ನಲ್ಲಿ ನೀರು ಮತ್ತು ವಡೆ ಪ್ರಸಂಗ!

ಬೇಲೂರು ರಾಮಮೂರ್ತಿ

ಸೋಮುನ ಕಂಡೊಡನೇ ಶ್ರೀಮತಿ, “ಸೋಮು ಸರ್. ಹೌ ಸ್ವೀಟ್ ಆಫ್ ಯು, ಮುನಿಸಿಪಾಲಿಟಿಗೆ ಹೋಗಿ ನೀರು ತರಿಸಿದೀರಲ್ಲ. ನೀವು ಭಗೀರಥನಿಗಿಂತ ಏನೂ ಕಡಿಮೆಯಿಲ್ಲ, ನೀವು ನಮ್ಮ ಏರಿಯಾದ ಸೋಮುರಥಅಂದಳು!

ಮನೇಲಿ ಬೋರ್ವೆಲ್, ಬಾವಿ ಇದ್ದರೂ ಕುಡಿಯಲು ನಲ್ಲಿ ನೀರೇ ಬೇಕು ಎನ್ನುವುದು ಬಡಾವಣೆಯ ಮನೆಗಳ ನೀರೆಯರ ಬಯಕೆ. ಹೀಗಾಗಿ ಬೀದಿ ಕೊನೆಯಲ್ಲಿರುವ ಒಂದೇ ಒಂದು ಮುನಿಸಿಪಲ್ ನಲ್ಲಿಯ ಬಳಿ ಸದಾ ಜನ ಇರ್ತಾರೆ. ಎಷ್ಟಾದರೂ ಅದು ಮುನಿಸಿಪಲ್ ನಲಿ,್ಲ ಅದಕ್ಕೂ ಮುನಿಸಿಕೊಳ್ಳೊ ಹಕ್ಕಿದೆ. ಅದಕ್ಕೆ ಒಂದೊಂದು ದಿನ ನೀರು ಬರೋಲ್ಲ.

ಮುನಿಸಿಪಾಲ್ಟಿಯ ಹೆಸರೇ ಬದಲಾಯಿಸಿಬಿಟ್ಟರೆ ಆಗ ನಲ್ಲಿಗೂ ಬೇರೆ ಹೆಸರು ಬರುತ್ತದೆ ಎನ್ನುವುದು ಸೋಮು ಅಂಬೋಣ. ಮುನಿಸಿಕೊಂಡು ಪಲ್ಟಿ ಹೊಡೆಯುವ ಜನರೇ ತುಂಬಿರುವುದರಿಂದ ಅದು ಮುನಿಸಿಪಲ್ಟಿ, ಆಡುವವರ ಬಾಯಲ್ಲಿ ಮುನಿಸಿಪಾಲ್ಟಿ. ಆದರೆ ಅದನ್ನು ನಗಿಸಿಪಾಲ್ಟಿ ಎಂದು ಹೆಸರಿಸಿಬಿಟ್ಟರೆ ನಗಿಸಿ ಪಲ್ಟಿ ಹೊಡೆಯೋದು ಚೆನ್ನ ಅಲ್ಲವೇ ಅನಿಸಿತು.

ನಲ್ಲೀಲಿ ನೀರು ಬಾರದ ದಿನ ಸೋಮಿ ಸೋಮುಗೆ ಒಂದು ದಿನ ಖಾಲಿ ಕೊಡ ಕೊಟ್ಟು ಮುನಿಸಿಪಾಲ್ಟಿಗೆ ಓಡಿಸಿದಳು. ಸೋಮು ಹೋಗಿ ಅಧಿಕಾರಿ ಬಳಿ ನಿಂತ. ಕೊಡ ಸೊಂಟದಲ್ಲಿ, ಕುಚೋದ್ಯದ ನಗು ಮುಖದಲ್ಲಿ.

ಅಧಿಕಾರಿ ಕೆಂಗಣ್ಣು ಬಿಟ್ಟುಇಲ್ಲಿ ನಲ್ಲಿ ಇಲ್ಲರೀ ಕೊಡ ಯಾಕೆ ತಂದ್ರಿ, ಮಳೆ ಬಾರದ ಕಡೆ ಕೊಡೆ ಹಿಡಿದ ಹಾಗೆಅಂದರು.

ನಲ್ಲಿ ಇರೋ ಕಡೆ ಕೊಡ ಇಟ್ರೆ ನೀರು ಬರೋಲ್ಲ, ಅದಕ್ಕೆ ನಲ್ಲಿ ಇಲ್ಲದಿರೋ ಕಡೆ ಕೊಡ ಇಟ್ಟು ನೋಡೋಣ ಅಂತ ಬಂದೆ

ವಾಟ್ ನಾನ್ಸೆನ್ಸ್ ಸೇ ಏನ್ರೀ ಬೇಕು ನಿಮಗೆ

ಓಹೋ ಏನ್ಸಾರ್ ನೀವು ಕಾಮಧೇನುನೋ ಇಲ್ಲಾ ಕಲ್ಪವೃಕ್ಷಾನೊ, ಕೇಳಿದ್ದೆಲ್ಲ ಕೊಡೋ ಹಾಗೆ ಮಾತಾಡ್ತಾ ಇದೀರ

ರೀ ನಾವು ಡ್ಯೂಟಿಗೆ ಸೇರುವಾಗ ಹೇಳಿಕೊಟ್ಟಿರುವ ಪ್ರಥಮ ಉಪದೇಶವೇ ಕೊಡದಿದ್ದರೂ ಕೊಡೋ ಹಾಗೆ ಮಾತಾಡಿ ಅಂತ. ಅದಕ್ಕೆ ಕೊಡ ತಂದಿರುವ ನಿಮ್ಮ ಮುಂದೆ ಕೊಡೋ ಹಾಗೆ ಮಾತಾಡ್ತಾ ಇರೋದು

ನಾನು ಇಲ್ಲಿಗೆ ಬರುವಾಗಲೇ ನಮ್ಮ ಬೀದಿಯವರು ಮುನಿಸಿಪಾಲ್ಟಿ ಅಧಿಕಾರಿ ಏನೂ ಕೊಡ ಅವನ ಮುಂದೆ, ಹಿಡಿಯಬೇಡ ಕೊಡ ಅಂತ ಹೇಳಿದ್ರು. ಆದರೂ ನಾ ಬಂದೆ ಹಿಡ್ಕೊಂಡು ಕೊಡಅಂದ ಸೋಮು.

ಇದು ಹೀಗೇ ಮುಂದುವರಿದರೆ ಕೊನೆಮೊದಲಿಲ್ಲ ಅಂತ ಅಧಿಕಾರಿಗಳುನಿಮ್ಮನೆ ಬೀದಿ ನಲ್ಲೀಲಿ ನೀರು ಬರ್ತಿಲ್ಲ. ಅಷ್ಟೆ ತಾನೇ ನಿಮ್ಮ ದೂರು. ನೀವು ವಾಪಸ್ ಹೋಗಿ ನೀರು ಬಂದಿರುತ್ತೆಅಂದು ಒಂದು ಬೆಲ್ ಬಾರಿಸಿದರು.

ಸರ್ ನನಗೇನೋ ಬೋರ್ವೆಲ್ ನೀರು ಎಲ್ಲಾದಕ್ಕೂ ಆಗುತ್ತೆ. ಆದರೆ ನನ್ನ ಹೆಂಡತಿಗೆ ಕುಡಿಯೋಕೆ ನಲ್ಲಿ ನೀರೇ ಬೇಕು

ಇರ್ಲಿ ಬಿಡ್ರೀ ನೀರೆ ಅಂದ ಮೇಲೆ ಅವರು ಕೇಳಿದ ನೀರೇ ಕೊಡಬೇಕು. ಅವರಿಗೆ ಸಾಮಾನ್ಯವಾಗಿ ಸಿಹಿನೀರು, ಸಿಹಿಮಾತು, ಸಿಹಿಮುತ್ತು ಇವೆಲ್ಲ ಬಹಳ ಪ್ರಿಯ ಕಣ್ರೀ, ಹೋಗಿ ಹೋಗಿ ನಾನು ಟಾರ್ಗೆಟ್ ರೀಚ್ ಮಾಡಬೇಕುಅಂದರು.

ಏನ್ಸಾರ್ ಕಲಕ್ಷನ್ ಟಾರ್ಗೆಟ್ಟಾಅಂತ ಕೇಳಿದ.

ಕನ್ನಡಕದೊಳಗಿಂದ ನೋಡಿ ಅಧಿಕಾರಿ ಫೈಲ್ ಒಳಗೆ ತಲೆ ಹಾಕಿದರು.

ಸೋಮು ಕೊಡದ ಸಮೇತ ನಲ್ಲಿ ಬಳಿಗೆ ವಾಪಸ್ ಬಂದ.

ಅಷ್ಟರಲ್ಲಾಗಲೇ ನೀರು ಬಂದಿದ್ದರಿಂದ ನಲ್ಲಿ ಬಳಿ ತುಂಬಾ ಜನ ಸೇರಿದ್ದರು. ಎಲ್ಲ ಮಹಿಳೆಯರೇ. ಸೋಮು ಮಾತ್ರ ಮಹನೀಯ.

ಸೋಮುನ ಕಂಡೊಡನೇ ಶ್ರೀಮತಿ, “ಸೋಮು ಸರ್. ಹೌ ಸ್ವೀಟ್ ಆಫ್ ಯು, ಮುನಿಸಿಪಾಲಿಟಿಗೆ ಹೋಗಿ ನೀರು ತರಿಸಿದೀರಲ್ಲ. ನೀವು ಭಗೀರಥನಿಗಿಂತ ಏನೂ ಕಡಿಮೆಯಿಲ್ಲ, ನೀವು ನಮ್ಮ ಏರಿಯಾದ ಸೋಮುರಥಅಂದಳು.

ನಾನು ಭಗೀರಥ ಆದರೆ ನೀವು ಗಂಗೆ. ಕೂತ್ಕೊಳಿ ನನ್ನ ತಲೆ ಮೇಲೆ ಹಂಗೆ

ಹೋಗಿ ಬರೋಣ ಒಂದೆರಡು ರೌಂಡು ಎಲ್ಲರ ಕಣ್ಣೂ ಕೆಂಪಗಾಗೋ ಹಂಗೆ

ಅಂದ.

ಶ್ರೀಮತಿ ನಾಚಿದಳು. “ಥೂ ಹೋಗಿ ಸೋಮು ಸರ್ಅಂದಳು.

ಸೋಮು ಬೇಕೆಂದೇ ತನ್ನ ಸರದಿ ಬರೋವರೆಗೂ ಕಾದ. ಅಲ್ಲಿಯವರೆಗೂ ಬಡಾವಣೆಯ ಮಹಿಳೆಯರೊಂದಿಗೆ ಅದೂ ಇದೂ ಹರಟಿದ. ಶ್ರೀಮತಿ ಒಂದು ಕೊಡ ನೀರು ಮನೆಗೆ ಸುರಿದು ಮತ್ತೆ ಖಾಲಿ ಕೊಡದೊಂದಿಗೆ ಹಿಂದಿರುಗುವಾಗ ಡಬ್ಬಿಯಲ್ಲಿ ಎರಡು ವಡೆ ತಂದಿದ್ದಳು

ಏನ್ರೀ ಇದು ವಡೆ ಯಾರ ತಿಥಿ ಮಾಡಿದ್ರಿ ಇವತ್ತುಅಂತ ಕೇಳಿದ.

ತಿಂದ್ರೆ ನಿಮ್ಮ ಬಾಯಲ್ಲಿ ವಡೇದೇ ತಿಥಿ ಆಗಿಹೋಗುತ್ತಲ್ಲ ಸರ್ಅಂದಳು ಶ್ರೀಮತಿ.

ಗುಡ್ ಹ್ಯೂಮರ್ಅಂದು ವಡೆ ಕಚ್ಚಿದ ಸೋಮು. ಇತರ ಹೆಂಗಸರು ಬಾಯಿ ಸರಿಮಾಡಿಕೊಂಡರು.

ಏನ್ ವಿಶೇಷ ಇವತ್ತು ವಡೆ ಮಾಡಿದ್ದುಅಂತ ಕೊರಳು ಕುಣಿಸಿ ಸೋಮು ವಡೆ ಕಚ್ಚಿ ಕಚ್ಚಿ ನುಂಗಿದ.

ನಮ್ಮನೆಯವರು ಮಾಡಿದ್ದು ಸರ್. ಹತ್ತು ವಡೆ ಮಾಡಿದರು. ಎಂಟು ಅವರೇ ತಿಂದರು. ಎರಡು ನನಗೆ ಕೊಟ್ಟರು. ನನಗೆ ಯಾಕೋ ಅದರ ವಾಸನೆ ಕಂಡ್ರೇ ಆಗಲಿಲ್ಲ. ಏನು ಮಾಡೋದು, ಗಂಡ ಮಾಡಿದ್ದು ತಿನ್ನಲೇಬೇಕು. ಅದಕ್ಕೇ ಅವರೆದುರಿಗೆ ತಿಂದ ಹಾಗೆ ಮಾಡಿ ಅವರಿಗೆ ಕಾಣದಂತೆ ವಡೆನ ನಾಯಿಗೆ ಹಾಕಿಬಿಟ್ಟೆ.”

ಮತ್ತೆ ನನಗೆ ಕೊಟ್ಟಿರೋ ವಡೆ ಯಾವುದುಅಂತ ಕೇಳಿದ ಸೋಮುಗೆ ವಾಕರಿಕೆ ಬರೋ ಹಾಗಾಗಿತ್ತು. ಅಷ್ಟೊತ್ತಿಗಾಗಲೇ ಒಂದೂವರೆ ವಡೆ ಖಾಲಿ ಮಾಡಿದ್ದ. ಇನ್ನೊಂದು ತುಂಡು ಮಾತ್ರ ಬಾಕಿ ಉಳಿದಿತ್ತು.

ಸ್ವಲ್ಪ ತಾಳಿ ಸೋಮು ಸರ್. ವಡೆನ ನಾಯಿಗೆ ಹಾಕಿದೆನಾ, ಅದು ಬಂದು ಒಂದೆರಡು ಸಾರಿ ನೆಕ್ಕಿತು, ಮೂಸಿತು ನಂತರ ಹಾಗೆ ಹಿಂದಿರುಗಿ ಹೊರಟುಹೋಯಿತು. ಅಷ್ಟೊತ್ತಿಗೆ ನನ್ನ ಗಂಡ ಶ್ರೀಮತಿ ಅಂತ ಕೂಗುತ್ತಾ ಬಂದರು. ನಾನು ಒಡೆ ನಾಯಿಗೆ ಹಾಕಿದ್ದು ಅವರಿಗೆ ಎಲ್ಲಿ ಗೊತ್ತಾಗಿಬಿಡುತ್ತೋ ಅಂತ ನಾನು ವಡೆನ ಎತ್ತಿ ಕೈಲಿದ್ದ ಡಬ್ಬಿಗೆ ಹಾಕ್ಕೊಂಡು ಮನೇಲಿ ನೀರಿದ್ರೂ ಖಾಲಿ ಕೊಡ ಹಿಡಿದು ಬಂದುಬಿಟ್ಟೆ.”

ಏನ್ರೀ ನಾಯಿ ಮೂಸಿದ, ನೆಕ್ಕಿದ ವಡೆ ನನಗೆ ತಿನ್ನಿಸಿದರಾ ನೀವುಅಂತ ಸೋಮು ಹೊಟ್ಟೆ ಹಿಡ್ಕೊಂಡ, ಕೈಲಿದ್ದ ವಡೆ ಚೂರನ್ನ ತಪ್ಪಂತ ನೆಲಕ್ಕೆ ಒಗೆದ.

ನಾಯಿಯೊಂದು ಓಡಿ ಬಂದು ಅದಕ್ಕೆ ಬಾಯಿ ಹಾಕಿತು. ಮೂಸಿ ನೋಡಿ ಶ್ರೀಮತಿ ಕಡೆ ಗುರುಗುಟ್ಟುತ್ತಾ ಹೋಯಿತು. “ನಾಯಿಗೆ ಮಾತು ಬಂದಿದ್ರೆ ನಿಮಗೆ ಚನ್ನಾಗಿ ಬೆಂಡೆತ್ತಿರೋದುಅಂದ ಸೋಮು.

ನೋಡೇ ನಾನು ಮಾಡಿದ ವಡೆ ಹೇಗಿದೆ ಅಂತ ನನ್ನ ಗಂಡ ಜಂಬ ಕೊಚ್ಕೊಳ್ತಾ ಇದ್ರು. ನಾನು ನೋಡ್ರೀ ನೀವು ಮಾಡಿದ ವಡೆನ ನಾಯಿನೂ ಮೂಸಿನೋಡಲ್ಲ ಅಂತ ಅವರಿಗೆ ಛಾಲೆಂಜ್ ಮಾಡೋಣ ಅಂತಿದ್ದೆ. ಅಷ್ಟರಲ್ಲಿ ನೀವು ವಡೆ ತಿಂದುಬಿಟ್ರಿಅಂದಳು

ಶ್ರೀಮತಿ.

ಅಷ್ಟೊತ್ತಿಗೆ ನಾಯಿ ಮೂಸಿದ ವಡೆನ ಸೋಮು ತಿಂದ ಅಂತ ಬಡಾವಣೇಲಿ ಸುದ್ದಿ ಆಗಿ ಶ್ರೀಮತಿ ಗಂಡ ರಾಜುನೂ ಸೋಮು ಹೆಂಡ್ತಿ ಸೋಮಿನೂ ನಲ್ಲಿ ಬಳಿ ಬಂದರು.

ಒಂದು ಕೊಡ ನೀರು ತನ್ರೀ ಅಂದ್ರೆ ಏನ್ರೀ ಇದು ಸುಡುಗಾಡು ವಡೆ ತಿಂದ್ಕೊಂಡುಅಂದ ಸೋಮಿ ಶ್ರೀಮತಿ ಕಡೆ ಕೆಕ್ಕರಿಸಿಕೊಂಡು ನೋಡಿದಳು.

ರಾಜು ಸೋಮು ಹತ್ತಿರ ಬಂದುಗಂಡಸಿನ ದುಃಖಕ್ಕೆ ಗಂಡಸೇ ಆಗೋದು ಅನ್ನೋದನ್ನು ಇವತ್ತು ನೀವು ಸಾಬೀತುಪಡಿಸಿದಿರಿ ಸೋಮು. ನನಗೆ ನಿಮ್ಮ ಮೇಲೆ ಹೆಮ್ಮೆ. ಅಡಿಗೆಗೆ ಹೆಸರು ನಳಮಹಾರಾಜ. ಅಂಥಾ ಜಾತಿಯ ಗಂಡಸನ್ನೇ ಹೀಯಾಳಿಸಿದಳು ನನ್ನ ಹೆಂಡತಿ. ನಿಮ್ಮಿಂದಾಗಿ ನನ್ನ ಮರ್ಯಾದೆ ಉಳೀತು. ಗಂಡಸರ ಮರ್ಯಾದೆನ ಗಂಡಸರೇ ಕಾಪಾಡಬೇಕು, ಗಂಡ ಮಾಡಿದ ವಡೆ ತಿನ್ನೇ ಅಂದರೆ ಅದನ್ನು ನಾಯಿಗೆ ಹಾಕೋದಾ. ಹಾಳಾದ್ದು ನಾಯಿನೂ ನಾನು ಮಾಡಿದ ವಡೆ ತಿನ್ನದೆ ನನಗೆ ಅವಮಾನ ಮಾಡಿತು. ಆದರೆ ನೀವು, ನೀವು ಎಲ್ಲ ನಾಯಿಗಳಿಗಿಂತ ಮೇಲು, ನಾನು ಮಾಡಿದ ವಡೆ ತಿಂದು ನನ್ನ ಗೌರವ ಹೆಚ್ಚಿಸಿದಿರಿ. ಇನ್ನು ಮೇಲೆ ನಾನು ವಡೆ ಮಾಡಿದಾಗಲೆಲ್ಲಾ ನಿಮಗೆ ನಾಲ್ಕು ವಡೆ ಮೀಸಲುಅಂದರು.

ನಲ್ಲಿ ನೀರೂ ಬೇಡ ಏನೂ ಬೇಡ ನಡೀರಿ ಮನೆಗೆಅಂದು ಸೋಮು ಕೈ ಹಿಡಿದು ಎಳೆದಳು ಸೋಮಿ.

ಯಾಕೋ ವಡೆ ಅನ್ನೋ ಪದ ಕೇಳಿದ್ರೇ ಬೆವರೋ ಹಾಗಾಯಿತು ಸೋಮುಗೆ.

ರಾಜುಇನ್ನೊಂದು ಚೂರು ವಡೆ ಬಿಸಾಕ್ಬಿಟ್ಟಿದೀರಲ್ಲ ಅದನ್ನೂ ತಿಂದುಬಿಡಿ ಸೋಮುಅಂದ.

ಸೋಮಿ ಅವನ ಕಡೆ ಕೆಕ್ಕರಿಸಿಕೊಂಡು ನೋಡಿಇನ್ನೊಂದು ಸಾರಿ ವಡೆ ಅಂದ್ರೆ ನಿಮ್ಮನೇಲೇ ನಿಮ್ಮ ತಿಥಿ ವಡೆ ಮಾಡಿಸಿಬಿಡ್ತೀನಿಅಂದಳು ಸೋಮಿ. ರಾಜು ಬೆದರಿದ.

ಸೋಮುನ ಸೋಮಿ ಬಲವಂತವಾಗಿ ಎಳ್ಕೊಂಡು ಮನೆಗೆ ಬರೋಷ್ಟರಲ್ಲಿ ಸೋಮಿ ತಂದೆ ಬಂದಿದ್ದರು.

ಇದ್ಯಾಕಮ್ಮ ಅಳಿಯಂದಿರನ್ನು ಹೀಗೆ ನಾಯಿ ತರ ಎಳ್ಕೊಂಡು ಬರ್ತಿದೀಯಲ್ಲ. ನೀನು ಮುಂದೆ ಹೊರಟರೆ ಅವರು ಹಿಂದೆ ಬಂದೇ ಬರ್ತಾರಲ್ಲಅಂದರು.

ಸೋಮು ತೆಪ್ಪಗೆ ಕುರ್ಚಿಲಿ ಕೂತ.

ಸೋಮಿಅಪ್ಪಾ ಇವರು ಮಾಡೋ ಕೆಲಸ ಒಂದೊಂದಲ್ಲ. ಇವರಿಗೆ ಒಂದು ಕೆಲಸ ಹೇಳಿದರೆ ಕೆಲಸ ಬಿಟ್ಟು ಮಿಕ್ಕೆಲ್ಲ ಮಾಡಿ ನನ್ನ ಮರ್ಯಾದೆನೂ ಕಳೆದು ಬರ್ತಾರೆಅಂದಳು.

ಹೋಗ್ಲಿ ಬಿಡಮ್ಮ ಗಂಡ ಹೆಂಡ್ತಿ ಮರ್ಯಾದೇನ, ಹೆಂಡ್ತಿ ಗಂಡನ ಮರ್ಯಾದೆನ ಕಳೆಯೋದು ಇದ್ದದ್ದೇಅಂದು ಸೋಮು ಬೆನ್ನ ಮೇಲೆ ಕೈ ಹಾಕಿಗಂಡಸಾಗಿ ಹುಟ್ಟಿದ ಮೇಲೆ ಇಂಥವುಗಳನ್ನು ಅರಗಿಸಿ ಜಯಸಿ ಗಂಡಸು ಅಂತ ತೋರಿಸಿಕೊಳ್ಳಬೇಕು. ಈಗ ನಾನಿಲ್ವೇ ಹಾಗೆಎಂದು ಭುಜ ಕುಣಿಸಿ ನಕ್ಕರು.

ಅಪ್ಪಾ ಕಾಫಿ ತರ್ತೀನಿಅಂತ ಸೋಮಿ ಒಳಗೆ ಹೋಗುವುದರಲ್ಲಿದ್ದಾಗ ಸೋಮಿ ತಂದೆ ಒಂದು ನಿಮಿಷಾಮ್ಮ

ಅಂದು ತಾವು ತಂದಿದ್ದ ಚೀಲದಿಂದ ಒಂದು ಪ್ಯಾಕೆಟ್ ಹೊರತೆಗೆಯುತ್ತಾ,

ಆಂಜನೇಯನಿಗೆ ಹರಕೆ ಇತ್ತು. ಇವತ್ತು ಸೇವೆ ಮಾಡಿಸಿಕೊಂಡು ಬಂದೆ. ಪ್ರಸಾದ ಕೊಟ್ಟಿದಾರೆ. ನಿನಗೂ ಕೊಟ್ಟು ಹೋಗೋಣ ಅಂತ ಬಂದೆಅಂತ ಪ್ಯಾಕೆಟ್ ಓಪನ್ ಮಾಡಿದಾಗ ಅದರಲ್ಲಿದ್ದ ವಡೆ ಸರ ನೋಡಿ ಸೋಮು ತಲೆತಿರುಗಿ ಬಿದ್ದ.

Leave a Reply

Your email address will not be published.