ನೀಚತನಕ್ಕೂ ಒಂದು ಸಮಯಪ್ರಜ್ಞೆ ಬೇಡವೇ?

ಕಳೆದ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ‘ಇದು ಕಳೆದುಕೊಳ್ಳುವ, ಕಳೆದುಹೋಗುವ ಕಾಲ!’ ಎಂದು ಒಂದು ಸಾಲು ಬರೆದಿದ್ದೆ. ಆಗ ನನ್ನ ಸುತ್ತಲಿನ ಮತ್ತು ಹತ್ತಿರದವರ ಸಾವುನೋವುಗಳು ನನ್ನ ಮನಕಲಕಿದ್ದವು. ಕೆಲವು ತಿಂಗಳುಗಳ ನಂತರ ಆ ಕಾಲ ಕಳೆದುಹೋಯಿತು. ಅದು ಸುಮ್ಮನೆ ಕಣ್ಮರೆಯಾಗಲಿಲ್ಲ; ಜೊತೆಗೆ ಅನೇಕ ಜೀವಗಳನ್ನು ಸೆಳೆದುಕೊಂಡು ಹೋಯಿತು.

ಅದಾದ ನಂತರ ಬದುಕು ಸಹಜ ಸ್ಥಿತಿಯತ್ತ ಸಾಗುವಾಗ ನಾವೆಲ್ಲಾ ಮನದ ನೋವುಗಳನ್ನು ಮರೆಯುವ, ಮರೆತಂತೆ ನಟಿಸುವ ತಾಲೀಮಿನಲ್ಲಿ ತೊಡಗಿದ್ದೆವು ಅಂತ ಕಾಣಿಸುತ್ತದೆ. ಅಷ್ಟರೊಳಗೆ ಮತ್ತೆ ಎರಡನೆಯ ಅಲೆ ಯಮವೇಗದಲ್ಲಿ ಆವರಿಸಿಬಿಟ್ಟಿತು. ಸಂತಾಪ ಸೂಚಿಸುವ ದನಿ ದಣಿಯುವಷ್ಟು ಸರಣಿ ಸಾವುಗಳು. ಸಾಮಾಜಿಕ ಮಾಧ್ಯಮ ಅನಿರೀಕ್ಷಿತ, ಆಘಾತಕಾರಿ ಅಗಲಿಕೆಯ ಸುದ್ದಿಗಳಿಂದ ತುಂಬಿ ತುಳುಕತೊಡಗಿತು. ಬೀದರಿನ ಗೆಳೆಯನೊಬ್ಬ ನನ್ನ ವಾಟ್ಸಾಪ್ ಸ್ಟೇಟಸ್ ನೆನಪಿಸಿಕೊಂಡು, ‘ನೀನು ನುಡಿದ ಭವಿಷ್ಯ ನಿಜವಾಯ್ತು’ ಎಂದಾಗ ತತ್ತರಿಸಿದೆ!

ಎಲ್ಲಕ್ಕಿಂತ ದುರಂತದ ಸಂಗತಿಯೆಂದರೆ; ಅಗಲಿದ ಆಪ್ತರ ಅಂತಿಮ ದರ್ಶನ ಪಡೆಯುವಂತಿಲ್ಲ, ಅನಾರೋಗ್ಯಪೀಡಿತರನ್ನು ಭೇಟಿಯಾಗಿ ನೆರವಾಗುವ ಅವಕಾಶವಿಲ್ಲ. ಛೇ… ನಾವು ಇದೆಂತಹ ಐತಿಹಾಸಿಕ ಅನಾಹುತಕ್ಕೆ ಸಾಕ್ಷಿಯಾಗಬೇಕಿದೆ!

ಕೋವಿಡ್ ಲಸಿಕೆಯ ಪೂರೈಕೆ, ಆಮ್ಲಜನಕ ಸರಬರಾಜು, ಸೋಂಕು ಪರೀಕ್ಷೆ, ಚಿಕಿತ್ಸೆ, ಅಗತ್ಯ ಔಷಧಿಗಳ ಲಭ್ಯತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಿರ್ವಹಣೆ, ಅಂಬುಲೆನ್ಸ್ ಸೌಲಭ್ಯ, ಸ್ಮಶಾನಗಳ ವ್ಯವಸ್ಥೆ… ಹೀಗೆ ಯಾವ ಅಂಗವೂ ಸುಸೂತ್ರವಾಗಿಲ್ಲ. ಇವೆಲ್ಲಾ ವೈಫಲ್ಯಗಳ ಒಟ್ಟು ಫಲಿತಾಂಶವನ್ನು ಪ್ರತಿದಿನ ಸಂಜೆ ಬಿಡುಗಡೆಯಾಗುವ ಸಾವಿನ ಸಂಖ್ಯೆಯಲ್ಲಿ ಕಾಣುತ್ತಿದ್ದೇವೆ.

ಇಂತಹ ಪರಮ ಸಂಕಟದ ಸಂಕೀರ್ಣ ಸನ್ನಿವೇಶದಲ್ಲಿ ಸರ್ಕಾರ ನಡೆಸುವವರು ಏನು ಮಾಡುತ್ತಿದ್ದಾರೆ?

ಹಣ ಮಾಡುತ್ತಿದ್ದಾರೆ, ಸ್ವಾರ್ಥ ರಾಜಕಾರಣದಲ್ಲಿ ತೊಡಗಿದ್ದಾರೆ, ಅಧಿಕಾರ ಅನುಭವಿಸುತ್ತಿದ್ದಾರೆ; ಹೊರಗೆ ವಾಸ್ತವವನ್ನು ಮರೆಮಾಚಿ ಕಾರ್ಯಕ್ಷಮತೆ ಪ್ರದರ್ಶಿಸುತ್ತಾರೆ. ಇವರ ನಿಜಬಣ್ಣ ಎಲ್ಲರೂ ಬಲ್ಲರು. ಒಂದು ರೀತಿಯಲ್ಲಿ ಸಾಮಾನ್ಯ ಸಂದರ್ಭದಲ್ಲಿ ಅವರ ಭ್ರಷ್ಟಾಚಾರ, ಸ್ವಾರ್ಥ, ಅಸಾಮರ್ಥ್ಯ, ಅಮಾನವೀಯತೆ, ನಾಟಕೀಯತೆಯನ್ನು ‘ಇವರು ಇಷ್ಟೇ…’ ಎಂದು ತೀರ್ಮಾನಿಸಿ, ಸಹಿಸಿ, ಸ್ವೀಕರಿಸಿಯಾಗಿದೆ. ಆದರೆ ಈಗಿನ ಅಸಾಮಾನ್ಯ ಸಂದರ್ಭದಲ್ಲಾದರೂ ಆಡಳಿತ ನಡೆಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ತಮ್ಮೊಳಗೆ ಅಳಿದುಳಿದಿರಬಹುದಾದ ‘ಒಂದಿಷ್ಟು’ ಮನುಷ್ಯತ್ವ ಹೊರಚೆಲ್ಲದಿದ್ದರೆ ಹೇಗೆ? ನೀಚತನಕ್ಕೂ ಒಂದು ಮಿತಿ, ಸಮಯಪ್ರಜ್ಞೆ ಬೇಡವೇ?

ಈಗಿನ ಸ್ಥಿತಿಯಲ್ಲಿ ‘ಉಳಿಯುವವರು ಉಳಿಯುತ್ತಾರೆ, ಸಾಯುವವರು ಸಾಯುತ್ತಾರೆ’ ಎಂಬ ಧೋರಣೆ ತಾಳಿದಂತಿದೆ ರಾಜ್ಯ ಮತ್ತು ಒಕ್ಕೂಟ ಆಡಳಿತ. ಆದರೆ ಒಂದು ಸರ್ಕಾರ ಎಂದರೆ ಸಾಮಾನ್ಯವಲ್ಲ; ಅದಕ್ಕಿರುವ ಶಕ್ತಿ, ಸಾಮರ್ಥ್ಯ, ಸಂಪನ್ಮೂಲ ಅಗಾಧವಾದದ್ದು. ಇಷ್ಟೆಲ್ಲಾ ಇಟ್ಟುಕೊಂಡು ಸರ್ಕಾರವೊಂದು ಸಾಮಾನ್ಯ ಮನುಷ್ಯನಂತೆ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತುಕೊಳ್ಳುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಈ ನಡುವೆಯೂ ಭವಿಷ್ಯದ ಬಗೆಗೆ ಭರವಸೆ ಇಡಬೇಕಾಗಿದೆ. ಪರಿಸ್ಥಿತಿ ಹೀಗೇ ಇರುವುದಿಲ್ಲ; ಸುದೀರ್ಘ ಸುರಂಗ ಪಯಣದ ನಂತರ ಬೆಳಕಿನ ಕಿರಣ ಖಂಡಿತವಾಗಿಯೂ ಗೋಚರಿಸಲಿದೆ. ಆದರೆ ಆ ಕಿರಣ ಕಾಣಲು ನಮ್ಮಲ್ಲಿ ಕೆಲವರು ಉಳಿದಿರಲಿಕ್ಕಿಲ್ಲ ಎಂಬುದು ಮಾತ್ರ ಕಹಿಸತ್ಯ. ಇಂತಹ ಸಂದರ್ಭಗಳೇ ಸಮಯ, ಸಂಬಂಧ, ಸಾಮರ್ಥ್ಯಗಳ ಮಹತ್ವ ಒತ್ತಿಹೇಳುತ್ತವೆ. ಆ ಕಡೆ ಗಮನ ಹರಿಸೋಣ.

ಇನ್ನು, ಈ ವೈರಾಣು ಮೂರ್ನಾಲ್ಕು ಅಲೆಗಳ ತರುವಾಯ ನಮ್ಮ ನಡುವೆಯೇ ತಂಗಲಿದೆಯಂತೆ. ಅಷ್ಟೊತ್ತಿಗೆ ನಾವೂ ಅದರೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿತಿರುತ್ತೇವೆ. ಇರಲಿಬಿಡಿ, ನೀಚ ರಾಜಕಾರಣಿಗಳ ಜೊತೆಗಿನ ಅನುಭವ ಹೇಗೂ ಇದೆ; ವೈರಾಣುವನ್ನು ಸಹಿಸಿಕೊಳ್ಳುವುದು ಏನು ಮಹಾ!

ಸಂಪಾದಕ

Leave a Reply

Your email address will not be published.