ನವೆಂಬರ್ ಅಂದರೆ…

ತೀರಾ ಕಟ್ಟುನಿಟ್ಟಾಗಿ ನೋಡುವುದಾದರೆ ನವೆಂಬರ್ ಅಂದರೆ ಪ್ರತೀ ವರ್ಷ ಕ್ಯಾಲೆಂಡರಿನಲ್ಲಿ ತೆರೆದುಕೊಳ್ಳುವ ಒಂದು ತಿಂಗಳು,  ಅಷ್ಠೆ ಆದರೆ ಕರ್ನಾಟಕದ ಮಟ್ಟಿಗೆ ಅದು ಅಷ್ಠೆ ಅಲ್ಲ; ಸರ್ಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುವ ತವಕ, ಹೋರಾಟಗಾರರಿಗೆ ಹಣ ಸಂಗ್ರಹಣೆಯ ತರಾತುರಿ, ನೌಕರರಿಗೆ ರಜೆಯ ಸಂಭ್ರಮ, ಪತ್ರಿಕೆಗಳಿಗೆ ಸಾಂದರ್ಭಿಕ ಲೇಖನ-ಸಂದರ್ಶನ ಹೊಂದಿಸುವ ಹೊಣೆ, ಭಾಷಣಕಾರರಿಗೆ ಬಹುಬೇಡಿಕೆ, ಬಾವುಟ ಮಾರಾಟಗಾರರಿಗೆ ಹೊಟ್ಟೆಯ ಪಾಡು… ಹೀಗೆ ಕನ್ನಡ ರಾಜ್ಯೋತ್ಸವ ಅಂದರೆ, ನವೆಂಬರ್ ಬಂದರೆ ಕನ್ನಡದ ಮನಗಳು ನಾನಾ ನಮೂನೆಗಳಲ್ಲಿ ಗರಿಕೆದರಿ ನರ್ತಿಸುವ ನವಿಲು. ಆದರೆ ಅಬ್ಬರ, ಆಡಂಬರದ ಆಚರಣೆಯಲ್ಲಿ ಅರ್ಥವಂತಿಕೆಯ ಕಣ್ಮರೆ.

ಸಮಾಜಮುಖಿ ಮಟ್ಟಿಗೆ ನವೆಂಬರ್ ಅಂದರೆ ಇಂತಹ ಚರ್ವಿತಚರ್ವಣ ವಾರ್ಷಿಕ ವಿಧಿಗಳಿಗೆ ಹೊರತಾದ ಹೊಣೆಗಾರಿಕೆ. 2017ರ ನವೆಂಬರ್ ಮಾಸದಲ್ಲಿ ಹೊರತಂದ ಸಮಾಜಮುಖಿ ಪ್ರಾಯೋಗಿಕ ಸಂಚಿಕೆಯ ಮುಖ್ಯಚರ್ಚೆಯ ವಿಷಯ ‘ಕನ್ನಡದ ಮನಸ್ಸಿಗೆ ಬೀಗ ಬಿದ್ದಿದೆಯೇ?’ ಎಂಬುದಾಗಿತ್ತು. ಅದರಲ್ಲಿ ಪ್ರಕಟವಾದ ಎನ್. ಎಸ್.ಗುಂಡೂರ ಅವರ ಲೇಖನದ ಆಶಯ: ‘ಕನ್ನಡ-ಇಂಗ್ಲಿಶ್‍ನ ಈಗಿನ ನಮ್ಮ ಸಂದರ್ಭವನ್ನು ಗಮನಿಸಿದರೆ ಕನ್ನಡಕ್ಕೆ ಇನ್ನೊಂದು ಕವಿರಾಜಮಾರ್ಗ ಬೇಕೆನಿಸುತ್ತದೆ. ಅಂದರೆ ಇಂದು ಯಾರೋ ಒಬ್ಬ ವಿದ್ವಾಂಸ ಕವಿರಾಜಮಾರ್ಗದಂತಹ ಕೃತಿಯನ್ನು ರಚಿಸಬೇಕೆಂದು ಇದರ ಅರ್ಥವಲ್ಲ. ಕನ್ನಡವನ್ನು ಕಟ್ಟುವುದರ ಬಗ್ಗೆ ಮಾರ್ಗಕಾರನಿಗಿದ್ದ ವೈಚಾರಿಕ ಕಾಳಜಿಯನ್ನು ಇಂದು ನಮ್ಮ ನಡುವೆ ಪಸರಿಸಬೇಕಾಗಿದೆ. ಹಾಗಾಗಿ ಇಂದು ಕನ್ನಡ ಕಟ್ಟುವ ಪ್ರಯತ್ನಗಳು ಕವಿರಾಜಮಾರ್ಗದ ಪ್ರಜ್ಞೆಯನ್ನು ಮತ್ತೆ ನೆನಪಿಸಿಕೊಳ್ಳುಬೇಕು’.

‘ಕನ್ನಡಿಗರಿಗೆ ಕನ್ನಡಿಯೂ, ದೀಪವೂ ಆಗುವ ಬಯಕೆ’ ಹೊತ್ತು ಹೊರಟಿರುವ ಸಮಾಜಮುಖಿ ಬಳಗ ಕನ್ನಡದ ಮನಸ್ಸಿಗೆ ಬಿದ್ದಿರುವ ಬೀಗ ತೆರವುಗೊಳಿಸಲು, ಕಳೆದುಹೋದ ಬೀಗದಕೈ ಹುಡುಕಲು, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಕಟ್ಟಲು, ನಿಮ್ಮಂತಹ ಸಮಾನ ಮನಸ್ಕರ ಸಹಯೋಗದಲ್ಲಿ ಹೆಣಗುತ್ತಿದೆ. ಇದು ನವೆಂಬರ್ ತಿಂಗಳಲ್ಲಿ ರಾತ್ರೋರಾತ್ರಿ ಎದ್ದುನಿಲ್ಲುವ ಪೆಂಡಾಲು, ಬಿಗಿಯುವ ಭಾಷಣ, ಹಂಚುವ ಪ್ರಶಸ್ತಿಯಂತಲ್ಲ; ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನಿರಂತರ ಕದಲುವ ಕ್ರಿಯೆ ಎಂಬ ಅರಿವು ನಮಗಿದೆ.

ಅಂತೆಯೇ ನವೆಂಬರ್ ಅಂದರೆ…

ಕನ್ನಡಿ ಒಡೆಯದಂತೆ, ದೀಪ ಆರದಂತೆ, ಕನ್ನಡದ ಬುದ್ಧಿಯ ಬೀಗ ತೆರೆಯುವಂತೆ, ಸಿದ್ಧಾಂತಗಳನ್ನು ಮೀರುವಂತೆ ನಮ್ಮ ನಡೆನುಡಿಗಳನ್ನು ಪಳಗಿಸಲು ಪಣತೊಡುವ ಅವಕಾಶ; ನಮ್ಮ ಧ್ಯೇಯೋದ್ದೇಶಗಳು ಮರೆಯಾಗದಂತೆ ಪುನಃ ಮನನ ಮಾಡಿಕೊಳ್ಳುವ ಸಂದರ್ಭ.

ಕನ್ನಡದ ಮನಸ್ಸುಗಳನ್ನು ಭಾವನಾತ್ಮಕ ಪರಿಧಿಯಾಚೆಗೆ ವಿಸ್ತರಿಸಿ, ಜಾಗತಿಕ ಮಟ್ಟದ ಬೌದ್ಧಿಕತೆಗೆ ತೆರೆಸುವ ಸಮಾಜಮುಖಿಯ ಮೂಲ ಕಾಯಕದ ಮುಂದುವರೆದ ಭಾಗವಾಗಿ ಈ ಸಂಚಿಕೆಯಲ್ಲಿ ಕನ್ನಡ ಕಟ್ಟುವ ಹೊಸ ಜಮಾನಾದ ಕಾರ್ಮಿಕರ ತಲಾಶ್ ನಡೆಸಿದ್ದೇವೆ. ಈ ಶೋಧಕಾರ್ಯದಲ್ಲಿ ನಿಬ್ಬೆರಗುಗೊಳಿಸುವಂತಹ ಆಲೋಚನೆಗಳನ್ನು, ವಿಭಿನ್ನ ವೃತ್ತಿಹಿನ್ನೆಲೆಯ ಬರಹಗಾರರನ್ನು, ತಮ್ಮದೇ ರೀತಿಯಲ್ಲಿ ಕನ್ನಡಿಗರನ್ನು ತಲುಪುತ್ತಿರುವ ಪ್ರತಿಭೆಗಳನ್ನು ಬೆಳಕಿಗೆ ತರಲು ಸಾಧ್ಯವಾಗಿದೆ.

ಒಳಗಿನ ಪುಟಗಳ ಹೂರಣ ಓದುಗರ ‘ಬೌದ್ಧಿಕ ಆವರಣದಲ್ಲಿ ಹರಡಲಿ, ಭೌತಿಕ ನೆಲೆಯಲ್ಲಿ ಕ್ರಿಯೆಗಿಳಿಯಲಿ’ ಎಂಬುದು ನಮ್ಮ ಆಶಯ, ಮೃದು ಆಗ್ರಹ ಕೂಡ.

-ಸಂಪಾದಕ

Leave a Reply

Your email address will not be published.