ನಿಮ್ಮ ಓಟು ಯಾರಿಗೆ ?

ಟೀವಿಗಳಲ್ಲಿ ಕಾಣಿಸಿಕೊಂಡ ಮೋದಿ, ‘ಭಾಯಿಯೋ… ಔರ್ ಬೆಹನೋ…’ ಎಂದರು. ‘ದೋ ಹಜಾರ್…’ ಎಂದು ಭಾಷಣ ಮುಂದುವರಿಸಿದಾಗ ನೋಟು ಬ್ಯಾನ್ ಆಗುತ್ತೆ ಎಂದು ಜನ ನಡುಗಿಹೋದರು. ಆದರೆ ದೋ ಹಜಾರ್ ರೂಪಾಯಿ ರೈತರ ಖಾತೆಗೆ ಜಮಾ ಮಾಡಿದ್ದೀವಿ, ಇದು ಮೊದಲ ಕಂತು, ಒಟ್ಟು ಆರು ಸಾವಿರ ಕೊಡ್ತೀವಿ ಎಂದಾಗ ನಿಟ್ಟುಸಿರು ಬಿಟ್ಟರು.

 

 

ಜ್ಜಿಯೊಬ್ಬಳು ಫುಟ್‍ಪಾತ್ ಮೇಲೆ ಹುರುಳಿಕಾಯನ್ನು ಗೋಣೀಚೀಲದ ಮೇಲೆ ಹಾಕಿಕೊಂಡು ಮಾರುತ್ತಿದ್ದಳು.

‘ಬರ್ರೀ ಬರ್ರೀ ಎಳೇ ಹುರುಳಿಕಾಯಿ, ಮುಟ್ಟಿದ್ರೆ ಮುರಿಯುತ್ತೆ, ಬೇಯಿಸಿದರೆ ಕರಗುತ್ತೆ’ ಎಂದು ಕೂಗುತ್ತಿದ್ದಳು. ಅಲ್ಲಿಗೆ ರಾಹುಲ್‍ಗಾಂಧಿ ಬಂದರು.

`ಹೆಂಗಮ್ಮ ಕಾಲು ಕೇಜಿ ಹುರುಳಿಕಾಯಿ?’ ಅಜ್ಜಿ ರಾಹುಲ್ ಮುಖವನ್ನು ನೋಡಿ ಆಶ್ಚರ್ಯಪಟ್ಟಳು.

‘ಅಪ್ಪಾ, ನೀನಾ? ನಿಂಗೆ ಕಾಲು ಕೇಜಿ ಬೇಕಾ? ತಗೊಂಡ್ಹೋಗಪ್ಪ. ದುಡ್ಡು ಕೊಡಬೇಕಿಲ್ಲ’ ಅಂದಳು.

‘ಯಾಕಜ್ಜೀ, ದುಡ್ಡು ಯಾಕೆ ಬೇಡ?’ ಎಂದಾಗ ಅಜ್ಜಿ, `ನೋಡಪ್ಪಾ ನಿಂಗೆ ಮೆಣಸಿನಕಾಯಿ ಯಾವ್ದು, ಹುರುಳಿಕಾಯಿ ಯಾವ್ದು ಅಂತ ವ್ಯತ್ಯಾಸ ಈಗ ಗೊತ್ತಾಗಿದೆಯಲ್ಲ, ನಂಗೆ ಅಷ್ಟೇ ಸಂತೋಷ. ತಗೊಂಡ್ಹೋಗು ಅರ್ಧ ಕೇಜಿ ಕೊಡ್ತೀನಿ’ ಎಂದು ನ್ಯೂಸ್ ಪೇಪರ್ ಕವರ್‍ನಲ್ಲಿ ಪ್ಯಾಕ್ ಮಾಡಿ ಕೊಟ್ಟಳು.

ಅನಂತರ ಮನಮೋಹನ್ ಸಿಂಗ್ ಬಂದು, `ಅಜ್ಜೀ, ಅರ್ಧ ಕೇಜಿ ಹುರುಳೀಕಾಯಿ ಹ್ಯಾಗೆ?’ ಅಂತ ಕೇಳಿದರು. ಅಜ್ಜಿಗೆ ಆನಂದ ಆಗ್ಹೋಯ್ತು. ಕೈ ಮುಗಿದಳು. `ಯಪ್ಪಾ, ನೀನು ನಮ್ಮ ಹಳೇ ಪ್ರಧಾನಿ! ನಿಂಗೆ ಅರ್ಧ ಕೇಜಿ ಕಾಯಿ ಹಂಗೇ ಕೊಡ್ತೀನಿ ತಗೊಂಡ್ಹೋಗಪ್ಪ’.

`ಯಾಕಜ್ಜೀ ಪುಕ್ಕಟೆ ಕೊಡ್ತಿ?’

`ನೀನು ಲೋಕಸಭೇಲಿ ಇದ್ದಾಗ ಸೌಂಡೇ ಬಿಡಲಿಲ್ಲ. ನೀನು ಬಾಯಿ ತೆಗೆದಿದ್ದು ಬನ್ ತಿನ್ನೋಕೆ ಮಾತ್ರ. ಇವತ್ತು ಕಡೆಗೂ ಬಾಯಿ ತೆಗೆದೆಯಲ್ಲಪ್ಪ ನನ್ನ ದೊರೆ ತಗೊಂಡ್ಹೋಗು’ ಎಂದಳು. ಅರ್ಧ ಕೇಜಿ ಫ್ರೀಯಾಗಿ ಪ್ಯಾಕ್ ಮಾಡಿ ಕಳಿಸಿದಳು.

ಅನಂತರ ಕುಮಾರಸ್ವಾಮಿಯವರು ಬಂದ್ರು.

`ಹೆಂಗಜ್ಜೀ ಹುರುಳೀಕಾಯಿ?’

ಅಜ್ಜಿಗೆ ಅಳು ಬಂತು. ಅಳುತ್ತಾ ಅರ್ಧ ಕೇಜಿ ಪ್ಯಾಕ್ ಮಾಡಿ ಕೊಟ್ಟಳು.

`ಎಷ್ಟು ಕೊಡಬೇಕು?’

`ಬೇಡಪ್ಪಾ, ಬಿಟ್ಟಿಯಾಗಿ ಕೊಟ್ಟಿದ್ದೀನಿ, ತಗೊಂಡ್ಹೋಗು’.

`ಯಾಕಜ್ಜೀ?’ ಕುಮಾರಸ್ವಾಮಿ ಕೇಳಿದ್ರು.

`ಕೊಡ್ಲಿಲ್ಲ ಅಂದ್ರೆ ನೀನು ಅಳೋಕೆ ಶುರು ಮಾಡ್ತೀಯ. ನೀನು ಅತ್ರೆ ನಿಮ್ಮಪ್ಪ ಅಳ್ತಾರೆ. ನಿಮ್ಮಪ್ಪ ಅತ್ರೆ ನಿಖಿಲ್ ಅಳ್ತಾರೆ. ನಿಖಿಲ್ ಅತ್ರೆ ಪ್ರಜ್ವಲ್ ಅಳ್ತಾರೆ. ಇಡೀ ಕುಟುಂಬಾನೇ ಅಳೋಕೆ ಶುರು ಮಾಡ್ಬಿಟ್ರೆ ಹೇಮಾವತಿ ನಾಲೆ ಉಪ್ಪು ನೀರಿಂದ ತುಂಬಿ ಹೋಗ್ತದೆ, ಬಿಟ್ಟಿ ತಗೊಂಡ್ಹೋಗಪ್ಪ’ ಎಂದಳು.

ಅನಂತರ ಸ್ವರ್ಗದಿಂದ ಅನಂತ್‍ಕುಮಾರ್ ಬಂದರು, `ಹೆಂಗಜ್ಜೀ, ಹುರುಳೀಕಾಯಿ?’

`ಚೆನ್ನಾಗಿದ್ದೀಯಾಪ್ಪಾ? ರಸಗೊಬ್ಬರಕ್ಕೆ ಬೇವಿನ ಎಣ್ಣೆ ಬೆರೆಸಿ ಯೂರಿಯಾದ ದುರುಪಯೋಗ ತಪ್ಪಿಸಿದವನೇ ನೀನು ಕಣಪ್ಪ, ರೈತರನ್ನ ಉದ್ಧಾರ ಮಾಡಿದ್ದೀಯ. ನಿನಗೆ ಕೊಡ್ದೆ ಇನ್ಯಾರಿಗೆ ಕೊಡ್ಲಿ? ತಗೊಂಡ್ಹೋಗು ಸ್ವರ್ಗಕ್ಕೆ. ತಗೋ, ಇನ್ನೂ ರವಷ್ಟು ಜಾಸ್ತಿ ಹಾಕಿದ್ದೀನಿ. ಉಳಿದರೆ ಇಂದ್ರನಿಗೆ ಕೊಡು’ ಎಂದು ಪ್ಯಾಕ್ ಮಾಡಿ ಕಳಿಸಿದಳು.

ಕಡೆಗೆ ಬಂದಿದ್ದು ಒಬ್ಬ ಬಿಳಿಯ ಗಡ್ಡದ ರಾಜಕಾರಣಿ. ಅರ್ಧ ತೋಳಿನ ಜುಬ್ಬಾ, ಪೈಜಾಮ. ಅತ್ತಿತ್ತ ನೋಡುತ್ತಾ, `ಭಾಯಿಯೋ, ಔರ್ ಬೆಹನೋ’ ಎಂಬಂತೆ ನೋಡುತ್ತಾ ಬಂದರು.

`ಹೆಂಗಜ್ಜೀ ಹುರುಳೀಕಾಯಿ?’ ಜುಬ್ಬಾಧಾರಿ ಕೇಳಿದ್ರು. ಅಜ್ಜಿಗೆ ಸಂತೋಷವಾಯ್ತು.

`ಎಲ್ಲರ ಮನಸ್ನಾಗೂ ನೀನೇ ಇದ್ದೀಯ. ನಿನಗೆ ಹೆಂಡ್ರಿಲ್ಲ, ಮಕ್ಕಳಿಲ್ಲ. ತಗೋ, ಹುರುಳೀಕಾಯಿ ಪಲ್ಯ ಮಾಡ್ಕೊಂಡು ತಿನ್ನು, ಒಂದು ಕೇಜಿ ಕೊಡ್ತೀನಿ. ಆದ್ರೆ ಒಂದು ಕಂಡಿಷನ್ನು…’ ಅಂತು ಮುದುಕಿ.

‘ಏನದು?’ ಅದೇ ತಾನೇ ವಿದೇಶ ಪ್ರವಾಸ ಮುಗಿಸಿಬಂದಿದ್ದ ರಾಜಕಾರಣಿಗೆ ಕುತೂಹಲ.

‘ಹುರುಳೀಕಾಯಿ ಬಿಟ್ಟಿಯಾಗಿ ಕೊಡ್ತೀನಿ. ಆದ್ರೆ ‘ಮೇ ಚೌಕೀದಾರ್ ಹೂಂ…’ ಅಂತ ಭಾಷಣ ಶುರು ಮಾಡದೆ ಬಾಯಿ ಮುಚ್ಕಂಡು ಮನೆ ಸೇರಬೇಕು’ ಎಂದು ಎಚ್ಚರಿಸಿ ಕಳಿಸಿತು ಅಜ್ಜಿ.

ಮತ್ತೊಬ್ಬ ರಾಜಕಾರಣಿ ಬಂದರು. ಅವರ ಮನೆ ರೈಡ್ ಆಗಿ ಕೋಟ್ಯಂತರ ರೂಪಾಯಿ ಕ್ಯಾಷ್ ಕರೆನ್ಸಿ ಸಿಕ್ಕಿದ್ದು ರಾಷ್ಟ್ರಮಟ್ಟದ ಸುದ್ದಿ ಆಗಿತ್ತು.

`ಹೆಂಗಜ್ಜೀ, ಹುರುಳೀಕಾಯಿ?’ ಎಂದಾಗ ಅಜ್ಜಿ,

`ಕೇಜಿಗೆ ಹತ್ತು ಸಾವಿರ ರೂಪಾಯಿ ಆಗ್ತದೆ.’

`ಏನಜ್ಜೀ, ಹುರುಳೀಕಾಯಿ ಕೇಜಿಗೆ ಹತ್ತು ಸಾವಿರಾನಾ…?’

‘ಅಲ್ಲಪ್ಪಾ, ಕೊಳಿಯೋಷ್ಟು ದುಡ್ಡು ಮನೆಯಾಗ ಮಡಿಕ್ಕೊಂಡು ಏನ್ಮಾಡ್ತೀಯಾ? ನಮ್ಮಂಥ ಬಡವರಿಗಾದ್ರೂ ಕೊಡು. ದೇಶ ಉದ್ಧಾರ ಆಗ್ತದೆ’ ಎಂದಳು. ಆ ರಾಜಕಾರಣಿ ಅಜ್ಜಿಯನ್ನು ಬೈಯುತ್ತಾ ವಾಪಸ್ ಹೊರಟುಬಿಟ್ಟ.

ಇವೆಲ್ಲಾ ನಮಗೆ ವಾಟ್ಸಪ್‍ನಲ್ಲಿ ಹಂಚಿಕೊಳ್ಳುವ ವಿಷಯಗಳಿರಬಹುದು. ಆದರೆ ಪ್ರತಿ ಸಾಲಿನ ಹಿಂದೆ ಇರುವ ಸತ್ಯ ಗಮನಿಸಬೇಕಾಗುತ್ತದೆ. ಆಳಲು ಬಂದವರೆಲ್ಲಾ ಏನಾದರೂ ಒಂದು ಮನ್ನಾ ಮಾಡುತ್ತಾ ಇರುತ್ತಾರೆ. ಸ್ವಂತ ಜೇಬಿನಿಂದ ಹಣ ಖರ್ಚು ಮಾಡುತ್ತಾರಾ? ಇಲ್ಲ, ನಮ್ಮಿಂದ ಟ್ಯಾಕ್ಸ್ ಪಡೆದು ತಮ್ಮ ಸರ್ಕಾರದ ಹೆಸರಲ್ಲಿ ನಮಗೇ ಹಂಚುವ ಪ್ರವೃತ್ತಿ. ಮೋದಿ ತೂಕಡಿಸ್ತಿದೆ ಅಂತ ಜನ ಅಂದುಕೊಳ್ಳೋ ಹೊತ್ತಿಗೆ ಯಕ್ಷಗಾನ ಪ್ರಸಂಗದಲ್ಲಿ ಬೆಳಗಿನಜಾವ 3 ಗಂಟೆಗೆ ರಾಕ್ಷಸ ಪಾತ್ರಬಂದು ಎಲ್ಲರನ್ನೂ ಎಬ್ಬಿಸಿದಂತೆ ಆಯಿತು.

ದಿಢೀರನೆ ಬೆಳಿಗ್ಗೆ 3 ಗಂಟೆಗೆ ವೈಮಾನಿಕ ದಾಳಿ ಆಯ್ತು. ಪುಲ್ವಾಮಾದಲ್ಲಿ ನಮ್ಮ ಯೋಧರು ಹತರಾಗಿದ್ದಕ್ಕೆ ಸರಿಯಾದ ತಿರುಗೇಟು ನೀಡಲಾಯಿತು. ಈ ಸೆನ್ಸೇಷನಲ್ ನ್ಯೂಸ್‍ಗೆ ಎಲ್ಲರೂ ದಿಗ್ಗನೆ ಎದ್ದು ನಿಂತರು. `ಭಾರತ ಮಾತಾಕೀ ಜೈ’ ಎಂದರು. ಮೋದಿಯನ್ನ ನೆನೆಸಿದರು.

ಎಲ್ಲಾ ಟೀವಿಗಳಲ್ಲಿ ಕಾಣಿಸಿಕೊಂಡ ಮೋದಿ, ‘ಭಾಯಿಯೋ… ಔರ್ ಬೆಹನೋ…’ ಎಂದರು. ‘ದೋ ಹಜಾರ್…’ ಎಂದು ಭಾಷಣ ಮುಂದುವರಿಸಿದಾಗ ನೋಟು ಬ್ಯಾನ್ ಆಗುತ್ತೆ ಎಂದು ಜನ ನಡುಗಿಹೋದರು. ಆದರೆ ದೋ ಹಜಾರ್ ರೂಪಾಯಿ ರೈತರ ಖಾತೆಗೆ ಜಮಾ ಮಾಡಿದ್ದೀವಿ, ಇದು ಮೊದಲ ಕಂತು, ಒಟ್ಟು ಆರು ಸಾವಿರ ಕೊಡ್ತೀವಿ ಎಂದಾಗ ನಿಟ್ಟುಸಿರು ಬಿಟ್ಟರು.

ಜನರಿಗೆ ನಿಜವಾದ ಸೌಲಭ್ಯ ಒದಗಿಸುವ ರಾಜಕಾರಣಿ ಎಲ್ಲಿದ್ದಾನೆ ಎಂದು ಇವತ್ತು ಹುಡುಕಬೇಕಾಗಿದೆ. ಪ್ರತಿಯೊಬ್ಬರೂ ಅವರ ಬೇಳೆ ಬೇಯಿಸಿಕೊಳ್ಳಲು ಜನ ಊಹಿಸಲಾಗದ ಸವಲತ್ತುಗಳನ್ನು ನೀಡುತ್ತಾರೆ. ತಾಳಿಭಾಗ್ಯ, ಮದುವೆ ಭಾಗ್ಯ ಮೊದಲಾದ ಅನೇಕ ಭಾಗ್ಯಗಳನ್ನು ಕೊಟ್ಟಾಗಿದೆ. ಲ್ಯಾಪ್‍ಟಾಪ್‍ನಿಂದ ಹಿಡಿದು ಬಸ್ ಸ್ಟಾಪಿನವರೆಗೆ ಸಕಲವೂ ಉಚಿತ! ನಿಮ್ಮ ಅಮೂಲ್ಯ ಮತವನ್ನ, ಹಾಳು ಮಾಡಬೇಡಿ. ಅರ್ಹನಾದ, ಪ್ರಾಮಾಣಿಕನಾದ ರಾಜಕಾರಣಿಗೆ ನಿಮ್ಮ ಓಟು ಹಾಕಿ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ.

ಯಾರು ಪ್ರಾಮಾಣಿಕ? ಯಾರು ಅರ್ಹ? ಇದೇ ಗೊತ್ತಿಲ್ಲ. ಹಗರಣಗಳಲ್ಲಿ ಸಿಕ್ಕಿಬಿದ್ದ ಕೆಲವು ರಾಜಕಾರಣಿಗಳೇ ಮತ್ತೆ ಮತ್ತೆ ಆಯ್ಕೆಯಾಗಿ ಬರುತ್ತಿದ್ದಾರೆ. ಅಮೆರಿಕಾದಲ್ಲಿರುವಂತೆ ಎರಡು ವರ್ಷ ಸತತವಾಗಿ ಆಯ್ಕೆಯಾದವನು ತನ್ನ ಜಾಗವನ್ನ ಬೇರೆಯವರಿಗೆ ಬಿಟ್ಟುಕೊಡಬೇಕು ಎಂಬ ಕಾನೂನು ನಮ್ಮಲ್ಲಿದ್ದಿದ್ದರೆ ಚೆನ್ನಾಗಿತ್ತು. ಎಂಟು, ಒಂಬತ್ತು ಬಾರಿ ಮತ್ತೆ ಮತ್ತೆ ಆಯ್ಕೆ ಆಗಿ ಬಂದು ತಲೆ ತಿನ್ನುವ, ತಲತಲಾಂತರಕ್ಕೆ ತಾನು ಹಣ ಮಾಡಿಕೊಳ್ಳುವ ರಾಜಕಾರಣಿಗಳು ಇರುತ್ತಿರಲಿಲ್ಲ. ಕಳೆದ ಸಲ ‘ಏನೂ ಮಾಡಿಲ್ಲವಲ್ಲ’ ಎಂದು ಯಾರೂ ಇವರನ್ನು ಕೇಳಿಲ್ಲ. ಓಟಿಗಾಗಿ ಮನೆ ಬಾಗಿಲಿಗೆ ಮತ್ತೆ ಬಂದಾಗ ನೀವು ಏನೇ ಕೇಳಿದರೂ ಇವರು ಆಶ್ವಾಸನೆ ನೀಡುತ್ತಾರೆ.

ಬೆಂಗಳೂರಿನ ಮತದಾರನೊಬ್ಬ ಕೇಳಿದ್ದ, `ತುಂಬಾ ಶೆಖೆಯಾಗ್ತಿದೆ, ಚಾಮುಂಡಿ ಬೆಟ್ಟಾನ ಬೆಂಗ್ಳೂರಿಗೆ ಶಿಫ್ಟ್ ಮಾಡಿಸಿ’.
`ನಮಗೆ ಓಟು ಕೊಟ್ಟು ಗೆಲ್ಲಿಸಿ. ಆರೇ ತಿಂಗಳಲ್ಲಿ ಶಿಫ್ಟ್ ಮಾಡಿಸ್ತೀವಿ’ ಎಂದು ಆಶ್ವಾಸನೆ ಕೊಟ್ಟಿದ್ದರು.

ಇಂಥ ರಾಜಕಾರಣಿಗಳ ನಡುವೆ ಮತದಾರ ಯಾರಿಗೆ ಓಟು ಕೊಡಬೇಕು? ಓಟು ಮಾಡದೆ ರಜಾ ಸಿಕ್ಕಿತೆಂದು ಮಜಾ ಉಡಾಯಿಸಲು ಪ್ರವಾಸ ಹೊರಡಬೇಕೇ?

ಈ ಪ್ರಶ್ನೆಗೆ ನಿಮ್ಮಲ್ಲೂ ಉತ್ತರ ಇರಲಿಕ್ಕಿಲ್ಲ. ಚಿಂತಿಸಬೇಡಿ. ಹುರುಳೀಕಾಯಿ ಅಜ್ಜಿಯನ್ನೊಮ್ಮೆ ಕೇಳಿಬಿಡೋಣ; ಖಂಡಿತಾ ಪರಿಹಾರ ಸಿಗುತ್ತದೆ!

Leave a Reply

Your email address will not be published.