ನಾನಿರುವೆ… ಕೆಂಪಿರುವೆ !

- ಸಿದ್ಧರಾಮ ಹಿರೇಮಠ

– ಸಿದ್ಧರಾಮ ಹಿರೇಮಠ

ಇತ್ತೀಚೆಗೆ ಮನೆಯಲ್ಲಿ ಸಣ್ಣ ಕೆಂಪಿರುವೆಗಳ ಹಾವಳಿ ಜಾಸ್ತಿಯಾಗಿತ್ತು. ಎಲ್ಲಿ ಸ್ವಲ್ಪ ಆಹಾರ ಪದಾರ್ಥ ಚೆಲ್ಲಿದರೂ ಯಾವ ಮಾಯೆಯೆಂದಲೋ ಕರೆಯದೇ ಬರುವ ಅತಿಥಿಗಳಂತೆ ಹಾಜರಾಗಿಬಿಡುತ್ತಿದ್ದವು. ತಮ್ಮ ಪಾಡಿಗೆ ತಾವು ಆಹಾರ ತಿಂದುಕೊಂಡು ಹೋದರೆ ಸರಿ, ಆದರೆ ಕೆಲವೊಮ್ಮೆ ಉರಿಯುವ ರೀತಿಯಲ್ಲಿ  ಚೊಟ್ ಎಂದು ಕಚ್ಚಿ ತಮ್ಮ ಶೌರ್ಯ ತೋರಿಸಿಬಿಡುತ್ತಿದ್ದವು.

ಕಂಪೌಂಡಿನಲ್ಲಿಯೇ ಪುಟ್ಟ ಗಿಡಗಳಿರುವುದರಿಂದಲೂ, ಮಣ್ಣಿನೊಳಗೆ ಇವು ಸೇರಿಕೊಂಡಿರುವುದರಿಂದಲೂ ಇವುಗಳ ಸಂಖ್ಯೆ ಹೆಚ್ಚಾಗಿಬಿಟ್ಟಿದೆಯೇನೋ ಅನಿಸುತ್ತಿದೆ. ನಾನು ಹೊರಗೆ ಮೆಟ್ಟಿಲಿಳಿದು ಸ್ವಲ್ಪ ಹೊತ್ತು ನಿಂತರೆ ಸಾಕು ಅದೆಲ್ಲಿಂದಲೋ ಪಾದವನ್ನೇರಿ ನಾನಿರುವೆ ಎಂಬಂತೆ ಕಚ್ಚಿಬಿಡುವವು. ಆಗ ನೋಡಿಕೊಂಡಾಗಲೇ ಗೊತ್ತಾಗುವುದು ಕೆಂಪಿರುವೆಗಳಿವೆ ಎಂದು.

ದೊಡ್ಡ ಗಾತ್ರದ ಕಪ್ಪು ಇರುವೆಗಳಿಗಿಂತಲೂ ಈ ಪುಟ್ಟ ಕೆಂಪಿರುವೆಗಳು ಹೆಚ್ಚು ಆಕ್ರಮಣಕಾರಿ ಎನಿಸುತ್ತದೆ. ಎಷ್ಟೋ ಬಾರಿ ದೊಡ್ಡ ಕೊಂಡಿ ಇರುವ ಕಪ್ಪಿರುವೆಗಳು ಕಾಡಿನಲ್ಲಿ ನನ್ನ ಕಾಲು, ಮೈಮೇಲೇರಿದ್ದರೂ ತೆಪ್ಪಗೆ ಇಳಿದುಹೋಗುತ್ತವೆ. ಆದರೆ ಈ ಸಣ್ಣ ಕೆಂಪಿರುವೆಗಳಿವೆಯಲ್ಲ, ಎಲ್ಲಿದ್ದರೂ ನಾವಿದ್ದೇವೆ ಎಂಬ ಘೋಷವಾಕ್ಯದೊಂದಿಗೆ ಕಚ್ಚಿಯೇ ತಮ್ಮ ಅಸ್ತಿತ್ವವನ್ನು ಸಾರುತ್ತವೆಯೇನೋ.

ನಮ್ಮ ಮನೆಯಲ್ಲಿ ಕೆಂಪಿರುವೆಗಳಿಗೂ ಮನೆಯಾಕೆಗೂ ಸದಾ ಯುದ್ಧ. ಅವುಗಳ ಹಾವಳಿಯಿಂದಾಗಿ ಮನೆಯಲ್ಲಿ ಯಾವ ತಿಂಡಿ, ತಿನಿಸುಗಳನ್ನೂ ಹೊರಗಿಡದೇ ಕಳ್ಳರ ರೀತಿಯಲ್ಲಿ ಬಚ್ಚಿಡಬೇಕಾಗಿದೆ. ಅದಾವ ಮಾಯೆಯಿಂದಲೋ ಅವುಗಳಿಗೆ ತಿಂಡಿಗಳ ಪತ್ತೆಯಾಗಿ ಹಾಯಾಗಿ ಹಿಂಡುಗಟ್ಟಲೆ ಬಂದು ಕುಳಿತು ತಿನ್ನಲು ಸುರುಮಾಡುವವು. ನೋಡ ನೋಡುವುದರಲ್ಲಿಯೇ ಬ್ರೆಡ್‍ಗಳು, ಬಿಸ್ಕಿಟ್‍ಗಳು ಅಸ್ಥಿಪಂಜರದಂತಾಗಿಬಿಡುವವು.

ಇಷ್ಟೆಲ್ಲ ಹಿನ್ನೆಲೆಯನ್ನು ಹೇಳಲು ಕಾರಣವಿದೆ. ಇತ್ತೀಚೆಗೆ ನಾನು ಮನೆಯ ಕಂಪೌಂಡ್ ಮೇಲಿನ ಪುಟ್ಟ ಗಾತ್ರದ ಕಲ್ಲೊಂದನ್ನು ತೆಗೆದು ಆಚೆ ಬಿಸಾಡೋಣ ಎಂದು ಎತ್ತಿದರೆ ಅದರಡಿಯಲ್ಲಿಯೇ ಈ ಕೆಂಪಿರುವೆಗಳು ತಮ್ಮ ಇಡೀ ಕುಟುಂಬವರ್ಗದೊಂದಿಗೆ ಚಟುವಟಿಕೆಯಲ್ಲಿ ನಿರತವಾಗಿವೆ. ಅದೊಂದು ದೊಡ್ಡ ಸಮೂಹ.  ಪೂರ್ತಿಯಾಗಿ ಚಟುವಟಿಕೆ ನಿರತವಾಗಿರುವ ಕೆಂಪಿರುವೆಗಳು, ಅವುಗಳ ಜೊತೆಯಲ್ಲಿಯೇ ಇನ್ನೂ ಭ್ರೂಣಾವಸ್ಥೆಯಲ್ಲಿರುವ ಮೊಟ್ಟೆಗಳೊಳಗಿನ ಮರಿ ಇರುವೆಗಳು, ಮೊಟ್ಟೆ ಕವಚದಿಂದ ಹೊರಬಂದು ಪೂರ್ಣ ಬೆಳೆದ ಸ್ಥಿತಿಯಲ್ಲಿರುವ ಇರುವೆಗಳು, ಅದೊಂದು ದೊಡ್ಡ ಲೋಕ. ನೋಡನೋಡುತ್ತಲೇ ನಾನೂ ಇರುವೆಯಂತಾಗಿ ಅವುಗಳಲ್ಲೊಂದಾಗಿಬಿಟ್ಟೆನೇನೋ ಎಂಬ ಭ್ರಮೆ ಉಂಟುಮಾಡುವಂಥ ಸನ್ನಿವೇಶ.

ಇಡೀ ದೇಹ ಹಳದಿಮಿಶ್ರಿತ ಕೆಂಪು, ಬಾಲದ ಭಾಗ ಮಾತ್ರ ಕಪ್ಪು, ತಲೆಯ ಭಾಗದಲ್ಲಿ ಎರಡು ಕೊಂಡಿಗಳು, ಪುಟ್ಟ ಕಪ್ಪು ಕಣ್ಣುಗಳು, ತಮ್ಮದೊಡ್ದ ಹುರಿಮೀಸೆಗಳನ್ನು ಮೇಲೆ ಕೆಳಗೆ ಮಾಡುತ್ತ ಕೆಂಪಿರುವೆಗಳು ಅಡ್ಡಾಡುತ್ತಿದ್ದವು. ಮರಿಗಳನ್ನು ಜೋಪಾನ ಮಾಡುವ, ಅವುಗಳಿಗೆ ಆಹಾರ ನೀಡುವ, ಮೊಟ್ಟೆಗಳ ಜವಾಬ್ದಾರಿ ಹೊತ್ತ ಕೆಂಪಿರುವೆಗಳು, ನಾನು ಕಲ್ಲನ್ನು ನಿಧಾನವಾಗಿ ಪಕ್ಕಕ್ಕೆ ಸರಿಸಿದ್ದರೂ ಅವುಗಳೇನೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ತಮ್ಮ ಚಟುವಟಿಕೆಯಲ್ಲೇ ಅವು ನಿರತವಾಗಿದ್ದವು. ಕೆಲವು ಇರುವೆಗಳು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂದರೂ ಯಾವುದೇ ತೊಂದರೆ ಕಂಡುಬರದ ಕಾರಣ ಅವೂ ಸುಮ್ಮನಾದವು. ನಾನು ನಿಧಾನವಾಗಿ ಕೆಮರಾದಿಂದ ಪೋಟೋಗಳನು ಕ್ಲಿಕ್ ಮಾಡಿದೆ. ಲೆನ್ಸ್‍ನ್ನು ಹತ್ತಿರ ಒಯ್ದಾಗ ಮಾತ್ರ ಕೆಲವು ಇರುವೆಗಳು ಕುತೂಹಲದಿಂದೆಂಬಂತೆ ಲೆನ್ಸ್ ಸಮೀಪ ಬಂದು ಮೀಸೆ ಅಲ್ಲಾಡಿಸಿ ಮತ್ತೆ ಮರಳಿ ಹೋದವು. ಇಷ್ಟನ್ನು ಹೊರತುಪಡಿಸಿದರೆ ಮತ್ತಾವ ಸಮಸ್ಯೆಯೂ ಆಗಲಿಲ್ಲ.

ಎಲ್ಲ ಮುಗಿದ ಮೇಲೆ ಅವುಗಳ ಕುಟುಂಬವನ್ನು ನಾನ್ಯಾಕೆ ಕೆಡಿಸಲಿ ಎಂದು ನಿಧಾನವಾಗಿ ಕಲ್ಲನ್ನು ಅವುಗಳಿಗೆ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿರಿಸಿ, ನಿಟ್ಟುಸಿರುಬಿಟ್ಟೆ.

ಎಂಥ ಅದ್ಭುತ, ಇರುವೆಗಳ ಜಗತ್ತು. ಒಮ್ಮೆ ಅವುಗಳೊಂದಿಗೆ ತಿರುಗಾಡಿ ಹೊರಬಂದಂತಾಯ್ತು. ನಿಮ್ಮ ಮನೆಯಲ್ಲಿಯೂ ಇರುವೆಗಳಿದ್ದರೆ ಪರಿಶೀಲಿಸಿ, ಇಂತಹ ಅದ್ಭುತಗಳು ಕಾಣಬಹುದು.