ನಿಜ ಆದ ಅನುಮಾನ!

ಕೊರೊನೋತ್ತರ ಅವಧಿಯಲ್ಲಿ ಜನರ ಜೀವನದೃಷ್ಟಿ ಮತ್ತು ಜೀವನಶೈಲಿಯಲ್ಲಿ ಗಮನಾರ್ಹ ಸ್ಥಿತ್ಯಂತರ ಆಗಬಹುದೆಂದು ಅನೇಕರು ಕನಸು ಕಂಡಿದ್ದೆವು. ಹಾಗಾಗದಿರಲೂ ಸಾಧ್ಯ ಎಂಬ ಸಣ್ಣ ಶಂಕೆ ಮತ್ತು ವಾಸ್ತವ ಪ್ರಜ್ಞೆಯೂ ಜೊತೆಗಿತ್ತು. ಆದರೆ ಫಲಿತಾಂಶಕ್ಕಾಗಿ ಕೊರೊನಾ ಅವಧಿ ಮುಗಿಯುವವರೆಗೂ ಕಾಯುವ ಅಗತ್ಯ ಕೂಡಾ ಇಲ್ಲದಂತಾಗಿದೆ. ಈಗಾಗಲೇ ಜನಸಾಮಾನ್ಯರ ವ್ಯಕ್ತಿಗತ ಸ್ವಾರ್ಥ ಮತ್ತು ಅಧಿಕಾರಸ್ಥರ ಹಣದಾಹ ಪ್ರಖರವಾಗಿ ಪ್ರಕಟಗೊಂಡಿದೆ. ನಮ್ಮೊಳಗಿನ ಅನುಮಾನವೇ ನಿಜ ಆಗಿ, ಆಶಯ ಘಾಸಿಗೊಂಡಿದ್ದಕ್ಕೆ ಪುರಾವೆಗಳ ಕೊರತೆಯಿಲ್ಲ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಆರಂಭದಿಂದ ನಡೆದುಕೊಂಡ ರೀತಿ, ಅಳವಡಿಸಿಕೊಂಡ ನೀತಿ, ಕೊಟ್ಟ ಭರವಸೆಗಳು, ಬಿಟ್ಟ ಮನಸ್ಸಾಕ್ಷಿ, ಮಾತು-ಕೃತಿಗಳ ಅಂತರ, ಸಂಪುಟ ಸದಸ್ಯರ ಮಂಗಾಟ, ಅಧಿಕಾರಿಗಳ ನುಂಗಾಟ… ಈಗ ಎಲ್ಲವೂ ಬಟಾಬಯಲು. ಜೊತೆಗೆ ಸರ್ಕಾರದ ಹೆಗಲ ಮೇಲೆ ಭ್ರಷ್ಟಾಚಾರದ ಭಾರ ಮತ್ತು ಕೋವಿಡ್ ನಿರ್ವಹಣೆಯ ಸಂಪೂರ್ಣ ಸೋಲಿನ ಹೊಣೆ.

ಈಗಿನ ಆಡಳಿತ ಮತ್ತು ಆರೋಗ್ಯ ವ್ಯವಸ್ಥೆ ಮೇಲೆ ಯಾರಿಗೂ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಈ ಅದಕ್ಷ, ಅಪ್ರಾಮಾಣಿಕ ವ್ಯವಸ್ಥೆಯನ್ನು ಸಾಮಾನ್ಯ ಸಂದರ್ಭದಲ್ಲಿ ಜನ ಅದೇಕೋ, ಅದ್ಹೇಗೋ ಅನಿವಾರ್ಯವಾಗಿ ಸಹಿಸಿಕೊಂಡು ಹೊಟ್ಟೆಗೆ ಹಾಕಿಕೊಂಡಿದ್ದರು. ಅಧಿಕಾರಸ್ಥರು ತಮ್ಮ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂಬ ಅರಿವು ಅಂಗೈ ಹುಣ್ಣಿನಂತೆ ಕಣ್ಣೆದುರಿಗಿದ್ದರೂ ಜನ ಯಾಕೋ ಕನ್ನಡಿ ಹುಡುಕುತ್ತಿದ್ದರು. ಆದರೆ ಈಗಿನ ಸಂದರ್ಭ ಅಸಾಮಾನ್ಯವಾದುದು. ಹಣದಾಹಿಗಳು ಚೆಲ್ಲಾಟ ಆಡುತ್ತಿರುವುದು, ಜೂಜಿಗೆ ಒಡ್ಡಿರುವುದು ಜನರ ‘ಜೀವನ’ವನ್ನಲ್ಲ; ಮತ್ತೆಂದೂ ಹಿಂದಿರುಗದ, ಹಲವು ಕರುಳುಗಳೊಂದಿಗೆ ಬೆಸೆದುಕೊಂಡ ಜನಸಮಾನ್ಯರ ‘ಜೀವ’ಗಳೇ ಇಂದು ವ್ಯವಸ್ಥೆಯ ಅವಘಡಕ್ಕೆ ಬಲಿಯಾಗುತ್ತಿವೆ. ಎಂತಹ ಅಸಹಾಯಕ, ಅತಂತ್ರ, ಅನಿಷ್ಟ ಸನ್ನಿವೇಶ!

ಕೋವಿಡ್ ನಿರ್ವಹಣೆ ಕಾರ್ಯದ ವಿವಿಧ ಬಾಬತ್ತುಗಳಲ್ಲಿ ಅಧಿಕಾರಸ್ಥರಿಗೆ ಕಮಿಷನ್ ಹಣ ಸಂದಾಯವಾಗಿದೆ, ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಾಗ ಯಾರಿಗೂ ಅಚ್ಚರಿಯಾಗಲಿಲ್ಲ. ಈ ವ್ಯವಸ್ಥೆಯ ನೀಚ ನಾಲಿಗೆಗಳು ರುಚಿ ಇದ್ದಲ್ಲಿಗೆ ನಿರಾಯಾಸ ಚಲಿಸಿ ಚಪ್ಪರಿಸುವುದರಲ್ಲಿ ಪರಿಣತ ಎಂಬ ನಿಜ ಎಲ್ಲರಿಗೂ ಗೊತ್ತಿರುವುದೇ. ಆದರೆ ಇಡೀ ಪ್ರಪಂಚವನ್ನು ಗಜಂ ನಿಲ್ಲಿಸಿರುವ ಪರಮ ಸಂಕಷ್ಟದ ಸಂದರ್ಭದಲ್ಲೂ ಇವರ ಜಿಹ್ವಾ ಚಪಲ ನಿಯಂತ್ರಣ ಕಾಣದಿರುವುದು ಸೋಜಿಗ ಹುಟ್ಟಿಸುವ ಸಂಗತಿ.

ಆಡಳಿತ ನಡೆಸುವವರ ಗತಿಸ್ಥಿತಿ ಹೀಗಿದ್ದರೆ, ವಿರೋಧ ಪಕ್ಷದ ಮನಃಸ್ಥಿತಿ ಇನ್ನೊಂದು ಬಗೆಯದು. ಹದ ತಪ್ಪಿದ ಅಧಿಕಾರಸ್ಥರನ್ನು ಅಂಕೆಯಲ್ಲಿಡಬೇಕಾದ ವಿರೋಧ ಪಕ್ಷಗಳ ನೈತಿಕ ಬಲ ಪ್ರಶ್ನಾರ್ಹವಾಗಿದೆ. ಕೊನೆಗೂ ಅಳೆದುತೂಗಿ, ಅರೆಮನಸ್ಸಿನಿಂದ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ. ಆದರೆ ಇದೇ ಸಿದ್ಧರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಭ್ರಷ್ಟತೆಯ ರಕ್ಷಣೆಗಾಗಿ ಲೋಕಾಯುಕ್ತದ ಹಲ್ಲು ಕಿತ್ತು, ಎಸಿಬಿ ಮೂಲಕ ‘ಸಾಚಾಚೀಟಿ’ ವಿತರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು!

ಇನ್ನು ಇಂತಹ ರಾಜಕಾರಣಿಗಳನ್ನು ಆಯ್ಕೆ ಮಾಡಿರುವ, ವ್ಯವಸ್ಥೆ ರೂಪುಗೊಳ್ಳಲು ಕೈಗೂಡಿಸಿರುವ ನಾವು ನಮ್ಮನ್ನು ಎಷ್ಟರಮಟ್ಟಿಗೆ ಮುಗ್ಧರೆಂದು ಕರೆದುಕೊಳ್ಳಲು ಸಾಧ್ಯ? ಒಂದು ಬಗೆಯಲ್ಲಿ ಇದು ‘ಕಲಕು ನೀರು ಹೇಲು ಮುಕಳಿ’ ಸನ್ನಿವೇಶ. ಸ್ವಚ್ಛಗೊಳಿಸುವುದು ಹೇಗೆ, ಯಾರು, ಯಾವಾಗ?

ಈ ದಾರುಣ ಸಂದರ್ಭದಲ್ಲಿ ವೀರೇಂದ್ರ ಪಾಟೀಲರು, ಅವರ ದಕ್ಷ-ನಿಷ್ಟುರ ಆಡಳಿತ ಮಾದರಿ ನೆನಪಾಗುತ್ತದೆ. ಅದನ್ನು ಈಗಿನವರಿಂದ ನಿರೀಕ್ಷಿಸಲು ಸಾಧ್ಯವೇ?

*

ಚೀನಾ ಕುರಿತ ಈವರೆಗೆ ಅರಿಯದ ವಿವರಗಳು, ಸಕಾಲಿಕ ಮುಖ್ಯಚರ್ಚೆ, ಸಮೃದ್ಧ ಮುಂದುವರಿದ ಚರ್ಚೆ, ಕಟುವಾದ ಸಾಹಿತ್ಯಾವಲೋಕನ, ಕುರಿ ಕಾಮೇಗೌಡರ ಕಾಯಕ, ಸುಭದ್ರಮ್ಮ ಮನ್ಸೂರು ನೆನಪು… ಹೀಗೆ ಎಲ್ಲವನ್ನೂ ಒಳಗೊಂಡಿವೆ ಈ ಸಂಚಿಕೆಯ ಒಳಪುಟಗಳು.

Leave a Reply

Your email address will not be published.