ನರೇಗಾ ಯೋಜನೆಯ ಪಿತಾಮಹ ರಘುವಂಶ ಪ್ರಸಾದ್ ಸಿಂಗ್

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ರಘುವಂಶಬಾಬು ಇತ್ತೀಚೆಗೆ ನಿಧನರಾದರು. ಅವರ ಅಗಲಿಕೆಯಿಂದ ರಾಷ್ಟ್ರದ ರಾಜಕೀಯ ರಂಗ ಅಪರೂಪದ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಅವರ ವರ್ತನೆ, ಕಾಳಜಿ, ಚಿಂತನೆ, ಯೋಜನೆಗಳನ್ನು ನೆನೆಯುವ ಪ್ರಯತ್ನವಿದು..

– ಸೌಭದ್ರ ಚಟಜಿ೯

ಮಾಜಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ರಘುವಂಶ ಪ್ರಸಾದ್ ಸಿಂಗ್ ಸಂಸತ್ ಕಲಾಪವನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಹೊರಬಂದ ಕೂಡಲೇ ಅಲ್ಲಿ ನೆರೆದಿರುತ್ತಿದ್ದ ಪತ್ರಕರ್ತರೊಡನೆ ಕೆಲಹೊತ್ತು ಮಾತನಾಡುತ್ತಿದ್ದರು. ಇಂತಹ ಪ್ರತಿಯೊಂದು ಸಂದರ್ಭದಲ್ಲೂ ಅವರ ಕಚೇರಿಯ ಅಧಿಕಾರಿಗಳಲ್ಲಿ ಆತಂಕ ತುಂಬಿರುತ್ತಿತ್ತು.

ಭಾರತದ ಅತ್ಯಂತ ಪ್ರಭಾವಶಾಲಿ ಗ್ರಾಮೀಣಾಭಿವೃದ್ಧಿ ಸಚಿವ ಎಂದೇ ಖ್ಯಾತಿ ಗಳಿಸಿದ್ದ ರಘುವಂಶಬಾಬು ಸರ್ಕಾರದ ಯಾವುದೇ ರಹಸ್ಯವನ್ನು ಹೊರಗೆಡಹುತ್ತಿರಲಿಲ್ಲ. ಆದರೆ ಪತ್ರಕರ್ತರೊಡನೆ ಅವರು ನಡೆಸುತ್ತಿದ್ದ ಸುದೀರ್ಘ ಮಾತುಕತೆಗಳು ಅವರ ಕಚೇರಿಯ ಅನೇಕ ಮೀಟಿಂಗುಗಳು ವಿಳಂಬವಾಗುವಂತೆ ಮಾಡುತ್ತಿದ್ದವು. ಕನಿಷ್ಠ ಮೂರು ಬಾರಿಯಾದರೂ ಅವರು ಈ ರೀತಿಯ ಮಾತುಕತೆಗಳಲ್ಲಿ ತೊಡಗಿಕೊಂಡು ತಮ್ಮ ನಿಗದಿತ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಹೆಚ್ಚು ಮಾತುಗಾರಿಕೆಯ ವ್ಯಕ್ತಿಯಾದರೂ ರಘುವಂಶ ಬಾಬು ಅವಿರತ ದುಡಿಯುತ್ತಿದ್ದುದೂ ಹೌದು.

ಸ್ವತಂತ್ರ ಭಾರತದ ಅತಿ ದೊಡ್ಡ ಕಲ್ಯಾಣ ಯೋಜನೆ ಮತ್ತು ಉದ್ಯೋಗ ಸೃಷ್ಟಿಯ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಪಿತಾಮಹ ಎಂದೇ ಖ್ಯಾತನಾಮರಾಗಿರುವ ರಘುವಂಶಬಾಬು ಕೋವಿಡ್ 19ರ ಸಂದರ್ಭದಲ್ಲಿ ದೇಶದ ಅಸಂಖ್ಯಾತ ಜನರಿಗೆ ನೆನಪಾಗಲೇಬೇಕು. ಏಕೆಂದರೆ ಈ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರದಲ್ಲಿ ಸರ್ಕಾರ ಬದಲಾದರೂ ಇನ್ನೂ ಮುಂದುವರೆದಿರುವುದೇ ಅಲ್ಲದೆ ಈ ವರ್ಷ ಈ ಯೋಜನೆಗೆ ಕೇಂದ್ರದಿಂದ 1 ಲಕ್ಷ ಕೋಟಿ ರೂ ಹೂಡಿಕೆ ಮಾಡಲಾಗಿದೆ.

ಕೋವಿದ್ 19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟಗಳಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಲಿ ಈ ಯೋಜನೆಯ ಕರಡು ಸಿದ್ಧಪಡಿಸಿದಾಗ ಸಿಂಗ್ ಅವರು ಇದಕ್ಕೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಮೂವರು ಹಿರಿಯ ನಾಯಕರು ಈ ಯೋಜನೆಯ ಉಪಯುಕ್ತತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಮತ್ತು ಇದು ಸಾರ್ವಜನಿಕ ಹಣದ ಪೋಲು ಮಾಡಿದಂತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದರಿಂದ ನರೇಗಾ ಯೋಜನೆಯನ್ನು ಅನುಷ್ಠಾನ ಮಾಡುವುದರಲ್ಲಿ ವಿಳಂಬವಾಗುವ ಸಂಭವವಿತ್ತು.

ಈ ಸಂದರ್ಭದಲ್ಲಿ ಒಂದು ಮಧ್ಯಾಹ್ನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸತ್ತಿನ ಕೇಂದ್ರ ಹಾಲ್ ಬಳಿ ಹೋಗುತ್ತಿದ್ದಾಗ, ಹತಾಶರಾಗಿದ್ದ ರಘುವಂಶ ಬಾಬು ಅವರ ಬಳಿ ಹೋಗಿ ಈ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಕೆಲವೇ ನಿಮಿಷಗಳಲ್ಲಿ ಸೋನಿಯಾ ಗಾಂಧಿ ಅಂದಿನ ರಕ್ಷಣಾ ಸಚಿವರಾಗಿದ್ದ ಮತ್ತು ನರೇಗಾ ಯೋಜನೆಯ ಸಚಿವ ಸಂಕುಲದ ಮುಖ್ಯಸ್ಥರಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ಕರೆದು ಕೂಡಲೇ ಈ ಯೋಜನೆಯನ್ನು ಸಿದ್ಧಪಡಿಸಲು ಆದೇಶ ನೀಡಿದ್ದರು. ಆ ನಂತರ ಕಡತಗಳು ಶೀಘ್ರವಾಗಿ ಚಲಿಸಲಾರಂಭಿಸಿದವು, 2006ರ ಫೆಬ್ರವರಿಯಲ್ಲಿ, ಯುಪಿಎ ಅಧಿಕಾರಕ್ಕೆ ಬಂದ ಎರಡು ವರ್ಷದ ನಂತರ, ಭಾರತದ ಮೊಟ್ಟಮೊದಲ ಉದ್ಯೋಗ ಖಾತರಿ ಯೋಜನೆ ದೇಶಾದ್ಯಂತ ಒಟ್ಟು 200 ಜಿಲ್ಲೆಗಳಲ್ಲಿ ಆರಂಭವಾಗಿತ್ತು.

ಅಪಾರ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದ ರಘುವಂಶ ಬಾಬು ಅವರಿಗೆ ಬಹು ಮುಖ್ಯವಾದ ಸಾಮಾಜಿಕ ಕ್ಷೇತ್ರದ ಸಚಿವ ಪದವಿಯನ್ನು ನೀಡಲಾಗಿತ್ತು. ಇದರೊಟ್ಟಿಗೆ ರಘುವಂಶ್ ಅವರು ಭಾರತದ ಬಡ ಜನತೆಯ ಬದುಕನ್ನು ಪರಿವರ್ತಿಸುವ ಮಹತ್ತರವಾದ ಕಲ್ಯಾಣ ಯೋಜನೆಗಳಿಗೆ ನಾಂದಿ ಹಾಡಿದ್ದರು. ರಾಜಕೀಯವಾಗಿ ಸಹ ಯುಪಿಎ ಸರ್ಕಾರಕ್ಕೆ ಈ ಯೋಜನೆ ಬಹುಮಟ್ಟಿಗೆ ನಿರ್ಣಾಯಕವಾಗಿದ್ದು ಇಂದಿಗೂ ವಿಶ್ಲೇಷಕರ ಮೆಚ್ಚುಗೆ ಪಡೆಯುತ್ತಲೇ ಇದೆ.

ಅಷ್ಟೇನೂ ದೊಡ್ಡ ಮಟ್ಟದ ನಾಯಕ ಎಂದು ಗುರುತಿಸಲ್ಪಡದ ರಘುವಂಶ್ ಬಾಬು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಹಿರಿಯ ಸಂಪುಟ ಸಚಿವರೊಬ್ಬರು ಬಡಜನ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ್ದೂ ಉಂಟು. ಅಂದಿನ ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮಧ್ಯ ಪ್ರವೇಶಿಸಲು ಯತ್ನಿಸಿದ್ದರು. ಅಹ್ಲುವಾಲಿಯಾ ಅವರು ರಘುವಂಶಬಾಬು ಅವರನ್ನು ಭೇಟಿ ಮಾಡಿ, ಅವರ ಪತ್ರದ ಬಗ್ಗೆ ಹಿರಿಯ ಸಚಿವರು ಅಸಮಧಾನ ಹೊಂದಿದ್ದಾರೆ ಎಂದು ಹೇಳಿದ್ದರು. ಹಾಗೆಯೇ ಈ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಹೇಗೆ ಜಾರಿಯಾಗುತ್ತಿದೆ ಎಂದು ತಿಳಿದುಕೊಳ್ಳಲು ಪ್ರವಾಸ ಮಾಡಲೂ ಸಲಹೆ ನೀಡಿದ್ದರು.

ಆದರೆ ಈ ಸಲಹೆಯನ್ನು ನಿರಾಕರಿಸಿದ ರಘುವಂಶ ಸಿಂಗ್, ಅಹ್ಲುವಾಲಿಯಾ ಅವರಿಗೆ “ನೀವು ಉತ್ತರ ಬಿಹಾರದ ಒಂದು ಹಳ್ಳಿಗೆ ಬೇಸಿಗೆ ಪ್ರಖರವಾಗಿರುವ ಸಂದರ್ಭದಲ್ಲಿ ನನ್ನೊಡನೆ ಬರಬೇಕು, ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿಯಲ್ಲಿ ಮೂರು ರಾತ್ರಿಗಳನ್ನು ಕಳೆಯಬೇಕು, ಆಗಲೇ ನಿಮಗೆ ಭಾರತದ ಗ್ರಾಮೀಣ ಪ್ರದೇಶದ ಜನರ ಬವಣೆ ಅರ್ಥವಾಗುತ್ತದೆ” ಎಂದು ಹೇಳಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಿಂಗ್ ಉದ್ಯೋಗ ಖಾತರಿ ಯೋಜನೆಗೆ ಹಣಕಾಸು ಒದಗಿಸುವ ಬಗ್ಗೆ ಸಂಕೀರ್ಣವಾದ ಲೆಕ್ಕಾಚಾರಗಳನ್ನು ಹಾಕುವ ಮೂಲಕ ಎಲ್ಲ ಸಹ ಸಚಿವರನ್ನೂ ಚಕಿತಗೊಳಿಸಿದ್ದರು.

ಗಣಿತ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಹೊಂದಿರುವ ಸಿಂಗ್ ಅವರ ವಿದ್ಯಾರ್ಹತೆಯ ಬಗ್ಗೆ ಮತ್ತು ರಾಜಕಾರಣ ಪ್ರವೇಶಿಸುವ ಮುನ್ನ ಬೋಧಕರಾಗಿದ್ದುದರ ಅರಿವು ಇಲ್ಲದ ಸಚಿವರೊಬ್ಬರು “ನೀವು ಇಷ್ಟು ಉತ್ತಮ ಗಣಿತ ಯಾವಾಗ ಕಲಿತಿರಿ” ಎಂದು ಕೇಳಿದ್ದರು. ಅದಕ್ಕೆ ಸೌಮ್ಯವಾಗಿಯೇ ಉತ್ತರಿಸಿದ ರಘುವಂಶಬಾಬು “ನೀವು ಹುಟ್ಟುವ ಮುಂಚೆಯೇ ನಾನು ಕಲಿತಿದ್ದೆ” ಎಂದು ಉತ್ತರಿಸಿದ್ದರು.

ವಿಕಲಾಂಗರಿಗೆ ಮತ್ತು ವಿಧವೆಯರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ರಘುವಂಶಬಾಬು ಮುಖ್ಯ ಪಾತ್ರ ವಹಿಸಿದ್ದರು. ಹಾಗೆಯೇ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ 1985 (ನಂತರ ಇದನ್ನು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಎಂದು ಮರುನಾಮಕರಣ ಮಾಡಲಾಗಿತ್ತು) ಬಡತನದ ರೇಖೆಗಿಂತಲೂ ಕೆಳಗಿರುವ ಎಲ್ಲ ವ್ಯಕ್ತಿಗಳನ್ನೂ ವೃದ್ಧಾಪ್ಯ ಪಿಂಚಣಿಗೆ ಅರ್ಹರಾಗುವಂತೆ ಯೋಜಿಸಲಾಯಿತು.

ಈ ಯೋಜನೆ ಸಹ ಯಾವುದೇ ಉದ್ಯೋಗ ಮಾಡಲು ಸಾಧ್ಯವಾಗದ ಗ್ರಾಮೀಣ ಬಡಜನತೆಯ ಪಾಲಿಗೆ ವರದಾನವಾಗಿತ್ತು. ಇಂದಿಗೂ ಈ ಯೋಜನೆ ಮುಂದುವರೆದಿದೆ. ಯುವ ವಿಧವೆಯರಿಗೆ ಪಿಂಚಣಿ ನೀಡುವ ಅವರ ಮೂಲ ಯೋಜನೆಯನ್ನು ಅನುಮೋದಿಸಲಾಗಲಿಲ್ಲ. ಏಕೆಂದರೆ ರಘುವಂಶ್ ಬಾಬು ಅವರ ಪ್ರತಿಪಾದನೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಕೇಂದ್ರ ಹಣಕಾಸು ವೆಚ್ಚ ಇಲಾಖೆಯ ಕಾರ್ಯದರ್ಶಿ ಸುಶ್ಮಾನಾಥ್, ಯುವ ವಿಧವೆಯರಿಗೆ ಉಚಿತ ಸೌಲಭ್ಯಗಳನ್ನು ನೀಡುವುದಕ್ಕಿಂತಲೂ ಹೆಚ್ಚಾಗಿ ಕೌಶಲ್ಯ ತರಬೇತಿ ನೀಡಬೇಕು ಎಂದು ಸಚಿವ ಸಂಪುಟಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ರಘುವಂಶ್ ಅವರ ಅವಧಿಯಲ್ಲೇ ಕೇಂದ್ರ ಸರ್ಕಾರ ಭಾರತದ ಅತಿ ಹಳೆಯದಾದ ಭೂ ಸ್ವಾಧೀನ ಮಸೂದೆಯನ್ನು ತಿದ್ದುಪಡಿ ಮಾಡಿ ರೈತಸ್ನೇಹಿಯನ್ನಾಗಿ ರೂಪಿಸಲಾಗಿತ್ತು. ಈ ವಿವಾದಾಸ್ಪದ ಹೊಸ ತಿದ್ದುಪಡಿ ಕಾಯ್ದೆ ಯುಪಿಎ ಸರ್ಕಾರದ ಎರಡನೆ ಅವಧಿಯಲ್ಲಿ ಪೂರ್ಣಪ್ರಮಾಣದಲ್ಲಿ ಅನುಮೋದನೆ ಪಡೆದಿತ್ತು. ಬಿಹಾರದ ವೈಶಾಲಿ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದ ರಘುವಂಶಬಾಬು, ಹಿಂದುಳಿದ ವರ್ಗಗಳ ರಾಜಕಾರಣವನ್ನೇ ಅವಲಂಬಿಸಿರುವ ಒಂದು ಪಕ್ಷದಲ್ಲಿ ಮೇಲ್ಜಾತಿಯ ಹೆಮ್ಮೆಯ ನಾಯಕರಾಗಿ ಹೊರಹೊಮ್ಮಿದ್ದರು. 1980ರ ಉತ್ತರಾರ್ಧದಿಂದಲೂ ರಾಷ್ಟ್ರೀಯ ಜನತಾ ದಳದ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಬಲಗೈ ಭಂಟನಂತಿದ್ದ ರಘುವಂಶ್ ಸೆಪ್ಟಂಬರ್ 11ರಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾಗಲೇ ಪಕ್ಷಕ್ಕೆ ರಾಜೀನಾಮೆ ನೀಡುವವರೆಗೂ ಪಕ್ಷದ ಸದಸ್ಯರಾಗಿಯೇ ಮುಂದುವರೆದಿದ್ದರು.

ರಘುವಂಶ್ ಬಾಬು ಅವರ ರಾಜಕೀಯ ಜೀವನ ಆರಂಭವಾದದ್ದು ಬಿಹಾರದ ಸೀತಾರ‍್ಹಿ ಜಿಲ್ಲೆಯಲ್ಲಿ, ಸಂಯುಕ್ತ ಸಮಾಜವಾದಿ ಪಕ್ಷದ ಕಾರ್ಯದರ್ಶಿಯ ಹುದ್ದೆಯ ಮೂಲಕ. 1977ರಲ್ಲಿ ಬಿಹಾರ ವಿಧಾನಸಭೆ ಪ್ರವೇಶಿಸಿದ ರಘುವಂಶ್ ಸಚಿವರಾಗಿ, ಉಪ ಸಭಾಧ್ಯಕ್ಷರಾಗಿ ಮೇಲೇರುತ್ತಲೇ ಹೋದರು. 1996ರಲ್ಲಿ ಪ್ರಪ್ರಥಮವಾಗಿ ವೈಶಾಲಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1996-98ರ ಅವಧಿಯಲ್ಲಿ ಕೇಂದ್ರ ಪಶುಸಂಗೋಪನೆ (ಸ್ವತಂತ್ರ ಉಸ್ತುವಾರಿ) ಸಚಿವರಾಗಿ ಕಾರ್ಯ ನಿರ್ವಹಿಸಿದ ರಘುವಂಶ್ ಹೈನುಗಾರಿಕೆ, ಡೈರಿ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿಯೂ ಯುಪಿಎ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದರು.

ಪಕ್ಷದ ಬೌದ್ಧಿಕ ಕಣಜ ಎಂದೇ ಹೆಸರಾಗಿದ್ದ ರಘುವಂಶ್ ಸಿಂಗ್ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಆಹ್ವಾನವನ್ನು ತಿರಸ್ಕರಿಸುತ್ತಲೇ ಬಂದಿದ್ದರು. 2009ರಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ನೇಮಿಸಲು ಯೋಚಿಸಿತ್ತು. ಆರ್‌ಜೆಡಿ ಯುಪಿಎ ಸರ್ಕಾರದ ಮಿತ್ರ ಪಕ್ಷವಾಗಿರದಿದ್ದರೂ ಈ ಹುದ್ದೆಯನ್ನು ಅವರಿಗೆ ನೀಡಲಾಗಿತ್ತು. ಆದರೆ ರಘುವಂಶ್ ಇದನ್ನು ತಿರಸ್ಕರಿಸಿದ್ದರು.

ಸಿಂಗ್ ಮತ್ತು ಲಲ್ಲೂ ಪ್ರಸಾದ್ ಅವರ ಸ್ನೇಹ ಮೂರು ದಶಕಗಳಿಗೂ ಹೆಚ್ಚು ಕಾಲ ಬೆಳೆದುಬಂದಿದೆ. ಪ್ರಸಾದ್ ಅವರನ್ನು ಮುಕ್ತವಾಗಿ ಟೀಕೆ ಮಾಡಿದರೂ ಯಾವುದೇ ವಿವಾದ ಸೃಷ್ಟಿಸದ ಏಕೈಕ ನಾಯಕ ರಘುವಂಶ್ ಆಗಿದ್ದರು. ಲಲ್ಲೂ ಪ್ರಸಾದ್ ಅವರ ಸಾಧನೆಗಳ ಬಗ್ಗೆ ಇವರ ಅಭಿಪ್ರಾಯವನ್ನು ಒಂದು ಸಂದರ್ಶನದಲ್ಲಿ ಕೇಳಿದಾಗ, ರಘುವಂಶ್ ಅವರು “ರಾಜಕೀಯ ನಿರ್ವಹಣೆಯಲ್ಲಿ ತಮ್ಮ ನಾಯಕ ಹತ್ತಕ್ಕೆ ಹತ್ತು ಅಂಕ ಪಡೆಯುತ್ತಾರೆ ಆದರೆ ಆಡಳಿತಗಾರರಾಗಿ ಶೂನ್ಯವನ್ನಷ್ಟೇ ಪಡೆಯುತ್ತಾರೆ” ಎಂದು ಹೇಳಿದ್ದರು.

ಆರ್‌ಜೆಡಿ ಪಕ್ಷದಲ್ಲಿ ಸಿಂಗ್ ಅವರ ವಿರೋಧಿಗಳು ಲಲ್ಲೂ ಪ್ರಸಾದ್ ಎದುರು ಅವರನ್ನು ಅವಹೇಳನ ಮಾಡಿ ಕುಗ್ಗಿಸಲು ಸಾಕಷ್ಟು ಪ್ರಯತ್ನಿಸಿದ್ದೂ ಉಂಟು. ಮಾಜಿ ಗಣಿತಶಾಸ್ತ್ರ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಲ್ಲೂ ಪ್ರಸಾದ್ ಅವರ ಮೇಲೆ ಒತ್ತಡ ಹೇರಲು ದಿನಪತ್ರಿಕೆಗಳ ಸುದ್ದಿಗಳನ್ನೂ ತಲುಪಿಸುತ್ತಿದ್ದರು. ಆದರೆ ಲಲ್ಲೂ ಪ್ರಸಾದ್ ಇವರ ಪ್ರಯತ್ನಗಳಿಗೆ ಕಿವಿಗೊಡದೆ ನಿರಾಸೆ ಮೂಡಿಸಿದ್ದರು. “ಅವರು ಸಾರ್ವಜನಿಕವಾಗಿ ಹಾಗೆ ಹೇಳಬಾರದಿತ್ತು ಆದರೆ ಅವರು ಹೇಳಿರುವುದು ಸರಿಯಲ್ಲ ಎಂದು ಹೇಳಲಾಗುವುದಿಲ್ಲ” ಎಂದು ಲಲ್ಲೂ ಪ್ರಸಾದ್ ಹೇಳಿದ್ದರು.

2009ರ ಚುನಾವಣೆಯಲ್ಲಿ ವೈಶಾಲಿಯಿಂದ ಕಡೆಯಬಾರಿಗೆ 2009ರಲ್ಲಿ ಗೆದ್ದ ಈ ರಜಪೂತ್ ನಾಯಕ ಮುಂದಿನ ಚುನಾವಣೆಗಳಲ್ಲಿ ಜಾತಿಗಳ ಮತ ಪಡೆಯಲಾರದೆ ಸೋಲುಂಡಿದ್ದರು. ನಂತರ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ದೆಹಲಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ತಪಾಸಣೆಗಾಗಿ ಭೇಟಿ ನೀಡುತ್ತಿದ್ದರು. ಅನೇಕರಿಗೆ ರಘುವಂಶ್ ಬಾಬು, 2004-09ರ ಅವಧಿಯಲ್ಲಿ ಅವರು ಕೈಗೊಂಡ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಆರ್‌ಜೆಡಿ ಪಕ್ಷದಲ್ಲಿ ಅಭಿವೃದ್ಧಿಯ ಮುಖವಾಣಿಯಾಗಿ ಕಂಡುಬರುತ್ತಿದ್ದರು.

ಹಾಗೆಯೇ ಪ್ರಸಾದ್ ಅವರ ಜನಪ್ರಿಯತೆಯ ಮುಂದೆ ರಘುವಂಶ್ ಸದಾ ಹಿಂದಿರಬೇಕಾಯಿತು. ಆದರೂ ಇಬ್ಬರೂ ನಾಯಕರ ನಡುವೆ ಸಂಬಂಧಗಳು ಗಟ್ಟಿಯಾಗಿದ್ದವು. ರಘುವಂಶ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಲಲ್ಲೂ ಪ್ರಸಾದ್ ಅವರಿಗೆ ಮತ್ತಾವುದೇ ಪಕ್ಷ ಸೇರದಂತೆ ಸಲಹೆ ನೀಡಿದ್ದರು. “ನೀವು ಬರೆದ ಪತ್ರವೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನನಗೆ ಅದನ್ನು ನಂಬಲಾಗುತ್ತಿಲ್ಲ. ನಾನು, ನನ್ನ ಕುಟುಂಬ ಮತ್ತು ಆರ್‌ಜೆಡಿ ಕುಟುಂಬ ನೀವು ಗುಣಮುಖರಾಗುವುದನ್ನು ನಿರೀಕ್ಷಿಸುತ್ತೇವೆ. ನೀವು ಚೇತರಿಸಿಕೊಂಡ ನಂತರ ಮಾತನಾಡೋಣ. ನೀವು ಎಲ್ಲಿಗೂ ಹೋಗುತ್ತಿಲ್ಲ ಎನ್ನುವುದನ್ನು ನೆನಪಿಡಿ” ಎಂದು ಲಲ್ಲೂ ಪ್ರಸಾದ್ ವಿನಂತಿಸಿದ್ದರು.

ಸರಳ ವ್ಯಕ್ತಿಯಾಗಿದ್ದ ರಘುವಂಶ್ ಬಾಬು ಅವರ ಸೋದರ ದೆಹಲಿಯನ್ನು ಮೊದಲ ಬಾರಿ ನೋಡಿದ್ದೇ ರಘುವಂಶ್ ಕೇಂದ್ರ ಸಚಿವರಾದ ನಂತರ. ಆಗ ಸಿಂಗ್ ಸೋದರನಿಗೆ ಐದು ಸಲಹೆಗಳನ್ನು ನೀಡಿದ್ದರು. ಬಿಹಾರಕ್ಕೆ ವಿಮಾನ ಪ್ರಯಾಣ ಮಾಡುವ ಸಂದರ್ಭದಲ್ಲಿ ಟಿಷ್ಯೂ ಪೇಪರ್ ಮೇಲೆ ಬರೆದಿದ್ದ ಈ ಸಲಹೆಗಳಲ್ಲಿ ಬಿಹಾರ ಸರ್ಕಾರವನ್ನು ಹೇಗೆ ನಡೆಸುವುದು ಎಂದು ನೀತಿಶ್ ಕುಮಾರ್ ಅವರಿಗೆ ಸಲಹೆ ನೀಡಲಾಗಿತ್ತು. ಮಕರ ಸಂಕ್ರಾಂತಿಯ ದಿನ ಮಾತ್ರ ತಮ್ಮ ವಾರ್ಷಿಕ ಕೂಟ ಏರ್ಪಡಿಸುತ್ತಿದ್ದ ರಘುವಂಶ್ ಬಾಬು ಬಹಳ ವರ್ಷಗಳ ಕಾಲ ಮೊಬೈಲ್ ಫೋನ್ ಹೊಂದಿರಲಿಲ್ಲ. ಧಾರ್ಮಿಕ ಶ್ಲೋಕವಾದ ತ್ರಿಲೋಕಿನಾಥ್ ಕಥಾವನ್ನು ಸಂಪೂರ್ಣವಾಗಿ ಮಂಡಿಸುತ್ತಿದ್ದ ರಘುವಂಶ್ ಅವರ ಪ್ರತಿಭೆಗೆ ಅವರನ್ನು ಭೇಟಿ ಮಾಡಿದವರೆಲ್ಲರೂ ತಲೆದೂಗುತ್ತಿದ್ದುದುಂಟು.

ಒಮ್ಮೆ ರಘುವಂಶ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದಾಗ ಕಿಚಡಿಯನ್ನು ತಿನ್ನುತ್ತಿದ್ದರು. ನಾನು ಅವರಿಗೆ ನನ್ನ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದೆ. ಅವರು ಅದನ್ನು ತೆಗೆದುಕೊಂಡು ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ತೆಗೆಯಲು ಬಳಸಲಾರಂಭಿಸಿದ್ದರು. ನಂತರ ಒಂದು ಗಂಟೆಯ ಕಾಲ ಈ ಮಾಜಿ ಗಣಿತಶಾಸ್ತ್ರ ಪ್ರಾಧ್ಯಾಪಕ ಬಂಗಾಲ ಮತ್ತು ಬಿಹಾರದ ನಡುವೆ ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮಾನತೆಗಳ ಬಗ್ಗೆ ಉಪನ್ಯಾಸವನ್ನೇ ನೀಡಿದ್ದರು. ನನ್ನ ರಾಜ್ಯದ ಬಗ್ಗೆ ನನಗಿಂತಲೂ ಅವರಿಗೆ ಹೆಚ್ಚಾಗಿ ತಿಳಿದಿತ್ತು.

*ಲೇಖಕರು ಹಿಂದೂಸ್ತಾನ್ ಟೈಂಸ್ ಪತ್ರಿಕೆಯ ವರದಿಗಾರರು; ರಾಜಕೀಯ ಮತ್ತು ನೀತಿನಿರೂಪಣೆ ಪರಿಣತರು.

Leave a Reply

Your email address will not be published.