ನಾಯಕರ ಮೆರವಣಿಗೆಯಲ್ಲಿ ಮರೆಯಾದ ರೈತ!

ಕರ್ನಾಟಕದಲ್ಲಿ ಮೊದಲಿಗಿಂತಲೂ ಹೆಚ್ಚು ರೈತಪರ ಸಂಘಟನೆಗಳು ಇವೆ. ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರ ಪಡೆ ಇದೆ. ಆದರೂ ಈ ದಿನಮಾನಗಳಲ್ಲಿ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ.

ಸಮರ್ಥ ನಾಯಕತ್ವದ ಅಭಾವ

ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಮುಖ್ಯ ಕಾರಣ ಸಮರ್ಥ ನಾಯಕತ್ವದ ಕೊರತೆ. ಇಂದಿನ ರೈತ ಸಂಘಟನೆಗಳ ಜಿಲ್ಲಾಧ್ಯಕ್ಷರು ಕರ್ದರ್ ಅಂಗಿ ತೊಟ್ಟು, ಭುಜದ ಮೇಲೆ ಹಸಿರು ಶಾಲು ಹಾಕಿಕೊಂಡು ವಿಐಪಿ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆ. ಅಲ್ಲದೆ ಇವರು ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಸಂಪೂರ್ಣ ವಿಫಲ; ವಾಸ್ತವ ಪ್ರಜ್ಞೆಯ ಕೊರತೆ ಕಾಡುತ್ತಿದೆ. ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿ ಇಂದು ಅನೇಕ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಈ ಸಾಲಿಗೆ ರೈತಪರ ಸಂಘಟನೆಗಳು ಹೊರತಾಗಿಲ್ಲ. ಸರ್ಕಾರದಿಂದ ರೈತರಿಗಾಗಿ ಇರುವ ಯೋಜನೆಗಳನ್ನು ಅರಿತುಕೊಳ್ಳುವಲ್ಲಿ ಹಾಗೂ ಅವುಗಳನ್ನು ಜನರ ಗಮನಕ್ಕೆ ತರುವ ನಿಟ್ಟಿನಲ್ಲಿ ಇಂದಿನ ರೈತ ಸಂಘದ ನಾಯಕರು ವಿಫಲರಾಗಿದ್ದಾರೆ.

ತತ್ವ ಸಿದ್ಧಾಂತಗಳ ಕೊರತೆ

ನಿರ್ದಿಷ್ಟ ತತ್ವ ಸಿದ್ಧಾಂತಗಳಿಲ್ಲದೆ ಮಾಡುವ ಕಾರ್ಯ, ಕತ್ತಲಲ್ಲಿ ಬಾಣ ಹೊಡೆದಂತೆ. ಇದು ಇಂದಿನ ರೈತ ಚಳವಳಿಗೂ ಅನ್ವಯಿಸುತ್ತದೆ. ರೈತ ಚಳವಳಿ ಮಾಡುವವನಿಗೆ ಮೊದಲು ಮಾನ ಮರ್ಯಾದೆ ಇರಬೇಕು ಎಂದು ಪ್ರೊ.ನಂಜುಂಡಸ್ವಾಮಿಯವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ರೈತ ಹೋರಾಟದ ಸಂದರ್ಭದಲ್ಲಿ ಹೇಳಿದ್ದರು. ಇದರ ಅರ್ಥ ರೈತ ಚಳವಳಿ ರೂಪಿಸುವವರು ಮುಖ್ಯವಾಗಿ ನೀತಿ ನಿಯಮಗಳನ್ನು ರೂಪಿಸಿಕೊಳ್ಳಬೇಕು, ಅದಕ್ಕೆ ಬದ್ಧರಾಗಿ ಹೋರಾಡಬೇಕು ಎಂಬುದಾಗಿತ್ತು. ಆದರೆ ಇಂದಿನ ರೈತ ಚಳವಳಿಗಳನ್ನು ನಡೆಸುವ ಸಂಘಟನೆಗಳಿಗೆ ಯಾವುದೇ ಸಿದ್ಧಾಂತಗಳಿಲ್ಲ. ಅಲ್ಲದೇ ರೈತ ಸಂಘನೆಗಳಲ್ಲಿ ವ್ಯಾಪಾರಸ್ಥ ನಾಯಕರೇ ತುಂಬಿಕೊಂಡಿರುವಾಗ ಇವರು ಅದ್ಹೇಗೆ ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಗಟ್ಟಿ ಧ್ವನಿ ಎತ್ತಲು ಸಾಧ್ಯ?

ಮೂಲ ಸಮಸ್ಯೆ ಆಲಿಸುವಲ್ಲಿ ವಿಫಲ

ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದ ಹಿಂದಿನ ಆಶಯವನ್ನು ಅರಿತುಕೊಳ್ಳವಲ್ಲಿ ಇಂದಿನ ರೈತ ಸಂಘಟನೆಗಳು ವಿಫವಾಗಿವೆ. ಕೃಷಿಭೂಮಿ ಇದ್ದರೂ ಉಳುಮೆಯಲ್ಲಿ ತೊಡಗದ ರೈತರ ಹಿತ ಕಾಯುವಲ್ಲಿ ಸಮಯ ವ್ಯರ್ಥಮಾಡುವ ರೈತ ಸಂಘಟನೆಗಳು ಅದೇ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿಮಾಡುವ ಬಡ ರೈತನ ಗೋಳು ಕೇಳುವಲ್ಲಿ ವಿಫಲವಾಗಿವೆ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಮಂಜೂರು ಆಗುವ ಪಂಪ್ ಸೆಟ್ ಗಳ ಸಬ್ಸಿಡಿ ಹಣ ಗುತ್ತಿಗೆ ಮಾಡುವ ರೈತನ ಕೈ ಸೇರದೆ, ಬೆವರಿಳಿಸದ ಭೂ ಒಡೆಯನ ಜೇಬು ಸೇರುತ್ತಿದೆ. ಅಷ್ಟೇ ಅಲ್ಲದೆ ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುವ ರೈತರಿಗೆ ಭದ್ರತೆ ಒದಗಿಸುವ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಅದೆಷ್ಟು ರೈತಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ?

ಇಚ್ಚಾಶಕ್ತಿ ಇಲ್ಲವೇ ಇಲ್ಲ

ಇಂದಿನ ರೈತ ಚಳವಳಿಗಳಲ್ಲಿ ಕಾಣುವ ಬಹು ದೊಡ್ಡ ವೈಫಲ್ಯವೆಂದರೆ ಇಚ್ಛಾಶಕ್ತಿಯ ಕೊರತೆ. ರೈತರ ಸಮಸ್ಯೆಗಳನ್ನು ಹೊತ್ತು ಚಳವಳಿ ಆರಂಭಿಸುವ ಇಂದಿನ ರೈತಪರ ಸಂಘಟನೆಗಳಲ್ಲಿ ಸಮಸ್ಯೆಯನ್ನು ತಾರ್ಕಿಕ ಅಂತ್ಯ ಮುಟ್ಟಿಸುವ ಇಚ್ಛಾಶಕ್ತಿ ಕಂಡುಬರುತ್ತಿಲ್ಲ.

ಹಿಂದೆ ರೈತ ಸಂಘಟನೆಗಳ ಕೂಗಿಗೆ ಇಡೀ ರಾಜ್ಯದ ಅನ್ನದಾತ ಸಮುದಾಯವೇ ಹೋರಾಟಕ್ಕೆ ಧುಮುಕುತ್ತಿತ್ತು. ಆದರೆ ಇಂದಿನ ಸಂಘಟನೆಗಳ ಮೇಲೆ ನಂಬಿಕೆ ಕಳೆದುಕೊಂಡ ರೈತರು ಸಾರಿಗೆ ವ್ಯವಸ್ಥೆ ಮಾಡಿದರೂ ಪ್ರತಿಭಟನೆಗೆ ಬರಲು ತಯಾರಿಲ್ಲ. ಹಾಗಾಗಿ ಇಂದಿನ ರೈತ ಮುಖಂಡರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ರೈತರ ಗಮನ ಸೆಳೆಯುವಲ್ಲಿ ವಿಫಲ

ಇಂದು ಪ್ರತಿ ಹಳ್ಳಿಯಲ್ಲೂ ರೈತ ಸಂಘಟನೆಗಳ ನಾಮಫಲಕಗಳು ಕಾಣುತ್ತವೆ. ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷರ ಹೆಸರುಗಳು ರಾರಾಜಿಸುತ್ತವೆ. ಇದರಲ್ಲಿ ಅವರ ಪ್ರಚಾರಪ್ರಿಯತೆ ವ್ಯಕ್ತವಾಗುತ್ತದೆಯೇ ಹೊರತು ರೈತ ಚಳವಳಿ ಕಟ್ಟಬೇಕೆಂಬ ಬದ್ಧತೆಯಲ್ಲ. ನಾಮಫಲಕ ಹೂಳಲು ವಹಿಸಿದ ಮುತುವರ್ಜಿಯನ್ನು ರೈತರು ಅನುಭವಿಸುವ ಅನ್ಯಾಯಗಳ ಕುರಿತು ಆಗಾಗ ವಿಶೇಷ ಉಪನ್ಯಾಸ ನೀಡುವಲ್ಲಿ, ರೈತರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುವಲ್ಲಿ ತೋರಿಸಿದ್ದರೆ ಇಂದು ರೈತ ದ್ವಿತೀಯ ದರ್ಜೆ ಪ್ರಜೆಯಂತೆ ಜೀವಿಸುತ್ತಿರಲಿಲ್ಲ; ರೈತ ಚಳವಳಿಗಳು ಹಳ್ಳ ಹಿಡಿಯುತ್ತಿರಲ್ಲ.

1988ರ ಚುನಾವಣಾ ಸಂದರ್ಭದಲ್ಲಿ ಪ್ರೊ.ನಂಜುಂಡಸ್ವಾಮಿಯವರು ಒಂದು ಓಟು ಐದು ರೂ. ನೋಟು ಎಂಬ ಘೋಷಣೆಯೊಂದಿಗೆ ದೇಣಿಗೆ ಪಡೆದು ನಿಷ್ಠಾವಂತ ಅಭ್ಯರ್ಥಿಗಳನ್ನು ನಿಲ್ಲಿಸಿ ಜನಮನ್ನಣೆ ಪಡೆದರು. ಅಲ್ಲದೆ ರೈತರು ತಮ್ಮ ಮತವನ್ನು ಮಾರಿಕೊಳ್ಳದಂತೆ ಜಾಗೃತಿ ಮೂಡಿಸಿದರು. ಈ ರೀತಿ ಜನಬೆಂಬಲ ಪಡೆಯುವ ರೈತ ಮುಖಂಡರ ಕೊರತೆ ಇಂದು ಕಾಡುತ್ತಿದೆ.

ಶೋಕಿತನ

ಇಂದಿನ ರೈತಪರ ಸಂಘಟನೆಯ ಮುಖಂಡರು ಕಾರುಗಳಿಗೆ ಹಸಿರು ಬೋರ್ಡ್ ಹಾಗೂ ಹಸಿರು ಗೂಟ-ಬಾವುಟ ಕಟ್ಟಕೊಂಡು ಮಿಂಚುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಜಲಾಶಯಕ್ಕೂ ಹಿತರಕ್ಷಣಾ ಸಮಿತಿಗಳನ್ನು ಸ್ಥಾಪಿಸಿರುವ ಇವರು ಅದಾವ ಹಿತ ಕಾಯುತ್ತಿದ್ದಾರೊ ಕಾಣೆ. ಪ್ರತಿಯೊಂದು ಕಾಲುವೆಗೂ ಹಿತರಕ್ಷಣಾ ಸಮಿತಿಗಳು ಶುರುವಾಗಿ ಅದರ ಹೆಸರಿನಲ್ಲಿ ರಾಜಕಾರಣ ಮಾಡುವ ದಿನಗಳು ದೂರವೇನಿಲ್ಲ
ಹೀಗಾಗಿ ಕರ್ನಾಟಕದಲ್ಲಿ ರೈತ ನಾಯಕರು ಮೆರೆಯುತ್ತಿದ್ದಾರೆ, ಚಳವಳಿ ನರಳುತ್ತಿದೆ!

*ಲೇಖಕ ಬಳ್ಳಾರಿಯ ಕಾನೂನು ಕಾಲೇಜಿನ ವಿದ್ಯಾರ್ಥಿ.

Leave a Reply

Your email address will not be published.