ನೀವು ಪ್ರೀತಿಸುವ ಪುಸ್ತಕಗಳಾವುವು?

ಸಲ್ಮಾನ್ ರಶ್ದಿ

ನನ್ನ ಪ್ರಕಾರ, ನಾವು ಪ್ರೀತಿಸುವ ಪುಸ್ತಕಗಳು ಮತ್ತು ಕಥೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇದು ನಿಮಗೆ ಸ್ವಲ್ಪ ಉತ್ಪ್ರೇಕ್ಷೆಯೆನಿಸಿದರೂ, ನಾವು ಪ್ರೀತಿಸುವ ಕಥೆಗಳು, ನಮ್ಮ ದೈನಂದಿನ ಜೀವನದ ನಿರ್ಧಾರಗಳು, ಆಯ್ಕೆಗಳು ಹಾಗೂ ನಾವು ವಿಭಿನ್ನ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಭಾವ ಬೀರುತ್ತವೆ. ಆದರೆ, ನಮಗೆ ವಯಸ್ಸಾದಂತೆ ಪುಸ್ತಕಗಳು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಬಹುದು ಮತ್ತು ಅವುಗಳ ಬಗ್ಗೆ ನಮ್ಮ ಪ್ರೀತಿ ಮಸುಕಾಗಬಹುದು. ಅಥವಾ, ಜೀವನದ ಕುರಿತ ನಮ್ಮ ತಿಳಿವಳಿಕೆ ಹೆಚ್ಚಾದಂತೆ, ನಾವು ಹಿಂದೆ ಮೂಲೆಗುಂಪಾಗಿಸಿದ ಪುಸ್ತಕವನ್ನು ಪುನಃ ಪ್ರಶಂಸಿಸಲು ಸಾಧ್ಯವಾಗಬಹುದು. ಇದ್ದಕ್ಕಿದ್ದಂತೆ, ಅದು ಸುಮಧುರ ಸಂಗೀತದಂತೆ ನಮ್ಮನ್ನು ಆವರಿಸಿಕೊಳ್ಳಬಹುದು.

ನೀವು ಒಂದು ಕುತೂಹಲಕಾರಿ ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿಕೊಳ್ಳುವುದು ಸೂಕ್ತ: ನೀವು ನಿಜವಾಗಿಯೂ ಪ್ರೀತಿಸುವ ಪುಸ್ತಕಗಳಾವುವು? ಆಶ್ಚರ್ಯವೆಂದರೆ, ಪ್ರಶ್ನೆಗೆ ಉತ್ತರ, ನಿಮ್ಮ ವರ್ತಮಾನದ ವ್ಯಕ್ತಿತ್ವದ ಕುರಿತು ಸಾಕಷ್ಟು ತಿಳಿಸುತ್ತದೆ.

ಅನುವಾದ: ಡಾ.ಜ್ಯೋತಿ

ಜಗತ್ತಿನಲ್ಲಿ ಪುಸ್ತಕಗಳು ಅಸ್ತಿತ್ವಕ್ಕೆ ಬರುವ ಮೊದಲೇ ಕಥೆಗಳಿದ್ದವು. ಆರಂಭದಲ್ಲಿ, ಕಥೆಗಳನ್ನು ಬರೆಯುತ್ತಿರಲಿಲ್ಲ, ಬದಲಾಗಿ, ಹೆಚ್ಚಿನವುಗಳನ್ನು ಹಾಡಲಾಗುತ್ತಿತ್ತು. ಹುಟ್ಟಿದ ಮಕ್ಕಳು ಮಾತು ಕಲಿಯುವ ಮೊದಲು, ಹೆತ್ತವರು ಅವರಿಗೆ ಹಾಡಿನ ಮೂಲಕ ಕಥೆಗಳನ್ನು ಹೇಳುತ್ತಿದ್ದರು. ಉದಾಹರಣೆಗೆ, ಗೋಡೆಯಿಂದ ಕೆಳಗೆ ಬಿದ್ದ ಮೊಟ್ಟೆಯ ಕಥೆ ಅಥವಾ ಬೆಟ್ಟದ ಮೇಲಿಂದ ಕೆಳಗೆ ಬಿದ್ದ ಹುಡುಗ ಮತ್ತು ಹುಡುಗಿಯ ಕಥೆ. ಹೀಗೆ, ಪುಟ್ಟಮಕ್ಕಳು ಬೆಳೆಯುತ್ತಿದ್ದಂತೆ, ಅವರು, ತಿನಿಸುಗಳಿಗೆ ಬೇಡಿಕೆಯಿಟ್ಟಂತೆ, ಕಥೆಗಳನ್ನು ಹಠಮಾಡಿ ಕೇಳಿಸಿಕೊಳ್ಳುತ್ತಿದ್ದರು.

ಮಕ್ಕಳು, ಕಥೆಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು ಮತ್ತು ಅವುಗಳನ್ನು ಮತ್ತೆ ಮತ್ತೆ ಕೇಳಲು ಬಯಸಿದ್ದರು. ಅವರು ದೊಡ್ಡವರಾದಂತೆ, ಕಥೆಗಳನ್ನು ಪುಸ್ತಕಗಳಲ್ಲಿ ಪುನಃ ಓದಿದರು. ಇವುಗಳೊಂದಿಗೆ, ಅವರು ಹಿಂದೆಂದೂ ಕೇಳಿರದ ಇತರ ಕಥೆಗಳಾದ, ಮೊಲದ ಬಿಲದೊಳಗೆ ಬಿದ್ದ ಹುಡುಗಿ, ದಡ್ಡ ಮುದಿ ಕರಡಿ ಮತ್ತು ಪುಕ್ಕಲು ಹಂದಿಮರಿ, ದುಃಖಿ ಕತ್ತೆ, ದೆವ್ವದ ಸುಂಕದ ಕಟ್ಟೆ ಇತ್ಯಾದಿಗಳನ್ನು ಓದಿದರು. ಹೀಗೆ, ಕಥೆಗಳನ್ನು ಪ್ರೀತಿಸಿದ ಮಕ್ಕಳಲ್ಲಿ ಅತ್ಯದ್ಬುತ ಕಲ್ಪನಾ ಶಕ್ತಿ ಜಾಗೃತಗೊಂಡಿತು.

ಇದರ ಪರಿಣಾಮವಾಗಿ, ಮಕ್ಕಳು ಪ್ರತಿದಿನ ತಮ್ಮ ಆಟದಲ್ಲಿ; ಕಥೆಗಳನ್ನು ಪೆೀಣಿಸಿದರು, ಕೋಟೆಗಳನ್ನು ನುಗ್ಗಿ ರಾಷ್ಟ್ರಗಳನ್ನು ವಶಪಡಿಸಿಕೊಂಡರು ಮತ್ತು ನೀಲಿ ಸಾಗರಗಳಲ್ಲಿ ಪಯಣಿಸಿದರು. ಮುಂದುವರಿದಂತೆ, ಅವರ ರಾತ್ರಿಯ ಕನಸುಗಳಲ್ಲಿ ವಿಸ್ಮಯಕಾರಿ ಸರೀಸೃಪಗಳು ಕಾಣಿಸಿಕೊಳ್ಳುತ್ತಿದ್ದವು. ದುರದೃಷ್ಟವಶಾತ್, ಮಕ್ಕಳು ಬೆಳೆದಂತೆ, ನಿಧಾನವಾಗಿ ಕಥೆಗಳು ಅವರಿಂದ ದೂರವಾದವು, ಕಥೆಗಳನ್ನು ಪೆಟ್ಟಿಗೆಗಳಲ್ಲಿ ತುಂಬಿಸಿ ಅಟ್ಟಗಳಲ್ಲಿ ಇಡಲಾಯಿತು. ಕ್ರಮೇಣ, ಅವರಿಗೆ ಕಥೆಗಳನ್ನು ಹೇಳುವುದು ಮತ್ತು ಕೇಳುವುದು ಕಷ್ಟವಾಗತೊಡಗಿತು. ವಿಶೇಷವಾಗಿ, ಅವರಿಗೆ ಕಥೆಗಳನ್ನು ಪ್ರೀತಿಸುವುದು ಮರೆತುಹೋಯಿತು.

ನನ್ನ ಪ್ರಕಾರ, ನಾವು ಪ್ರೀತಿಸುವ ಪುಸ್ತಕಗಳು ಮತ್ತು ಕಥೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇದು ನಿಮಗೆ ಸ್ವಲ್ಪ ಉತ್ಪ್ರೇಕ್ಷೆಯೆನಿಸಿದರೂ, ನಾವು ಪ್ರೀತಿಸುವ ಕಥೆಗಳು, ನಮ್ಮ ದೈನಂದಿನ ಜೀವನದ ನಿರ್ಧಾರಗಳು, ಆಯ್ಕೆಗಳು ಹಾಗು ನಾವು ವಿಭಿನ್ನ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಭಾವ ಬೀರುತ್ತವೆ. ಆದರೆ, ನಮಗೆ ವಯಸ್ಸಾದಂತೆ ಪುಸ್ತಕಗಳು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಬಹುದು ಮತ್ತು ಅವುಗಳ ಬಗ್ಗೆ ನಮ್ಮ ಪ್ರೀತಿ ಮಸುಕಾಗಬಹುದು. ಅಥವಾ, ಜೀವನದ ಕುರಿತ ನಮ್ಮ ತಿಳಿವಳಿಕೆ ಹೆಚ್ಚಾದಂತೆ, ನಾವು ಹಿಂದೆ ಮೂಲೆಗುಂಪಾಗಿಸಿದ ಪುಸ್ತಕವನ್ನು ಪುನಃ ಪ್ರಶಂಸಿಸಲು ಸಾಧ್ಯವಾಗಬಹುದು. ಇದ್ದಕ್ಕಿದ್ದಂತೆ, ಅದು ಸುಮಧುರ ಸಂಗೀತದಂತೆ ನಮ್ಮನ್ನು ಆವರಿಸಿಕೊಳ್ಳಬಹುದು.

ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ಗುಂಟರ್ ಗ್ರಾಸ್ ಮಹಾನ್ ಕಾದಂಬರಿ ದಿ ಟಿನ್ ಡ್ರಮ್ನ್ನು ಓದಲು ಬಹಳ ಪ್ರಯತ್ನಿಸಿದರೂ, ಅದನ್ನು ಮುಗಿಸಲು ನನಗೆ ಸಾಧ್ಯವಾಗಿರಲಿಲ್ಲ. 10 ವರ್ಷಗಳ ಕಾಲ ಹಾಗೆಯೇ ಕಪಾಟಿನಲ್ಲಿಟ್ಟು, ಎರಡನೇ ಬಾರಿ ಓದಿದ ನಂತರ, ಅದು ನನ್ನ ಸಾರ್ವಕಾಲಿಕ ನೆಚ್ಚಿನ ಕಾದಂಬರಿಗಳಲ್ಲಿ ಒಂದಾಗಿದೆ. ನಾನು, ಈಗ ಅದನ್ನು ಅತ್ಯಂತ ಪ್ರೀತಿಸುವ ಪುಸ್ತಕಗಳಲ್ಲಿ ಒಂದೆಂದು ಹೇಳಬಹುದು. ಪ್ರಸ್ತುತತೆಯಲ್ಲಿ, ನೀವು ಒಂದು ಕುತೂಹಲಕಾರಿ ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿಕೊಳ್ಳುವುದು ಸೂಕ್ತ: ನೀವು ನಿಜವಾಗಿಯೂ ಪ್ರೀತಿಸುವ ಪುಸ್ತಕಗಳಾವುವು? ಆಶ್ಚರ್ಯವೆಂದರೆ, ಪ್ರಶ್ನೆಗೆ ಉತ್ತರ, ನಿಮ್ಮ ವರ್ತಮಾನದ ವ್ಯಕ್ತಿತ್ವದ ಕುರಿತು ಸಾಕಷ್ಟು ತಿಳಿಸುತ್ತದೆ.

ನಾನು ಬೆಳೆದದ್ದು ಭಾರತದ ಬಾಂಬೆ ಎಂಬ ಅದ್ಭುತ ನಗರದಲ್ಲಿ. ಈಗ ಅದು ತನ್ನ ಹಿಂದಿನ ವೈಭೋಗವನ್ನೆಲ್ಲಾ ಕಳೆದುಕೊಂಡು, ಮುಂಬೈ ಎಂದು ಬದಲಾಗಿದೆ. ಆಗ ಬಾಂಬೆಗೆ ದೂರದ ಪಶ್ಚಿಮ ದೇಶಗಳಿಂದ ಅದ್ಭುತ ಕಥೆ ಪುಸ್ತಕಗಳು ತಲುಪುತ್ತಿದ್ದವು.

ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರ ದಿ ಸ್ನೋ ಕ್ವೀನ್ತನ್ನ ಮಾಯದ ಕನ್ನಡಿಯ ಜೊತೆಯಲ್ಲಿ ಓದುಗರ ರಕ್ತನಾಳ ಪ್ರವೇಶಿಸಿ ಅವರ ಹೃದಯವನ್ನು ಮಂಜುಗಡ್ಡೆಯನ್ನಾಗಿ ಮಾಡಿತು. ಭಾರತದಂತಹ ಉಷ್ಣವಲಯದ ಹುಡುಗನಿಗೆ ಇದೊಂದು ಮೈನವಿರೇಳಿಸುವ ಅನುಭವವಾಗಿತ್ತು. ಯಾಕೆಂದರೆ, ನಾವು ಮಂಜುಗಡ್ಡೆಯನ್ನು ಬರಿ ರೆಫ್ರಿಜರೇಟರ್ನಲ್ಲಿ ಮಾತ್ರ ನೋಡಿದ್ದೆವು. ಬ್ರಿಟಿಷ್ ವಸಾಹತ್ತೋತ್ತರ ದಿನಗಳಲ್ಲಿ ಬೆಳೆಯುತ್ತಿದ್ದ ನನ್ನಂತಹ ಹುಡುಗನಿಗೆ ಚಕ್ರವರ್ತಿಯ ಹೊಸ ಬಟ್ಟೆಗಳುವಿಶೇಷ ಮನೋರಂಜನೆಯನ್ನುಂಟು ಮಾಡಿತು.

ಬಹುಶಃ, ಹೆಚ್ಚಿನವರಿಗೆ ಬೇರೆ ಪ್ರಾಂತ್ಯಗಳ ಕಥೆಗಳು ಯಾವಾಗಲೂ ಕಲ್ಪನೆಗೆ ನಿಲುಕದ ಕಥೆಗಳಂತೆ ಭಾಸವಾಗಬಹುದು. ಆದರೆ, ನನಗೆ ಯಾವುದೇ ಪ್ರದೇಶದ ಅದ್ಭುತ ಕಥೆಗಳನ್ನು ಆಸ್ವಾದಿಸುವುದು ಸಾಧ್ಯವಿತ್ತು. ಒಬ್ಬ ಬರಹಗಾರನಾಗಿ, ಅವುಗಳೊಂದಿಗೆ ಬೆಳೆದಿರುವುದು ನನ್ನ ಅದೃಷ್ಟವೆಂದು ಯಾವಾಗಲೂ ಭಾವಿಸುತ್ತೇನೆ.

ಇವುಗಳಲ್ಲಿ ಕೆಲವು ಕಥೆಗಳು ತಮ್ಮ ಧಾರ್ಮಿಕ ಮಹತ್ವದಿಂದಾಗಿ ಪವಿತ್ರವೆನಿಸಿಕೊಂಡಿವೆ. ಆದರೆ, ನಾನು ನಾಸ್ತಿಕ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಕಾರಣ, ಅವುಗಳನ್ನು ಮನಮೋಹಕ ಕಥೆಗಳಂತೆ ಸ್ವೀಕರಿಸಲು ಸಾಧ್ಯವಾಯಿತು. ನಾನು ಮೊದಲು, ಮಹಾಭಾರತದಲ್ಲಿ ಬರುವ ಕಥೆ `ಸಮುದ್ರ ಮಂಥನ‘; ಅಂದರೆ, ದೇವೇಂದ್ರ ಮಂದಾರ ಪರ್ವತವನ್ನು ತನ್ನ ಕಡೆಗೋಲಿನಂತೆ ಬಳಸಿ, ಆಕಾಶದಲ್ಲಿರುವ ಹಾಲಿನ ಸಾಗರವನ್ನು ಕಡೆದು, ಅಮರತ್ವಕ್ಕಾಗಿ ಅಮೃತವನ್ನು ಪಡೆದ ಕಥೆಯನ್ನು ಕೇಳಿದ ನಂತರ, ನಾನು ಆಕಾಶದಲ್ಲಿ ಕಾಣುವ ನಕ್ಷತ್ರಗಳನ್ನು ಬೇರೆಯೇ ರೀತಿಯಲ್ಲಿ ನೋಡಲಾರಂಭಿಸಿದೆ.

ನನ್ನ ಬಾಲ್ಯದ ದಿನಗಳಲ್ಲಿ, ಅಂದರೆ, ವರ್ತಮಾನದ ವಾಯು ಮಾಲಿನ್ಯದ ಮುಂಚಿನ ಸಮಯದಲ್ಲಿ, ನಗರವಾಸಿಗಳಿಗೆ ರಾತ್ರಿಯ ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದ್ದವು. ಹಾಗಾಗಿ, ಬಾಂಬೆಯ ಉದ್ಯಾನವನದಲ್ಲಿ ನನ್ನಂತಹ ಹುಡುಗನೊಬ್ಬ ಮಲಗಿಕೊಂಡು, ರಾತ್ರಿಯ ಆಕಾಶವನ್ನು ನೋಡಬಹುದಿತ್ತು ಮತ್ತು ಅಲ್ಲಿನ ಸಮುದ್ರ ಮಂಥನದ ಸದ್ದನ್ನು ಕೇಳಬಹುದಿತ್ತು. ನಾನು ಮಾಯೆಯನ್ನು ಆಸ್ವಾದಿಸುತ್ತಾ, ಅಮೃತದ ಒಂದು ಹನಿ ನನ್ನ ಬಾಯಿಗೆ ಬೀಳಬಹುದು, ಮೂಲಕ ನಾನು ಕೂಡ ಅಮರನಾಗಬಹುದು, ಎಂದು ಕಾಯುತ್ತಿದ್ದೆ.

ಇದು, ಹೆಚ್ಚಿನ ಪೌರಾಣಿಕ ಕಥೆಗಳ ಮತ್ತು ಅದರ ಮುಂದುವರಿದ ಪರಂಪರೆಯಾದ, ಕಾದಂಬರಿಯ ಅದ್ಭುತ ಸೌಂದರ್ಯ. ಮೂಲತಃ, ಕಾದಂಬರಿ ಒಂದು ಕಾಲ್ಪನಿಕ ಕಥೆ. ಅದು ಸತ್ಯವಲ್ಲವೆಂದು ತಿಳಿದಿದ್ದರೂ ಸಹ, ಅದು ಜೀವನದ ಆಳವಾದ ಸತ್ಯವನ್ನು ಹೊಂದಿದೆ ಎಂದು ನಂಬುತ್ತೇವೆ. ಇದರ ಫಲವಾಗಿ, ಕೆಲವೊಮ್ಮೆ ಕಲ್ಪನೆ ಮತ್ತು ನೈಜತೆಯ ನಡುವಿನ ಅಂತರ ಅಳಿಸಿಹೋಗುತ್ತದೆ.

ನಮ್ಮದು ಹಿಂದೂ ಕುಟುಂಬವಲ್ಲ. ಆದರೆ ಹಿಂದೂ ಧರ್ಮದ ಕಥೆಗಳು ನಮಗೂ ಅನ್ವಯಿಸುತ್ತದೆ ಎಂದು ನಾವು ನಂಬಿದ್ದೆವು. ವಾರ್ಷಿಕ ಗಣೇಶ ಹಬ್ಬದ ಸಂದರ್ಭದಲ್ಲಿ, ಆನೆ ತಲೆಯ ಗಣೇಶ ವಿಗ್ರಹವನ್ನು ಚೌಪಟ್ಟಿ ಬೀಚ್ನಲ್ಲಿ ವಿಸರ್ಜಿಸುವಾಗ, ಗಣೇಶ ನನ್ನವನೂ ಆಗಿದ್ದ. ಆಗ, ಸಂಭ್ರಮಾಚರಣೆ ನಗರದ ಏಕತೆಯ ಸಂಕೇತವಾಗಿತ್ತೇ ಹೊರತು, ಈಗಿನಂತೆ ಇದು ಒಂದು ಕೋಮಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಯಾಗಿರಲಿಲ್ಲ.

ಅದೇ ರೀತಿ, ಗಣೇಶನ ಸಾಹಿತ್ಯ ಪ್ರೇಮದ ಕುರಿತು ತಿಳಿದಾಗ, ಅವನು ನನಗೆ ಇನ್ನೂ ಹತ್ತಿರದವನಾದ. ಅವನು ಭಾರತದ ಹೋಮರ್ ಎನಿಸಿಕೊಂಡ ವ್ಯಾಸ ಮಹರ್ಷಿಯ ಪಾದತಲದಲ್ಲಿ ಕುಳಿತು, ಮಹಾಭಾರತವನ್ನು ಬರೆದ ಮಹಾನ್ ಬರಹಗಾರ. ಮುಂದೆ ನಾನು ಮಿಡ್ ನೈಟ್ಸ್ ಚಿಲ್ಡ್ರನ್ಕಾದಂಬರಿ ಬರೆದಾಗ, ಅದರ ನಿರೂಪಕ ಸಲೀಮ್ ಮುಸ್ಲಿಂ ಕುಟುಂಬದಿಂದ ಬಂದಿದ್ದರೂ ಸಹ, ಗಣೇಶನಂತೆ ದೊಡ್ಡ ಮೂಗನ್ನು ಹೊಂದಿದ್ದುದು, ಮೂಲಕ ಅನ್ಯ ಧರ್ಮದ ದೇವರ ಕಲ್ಪನೆಯೊಂದಿಗೆ ಸಂಯೋಜಿಸಿರುವುದು ಕೂಡ ನನಗೆ ಸಹಜವಾಗಿತ್ತು. ಹಳೆಯ, ಜಾತ್ಯತೀತ ಬಾಂಬೆಯಲ್ಲಿದ್ದ ಧಾರ್ಮಿಕ ಸಹಿಷ್ಣುತೆ, ಪ್ರಸಕ್ತ ಭಾರತದ ಧಾರ್ಮಿಕ ವಿಭಜನೆಯ ಮುಂದೆ, ಒಂದು ಅದ್ಭುತ ವಿಸ್ಮಯವೆಂಬಂತೆ ಭಾಸವಾಗುತ್ತದೆ.

ದುರಾದೃಷ್ಟವಷಾತ್, ಕಥೆಗಳ ಪ್ರಭಾವ ಯಾವಾಗಲೂ ಸಕಾರಾತ್ಮಕವಾಗಿಲ್ಲವೆಂದು ಒಪ್ಪಿಕೊಳ್ಳಬೇಕು. ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷದಂತಹ ಹಿಂದೂ ರಾಷ್ಟ್ರೀಯವಾದಿ ಪಕ್ಷಗಳು, ಹಿಂದೂ ಧರ್ಮದ ಸುವರ್ಣಯುಗವೆಂದು ಭಾವಿಸಲಾದ ರಾಮ ರಾಜ್ಯಅಥವಾ ಭಗವಾನ್ ರಾಮನ ಆಳ್ವಿಕೆಗೆ ಹಿಂದಿರುಗುವ ಬಗ್ಗೆ ತನ್ನ ವಾಕ್ಚಾತುರ್ಯವನ್ನು ಬಳಸುತ್ತಿದೆ. ಮೂಲಕ, ಅನ್ಯ ಧರ್ಮಗಳನ್ನು ಕೂಡ ಸಂಕಷ್ಟಕ್ಕೀಡುಮಾಡಿದೆ. ರೀತಿಯಲ್ಲಿ, ರಾಮಾಯಣದಂತಹ ಮಹಾಕಾವ್ಯ ಮತ್ತು ಹಿಂದೂ ಧರ್ಮ ಎರಡೂ, ನಿರ್ಲಜ್ಜ ಕೋಮು ನಾಯಕರ ಕೈಯಲ್ಲಿ ಸಿಲುಕಿ ಅಪಾಯಕಾರಿ ಸ್ಥಿತಿಯಲ್ಲಿದೆ.

ಹೀಗಿದ್ದೂ ಸಹ, ಮೋಡಿಮಾಡಿದ ಕಥೆಗಳನ್ನು ಕೇಳಿದ ನನ್ನ ಬಾಲ್ಯದ ದಿನಗಳಿಗೆ ಮರಳಲು ಬಯಸುತ್ತೇನೆ. ಅಲ್ಲಿರುವ, ಧಾರ್ಮಿಕ ಮಹಾಕಾವ್ಯಗಳನ್ನು ಹೊರತುಪಡಿಸಿ, ಇನ್ನಿತರ ಭಯಾನಕ, ನಿಗೂಢ, ರೋಮಾಂಚಕಾರಿ, ಹಾಸ್ಯಭರಿತ, ವಿಲಕ್ಷಣ ಮತ್ತು ಅತ್ಯಂತ ಮಾದಕ ನಿರೂಪಣೆಯ ಕಥಾಗುಚ್ಛಗಳಿಗೆ ಪುನಃ ಭೇಟಿ ಕೊಡಬೇಕೆನಿಸುತ್ತದೆ. ಒಮ್ಮೆ ಧಾರ್ಮಿಕ ಅಂಶವನ್ನು ಕಥೆಗಳಿಂದ ಬೇರ್ಪಡಿಸಿದರೆ, ಇಲ್ಲಿರುವ ಸಾಹಿತ್ಯ, ಮನಸ್ಸಿಗೆ ಎಷ್ಟು ಆನಂದ ಕೊಡುತ್ತದೆಯೆಂದು ನಿರೂಪಿಸಲು, ಪ್ರಕ್ರಿಯೆ ಅವಶ್ಯಕ.

ಉದಾಹರಣೆಗೆ ಸಾವಿರದ ಒಂದು ರಾತ್ರಿಗಳುಕಥೆಯಲ್ಲಿನ ಅತ್ಯಂತ ಗಮನಾರ್ಹ ಅಂಶವೆಂದರೆ, ಧರ್ಮದ ಸಂಪೂರ್ಣ ಅನುಪಸ್ಥಿತಿ. ಇದರಲ್ಲಿ, ಲೈಂಗಿಕತೆ, ಕಿಡಿಗೇಡಿತನ, ಮೋಸ, ಜಾದು, ರಾಕ್ಷಸರು, ದೈತ್ಯರು, ಕೆಲವೊಮ್ಮೆ, ಅಪಾರ ಪ್ರಮಾಣದ ರಕ್ತದೋಕುಳಿ ಮತ್ತು ಭೀಕರತೆ, ಎಲ್ಲಾ ಇದೆ. ಆದರೆ ದೇವರು ಮಾತ್ರ ಇಲ್ಲ. ಹಾಗಾಗಿ, ಸಾಂಪ್ರದಾಯಿಕ ಮುಸಲ್ಮಾನರು ಇದನ್ನು ಅಷ್ಟೊಂದು ಇಷ್ಟಪಡುವುದಿಲ್ಲ.

ಮೇ 2010 ರಲ್ಲಿ, ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ವಿರುದ್ಧದ ದಂಗೆಗೆ ಕೇವಲ ಏಳು ತಿಂಗಳ ಮೊದಲು, ಮುಸ್ಲಿಂ ಸಾಂಪ್ರದಾಯಿಕ ವಕೀಲರ ಗುಂಪೆÇಂದು ಆಲ್ಫ್ ಲಯ್ಲಾ ವಾ ಲಾಯ್ಲಾ” ( ಪುಸ್ತಕದ ಮೂಲ ಅರೇಬಿಕ್ ಶೀರ್ಷಿಕೆ) ಹೊಸ ಆವೃತ್ತಿಯು ಮುದ್ರಣವಾಗುತ್ತಿರುವ ಬಗ್ಗೆ ಮಾಹಿತಿ ಪಡೆದು, ಅದನ್ನು ಕೂಡಲೇ ತಡೆಹಿಡಿದು ಪುಸ್ತಕವನ್ನು ನಿಷೇಧಿಸಬೇಕೆಂದು ಕರೆಕೊಟ್ಟಿತು. ಏಕೆಂದರೆ, ಅದರಲ್ಲಿ ಲೈಂಗಿಕತೆಯ ಕುರಿತು ಅತಿಯಾದ ಉಲ್ಲೇಖವಿದ್ದು, ಅದು ಪಾಪಕ್ಕೆ ಪ್ರಚೋದನೆ ಕೊಡುತ್ತದೆಯೆಂದು ಹೇಳಿತು. ಅದೃಷ್ಟವಶಾತ್, ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ, ಯಾಕೆಂದರೆ, ಕ್ರಮೇಣ ವಿವಾದ ಮರೆಯುವಷ್ಟು, ಬೇರೆ ವಿಷಯಗಳು ಈಜಿಪ್ಟಿನಲ್ಲಿ ಪ್ರಾಮುಖ್ಯ ಪಡೆದವು. ಆದರೆ, ಅವರಿಗೆ ಅಂತಹ ಕೆಟ್ಟ ಯೋಜನೆಗಳಿದ್ದವು, ಎನ್ನುವುದು ಇಲ್ಲಿ ಚಿಂತಿಸಬೇಕಾದ ವಿಚಾರ.

ನಿಜ, ಪುಸ್ತಕದಲ್ಲಿ ಲೈಂಗಿಕತೆಯ ಬಗ್ಗೆ ಹಲವಾರು ಉಲ್ಲೇಖಗಳಿವೆ. ಅಲ್ಲಿನ ಪಾತ್ರಗಳು ಧರ್ಮನಿಷ್ಠೆಗಿಂತ ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ತೋರುತ್ತದೆ. ನೀವು ಜಗತ್ತನ್ನು ನೋಡುವ ರೀತಿ ಅತೀವ `ಸಚ್ಚಾರಿತ್ರ್ಯದಿಂದ ಕೂಡಿದ್ದರೆ, ಮೇಲೆ ಪ್ರಸ್ತಾಪಿಸಿದ ವಕೀಲರು ವಾದಿಸಿದಂತೆ, ಕಥೆಗಳು ನಿಜವಾಗಿಯೂ ಕೆಟ್ಟ ಆಲೋಚನೆಗಳನ್ನು ಪ್ರಚೋದಿಸುತ್ತವೆ. ಆದರೆ, ನನ್ನ ಅನಿಸಿಕೆಯಂತೆ ಕಥೆಗಳು, ಅತ್ಯುತ್ತಮ ಸ್ಪಂದನೆಗೆ ಯೋಗ್ಯವಾದವುಗಳು. ಆದರೆ, ಸಂಗೀತ, ಹಾಸ್ಯ ಮತ್ತು ಆನಂದವನ್ನು ಇಷ್ಟಪಡದ ಜನರು, ಇಂತಹ ಪುಸ್ತಕದಿಂದ ಹೇಗೆ ಅಸಮಾಧಾನಗೊಳ್ಳುತ್ತಾರೆ ಎಂಬುದನ್ನು ನೀವಿಲ್ಲಿ ನೋಡಬಹುದು. ಪುರಾತನ ಅದ್ಭುತ ಕಥಾಗುಚ್ಛ ಜಗತ್ತಿಗೆ ಬಂದು 1,200 ವರ್ಷಗಳ ನಂತರವೂ, ವಿಶ್ವದ ಮತಾಂಧರನ್ನು ವಿಚಲಿತರನ್ನಾಗಿಸುವ ಶಕ್ತಿಯನ್ನು ಉಳಿಸಿಕೊಂಡಿರುವುದು ಮಾತ್ರ ವಿಸ್ಮಯವೇ ಸರಿ.

ಈಗ ನಾವು ಜನಪ್ರಿಯವಾಗಿ ಅರೇಬಿಯನ್ ನೈಟ್ಸ್ಎಂದು ಕರೆಯುವ ಕಥಾಸಂಗ್ರಹವು ಮೂಲತಃ ಅರಬ್ ಜಗತ್ತಿನಲ್ಲಿ ಹುಟ್ಟಿಕೊಂಡಿಲ್ಲ. ಬಹುಶಃ, ಇದಕ್ಕೆ ಭಾರತೀಯ ಮೂಲವಿರಬಹುದು. ಭಾರತೀಯ ಕಥಾ ಸಂಕಲನಗಳು ಕೂಡ, ರಷ್ಯಾದ ಗೊಂಬೆಶೈಲಿಯ ಕಥೆಗಳು ಮತ್ತು ಪ್ರಾಣಿಗಳ ನೀತಿಕಥೆಗಳನ್ನು ಹೋಲುತ್ತವೆ. ಎಂಟನೇ ಶತಮಾನದಲ್ಲಿ, ಕಥೆಗಳು ಪರ್ಷಿಯನ್ ಭಾಷೆಗೆ ವರ್ಗಾಯಿಸಲ್ಪಟ್ಟವು. ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಇವುಗಳನ್ನು ಹಜಾರ್ ಅಫ್ಸಾನೆಹ್ಅಥವಾ ಸಾವಿರ ಕಥೆಗಳುಎಂದು ಕರೆಯಲಾಗುತ್ತಿತ್ತು.

ಬಾಗ್ದಾದಿನಲ್ಲಿ ಲಭ್ಯವಿರುವ 10 ನೇ ಶತಮಾನದ ದಾಖಲೆಯು `ಹಜಾರ್ ಅಫ್ಸಾನೆಹ್ಮತ್ತು ಅದರ ಚೌಕಟ್ಟಿನ ಕಥೆಯನ್ನು ಉಲ್ಲೇಖಿಸುತ್ತದೆ. ಅದರಲ್ಲಿ ಪ್ರಸ್ತಾಪಿಸಿದಂತೆ, ಒಬ್ಬ ದುಷ್ಟ ರಾಜನಿದ್ದ, ಅವನು ಪ್ರತಿ ರಾತ್ರಿ ತನ್ನ ಹೊಸ ಪತ್ನಿಯನ್ನು ಕೊಲ್ಲುತ್ತಾ ಹೋಗುತ್ತಾನೆ, ಅವರಲ್ಲಿ ಒಬ್ಬಳು, ಕಥೆಗಳನ್ನು ಹೇಳುವ ಮೂಲಕ ಅವಳ ಮರಣದಂಡನೆಯನ್ನು ತಡೆಯುತ್ತಾಳೆ. ಇಲ್ಲಿ, ಪ್ರಥಮ ಬಾರಿಗೆ ಷೆಹೆರಾಜೇಡ್ಎಂಬ ಹೆಸರು ಪ್ರಸ್ತಾಪನೆಯಾಗಿದೆ. ವಿಷಾದದ ಸಂಗತಿಯೆಂದರೆ, ‘ಹಜಾರ್ ಅಫ್ಸಾನೆಹ್ ಒಂದು ಪ್ರತಿಯೂ ಕೂಡ ಉಳಿದಿಲ್ಲ. ಪುಸ್ತಕವನ್ನು, ವಿಶ್ವ ಸಾಹಿತ್ಯದ ಅತ್ಯಮೂಲ್ಯ ಕಾಣೆಯಾದ ಕೊಂಡಿಎನ್ನಬಹುದು.

ನನಗನಿಸುವಂತೆ, ಭಾರತದ ಅದ್ಭುತ ಕಥೆಗಳು ಪಶ್ಚಿಮಕ್ಕೆ, ಅನಂತರ ಅರೇಬಿಕ್ ಭಾಷೆಗೆ ಪಯಣಿಸಿ, “ಸಾವಿರದ ಒಂದು ರಾತ್ರಿಗಳುಆಗಿ ಹೊಸ ರೂಪ ಪಡೆಯಿತು. ವಿಶೇಷವೆಂದರೆ, ಕಥೆಗಳು ಹಲವಾರು ಆವೃತ್ತಿಗಳಲ್ಲಿ ಲಭ್ಯವಿದೆ, ಆದರೆ, ಒಂದು ಅಂಗೀಕೃತ ರೂಪದಲ್ಲಿಲ್ಲ. ಅನಂತರ, 18ನೇ ಶತಮಾನದಲ್ಲಿ ಫ್ರಾನ್ಸಿನ ವಿದ್ವಾಂಸ ಆಂಟೊಯಿನ್ ಗ್ಯಾಲ್ಯಾಂಡ್ ಕಥೆಗಳನ್ನು ತಮ್ಮ ಫ್ರೆಂಚ್ ಆವೃತ್ತಿಯಲ್ಲಿ ಹೊರತರುವಾಗ, ಮೂಲ ಅರೇಬಿಕ್ ಭಾಷೆಯಲ್ಲಿ ಇಲ್ಲದ ಹಲವಾರು ಹೊಸ ಕಥೆಗಳನ್ನು ಸೇರಿಸಿದರು. ಉದಾಹರಣೆಗೆ ಅಲ್ಲಾದೀನ್ ಮತ್ತು ಮಾಯಾ ದೀಪಮತ್ತು ಅಲಿ ಬಾಬಾ ಮತ್ತು ನಲವತ್ತು ಜನ ಕಳ್ಳರು”.

ಕಾಲಾನಂತರ, ಫ್ರೆಂಚ್ ಕಥೆಗಳು ಇಂಗ್ಲಿಷ್ ಗೆ ಭಾಷಾಂತರಗೊಂಡವು. ಇಂಗ್ಲಿಷ್ ನಿಂದ ಹಾಲಿವುಡ್ ತಲುಪಿತು. ಯಾವುದೇ ಸಿನಿಮಾ ಜಗತ್ತಿಗೆ ತನ್ನದೇ ಆದ ಭಾಷೆಯಿದೆ. ಹಾಗಾಗಿ, ಹಾಲಿವುಡ್ ನಲ್ಲಿ, ಅದು ಹಾರಾಡುವ ರತ್ನಗಂಬಳಿ ಪಡೆಯಿತು ಮತ್ತು ನಟ ರಾಬಿನ್ ವಿಲಿಯಮ್ಸ್ ಜಿನೀ ಆದ. (ಮೂಲ ಅರೇಬಿಯನ್ ನೈಟ್ಸ್ನಲ್ಲಿ ಯಾವುದೇ ಹಾರುವ ರತ್ನಗಂಬಳಿ ಇರಲಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ತನ್ನ ಗಾತ್ರವನ್ನು ಬದಲಾಯಿಸಬಲ್ಲ ಮತ್ತು ಸೈನ್ಯವನ್ನು ಸಾಗಿಸುವಷ್ಟು ದೊಡ್ಡದಾದ ರತ್ನಗಂಬಳಿಯನ್ನು ರಾಜ ಸೊಲೊಮನ್ ಹೊಂದಿದ್ದನೆನ್ನುವ ದಂತಕಥೆಯಿದೆ).

ಕಥಾ ನಿರೂಪಣೆಯ ಮಹಾ ವಲಸೆ, ದಕ್ಷಿಣ ಅಮೆರಿಕಾದ ನೀತಿಕಥೆಗಾರರು ರಚಿಸಿದ ಮಾಂತ್ರಿಕ ವಾಸ್ತವಿಕತೆ ಯೂ ಸೇರಿದಂತೆ, ವಿಶ್ವದ ಹೆಚ್ಚಿನ ಸಾಹಿತ್ಯಕ್ಕೆ ಪ್ರೇರಣೆಯೆಂದರೆ ತಪ್ಪಾಗಲಾರದು. ಆದ್ದರಿಂದ, ನಾನು ಕಥಾ ನಿರೂಪಣಾ ಸಂಪ್ರದಾಯವನ್ನು ನನ್ನ ಸಾಹಿತ್ಯದಲ್ಲಿ ಮುಂದುವರಿಸಿದಾಗ, ಪರಂಪರೆ ಪ್ರಾರಂಭವಾದ ದೇಶಕ್ಕೆ, ಅಂದರೆ ಭಾರತಕ್ಕೆ ಮರಳಿಸಿದಂತೆ ಆಗುತ್ತದೆ. ಆದರೆ, `ಹಜಾರ್ ಅಫ್ಸಾನೆಹ್ಕಳೆದುಹೋದುದಕ್ಕೆ, ನಾನು ಅತೀವ ಬೇಸರ ವ್ಯಕ್ತಪಡಿಸುತ್ತೇನೆ. ಒಂದು ವೇಳೆ, ಅದನ್ನು ಮರುಶೋಧನೆ ಮಾಡಿದರೆ, ಕಥೆಗಳು ಜಗತ್ತಿನ ಒಂದು ಸಂಪೂರ್ಣ ವರ್ತುಲ ಸುತ್ತಿದಂತೆ ಆಗುತ್ತದೆ.

ಅಕಸ್ಮಾತ್, ಕಥೆಗಳು ಸಿಕ್ಕ ಪಕ್ಷದಲ್ಲಿ, ಕಥಾಹಂದರದ, ಹೃದಯ ಅಥವಾ ಇನ್ಯಾವುದೋ ಭಾಗದಲ್ಲಿರುವ ಒಂದು ಅಮೋಘ ರಹಸ್ಯವನ್ನು ಬಗೆಹರಿಸಿದಂತೆ ಆಗುತ್ತದೆ. ಹೀಗಾದಲ್ಲಿ, ಕೆಲವು ವರ್ಷಗಳಿಂದ ನನ್ನನ್ನು ನಾನು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಗಬಹುದು: ಅಂತಿಮವಾಗಿ, ಷೆಹೆರಾಜೇಡ್ ಮತ್ತು ಅವಳ ಸಹೋದರಿ ದುನ್ಯಾಜಾದ್, ಸಾವಿರದ ಒಂದು ರಾತ್ರಿಗಳ ನಂತರ, ತಮ್ಮ ರಕ್ತಪಿಪಾಸು ಗಂಡಂದಿರನ್ನು ಕೊಂದರೇ?

ಭಾರತ ಜಂಬೂ ದ್ವೀಪ ಮತ್ತು ಮತ್ತು ಚೀನಾ ಪ್ರಾಂತ್ಯದ ರಾಜನಾಗಿದ್ದ ಶಹರ್ಯಾರ್ ಮತ್ತು ಅವನ ತಮ್ಮ ಸಮರ್ಕಂಡ್ ಸಾರ್ವಭೌಮ ರಾಜ, ಷಾ ಜಮಾನ್ ನಿಜವಾಗಿ ಎಷ್ಟು ಮಹಿಳೆಯರನ್ನು ಕೊಂದರು? ಸರಣಿ ಕೊಲೆಗಳು ಪ್ರಾರಂಭವಾಗಿದ್ದು, ಷಾ ಜಮಾನ್ ತನ್ನ ಹೆಂಡತಿಯನ್ನು ಅರಮನೆಯ ಅಡುಗೆಯವನ ತೆಕ್ಕೆಯಲ್ಲಿ ನೋಡಿದಾಗ. ತಕ್ಷಣ, ಷಾ ಜಮಾನ್ ಅವರಿಬ್ಬರನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ತನ್ನ ಅಣ್ಣನ ಮನೆಯತ್ತ ತೆರಳಿದನು. ಆದರೆ, ದಾರಿಯಲ್ಲಿ ಅವನು, ಶಹರ್ಯಾರ್ ಹೆಂಡತಿಯ 10 ಸೇವಕಿಯರು ಮತ್ತು 10 ಗುಲಾಮರು ತೋಟವೊಂದರಲ್ಲಿ ಕಾಮಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿದನು. ಅವರೊಂದಿಗೆ, ರಾಣಿ ಕೂಡ, ತನ್ನ ಪ್ರೇಮಿಯನ್ನು ಮರದಿಂದ ಕೆಳಗೆ ಇಳಿಸಿ, ರಾಸಲೀಲೆಯಲ್ಲಿ ಮಗ್ನಳಾಗಿದ್ದಳು.

ಸ್ತ್ರೀಕುಲದ ವಿಶ್ವಾಸಘಾತುಕತನದ ಕುರಿತಂತೆ, ತಾನು ಕಣ್ಣಾರೆ ಕಂಡ ದೃಶ್ಯಗಳನ್ನು, ಷಾ ಜಮಾನ್ ತನ್ನ ಅಣ್ಣನಿಗೆ ವಿವರಿಸಿದನು. ಪರಿಣಾಮವಾಗಿ, ರಾಣಿ, ಸೇವಕಿಯರು ಮತ್ತು ಗುಲಾಮರು, ಎಲ್ಲರೂ ತಮ್ಮ ಅಂತ್ಯವನ್ನು ಕಂಡರು. ರಾಣಿಯ ಪ್ರಿಯಕರ ಮಾತ್ರ ತಪ್ಪಿಸಿಕೊಂಡಂತೆ ತೋರುತ್ತದೆ.

ಘಟನೆಯ ನಂತರ, ಶಹರ್ಯಾರ್ ಮತ್ತು ಷಾ ಜಮಾನ್ ವಿಶ್ವಾಸಘಾತಕ ಸಮಸ್ತ ಸ್ತ್ರೀಕುಲದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆರಂಭಿಸಿದರು. ಮೂರು ವರ್ಷಗಳ ಕಾಲ, ಅವರಿಬ್ಬರೂ ಪ್ರತಿದಿನಕ್ಕೊಂದರಂತೆ ಕನ್ಯೆಯರನ್ನು ವಿವಾಹಯಾದರು, ಮೊದಲ ರಾತ್ರಿಯ ಸುಖ ಅನುಭವಿಸಿದ ನಂತರ ಅವರನ್ನು ಗಲ್ಲಿಗೇರಿಸಲು ಆದೇಶಿಸಿದರು. ಷೆಹೆರಾಜೇಡ್ ಅವಳ ತಂದೆ, ಶಹರ್ಯಾರ್ ಪ್ರಧಾನ ಮಂತ್ರಿಯಾಗಿದ್ದ ಹಾಗೂ ರಾಜನ ಆಜ್ಞೆಯಂತೆ ನತದೃಷ್ಟ ಕನ್ಯೆಯರ ಮರಣದಂಡನೆಯನ್ನು ಸ್ವತಃ ನಿರ್ವಹಿಸಬೇಕಾದ ನಿರ್ಬಂಧಕ್ಕೆ ಕಟ್ಟು ಬಿದ್ದಿದ್ದ.

ಪ್ರಧಾನ ಮಂತ್ರಿ ಅತ್ಯಂತ ಸಂಭಾವಿತ ವ್ಯಕ್ತಿಯೇ ಆಗಿದ್ದಿರಬೇಕು. ಎಷ್ಟೆಂದರೂ, ಅವನು, ಷೆಹೆರಾಜೇಡ್ ಮತ್ತು ಅವಳ ತಂಗಿ ದುನ್ಯಾಜಾದ್ ರಂತಹ ಚಾಣಕ್ಷ ಮತ್ತು ಸಭ್ಯ ಹುಡುಗಿಯರ ತಂದೆಯಲ್ಲವೇ?

ಅಂತಹ ಅಪ್ರತಿಮ ಹೆಣ್ಣುಮಕ್ಕಳ ತಂದೆಗೆ, ಸ್ವತಃ ನೂರಾರು ಕನ್ಯೆಯರನ್ನು ಗಲ್ಲಿಗೇರಿಸುವಾಗ, ಕುತ್ತಿಗೆ ಸೀಳುವಾಗ ಮತ್ತು ಅವರ ಜೀವನಾಡಿ ಸ್ತಬ್ಧವಾಗುವುದನ್ನು ನೋಡುವಾಗ, ಮನಸ್ಸಿಗೆ ಏನು ಅನ್ನಿಸುತ್ತಿದ್ದಿರಬಹುದು? ನಮಗೆ ಗೊತ್ತಿಲ್ಲ. ಆದರೆ, ಅಹಿತಕರ ಬೆಳವಣಿಗೆಯಿಂದಾಗಿ, ಶಹರ್ಯಾರ್ ಪ್ರಜೆಗಳು ತೀವ್ರ ಅಸಮಾಧಾನಕ್ಕೆ ಒಳಗಾದರು ಮತ್ತು ತಮ್ಮ ಹೆಣ್ಣು ಮಕ್ಕಳೊಂದಿಗೆ ರಾಜಧಾನಿಯಿಂದ ಪಲಾಯನ ಮಾಡಲು ಪ್ರಾರಂಭಿಸಿದರು. ಇದರ ಫಲವಾಗಿ, ಮೂರು ವರ್ಷಗಳ ನಂತರ ಪಟ್ಟಣದಲ್ಲಿ, ಷೆಹೆರಾಜೇಡ್ ಮತ್ತು ದುನ್ಯಾಜಾದ್ ಹೊರತುಪಡಿಸಿ ಬೇರೆ ಯಾವುದೇ ಕನ್ಯೆಯರು

ಉಳಿದಿರಲಿಲ್ಲ.

ಷೆಹೆರಾಜೇಡ್, ಕಥೆಯನ್ನು ಪ್ರವೇಶಿಸುವ ಹೊತ್ತಿಗೆ, ಅಂದರೆ, ರಾಜ ಶಹರ್ಯಾರ್ನನ್ನು ಆಕೆ ಮದುವೆಯಾಗಿ, ಮೊದಲ ರಾತ್ರಿಯ ಶಾಸ್ತ್ರ ಮುಗಿದು, ಅವಳ ತಂಗಿ ದುನ್ಯಾಜಾದ್, ಅವರ ದಾಂಪತ್ಯದ ಹಾಸಿಗೆಯ ಬುಡದಲ್ಲಿ ಕುಳಿತುಕೊಂಡು, ಷೆಹೆರಾಜೇಡ್ ಹತ್ತಿರ ಕಥೆ ಹೇಳಲು ಒತ್ತಾಯಿಸುವ ಹೊತ್ತಿಗೆ, ಶಹರ್ಯಾರ್ ಮತ್ತು ಷಾ ಜಮಾನ್ ಸಹೋದರರು, ಆಗಲೇ ಎರಡು ಸಾವಿರದ ಇನ್ನೂರ ಹದಿಮೂರು ಸಾವುಗಳಿಗೆ ಜವಾಬ್ದಾರರಾಗಿದ್ದರು. ಸತ್ತವರಲ್ಲಿ ಹನ್ನೊಂದು ಮಂದಿ ಮಾತ್ರ ಪುರುಷರಾಗಿದ್ದರು.

ಷೆಹೆರಾಜೇಡ್ಳನ್ನು ಮದುವೆಯಾಗಿ ಅವಳ ಕುತೂಹಲಕಾರಿ ಕಥೆಗಳಿಂದ ಆಕರ್ಷಿತನಾದ ನಂತರ, ಶಹರ್ಯಾರ್ ಕನ್ಯೆಯರನ್ನು ಕೊಲ್ಲುವುದನ್ನು ನಿಲ್ಲಿಸಿದನು. ಆದರೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿಲ್ಲದ ಷಾ ಜಮಾನ್ ಮಾತ್ರ ತನ್ನ ಪ್ರತೀಕಾರದ ಕೆಲಸವನ್ನು ಮುಂದುವರಿಸಿದನು. ಹೀಗೆ, ಸಾವಿರದ ಒಂದು ರಾತ್ರಿಗಳ ನಂತರ, ಸತ್ತ ಕನ್ಯೆಯರ ಸಂಖ್ಯೆ ಮೂರು ಸಾವಿರದ ಇನ್ನೂರ ಹದಿನಾಲ್ಕು ತಲುಪಿತ್ತು.

`ಷೆಹೆರಾಜೇಡ್ಅಂದರೆ ನಗರದಲ್ಲಿ ಜನಿಸಿದವಳುಎಂದರ್ಥ. ನಿಸ್ಸಂದೇಹವಾಗಿ, ಅವಳು, ಮಹಾನಗರದ ಹುಡುಗಿ, ಚಾಣಾಕ್ಷೆ, ಭಾವನಾ ಜೀವಿ ಮತ್ತು ಸಿನಿಕತನ ಹೊಂದಿದ್ದಳು. ಒಟ್ಟಿನಲ್ಲಿ, ಅವಳನ್ನು ಒಬ್ಬ ಸಮಕಾಲೀನ ಮಹಾನಗರದ ನಿರೂಪಕಿಯೆನ್ನಬಹುದು. ಷೆಹೆರಾಜೇಡ್, ಎಂದಿಗೂ ಮುಗಿಯದ ತನ್ನ ವಿಸ್ಮಯಕಾರಿ ಕಥೆಗಳಿಂದ, ರಾಜನನ್ನು ಮಂತ್ರಮುಗ್ಧಗೊಳಿಸಿದಳು. ಅಥವಾ, ಅವಳು ತನ್ನ ಜೀವವನ್ನು ಉಳಿಸಿಕೊಳ್ಳಲು ಕಥೆಗಳನ್ನು ಹೆಣೆದಳು ಹಾಗೂ ಸಾವಿನ ವಿರುದ್ಧ ಕಾದಂಬರಿಗಳನ್ನು ಪೆÇೀಣಿಸಿದಳು. ಹೀಗೆ, ಅವಳೊಂದು ಸ್ವಾತಂತ್ರ್ಯದ ಪ್ರತಿಮೆ ನಿರ್ಮಿಸಿದಳು, ಆದರೆ, ಲೋಹದಿಂದಲ್ಲ, ತನ್ನ ಪದಗುಚ್ಛಗಳಿಂದ. ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ, ರಾಜನ ಮಾರಣಾಂತಿಕ ಶಯನಗೃಹಕ್ಕೆ ಹೋಗುವ ಧೈರ್ಯ ಮಾಡಿದಳು. ರಾಜನನ್ನು ಪಳಗಿಸುವ ಮೂಲಕ ತನ್ನ ಸಹೋದರಿಯರನ್ನು ಉಳಿಸುವ ದಿಟ್ಟತನ ತೋರಿಸಿದಳು. ಬಹುಶಃ, ಅವಳಿಗೆ ಇಂತಹ ಕೊಲೆಗಾರನ ಒಳಗೊಬ್ಬ ಮನುಷ್ಯನಿರಬಹುದು ಮತ್ತು ಕಥೆಗಳನ್ನು ಹೇಳುವ ಮೂಲಕ ಅವನ ಮಾನವೀಯತೆಯನ್ನು ಪುನಃಸ್ಥಾಪಿಸಬಹುದೆಂಬ ತನ್ನ ಸ್ವಂತ ಸಾಮಥ್ರ್ಯದಲ್ಲಿ ನಂಬಿಕೆ ಇದ್ದಿರಬೇಕು.

ಆಕೆ, ಎಂತಹ ಅಪ್ರತಿಮ ಮಹಿಳೆ! ಶಹರ್ಯಾರ್ ಅವಳ ಪ್ರೀತಿಯಲ್ಲಿ ಹೇಗೆ ಮತ್ತು ಯಾಕೆ ಬಿದ್ದ ಎಂದು ಅರ್ಥಮಾಡಿಕೊಳ್ಳುವುದು ಬಹಳ ಸುಲಭ. ಹೀಗೆ, ಕಥಾ ಪ್ರವಚನದ ರಾತ್ರಿಗಳು ಮುಂದುವರಿದಂತೆ, ಶಹರ್ಯಾರ್ ಗೆ ತನ್ನ ಮರಣದಂಡನೆಯ ಆಜ್ಞೆ ಅರ್ಥಹೀನವೆನಿಸತೊಡಗಿತು ಮತ್ತು ಅದನ್ನು ನಿರ್ವಹಿಸಲು ತನ್ನ ಪ್ರಧಾನ ಮಂತ್ರಿ ಅಥವಾ ಅವಳ ತಂದೆಯನ್ನು ಕೇಳಲಾಗದಾದ. ಕಾಲಕ್ರಮೇಣ, ಅವನು, ಅವಳ ಮಕ್ಕಳ ತಂದೆಯಾದ ಮತ್ತು ಸಜ್ಜನನಾದ. ಅವಳ ಅಪ್ರತಿಮ ವ್ಯಕ್ತಿತ್ವದ ಮುಂದೆ, ಅವನ ಕ್ರೂರತೆಯು ಮಂಕಾಗಿ ಹೋಯಿತು. ಅವಳು ಇತರರ ಜೀವಗಳನ್ನು ಉಳಿಸಲು, ಸಾವಿರದ ಒಂದು ರಾತ್ರಿಗಳವರೆಗೆ, ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಳು. ಕ್ರೂರತೆಯ ವಿರುದ್ಧ ನಿಲ್ಲುವ, ಅದನ್ನು ಜಯಿಸುವ ಮತ್ತು ಅವನನ್ನು ನಾಗರಿಕನನ್ನಾಗಿಸುವ ತನ್ನ ಶಕ್ತಿಯಲ್ಲಿ ಅವಳಿಗೆ ನಂಬಿಕೆಯಿತ್ತೆಂದು ಕಾಣಿಸುತ್ತದೆ.

ಶಹರ್ಯಾರ್ ನಿಜಕ್ಕೂ ಒಬ್ಬ ಅದೃಷ್ಟವಂತ ರಾಜ. ಆದರೆ, ಇಲ್ಲಿನ ಪ್ರಶ್ನೆ (“ಅರೇಬಿಯನ್ ನೈಟ್ಸ್ನಲ್ಲಿ ಉತ್ತರ ಸಿಗದ ಮಹತ್ತರ ಪ್ರಶ್ನೆಯಿದು), ಷೆಹೆರಾಜೇಡ್ ಅವನಲ್ಲಿ ಯಾಕೆ ಪ್ರೀತಿಯಲ್ಲಿ ಬಿದ್ದಳು? ಅದರಂತೆಯೇ, ಸಾವಿರದ ಒಂದು ರಾತ್ರಿಗಳನ್ನು, ಅಕ್ಕನ ದಾಂಪತ್ಯದ ಹಾಸಿಗೆಯ ಬುಡದಲ್ಲಿಯೇ ಕಳೆದ ದುನ್ಯಾಜಾದ್, ತನ್ನ ಅಕ್ಕನನ್ನು ಕೊಲೆಗಡುಕ ರಾಜ ಭೋಗಿಸುವುದನ್ನು ನೋಡುತ್ತಾ, ಶಾಶ್ವತ ಕೇಳುಗಳಂತೆ, ಅವಳ ಕಥೆಗಳನ್ನು ಆಲಿಸುತ್ತಿದ್ದಳು. ಇವಳು ಕೂಡ, ಕಥೆಯಲ್ಲಿ ಆಸಕ್ತಿ ಹೊಂದಿದ್ದ ರಾಜನಿಗಿಂತ, ಇನ್ನೂ ಕ್ರೂರಿಯಾಗಿದ್ದ ತಮ್ಮ ಷಾ ಜಮಾನ್ ನನ್ನು ಮದುವೆಯಾಗಲು ಯಾಕೆ ಒಪ್ಪಿಕೊಂಡಳು?

ಮಹಿಳೆಯರ ನಡೆಯನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬಹುದು? ಕಥೆಯಲ್ಲಿ ನಿಗೂಢವಾದ ಗಾಢ ಮೌನವಿದೆ, ಅದು ಏನೋ ಹೇಳಲು ಹಾತೊರೆಯುತ್ತಿದೆ. ಕಥೆಯಲ್ಲಿ ನಮಗೆ ಇಷ್ಟೇ ಮಾಹಿತಿ ನೀಡಲಾಗಿದೆ: ಕಥೆಗಳು ಮುಗಿದ ನಂತರ, ಷಾ ಜಮಾನ್ ಮತ್ತು ದುನ್ಯಾಜಾದ್ ವಿವಾಹವಾದರು. ಆದರೆ ಷೆಹೆರಾಜೇಡ್ ಒಂದು ಷರತ್ತನ್ನು ವಿಧಿಸಿದಳುಷಾ ಜಮಾನ್ ತನ್ನ ರಾಜ್ಯವನ್ನು ತೊರೆದು, ಅಣ್ಣನೊಂದಿಗೆ ವಾಸಿಸಲು ಬರಬೇಕು, ಹೀಗಾದಲ್ಲಿ, ಅಕ್ಕತಂಗಿಯರು ಒಟ್ಟಿಗೆ ವಾಸಿಸಬಹುದು. ಇದಕ್ಕೆ, ಷಾ ಜಮಾನ್ ಸಂತೋಷದಿಂದ ಒಪ್ಪಿಗೆ ನೀಡಿದ. ಶಹರ್ಯಾರ್, ತನ್ನ ತಮ್ಮನ ಸ್ಥಾನದಲ್ಲಿ ಸಮರ್ಕಂಡ್ ನ್ನು ಆಳಲು ಹುಡುಗಿಯರ ತಂದೆಯನ್ನೇ ರಾಜನನ್ನಾಗಿ ನೇಮಿಸಿದ. ಅವನು ಸಮರ್ಕಂಡ್ಗೆ ಆಗಮಿಸಿದಾಗ, ಅಲ್ಲಿನ ಪಟ್ಟಣವಾಸಿಗಳು ಬಹಳ ಸಂತೋಷದಿಂದ ಅವನನ್ನು ಸ್ವಾಗತಿಸಿದರು ಮತ್ತು ದೀರ್ಘಕಾಲ ತಮ್ಮನ್ನು ಆಳಬೇಕೆಂದು ಪ್ರಾರ್ಥಿಸಿದರು. ಅದಕ್ಕವನು ಸಮ್ಮತಿಸಿದನು ಕೂಡ.

ಇಲ್ಲಿ ನನ್ನ ಪ್ರಶ್ನೆಯೆಂದರೆ, ತಂದೆ ಮತ್ತು ಮಗಳು ಯೋಜಿತವಾಗಿ ಪಿತೂರಿ ನಡೆಸಿದರೆ? ಅಂದರೆ, ಷೆಹೆರಾಜೇಡ್ ಮತ್ತು ಪ್ರಧಾನ ಮಂತ್ರಿ ಸೇರಿಕೊಂಡು, ಸಹೋದರರನ್ನು ಮುಗಿಸಲು ರಹಸ್ಯ ಯೋಜನೆಯನ್ನು ರೂಪಿಸಿದ್ದರೆ? ನಾವು ಕಥೆಯಲ್ಲಿ ಗಮನಿಸಿದಂತೆ, ಷೆಹೆರಾಜೇಡ್ ಅವಳ ಕಾರ್ಯತಂತ್ರವು ಅತ್ಯದ್ಭುತವಾಗಿ ಕೆಲಸ ಮಾಡಿತು; ಷಾ ಜಮಾನ್ ಸಮರ್ಕಂಡ್ ರಾಜನಾಗಿ ಉಳಿಯಲಿಲ್ಲ. ಬದಲಾಗಿ, ಸ್ಥಾನಕ್ಕೆ ಅವಳ ತಂದೆಯನ್ನು ಕೂರಿಸಿದಳು. ಮೂಲಕ, ಅಲ್ಲಿಯವರೆಗೆ ರಾಜನ ಮರಣದಂಡನೆ ಆಜ್ಞೆ ಪಾಲಿಸುವ ಮಂತ್ರಿಯಾಗಿದ್ದವನು, ಸ್ವತಃ ತಾನೇ ರಾಜನಾದ. ಅದೂ ಕೂಡ, ಪ್ರಜೆಗಳ ಪ್ರೀತಿಪಾತ್ರದ ರಾಜ. ಅವನು, ಬುದ್ಧಿವಂತ ಮತ್ತು ಶಾಂತಿಪ್ರಿಯ ರಾಜನೆನಿಸಿಕೊಂಡ. ತದನಂತರ, ಅಚ್ಚರಿಯೆಂಬಂತೆ, ಶಹರ್ಯಾರ್ ಮತ್ತು ಷಾ ಜಮಾನ್ ಇಬ್ಬರಿಗೂ ಏಕಕಾಲದಲ್ಲಿ ಸಾವು ಬಂತು. ಕಥೆಯಲ್ಲಿ ಸಾವನ್ನು, `ಸಂತೋಷ ನಾಶಮಾಡುವವನು, ಸಮಾಜ ಮತ್ತು ವಾಸಸ್ಥಳಗಳನ್ನು ನಿರ್ಜನಗೊಳಿಸುವವನು ಮತ್ತು ಸ್ಮಶಾನಗಳ ಅಧಿಪತಿಎಂದು ಬಣ್ಣಿಸಲಾಗಿದೆ. ಅಂತೂ, ಅವರ ಆಕಸ್ಮಿಕ ಸಾವಿನ ನಂತರ, ಅವರ ಅರಮನೆ ಹಾಳು ಬಿದ್ದಿತು ಮತ್ತು ರಾಜ್ಯವನ್ನು ಒಬ್ಬ ಬುದ್ಧಿವಂತ ಆಡಳಿತಗಾರ ವಶಪಡಿಸಿಕೊಂಡ ಎಂದಷ್ಟೇ ಮಾಹಿತಿ ಸಿಗುತ್ತದೆ. ಆದರೆ, ಅವನ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ.

ಆದರೆ, ಸಾವು ಹೇಗೆ ಮತ್ತು ಏಕೆ ಬಂದಿರಬಹುದು? ಕಥೆಯಲ್ಲಿ ಸ್ಪಷ್ಟವಾಗಿ ಸೂಚಿಸಿರುವಂತೆ, ಇಬ್ಬರು ಸಹೋದರರು ಏಕಕಾಲದಲ್ಲಿ ಮರಣಹೊಂದಿದರು ಮತ್ತು ಅವರ ಅರಮನೆಗಳು ನಾಶಹೊಂದಿದವು. ಇಲ್ಲಿ ಹೆಸರಿಸದ, ಅವರ ಉತ್ತರಾಧಿಕಾರಿ, ಬುದ್ಧಿವಂತ ರಾಜ ಯಾರಿರಬಹುದು?

ನಮಗೆ ಕುರಿತ ವಿವರಗಳು ಲಭ್ಯವಿಲ್ಲ. ಆದರೆ, ರಾಜಾಜ್ಞೆಯಂತೆ ಅನೇಕ ವರ್ಷಗಳ ಕಾಲ ಮುಗ್ಧ ಹೆಣ್ಣುಮಕ್ಕಳನ್ನು ತನ್ನ ಕೈಯಾರೆ ಬಲವಂತವಾಗಿ ಸಾಯಿಸಿದ ಪ್ರಧಾನ ಮಂತ್ರಿಯ ಅದುಮಿಟ್ಟ ಕ್ರೋಧವನ್ನು ಒಮ್ಮೆ ಊಹಿಸಿಕೊಳ್ಳೋಣ. ಜೊತೆಗೆ, ಅವನು ಭಯದಲ್ಲಿ ಕಳೆದ ಸಾವಿರದ ಒಂದು ರಾತ್ರಿಗಳನ್ನು ಊಹಿಸಿಕೊಳ್ಳೋಣ. ಸಮಯದಲ್ಲಿ, ಅವನ ರಕ್ತ ಹಂಚಿಕೊಂಡ ಹೆಣ್ಣುಮಕ್ಕಳು, ಶಹರ್ಯಾರ್ ಶಯನಗೃಹದಲ್ಲಿ, ತಮ್ಮ ಭವಿಷ್ಯದ ಅನಿಶ್ಚತತೆಯ ನಡುವೆ ಉಸಿರಾಡುತ್ತಿದ್ದರು.

ಸಾಮಾನ್ಯವಾಗಿ, ಒಬ್ಬ ಮನುಷ್ಯ ತನ್ನ ಸೇಡನ್ನು ತೀರಿಸಿಕೊಳ್ಳಲು ಎಷ್ಟು ಸಮಯ ಕಾಯಬಹುದು? ಸಾವಿರದ ಒಂದು ರಾತ್ರಿಗಳಿಗಿಂತ ಹೆಚ್ಚು ಸಮಯ ಕಾಯಬಹುದೇ? ನನ್ನ ಸಿದ್ಧಾಂತವೆಂದರೆ, ಈಗ ಸಮರ್ಕಂಡ್ ರಾಜನಾದ ಪ್ರಧಾನ ಮಂತ್ರಿಯೇ, ಶಹರ್ಯಾರ್ ಮರಣಾನಂತರ ರಾಜ್ಯವನ್ನು ಆಳಲು ಬಂದ ಬುದ್ಧಿವಂತ ರಾಜ. ಬಹುಶಃ, ಇಬ್ಬರು ರಾಜರು ಕೂಡ ಏಕಕಾಲದಲ್ಲಿ ತಮ್ಮ ಹೆಂಡತಿಯರ ಅಥವಾ ಪ್ರಧಾನ ಮಂತ್ರಿಯ ಕೈಯಲ್ಲಿ ಸತ್ತಿರಬಹುದು. ಇದು ಕೇವಲ ನನ್ನ ಒಂದು ಸಿದ್ಧಾಂತವಷ್ಟೇ. ಬಹುಶಃ, ಇದಕ್ಕೆ ಸ್ಪಷ್ಟ ಉತ್ತರ, ಕಳೆದುಹೋಗಿರುವ ದೊಡ್ಡ ಪುಸ್ತಕದಲ್ಲಿರಬಹುದು. ಅಥವಾ, ಅಲ್ಲಿರದಿರಲೂ ಬಹುದು. ಆದರೆ, ನನ್ನನ್ನು ಕಾಡುವ ಪ್ರಶ್ನೆಯಂತೂ, ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಏನೇ ಆದರೂ, ಅಂತಿಮವಾಗಿ ಸತ್ತವರು ಮೂರು ಸಾವಿರದ ಇನ್ನೂರ ಹದಿನಾರು. ಅವರಲ್ಲಿ, ಹದಿಮೂರು ಮಂದಿ ಪುರುಷರು.

ಹೀಗೆ, ಆರಂಭದಲ್ಲಿ ನನಗೆ ಸಾಹಿತ್ಯವನ್ನು ಪ್ರೀತಿಸುವಂತೆ ಮಾಡಿದ ಕಥೆಗಳು, ಮನಮೋಹಕ, ಆದರೆ ಕಲ್ಪನೆಯ ಎಲ್ಲೆ ಮೀರಿದ ಕಥೆಗಳು. ಅವು ನಿಜವಲ್ಲವೆಂದು ಅರಿವಿದ್ದರೂ ಸತ್ಯವನ್ನು ಹೇಳಿದ್ದವು ಮತ್ತು ನಿಜವೆಂದು ನಂಬುವ ಕಥೆಗಳಿಗಿಂತ ಹೆಚ್ಚು ಸುಂದರ ಹಾಗೂ ಸ್ಮರಣೀಯವಾಗಿದ್ದವು. ಕಥೆಗಳು ಯಾವುದೋ ಒಂದು ಕಾಲಘಟ್ಟದಲ್ಲಿ ಮಾತ್ರ ಸಂಭವಿಸಬೇಕಾಗಿಲ್ಲ. ಬದಲಾಗಿ, ವರ್ತಮಾನದಲ್ಲಿಯೂ ಸಂಭವಿಸಬಹುದು. ನಿನ್ನೆ, ಇಂದು ಅಥವಾ ನಾಳೆಯೂ ಕೂಡ.

ಪೂರ್ವದ ದೇಶಗಳಲ್ಲಿ, ಪ್ರಾಣಿಗಳ ನೀತಿಕಥೆಗಳು, ವಿಶೇಷವಾಗಿ, ಮಾತನಾಡುವ ಮೀನುಗಳ ನೀತಿಕಥೆಗಳನ್ನೂ ಒಳಗೊಂಡಂತೆ, ಅತ್ಯಂತ ಮನೋಜ್ಞ ಕಥೆಗಳಿವೆ. ಅವುಗಳಲ್ಲಿ ಶ್ರೇಷ್ಠವಾದವುಗಳು, ಈಸೋಪನ ನೀತಿಕಥೆಗಳಿಗಿಂತಲೂ ಭಿನ್ನವಾದ ನೈತಿಕತೆಯನ್ನು ಪ್ರತಿಪಾದಿಸುತ್ತವೆ. ಅಂದರೆ, ಅವುಗಳು ಸಾಮಾನ್ಯವಾಗಿ ನಮ್ರತೆ, ಸರಳತೆ, ಪ್ರಾಮಾಣಿಕತೆ ಅಥವಾ ಇಂದ್ರಿಯನಿಗ್ರಹದ ಬಗ್ಗೆ ಬೋಧಿಸಲು ಪ್ರಯತ್ನಿಸುವುದಿಲ್ಲ. ಅಥವಾ, ಸದ್ಗುಣದ ವಿಜಯವನ್ನು ಖಾತರಿಪಡಿಸುವುದಿಲ್ಲ. ಕೆಲವೊಮ್ಮೆ, ಕಥೆಗಳಲ್ಲಿ ಕೆಟ್ಟ ಜನರು ಗೆಲ್ಲುತ್ತಾರೆ ಕೂಡ. ಹಾಗಾಗಿ, ಅವು ಆಧುನಿಕ ಲೋಕಕ್ಕೆ ಹೆಚ್ಚು ಅನ್ವಯಿಸುತ್ತದೆ.

ಭಾರತದಲ್ಲಿ `ಪಂಚತಂತ್ರವೆಂದು ಕರೆಯಲ್ಪಡುವ ಪ್ರಾಚೀನ ಕಥಾಸಂಗ್ರಹದಲ್ಲಿ, ಮಾತನಾಡುವ ಒಂದು ಜೋಡಿ ನರಿಗಳಿವೆ: ಕರಟಕ, ಒಳ್ಳೆಯ ನರಿ ಮತ್ತು ದಮನಕ, ದುಷ್ಟ ನರಿ. ಕಥಾ ಸರಣಿಯ ಆರಂಭದಲ್ಲಿ ಅವರು ಸಿಂಹ ರಾಜನ ಸೇವೆಯಲ್ಲಿರುತ್ತಾರೆ, ಆದರೆ, ಸಿಂಹವು ತನ್ನ ಆಸ್ಥಾನದಲ್ಲಿದ್ದ ಗೂಳಿಯ ಜೊತೆ ಸ್ನೇಹ ಬೆಳೆಸಿದ್ದು, ದಮನಕನಿಗೆ ಇಷ್ಟವಾಗುವುದಿಲ್ಲ. ಹಾಗಾಗಿ, ಗೂಳಿಯನ್ನು ಸಿಂಹದ ಶತ್ರುವೆಂದು ಯಶಸ್ವಿಯಾಗಿ ಬಿಂಬಿಸಿ, ದಮನಕ ಮೋಸ ಮಾಡುತ್ತಾನೆ. ಪರಿಣಾಮವಾಗಿ, ನರಿಗಳು ನೋಡುತ್ತಿದ್ದಂತೆಯೇ, ಸಿಂಹವು ಮುಗ್ಧ ಗೂಳಿಯನ್ನು ಕೊಲ್ಲುತ್ತದೆ. ಇದು ಕಥೆಯ ಅಂತ್ಯ.

ಹಾಗೆಯೇ, ವೇಗವಾಗಿ ಓಡಬಲ್ಲ ಸೊಕ್ಕಿನ ಮೊಲದ ವಿರುದ್ಧ ನಿಧಾನಗತಿ ಚಲನೆಯ ಆಮೆ ವಿಜಯ ಸಾಧಿಸಿದ ಕಥೆ ಅಥವಾ ತೋಳ ಬಂತುಎಂದು ಸುಳ್ಳು ಹೇಳಿದ ಹುಡುಗನಿಗೆ, ನಿಜವಾಗಿ ತೋಳಬಂದಾಗ, ಯಾರೂ ಸಹಾಯಕ್ಕೆ ಬಾರದ ಕಥೆ ಅಥವಾ ಚಿನ್ನದ ಮೊಟ್ಟೆಗಳನ್ನು ಇಡುತ್ತಿದ್ದ ಬಾತುಕೋಳಿಯನ್ನು ದುರಾಸೆಯಿಂದ ಕೊಂದ ಕಥೆ, ಹೀಗೆ ಈಸೋಪನ ಅನೇಕ ಕಥೆಗಳು ನೈತಿಕತೆಯನ್ನು ತೆರೆದಿಡುತ್ತವೆ. ಕಥೆಗಳನ್ನು, `ಕ್ವೆಂಟಿನ್‘, `ಟ್ಯಾರಂಟಿನೊತರಹದ ಬರ್ಬರ ಕಥೆಗಳಿಗೆ ಹೋಲಿಸಿದರೆ, ಧನಾತ್ಮಕ ಹಾಗು ಶಾಂತಿ ಮಂತ್ರ

ಹೇಳುವಂತಿವೆ.

ನಾನೊಬ್ಬ ವಲಸಿಗನಾಗಿ, ಕಥೆಗಳ ವಲಸೆಯ ಕುರಿತು ಯಾವಾಗಲೂ ಆಕರ್ಷಿತನಾಗಿದ್ದೇನೆ. ಭಾರತದ ನರಿಗಳ ಕಥೆ ಅರೇಬಿಯನ್ ನೈಟ್ಸ್ನಿರೂಪಣೆಯಲ್ಲಿ ಸ್ಥಾನ ಪಡೆದು, ಆಮೇಲೆ ಅರೇಬಿಕ್ ಮತ್ತು ಪರ್ಷಿಯನ್ ಎರಡೂ ಭಾಷಾ ಆವೃತ್ತಿಗಳಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ನರಿಗಳ ಹೆಸರುಗಳು ಕಲಿಲಾ ಮತ್ತು ಡಿಮ್ನಾ ಎಂದು ರೂಪಾಂತರಗೊಂಡಿದೆ. ಅವುಗಳ ವಲಸೆ ಮುಂದುವರಿದು, ಅವೆರಡೂ ನರಿಗಳು ಹೀಬ್ರೂ ಮತ್ತು ಲ್ಯಾಟಿನ್ ಭಾಷೆಗಳಲ್ಲಿಯೂ, ಹಾಗೆಯೇ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ದಿ ಫೇಬಲ್ಸ್ ಆಫ್ ಬಿಡ್ ಪೈನಲ್ಲಿ ಕಾಣಿಸಿಕೊಂಡರು. ಆದಾಗ್ಯೂ, “ಅರೇಬಿಯನ್ ನೈಟ್ಸ್ಕಥೆಗಳಂತೆ ಜನಪ್ರಿಯವಾಗದೆ, ನರಿಗಳ ಕಥೆ ಆಧುನಿಕ ಕಾಲಘಟ್ಟದ ಓದುಗರ ಪ್ರಜ್ಞೆಯಿಂದ ಸಂಪೂರ್ಣವಾಗಿ ಮರೆಯಾಯಿತು. ಬಹುಶಃ, ಕಥೆಗಳು ಸಂತೋಷದ ಅಂತ್ಯಕ್ಕೆ, ಹೆಚ್ಚು ಗಮನ ಹರಿಸದಿರುವುದು ಕೂಡ, ವಾಲ್ಟ್ ಡಿಸ್ನಿ ಕಂಪನಿಗೆ ಇವುಗಳನ್ನು ತೆರೆಯ ಮೇಲೆ ತರಲು ಆಕರ್ಷಣೀಯವೆನಿಸಿಲ್ಲದಿರಬಹುದು.

ಆದರೂ, ಕಥೆಗಳ ಪ್ರಭಾವ ಮಾತ್ರ ಹಾಗೆಯೇ ಉಳಿದಿದೆ. ಏಕೆಂದರೆ, ಅಲ್ಲಿರುವ ರಾಕ್ಷಸರು ಮತ್ತು ಮಾಯೆಗಳು ಮಾನವ ಸ್ವಭಾವದ ಬಗ್ಗೆ ಸಂಪೂರ್ಣ ಸತ್ಯವನ್ನು ಹೇಳುತ್ತವೆ (ಪ್ರಾಣಿಗಳ ಪ್ರತಿಮೆಯಲ್ಲಿದ್ದರೂ ಸಹ). ಕಥೆಗಳಲ್ಲಿ, ಎಲ್ಲಾ ಮಾನವ ಸಹಜ ಸ್ವಭಾವಗಳಾದ, ಧೈರ್ಯ, ಹೇಡಿತನ, ಸ್ವಾಭಿಮಾನ, ಅಪ್ರಾಮಾಣಿಕತೆ, ಇತ್ಯಾದಿಗಳನ್ನು ಕಾಣಬಹುದಾಗಿದೆ. ಹೀಗೆ, ನಮಗೆ ನೇರವಾಗಿ ಮುಖಾಮುಖಿಯಾಗುವ ಮತ್ತು ಪ್ರಚೋದಿಸುವ ಕಥೆಗಳು, ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತವೆ ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಸಂಭವಿಸುವ ಅಸಾಧಾರಣ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ?

ಸಾಮಾನ್ಯವಾಗಿ, ಜನರು ಮೇಲಿನ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ: ಕೆಲವೊಮ್ಮೆ ನಾವು ಅಷ್ಟು ಸಮರ್ಪಕವಾಗಿ ಸ್ಪಂದಿಸುವುದಿಲ್ಲ, ಕೆಲವೊಮ್ಮೆ ಸಂಭಾಳಿಸಿಕೊಳ್ಳಲು ಸೂಕ್ತ ಪರಿಕರಗಳನ್ನು ಹುಡುಕುತ್ತೇವೆ, ಇತರ ಸಂದರ್ಭಗಳಲ್ಲಿ, ನಮ್ಮ ಅರಿವಿಲ್ಲದೆಯೇ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಕಂಡುಕೊಳ್ಳುತ್ತೇವೆ ಹಾಗೂ ಸವಾಲನ್ನು ಜಯಿಸುತ್ತೇವೆ. ಅದು ಹೇಗೆಂದರೆ, ಬಿಯೋವುಲ್ಫ್, ಕ್ರೂರ ಸ್ವಭಾವದ ಗ್ರೆಂಡೆಲ್ ಮತ್ತು ಅವನ ತಾಯಿಯನ್ನು ಕೊಂದ ಹಾಗೆ. ಅಥವಾ, ರೆಡ್ ರೈಡಿಂಗ್ ಹುಡ್, ತೋಳವನ್ನು ಕೊಂದಂತೆ. ಅಥವಾ, ಸುಂದರಿಯೊಬ್ಬಳು ಕ್ರೂರ ಪುರುಷನ ಹೃದಯದೊಳಗೆ ಹೊಕ್ಕು ಅಲ್ಲಿ ಪ್ರೀತಿಯನ್ನು ಕಂಡುಕೊಂಡು ಅವನನ್ನು ಮನುಷ್ಯನನ್ನಾಗಿ ಮಾಡುವ ಹಾಗೆ. ಅದೊಂದು ಮಾನವ ಜಾದು. ಅದೇ, ಅದ್ಭುತ ಕಥೆಗಳ ನಿಜವಾದ ಮ್ಯಾಜಿಕ್.

ಹೀಗೆ, ಕಥೆಗಳು, ಕಥೆ ಹೇಳುವ ವಿಭಿನ್ನ ವಿಧಾನಗಳನ್ನು ಪರಿಚಯಿಸುತ್ತವೆ. ಜೊತೆಗೆ, ಕಥೆಗಳ ಸಾಧ್ಯತೆಗಳೂ ಕೂಡ ಅನಂತ ಮತ್ತು ಆನಂದದಾಯಕ ಎನ್ನುವ ಅರಿವನ್ನು ಅದ್ಭುತ ಕಥೆಗಳು ನನಗೆ ಕಲಿಸಿದವು. ವಿಸ್ಮಯ ಹುಟ್ಟಿಸುವ ಕಥಾ ನಿರೂಪಣೆ, ನೈಜತೆಗೆ ಹೊಸ ಆಯಾಮಗಳನ್ನು ಸೇರಿಸುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ ಪ್ರಚಲಿತವಿರುವ ಮೂರನೇ ಆಯಾಮದ ಜೊತೆಗೆ ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಆಯಾಮಗಳನ್ನು ಇದು ಸೇರಿಸುತ್ತದೆ. ಸೂಪರ್ ಹೀರೋ ಮತ್ತು ರಕ್ತಪಿಶಾಚಿ ಮಾಯಾ ಲೋಕಕ್ಕೆ ಹೋಗಿ ದಾರಿ ತಪ್ಪಿಸಿಕೊಳ್ಳುವ ಬದಲು, ಕಥೆಗಳು ಪ್ರದರ್ಶಿಸುವ ನೈಜತೆಯು ನಮ್ಮ ಅನುಭವವನ್ನು ಉತ್ಕೃಷ್ಟಗೊಳಿಸುವ ಮತ್ತು ತೀವ್ರಗೊಳಿಸುವ ಒಂದು ಮಾರ್ಗವಾಗಿದೆ.

ಕಲ್ಪನೆಯಲ್ಲಿ ಹುದುಗಿರುವ ಕಾಲ್ಪನಿಕತೆ, ಕನಸಿನಲ್ಲಿ ಗುನುಗುನಿಸುವ ಹಾಡು, ಇತ್ಯಾದಿಗಳನ್ನು ಬಿಚ್ಚಿಡುವುದರ ಮೂಲಕ ಮಾತ್ರ, ನಾವು ಹೊಸದನ್ನು ಕಟ್ಟಬಹುದು ಮತ್ತು ಕಾದಂಬರಿಗಳನ್ನು ರಚಿಸಬಹುದು. ಅದು ವಾಸ್ತವಕ್ಕಿಂತ ಹೆಚ್ಚು ಆಸಕ್ತಿಕರವಾಗಿರುತ್ತದೆ.

ವಿಸ್ಮಯ ಕಥಾ ಮಾಲಿಕೆಯು, ಮುಗ್ಧತೆ ಅಥವಾ ಪಲಾಯನವಾದವನ್ನು ಪ್ರತಿನಿಧಿಸುವುದಿಲ್ಲ. ಅಥವಾ, ಮಾಯಾಲೋಕ ನಿರಾಶ್ರಿತರ ಆಶ್ರಯ ತಾಣವಲ್ಲ. ಅಥವಾ ಅತ್ಯಾಕರ್ಷಕ ಮತ್ತು ಇಷ್ಟವಾಗುವ ನೆಲೆಯೂ ಅಲ್ಲ. ಕೆಲವೊಮ್ಮೆ ಆಗಿರಲೂ ಬಹುದು. ಆದರೆ, ವಾಸ್ತವವಾಗಿ, ಇದೊಂದು ವಧೆ, ಶೋಷಣೆ, ಕ್ರೌರ್ಯ ಮತ್ತು ಭಯ ಹುಟ್ಟಿಸುವ ಜಾಗ. ಇದಕ್ಕೆ ಕೆಲವು ಪೂರಕ ಉದಾಹರಣೆಗಳೆಂದರೆ; ಕ್ಯಾಪ್ಟನ್ ಹುಕ್, ಪೀಟರ್ ಪ್ಯಾನ್ ನನ್ನು ಕೊಲ್ಲಲು ಬಯಸುತ್ತಾನೆ, ದಟ್ಟ ಅರಣ್ಯದಲ್ಲಿರುವ ಮಾಟಗಾತಿ, ಹ್ಯಾನ್ಸೆಲ್ ಮತ್ತು ಗ್ರೆಟೆಲ್ ರನ್ನು ಬೇಯಿಸಿ ತಿನ್ನಲು ಬಯಸುತ್ತಾಳೆ, ತೋಳವು, ರೆಡ್ ರೈಡಿಂಗ್ ಹುಡ್ ಅಜ್ಜಿಯನ್ನು ತಿನ್ನುತ್ತದೆ, ಆಲ್ಬಸ್ ಡಂಬಲ್ಡೋರ್ನ್ ನನ್ನು ಕೊಲ್ಲಲಾಗುತ್ತದೆ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ಭೂಮಿಯ ಕೇಂದ್ರ ಭಾಗದ ಹತೋಟಿಯನ್ನು ಆಯೋಜಿಸುತ್ತದೆ.

ಕಥೆಗಳನ್ನು ನಾವು ಕೇಳುವಾಗ, ಅವುಗಳು ಅವಾಸ್ತವಿಕವೆನ್ನುವ ಪ್ರಜ್ಞೆ ಎಚ್ಚರವಾಗಿರುತ್ತವೆ. ಯಾಕೆಂದರೆ, ರತ್ನಗಂಬಳಿಗಳು ಹಾರಾಡುವುದಿಲ್ಲ ಮತ್ತು ಮಿಠಾಯಿ ಮನೆಗಳಲ್ಲಿ ಮಾಟಗಾತಿಯರು ವಾಸವಾಗಿರುವುದಿಲ್ಲ. ಆದರೂ ಕೂಡ ಅವುಗಳು ನೈಜವಾಗಿರುತ್ತವೆ, ಏಕೆಂದರೆ ಅವು ಮನುಷ್ಯ ಸಹಜ ಸ್ವಭಾವಗಳಾದ, ಪ್ರೀತಿ, ದ್ವೇಷ, ಭಯ, ಶಕ್ತಿ, ಧೈರ್ಯ, ಹೇಡಿತನ, ಸಾವು, ಇತ್ಯಾದಿಗಳ ಕುರಿತು ಚರ್ಚಿಸುತ್ತವೆ. ಹೀಗೆ, ಅವುಗಳು ತಮ್ಮದೇ ಮಾರ್ಗದ ಮೂಲಕ ನೈಜತೆಯನ್ನು ತಲುಪುತ್ತವೆ. ಸಾಮಾನ್ಯವಾಗಿ, ನಮಗೆ ಸತ್ಯವನ್ನು ಸಂಪೂರ್ಣವಾಗಿ ನೇರ ಮಾರ್ಗಗಳಿಂದ ತಲುಪಲು ಸಾಧ್ಯವಿಲ್ಲ. ಕೆಲವೊಮ್ಮೆ, ಚಿತ್ರವನ್ನು ಕ್ಯಾಮೆರಾ ಅಥವಾ ಪೇಂಟ್ಬ್ರಷ್ನಿಂದಲೂ ಸೆರೆಹಿಡಿಯಬಹುದು. ನಕ್ಷತ್ರಗಳ ರಾತ್ರಿಯ ಚಿತ್ರಕಲೆಯೊಂದು, ಛಾಯಾಚಿತ್ರಕ್ಕಿಂತ ಕಡಿಮೆ ಸತ್ಯವೇನಲ್ಲ. ಉದಾಹರಣೆಗೆ, ಒಂದುವೇಳೆ ಚಿತ್ರವು, ವರ್ಣಚಿತ್ರಕಾರ ವ್ಯಾನ್ ಗಾಗ್ ರಚಿಸಿದ್ದಾಗಿದ್ದರೆ, ಅದು ಅವಾಸ್ತವಿಕವಾಗಿ ಕಂಡರೂ ಸಹ, ಸತ್ಯಕ್ಕೆ ಹತ್ತಿರವಾಗಿರುತ್ತದೆ.

ಯಾವುದೇ ಒಂದು ಅದ್ಭುತವಾದ ಸಾಹಿತ್ಯ, ನೀತಿಕಥೆ, ಜಾನಪದ ಕಥೆ, ಮಾಂತ್ರಿಕ ವಾಸ್ತವತಾವಾದದ ನೆಲೆಯ ಕಾದಂಬರಿ, ಇತ್ಯಾದಿ ಸಾಹಿತ್ಯ ಪ್ರಕಾರಗಳು ಯಾವಾಗಲೂ ಮನುಷ್ಯ ಜೀವನದ ಆಳವಾದ ಸತ್ಯಗಳನ್ನು, ಅವುಗಳ ಅತ್ಯುತ್ತಮ ಗುಣಲಕ್ಷಣಗಳನ್ನು ಮತ್ತು ಸಂಬಂಧಿತ ಪೂರ್ವಾಗ್ರಹಗಳನ್ನು ಮುನ್ನೆಲೆಗೆ ತರುತ್ತವೆ. ಕೆಲವೊಮ್ಮೆ, ವಿಸ್ಮಯ ಹುಟ್ಟಿಸುವ ಕಥೆಗಳು, ಮನುಷ್ಯನ ಕುರಿತಾದ ಅಪ್ರಿಯ ಸತ್ಯವನ್ನು ಹೇಳುತ್ತವೆ, ಧರ್ಮಾಂಧತೆಯನ್ನು ತೆರೆದಿಡುತ್ತವೆ, ಕಾಮಾಸಕ್ತಿಯನ್ನು ಪರಿಶೋಧಿಸುತ್ತವೆ ಹಾಗೂ ನಮ್ಮ ಹೃದಯದಾಳದ ಭಯಗಳನ್ನು ಬೆಳಕಿಗೆ ತರುತ್ತವೆ. ಮೂಲತಃ, ಇಂತಹ ಕಥೆಗಳನ್ನು ಕೇವಲ ಮಕ್ಕಳ ಮನೋರಂಜನೆಗಾಗಿ ಬರೆದಿರಲಿಲ್ಲವೆನಿಸುತ್ತದೆ. ಉದಾಹರಣೆಗೆ, ನಾವಿಕ ಸಿನ್ಬಾದ್ ಮತ್ತು ಅಲ್ಲಾದೀನ್, ತಮ್ಮ ಕಥಾ ಪಯಣವನ್ನು ಆರಂಭಿಸಿದಾಗ ಡಿಸ್ನಿ ಲೋಕದ ಪಾತ್ರಧಾರಿಗಳಾಗಿರಲಿಲ್ಲ.

ಆದಾಗ್ಯೂ, ಪ್ರಸಕ್ತ ಕಾಲಘಟ್ಟವನ್ನು, ಸಾಹಿತ್ಯಾಸಕ್ತ ಮಕ್ಕಳು ಮತ್ತು ಯುವ ಹೃದಯದ ವಯಸ್ಕರ ದೃಷ್ಟಿಯಿಂದ ನೋಡಿದರೆ, ಒಂದು ಶ್ರೀಮಂತ ಯುಗವೆನ್ನಬಹುದು. ಉದಾಹರಣೆಗೆ, ಮಾರಿಸ್ ಸೆಂಡಾಕ್ ವೇರ್ ದಿ ವೈಲ್ಡ್ ಥಿಂಗ್ಸ್ ಆರ್ನಿಂದ ಆರಂಭಿಸಿ, ನಾವು ವಿಶಿಷ್ಟ ವೇಷ ಭೂಷಣಗಳೊಂದಿಗೆ ತಲುಪಬಹುದಾದ ಫಿಲಿಪ್ ಪುಲ್ಮನ್ ನಾರ್ನಿಯಾ ಧಾರ್ಮಿಕ ಪಾರಮಾರ್ಥಿಕ ಪ್ರಪಂಚ, ಅಥವಾ ಫ್ಯಾಂಟಮ್ ಸುಂಕದ ಕಟ್ಟೆಯ ಮೂಲಕ ಪಯಣಿಸಬಹುದಾದ ಬೆರಗಿನ ಪ್ರಪಂಚ, ಒಟ್ಟಿನಲ್ಲಿ, ಹೊಗ್ವಾಟ್ರ್ಸ್ ನಿಂದ ಆರಂಭಿಸಿ ಭೂಮಿಯ ಕೇಂದ್ರ ಭಾಗದವರೆಗೆ. ಹೀಗೆ, ಕಥೆಗಳ ಮಾಯಾ ಲೋಕ ಇನ್ನೂ ಜೀವಂತವಾಗಿದೆ.

ಇಲ್ಲಿ, ಮಕ್ಕಳು ತಮ್ಮ ಅಮೋಘ ಸಾಹಸ ಕೃತ್ಯಗಳ ಮೂಲಕ ವಯಸ್ಕರ ಜಗತ್ತನ್ನು ರಕ್ಷಿಸಲು ತ್ರಿವಿಕ್ರಮರಾಗುತ್ತಾರೆ. ರೀತಿಯಲ್ಲಿ, ಅದ್ಭುತ ಕಥಾ ಲೋಕದ ಮಕ್ಕಳು, ಅಂದರೆ, ನಾವು ಬಾಲ್ಯದಲ್ಲಾಗಿದ್ದ ಮಕ್ಕಳು, ಇನ್ನೂ ನಮ್ಮೊಳಗೆ ಉಳಿದುಕೊಂಡಿರುವ ಮಕ್ಕಳು, ಮಾಯಾ ಜಗತ್ತನ್ನು ಅರ್ಥಮಾಡಿಕೊಳ್ಳಬಲ್ಲ ಹಾಗು ಕಥೆಗಳ ಸತ್ಯಾಸತ್ಯತೆಯನ್ನು ಅರಿತಿರುವ ಮಕ್ಕಳು, ಸತ್ಯಗಳನ್ನು ಬಹುತೇಕ ಮರೆತು ಹೋಗಿರುವ ವಯಸ್ಕರನ್ನು ಕಾಲಕಾಲಕ್ಕೆ ಎಚ್ಚರಿಸುತ್ತಿರುತ್ತಾರೆ.

ಕೃಪೆ: ದಿ ನ್ಯೂಯಾರ್ಕ್ ಟೈಮ್ಸ್

Leave a Reply

Your email address will not be published.