ನಾನು ಮತ್ತು ವೈರಾಣು

ಡಾ.ಕೆ.ಕೆ.ಜಯಚಂದ್ರ ಗುಪ್ತ

ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಹುಟ್ಟೂರಿನಲ್ಲಿ ಸಿಡುಬು, ಸೀತಾಳೆ, ಡಡಾರ ಇತ್ಯಾದಿ ಜಡ್ಡುಗಳು ಆಗಾಗ ಬರುತ್ತಿದ್ದವು. ಊರಿನಲ್ಲಿ ಅದೆಷ್ಟೋ ಜನರಿಗೆ ತಗುಲಿ ಕೊನೆಗೊಮ್ಮೆ ಕಡಿಮೆಯಾಗುತ್ತಿದ್ದವು. ಬಳಿಕ ಮನೆಯವರೆಲ್ಲ ಹತ್ತಿರದ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಮನೆಗೆ ಬರುತ್ತಿದ್ದರು.

1956ರಲ್ಲಿ ಏಷ್ಯನ್ ಫ್ಲೂ ಎಂಬ ವೈರಾಣು ಸಮಸ್ಯೆ ಕಾಣಿಸಿಕೊಂಡಿತ್ತು. ಜ್ವರ, ಚಳಿ, ವಿಪರೀತ ತಲೆನೋವು ಹಾಗೂ ಅದಕ್ಕಿಂತ ಮುಖ್ಯವಾಗಿ ಕೆಂಪಡರಿದ ಕಣ್ಣುಗಳು ಈ ರೋಗದ ಲಕ್ಷಣಗಳಾಗಿದ್ದವು. ಇದು ಕ್ರಮೇಣ ಸಿಂಗಪೂರ ಫ್ಲೂ, ಮದ್ರಾಸ್ ಫ್ಲೂ ಎಂಬಂತೆ ಹೆಸರು ಬದಲಿಸಿಕೊಂಡು ಜನರನ್ನು ಕಾಡಿಸಿತು. ನಾನು ವೈದ್ಯಕೀಯ ಕಾಲೇಜು ಸೇರುವ ವೇಳೆಗೆ ಇದು ತಣ್ಣಗಾಯಿತು. ನನ್ನನ್ನಂತೂ ಈ ಯಾವ ವೈರಾಣುಗಳೂ ಮುಟ್ಟಲಿಲ್ಲ. 

2019ರ ಆಗಸ್ಟ್ನಲ್ಲಿ ಸಮಾಜಮುಖಿ ನಡಿಗೆ ತಂಡದೊಂದಿಗೆ ಮಲೆಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದೆ. ಅಲ್ಲಿಗೆ ಹೋಗುವುದು ನನ್ನ ಐದು ದಶಕಗಳ ಕನಸಾಗಿತ್ತು.

ಮುಂಜಾನೆ ಎಂಟರ ಸುಮಾರಿಗೆ ಜೀಪುಗಳಲ್ಲಿ ನಾಗಮಲೆ ದರ್ಶನಕ್ಕೆಂದು ಹೊರಟೆವು. ಹಳ್ಳಿಯೊಂದರಲ್ಲಿ ಜೀಪು ನಿಂತ ಬಳಿಕ ಸುಮಾರು 2-3 ಕಿ.ಮೀ. ದೂರದ ಗುಡ್ಡ ಹತ್ತಬೇಕೆಂದು ತಿಳಿಯಿತು. ನಾನು ಹತ್ತುವುದು ಬೇಡವೆಂದು ಅಲ್ಲಿಯ ಅಂಗಡಿಯ ಬಳಿಯಿದ್ದ ಮಂಚವೊಂದರಲ್ಲಿ ಪವಡಿಸಿದೆ. ಐದು ಗಂಟೆಯ ಅವಧಿಯಲ್ಲಿ ಹತ್ತಾರು ಸೊಳ್ಳೆಗಳು ಕಚ್ಚಿದ್ದವು. ಅವುಗಳನ್ನೆಲ್ಲ ಸಂಹರಿಸಿ, ಅಲ್ಲಿಂದ ಅದೆಷ್ಟೋ ಕಷ್ಟಪಟ್ಟು ಗೆಸ್ಟ್ ಹೌಸ್‌ಗೆ ರಾತ್ರಿ ಮಿತ್ರರೊಡನೆ ವಾಪಸ್ ಆದೆನು.

ಮರುದಿನ ಏಳುವಾಗ ನಾನು ಹಿಂದೆಂದೂ ಅನುಭವಿಸದ ಮೈಕೈ ನೋವುಗಳಿದ್ದವು. ದೇಹದ ಎಲ್ಲ ಕೀಲುಗಳು ನೋಯುತ್ತಿದ್ದವು. ಹಾಗೂ ನಿಧಾನವಾಗಿ ನೋಡಿಕೊಂಡಾಗ ಕೀಲುಗಳು ಹಾಗೂ ಮುಖ ಊದಿಕೊಂಡಿದ್ದು ಸಹ ತಿಳಿಯಿತು. ನಾನು ಅದೆಷ್ಟೋ ಜನರಲ್ಲಿ ಗಮನಿಸಿ, ಸಲಹೆ ಹಾಗೂ ಸಮಾಧಾನ ಹೇಳಿದ್ದ ಚಿಕೂನ್‌ಗುನ್ಯ ವೈರಾಣು ಸಮಸ್ಯೆ ತಲೆದೋರಿದೆ ಎಂದುಕೊಂಡೆ. ಪರಿಚಿತ ವೈದ್ಯರಲ್ಲಿ ಹಾಗೂ ಪ್ರಾಧ್ಯಾಪಕರಲ್ಲಿ ಸಹ ವಿಚಾರಿಸಿ, ಸಮಸ್ಯೆ ನಾನಂದುಕೊಂಡಂತೆಯೇ ಇದೆ ಎಂದು ಖಚಿತಪಡಿಸಿಕೊಂಡೆ. ನಿಧಾನವಾಗಿ ಕಡಿಮೆಯಾಗುತ್ತದೆ. ಆದರೆ, ಇದೇ ರೀತಿಯ ನೋವು ಮತ್ತೆ ಮತ್ತೆ ಬರಬಹುದು ಎಂದು ಅನುಭವದಲ್ಲಿ ತಿಳಿದಿದ್ದೆ. ಪುಸ್ತಕಗಳಲ್ಲಿ ಓದಿಕೊಂಡಿದ್ದೆ. ಕೇವಲ ನೋವಿನ ಗುಳಿಗೆಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಎಲ್ಲರೂ ತಿಳಿಸಿದರು.

ಮೂರು, ನಾಲ್ಕು ತಿಂಗಳ ಬಳಿಕ ಸಮಸ್ಯೆ ನಿಧಾನವಾಗಿ ಕಡಿಮೆಯಾಯಿತು. ನೋವಿನಲ್ಲೇ ಒಂದೆರಡು ಮದುವೆಗಳಿಗೆ ಹೋಗಲೇಬೇಕಾಯಿತು. ಆದರೆ ನಾನಂದುಕೊಂಡಿದ್ದ ಮೈಸೂರು ದಸರಾ ಹಾಗೂ ಅಲ್ಲಿ ಹೆಲಿಕಾಪ್ಟರ್‌ನಲ್ಲಿ ಹಾರುವ ಅವಕಾಶ ತಪ್ಪಿಹೋಯಿತು.

ಜುಲೈ ತಿಂಗಳ ಆರಂಭದಲ್ಲಿ ನನಗೆ ಬಂಧುಗಳು ಹಾಗೂ ಬಹಳ ಬೇಕಾಗಿದ್ದ ದಂಪತಿ ಹತ್ತಿರದ ಊರಿನಿಂದ ಸಲಹೆಗಾಗಿ ಬಂದರು. ಎಂದಿನಂತೆ ವಿವರವಾದ ಪರೀಕ್ಷೆ, ಅಗತ್ಯ ತಪಾಸಣೆಗಳು, ಮನೆ ಹಾಗೂ ಊರಿನ ಸುದ್ದಿಗಳಲ್ಲಿ ಎರಡು-ಮೂರು ತಾಸು ಅವರೊಂದಿಗೆ ಇರಬೇಕಾಯಿತು.

ಎರಡು ವಾರಗಳ ಬಳಿಕ ಅವರಿಬ್ಬರಿಗೂ ಕೊರೋನಾ ಸಮಸ್ಯೆಯ ಲಕ್ಷಣಗಳು ಕಂಡುಬಂದಿದ್ದರಿಂದ ಅವರಿಗೆ ಫೋನ್‌ನಲ್ಲೇ ಸಲಹೆ ನೀಡಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ನಿಯಂತ್ರಣ ಕೇಂದ್ರಕ್ಕೆ ಹೋಗಿ, ನನ್ನಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದೆ. ಒಂದು ವಾರದ ಬಳಿಕ ಅವರು ಚೇತರಿಸಿಕೊಂಡು ತಮ್ಮ ಊರು ತಲುಪಿದರು.

ಇದಾದ ಕೆಲವು ದಿನಗಳ ಬಳಿಕ ಇದೇ ಊರಿನ ಬಂಧುಗಳೊಬ್ಬರು ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಸಮಸ್ಯೆಗಳೊಂದಿಗೆ ನೇರವಾಗಿ ಮನೆಗೆ ಬಂದರು. ಸಂಜೆಯಾಗಿದ್ದ ಕಾರಣ ಹಾಗೂ ಅದೇ ಸಮಯಕ್ಕೆ ಕರೆಂಟ್ ಕೈಕೊಟ್ಟ ಕಾರಣ ಸಾಕಷ್ಟು ಸಮಯ ಜೊತೆಯಲ್ಲಿ ಮಾತನಾಡುತ್ತಾ ಕುಳಿತೆವು.

ಮೂರು ದಿನಗಳ ಬಳಿಕ ಅವರಿಗೂ ಸಹ ಕೊರೋನಾ ಆವರಿಸಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಯಿತು. ಈಗಂತೂ ಮನೆಯವರಿಗೆಲ್ಲಾ ಆತಂಕ ಉಂಟಾಯಿತು. ನಾನು ವಯಸ್ಸಿನಲ್ಲಿ ಹಿರಿಯರಲ್ಲಿ ಹಿರಿಯ ನಾಗರಿಕನಾಗಿದ್ದುದು ಮುಖ್ಯ ಕಾರಣವಾಗಿತ್ತು.

ಯಾವ ಗುಣಲಕ್ಷಣಗಳಿಲ್ಲದಿದ್ದರೂ ಜಿಲ್ಲಾಸ್ಪತ್ರೆಗೆ ರೋಗಿಯಾಗಿ ಹೋಗಬೇಕಾಯಿತು. ನಾಲ್ಕು ದಶಕಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೂ, ಇಂದು ಹೆಚ್ಚಿನ ಜನರ ಪರಿಚಯ ಇರಲಿಲ್ಲ. ಆದರೂ ಸಾಕಷ್ಟು ಗಮನಹರಿಸಿ ನನ್ನನ್ನು ಅಗತ್ಯ ಪರಿಶೀಲನೆಗೆ ಒಳಪಡಿಸಿದರು. ಅಂದಿನ ಸಂಜೆ ಕೋವಿಡ್ ವೈರಾಣು ನನ್ನನ್ನು ತಾಕಿಲ್ಲ ಎಂಬ ವಿಷಯ ತಿಳಿದು ಮನೆಯವರಿಗೆಲ್ಲ ದುಗುಡ ಕಳೆದುಹೋಯಿತು.

ಬಳಿಕ, ನಿಧಾನವಾಗಿ ಯೋಚಿಸಿದಾಗ ನನಗೆ ಒಂದು ರೀತಿಯ ನೋವುಂಟಾಯಿತು. ಚಿಕೂನ್‌ಗುನ್ಯ ವೈರಾಣುವಿಗೆ ನನ್ನ ಮೇಲಿದ್ದಷ್ಟು ಪ್ರೀತಿ ಕೊರೋನಾ ವೈರಾಣುವಿಗಿಲ್ಲವಲ್ಲ. ಒಂದು ವೇಳೆ ಅತಿ ಹಿರಿಯ ನಾಗರಿಕನಾಗಿದ್ದ ನನ್ನನ್ನು ವೈರಾಣು ಕರೆದೊಯ್ದಿದ್ದರೆ ನನ್ನಲ್ಲಿಲ್ಲದ ಸದ್ಗುಣಗಳನ್ನೆಲ್ಲಾ ಸೇರಿಸಿ ಶ್ರದ್ಧಾಂಜಲಿ ನೀಡಬಹುದಾಗಿದ್ದ ಬಂಧು-ಮಿತ್ರರಿಗೆ ಅವಕಾಶ ನೀಡಲಿಲ್ಲವಲ್ಲ ಎಂದು ಸ್ವಲ್ಪ ಸಮಯ ಯೋಚಿಸಿದೆ.

ಕೊನೆಗೊಮ್ಮೆ ಹುಟ್ಟುವುದಾಗಲೀ, ಸಾಯುವುದಾಗಲೀ ನಮ್ಮ ಕೈಯಲ್ಲಿಲ್ಲ. ಇದ್ದಷ್ಟು ದಿನ ಜನರಿಗೆ ಹೊಂದಿಕೊಂಡು ಬದುಕಿರುವುದು ಹಾಗೂ ಸಮಸ್ಯೆಗಳನ್ನು ಎದುರಿಸುವುದಷ್ಟೇ ನಮ್ಮ ಕರ್ತವ್ಯ ಎಂದು ತಿಳಿದು ಸಮಾಧಾನಗೊಂಡೆ.

*ಲೇಖಕರು ಹಾಸನದವರು, ನಿವೃತ್ತ ಸರ್ಕಾರಿ ವೈದ್ಯಾಧಿಕಾರಿ. 

Leave a Reply

Your email address will not be published.