ನೀರಸ ನಿರ್ದೇಶನದಲ್ಲಿ ನರಳುವ ‘ಮಗಳು ಜಾನಕಿ’

ಪ್ರಪ್ರಥಮವಾಗಿ ನಾನಿಲ್ಲಿ ಗಮನಿಸಿದ್ದು ಟಿ.ಎನ್.ಸೀತಾರಾಂ ಅವರ `ಸೆನ್ಸಿಬಲ್ ಟಚ್’ ಕಾಣೆಯಾದದ್ದು! ಸಂಚಿಕೆಗಳ ಬರವಣಿಗೆ, ನಿರ್ದೇಶನ ಬೇರೆಯವರಿಗೆ ವಹಿಸಿದ್ದರೂ ಅದನ್ನು ಪರಾಮರ್ಶಿಸುವುದು ನಿರ್ದೇಶಕರಾದವರ ಜವಾಬ್ದಾರಿಯಲ್ಲವೇ?

ಟ, ನಾಟಕಕಾರ, ಲೇಖಕ ಟಿ.ಎನ್.ಸೀತಾರಾಂ ಅವರನ್ನು ಸುಮಾರು ಮೂವತ್ತೈದು ವರ್ಷಗಳಿಗಿಂತ ಮುಂಚಿನಿಂದಲೂ ಬಲ್ಲೆ. ಪಿ.ಲಂಕೇಶರ ಒಡನಾಟವಿದ್ದ ಗಂಭೀರ ಬರಹಗಾರ ಎಂಬ ಮೆಚ್ಚುಗೆಯೂ ಜೊತೆಗೆ. `ಮಾಯಾಮೃಗ’ ಧಾರಾವಾಹಿಯ ಕೆಲವು ಸಂಚಿಕೆಗಳನ್ನು ನೋಡಿದ್ದೆ. ಮಧ್ಯಮ ವರ್ಗದ ಸಮಸ್ಯೆಗಳು, ಸಹಜ ಪಾತ್ರ ಚಿತ್ರಣ, ಆಸಕ್ತಿಕರ ಸಂಭಾಷಣೆಗಳು, ಉತ್ತಮಾಭಿನಯ ಇತ್ಯಾದಿ ಅಂಶಗಳು ನನ್ನನ್ನು ಹಿಡಿದಿಟ್ಟಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ `ಸೀತಾರಾಂ ಟಚ್’ ಇಷ್ಟವಾಗುತ್ತಿತ್ತು. ಅಚ್ಚುಕಟ್ಟಾಗಿರುತ್ತವೆ ಎಂಬ ನಂಬಿಕೆ. ಕನಿಷ್ಠ ಬೇರೆ ಧಾರಾವಾಹಿಗಳ ಥರ ಕೃತಕ ಸನ್ನಿವೇಶ, ಸಂಭಾಷಣೆ, ವಿಪರೀತದ ನಡವಳಿಕೆಗಳು, ಕಪ್ಪು-ಬಿಳುಪು ಪಾತ್ರಗಳ ಸೃಷ್ಟಿ ಇತ್ಯಾದಿಗಳು ಖಂಡಿತ ಇಲ್ಲಿ ಇರಲಾರದೆಂಬ ಭರವಸೆಯಿಂದ, ಬಹಳ ವರ್ಷಗಳ ಮೇಲೆ ಸೀತಾರಾಂ ನಿರ್ದೇಶನದ ಘೋಷಣೆ ಕೇಳಿ `ಮಗಳು ಜಾನಕಿ’ ನೋಡಲಾರಂಭಿಸಿದೆ.

ಕಣ್ಣಿಗೆ ಹಿತವೆನಿಸುವ ಛಾಯಾಗ್ರಹಣ, ನಮ್ಮ ನಿಮ್ಮ ನಡುವಿನ ಮಧ್ಯಮ ವರ್ಗದ ಪಾತ್ರಗಳು, ಸನ್ನಿವೇಶಗಳು, ಸಹಜ ಮಾತುಗಳು ಇತ್ಯಾದಿ ಕಾರಣಕ್ಕಾಗಿ ಮೊದಲ ದಿನಗಳಲ್ಲಿ ಅಪ್ತವೆನಿಸಿದ್ದು ನಿಜ. ಆದರೆ ಕೆಲವೇ ದಿನಗಳಲ್ಲಿ ಯಾಂತ್ರಿಕ ದಿನಚರಿಯ ದೃಶ್ಯಗಳಿಂದ , ರಸಾನುಭವದ ಕೊರತೆಯಿಂದ ಬೇಸರ ತಂದು, ನನಗೆ ಈ ಸೀರಿಯಲ್ ಬಗ್ಗೆ ಭ್ರಮ ನಿರಸನವಾಯಿತು. ವಾಸ್ತವವಾಗಿ ಇತರ ಧಾರಾವಾಹಿಗಳಿಗೂ ಇದಕ್ಕೂ ಅಂಥ ವ್ಯತ್ಯಾಸವೇನೂ ಕಾಣಲಿಲ್ಲ. ಅಲ್ಲಿ ತೀರ ಅತಿರೇಕದ ಘಟನೆಗಳು, ಪಾತ್ರ ವಿಕಾರತೆಗಳು, ಆರ್ಭಟದ ವ್ಯಕ್ತಿತ್ವಗಳು ಸಹನೆಯನ್ನು ಪರೀಕ್ಷಿಸಿದರೆ, ಅದಕ್ಕೆ ಹೋಲಿಸಿದರೆ ಇದು ಪರವಾಗಿಲ್ಲ ಸಹ್ಯ ಎನಿಸಿ ನೋಡಲು ಮುಂದುವರಿಸಿದೆ.

ಪ್ರಪ್ರಥಮವಾಗಿ ನಾನಿಲ್ಲಿ ಗಮನಿಸಿದ್ದು ಸೀತಾರಾಂ ಅವರ `ಸೆನ್ಸಿಬಲ್ ಟಚ್’ ಕಾಣೆಯಾದದ್ದು! ಸಂಚಿಕೆಗಳ ಬರವಣಿಗೆ, ನಿರ್ದೇಶನ ಬೇರೆಯವ ರಿಗೆ ವಹಿಸಿದ್ದರೂ ಅದನ್ನು ಪರಾಮರ್ಶಿಸುವುದು ನಿರ್ದೇಶಕರಾದವರ ಜವಾಬ್ದಾರಿಯಲ್ಲವೇ? ಪ್ರತಿದಿನ ಅದೇ ಮುಖಗಳನ್ನು ಮತ್ತೆ ಮತ್ತೆ ತೋರಿಸುತ್ತ ರೀಲ್ ಸುತ್ತುವ ತಂತ್ರ, ಭಾವದ ಏರಿಳಿತವಿಲ್ಲದ ಸಂಭಾಷಣಾ ಧಾಟಿಗಳು, ಆಸಕ್ತಿ ಹುಟ್ಟಿಸದ ನಿಸ್ಸಾರ ಸನ್ನಿವೇಶಗಳು ಇತ್ಯಾದಿ. ಇದುವರೆಗೂ ಧಾರಾವಾಹಿ ಪ್ರಾರಂಭವಾಗಿ ಸುಮಾರು ಐದಾರು ತಿಂಗಳುಗಳೇ ಕಳೆದಿರಬೇಕು. ಇನ್ನೂ ಇಲ್ಲಿಯ ಕಥೆಗೆ ಒಂದು ನಿಖರತೆ, ಸಮಗ್ರತೆ ದೊರಕಿಲ್ಲ. ಕಥೆ ಯಾವ ದಿಕ್ಕಿಗೆ ಸಾಗುತ್ತಿದೆಯೋ ದೇವರೇ ಬಲ್ಲ. ಒಟ್ಟಾರೆ ಏನು ಹೇಳಬೇಕೆನ್ನುವ ಗೊತ್ತು ಗುರಿಯಿಲ್ಲದ ಕಥೆಯ ಪಾತ್ರಗಳಿಗೋ ಒಂದು ಸ್ಪಷ್ಟ, ಗಟ್ಟಿ ವ್ಯಕ್ತಿತ್ವವಿಲ್ಲ. ಕಥೆಗಾರನ ಲೇಖನಿಯ ಮಾತುಗಳಿಗೆ ದನಿಯಾದವರು ಸೂತ್ರದ ಬೊಂಬೆಗಳಂತೆ ತಮ್ಮ `ಅಸ್ಮಿತೆ’ಯನ್ನು ದಾಖಲಿಸದೆ, ಗೊಂದಲದಲ್ಲಿ ಸಿಕ್ಕಂತೆ ಭಾಸವಾಗುತ್ತಾರೆ.

ಬಹುಶಃ ಚಿತ್ರಕಥೆ, ಸಂಭಾಷಣೆ ಬರೆಯುವ ವ್ಯಕ್ತಿಗಳು, ತಾವು ಹಿಂದಿನ ಸಂಚಿಕೆಗಳಲ್ಲಿ ಬರೆದ ಮಾತುಗಳನ್ನು ಮರೆತು, ಸಾವಯವ ಸಂಬಂಧವಿರದ ಮಾತುಗಳಲ್ಲಿ ಪಾತ್ರಗಳನ್ನು ಮಂಕಾಗಿಸುವುದು, ಬೇರೇನೋ ಮಾತಾಡುವುದು ಅಥವಾ ಮೌನವಾಗುವುದು ನಮಗೆ ಚಡಪಡಿಕೆಯನ್ನು ತರುತ್ತವೆ.

ಧಾರಾವಾಹಿಯಲ್ಲಿ ಹುಳುಕು-ಕುಂದು-ಕೊರತೆಗಳನ್ನು ಹುಡುಕ ಬೇಕೆನ್ನುವ ಪೂರ್ವಾಗ್ರಹ ಪೀಡಿತ ದೃಷ್ಟಿಯಂತೂ ಇಲ್ಲವೇ ಇಲ್ಲ ನನಗೆ. ಏನು ಮಾಡಲಿ, ವಿಮರ್ಶಕ ಚಕ್ಷುಗಳಿಂದಲ್ಲದೆ, ಸಾಮಾನ್ಯ ನೋಡುಗಳಂತೆ ನಿರಮ್ಮಳವಾಗಿ ಆನಂದದಿಂದ ಸವಿಯೋಣವೆಂದರೆ, ಕಣ್ಣಿಗೆ ಬೀಳುವ ಹಲವಾರು ಆಭಾಸಗಳು ಪ್ರಶ್ನೆಗಳ ಸುಳಿಯಲ್ಲಿ ಸಿಕ್ಕಿಸುತ್ತವೆ. ಸಾಮಾನ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಂಶಗಳು ಕೆಣಕುತ್ತವೆ. ಬಹುಶಃ ಚಿತ್ರಕಥೆ, ಸಂಭಾಷಣೆ ಬರೆಯುವ ವ್ಯಕ್ತಿಗಳು, ತಾವು ಹಿಂದಿನ ಸಂಚಿಕೆಗಳಲ್ಲಿ ಬರೆದ ಮಾತುಗಳನ್ನು ಮರೆತು, ಸಾವಯವ ಸಂಬಂಧವಿರದ ಮಾತುಗಳಲ್ಲಿ ಪಾತ್ರಗಳನ್ನು ಮಂಕಾಗಿಸುವುದು, ಬೇರೇನೋ ಮಾತಾಡುವುದು ಅಥವಾ ಮೌನವಾಗುವುದು ನಮಗೆ ಚಡಪಡಿಕೆಯನ್ನು ತರುತ್ತವೆ.

ಬಿಗಿಯಾದ ಚಿತ್ರಕಥೆ, ಹರಿತವಾದ ಬುದ್ಧಿವಂತಿಕೆಯ ಅಥವಾ ವಾಸ್ತವಕ್ಕೆ ಹತ್ತಿರವಿರುವ ನಡವಳಿಕೆ, ಮಾತುಗಳನ್ನಾಡದ ನೀರಸ ಪಾತ್ರಚಿತ್ರಣದಲ್ಲಿ, ಒಂದೊಂದು ಸಲ ಒಂದೊಂದು ಥರ ಆಡುವ, ವಿರುದ್ಧಾರ್ಥಕ ನಡೆಯಲ್ಲಿ ಪಾತ್ರಗಳನ್ನು ಅಯೋಮಯರನ್ನಾಗಿಸಿದ್ದಾರೆ ಎನಿಸುತ್ತದೆ. ಸಾಮಾನ್ಯವಾಗಿ, ನೋಡುಗರು ಬಹು ಸೂಕ್ಷ್ಮಸಂವೇದಿಗಳು ಎಂಬ ಎಚ್ಚರ, ನಿಗಾ ಅವರಿಗಿರಬೇಕು. ಪಾತ್ರಗಳು ನೋಡುಗ ರಿಗೆ ಅಪ್ತವಾಗುವುದು ಅವುಗಳನ್ನು ಚಿತ್ರಿಸುವ ರೀತಿಯ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಂದು ಪಾತ್ರಗಳೂ ಗಂಭೀರವೇ ಆಗಿರಲಿ ಅಥವಾ ಲಘುವಾದವೇ ಆಗಿರಲಿ ಪ್ರತಿಯೊಂದು ಪಾತ್ರಗಳಿಗೂ ತನ್ನತನವಿರಬೇಕು. ಆಗಲೇ ಅವು ಪ್ರಭಾವ ಬೀರಲು ಸಾಧ್ಯವಾಗುತ್ತವೆ.

ರಾಜಕಾರಣಿ ಚಂದು ಭಾರ್ಗಿ ಈ ಕಥೆಯ ಖಳನಾಯಕ. ಪ್ರಸಿದ್ಧ ಲಾಯರ್ ಸಿ.ಎಸ್.ಚಂದ್ರಶೇಖರ್ ಪ್ರಸಾದರೊಂದಿಗಿನ ಭಾರ್ಗಿಯ ಶೀತಲ ಸಮರ ಚಿತ್ರಿಸುವ ದಾರಿ ತಪ್ಪಿದ ಕಥೆ ಇದು. ಸಿ.ಎಸ್.ಪಿ.ಯ ಹೆಂಡತಿ ರಶ್ಮಿ, ಎರಡು ಮಕ್ಕಳ ತಾಯಿಯನ್ನು, ಗಂಡನಿಂದ ವಿಚ್ಛೇದನ ಕೊಡಿಸಿ, ಭಾರ್ಗಿ, ಅವಳನ್ನು ಮದುವೆಯಾಗುವ ಪ್ರೇಮದ ಪರಾಕಾಷ್ಠೆಯಾಗಲಿ, ಅನಿವಾರ್ಯತೆಯಾಗಲಿ ಮನದಟ್ಟಾಗುವುದಿಲ್ಲ. ಸಿ.ಎಸ್.ಪಿ. ಮಗ ಮಧುಕರನನ್ನು ಬಿಟ್ಟು, ಅವನ ಮಗಳು ಜಾನಕಿಯನ್ನು ಮಾತ್ರ ತನ್ನೊಡನೆ ಕರೆದುಕೊಂಡು ಹೋಗುತ್ತಾನೆ. ವಾಸ್ತವವಾಗಿ, ಭಾರ್ಗಿ-ರಶ್ಮಿ ನಡುವಿನ ಆಕರ್ಷಣೆ ಏನು ಎಂಬುದು ಸ್ಪಷ್ಟವಾಗುವುದಿಲ್ಲ. ಹೋಗಲಿ ರಶ್ಮೀ ಪರಮಸುಂದರಿಯೇ ಅಥವಾ ಮಹಾಚೂಟಿ-ಬುದ್ಧಿವಂತೆ ಮುಂತಾದ ಅವಳ ಯಾವ ವಿಶೇಷತೆಯನ್ನೂ ಇಲ್ಲಿ ಬಿಂಬಿಸಿಲ್ಲ.

`ಜಾನಕಿಯವರೇ’ ಎಂದು ಹತ್ತತ್ತು ಸಲ ಸಂಬೋಧಿಸುವುದು ಮತ್ತು ಇತರ ಪಾತ್ರಗಳೂ ಮಾತಿನ ಪ್ರಾರಂಭಕ್ಕೆ ಒಮ್ಮೆ ಹೆಸರು ಅನಂತರ ಕೊನೆಯಲ್ಲಿ ಹೆಸರು ಸೇರಿಸಿ ಹೇಳುವ ಅಭ್ಯಾಸ ಕಿರಿಕಿರಿಯೆನಿಸುತ್ತದೆ.

ಹಾಗೆಯೇ ಅವಳು ಭಾರ್ಗಿಯ ಹಿಂದೆ ಓಡಿಬರಲು, ಅವನ ವೈಶಿಷ್ಟ್ಯಗಳನ್ನೂ ಚಿತ್ರಿಸಿಲ್ಲ. ಜೊತೆಗೆ ಸಿ.ಎಸ್.ಪಿ. ಯನ್ನು ತೊರೆಯುವಷ್ಟು ಆತನ ಕ್ರೌರ್ಯವಾಗಲಿ, ಕೆಟ್ಟಗುಣಗಳನ್ನಾಗಲಿ, ಜೊತೆಯಲ್ಲಿ ಬಾಳಲು ಸಾಧ್ಯವೇ ಇಲ್ಲವೆನ್ನುವ ದುಷ್ಟತೆಯನ್ನಾಗಲಿ ಆತನ ಪಾತ್ರಚಿತ್ರಣದಲ್ಲಿ ತೋರಿಸಿಲ್ಲ. ಜೊತೆಗೆ ಇದುವರೆಗಿನ ಇಷ್ಟೂ ಸಂಚಿಕೆಗಳಲ್ಲಿ ಸಿ.ಎಸ್.ಪಿ ದುರ್ಗುಣಗಳನ್ನು ಒಂದನ್ನೂ ತೋರಿಸಿಲ್ಲ! ಬದಲಾಗಿ ಹೆಂಗರುಳಿನ, ಕವಿಮನೋಭಾವದ ಸಹನಾಶೀಲ, ಬುದ್ಧಿವಂತ, ಸಜ್ಜನ ಎಂದೇ ಇದುವರೆಗೂ ಪರಿಚಿತ. ರೋಚಕತೆಯನ್ನು ನೇಯುವ ಏಕೈಕ ಉದ್ದೇಶದಿಂದ ಕಥೆಗಾರ, ಯಾವ ನಂಬಲರ್ಹ ಕಾರಣಗಳನ್ನು ಕೊಡದೆ, ರಶ್ಮಿ ಅವನನ್ನು ಬಿಡುವಂಥ ನಿರ್ಧಾರಕ್ಕೆ ಏಕೆ ಬರುತ್ತಾಳೆ ಎಂಬುದನ್ನು ಸಮರ್ಥಿಸುವುದಿಲ್ಲ. ಇಲ್ಲಿಂದಲೇ ಕಥೆಯ ದೌರ್ಬಲ್ಯ ಆರಂಭವಾಗುತ್ತದೆ.

ಇನ್ನು ವಿವರಗಳಿಗೆ ಹೋದರೆ ಅನೇಕ ಅಸಹಜ ಅಂಶಗಳು ಎದ್ದು ಕಾಣುತ್ತವೆ. ಭಾರ್ಗಿಯಂತೂ ಮಾತುಮಾತಿಗೂ ಹೆಂಡತಿಯನ್ನು ರಶ್ಮಿಯವರೇ ಎಂದೇ ಸಂಬೋಧಿಸುವುದು, ಅಷ್ಟೇಕೆ ಹಿರಿಯ ಲಾಯರ್ ಮಗಳ ಸಮಾನಳಾದ (?) ಜಾನಕಿಯನ್ನು `ಜಾನಕಿಯವರೇ’ ಎಂದು ಹತ್ತತ್ತು ಸಲ ಸಂಬೋಧಿಸುವುದು ಮತ್ತು ಇತರ ಪಾತ್ರಗಳೂ ಮಾತಿನ ಪ್ರಾರಂಭಕ್ಕೆ ಒಮ್ಮೆ ಹೆಸರು ಅನಂತರ ಕೊನೆಯಲ್ಲಿ ಹೆಸರು ಸೇರಿಸಿ ಹೇಳುವ ಅಭ್ಯಾಸ ಕಿರಿಕಿರಿಯೆನಿಸುತ್ತದೆ. ಅಣ್ಣನೊಡನೆ ಮಾತಾಡುವಾಗ ಶ್ಯಾಮಲಾಗೆ ಮತ್ತದೇ ಚಾಳಿ. `ಚಂದ್ರಣ್ಣ’ ಅಂತ ಬೋರಾಗುವಷ್ಟು ಬಾರಿ ಹೆಸರು ಹೇಳುವುದನ್ನು ಕೇಳಿದಾಗ ಅಸಹನೆ ಹೆಚ್ಚುತ್ತದೆ. `ಟೀಚರ್’ ಎಂದು ಪರಿಚಯಿಸಲ್ಪಡುವ ವ್ಯಕ್ತಿಯನ್ನು ಪೊಲೀಸ್ ಎಸ್.ಪಿ.ಟೀಚರ್ ಎಂದು ಹೆಸರಿನೊಡನೆ ಹೇಳುವುದು ಇತ್ಯಾದಿ ಇಂಥ ಅನೇಕ ಅಂಶಗಳು ಕೃತಕತೆಯ ಪರಮಾವಧಿ.

ಇಬ್ಬರ ನಡುವೆ ನಡೆದ ಮಾತುಕತೆಯನ್ನು, ಬೇರೆ ಹಲವು ಪಾತ್ರಗಳೊಡನೆ ಮತ್ತೆ ಅದದೇ ಮಾತುಗಳನ್ನು ಹೇಳುತ್ತ, ಹೀಗೆ ಎರಡು-ಮೂರು ಸಂಚಿಕೆಗಳುದ್ದ ಅದೇ ಮಾತನ್ನು ಬೆಳೆಸುವ ಬೋರು ಹೊಡೆಸುವ ಪರಿ ತಾಳ್ಮೆಯನ್ನು ಕುದಿಸುತ್ತದೆ. ಕಥೆ ಮುಂದೆಯೇ ಹೋಗುವುದಿಲ್ಲ. ಅಕಸ್ಮಾತ್ ಮೂರ್ನಾಲ್ಕು ಸಂಚಿಕೆ ನೋಡುವುದು ತಪ್ಪಿ ಹೋದರೂ ಚಿಂತೆ ಬೇಡ, ಕಥೆ ಅಲ್ಲೇ ನಿಂತಿರುತ್ತೆ ಗ್ಯಾರಂಟಿ. ಪಾತ್ರಗಳು ಹಾಗೇ ಅದೇ ಜಾಗದಲ್ಲಿ ನಿಂತೋ ಕುಳಿತೋ ಇರುತ್ತಾರೆ. ಚಲನೆಯೇ ಇಲ್ಲ. ಕ್ಯಾಮರಾಕ್ಕೆ ನೇರ ಪೋಸ್! ತಾಂತ್ರಿಕ ವೈಶಿಷ್ಟ್ಯವಂತೂ ಇಲ್ಲವೇ ಇಲ್ಲ. ಇನ್ನು, ರಾಜಕಾರಣ ಮಾಡುವ ಭಾರ್ಗಿಗಂತೂ ಬೇರೆ ಕೆಲಸವೇ ಇಲ್ಲ. ಸದಾ ಮನೆಯಲ್ಲೇ. ಅದ್ಯಾವ ದುರುದ್ದೇಶವೋ, ಮಗಳು ಜಾನಕಿಯ ಬದುಕನ್ನು ನಾಶ ಮಾಡಬೇಕೆಂದು ತಾನೇ ಐ.ಎ.ಎಸ್. ಅಲ್ಲದ ನಿರಂಜನನನ್ನು ಕರೆತಂದು, ಮೋಸದಿಂದ ಮದುವೆ ಮಾಡಿಸಿ ವಿಕೃತ ಆನಂದಪಡುತ್ತಾನೆ.

ಪಾತ್ರಗಳನ್ನು ಮರೆತು ಅವರ ಅಸ್ತಿತ್ವವನ್ನೇ ಮಾಯ (ಉದಾ: ಶ್ಯಾಮಲಾ ಗಂಡ) ಮಾಡುವುದು, ಮೂರು ಜನ ಇದ್ದಾಗ ಏನೋ ನೆಪ ಮಾಡಿ ಒಬ್ಬರನ್ನು ಅಲ್ಲಿಂದ ಕಳಿಸಿ ಮಾತುಕತೆ ನಡೆಸುವ ಸಾಮಾನ್ಯ ತಂತ್ರ ಬಳಸುವುದು ಇತ್ಯಾದಿಗಳಿಂದ ಗುಣಮಟ್ಟ, ಸ್ವಾರಸ್ಯ ಕಡಿಮೆಯಾಗಿದೆ.

ಇಪ್ಪತ್ತೆರಡು ವರ್ಷಗಳು ಸುಮ್ಮನೆ ಇದ್ದ ಭಾರ್ಗಿಗೆ ಮಲಮಗಳ ಮೇಲೇಕೆ ಇದ್ದಕ್ಕಿದ್ದ ಹಾಗೇ ದ್ವೇಷ? ಸಿ.ಎಸ್.ಪಿ.ಯ ಮೇಲಿನ ಕೋಪ-ಸೇಡನ್ನು ಮಗಳಂತೆ ಸಾಕಿ-ಸಲುಹಿದ `ಪಾಪದ ಜೀವಿ’ಯ ಮೇಲೆ ತೀರಿಸಿಕೊಳ್ಳುವ ತಹತಹ ಇದ್ದಕ್ಕಿದ್ದ ಹಾಗೇಕೆ? ಯಾವುದಕ್ಕೂ ಇಲ್ಲಿ ಉತ್ತರವಿಲ್ಲ. ಮೋಸದ ಮದುವೆ ಮಾಡಿಸಿದ ಗಂಡನ ಬಗ್ಗೆ ಹೆಂಡತಿ ರಶ್ಮಿಗೆ ಕೋಪವೇ ಬರುವುದಿಲ್ಲವೇ? ಮಗಳಿಗಿಂತ ಅವಳಿಗೆ ಈ ಎರಡನೆಯ ಗಂಡನೇ ಹೆಚ್ಚಾದನೇ? ಮಗಳಿಗಾಗಿ ಅವಳ ಹೃದಯ ಮಿಡಿಯುವುದೇ ಇಲ್ಲವೇ? ಸೂತ್ರದ ಗೊಂಬೆಯಂತೆ ವರ್ತಿಸುವ ಈ ಪಾತ್ರಕ್ಕೆ ತುಮುಲವೇ ಇಲ್ಲ! ಸಹಜತೆ ಎಂಬುದಕ್ಕೆ ಇಲ್ಲಿ ಸ್ಥಾನವೇ ಇಲ್ಲ. ನಮ್ಮ ನಿಮ್ಮ ಪ್ರಶ್ನೆಗಳೆಲ್ಲ ಹಾಗೇ ಉಳಿದುಬಿಡುತ್ತವೆ.

ಉದ್ದೇಶಪೂರ್ವಕವಾಗಿ ಅಳಿಯನ್ನನಾಗಿಸಿಕೊಂಡ ಮುಗ್ಧ ನಿರಂಜನನ್ನು ನೋಯಿಸಲು, ಹಾಳುಮಾಡಲು ಭಾರ್ಗಿ, ಇಡೀ ಧಾರಾವಾಹಿಯನ್ನು ಉಪಯೋಗಿಸಿಕೊಳ್ಳುತ್ತಾನೆ. ಅದಕ್ಕೆ ಹೇಳಿದ್ದು ಈ ಕಥೆಗೆ ತಲೆ-ಬಾಲ ಇಲ್ಲ ಎಂದು. ಹೋಗಲಿ ಕಥೆಯನ್ನು ಅವ ರಿಗೆ ಬೇಕಾದಂತೆ ಬೆಳೆಸಿಕೊಳ್ಳಲಿ, ಕೊಂಚ ನಂಬುವಂತಿರಬಾರದೇ? ಯಾವುದೇ ಕಲಾತ್ಮಕತೆ, ಜಾಣತನವಿಲ್ಲದೆ ಅತ್ಯಂತ ನೀರಸವಾಗಿ ಈ ಕಥೆಯ ಘಟನೆಗಳನ್ನು ಪೋಣಿಸಲಾಗಿದೆ. ಇದರ ಮಧ್ಯೆ ನಿರಂಜನನ ತಂದೆಗೆ ಸಂಬಂಧಿಸಿದ ನಿಗೂಢ-ವಿಚಿತ್ರ ಸನ್ನಿವೇಶಗಳು ಬೇರೆ! ಒಟ್ಟಾರೆ ನಿರ್ದೇಶಕರು ಮನಸ್ಸಿಗೆ ಬಂದಂತೆ, ನಡುನಡುವೆ ಕೆಲವು ಪಾತ್ರಗಳನ್ನು ಮರೆತು ಅವರ ಅಸ್ತಿತ್ವವನ್ನೇ ಮಾಯ (ಉದಾ: ಶ್ಯಾಮಲಾ ಗಂಡ) ಮಾಡುವುದು, ಮೂರು ಜನ ಇದ್ದಾಗ ಏನೋ ನೆಪ ಮಾಡಿ ಒಬ್ಬರನ್ನು ಅಲ್ಲಿಂದ ಕಳಿಸಿ ಮಾತುಕತೆ ನಡೆಸುವ ಸಾಮಾನ್ಯ ತಂತ್ರ ಬಳಸುವುದು ಇತ್ಯಾದಿಗಳಿಂದ ಗುಣಮಟ್ಟ, ಸ್ವಾರಸ್ಯ ಕಡಿಮೆಯಾಗಿದೆ. ಕೆಲವೊಮ್ಮೆ ಪಾತ್ರಗಳನ್ನು ತಟ್ಟನೆ ನೆನಪಿಸಿಕೊಂಡು ತೋರಿಸುವುದು ಇವೇ ಮುಂತಾದ ಅಸಂಬದ್ಧಗಳು ಅನೇಕ.

ಇನ್ನು ಹೆಸರಿಡುವುದರಲ್ಲಿ ನಿರ್ದೇಶಕರು ನಿಸ್ಸೀಮರು. ಜಂಗಮದುರ್ಗ, ಜೇನುತೊರೆ, ಕಾಂಚನಘಟ್ಟ, ದೇವಘಟ್ಟ ಇತ್ಯಾದಿ. ಇಲ್ಲಿ ಎಲ್ಲರಿಗೂ ಡಬ್ಬಲ್ ಹೆಸರುಗಳು. ಆನಂದ್ ಬೆಳಗೂರ್, ಮೈತ್ರಿ ಮಹಾನಂದ, ಚೇತನ ಚಿಂತಾಮಣಿ, ಸಂತೋಷ್ ಶಾರ್ದೂಲ ಇತ್ಯಾದಿ. ಪ್ರತಿಸಲ ಪೂರ್ತಿ ಹೆಸರನ್ನೇ ಕರೆಯುವ ವಿಚಿತ್ರ ಪರಿಪಾಠ. ಇನ್ನೊಂದು ಅಸಹಜ ಅಂಶವೆಂದರೆ, ಇದೊಂದು ಕಾಕತಾಳೀಯದ ಸಂತೆ. ಎಲ್ಲ ಪಾತ್ರಗಳೂ ಹೇಗೋ ಜಂಗಮ ದುರ್ಗದಲ್ಲೇ ಜಮಾಯಿಸುತ್ತಾರೆ. ಯಾವ ಘಟನೆಗಳು ನಡೆದರೂ ಅಲ್ಲೇ, ಯಾರಿಗೆ ವರ್ಗವಾದರೂ ಅಲ್ಲೇ, ಎಲ್ಲ ಪಾತ್ರಗಳು ಸೇರುವುದೂ ಅಲ್ಲೇ. ವಿಶಾಲ ಕರ್ನಾಟಕದಲ್ಲಿ ಇರುವುದು ಅದೊಂದೇ ಜಾಗವೇ?

ಇಂಥ ಸಿಲ್ಲಿ ಅಂಶಗಳನ್ನು ಲೆಕ್ಕ ಮಾಡಿದರೆ ನೂರಾರು. ಒಟ್ಟಾರೆ ನೋಡುಗರು ಮೆದುಳನ್ನು ಪಕ್ಕಕ್ಕಿಟ್ಟು ಸಪ್ಪೆ ಮೊಗದ ಸದಾ ವಿಷಾದಭಾವದ ಜಾನಕಿಯ ಒಂದೇ ಧಾಟಿಯ ಮಾತುಗಳನ್ನು ಆಲಿಸುತ್ತಿರಬೇಕು.

ಹಾಗೇ ಕಡುಬಡತನದ ನಿರಂಜನನ ತಾಯಿಗೆ ಬದುಕುಳಿಯುವುದೇ ಕಷ್ಟವೆನ್ನುವ ರೋಗವಂತೆ. ಲಕ್ಷಾಂತರ ರೂಪಾಯಿಗಳು ಖರ್ಚಾಗಿ ಹೋಗಿವೆಯಂತೆ. ಪಾತ್ರದ ಅನುಪಸ್ಥಿತಿಯಲ್ಲಿ ಈ ಮಾತುಗಳು. ಆದರೆ ಆಕೆಯನ್ನು ನೋಡಿದರೆ ಮಹಾ ಆರೋಗ್ಯವಂತೆಯಂತೆ ಕಂಗೊಳಿಸುತ್ತಾಳೆ. ಸದಾ ಖುಷಿಯಾಗಿ ನಗುವ, ತಮಾಷೆ ಮಾಡುವ ಚೈತನ್ಯವಂತೆ. ಖಾಯಿಲೆಯ ನೆರಳೂ ಕಾಣಿಸದಂತೆ ಸದಾ ಮೇಕಪ್ ಮಾಡಿದ, ನೀಟಾಗಿ ತಲೆಬಾಚಿ ಅಲಂಕಾರ ಮಾಡಿಕೊಂಡ ವ್ಯಕ್ತಿ. ಮೂರು ದಿನಗಳೊಳಗೆ ಮುನ್ನೂರು ಯುನಿಫಾರ್ಮ್ ಹೊಲಿದು ಕೊಡುವಂಥ ಛಾತಿವಂತೆ, ಶಕ್ತಿವಂತೆ. ದೊಡ್ಡ ಗೆಸ್ಟ್ ಹೌಸ್ ಕಾರಿಡಾರಿನಂತೆ ಕಾಣುವ ದೊಡ್ಡ ಬಂಗಲೆಯಲ್ಲಿ (ಯಾರೋ ವಿದೇಶಕ್ಕೆ ಹೋದವರು, ಇರಿ ಅಂತ ಕೊಟ್ಟಿದ್ದಾರಂತೆ) ದುಬಾರಿ ಬೆಲೆಯ ಪೀಠೋಪಕರಣಗಳು ಇತ್ಯಾದಿ, ಬಾಯಲ್ಲಿ ಮಾತ್ರ ಸದಾ ಹಣದ ತಾಪತ್ರಯ. ಸೊಸೆಯೆಂದು ಗೊತ್ತಿರದ ಜಾನಕಿ ಈ ಮನೆಯ ಪೈಯಿಂಗ್ ಗೆಸ್ಟ್! ಇನ್ನೇನು ಬೇಕು ನಾಟಕೀಯ, ರೋಚಕ ಸನ್ನಿವೇಶಗಳಿಗೆ!

ಇದರ ಮಧ್ಯೆ ಕಳೆದ ಎಂಟು-ಹತ್ತು ಸಂಚಿಕೆಗಳಿಂದ ಬೋರ್ ಹೊಡೆಸುವ ನೀರಸ ಕಂಪೆನಿಯ ಸಮಸ್ಯೆ. ಹತ್ತಲ್ಲ ಹರಿಯಲ್ಲ. ಚುಯಿಂಗ್ ಗಂ ಥರ ಕಥೆ ಎಳೆಯುವ ಉಪಾಯ. ಬರೀ ಸಾಲದ ವಿಶ್ಲೇಷಣೆಗಳು. ರಸಾನುಭವದ ಒಂದು ಘಟನೆಯೂ ಹುಡುಕಿದರೂ ಇಲ್ಲ. ಕೆಲವೆಡೆ ಬಾಲಿಶ ಹಾಸ್ಯ, ವ್ಯರ್ಥ ಮಾತುಗಳ ಲಾಸ್ಯ. ಸಿ.ಎಸ್.ಪಿ. ಕಾನ್ಫರನ್ಸ್ ಗೆಂದು ನೆದರ್ಲ್ಯಾಂಡ್ ಗೆ ಹೋಗಿ ಮೂರುವಾರದ ಮೇಲಾಯ್ತು. ಇಲ್ಲಿ ಇವರದೇ ಆಟ. ಇಂಥ ಸಿಲ್ಲಿ ಅಂಶಗಳನ್ನು ಲೆಕ್ಕ ಮಾಡಿದರೆ ನೂರಾರು. ಒಟ್ಟಾರೆ ನೋಡುಗರು ಮೆದುಳನ್ನು ಪಕ್ಕಕ್ಕಿಟ್ಟು ಸಪ್ಪೆಮೊಗದ ಸದಾ ವಿಷಾದಭಾವದ ಜಾನಕಿಯ ಒಂದೇ ಧಾಟಿಯ ಮಾತುಗಳನ್ನು ಆಲಿಸುತ್ತಿರಬೇಕು. ಯಾವ ಪಾತ್ರಗಳಿಗೂ ಚಲನಶೀಲತೆ ಇಲ್ಲ. ಮಾತುಗಳನ್ನು ಒಪ್ಪಿಸಿಬಿಡುವ ಚಾಳಿ. ಏಕತಾನತೆ ಕಾಡುತ್ತದೆ. ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುವುದು, ಅನಂತರ ಪರಿಹರಿ ಸುವ ಲೇಖಕರ ಅರ್ಥಾತ್ ನಿರ್ದೇಶಕರ ಕೈವಾಡ ಸುಸ್ಪಷ್ಟ. ಅವರ ‘ಟ್ರಂಪ್ ಕಾರ್ಡ್’ ಆದ ಕೋರ್ಟ್ ಸೀನ್ ಕಡೆಯೇ ಅವರ ಸಂಪೂರ್ಣ ಗಮನ ಕೇಂದ್ರೀಕೃತ. ಸೀತಾರಾಂ ಗೆಲ್ಲುವ ಮಜಲುಗಳಿಗೆ ಈ ಸಿದ್ಧತೆ ಅಷ್ಟೇ. ಅಂತ್ಯದ ಕೋರ್ಟ್ ದೃಶ್ಯಗಳತ್ತ, ರೋಚಕತೆ ಕೆನೆಗಟ್ಟಿಸುವ ಈ ಎಲ್ಲ (ಇದುವರೆಗೆ 205 ಎಪಿಸೋಡುಗಳು) ತಾಲೀಮುಗಳು, ಘಟನಾವಳಿಗಳು ಮುಂದಿನ ಕ್ಲೈಮ್ಯಾಕ್ಸ್ ಗೆ ಪೂರ್ವರಂಗ.

ಸಾಂದ್ರತೆಯಿಲ್ಲದ, ತೆವಳುತ್ತಿರುವ ಈ ಕಥೆ ಮುಗಿಯಲು ಬಹುಶಃ ಇನ್ನೊಂದೆರಡು ವರ್ಷಗಳು ಬೇಕಾಗಬಹುದೇನೋ?!

*ಲೇಖಕಿ ಕನ್ನಡ ಎಂ.ಎ. ಪದವೀಧರೆ; ಪತ್ರಕರ್ತೆ, ಸಾಹಿತಿ, ನಾಟಕ-ನೃತ್ಯ ವಿಮರ್ಶಕರು. 250 ಕತೆ, 35 ಕಾದಂಬರಿ, ನೂರಾರು ಕವಿತೆ, ನಾಟಕ ರಚಿಸಿದ್ದಾರೆ. ‘ಸಂಧ್ಯಾ ಕಲಾವಿಸದರು’ ನಾಟಕ ತಂಡದ ರೂವಾರಿ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

One Response to " ನೀರಸ ನಿರ್ದೇಶನದಲ್ಲಿ ನರಳುವ ‘ಮಗಳು ಜಾನಕಿ’

-ವೈ.ಕೆ.ಸಂಧ್ಯಾ ಶರ್ಮ.

"

Leave a Reply

Your email address will not be published.