ನವಪೀಳಿಗೆಗೆ ನಗಣ್ಯವಾಯಿತೇ ತುಮಕೂರಿನ ಹೆಮ್ಮೆಯ ಕಲೆ?

ಸ್ಮಾರ್ಟ್ ಸಿಟಿಆದರೆ ಸಾಲದು, ತುಮಕೂರಿನ ಯುವಜನ ಸ್ಮಾರ್ಟ್ ಆದ ಅಭಿರುಚಿ ಬೆಳೆಸಿಕೊಳ್ಳಬೇಕು! ನಾಟಕ ಆಡುವ ಸಾಮರ್ಥ್ಯ ಎಲ್ಲರಿಗೂ ಬರಲಿಕ್ಕಿಲ್ಲ, ಆದರೆ ನೋಡಲು ಅಡ್ಡಿಯೇನು?

ಏನೋ ಬೇಸರ ಅಂತ ಆಗೊಮ್ಮೆ ಈಗೊಮ್ಮೆ ಸಿನೆಮಾ ಥಿಯೇಟರಿಗೆ ಹೋಗಿ ಕುಳಿತಾಗ ಆ ಜಾಹೀರಾತಿನಲ್ಲಿ ಬರುವ ಏನಾಯಿತು ಈ ಪಟ್ಟಣಕ್ಕೆ?” ಎಂಬ ಪ್ರಶ್ನೆಯನ್ನು ನಮ್ಮ ಪಟ್ಟಣದ ಜನಕ್ಕೇ ಕೇಳುತ್ತಿದ್ದಾರೇನೋ ಎಂದೆನಿಸುತಿತ್ತು. ಆದರೆ ತಂಬಾಕಿನ ಕಾರಣಕಲ್ಲ ಎಂದಷ್ಟನ್ನೇ ಈ ಕ್ಷಣಕ್ಕೆ ಹೇಳಬಲ್ಲೆ. ಆಗೊಂದು ಕಾಲ ಇತ್ತು. ನನ್ನ ತಂದೆ ವೃತ್ತಪತ್ರಿಕೆಯನ್ನು ಓದಿ ಈ ಬಾರಿ ತುಮಕೂರಿಗರದೆ ಮೇಲುಗೈ, ಈ ಬಾರಿ ಎರಡನೇ ಸ್ಥಾನ ಅಂತೆಲ್ಲ ಹೇಳುತ್ತಿದ್ದ ನೆನೆಪು. ಇದು ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಫಲಿತಾಂಶ ಕುರಿತಾದ ಗುಡ್‌ನ್ಯೂಸ್ ಆಗಿತ್ತು. ಆದರೆ ಬರುಬರುತ್ತಾ ತುಮಕೂರು ಆ ಸ್ಥಾನದ ಪಟ್ಟಿಯಲ್ಲಿ ಹೇಳಹೆಸರಿಲ್ಲದಂತಾಗಿದೆ.

ಒಂದು ಕಾಲಕ್ಕೆ ಶೈಕ್ಷಣಿಕ ನಗರಿಎಂದು ಕರೆಸಿಕೊಳ್ಳುತ್ತಿದ್ದ ನಮ್ಮೂರಿನ ಆ ಪಟ್ಟ ಎಲ್ಲಿ ಹೋಯಿತು? ನಾವೇಕೆ ಅದನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟೆವು? ಅಖಂಡ ಕರ್ನಾಟಕವೇ ನಮ್ಮದು ಎನ್ನುವ ಅರಿವು ನನಗಿದ್ದರೂ ಸಾಂಸ್ಕೃತಿಕ ನಗರ, ಬೌದ್ಧಿಕ ನಗರ, ಉದ್ಯಾನನಗರ ಇತ್ಯಾದಿ ಪಟ್ಟ ಹೊತ್ತ ನಗರಗಳು ತಮ್ಮೂರುತನವನ್ನು ತಮ್ಮ ಜವಾಬ್ದಾರಿಯೆಂದು ತಿಳಿದು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಿರುವಾಗ ನಮ್ಮೂರಿನ ಗರಿಯೊಂದು ಕೈತಪ್ಪಿದ ನೋವು ಕಾಡುತ್ತಿದೆಯಷ್ಟೆ.

ಇಷ್ಟಾದರೂ ಅಂಕಗಳ ಲೆಕ್ಕಾಚಾರದಿಂದಾಚೆ, ನಿಜವಾದ ಅರ್ಥದಲ್ಲಿ ನಮ್ಮನ್ನು ಶಿಕ್ಷಿತರನ್ನಾಗಿ ಮಾಡುವ ಕಲೆಯೊಂದನ್ನು ನಮ್ಮೂರಿನ ಆಸ್ತಿ ಡಾ.ಗುಬ್ಬಿ ವೀರಣ್ಣನವರು ನಮಗೆ ಕೊಡುಗೆಯಾಗಿ ನೀಡಿ ಹೋಗಿರುವುದಕ್ಕೆ ನಾವು ಹೆಮ್ಮೆಪಡಬೇಕು. ಆದರೂ ಅದನ್ನು ಪೋಷಿಸುವ ನಿಟ್ಟಿನಲ್ಲಿ ನಮ್ಮ ನಡೆ ಸ್ವಲ್ಪ ಅತಿ ಎನ್ನುವಷ್ಟೇ ಚುರುಕಾಗಬೇಕು.

ನಾಟಕರತ್ನಎಂದೇ ಬಿರುದಾಂಕಿತರಾದ ಗುಬ್ಬಿ ವೀರಣ್ಣರವರು ಭಾರತದಲ್ಲಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದವರು. ಡಾ.ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಮಾಸ್ಟರ್ ಹಿರಣ್ಣಯ್ಯ ಮುಂತಾದ ಮೇರು ಕಲಾವಿದರನ್ನು ನೀಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರ ಕಾಲದಿಂದ ಇಂದಿನವರೆಗೂ ತುಮಕೂರಿನಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ನಾಟಕಗಳು ಪ್ರದರ್ಶಿತಗೊಳ್ಳುತ್ತಲೇ ಬಂದಿವೆ. ಒಂದು ಶತಮಾನದಿಂದ ಈ ಕಲೆಯು ನಮ್ಮೂರಿನಲ್ಲಿ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ ಎಂದರೆ ಅದಕ್ಕೆ ಇಲ್ಲಿನ ಕಲಾವಿದರ ನಾಟಕದ ಮೇಲಿನ ಕಾಳಜಿಯೇ ಕಾರಣ ಎಂದರೆ ತಪ್ಪಾಗಲಾರದು.

ನಾಟಕದ ಬಗೆಗಿನ ಹುಮ್ಮಸ್ಸು ಕೇವಲ ತುಮಕೂರಿಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಪ್ರದರ್ಶನಗೊಳ್ಳುವ ನಾಟಕದ ಕಲಾವಿದರು ನಮ್ಮ ನಾಡಿನ ವಿವಿಧ ಜಿಲ್ಲೆಗಳ ಸಂಸ್ಥೆಗಳಲ್ಲಿ ತರಬೇತಿ ಪಡೆದು ತಮ್ಮ ಕಲಾಚಾತುರ್ಯವನ್ನು ನಮ್ಮಲ್ಲೂ ಪ್ರದರ್ಶಿಸಿ ಹೋಗಿದ್ದಾರೆ. ಆದರೆ ಈ ಕ್ಷೇತ್ರದ ಏಳ್ಗೆಗೆ ಕಾರಣರಾದವರು ನಮ್ಮ ಜಿಲ್ಲೆಯವರೇ ಆದ್ದರಿಂದ ನಾವು ಹೆಚ್ಚು ಶ್ರಮ, ಪ್ರೀತಿ ಮತ್ತು ಕಾಳಜಿಯಿಂದ ಈ ಕಲೆಯನ್ನು ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹಲವಾರು ಸಂಸ್ಥೆಗಳು ನಾಟಕ ಕಲೆಯ ಬೆಳವಣಿಗೆಗೆ ಶ್ರಮವಹಿಸುತ್ತಿವೆ. ಅಲ್ಲೊಂದು ಇಲ್ಲೊಂದು ಎಂದು ಹುಟ್ಟಿಕೊಂಡ ಸಂಸ್ಥೆಗಳು ತಾವು ಅಭ್ಯಸಿಸಿದ ನಾಟಕವನ್ನು ತಮ್ಮ ಕೇರಿಯ ಜನರ ಮುಂದೆ ಪ್ರದರ್ಶಿಸುವುದರ ಜೊತೆಗೆ ನಗರದ ಕೇಂದ್ರಪ್ರದೇಶಕ್ಕೂ ಬಂದು ಪ್ರದರ್ಶನ ನೀಡಿ ಗಮನ ಸೆಳೆಯುತ್ತಿವೆ.

ಬೆಂಗಳೂರಿಗೆ ಹೆಚ್ಚೇನೂ ದೂರವಿಲ್ಲದ ತುಮಕೂರು ಇತ್ತೀಚೆಗಷ್ಟೇ ಬೆಳವಣಿಗೆಯ ಹಾದಿ ತುಳಿದಿರುವುದು ಆಶ್ಚರ್ಯವೆನಿಸಿದರೂ ಸತ್ಯ. ಇದಕ್ಕೆ ಕಾರಣಗಳು ಏನೇ ಇರಲಿ, ಈಗ ಆಗುತ್ತಿರುವ ಬೆಳವಣಿಗೆಯೂ ತಾಂತ್ರಿಕ ಬೆಳವಣಿಗೆಯಷ್ಟೆ. ಅದೂ ಸ್ಮಾರ್ಟ್ ಸಿಟಿಯಾಗಿ ಕಂಗೊಳಿಸುವ ಭಾಗ್ಯ ನಮ್ಮೂರಿಗೆ ಒದಗಿ ಬಂದಿರುವುದರಿಂದ. ಸಾಂಸ್ಕೃತಿಕ ಬೆಳವಣಿಗೆಯ ಕುರಿತು ಆಲೋಚಿಸುವುದಾದರೆ ಅದು ಸಂಗೀತ ಹಾಗೂ ನೃತ್ಯಕಲೆಗಳಲ್ಲಿ ಒಂದು ಮಟ್ಟಕ್ಕಿದೆಯಾದರೂ ಅದು ವ್ಯಕ್ತಿಗತ ಮಟ್ಟದಲ್ಲಿ ಮಾತ್ರ. ನಾಟಕದ ಕಲೆಯು ಸ್ವಭಾವತಃ ಸಂಘಟನೆಯನ್ನು ಬೇಡುವುದರಿಂದ ಅದು ನೀಡುವ ಖುಷಿಯೇ ಬೇರೆ. ಆದರೆ ಕಲಾವಿದರನ್ನು ಹುರಿದುಂಬಿಸಲು ಮತ್ತು ಅವರ ಕನಸುಗಳಿಗೆ ಜೀವತುಂಬಲು ತುಮಕೂರಿನ ನಾಗರಿಕರು ಇನ್ನಷ್ಟು ಆಸಕ್ತಿ ತೋರಬಹುದಿತ್ತೇನೋ ಎಂದೆನಿಸುತ್ತದೆ.

ಇದರರ್ಥ ತುಮಕೂರಿನಲ್ಲಿ ಕಲಾರಸಿಕರು ಇಲ್ಲವೇ ಇಲ್ಲ ಎಂದೇನಲ್ಲ. ಆದರೆ ಹಾಗೆ ಇರುವವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರೇ ಎಂಬುದು ಗಮನಹರಿಸಬೇಕಾದ ಅಂಶ. ಹಾಗಾದರೆ ಇಲ್ಲಿನ ಯುವಜನತೆ ಏನು ಮಾಡುತ್ತಿದೆನಾಟಕದ ಪ್ರೇಕ್ಷಕರಾಗಿ ಅವರ ಸಂಖ್ಯೆ ಏಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ? ಈ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರ ದೊರಕುವುದಿಲ್ಲವಾದರೂ ಹಲವಾರು ಕಾರಣಗಳಂತೂ ಇವೆ. ಅವರ ಒಲವು ಬೇರೆ ಕಲೆಗಳ ಕಡೆಗೆ ವಾಲಿರಬಹುದು, ಮೊಬೈಲ್ ಫೋನ್ ಎಂಬ ಸಾಧನಕ್ಕೆ ಸದಾ ಜೋತುಬಿದ್ದಿರಬಹುದು ಅಥವಾ ನಿರಂತರ ತಮ್ಮ ಬದುಕು ಕಟ್ಟಿಕೊಳ್ಳಲು ಸೆಣಸುತ್ತಿರಬಹುದು ಅಥವಾ ಇನ್ಯಾವುದೋ ಕಾರಣವೂ ಇರಬಹುದು. ಆದರೆ ಇವೆಲ್ಲಾ ಕಾರಣಗಳನ್ನು ಬದಿಗೊತ್ತಿ ನಾಟಕ ಕಲೆಯ ಬಗ್ಗೆ ಜ್ಞಾನ ಹೊಂದುವುದು ತುಮಕೂರಿನ ಮಟ್ಟಿಗಾದರೂ ಅನಿವಾರ್ಯವೆನಿಸುತ್ತದೆ.

ನಾಟಕ ಕಲೆಗೆ ಅದರದ್ದೇ ಆದ ವೈಶಿಷ್ಟ್ಯ ಮತ್ತು ಇತಿಹಾಸ ಇದೆ. ಧಾರಾವಾಹಿ, ಸಿನೆಮಾದಂತಹ ಕಲೆಗಳು ಮುಖ್ಯವೇ. ಆದರೆ ಯಾವುದೇ ಪರದೆಯನ್ನು ಒಡ್ಡದೆ ಪ್ರೇಕ್ಷಕನ ಮುಂದೆ ನಿಲ್ಲುವ ನಾಟಕದ ಕಲಾವಿದರು ಬೀರುವ ಪ್ರಭಾವದಲ್ಲಿ ಒಂದು ರೀತಿಯ ಜೀವಂತಿಕೆಯಿರುತ್ತದೆ. ಇಲ್ಲಿ ಪ್ರೇಕ್ಷಕ ಮತ್ತು ಕಲಾವಿದನ ನಡುವೆ ನೇರ ಅನುಸಂಧಾನವಿರುತ್ತದೆ. ಕೆಲವೊಮ್ಮೆ ಕಲಾವಿದರೊಂದಿಗೆ ಚರ್ಚೆಯೂ ನಡೆಯುತ್ತದೆ. ಹಾಗೆಯೇ ಪೌರಾಣಿಕ, ಐತಿಹಾಸಿಕ, ಸಮಕಾಲೀನ ನಾಟಕಗಳು ತನ್ನದೇ ಆದ ವಿಶೇಷತೆಗಳನ್ನೊಳಗೊಂಡಿರುತ್ತವೆ. ನಾಟಕಗಳಿಗೆ ಪ್ರತ್ಯೇಕ ಪ್ರೇಕ್ಷಕ ವರ್ಗ ಇರಬೇಕಾಗಿಲ್ಲ. ಎಲ್ಲರೂ ಎಲ್ಲವನ್ನೂ ಅವರದ್ದೇ ರೀತಿಯಲ್ಲಿ ಸವಿಯಬಹುದು. ಕೆಲವು ನಾಟಕಗಳು (ನಿರ್ದಿಷ್ಟವಾಗಿ ಅಸಂಗತ ನಾಟಕಗಳು) ಕೊನೆಯವರೆಗೂ ಏನೂ ಅರ್ಥವಾಗದಂತೆ ಕಂಡರೂ ಒಂದು ರೀತಿಯಲ್ಲಿ ಮಜಾ ಕೊಟ್ಟಿರುತ್ತದೆ ಇಲ್ಲವಾದರೆ ಚಿಂತನೆಗೆ ಹಚ್ಚಿರುತ್ತದೆ.

ತಿಂಗಳುಗಳ ಹಿಂದೆ ಟ್ರಾನ್ಸ್ ನೇಷನ್ಎಂಬ ಸಮಕಾಲೀನ ನಾಟಕವನ್ನು ಇಲ್ಲಿಯ ಬಾಲಭವನದಲ್ಲಿ ಪ್ರದರ್ಶಿಸಲಾಗಿತ್ತು. ಅದು ಪ್ರೇಕ್ಷಕರನ್ನೂ ಸಹ ನಾಟಕದ ಭಾಗವಾಗಿಸಿಬಿಟ್ಟಿತ್ತು. ಎಷ್ಟರ ಮಟ್ಟಿಗೆಂದರೆ ಕೆಲವು ಹಿರಿಯ ನಾಗರಿಕರು ನಾಟಕ ಶುರುವೇ ಆಗಿಲ್ಲವೆಂದು ತಿಳಿದು ನಾಟಕ ಆರಂಭಗೊಂಡ ಹತ್ತು ನಿಮಿಷದ ನಂತರವೂ ಬೇಗ ನಾಟಕ ಶುರುಮಾಡ್ರಪ್ಪಾಅಂತ ಕುಳಿತಲ್ಲಿಂದಲೇ ಜೋರು ಮಾಡಿದ್ದರು. ಆ ಮುಗ್ಧತೆಗೆ, ನೆರೆದ ಜನರು ನಗುವಿನಲ್ಲೇ ಉತ್ತರಿಸಿದರು. ರಕ್ಕಸತಂಗಡಿ’, ‘ಕೃಷ್ಣ ಸಂಧಾನ’, ‘ಡೈನೋ ಏಕಾಂಗಿ ಪಯಣ’, ‘ಅರವಿಂದ ಮಾಲಗತ್ತಿ ಆತ್ಮಕಥೆ ಆಧಾರಿತ ನಾಟಕ’, ‘ಬೆಂದಕಾಳೂರು ಆನ್ ಟೋಸ್ಟ್’, ‘ಮಾದರಿ ಮಾದಯ್ಯ’ –ಅಬ್ಬಾ! ಒಂದಕ್ಕಿಂತ ಒಂದು ವಿಭಿನ್ನ. ಈ ವಿಭಿನ್ನತೆ ನಾವು ದಿನವೂ ಮನೆಯಲ್ಲಿ ಕುಳಿತು ನೋಡುವ ಧಾರಾವಾಹಿಗಳಲ್ಲಿ ದೊರಕೀತೇ?

ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಕನ್ನಡ ಭವನ, ನಾಟಕ ಮನೆ, ಸಮತಾ ಥಿಯೇಟರ್, ಢಮರುಗ, ಮುಂತಾದ ಕಡೆಗಳಲ್ಲಿ ಆಗಾಗ ರಂಗಭೂಮಿ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅದಕ್ಕಾಗಿಯೇ ಮೀಸಲೆಂಬಂತೆ ರಂಗಾಯಣವೊಂದು ಇದ್ದರೆ ಚೆಂದ ಎಂಬ ಹಂಬಲ ತುಮಕೂರಿನ ರಂಗಪ್ರೇಮಿಗಳದ್ದು. ಈ ಕಾರಣಕ್ಕೆ ಇಲ್ಲಿನ ಶಾಸಕರಲ್ಲಿ ಮನವಿಯನ್ನೂ ಸಲ್ಲಿಸಲಾಗಿದೆ. ನಿರಂತರವಾಗಿ ನಾಟಕಗಳ ಪ್ರದರ್ಶನವೂ ಆಗುತ್ತಿದೆ. ಐದು ವರ್ಷಗಳಿಂದೀಚೆಗಂತೂ ಈ ಸಂಖ್ಯೆಯಲ್ಲಿ ಬಹಳ ಏರಿಕೆ ಕಂಡಿದೆ. ಸಾಲದೆಂಬಂತೆ ತಾವು ಕಷ್ಟಪಟ್ಟು ಕಲಿತ ನಾಟಕವನ್ನು ಕಲಾವಿದರು ನಮ್ಮ ಮುಂದೆ ಪುಕ್ಕಟೆಯಾಗಿ ಪ್ರದರ್ಶಿಸುತ್ತಾರೆ! ಇದು ಕಲೆಯ ಮೇಲಿನ ಕಾಳಜಿಯಲ್ಲದೆ ಮತ್ತೇನು? ಇಷ್ಟಾದರೂ ಏಕೆ ನಮ್ಮ ಯುವಜನತೆ ತಮ್ಮ ಚಿತ್ತವನ್ನು ಇತ್ತ ಹರಿಸಬಾರದು? ಕೇವಲ ತಾಂತ್ರಿಕತೆಯ ಕೈಗೊಂಬೆಯಾಗದೆ ನಮ್ಮಲ್ಲಿರುವ ಸಾಂಸ್ಕೃತಿಕ ಮನಸ್ಸನ್ನು ಜಾಗೃತಗೊಳಿಸಿದರೆ ಅವರು ಪಡುತ್ತಿರುವ ಶ್ರಮ ಸಾರ್ಥಕವೆನಿಸುವುದು.

ಯಾವ ಕಲೆಯ ಶ್ರಮಕ್ಕೆ ಆಗಲಿ ತಕ್ಕ ಪ್ರತಿಫಲ ದೊರೆಯುವುದು ಪ್ರೇಕ್ಷಕನ ಚಪ್ಪಾಳೆಯ ದನಿ ಕಲಾವಿದನ ಕಿವಿಗಳನ್ನು ಮುಟ್ಟಿದಾಗ. ಇಷ್ಟೆಲ್ಲಾ ಪ್ರಯತ್ನಗಳು ಕಲಾವಿದರ ಮತ್ತು ಸಂಸ್ಥೆಗಳ ವತಿಯಿಂದ ನಡೆಯುತ್ತಿರುವಾಗ ಅವರ ಜೊತೆಗೂಡಿ ಚಪ್ಪಾಳೆ ತಟ್ಟುವಷ್ಟು ಉತ್ಸಾಹವನ್ನಾದರೂ ಪ್ರೇಕ್ಷಕರಾದ ನಾವು ತೋರಲೇಬೇಕೆನಿಸುತ್ತದೆ. ಯುವಜನತೆ ತಾನಾಯಿತು, ತನ್ನ ಕೆಲಸವಾಯಿತು ಎಂದಷ್ಟೇ ಯೋಚಿಸದೆ ನಾವು, ನಮ್ಮೂರು ಎಂಬ ಒಲವು ಮೂಡಿಸಿಕೊಂಡು ಇಲ್ಲಿನ ಕಲೆಯ ಬಗ್ಗೆ ಗೀಳು ಹುಟ್ಟಿಸಿಕೊಂಡರೆ ನಮ್ಮ ಹಿರಿಯರು ನಮ್ಮದೆಂದು ಕಾಪಾಡಿಕೊಂಡು ಬಂದಿರುವ ಕಲೆಯನ್ನು ಬೆಳೆಸಿಕೊಂಡು ಹೋಗಬಹುದು.

ನಾಟಕ ನೋಡುವಾಗ ಪ್ರೇಕ್ಷಕನು ಮಹತ್ತರವಾದ ಪಾತ್ರವಹಿಸುತ್ತಾನೆ. ಯಾರು ಬೇಕಾದರೂ ನಾಟಕವನ್ನು ನೋಡಬಹುದಾದರೂ ಅದರ ಬಗ್ಗೆಯೇ ಓದಿ ತಿಳಿದುಕೊಂಡ ಸಾಹಿತ್ಯದ ವಿದ್ಯಾರ್ಥಿಗಳು ಇದರತ್ತ ಹೆಚ್ಚು ಗಮನ ಹರಿಸಬೇಕು. ಅವರು ನೋಡಿದ ನಾಟಕವನ್ನು ವಿಮರ್ಶಿಸುವಂತಾಗಬೇಕು. ಬಲವಂತವಾಗಿ ಯಾವ ಕಲೆಯ ಬಗ್ಗೆಯೂ ಆಸಕ್ತಿ ಹುಟ್ಟಿಸಲು ಸಾಧ್ಯವಿಲ್ಲ. ಆದರೆ ನಮ್ಮದೇ ಆದ ಆಸ್ತಿಯನ್ನು ಉಳಿಸಿಕೊಳ್ಳಲು ಅದರ ಬಗ್ಗೆ ಅರಿವು ಮೂಡಿಸುವ ಕೆಲಸವಂತೂ ಆಗಲೇಬೇಕಿದೆ.

ಸಿಟಿ ಸ್ಮಾರ್ಟ್ ಆದರೆ ಸಾಲದು, ನಮ್ಮ ತುಮಕೂರಿನ ಯುವಜನ ಸ್ಮಾರ್ಟ್ ಆದ ಅಭಿರುಚಿ ಬೆಳೆಸಿಕೊಳ್ಳಬೇಕು. ನಾಟಕ ಆಡುವ ಸಾಮರ್ಥ್ಯ ಎಲ್ಲರಿಗೂ ಬರಲಿಕ್ಕಿಲ್ಲ, ಆದರೆ ನೋಡಲು ಇರುವ ಅಡ್ಡಿಗಳನ್ನು ನಾವೇ ತೊಡೆದುಹಾಕೋಣ. ಏಕೆಂದರೆ, ಈ ಕಲೆಯನ್ನು ಎಂದೆಂದಿಗೂ ಜೀವಂತವಾಗಿಡುವುದು ಎಲ್ಲಾ ತುಮಕೂರಿಗರ, ಅದರಲ್ಲೂ ಯುವಜನತೆಯ ಕರ್ತವ್ಯ. ಈಗಂತೂ ಇಡೀ ಜಗತ್ತನ್ನೇ ಅಲುಗಾಡಿಸಿರುವ ಕರೋನಾ ಗ್ರಹಣ ನಮ್ಮೂರಿನ ಕಲೆಯನ್ನೇನು ಬಿಟ್ಟಿಲ್ಲ. ಆದರೆ ಇದೇ ಸಮಯವನ್ನು ಕಲೆಯ ಪುನರುಜ್ಜೀವನಕ್ಕೆ ಬಳಸಬೇಕಿದೆ. ಪ್ರದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಂಡಿರಬಹುದು. ಮತ್ತೆ ಕಲಾವಿದರು ವೇದಿಕೆಯೇರುವ ಹೊತ್ತಿಗೆ ಅವರಿಗೆ ಪ್ರೇಕ್ಷಕರ ಕಡೆಯಿಂದ ಹಿತವಾದ ಅಚ್ಚರಿಯೊಂದು ಕಾದಿರುವಂತಾಗಲಿ.

 

*ಲೇಖಕಿ ತುಮಕೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ಪುಸ್ತಕಗಳ ಓದು, ಲೇಖನ ಬರೆಯುವುದು ಹವ್ಯಾಸ.

 

Leave a Reply

Your email address will not be published.