ನಾಯಕತ್ವದ ಬದಲಾವಣೆಯಲ್ಲಿದೆ ಕಾಂಗ್ರೆಸ್ ಭವಿಷ್ಯ

-ರಮಾನಂದ ಶರ್ಮಾ

ಪ್ರಜಾಪ್ರಭುತ್ವದ ಯಶಸ್ಸಿಗೆ, ನಿಯಮಿತವಾಗಿ ಚುನಾವಣೆಗಳು ನಡೆಯುವುದು ಹೇಗೆ ಮುಖ್ಯವೋ, ಅದೇರೀತಿ ಬಲಿಷ್ಠ ವಿರೋಧ ಪಕ್ಷವೂ ಮುಖ್ಯ. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಪರಿಕಲ್ಪನೆ ಮತ್ತು ಚಿಂತನೆ ಅಕಸ್ಮಾತ್ ಕಾರ್ಯರೂಪಕ್ಕೆ ಬಂದರೆ, ಭಾರತದಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ವಿರೋಧ ಪಕ್ಷವೇ ಇರುವುದಿಲ್ಲ. ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಈ ಪಾತ್ರವನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಸಂಕುಚಿತ ಪ್ರಾದೇಶಿಕ ಅಜೆಂಡಾದಲ್ಲಿ ಕಾರ್ಯನಿರ್ವಹಿಸುವ ಅವು ಅಖಿಲ ಭಾರತ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಸಮಸ್ಯೆಗಳ ನಿಟ್ಟಿನಲ್ಲಿ ವಿರೋಧಪಕ್ಷವಾಗಿ ರೂಪುಗೊಳ್ಳುವುದು ಕಷ್ಟ.

ಇಂದು ಸಂಖ್ಯಾ ಬಲ ಏನೇ ಇರಲಿ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಮತ್ತು ಅಖಿಲ ಭಾರತ ಫುಟ್ ಪ್ರಿಂಟ್ ಇರುವ ಪಕ್ಷ. ಸದ್ಭವಿಷ್ಯದಲ್ಲಿ ಇನ್ನೊಂದು ಅಖಿಲ ಭಾರತ ಮಟ್ಟದ ರಾಜಕೀಯ ಪಕ್ಷ ನೆಲೆಕಾಣುವ ಯಾವ ಸೂಚನೆಗಳೂ ಕಾಣುವುದಿಲ್ಲ. ಕಮ್ಯುನಿಷ್ಟ್ ಮತ್ತು ಸಮಾಜವಾದಿ ಪಕ್ಷಗಳು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದು, ಇನ್ನಿತರ ದೇಶಗಳಂತೆ ನಶಿಸುವ ಅಂಚಿನಲ್ಲಿವೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವೂ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನದಲ್ಲಿ ನೇಪಥ್ಯಕ್ಕೆ ಸರಿದರೆ, ಇದು ನಿರಂಕುಶ ಪ್ರಭುತ್ವಕ್ಕೆ ಎಡೆ ಮಾಡಿಕೊಡುತ್ತದೆ. ಇದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳೂ ಇವೆ.

ಕಾಂಗ್ರೆಸ್ಸಿನ ಇಂದಿನ ದಯನೀಯ ಸ್ಥಿತಿ ಅವರ ಸ್ವಯಂಕೃತಾಪರಾಧ ಎನ್ನಬಹುದು. ಸ್ವಾತಂತ್ರ್ಯ ಹೋರಾಟಕ್ಕಾಗಿ ಕಟ್ಟಿದ ಪಕ್ಷವನ್ನು, ಸ್ವಾತಂತ್ರ್ಯಾ ನಂತರ ವಿಸರ್ಜಿಸಬೇಕು ಎನ್ನುವ ಮಹಾತ್ಮಾಗಾಂಧಿಯವರ ಆಶಯವನ್ನು ನಿರ್ಲಕ್ಷಿಸಿ ಅಧಿಕಾರ ಹಿಡಿಯಲು ಬಳಸಿಕೊಂಡರು. ಆರಂಭದ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ತಾವೇ ಎಂದು ಬಿಂಬಿಸಿ ಆಧಿಕಾರ ಹಿಡಿದರು. ನಂತರದ ದಿನಗಳಲ್ಲಿ ನೆಹರೂ ಕುಟುಂಬ ಮಾತ್ರ ಅಡಳಿತ ನಡೆಸಲು ಅರ್ಹ ಎಂದು ದೇಶದ ಜನರ ಬ್ರೈನ್ ವಾಷ್ ಮಾಡಲಾಯಿತು. ಕಾಂಗ್ರೆಸ್ ಪಕ್ಷ ವಂಶಪಾರಂಪರ್ಯದ ಮಡುವಿನಲ್ಲಿ ಸಿಲುಕಿಕೊಂಡಿತು.

ಯಾವುದಕ್ಕಾದರೂ ಒಂದು ಇತಿ ಮಿತಿ ಇರುತ್ತದೆ. ಮೇಲೇರಿದ್ದು ಕೆಳಗೆ ಇಳಿಯುತ್ತದೆ ಎನ್ನುವಂತೆ, ನೆಹರೂ-ಇಂದಿರಾ ವಚರ್Àಸ್ಸು ಕಾಲಘಟ್ಟದಲ್ಲಿ ಇಳಿಯತೊಡಗಿತು. ಈ ಕುಟುಂಬದ ಹೆಸರಿನಿಂದ ಮೊದಲಿನಂತೆ ಮತ ದೊರಕುವುದಿಲ್ಲ ಎಂದು ಪಂಚಾಯತದಿಂದ ಪಾರ್ಲಿಮೆಂಟ್ ಚುನಾವಣೆಯವರೆಗೆ ದೃಢವಾಗುತ್ತಿದ್ದಂತೆ, ಆ ಪಕ್ಷದ ಕೆಲವರು ವಂಶಪಾರಂಪರ್ಯದ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಈ ಪರಂಪರೆ ನುಂಗಲೂ ಆಗದ ಉಗಳಲೂ ಆಗದ ಅಸಹಾಯಕ ಪರಿಸ್ಥಿತಿ ತಂದೊಡ್ಡಿದೆ.

ಸೋನಿಯಾ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆ ಯಾರನ್ನಾದರೂ ಕಾಂಗ್ರೆಸ್ ಮುಖಂಡರು ಒಪ್ಪುವರೇ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಸಕಾರಾತ್ಮಕ ಸ್ಪಂದನೆ ಕಾಣುತ್ತಿದೆ. ಸೋನಿಯಾ ಗಾಂಧಿ ಇಂದು diminishing return ಸ್ಟೇಜನಲ್ಲಿ ಇರುವುದರಿಂದ ಆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮತದಾರರನ್ನು ಆಕರ್ಷಿಸುವ ಮತ್ತು ಮತಪೆಟ್ಟಿಗೆಗೆ ಮತವನ್ನು ಹರಿಸುವ ಶಕ್ತಿ ಇದ್ದ ಯಾರನ್ನೂ ಕಾಂಗ್ರೆಸ್ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆ. ಯಾರೂ ಹುಟ್ಟಿನಿಂದ ನಾಯಕರಾಗುವುದಿಲ್ಲ. ನೆಹರೂ ಸಾಧಿಸಲಾಗದ್ದನ್ನು ಶಾಸ್ತ್ರಿ, ನಂತರ ಇಂದಿರಾಗಾಂಧಿ, ವಾಜಪೇಯಿ, ಈಗ ಮೋದಿ ಸಾಧಿಸಿಲ್ಲವೇ?

ಸದ್ಯದ ಭಾರತದ ರಾಜಕೀಯ ಪಕ್ಷಗಳ ಸ್ಥಿತಿಗತಿಯನ್ನು ಮತ್ತು ಅವರ ರೀಚನ್ನುನೋಡಿದರೆ, ಕಾಂಗ್ರೆಸ್ಸಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಅದು ನಾಯಕತ್ವವನ್ನು ಬದಲಿಸಬೇಕು, ಸೆಕ್ಯುಲರಿಸಂ ಮತ್ತು ಸೋನಿಯಾ ಎನ್ನುವ ಗುಂಗಿನಿಂದ ಹೊರಬರಬೇಕು. ಜೊತೆಗೆ ನೀತಿ ನಡಾವಳಿಯನ್ನು ಬದಲಾದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಬದಲಿಸಿಕೊಳ್ಳಬೇಕು. ಕೇವಲ ಎರಡು ಸೀಟುಗಳನ್ನು ಗಳಿಸಿ ರಾಜಕೀಯ ನಕಾಶೆಯಿಂದ ಕಾಣೆಯಾಗುವ ಸ್ಥಿತಿಯಲ್ಲಿದ್ದ ಪಕ್ಷ ಇಂದು 330 ಸೀಟುಗಳನ್ನು ಪಡೆದಿರುವಾಗ ಕಾಂಗ್ರೆಸ್ಸಿನ ಪುನರುಜ್ಜೀವನ ಅಸಾಧ್ಯವಲ್ಲ.

ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಒಂದಾಗಿ ಒಕ್ಕೂಟ ನಡೆಸುವುದು ಚಿಂತನೆಗಿಂತ ಮುಂದೆ ಹೋಗುವುದು ಕಷ್ಟ. ಕೌಟುಂಬಿಕ ರಾಜಕಾರಣ, ಭಾಷೆ, ಜಾತಿ, ಧರ್ಮ ಮತ್ತು ಬೇರೆ ಯಾವುದೋ ಪಕ್ಷದ ವಿರೋಧದಲ್ಲಿ ಹುಟ್ಟಿ ಆಟವಾಡುತ್ತಿರುವ ಈ ಪಕ್ಷಗಳು ಒಂದಾಗುವುದು ಅಸಾಧ್ಯ. ಕೆಲವು ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯವನ್ನು ಬಿಟ್ಟು ಹೊರ ನೋಡುವುದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಕೇರಳದ ಮುಖ್ಯಮಂತ್ರಿಗೆ ಹಿಂದಿ ಭಾಷೆಯಲ್ಲಿ ಪತ್ರ ಬರೆದಾಗ ಕೇರಳದ ಮುಖ್ಯಮಂತ್ರಿ ಅಚ್ಯುತ್

ಮೆನನ್ ಮಲೆಯಾಳಂ ಭಾಷೆಯಲ್ಲಿ ಉತ್ತರಿಸಿದ್ದರಂತೆ. ಪ್ರಾದೇಶಿಕ ಪಕ್ಷಗಳು ಒಕ್ಕೂಟ ರಚಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಇದೊಂದೇ ಉದಾಹರಣೆ ಸಾಕು. ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಸದಾ ನಿಲುವು ಬದಲಿಸುವ ಅಖಿಲೇಶ ಯಾದವ್, ಮಾಯಾವತಿಯಂತಹ ರಾಜಕಾರಣಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

Leave a Reply

Your email address will not be published.