ನಾನು ಫಿನ್ನಿಶ್ ಭಾಷೆ ಕಲಿತದ್ದು!

ಅದೇಕೋ ಮೂರ್ನಾಲ್ಕು ಕ್ಲಾಸುಗಳು ಮುಗಿಯುವ ಹೊತ್ತಿಗೆ ಆ ಅಪರಿಚಿತ ಭಾಷೆಯ ಮೇಲೆ ನನಗಂತೂ ಏನೋ ಅಕ್ಕರೆ ಹುಟ್ಟಿಬಿಟ್ಟಿತು. ವಾರಕ್ಕೆ ಮೂರು ದಿನ ಮಾತ್ರ ಕ್ಲಾಸು ಎಂದು ಟೈಮ್ ಟೇಬಲ್ ಕೊಟ್ಟುಬಿಟ್ಟಿದ್ದರು. ಹಾಗಾಗಿ ಮಂಗಳವಾರ, ಗುರುವಾರ, ಶುಕ್ರವಾರಗಳಿಗಾಗಿ ಚಾತಕಪಕ್ಷಿಯಂತೆ ಕಾದು ಕೂತಿರುತ್ತಿದ್ದೆ.

ಪ್ರತಿಬಾರಿಯಂತೆ ಈ ಸಲವೂ ಫಿನ್ಲೆಂಡ್‍ಗೆ ಹೊರಡುವ ಮುನ್ನ ನಾನು ನಿರ್ಧಾರವೊಂದನ್ನು ಮಾಡಿದ್ದೆ. ಅದೇನೆಂದರೆ ಅಲ್ಲಿರುವಾಗ ಫಿನ್ನಿಶ್ ಭಾಷೆಯನ್ನು ಕಲಿತುಬಿಡುವುದು! ಹಾಗೆ ಈ ನಿರ್ಧಾರವನ್ನು ಪ್ರತಿ ಸಲವೂ ಮಾಡಿರುತ್ತಿದ್ದೆ. ಆದರೆ ಅದನ್ನು ಪೂರ್ಣಗೊಳಿಸುವುದು ಆ ನಿರ್ಧಾರದ ದ್ವಿತೀಯಾರ್ಧ ಎನ್ನುವುದನ್ನು ಸುಖವಾಗಿ ಮರೆತುಬಿಡುತ್ತಿದ್ದೆ, ಅಲ್ಲಿ ಹೋದ ಮೇಲೆ. ‘ತಿಂದುಂಡು ಆರಾಮಾಗಿರುವುದನ್ನು ಬಿಟ್ಟು ಸ್ಲೇಟು ಬಳಪ… ಅಲ್ಲಲ್ಲ, ಪುಸ್ತಕ, ಎಕ್ಸರ್ಸೈಜು, ಪೆನ್ನು ಹಿಡಿದು ಮುಂಜಾನೆದ್ದು ಯುನಿಫಾರ್ಮ್ ಹಾಕಿ ಸ್ಕೂಲಿಗೆ ಹೊರಡುವ ಮಕ್ಕಳಂತೆ ಓಡಬೇಕೆ?’ ಅಂತೆಲ್ಲಾ ನನ್ನನ್ನು ಆ ನಿರ್ಧಾರದಿಂದ ಹಿಂದಕ್ಕೆಳೆಯುವ ಯೋಚನೆಗಳೇ ಸುಖವೆನಿಸಿ ನನ್ನ ಪಾಠಶಾಲಾ ಕಾರ್ಯಕ್ರಮ ರದ್ದಾಗಿಬಿಡುತ್ತಿತ್ತು.

ಈ ಸಲ ಮಾತ್ರ ನನ್ನ ಅಂತರಾತ್ಮವೇ ನನ್ನನ್ನು ತಿವಿಯತೊಡಗಿತು. ‘ಏನಿದು? ಇಪ್ಪತ್ತೊಂದನೆಯ ಶತಮಾನದ ವೀರನಾರಿಯಾಗಿ ಯಕಃಶ್ಚಿತ್ ಒಂದು ಭಾಷೆ ಕಲಿಯಲು ಗೋಳಾಡುವೆಯಾ? ಜೀವನವೇ ಒಂದು ಪಾಠಶಾಲೆ. ಇಲ್ಲಿ ಸಾಯುವವರೆಗೂ ಕಲಿತರೆ ತಪ್ಪಿಲ್ಲ.’ ಈ ಅಂತರಾತ್ಮನೊಡನೆಯ ಸಂಭಾಷಣೆಯ ಮುಂದಿನ ಭಾಗವಾಗಿಯೇ ನನ್ನ ಹೊಚ್ಚ ಹೊಸ ಪ್ರತಿಜ್ಞೆ ಜನಿಸಿದ್ದು! ಅನಂತರ ಕೂತಲ್ಲಿ ನಿಂತಲ್ಲಿ ನಾನು ಕಲಿಯದೇ ಹೋದರೆ? ಎಂದು ಕಾಡುತ್ತಿದ್ದ ಭಯವನ್ನು ಒಂದೇ ಸಲಕ್ಕೆ ಕಿತ್ತುಹಾಕಿ, ‘ಅದೆಲ್ಲ ಏನಿಲ್ಲ, ಈ ಸಲ ಕಲೀತೀನಿ ಅಂದ್ರೆ ಕಲೀತೀನಿ’ ಪಕ್ಕದಲ್ಲೇ ಕೂತಿದ್ದ ನನ್ನ ಮಗಳಿಗೆ ಜೋರಾಗಿ ಹೇಳಿದೆ.

ತನ್ನ ಅಗಲವಾದ ಕಣ್ಣುಗಳನ್ನು ಇತ್ತ ಹೊರಳಿಸಿದಳವಳು. ಅಲ್ಲಿದ್ದ ನಗು ನನ್ನತ್ತ ಜಂಪ್ ಆಗಿ ಬಂತು! ಇದು ಫಿನ್ನಿಶ್ ಭಾಷೆಯ ಬಗ್ಗೆ ನನ್ನ ಹೊಸ ಘೋಷಣೆ ಅಂತ ಅವಳು ಆಗಲೇ ಊಹಿಸಿಬಿಟ್ಟಿರಬೇಕು. ಅಸಲು ಅವಳು ನನಗೆ ‘ಬೇಡ’ ಅಂದಿರಲೇ ಇಲ್ಲ. ನಾನೇ ಎರಡು ಸಲ ಆ ಚಂದದ ಕಟ್ಟಡದ ಮೆಟ್ಟಿಲುಗಳನ್ನೇರಿ ಕುತೂಹಲದಿಂದ ಇಣುಕಿಣುಕಿ ನೋಡಿ, ಅಲ್ಲಿ ಕೆಟೇರಿಯದಲ್ಲಿ ಕೊಡುವ ಚಹಾ ಕುಡಿದು ಬಂದಿದ್ದೆನಾದರೂ ಒಳಗೆ ನಡೆಯುತ್ತಿದ್ದ ಕ್ಲಾಸಿನಲ್ಲಿ ಹೋಗಿ ಪೆನ್ನು ಪುಸ್ತಕ ಹಿಡಿದು ಕೂತಿರಲಿಲ್ಲ! ಅಲ್ಲ, ಕಲಿಯಬೇಕು ಎಂಬ ಆಸಕ್ತಿಗೆ ಯಾರ ಹಂಗಿದೆ ಹೇಳಿ? ಆದ್ದರಿಂದ ಈ ಬಾರಿ ಕಲಿಯುವ ಆಸಕ್ತಿಯನ್ನು ಬ್ರಹ್ಮಾಂಡವಾಗಿ ಪೋಷಿಸಿಕೊಂಡದ್ದಲ್ಲದೆ ಅದು ಒಂದಿಷ್ಟೂ ಇಳಿದು ಹೋಗದಂತೆ ಜೋಪಾನ ಮಾಡಿದ್ದೆ. ಆದ್ದರಿಂದಲೇ ಪ್ರತಿ ವರ್ಷ ನನ್ನ ಭಾಷಾಕಲಿಕೆಯ ನಿರ್ಧಾರಗಳ ಜನನವಾಗುತ್ತಿದ್ದದ್ದು! ಹಾಗಾಗಿ ಹಿಂದೆ ಹುಡುಕಿಕೊಂಡ ನೆಪಗಳು, ಸೋಮಾರಿತನಕ್ಕೆಲ್ಲ ಈಗ ಆಸ್ಪದವಿಲ್ಲ. ‘ಕೊಂಪಾಸಿ’ಯ ಒಳU ಹೋಗಲೇಬೇಕು, ಅಲ್ಲಿ ಕೂರಲೇಬೇಕು, ಪೆನ್ನು, ಹಾಳೆ, ಡಿಕ್ಷನರಿ ಹಿಡಿದು ಓದಿ ಬರೆದು ಫಿನ್ನಿಷ್ ಭಾಷೆ ಕಲಿಯಲೇಬೇಕು ಅಂತ ಈ ಬಾರಿ ಭೀಷ್ಮ ಪ್ರತಿಜ್ಞೆ ಮಾಡಿದ್ದೆನಾದ್ದರಿಂದ ಅಷ್ಟು ಖಡಾ ಖಂಡಿತವಾಗಿ ಅವಳಿಗೆ ಹೇಳಿಬಿಟ್ಟೆ.

‘ಸರಿ, ನಾಳೆ ಬೆಳಿಗ್ಗೆ ನನ್ನ ಜೊತೆ ಬಾ ಹೆಂಗೂ ನಿನ್ನೆಯೇ ಹೊಸ ಬ್ಯಾಚ್ ಶುರು ಮಾಡಿದ್ದಾರೆ ನಿಂಗೊಂದು ಸೀಟು ಕೊಟ್ಟಾರು’ ಎಂದಳು. ಅಂದು ರಾತ್ರಿಯಿಡೀ ನಿದ್ದೆಯಿಲ್ಲ. ಅಲ್ಲಿಗೆ ಬೆಳಬೆಳಿಗ್ಗೆನೇ ಹೋದಂತೆ… ಮೊದಲ ಬೆಂಚಿನಲ್ಲೇ ಕುಳಿತಂತೆ, ಪುಸ್ತಕ ಮುಟ್ಟಿದೊಡನೆ ಪಟಾಪಟ್ ಅಂತ ಮೂಲಾಕ್ಷರಗಳೂ, ಒತ್ತಕ್ಷರಗಳೂ, ಕಾಗುಣಿತವೂ, ಶಬ್ದಸಂಗ್ರಹವೂ, ವ್ಯಾಕರಣವೂ ನನ್ನ ಕೈಗೆಟುಕಿ ತಲೆಯಲ್ಲಿ ಸೇರಿ ಪರೀಕ್ಷೆಯನ್ನೂ ಬರೆದು ಸ್ರ್ಟ್ ರ್ಯಾಂಕ್ ಬಂದಂತೆ ಕನಸು ಕಂಡೆ!

ಬೆಳಿಗ್ಗೆ ಎದ್ದಾಗ ನನ್ನ ನೋಡಿ, ‘ನಿನಗೆ ಹೇಳಿರಲಿಲ್ಲವಾ ಯೋಚನೆ ಮಾಡ್ಬೇಡ ಅಂತ? ಮತ್ತೆ ಯಾಕೆ ನಿದ್ದೆ ಮಾಡ್ಲಿಲ್ಲ?’ ಅಂದಳು ಮಗಳು. ಅರೆ, ಇವಳು ಕಳೆದ ಜನ್ಮದಲ್ಲಿ ಶೆರ್ಲಾಕ್ ಹೋಮ್ಸ್ ಅಥವಾ ಜೇಮ್ಸ್ ಬಾಂಡ್ ಆಗಿದ್ಲೇ? ಏನೆಲ್ಲಾ ಕಂಡು ಹಿಡಿದುಬಿಡ್ತಾಳಲ್ಲ ಅನಿಸಿ, ‘ಹ್ಹೆ.. ಹಾಗೇನಿಲ್ಲ. ಆದರೂ ಈ ವಯಸ್ಸಿನಲ್ಲಿ ಶಾಲೆಗೆ ಹೋಗಿ ಕೂರುವುದೆಂದರೆ..’ ಅನ್ನಹೋದೆ.

‘ಅಯ್ಯೋ ಹೇಳಿದೆನಲ್ಲ ಅಲ್ಲಿ ಎಂಟರಿಂದ ಎಂಬತ್ತು ವಯಸ್ಸಿನವರು ಸಹ ಬರ್ತಾರೆ. ಈಗ ನೀ ನಿರ್ಧಾರ ಮಾಡಿದ್ದೀಯಲ್ಲ ನಡಿ ಮತ್ತೆ. ಅಷ್ಟಕ್ಕೂ ನಿನ್ನದೇನು ಮಹಾ ವಯಸ್ಸು?’ ಅಂದಳು.

ಹೌದಲ್ಲ! ಖುಷಿಯಾಯಿತು. ಮತ್ತೆ ಹತ್ತೇ ನಿಮಿಷದಲ್ಲಿ ನಾ ತಯಾರು. ‘ನಡಿ ಮತ್ತೆ ಕೊಂಪಾಸ್ಸಿಗೆ’ ಅಂದೆ.

ಈಗ ಈ ಕೊಂಪಾಸ್ಸಿ ಅಂದರೆ ಏನು ಅಂತ ಕೆಲವರು ಕೇಳಬಹುದು ತಾನೇ? ಸರಿ, ಫಿನ್ಲೆಂಡಿನ ಹೆಚ್ಚಿನ ನಗರಗಳಲ್ಲಿ ಒಂದು ಸಂಸ್ಥೆಯಿದೆ ಅವರಿಗೊಂದು ಘನೋದ್ದೇಶವಿದೆ: ಪರದೇಶಗಳಿಂದ ಅಲ್ಲಿಗೆ ತಮ್ಮನ್ನೇ ಆಮದಾಗಿಸಿಕೊಂಡು ಬರುವ ಅರ್ಥಾತ್ ‘ಇಮ್ಮಿಗ್ರಂಟ್’ ಜನಕ್ಕೆ, ‘ಸುವೋಮಿ’ ಎಂದು ಅವರು ಕರೆದುಕೊಳ್ಳುವ ಫಿನ್ನಿಷ್ ಭಾಷೆಯನ್ನು ಕಲಿಸಿಕೊಟ್ಟು ತಮ್ಮ ‘ಸುವೊಮಿ’ ಸಂಸ್ಕೃತಿಯ ಪರಿಚಯ ಮಾಡಿಕೊಡ್ತಾರೆ. ಇನ್ನು ಕಾಯಂ ಅಲ್ಲಿಯೇ ಬೇರೂರಿ ಫಿನ್‍ಲ್ಯಾಂಡ್ ವಾಸಿಗಳೇ ಆಗಿಬಿಡುವ ಇರಾದೆಯ ಜನರಿಗೆ ಅಗತ್ಯವಿರುವ ಇಮ್ಮಿಗ್ರೇಷನ್ ಸಂಗತಿಗಳಲ್ಲಿ ಉಚಿತ ಸಹಾಯ ಮಾಡುವ ಸಂಸ್ಥೆಯಿದು. ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ಹೆಸರು ಇಟ್ಟುಕೊಂಡಿರುವ ಈ ಸಂಸ್ಥೆಗೆ ನನ್ನ ಮಗಳು ಇದ್ದ ಊರಿನಲ್ಲಿ ‘ಕೊಂಪಾಸ್ಸಿ’ ಅಂತ ಹೆಸರಿತ್ತು. ಈ ಸಂಸ್ಥೆ ನಡೆಸುವ ಮಹತ್ಕಾರ್ಯದಲ್ಲಿ ಕೈ ಜೋಡಿಸಿರುವ ಒಂದು ಕೊಂಡಿ ನನ್ನ ಮಗಳು. ಅರ್ಥಾತ್ ಅವಳು ಈ ಸಂಸ್ಥೆಯ ಉದ್ಯೋಗಿ!

ಸರಿ, ಕೊಂಪಾಸ್ಸಿಯ ಮೆಟ್ಟಿಲೇರಿ ಒಳಗೆ ಹೋಗಿ ನಮಗೆ ಭಾಷೆ ಕಲಿಸಲು ಪಿರಕ್ಕೋ (ಅದು ಆಕೆಯ ಹೆಸರು) ಮ್ಯಾಡಂ ಜೊತೆಯಲ್ಲಿ ಒಂದಿಷ್ಟು ಮಾತನಾಡಿದೆ. ಆಕೆ ನಕ್ಕು, ‘ನೀವು ಭಾರತೀಯರು ಏನೇ ಕಲಿಯುವುದರಲ್ಲೂ ಚುರುಕು’ ಎಂದಾಗ ನನಗೊಂದೆರಡು ಕೋಡುಗಳು ಮೂಡಿರಬಹುದೇ ಅಂತ ಮುಟ್ಟಿ ನೋಡಿಕೊಂಡೆ, ಅಲ್ಲೇನೂ ಇರಲಿಲ್ಲ! ಇಲ್ಲಿ ಫಿನ್ನಿಷ್ ಕಲಿಸಲು ಬರುವವರೆಲ್ಲ ಹೆಚ್ಚಾಗಿ ಸೇವಾ ಮನೋಭಾವದವರೇ. ನಮ್ಮ ಮೇಡಮ್ ಕಾಲೇಜೊಂದರ ನಿವೃತ್ತ ಪ್ರಾಧ್ಯಾಪಕಿ. ಇಂಗ್ಲಿಶ್, ಫಿನ್ನಿಷ್ ಎರಡರಲ್ಲೂ ಅಚ್ಚುಕಟ್ಟಾಗಿ ಪಳಗಿದ ಜೀವ. ಕ್ಲಾಸಿನಲ್ಲಿ ಕಟ್ಟುನಿಟ್ಟು.

ಬಲು ಆಸಕ್ತಿಯಿಂದ ಆಕೆ ಪಾಠ ಆರಂಭಿಸಿದರು. ನಾನು ಪುಸ್ತಕ ತೆರೆದೆ. ರಾತ್ರಿಯಿಡೀ ಕನಸಿನಲ್ಲಿ ಕಾಣಿಸಿಕೊಂಡ ಅಕ್ಷರಗಳೆಲ್ಲಿ? ಇಲ್ಲಿ ಬೇರೆಯಾಗಿಯೇ ಕಾಣುತ್ತಿವೆಯಲ್ಲ ಎಂದುಕೊಳ್ಳುತ್ತ ಸುತ್ತ ನೋಡಿದೆ. ಎಲ್ಲರೂ ಪುಸ್ತಕ ಬಿಚ್ಚಿ ಬರೆಯಲು ಸಹ ಶುರು ಮಾಡಿದ್ದರು. ಅವರಿಗೂ ನನಗೆ ಕಂಡಂಥ ಅಕ್ಷರಗಳೇ ಬಂದಿರಬಹುದೇ ಅಂತ ಅನುಮಾನಿಸುತ್ತ, ಇನ್ನೂ ಯಾರ್ಯಾರಿದ್ದಾರಪ್ಪ ಎಂದು ಕುತೂಹಲ ಕೆರಳಿ ಪತ್ತೇದಾರಿ ಕಣ್ಣನ್ನು ದಶದಿಕ್ಕುಗಳಿಗೆ ತಿರುಗಿಸಿದೆ. ಹೌದು ಎಂಬತ್ತರ ಅಜ್ಜನೊಬ್ಬ ಖಂಡಿತ ಅಲ್ಲಿದ್ದರು. ಆತ ಆಫ್ರಿಕನ್ ಅಂತೆ, ಇರುವುದು ಇಲ್ಲಿ. ಭಾಷೆ ಕಲಿಯಲು ಬಂದಿರಲು ಕಾರಣ -ಆಸಕ್ತಿ ಹುರುಪು. ಇನ್ನುಳಿದಂತೆ ರಷಿಯನ್ನರು, ಜರ್ಮನ್ನರು, ನೆದಲ್ರ್ಯಾಂಡಿನವರು, ಸ್ವೀಡನ್ನಿನವರು ಮತ್ತೆ ನನ್ನ ಹಾಗೆ ಭಾರತೀಯರು. ಎಲ್ಲ ಬಗೆಯ ಹುಡುಗ ಹುಡುಗಿಯರಿಂದ ಹಿಡಿದು ಆಂಟಿ, ಅಂಕಲ್ ಗಳೂ ಅಜ್ಜಂದಿರೂ ಇದ್ದಾರೆ! ಎಲ್ಲರೂ ತಮ್ಮದೇ ನಮೂನೆಯ ಇಂಗ್ಲೀಶ್ ಬಳಸಿ ಪರಸ್ಪರ ಮಾತಾಡಿ ನಿಸ್ಸಂಕೋಚವಾಗಿ ನಕ್ಕಿದ್ದು ಬಲು ಚಂದವೆನಿಸಿತು. ಮ್ಯಾಡಂ ಬಂದು ಬೋರ್ಡಿನೆದುರು ನಿಲ್ಲುವವರೆಗೂ ಬಗೆಬಗೆಯ ನಗೆಗಳು!

‘ಸರಿ ಎಲ್ಲ ಇಲ್ಲಿ ನೋಡಿ. ಮತ್ತು ನಾನು ಹೇಳಿದಂತೆ ಹೇಳಿ… ಈಗ ನೀವೆಲ್ಲ ಆ-ಬೇ-ಸೇ ಅನ್ನಿ’ ಅಂದರು ಮ್ಯಾಡಂ. ಬೆಚ್ಚಿ ನೋಡಿದರೆ ಅಲ್ಲಿ ಬೋರ್ಡಿನ ಮೇಲೆ A..B..C. ಅಂತಲೇ ಬರೆದಿತ್ತು. ಇದೊಳ್ಳೆ ತಮಾಷೆ, ABC..ಬರೆದರೆ ಎ ಬಿ ಸಿ ಅಂತ ತಾನೇ ಹೇಳಬೇಕು?

‘ಇಲ್ಲ, ನಮ್ಮಲ್ಲಿ ಹಾಗಿಲ್ಲ. ನಾವು A ಗೆ ಆ, B ಗೆ ಬೇ, C ಗೆ ಸೇ ‘ ಅಂತೀವಿ. ನೀವೂ ಹಾಗೇನೆ ಹೇಳಬೇಕು..’ ಅಂದರು ಮೇಡಮ್ಮು.

ಅರ್ಥಾತ್ ಇಲ್ಲಿ ಇಂಗ್ಲೀಷ್ ಮೂಲಾಕ್ಷರಗಳೇ ಇದ್ದರೂ ಅವುಗಳಿಗೆ ಅವರದೇ ಆದ ವಿಭಿನ್ನ ಉಚ್ಚಾರಗಳನ್ನು ಬಳಸ್ತಾರೆ. ಎಲ್ಲೀದಪ್ಪ ಈ ವಿಚಿತ್ರ? ಅನಿಸಿದರೂ ‘ಸರಿಯಪ್ಪ ನಿಮ್ಮ ಭಾಷೆ.. ನೀವು ಹೇಗ್ ಬೇಕಾದರೂ ಮಾತಾಡಿ’ ಅಂತ ಮನಸ್ಸಿನಲ್ಲೇ ಹೇಳಿಕೊಂಡು ಬರೆಯಲು ಶುರು ಹಚ್ಚಿದೆ. ಒಂದು ಗಂಟೆ ಪಾಠ ಮಾಡಿ ‘ಸರಿ, ನೀವೆಲ್ಲ ಹತ್ತು ನಿಮಿಷ ಹೊರಗೆ ಹೋಗಿಬನ್ನಿ ರಿಲ್ಯಾಕ್ಸ್’ ಅಂತ ಮುಗುಳ್ನಕ್ಕರು ಮ್ಯಾಡ್‍ಂ. ಅವರ ನಗೆ ಎಷ್ಟು ಚಂದ ಅನಿಸಿತು.

ಎಲ್ಲರೊಂದಿಗೆ ಬುದುಬುದು ಹೊರಗೆ ಹಾಲಿಗೆ ಬಂದರೆ, ಅಲ್ಲಿ ಬಿಸಿಬಿಸಿ ಚಹಾ ಕಾಫಿ, ಕುಕ್ಕೀಗಳು ಸ್ವಾಗತಿಸಿದುವು. ತನ್ನ ಕ್ಯಾಬಿನ್ನಿನಿಂದ ಹೊರಬಂದ ಮಗಳು, ‘ಅಮ್ಮ ಕ್ಲಾಸ್ ಹೇಗಿತ್ತು? ಬಾ ಚಹಾ ಕುಡಿ’ ಎಂದಳು. ನಾನು ಉತ್ತರಿಸದೆ ಅನುಮಾನಿಸಿದ್ದಕ್ಕೆ, ‘ಓ ಅದಾ? ಇದೆಲ್ಲ ಇಲ್ಲಿ ಉಚಿತ ಡೋಂಟ್ ವರಿ’ ಎನ್ನುತ್ತಾ ದೊಡ್ಡ ಚಹಾದ ಮಗ್ ಒಂದನ್ನು ನನ್ನೆದುರು ಹಿಡಿದಳು. ‘ಮೈ ಕೊರೆಯುವ ಚಳಿಯಲ್ಲಿ ಹೀಗೆ ಫ್ರೀಯಾಗಿ ಬಿಸಿ ಕಾಫಿ, ಟೀ ಕೊಟ್ಟು ಪಾಠ ಕಲಿಸುವ ಶಾಲೆಯ ಹೊಟ್ಟೆ ತಣ್ಣಗಿರಲಿ’ ಎಂದು ಆಶೀರ್ವದಿಸಿದೆ. ಮತ್ತೆ ಕ್ಲಾಸುಗಳು ಶುರುವಾದುವು.

ಅದೇಕೋ ಮೂರ್ನಾಲ್ಕು ಕ್ಲಾಸುಗಳು ಮುಗಿಯುವ ಹೊತ್ತಿಗೆ ಆ ಅಪರಿಚಿತ ಭಾಷೆಯ ಮೇಲೆ ನನಗಂತೂ ಏನೋ ಅಕ್ಕರೆ ಹುಟ್ಟಿಬಿಟ್ಟಿತು. ವಾರಕ್ಕೆ ಮೂರು ದಿನ ಮಾತ್ರ ಕ್ಲಾಸು ಎಂದು ಟೈಮ್ ಟೇಬಲ್ ಕೊಟ್ಟುಬಿಟ್ಟಿದ್ದರು. ಹಾಗಾಗಿ ಮಂಗಳವಾರ, ಗುರುವಾರ, ಶುಕ್ರವಾರಗಳಿಗಾಗಿ ಚಾತಕಪಕ್ಷಿಯಂತೆ ಕಾದು ಕೂತಿರುತ್ತಿದ್ದೆ.

ನಾವೆಲ್ಲಾ ಝೀರೋ ಲೆವೆಲ್ಲಿನವರಾದ್ದರಿಂದ ಅವರು ಮೂಲಾಕ್ಷರ ವ್ಯಂಜನಗಳಿಂದಲೇ ಆರಂಭಿಸುವುದು ಸಹಜ ಅಲ್ಲವೇ? ಆ -ಬೇ -ಸೇ ಇತ್ಯಾದಿಗಳ ಬರವಣಿಗೆ ಆದ ಮೇಲೆ ಇನ್ನೇನು ಕಾಗುಣಿತವನ್ನು ಹೇಳಿಕೊಡುತ್ತಾರೆ ಅಂತ ಬಾಯಿಪಾಠ ಮಾಡಲು ತಯಾರಾದೆ. ಆದರೆ ಅವರ ಕಾಗುಣಿತವೇ ಬೇರೆ. ಸರೀಪ್ಪ ಈಗ ಒಂದು, ಎರಡು ಬಾಳೆಲೆ ಹರಡು… ಇಲ್ಲ ಅದೂ ಇಲ್ಲ. ಅದಕ್ಕೆ ಯೂಕ್ಸಿ, ಕಾಕ್ಸಿ, ನೆಲ್ಲ್ಯಾ, ಕೂಸಿ ಅಂತ ಶುರುವಾಯ್ತು.. ಹೋಗ್ಲಿ ಅಂತ ಅದನ್ನೇ ಕಲಿತೆ. ಇನ್ನು ಅವರು ಕೊಟ್ಟ ಬಣ್ಣಬಣ್ಣದ ಚಿತ್ರಗಳ ಹಾಳೆ ಹಿಡಿದು ಅದರ ಮೇಲೆ ಬೆರಳಿಟ್ಟು ಇದು ಗುಬ್ಬಿ, ಇದು ಪಾರಿವಾಳ, ಇದು ನಾಯಿ… ಹಾವು.. ಮತ್ತೆ ಕೋತಿ ಸಹ ಎಲ್ಲಾ ಕಲಿತೆ. ಆಮೇಲೆ ಮ್ಯಾಡಮ್ಮು ತರಕಾರಿಗಳ ಚಿತ್ರ ತೋರಿಸಿದರು ‘ಟೊಮಾಟ್ಟೀ’ ಅಂತಾರೆ, ಅಲ್ಲ ಇಷ್ಟ್ಯಾಕೆ ಕಷ್ಟಪಡಬೇಕು ಸುಮ್ಮನೇ ನಾವಂದ ಹಾಗೆ ಟೊಮೆಟೊ ಅಂತ ಸರಳ ಮಾಡಿಕೊಳ್ಳಬಾರದೇ ಅನಿಸಿದರೂ ‘ಬಟಾಟ್ಟೀ, ಸೋಕೇರೀ (ಸಕ್ರೆ), ರೀಸೀ (ಅಕ್ಕಿ)’ ಅಂತೆಲ್ಲ ಮುಂದುವರಿದಾಗ ಇವರಿಗೆ ಕಷ್ಟಪಟ್ಟು ಮಾತಾಡೋದೇ ಇಷ್ಟ ಅದಕ್ಕೇನು ಮಾಡುವುದು ಎಂದು ಅವರನ್ನು ಕ್ಷಮಿಸಿದೆ.

ಇಷ್ಟು ಹೊತ್ತು ಚೆನ್ನಾಗಿದ್ದಳಲ್ಲ ಎಂಬಂತೆ ಬೆಚ್ಚಿ ಕತ್ತು ಹೊರಳಿಸಿದವರು ಮತ್ತೆ ಸುಧಾರಿಸಿಕೊಂಡು ‘ಹ್ಯೂವಾ'(ಗುಡ್) ಅಂತ ನಕ್ಕರು. ಮಗಳು ನಸುನಕ್ಕು ‘ಓ ಪರವಾಗಿಲ್ವೇ, ಈರಿತ್ತಾಯಿನ್ ಕಿವಾ (ವೆರಿ ನೈಸ್) ಅನ್ನುತ್ತ ಅನ್ನ ಅರ್ಥಾತ್ ರೀಸಿ ಬಡಿಸಿದಳು. ಯುದ್ಧ ಗೆದ್ದ ಖುಷಿ ನನಗೆ.

‘ಇವತ್ತು ಒಂದಾದರೂ ಸುವೋಮೀ ಶಬ್ದ ಆಡಿಯೇಬಿಟ್ಟೇನು ಅಂತ ಪ್ರತಿಜ್ಞೆ ಮಾದಿಕೊಂಡೇ ಪ್ರತಿ ಬಾರಿ ಮನೆಗೆ ಹೋಗ್ತಿದ್ದೆ. ಹಾಗೆಯೆ ಮುಂದೆ ಒಂದು ದಿನ ಕ್ಲಾಸು ಮುಗಿಸಿ ಮನೆಗೆ ಹೋಗಿ ರಾತ್ರಿ ಊಟ ಮಾಡುವಾಗ ಜೋರಾಗಿ, ‘ಮಿನಾ ಹಲುವಾನ್ ರೀಸಿ… ರೀಸಿ’ ಅಂದೆ! ಬಾಯಿಗೆ ಅನ್ನ ಸಾರು ಕಲಿಸಿ ತುತ್ತು ಇಟ್ಟುಕೊಳ್ಳುತ್ತಿದ್ದ ಮಗಳು ಅಳಿಯ ಮೊಮ್ಮಗಳು ಇವಳಿಗೇನಾಯಿತು? ಇಷ್ಟು ಹೊತ್ತು ಚೆನ್ನಾಗಿದ್ದಳಲ್ಲ ಎಂಬಂತೆ ಬೆಚ್ಚಿ ಕತ್ತು ಹೊರಳಿಸಿದವರು ಮತ್ತೆ ಸುಧಾರಿಸಿಕೊಂಡು ‘ಹ್ಯೂವಾ'(ಗುಡ್) ಅಂತ ನಕ್ಕರು. ಮಗಳು ನಸುನಕ್ಕು ‘ಓ ಪರವಾಗಿಲ್ವೇ, ಈರಿತ್ತಾಯಿನ್ ಕಿವಾ (ವೆರಿ ನೈಸ್) ಅನ್ನುತ್ತ ಅನ್ನ ಅರ್ಥಾತ್ ರೀಸಿ ಬಡಿಸಿದಳು. ಯುದ್ಧ ಗೆದ್ದ ಖುಷಿ ನನಗೆ.

ವಿದ್ಯಾರ್ಥಿ ಬಲಮೇ ಬಲಂ ಅಂತ ಜೋರಿನ ಉತ್ಸಾಹದಲ್ಲಿ ಥ್ಯಾಂಕ್ಸು, ಹಾಯ್, ಹಲೋ, ಏನ್ಸಾರ್, ಏನ್ ಮೇಡಂ, ಹೇಗಿದ್ದೀರಿ?, ಶುಭಮುಂಜಾವು, ಶುಭಸಂಜೆ-ಮಧ್ಯಾಹ್ನಗಳನ್ನೂ, ಇದು ಬೇಕು, ಅದು ಬೇಕು ಎಂದು ಸಾಮಾನಿನ ಹೆಸರುಗಳನ್ನು ಅವರದೇ ಸುವೋಮಿ ಭಾಷೆಯಲ್ಲಿ ಹೇಳುವುದನ್ನೂ/ಬರೆಯುವುದನ್ನೂ ಕಲಿತೆ. ‘ಹುವೋಮೆಂತಾ’ ಅಂದರೆ ಸುಪ್ರಭಾತವೆಂದೂ ಮತ್ತೆ ‘ಹ್ಯುವಾ ಇತಾಲಾ’ ಅಂದರೆ ಶುಭ ಸಂಜೆ ಅಂತಲೂ ಹೇಳಿಕೊಟ್ಟಿದ್ದರು ಮ್ಯಾಡಂ. ಅದನ್ನು ಚೆನ್ನಾಗಿ ಬಾಯಿಪಾಠ ಮಾಡಿದ್ದೆನೇನೋ ನಿಜ. ಆದರೆ ಒಮ್ಮೊಮ್ಮೆ ಯಾರಾದರೂ ಎದುರಿಗೆ ಸಿಕ್ಕಾಗ ಸಂಜೆ ಇದ್ದಾಗ ಹುವೋಮೆಂತಾನೂ ಬೆಳಿಗ್ಗೆ ಆದಾಗ ಹ್ಯೂವಾ ಇತಾಲಾನೂ ಹೇಳಿ ಎಡವಟ್ಟು ಮಾಡಿಕೊಡಿಂದ್ದೆ! ಅನಂತರ ನಾನಿನ್ನೂ ವಿದ್ಯಾರ್ಥಿನಿ ತಾನೇ.. ತಪ್ಪುವುದು ಏನು ತಪ್ಪು? ಅಂತ ನನ್ನನ್ನೇ ಒಪ್ಪಿಟ್ಟುಕೊಂಡಿದ್ದೆ.

ವಿದ್ಯಾರ್ಥಿಗಳು ಗಲಾಟೆ ಮಾಡದಿದ್ದರೆ ಅದೂ ಒಂದು ಕ್ಲಾಸೇ? ಸರಿ, ಅದಕ್ಕೆ ಅಪವಾದವಾಗಬಾರದೆಂಬಂತೆ ನಮಗೆ ಶುಕ್ರವಾರ ಮಾತ್ರ ಪಾಠ ಮಾಡಲು ಬರುತ್ತಿದ್ದ ಎಲಿನಾ ಮೇಡಂಳ ತರಗತಿಯೇ ಸಾಕ್ಷಿ! ಆಕೆ ಚೆಂದುಳ್ಳಿ ಚೆಲುವೆ, ವಯಸ್ಸೂ ಚಿಕ್ಕದು, ಮದುವೆ ಆಗಿಲ್ಲ! ನಗೆ ತಮಾಷೆ ಎಲ್ಲ ತುಂಬಿಸಿ ಪಾಠ ಮಾಡುತ್ತಿದ್ದ ಅವಳ ಕ್ಲಾಸೆಂದರೆ ನೂರಕ್ಕೆ ನೂರು ಹಾಜರಾತಿ. ಒಮ್ಮೆ ಈ ಎಲೀನಮ್ಮ ವಾಕ್ಯರಚನೆ ಮಾಡಿಸ್ತಾ, ‘ಮಿನಾ ರಕಾಸ್ತಾನ್ ಸಿನುವಾ’ ಅಂತ ಒಂದು ವಾಕ್ಯ ಕಲಿಸಿಕೊಟ್ಟಳು. ಹಾಗೆ ಅದನ್ನು ಹೇಳೋದ್ರಲ್ಲಿ ತಪ್ಪೇನೂ ಇಲ್ಲ ಬಿಡಿ. ‘me ne ra ka stan seen-u-wa’ww ಅಂದರೆ ‘ಐ ಲವ್ ಯೂ’ ಅಂತ ಅರ್ಥ. ಇಲ್ಲಿ ಎಲೀನಳ ಉಳಿದ ಪಾಠಗಳನ್ನು ಹಾಗೋ ಹೇಗೋ ಕಲಿತ ಪಡ್ಡೆಗಳು ಇಡೀ ದಿನ ಅವಳಿಗೆ, ‘ಮಿನಾ ರಕಾಸ್ತಾನ್ ಸಿನುವಾ!’ ಅವಳೂ ನಕ್ಕು, ‘ಮನೆತುಂಬಾ ಜನ ಇದ್ದಾರಲ್ಲ ಅವರಿಗೂ ಹೇಳಿ’ ಎನ್ನುತ್ತಾ ಹೊರಗೆ ಹೋದಳು!

ಮತ್ತೆ ಮುಂದಿನ ವಾರ ಪಿರಕ್ಕೋ ಮ್ಯಾಡಂ ಬಂದಾಗ ಎಲ್ಲಾ ಗಪ್‍ಚಿಪ್!!

ಅರೆ, ಗೊತ್ತೇ ಆಗದಂತೆ ಮೂರು ತಿಂಗಳು ಕಳೆದುಬಿಟ್ಟಿತ್ತು. ನನ್ನ ಎಕ್ಸರ್ಸೈಜಿನ ಹಾಳೆಗಳಷ್ಟೂ ಫಿನ್ನಿಷ್ ಅಕ್ಷರಗಳು, ಪದಗಳಿಂದ ತುಂಬಿ ಹೋಗಿದ್ದುವು. ಅವುಗಳೊಡನೆ ಏನೋ ಅವರ್ಣನೀಯ ನಂಟು ಬೆಳೆದಿತ್ತು. ಯಾವುದೇ ವಿದೇಶಿ ಭಾಷೆ ಕಲಿಯುವುದು ಅಷ್ಟು ಸುಲಭವಲ್ಲ; ಅಲ್ಲಿನ ನೆಲದ ಬೇರುಗಳೇ ಬೇರೆ, ಭಾಷೆಯ ಸೊಗಡೇ ಭಿನ್ನ. ಕಿತ್ತುತಂದು ನೆಟ್ಟ ಮರದಂತೆ ಬೇರೊಂದು ಮಣ್ಣಿನಿಂದ ಬಂದವರು ಅಲ್ಲಿ ಒಂದಾದರೇನೇ ಅವರ ಅಸಲು ಭಾಷೆಯ ರುಚಿಯನ್ನು ಆಸ್ವಾದಿಸಲು ಸಾಧ್ಯ. ನಾನೂ ಅಲ್ಲಿ ಅತಿಥಿ ಮಾತ್ರವೇ ಆಗಿ ಹೋದವಳು. ಆದರೂ ಆ ಮೂರು ತಿಂಗಳಲ್ಲಿ ಮತ್ತೊಮ್ಮೆ ವಿದ್ಯಾರ್ಥಿನಿಯಾಗಿ ಕ್ಲಾಸಿನ ಆನಂದ ಸವಿದ ನನಗೆ ನನ್ನ ಕಾಲೇಜಿನ ದಿನಗಳ ನೆನಪು ಮತ್ತೆ ಹೊಸದಾಯಿತು. ಅದೇ ನನ್ನ ಖುಷಿ! ಅದಕ್ಕಾಗಿ ಫಿನ್ನಿಶ್ ಮೇಡಂಗಳಿಗೆ ನನ್ನಿಂದ ದೊಡ್ಡದೊಂದು ‘ಕೀತೊಸ್’ (ಥ್ಯಾಂಕ್ಸ್)…!

*ಲೇಖಕರು ವಿಜಯಪುರದವರು. ಪ್ರಸ್ತುತ ಬೆಂಗಳೂರು ನಿವಾಸಿ. ಇಂಗ್ಲೀಷ್ ಸಾಹಿತ್ಯ ಮತ್ತು ಮನಶ್ಯಾಸ್ತ್ರದಲ್ಲಿ ಪದವಿ. ಮೂರು ಕಥಾಸಂಕಲನ, ಏಳು ಕಾದಂಬರಿ, ಹಾಸ್ಯ ಪ್ರಬಂಧ, ಐವತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಪ್ರಜಾವಾಣಿ, ಕರ್ಮವೀರ ದೀಪಾವಳಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

Leave a Reply

Your email address will not be published.