ನವವೀರ ಕವಿ ರಚಿಸಿದ ಕೋಡಗದ ಮಾರಯ್ಯನ ಚರಿತ್ರೆ

ಈ ಕಾವ್ಯ ಮೇಲ್ನೋಟಕ್ಕೆ ಸಾಂಪ್ರದಾಯಿಕ ಪುರಾಣದಂತಿದೆ. ಪುರಾಣಾಂಶ ಆ ಕಾಲದ ಕಾವ್ಯ ಶೈಲಿ. ಅದನ್ನು ಬಿಟ್ಟು ಒಳಾರ್ಥದಲ್ಲಿ ನಿಜಚರಿತ್ರೆಯನ್ನಷ್ಟೇ ಓದಿಕೊಂಡರೆ ಶರಣಯುಗದ ಆದರ್ಶಗಳ ಅನಾವರಣವಾಗುತ್ತದೆ.

ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ರೂಪುಪಡೆದ ವಚನ ಸಾಹಿತ್ಯ ಚಳವಳಿಯು ತನ್ನ ಪ್ರಗತಿಪರ ಧೋರಣೆಯಿಂದ ಹಲವು ವೃತ್ತಿಪರ ಕಾಯಕ ಜೀವಿಗಳ ಮಹಾ ಸಂಗಮವಾಗಿತ್ತೆಂಬುದು ವಿಶೇಷ. ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ನವೋದಯದ ಕಾಲವಾಗಿತ್ತು. ಧರ್ಮವೂ ಕೂಡ ಈ ಕಾಲಮಾನದಲ್ಲಿ ಬದುಕಿನ ಮಾನವೀಕರಣದ ಭಾಗವಾಗಿತ್ತು.

ಈ ಎಲ್ಲ ವಿದ್ಯಮಾನಗಳ ಕೇಂದ್ರ ಕಲ್ಯಾಣ, ಕೇಂದ್ರದ ಶಕ್ತಿ ಮತ್ತು ಬೆಳಕು ಬಸವಣ್ಣ. ಬೌದ್ಧಿಕ ಕ್ರಾಂತಿ, ಸಮಾನತೆಯ ಮಂತ್ರದ ಏಕಸಂಸ್ಕೃತಿಯ ನಿಜವಾದ ಬಹುತ್ವದ ಆದರ್ಶ ನಾಯಕನಾಗಿದ್ದ ಬಸವಣ್ಣನವರನ್ನು ನೋಡಲು ಅಸಂಖ್ಯಾತ ಶಿವಶರಣರು ಮತ್ತು ಶ್ರೀಸಾಮಾನ್ಯರು ಬಂದರು. ಬಂದು ನೋಡಿದಷ್ಟೇ ಅಲ್ಲ, ಅವರ ಪ್ರಭಾವದಿಂದ ಚಳವಳಿಯ ಸಕ್ರಿಯ ಕಾರ್ಯಕರ್ತರಾಗಿ ಸಾಹಿತ್ಯ ರಚನೆ, ಸತ್ಯಶುದ್ಧ ಕಾಯಕದಲ್ಲಿ ನಿರತರಾಗಿ ತಾವೂ ಆದರ್ಶ ಶರಣರಾಗಿ ಬಾಳಿದರು. ಅಂಥವರಲ್ಲಿ ಕೋಡಗದ ಮಾರಯ್ಯನೆಂಬ ಶರಣನೂ ಒಬ್ಬ.

ಕೋಡಗದ ಮಾರಯ್ಯ ಬಸವಣ್ಣನವರ ಪ್ರಭಾವಕ್ಕೊಳಗಾಗಿ ಆತನ ದರ್ಶನ ಮಾಡಲೇಬೇಕೆಂದು ಕಲ್ಯಾಣಕ್ಕೆ ಬರುತ್ತಾನೆ. ಅಂತಹ ಒಂದು ರೋಚಕ ಕತೆಯನ್ನು ಕ್ರಿ.ಶ. 16ನೇ ಶತಮಾನದಲ್ಲಿ ನವವೀರನೆಂಬ ಕವಿಯು ಬರೆದಿದ್ದಾನೆ. ನವವೀರ ಕವಿಯು ಕೋಡಗದ ಮಾರಯ್ಯನ ಚರಿತ್ರೆಯನ್ನು ಬರೆಯುವ ಮೂಲಕ ಕಲ್ಯಾಣದಲ್ಲಿದ್ದ ನಿಜ ಕಾಯಕ ಜೀವಿಯೊಬ್ಬನ ಆದರ್ಶಗಳನ್ನು ಪ್ರಪಂಚಕ್ಕೆ ಮಾದರಿಯೆಂಬಂತೆ ಚಿತ್ರಿಸಿದ್ದು ವಿಶೇಷ. ಕೋಡಗದ ಮಾರಯ್ಯ ಒಬ್ಬ ಸಾಮಾನ್ಯ ಭಕ್ತ. ಈ ಸಾಮಾನ್ಯನ ಕುರಿತು ಪಂಚಯ್ಯನೆಂಬ ಕವಿ ಭಕ್ತಿರಸದ ಸೋನೆ; ಕುಮಾರ ಚೆನ್ನಬಸವನೆಂಬ ಕವಿ ಪುರಾತನ ಚರಿತೆ; ಗುರುರಾಜ ಚಾರಿತ್ರ್ಯವೆಂಬ ಮೂರು ಕಾವ್ಯಗಳಲ್ಲಿ ಮುಖ್ಯಕತೆಯಾಗಿ ಬಂದಿದೆ. ಈ ಕಥೆಯನ್ನಾಧರಿಸಿಯೇ ನವವೀರನೆಂಬ 16ನೇ ಶತಮಾನದ ಕವಿ ಕೋಡಗದ ಮಾರಯ್ಯನ ಕುರಿತು ಇಡಿಯಾದ ಕಾವ್ಯವನ್ನೇ ಬರೆದು ಆತನ ವ್ಯಕ್ತಿತ್ವವನ್ನು ಸಾರಿ ಹೇಳಿದನು.

ಶರಣ ಸಮೂಹದಲ್ಲಿ ಕಾಯಕದಲ್ಲಿ ಭೇದವಿಲ್ಲ, ಮೇಲು-ಕೀಳಿಲ್ಲ. ಯಾವ ಕೆಲಸವಾದರೂ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಬೇಕು. ಮತ್ತು ಬಂದ ಆದಾಯದ ಕೊಂಚ ಭಾಗವನ್ನು ಪ್ರಸಾದಕ್ಕೆ, ದಾಸೋಹಕ್ಕೆ ವಿನಿಯೋಗಿಸಲೇ ಬೇಕು. ಇದೇ ಬಸವಣ್ಣ ರೂಪಿಸಿದ ಆರ್ಥಿಕ ಸಮಾನತಾ ತತ್ವ, ಸಮಾಜವಾದ, ಕಾರ್ಮಿಕ ಕಲ್ಯಾಣದ ಮೂಲ ಸಿದ್ಧಾಂತ. ಮಾಡುವ ಕಾಯಕ ಯಾವುದೇ ಇರಲಿ ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಆಸನ, ಸಮಾನ ಗೌರವ, ಸಮ ಚಿಂತನೆ. ಹನ್ನೆರಡನೇ ಶತಮಾನದಲ್ಲಿಯೇ ವೃತ್ತಿಯ ಅಸಮಾನತೆಯನ್ನು ಹೋಗಲಾಡಿಸಿದ ಬಸವಾದಿ ಪ್ರಮಥರ ಚಿಂತನಾ ಕ್ರಮದ ಹೆಗ್ಗುರುತಾಗಿ ಕೋಡಗದ ಮಾರಯ್ಯನ ಚರಿತ್ರೆಯಿದೆ. ಈ ಕಾವ್ಯ ಮೇಲ್ನೋಟಕ್ಕೆ ಸಾಂಪ್ರದಾಯಿಕ ಪುರಾಣದಂತಿದೆ. ಪುರಾಣಾಂಶ ಆ ಕಾಲದ ಕಾವ್ಯ ಶೈಲಿ. ಅದನ್ನು ಬಿಟ್ಟು ಒಳಾರ್ಥದಲ್ಲಿ ನಿಜಚರಿತ್ರೆಯನ್ನಷ್ಟೇ ಓದಿಕೊಂಡರೆ ಶರಣಯುಗದ ಆದರ್ಶಗಳ ಅನಾವರಣವಾಗುತ್ತದೆ.

ಶಿವನಿಗೆ ಬೇಕಾದ ಹೂ ತಂದುಕೊಡುವ ಮಾಲೆಗಾರನ ಹೆಸರು ಗೋರಾಂಟ. ಒಂದು ದಿನ ಗೋರಾಂಟ ಭೂಮಿಯ ಕಡೆ ಪ್ರಯಾಣ ಬೆಳೆಸಿದನು. ದಾರಿಯಲ್ಲಿ ಇವನಿಗೆ ಮಹಾಮುನಿಯೆಂಬ ಹೆಸರಿನ ತಪಸ್ವಿ ಭೇಟಿಯಾದ. ತಪಸ್ವಿಯು ಗೋರಾಂಟನನ್ನು ಎಲ್ಲಿಗೆ ಹೋಗುತ್ತಿರುವುದಾಗಿ ಪ್ರಶ್ನಿಸಿದ. ಭೂ ಲೋಕದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಸರಾದ ಬಸವಣ್ಣ ಮತ್ತು ಸಕಲ ಶರಣರನ್ನು ನೋಡಲು ಹೋಗುವೆನೆಂದು ಹೇಳಿದ. ಈ ಸುದ್ದಿ ಕೇಳಿ ಮಹಾಮುನಿಗೆ ಆನಂದವಾಯಿತು. ಭೂಮಿಯಿಂದ ಮತ್ತೆ ಬರುವಾಗ ಅಲ್ಲಿನ ವಿಚಾರಧಾರೆಗಳನ್ನು ತಿಳಿಸಬೇಕೆಂದು ಗೋರಾಂಟನಿಗೆ ವಿನಂತಿಸಿದ. ಒಪ್ಪಿದ ಗೋರಾಂಟ ಅಲ್ಲಿಂದ ಕಲ್ಯಾಣ ನಗರಕ್ಕೆ ಬಂದು ಬಸವಣ್ಣನವರ ಅರಮನೆಯೊಳಗೆ ಸೇರಿಕೊಂಡನು.

ಬಸವಣ್ಣ ತನ್ನ ಅರಮನೆಯಲ್ಲಿ ಶಿವಕಥೆ ಪುರಾಣವನ್ನು ಕೇಳುತ್ತಾ ಕುಳಿತಿರಲಾಗಿ, ಬಸವ ದರ್ಶನಕ್ಕೆ ಬಂದ ಗೋರಾಂಟನಿಗೆ ಎಲ್ಲಾ ಶಿವಶರಣರನ್ನು ನೋಡುವ ಮನಸಾಯಿತು. ಆ ಕೂಡಲೇ ಗೋರಾಂಟ ಕೋಡಗ ಭಾವು ಆಗಿ ಬಸವಣ್ಣನ ಬೆನ್ನಿನಲ್ಲಿ ಸೇರಿಕೊಂಡ. ಕೂಡಲೇ ಬಸವಣ್ಣ ಅಸ್ವಸ್ಥನಾಗಿ ಮಲಗಿದ. ಈ ಸುದ್ದಿ ಕಲ್ಯಾಣದ ತುಂಬ ಹರಡಿತು. ಎಲ್ಲ ಶರಣರು ಅಣ್ಣನವರನ್ನು ನೋಡಲು ಧಾವಿಸಿದರು. ಇವರನ್ನೆಲ್ಲಾ ಒಂದೇ ಸಲ ನೋಡಿ ಧನ್ಯತೆ ಭಾವಗೊಂಡ ಗೋರಾಂಟ ಬೆನ್ನಿನಿಂದ ಹೊರಗೆ ಬಂದ. ಆಗ ಬಸವಣ್ಣನ ಆರೋಗ್ಯ ಚೆನ್ನಾಗಿ ಆಯಿತು. ನಡೆದ ಸಂಗತಿಯನ್ನು ವಿವರಿಸಿದ ಗೋರಾಂಟನು ಶರಣರ ಕ್ಷಮೆಯಾಚಿಸಿ, ತಾನು ಶಿವನ ಮಾಲೆಗಾರನೆಂದು ಪರಿಚಯಿಸಿಕೊಂಡ. ತಮ್ಮನ್ನೆಲ್ಲಾ ನೋಡಲು ಬಂದ ಗೋರಾಂಟನ ಬಗ್ಗೆ ಗೌರವ ಮೂಡಿ ಸಂತೋಷಪಟ್ಟರು. ಕೆಲವು ಕಾಲ ಕಲ್ಯಾಣದಲ್ಲಿಯೇ ಇರಬೇಕೆಂದು ಶರಣ ಸಂಕುಲ ಕೇಳಲಾಗಿ, ಗೋರಾಂಟ ತನ್ನ ಕಾಯಕ ಶಿವನಿಗೆ ಹೂ ತರುವುದು. ತಪ್ಪಿಸಿದರೆ ಶಿವ ಕೋಪಗೊಂಬನೆAದು ಹೇಳಿ ಬಸವಣ್ಣನ ಅನುಮತಿ ಪಡೆದು ಕೈಲಾಸದ ಕಡೆ ಮರಳಿದ.

ಕೈಲಾಸಕ್ಕೆ ಮರಳುವಾಗ ಮಹಾಮುನಿಯ ನೆನಪಾಯಿತು. ಅಲ್ಲಿಗೆ ಬಂದು ನಿಂತುಕೊಂಡ. ಬಸವಣ್ಣ ಮತ್ತು ಸಕಲ ಶರಣರ ಬಗೆಗೆ ತಪಸ್ವಿ ವಿಚಾರಿಸಿದ. ತಾನು ಎಲ್ಲ ಶರಣರನ್ನು ಒಂದೇ ಬಾರಿಗೆ ನೋಡಿದೆನೆಂದು ಗೋರಾಂಟ ಉತ್ಸುಕನಾಗಿ ಹೇಳಿದ. ಹೇಗೆ ಸಾಧ್ಯವಾಯಿತೆಂದು ತಪಸ್ವಿ ಕೇಳಲಾಗಿ, ಬಸವಣ್ಣನ ಬೆನ್ನಿನೊಳಗೆ ಕೋಡಗ ಭಾವು ಆಗಿ ನುಸುಳಿ ಅನಾರೋಗ್ಯವಾಗುವಂತೆ ಮಾಡಿ ಎಲ್ಲ ಶರಣರನ್ನು ಬರುವಂತೆ ಮಾಡಿದೆ ಎಂದ. ಬಸವಣ್ಣನಿಗೆ ಅನಾರೋಗ್ಯ ಮಾಡಿದ ಸುದ್ದಿ ಕೇಳಿ ಮಹಾಮುನಿಗೆ ಸಿಟ್ಟು ಬಂತು. ಉಗ್ರ ಕೋಪದಿಂದ ಗೋರಾಂಟ ನೀನು ಭೂ ಲೋಕದಲ್ಲಿ ಕೋಡಗನಾಗಿ ಜನಿಸೆಂದು ಶಾಪ ಕೊಟ್ಟನು. ಗೋರಾಂಟ ಈ ಶಾಪದಿಂದಲೇ ಕೋಡಗನಾಗಿ ಭೂಮಿಯಲ್ಲಿ ಹುಟ್ಟಿದನು. ಅದು ಕಲ್ಯಾಣ ಪಟ್ಟಣದಲ್ಲಿ.

ಒಂದು ದಿನ ಶಿವನ ದರ್ಶನಕ್ಕೆಂದು ಮುನಿಗಳೆಲ್ಲಾ ಕೈಲಾಸಕ್ಕೆ ಹೊರಡುತ್ತಿದ್ದರು. ಶಿವನ ಮಾಲೆಗಾರ ಗೋರಾಂಟಿಯ ವಿಷಯ ಎಲ್ಲಿ ಶಿವನಿಗೆ ಗೊತ್ತಾಗುತ್ತದೋ ಎಂಬ ಭಯ ಮಹಾಮುನಿಗೆ. ಈ ವಿಷಯ ನಾರದನಿಗೆ ತಿಳಿದಿತ್ತು. ಹೀಗಾಗಿ ಶಿವನಿಗೆ ಹೇಳಬಾರದೆಂದು, ತನ್ನ ತಪಸ್ಸಿನ ಅರ್ಧ ಶಕ್ತಿ ಕೊಡುವೆನೆಂದೂ ಮಹಾಮುನಿ ನಾರದಮುನಿಯಲ್ಲಿ ಪ್ರಾರ್ಥಿಸಿದನು. ಮುನಿಗಳೆಲ್ಲಾ ಶಿವನ ಕಾಣಲು ಬಂದರು. ಅವರನ್ನು ಕುರಿತು ಶಿವ ಮಾತಾಡುತ್ತಾ ತನ್ನ ಆಪ್ತ ಮಾಲೆಗಾರ ಗೋರಾಂಟ ಕಾಣೆಯಾಗಿದ್ದಾನೆ. ಎಲ್ಲಿಯಾದರೂ ನೋಡಿದ್ದೀರಾ ಎನ್ನುತ್ತಿದ್ದಂತೆ ನಾರದ, ಮಹಾಮುನಿ ನೀಡಿದ ಶಾಪದಿಂದ ಕೋಡಗನಾಗಿ ಜನಿಸಿದ ವಿಷಯ ಹೇಳಿಯೇ ಬಿಡುತ್ತಾನೆ. ಆಗ ಶಿವನೂ ಉಗ್ರವಾದ ಕೋಪದಿಂದ ಮಹಾಮುನಿಗೆ ಶಾಪ ನೀಡುತ್ತಾ ನೀನೂ ಭೂಲೋಕದಲ್ಲಿ ಕೋತಿಯಾಡಿಸುವವನಾಗಿ ಜನಿಸಿ, ಬಸವಣ್ಣನವರಿಂದ ಶಾಪ ವಿಮೋಚನೆ ಪಡೆದು ಮರಳಿ ಕೈಲಾಸಕ್ಕೆ ಬಾ ಎಂದು ಕಳಿಸಿದನು.

ಮುಂದೆ ಕಲ್ಯಾಣ ಪಟ್ಟಣದ ಒಕ್ಕಲಿಗ ಕುಲದ ಭೈರಗೌಡ ಮತ್ತು ನಾಗಮ್ಮನವರ ಹೊಟ್ಟೆಯಲ್ಲಿ ಮಹಾಮುನಿಯು ಜನಿಸಿದನು. ಆ ದಂಪತಿ ಮಗನಿಗೆ ಮಾರಣ್ಣನೆಂಬ ಹೆಸರಿಟ್ಟರು. ಮುಂದೆ ಅವನು ದೊಡ್ಡವನಾದ ಮೇಲೆ ಮಾರಯ್ಯನಾದ. ಕಲ್ಯಾಣ ರಾಜ್ಯದಲ್ಲಿ ಒಂದು ದಿನ ಬಿಜ್ಜಳನ ಎದುರಲ್ಲಿ ಮಾರಯ್ಯನೆಂಬ ಯುವಕ ತೇಜಸ್ಸು, ಹೊಳಪಿನಿಂದ ನಿಂತಿದ್ದ. ಅದನ್ನು ಕಂಡ ಬಿಜ್ಜಳರಾಜ ಅವನನ್ನು ಕರೆಸಿಕೊಂಡನು. ಅಲ್ಲದೇ ಅವನ ತಂದೆ-ತಾಯಿ ಹಿನ್ನಲೆ ವಿಚಾರಿಸಿ, 6000 ಕೋಲುಕಾರರಿಗೆ ಅಧಿಪತಿಯನ್ನಾಗಿ ನೇಮಕ ಮಾಡಿದನು. ಹೀಗೆ ನಿಷ್ಠಯಿಂದ ಮಾರಯ್ಯ ಸೇವೆ ಸಲ್ಲಿಸುತ್ತಿದ್ದನು.

ಬಿಜ್ಜಳರಾಜ ಒಂದು ದಿನ ಮಾರಯ್ಯನನ್ನು ಕರೆದು, ಶರಣ ಬಸವಣ್ಣನನ್ನು ಕರೆದುಕೊಂಡು ಬರುವಂತೆ ಆದೇಶಿಸಿದನು. ಬಸವಣ್ಣನವರಿದ್ದ ಮನೆಗೆ ಬರಲಾಗಿ ಅಲ್ಲಿ ಜನಸಮೂಹ ತುಂಬಿದ್ದ ಗಲಿಬಿಲಿ ನೋಡಿದ. ಅಲ್ಲಿ ಶಿವಪಠಣದಿಂದ ಶಬ್ದ ತೇಜಸ್ಸು ತುಂಬಿತ್ತು. ಅದನ್ನು ಕೇಳುತ್ತಾ ಮಾರಯ್ಯ ತಾನು ಬಂದ ಕೆಲಸವನ್ನೇ ಮರೆತ. ಕಂಬದ ಮರೆಯಲ್ಲಿ ನಿಂತುಕೊಂಡನು. ಇದನ್ನು ಒಬ್ಬ ಶರಣ ನೋಡಿ ಎಲ್ಲರಿಗೂ ತಿಳಿಸಿದ. ಆತನನ್ನು ಕರೆದು ವಿಚಾರಿಸಿದರು. ಬಂದ ವಿಷಯ ಹೇಳಿದ. ಅಂತೆಯೇ ತನಗೆ ಲಿಂಗದೀಕ್ಷೆ ಕೊಡಬೇಕೆಂದು ವಿನಂತಿಸಿದನು. ಲಿಂಗದೀಕ್ಷೆಯೂ ಆಯಿತು. ಮಾರಯ್ಯನಿಗೆ ಯಾವ ಕಾಯಕ ಕೊಡಬೇಕೆಂಬ ಚರ್ಚೆ ನಡೆಯಿತು. ಅಷ್ಟೊತ್ತಿಗಾಗಲೇ ಎಲ್ಲ ಕಾಯಕಗಳನ್ನು ಹಂಚಲಾಗಿತ್ತು. ಆಗ ಶರಣರು ಅವನಿಗೆ ಕೋತಿ ಆಡಿಸುವ ಕಾಯಕ ನೀಡಿದರು. ಮಹಾಮುನಿಯಿಂದ ಶಪಿತನಾಗಿ ಕೋತಿಯಾಗಿ ಜನಿಸಿದ ಗೋರಾಂಟ ಕಲ್ಯಾಣದ ಶಿವಾಲಯದಲ್ಲಿಯೇ ಕೋತಿಯಾಗಿತ್ತು. ಈ ಕೋತಿ ಶ್ರೀಮಂತರು ಬೆಣ್ಣೆಕೊಟ್ಟರೂ ತಿನ್ನುವುದಿಲ್ಲ. ಕಾಯಕ, ಶ್ರಮದಿಂದ ದುಡಿದು ಸುಣ್ಣಕೊಟ್ಟರೂ ತಿನ್ನುತ್ತದೆ. ಇಂಥ ಕೋತಿಯನ್ನು ಆಡಿಸಿ ಬಂದ ಹಣವನ್ನು ದಾಸೋಹಕ್ಕೆ ಕೊಡಬೇಕೆಂದು ಮಾರಯ್ಯನಿಗೆ ತಿಳಿಸಲಾಯಿತು.

ಬಸವಣ್ಣನನ್ನು ಕರೆಯಲು ಹೋದ ಮಾರಯ್ಯ ಬಾರದಿದ್ದಾಗ ಬಿಜ್ಜಳ ಮಂಚಣ್ಣನನ್ನು ಕರೆದು ಮಾರಯ್ಯನ ವಿಷಯ ತಿಳಿದುಕೊಳ್ಳಲು ಕಳಿಸಿದನು. ಮಂಚಣ್ಣ ಬಸವನರಮನೆಗೆ ಬಂದು ನೋಡಿ, ಮಾರಯ್ಯನಿಗೆ ಲಿಂಗದೀಕ್ಷೆ ಮಾಡಿ ಕೆಡಿಸಿದ್ದಾರೆಂದು ನೂರುಸುಳ್ಳು ಸೇರಿಸಿ ಬಿಜ್ಜಳನಿಗೆ ತಿಳಿಸಿದ. ಕೋಪಗೊಂಡ ಬಿಜ್ಜಳ ಕುದುರೆಯನ್ನೇರಿ ಬಸವಣ್ಣನಿದ್ದಲ್ಲಿಗೆ ಬಂದನು. ತಂದೆ ತಾಯಿಗಳನ್ನು ವಿಚಾರಿಸದೇ ಮಾರಯ್ಯನಿಗೆ ಲಿಂಗದೀಕ್ಷೆ ಮಾಡಿದ್ದು ತಪ್ಪು ಎಂದು ವಾದಿಸಿದನು. ಮಾರಯ್ಯನನ್ನು ತನ್ನೊಂದಿಗೆ ಬರಬೇಕೆಂದು ಬಿಜ್ಜಳ ಕರೆದನು. ಇದಕ್ಕೆ ಮಾರಯ್ಯ ಸುತಾರಾಂ ಒಪ್ಪಲಿಲ್ಲ. ಬಿಜ್ಜಳ ನಿರಾಸೆಯಿಂದ ತನ್ನ ಅರಮನೆಗೆ ಬಂದನು.

ಲಿಂಗದೀಕ್ಷೆಗೊಂಡು ಕಾಯಕತತ್ವವನ್ನಳವಡಿಸಿಕೊಂಡ ಮಾರಯ್ಯ ಕೋಡಗವನ್ನು ಆಡಿಸುತ್ತಾ ಅದರಿಂದ ಬಂದ ಹಣದಿಂದ ಶರಣ ಸಮೂಹಕ್ಕೆ ಪ್ರಸಾದ ಏರ್ಪಾಡು ಮಾಡುತ್ತಿದ್ದನು. ಹೀಗಿರುವಾಗ ಒಂದು ದಿನ ಕೋಡಗವನ್ನಾಡಿಸುತ್ತಾ ಮಾರಯ್ಯನು ಅದೇ ಕಲ್ಯಾಣದ ವಾಸಿಯಾಗಿದ್ದ ಕೇಶಿದಂಡನಾಥನೆಂಬುವನ ಮನೆಯ ಮುಂದೆ ನಿಂತನು. ಮಾರಯ್ಯನ ಕೋಡಗದ ಆಟವನ್ನು ನೋಡಿದ ಕೇಶಿದಂಡನಾಥನು ಶರಣರಿಗೆ ಈ ಕಾಯಕ ಸಲ್ಲದು. ಈ ಕೆಲಸ ಮಾಡಲೇಬಾರದೆಂದು ಮಾರಯ್ಯನ ಕೈಯಲ್ಲಿದ್ದ ಕೋಡಗವನ್ನು ಬಡಿದೋಡಿಸಿದನು.

ಮಾರಯ್ಯ ದಿಗ್ಭ್ರಾಂತನಾಗಿ ಏನೂ ತೋಚದೆ ತನ್ನ ಕೊರಳಿನ ಲಿಂಗಕ್ಕೆ ದಾರಕಟ್ಟಿ ಕುಣಿಸಲಾರಂಭಿಸಿದನು. ಮಾರಯ್ಯನ ಈ ಆಟದಿಂದ ಕಲ್ಯಾಣದಲ್ಲಿರುವ ಎಲ್ಲ ಶರಣರ ಲಿಂಗಗಳು ಕುಣಿಯಲಾರಂಭಿಸಿದವು. ಇಂತಹ ವೈಚಿತ್ರö್ಯವನ್ನು ಅರಿಯದ ಶರಣರೆಲ್ಲರೂ ಬಸವಣ್ಣನವರ ಮನೆಗೆ ಧಾವಿಸಿ ಬಂದರು. ನಡೆದ ವಿಚಾರವನ್ನೆಲ್ಲಾ ಅಣ್ಣಬಸವಣ್ಣ ಶರಣರಿಗೆ ಹೇಳಿದನು. ಕೇಶಿದಂಡನಾಥನನ್ನು ಶರಣರು ಕರೆಸಿ ಮಾಡಿದ ತಪ್ಪಿಗೆ ದಂಡಿಸಿದರು. ಶರಣರ ಮಾತಿಗೆ ಬೆಲೆ ನೀಡಿ ಕೇಶಿರಾಜ ಓಡಿಸಿದ ಕೋಡಗವನ್ನು ತರಿಸಿಕೊಟ್ಟನು. ಅಷ್ಟರಲ್ಲಿ ಗೋರಂಟ ಮತ್ತು ಮಹಾಮುನಿಗಳ ಶಾಪ ಮುಗಿಯುತ್ತಿತ್ತು. ಕೊನೆಗೆ ಅವರನ್ನು ಶಿವಪಾರ್ವತಿಯರು ಕೈಲಾಸಕ್ಕೆ ಕರೆದೊಯ್ದರು. ಇಷ್ಟು ಕಥೆ.

ಇಂತಹ ಪೌರಾಣಿಕ ಕಥಾಹಂದರದೊಳಗೆ ಐತಿಹಾಸಿಕವಾದ ಗಟ್ಟಿಯಾದ ಎಳೆಗಳಿವೆಯೆಂಬುದು ಮುಖ್ಯ. ಮಾರಯ್ಯನಿಗೆ ಹಂಚಿಕೆಯಾದ ಕಾಯಕ ಕೋತಿ ಆಡಿಸುವುದು. ಇದು ಹೀನಾಯ ಕೆಲಸವೆಂದು ಕೇಶಿದಂಡನಾಥ ಹಳಿಯುತ್ತಾನೆ. ಆದರೆ ದುಡಿಮೆಯ ಮೇಲುಕೀಳನ್ನು ನಿರಾಕರಿಸಿದ ಶರಣಗಣ ಸರ್ವಸಮ್ಮತವಾಗಿ ಅವನ ಕಾಯಕವನ್ನು ಒಪ್ಪುತ್ತಾರೆ. ವೃತ್ತಿಯ ಈ ಅಸಮಾನತೆಯನ್ನು ಸಾಮಾಜಿಕವಾಗಿ ಇನ್ನಿಲ್ಲದಂತೆ ಮಾಡಬೇಕೆಂಬ ಮಹದಾಶಯ ಶರಣಮಾರ್ಗದಲ್ಲಿತ್ತು. ಇದು ಜಾಗತಿಕ ಸಿದ್ಧಾಂತ. ಆಧುನಿಕ ಕಾಲದಲ್ಲಿ ಕಾರ್ಲ್ಮಾರ್ಕ್ಸ್, ಲೆನಿನ್‌ರ ಕೂಲಿ-ಕಾರ್ಮಿಕ ಸಿದ್ಧಾಂತಗಳೂ ಇದನ್ನು ಮಂಡಿಸುತ್ತವೆ.

ಹನ್ನೆರಡನೆಯ ಶತಮಾನದಲ್ಲಿಯೇ ಕನ್ನಡನಾಡಿನ ಪ್ರದೇಶದಲ್ಲಿ ಈ ಸೈದ್ಧಾಂತಿಕ ಆಲೋಚನಾ ಕ್ರಮ ಕೇವಲ ಥಿಯರಿಯಾಗಿ ಇರದೇ ಜೀವನದಲ್ಲಿ ಪ್ರಾಮಾಣಿಕವಾಗಿ ಮಾಡಿ ತೋರಿಸಿದರು ಶರಣ ಸಂಕುಲ. ವೃತ್ತಿಯಲ್ಲಿ ಕನಿಷ್ಠತಮ ಪ್ರಜ್ಞೆ ಮಾಡುವವನಿಗೆ ಇರಬಾರದು. ಅಂತೆಯೇ ನೋಡುವವರಿಗೂ ಇರಬಾರದು. ವೃತ್ತಿ ಅಥವಾ ಕಾಯಕವೇ ಶರಣ ಪಂಥದ ಮೋಕ್ಷದ ನೆಲೆ. ವೃತ್ತಿಯ ಗೌರವಕ್ಕಾಗಿಯೇ ನವವೀರ ಕವಿ ಹಲವು ನೆಲೆಗಳಲ್ಲಿ ಕೋಡಗದ ಮಾರಯ್ಯನ ವ್ಯಕ್ತಿತ್ವವನ್ನು ಈ ಕಾವ್ಯದಲ್ಲಿ ರೂಪಿಸಿದ್ದಾನೆ. ಕೇಶಿದಂಡನಾಥ ಕೋಡಗವನ್ನು ಓಡಿಸಿದಾಗ, ಪಂಚಯ್ಯಕವಿ ಭಕ್ತಿರಸದ ಸೋನೆಯೆಂಬ ಕಾವ್ಯದಲ್ಲಿ ನವವೀರನಿಗಿಂತ ಗಂಭೀರವಾಗಿ ಬರೆಯುತ್ತಾನೆ:

                        ಮಾರಯ್ಯಲಿಂಗಕೆ ದಾರವ ಕಟ್ಟುತ

                        ಧಾರಿಣಿಗಿಇಟ್ಟು ಕುಣಿಸಲು

                        ವಾರುಧಿಕುದಿದವು ಮೇರುಪರ್ವತವೇಳು

                        ಹಾರಾಡಿದವು ಚಂಡಿನಂತೆ

                        ಆಡುಲಿಂಗವೇ ಕುಣಿದಾಡುಲಿಂಗವೇ

                        ನಲಿದಾಡು ಲಿಂಗವೇ ಮುನ್ನಿನಂತೆ

                        ಬೇಡಿ ನೀ ಶರಣರ ನೀಡು ಜಂಗಮಕೆಂದು

                        ಆಡಿಸಿದನು ಮಾರಯ್ಯ.

ಎಂಬ ಮಾತುಗಳಲ್ಲಿ ಮಾರಯ್ಯನ ಲಿಂಗದಾಟದ ಕೆಚ್ಚಿಗೆ ಭೂಮಿ ಬೆಟ್ಟಗಳು ನಡುಗಿ ಕುದಿಯುತ್ತಿದ್ದವೆಂಬ ಮಾತುಗಳು ವರ್ಣನಾ ಪ್ರಧಾನವಾದರೂ ಕಾಯಕದ ಮಹತ್ವವನ್ನು ಸಾರಲು ಬಳಸಿಕೊಂಡ ತೀವ್ರತೆಯ ಮಾತುಗಳಷ್ಟೇ. ಜಂಗಮದ ಹಸಿವನ್ನು ನೀಗಿಸಲು ಲಿಂಗವನ್ನೇ ಆಡಿಸಿದ ಮಾರಯ್ಯನ ಜೀವಪರ ಮಾನವೀಯ ನಿಲುವು ಅತ್ಯಂತ ಮುಖ್ಯವಾದದ್ದು. ಈತನ ನಿಜ ಕಾಯಕವ ಅರಿತ ಬಸವಣ್ಣ ಮಾರಯ್ಯನಿಗೆ-

 ಬಸವದಂಡೇಶನು ಹೊಸಗದ್ದುಗೆಯನ್ನಿತ್ತು

  ಮಸುಕಿ ಮಾರಯ್ಯಗಳಿಗೆರಗಿ

ನಮಸ್ಕರಿಸುವ ಪರಿಯಿದೆಯಲ್ಲಾ ಇದು ವೃತ್ತಿಯ ಸಮಾನ ನೆಲೆಯ ಪರಮೋಚ್ಚ ಪಟ್ಟ. ಕೂಲಿಯ ಮಾರಯ್ಯ ಶೀಲ, ಸಮಯಾಚಾರ, ಅವನು ನಿರ್ವಂಚಕ ಭಕ್ತ. ಗುರು ಬಸವೇಶನ ಚರಣವನ್ನು ನಂಬಿದ ಮಾರಯ್ಯನನ್ನೆ ಹೊಸ ಗದ್ದುಗೆಗೆ ಕೂಡಿಸಿ ಪೂಜಿಸುವ ಅಂತಿಮ ನೆಲೆಯೇ ಜಾತ್ಯಾತೀತ-ವರ್ಗಾತೀತ ಭಾವ. ಈ ಕಾಯಕ ಜೀವಿಗಳ ಅಸ್ಪೃಶ್ಯತೆಯನ್ನು ನಿವಾರಿಸುವುದೇ ಈ ಕಾವ್ಯದ ಮೂಲ ಆಶಯ. ಆಧುನಿಕ ಕಾಲದಲ್ಲಿಯೂ ನಮ್ಮ ಸಾಹಿತ್ಯಿಕ ಪಠ್ಯಗಳು ಇಂತಹ ರಚನೆಗಳನ್ನು ಮಾಡಿವೆ.

ಕುವೆಂಪು ಅವರು ಜಲಗಾರ ನಾಟಕದಲ್ಲಿ ಪೌರಕಾರ್ಮಿಕನೊಬ್ಬನ ನಿಜಕಾಯಕದಲ್ಲಿಯೇ ಶಿವನನ್ನು ಕಾಣುವ ವಸ್ತು ವಿಷಯವನ್ನು ಕೇಂದ್ರ ಆಶಯವನ್ನಾಗಿಟ್ಟು ಬರೆದಿದ್ದಾರೆ. ಜಲಗಾರ ನಿಜವಾಗಲೂ ಜಾತ್ರೆಗೆ ಹೋಗದೆ ಊರು ಸ್ವಚ್ಛಗೊಳಿಸುವುದರಲ್ಲಿ ನಿರತನಾಗಿರುತ್ತಾನೆ. ಶಿವನೇ ಜಲಗಾರನ ಬಳಿಬಂದು ನೀನು ಜಗದ ಜಲಗಾರನೆಂದು ಹೇಳಿ ದರ್ಶನವನ್ನು ಕೊಡುವ ಪಠ್ಯಕ್ಕೂ 16ನೇ ಶತಮಾನದಲ್ಲಿ ನವವೀರ ಕವಿ ಬರೆದ ಕೋಡಗದ ಮಾರಯ್ಯನ ಕಥೆಗೂ ಒಂದು ಆಂತರಿಕ ಸಾಮ್ಯ ಸಂಬಂಧವಿದೆ. ಕೋತಿಯಾಡಿಸುವ ಮಾರಯ್ಯನಿಗೆ ಶಿವನೊಲುಮೆ ಸಿಗುತ್ತದೆ. ಬಸವಾದಿ ಶರಣರು ನಂಬಿದ ಈ ಸ್ವಾವಲಂಬಿ ಸುಸ್ಥಿರ ಬದುಕಿನ ಆರ್ಥಿಕ ನೀತಿಯು ಎಲ್ಲ ಕಾಲದ ಬೆಳಕುಯೆಂಬುದನ್ನು ನವವೀರ ಕವಿಯ ಈ ಕಾವ್ಯ ಹೇಳುತ್ತದೆ.

*ಲೇಖಕರು ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರು.

Leave a Reply

Your email address will not be published.