ. ದಲಿತರಲ್ಲಿನ, ಹಿಂದುಳಿದ ವರ್ಗದಲ್ಲಿನ, ನಗರವಾಸಿಗಳಲ್ಲಿನ, ಜಮೀನ್ದಾರಿ ರೈತರಲ್ಲಿನ ಉಳ್ಳವರು (ಎಲೀಟುಗಳು) ಇಂದು ಆಳುವ ವರ್ಗದ ಬೆನ್ನೆಲುಬಾಗಿದ್ದಾರೆ.

ಸ್ವಾತಂತ್ರ್ಯೋತ್ತರ 75 ವರ್ಷಗಳ ಚರಿತ್ರೆಯಲ್ಲಿ ಏಳುಎಂಟು ತಿಂಗಳುಗಟ್ಟಲೆ ನಡೆಯುತ್ತಿರುವ ಸರ್ಕಾರದ ಮೂರು ಕರಾಳ ಕಾಯಿದೆಗಳ ವಿರುದ್ಧದ ಶಾಂತಿಯುತ ರೈತ ಚಳವಳಿ ಒಂದು ಚಾರಿತ್ರಿಕ ಘಟನೆ. ಇದಕ್ಕೆ ಸರ್ಕಾರವು ರವಷ್ಟು ಸ್ಪಂದಿಸುತ್ತಿಲ್ಲ. ನಿಜ, ಕೃಷಿಯು ತಲೆತಲಾಂತರದಿಂದ ಖಾಸಗಿಯಾಗಿ ನಡೆದುಕೊಂಡು ಬಂದಿದೆ. ಆದರೆ ಇಂದು ಉದ್ದಿಮೆ ವಲಯ ಖಾಸಗಿತನಕ್ಕೆ ಒಳಪಡುತ್ತಿದ್ದರೆ ಕೃಷಿಯನ್ನು 2020ರಲ್ಲಿ ಜಾರಿಗೊಳಿಸಿರುವ ಮೂರು ಕರಾಳ ಕಾಯಿದೆಗಳ ಮೂಲಕ ಕಾರ್ಪೋರೇಟೀಕರಣಕ್ಕೆ ಒಳಪಡಿಸುವ ಸಂಚನ್ನು ಒಕ್ಕೂಟ ಸರ್ಕಾರ ನಡೆಸುತ್ತಿದೆ. ಕೃಷಿಯನ್ನು ಮಾತ್ರವಲ್ಲ, ನಮ್ಮ ಸಾಂಸ್ಕøತಿಕನೆಲಮೂಲ ಬದುಕನ್ನೇ ನಾಶ ಮಾಡುವ ದುರಂತ ಇಲ್ಲಿದೆ.

ನಿರುದ್ಯೋಗದ ಬಗ್ಗೆ, ಲಾಕ್ ಡೌನ್ ಸಂದರ್ಭದಲ್ಲಿ ಏನೆಲ್ಲ ಅನಾಹುತಗಳನ್ನು ವಲಸೆ ಕಾರ್ಮಿಕರು ಎದುರಿಸಿದರು ಎಂಬುದರ ಬಗ್ಗೆ ನಮ್ಮಲ್ಲಿ ದತ್ತಾಂಶವೇ ಇಲ್ಲ ಎಂದು ಸರ್ಕಾರ ಭಂಡತನವನ್ನು ಪ್ರದರ್ಶಿಸಿತು. ಕಳೆದ 7-8 ವರ್ಷಗಳಿಂದ ಒಂದೇ ಒಂದು ಹೇಳಿಕೊಳ್ಳಬಹುದಾದ ಉದ್ಯೋಗ ಕಾರ್ಯಕ್ರಮವನ್ನು ಇಂದಿನ ಒಕ್ಕೂಟ ಸರ್ಕಾರ ರೂಪಿಸಲಿಲ್ಲ. ಉದ್ಯೋಗ ಹಕ್ಕಿನ ಭಾಗವಾಗಿ ಅನುಷ್ಠಾನಗೊಂಡಿದ್ದ ಎಂಜಿಎನ್ಆರ್ಜಿಎ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಅವರುಮಾನ್ಯುಮೆಂಟನ್ ಫೈಲ್ಯೂರ್ಎಂದು ಸಂಸತ್ತಿನಲ್ಲಿ ಎಲ್ಲ ಉತ್ಸಾಹದಿಂದ ಘೋಷಿಸಿದರು. ಇದೇ ಕಾರ್ಯಕ್ರಮ ಲಾಕ್ ಡೌನಿನ ಸಂದರ್ಭದಲ್ಲಿ ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಬದುಕನ್ನು ಕೊಟ್ಟಿತು ಎಂಬುದನ್ನು ನಾವು ಮರೆಯಬಾರದು.

ಇದಕ್ಕೆ ಸಮನಾದ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಲ್ಲಿಯೂ ಆರಂಭಿಸಬೇಕೆಂದು ಅನೇಕ ಅರ್ಥಶಾಸ್ತ್ರಜ್ಞರು, ಆಡಳಿತಗಾರರು ಒತ್ತಾಯಿಸುತ್ತಿದ್ದರೂ ಸರ್ಕಾರ ಇದರ ಬಗ್ಗೆ ಸ್ಪಂದಿಸುತ್ತಿಲ್ಲ. ಕಳೆದ ಮೂರುನಾಲ್ಕು ವರ್ಷಗಳಿಂದ ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ ಪ್ರಕಟಿಸುತ್ರಿರುವದಿ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾವರದಿಗಳಲ್ಲಿ ಗ್ರ್ರಾಮೀಣ ಪ್ರದೇಶದಲ್ಲಿದ್ದಂತೆ ನಗರ ಪ್ರದೇಶದಲ್ಲಿಯೂ ಉದ್ಯೋಗ ಖಾತ್ರ್ರಿ ಯೋಜನೆಯ ಅಗತ್ಯವನ್ನು ತೋರಿಸುತ್ತ ಬಂದಿದೆ.

ದಲಿತರುಹಿಂದುಳಿದ ವರ್ಗಗಳ ಅಸಹಾಯಕತೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ! ನಮ್ಮ ರಾಜ್ಯವನ್ನೇ ತೆಗೆದುಕೊಂಡರೂ, ಎರಡು ವರ್ಗಗಳು ಒಟ್ಟು ದುಡಿಯುವ ವರ್ಗದ ಶೇ.60 ರಿಂದ ಶೇ.70 ರಷ್ಟಾಗುತ್ತಾರೆ. ಒಟ್ಟು ಜನಸಂಖ್ಯೆಯಲ್ಲಿನ ದುಡಿಮೆಗಾರರಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ.20 ರಷ್ಟಿದ್ದರೆ ದಲಿತರಲ್ಲಿ ಅವರ ಪ್ರಮಾಣ ಶೇ.40 ರಷ್ಟಿದೆ ಮತ್ತು ಹಿಂದುಳಿದ ವರ್ಗಗಳಲ್ಲಿ ಅವರ ಪ್ರಮಾಣ ಶೇ.30 ರಷ್ಟಿದೆ. ನಿರುದ್ಯೋಗದಿಂದ ವರಮಾನದ ಮೂಲವನ್ನು ಕಳೆದುಕೊಳ್ಳುವವರು, ಬಡತನಕ್ಕೆ ಒಳಗಾಗುವವರು ಇವೇ ವರ್ಗಗಳಾಗಿವೆ.

ಇಂದು ಒಕ್ಕೂಟ ಸರ್ಕಾರ ಅಖಂಡ ಆರ್ಥಿಕ ನೀತಿಗಳ ಬಗ್ಗೆ ಮಾತನಾಡುತ್ತದೆ. ಉದಾ: ಎಲ್ಲ ವರ್ಗಗಳಲ್ಲಿಯೂ ಬಡವರಿದ್ದಾರೆಂದು ಹೇಳಿ ಅದು ಮುಂದುವರಿದ ಜಾತಿಗಳಲ್ಲಿನ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10 ಮೀಸಲಾತಿಯನ್ನು 2018ರಲ್ಲಿ ಘೋಷಿಸಿತು. ಆದರೆ ನಮ್ಮದು ಮೂಲತಃ ಅಖಂಡತೆಯ ಸಮಾಜವಲ್ಲ. ಇಲ್ಲಿ ಆರ್ಥಿಕ ನೀತಿಗಳ ಮೂಲದಲ್ಲಿ ಜಾನ್ ರಾಲ್ಸ್ ತನ್ನ ಸಾಮಾಜಿಕ ನ್ಯಾಯ ಸಿದ್ಧಾಂತದಲ್ಲಿ ಹೇಳುವಭಿನ್ನತೆಯ ನಿಯಮಇರಬೇಕು. ಆದರೆ ಇದಕ್ಕೆ ಸರ್ಕಾರವು ತಿಲಾಂಜಲಿಯಿಟ್ಟಿರುವ ಕಾರಣ ನಿರುದ್ಯೋಗ ಉಲ್ಬಣಗೊಳ್ಳುತ್ತಿದೆ. ದಲಿತರುಹಿಂದುಳಿದ ವರ್ಗಗಳಲ್ಲಿ ಭ್ರಾಮಕ ಧಾರ್ಮಿಕತೆಯನ್ನು ತುಂಬುತ್ತಿರುವ ಕಾರಣವಾಗಿ ಅವರ ಸಮಸ್ಯೆಗಳು ಯಾರನ್ನು ಬೆಚ್ಚು ಬೀಳಿಸುತ್ತಿಲ್ಲ.

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕøತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.

Leave a Reply

Your email address will not be published.