ನಾವೇನು ಮಾಡುತ್ತಿದ್ದೇವೆ..?

ನಿಮ್ಮ ಸಮಾಜಮುಖಿ ಪತ್ರಿಕೆಯು ಬೇರೆಲ್ಲಾ ನಿಯತಕಾಲಿಕಗಳಿಗಿಂತ ಭಿನ್ನವಾಗಿದೆ ಎಂದು ನಿಮಗೆ ಈಗಾಗಲೇ ಮನವರಿಕೆಯಾಗಿದೆಯೆಂದು ಭಾವಿಸಿದ್ದೇವೆ. ಕನ್ನಡದಲ್ಲಿ ವೈಚಾರಿಕ ಚರ್ಚೆಗೆ ಹಾಗೂ ಸೃಜನೇತರ ಬರವಣಿಗೆಗಳಿಗೆ ಆಸ್ಪದ ನೀಡಲೆಂದು ಶುರುವಾದ ನಿಮ್ಮ ಈ ಪತ್ರಿಕೆ ಅಸಾಂಪ್ರದಾಯಿಕವಾಗಿ ಕನ್ನಡಿಗರ ಚಿಂತನಶೀಲತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದೆಯೆಂದು ಸಹಾ ನೀವು ಗಮನಿಸಿರುತ್ತೀರಿ.

ಪ್ರತಿತಿಂಗಳ ಸಂಚಿಕೆಯಲ್ಲಿ ನಾವು ಮುಖ್ಯಚರ್ಚೆಯೊಂದನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಕನ್ನಡದ ಬೇರಾವುದೇ ವೃತ್ತಪತ್ರಿಕೆ-ನಿಯತಕಾಲಿಕಎಲೆಕ್ಟ್ರಾನಿಕ್ಮಾ ಧ್ಯಮಗಳು ‘ಮುಟ್ಟದ’ ಸಂಕೀರ್ಣ ವಿವಾದಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ‘ನಮ್ಮ ಕಾಲವನ್ನು ಗುರುತಿಸುವುದು ಹೇಗೆ’ ಎಂಬಂತಹ ಅಸ್ಪಷ್ಟ ವಿಷಯಗಳಿಂದ ಹಿಡಿದು ಸಂಚಾರ ದಟ್ಟಣೆಯಂತಹ ದೈನಂದಿನ ಬವಣೆಗಳ ಬಗ್ಗೆ ನಾವು ನಿಮ್ಮ ಗಮನ ಸೆಳೆದಿದ್ದೇವೆ. ಈ ಯಾವುದೇ ಚರ್ಚೆಯ ಒಳಹೊರಗು ಮತ್ತು ಬಹುಆಯಾಮಗಳನ್ನು ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವನ್ನೂ ಮಾಡಿದ್ದೇವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಹೋರಾಟ ಮಾಡಿದ್ದರೆ ಮತ್ತೆ ಕೆಲವು ವಿವಾದಗಳನ್ನು ‘ಹೇಗಿದೆಯೋ ಹಾಗೆ’ ಪ್ರಸ್ತುತ ಪಡಿಸಲು ಶ್ರಮ ಪಟ್ಟಿದ್ದೇವೆ.

ಈ ಹಲವು ಮುಖ್ಯಚರ್ಚೆಗಳು ಕೆಲವೊಮ್ಮೆ ಅಪೂರ್ಣವೂ ಅಪಕ್ವವೂ ಆಗಿದೆಯೆಂಬ ಅರಿವು ಕೂಡಾ ನಮಗಿದೆ. ನಾವು ಬಯಸಿದಷ್ಟು ಗಾಢವಾಗಿ ಮತ್ತು ಪ್ರಖರವಾಗಿ ಚರ್ಚೆ ಮೂಡಿಬರದೇ ಇರಬಹುದು. ವಿಷಯಗಳ ಪ್ರಸ್ತುತಿಯಲ್ಲಿ ಚಿತ್ರಗಳ, ಗ್ರಾಫಿಕ್ಸ್‍ಗಳ ಹಾಗೂ ಅಂಕಿಅಂಶಗಳ ಕೊರತೆಯೂ ನಮ್ಮನ್ನು ಕಾಡಿದೆ. ಕನ್ನಡದಲ್ಲಿ ವಿಷಯದ ವೈಚಾರಿಕತೆಯನ್ನು ಗ್ರಹಿಸಿ ಸುಲಭವಾಗಿ ಓದಿಸಿಕೊಳ್ಳುವ ರೀತಿಯಲ್ಲಿ ಮಂಡಿಸುವ ಲೇಖಕರ ಅಲಭ್ಯತೆಯೂ ಇದೆ. ನಮ್ಮ ಸಂಪಾದಕೀಯ ತಂಡದ ಹಲವು ನ್ಯೂನತೆಗಳನ್ನೂ ನೀವು ಗಮನಿಸಿರಬಹುದು. ಇಷ್ಟಾದರೂ ನಾವು ಶ್ರದ್ಧಾಪೂರ್ವಕವಾಗಿ ಪ್ರತಿತಿಂಗಳು ಅತಿಮುಖ್ಯ ವಿವಾದವೊಂದನ್ನು ಅತ್ಯಂತ ಜತನದಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ. ಹಾಗಾದರೆ…ನಾವೇಕೆ ಹೀಗೆ ಮಾಡುತ್ತಿದ್ದೇವೆ..?

ಒಳ್ಳೆಯ ಚಿಂತನೆಯೊಂದಕ್ಕೆ ಸಾವಿಲ್ಲವೆಂದು ನಾವು ನಂಬಿದ್ದೇವೆ ಮತ್ತು ಆ ಚಿಂತನೆಯ ಬೀಜವೊಂದನ್ನು ಕನ್ನಡ ಸಮಾಜದಲ್ಲಿ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗುವ ನಂಬಿಕೆಯ ಕಾತರದಲ್ಲಿದ್ದೇವೆ. ಬೇರೆಯವರು ನಿರ್ಲಕ್ಷ್ಯ ಮಾಡಿದ, ಕೈಗೆತ್ತಿಕೊಳ್ಳಲು ಹೆದರಿದ, ಅವರ ಅರಿವಿಗೆ ನಿಲುಕದ ಹಾಗೂ ಅವರು ಪ್ರಾಮುಖ್ಯ ಅರಿಯದ ಸಮಸ್ಯೆಗಳನ್ನು ನಿರ್ಭಯವಾಗಿ ಹಾಗೂ ನಿಷ್ಟಕ್ಷಪಾತವಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಅದಕ್ಕೆ ಪರಿಹಾರ ಹುಡುಕುವ ತವಕದಲ್ಲಿದ್ದೇವೆ.

ನಿಮ್ಮ ಪತ್ರಿಕೆಯಲ್ಲಿ ಪ್ರಕಟಿತ ವಾದ-ಪ್ರತಿವಾದಗಳನ್ನು ನಾಡಿನ ಹಲವು ಹೆಸರಾಂತ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ಮಾ ಧ್ಯಮಗಳು ತಮ್ಮದಾಗಿಸಿಕೊಂಡಿವೆ. ನಮ್ಮ ಚಿಂತನೆಯ ಬೀಜಕ್ಕೆ ನೀರೆರೆಯುತ್ತಿವೆ. ನಾಡಿನ ಚಿಂತಕರು ಹಾಗೂ ರಾಜಕಾರಣಿಗಳು ಇಲ್ಲಿ ಚರ್ಚಿತ ವಿಚಾರಗಳನ್ನು ಪುನರುಚ್ಚರಿಸುತ್ತಿದ್ದಾರೆ. ನಿಮ್ಮ ಪತ್ರಿಕೆಯ ಓದುಗ ಬಳಗ ಹೆಚ್ಚುತ್ತಿದ್ದಂತೆ ನಿಮ್ಮ ವಿಚಾರಗಳ ವಿಸ್ತರಣೆಯೂ ತೀವ್ರವಾಗಲಿದೆ. ನಾಡಿನ ನೀತಿ ನಿರೂಪಕರ ಮೇಲೆ ಹಾಗೂ ಯೋಜನೆ ಕಾರ್ಯರೂಪಿಸುವವರ ಮೇಲೆ ಹಕ್ಕೊತ್ತಾಯವಾಗಲಿದೆ. ನಿಮ್ಮ ಪತ್ರಿಕೆಯ ಮುಖ್ಯಚರ್ಚೆಗಳ ಇತಿಮಿತಿಗಳ ಬಿಡುಗಡೆಯಲ್ಲಿ ನೀವು ಬಯಸಿದ ಫಲಿತಾಂಶವೂ ಸಿಗಲಿದೆ. ನೀವು ಅಪೇಕ್ಷಿಸುವ ಸಮೃದ್ಧ ಕರ್ನಾಟಕಕ್ಕೆ ನಾಂದಿಯಾಗಲಿದೆ. ಈ ದಿನಗಳಲ್ಲಿ ನಿಮ್ಮ ವಿಶ್ವಾಸ ಹೆಚ್ಚಲಿ ಹಾಗೂ ನಮ್ಮ ಹೋರಾಟ ಮುಂದುವರಿಯಲಿ ಎಂದು ಆಶಿಸುತ್ತೇವೆ.

-ಸಂಪಾದಕೀಯ ಬಳಗ

ಸಂಪಾದಕ
ಚಂದ್ರಕಾಂತ ವಡ್ಡು
ಗೌರವ ಸಹಸಂಪಾದಕ
ಪೃಥ್ವಿದತ್ತ ಚಂದ್ರಶೋಭಿ

ಸಮಾಜಮುಖಿ
ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ,
ಬೆಂಗಳೂರು 560020, ಮೊ: 9606934018,  samajamukhi2017@gmail.com

Leave a Reply

Your email address will not be published.