ನುಗಡೋಣಿಯವರ ‘ಗೌರಿಯರು’ ಹೆಣ್ಣು ನೋಟದ ದಿಟ್ಟ ಕಥನ

ಸುಭಾಷ್ ರಾಜಮಾನೆ

ಕನ್ನಡದ ಮಹತ್ವದ ಸಣ್ಣ ಕತೆಗಾರರಾಗಿರುವ ನುಗಡೋಣಿಯರ ಕಾದಂಬರಿ ಎಂದಾಗ ಸಹಜವಾಗಿಯೇ ಓದುಗರಲ್ಲಿ ದೊಡ್ಡ ನಿರೀಕ್ಷೆಗಳಿರುತ್ತವೆ. ಸದರಿ ಕಾದಂಬರಿಯು ಮಹತ್ವಾಕಾಂಕ್ಷೆಯ ವಸ್ತುವನ್ನು ಹೊಂದಿದೆ; ಆದರೆ ಮತ್ತಷ್ಟು ಕಲಾತ್ಮಕತೆಯ ಹೊಳಪನ್ನು ಪಡೆಯಲು ಸಾಧ್ಯವಾಗಿದ್ದರೆ ಕೃತಿಯ ಗುಣಮಟ್ಟ ಇನ್ನಷ್ಟು ಎತ್ತರದಲ್ಲಿರುತ್ತಿತ್ತು.

ಗೌರಿಯರು

ಅಮರೇಶ ನುಗಡೋಣಿ

ವರ್ಷ: 2021 ಪುಟ: 176

ಬೆಲೆ: ರೂ.160

ಪ್ರಕಟನೆ: ಪಲ್ಲವ ಪ್ರಕಾಶನ, ಚನ್ನಪಟ್ಟಣ

ಸಂಪರ್ಕ: 94803 53507

ಕನ್ನಡದ ಹೆಸರಾಂತ ಸಣ್ಣ ಕತೆಗಾರರಾದ ಅಮರೇಶ ನುಗಡೋಣಿ ಅವರ ಹೊಸ ಕಾದಂಬರಿಗೌರಿಯರುಈಚೆಗಷ್ಟೇ ಪ್ರಕಟವಾಗಿದೆ. ಇದರ ಶಿರೋನಾಮೆಯೇ ಹೇಳುವಂತೆ ಸ್ತ್ರೀಸಂವೇದನೆಯನ್ನು ಕೇಂದ್ರ ಸ್ಥಾಯಿಯನ್ನಾಗಿ ರೂಪಿಸಿಕೊಂಡಿದೆ. ಕಾದಂಬರಿಯು ಪ್ರಧಾನವಾಗಿ ಗಂಡುಹೆಣ್ಣಿನ ದಾಂಪತ್ಯದ ಬಿರುಕುಗಳನ್ನು ಚಿತ್ರಿಸಿದೆ; ಹೆಣ್ಣು ಪಾತ್ರಗಳಿಂದ ದಾಂಪತ್ಯದ ವಿರಸವನ್ನು ವಿವಿಧ ನೆಲೆಗಳಲ್ಲಿ ಮುಖಾಮುಖಿಯಾಗಿದೆ. ಇದರ ಜೊತೆಯಲ್ಲಿ ಹಲವು ಕತೆಗಳು ಕೂಡ ಸೇರಿಕೊಂಡಿವೆ. ಕಾದಂಬರಿಯ ಕನ್ನಡಿಯಲ್ಲಿ ನಮ್ಮದೇ ಕಾಲಘಟ್ಟದ ಪರಿವರ್ತನಶೀಲ ಪಾತ್ರಗಳನ್ನು ನೋಡಬಹುದಾಗಿದೆ.

ಅಮರೇಶ ನುಗಡೋಣಿಯವರು ಕನ್ನಡದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತ ಬಂದಿದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ಹಲವು ಮಹತ್ವಪೂರ್ಣ ಕತೆಗಳನ್ನು ಕೊಟ್ಟಿದ್ದಾರೆ. ಅವರ ಕತೆಗಳು ಕಾದಂಬರಿಯಂತಿವೆ ಎಂದು ಹೇಳಿದ ವಿಮರ್ಶಕರೊಬ್ಬರ ಮಾತನ್ನು ನೆಚ್ಚಿಕೊಂಡು ಕಾದಂಬರಿಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದನ್ನು ಹೇಳಿಕೊಂಡಿದ್ದಾರೆ. ಕಳೆದ ವರ್ಷವಷ್ಟೇದಂದುಗಪ್ರಕಟಿಸುವುದರ ಮೂಲಕ ನುಗಡೋಣಿಯವರು ಕಾದಂಬರಿ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈಗಗೌರಿಯರುಕೃತಿಯಲ್ಲಿ ಕಾದಂಬರಿಯ ವಸ್ತು ಮತ್ತು ವಿನ್ಯಾಸವನ್ನು ಕಂಡುಕೊಳ್ಳುವ ಹುಡುಕಾಟದಲ್ಲಿದ್ದಾರೆ. ಸಣ್ಣ ಕತೆಗಳಿಂದ ಬಿಡಿಸಿಕೊಂಡು ಬದುಕಿನ ವಿಸ್ತಾರತೆ ಹಾಗೂ ಸಂಕೀರ್ಣತೆಯನ್ನು ಶೋಧಿಸಲು ಅವಕಾಶವಿರುವ ಕಾದಂಬರಿ ಪ್ರಕಾರದಲ್ಲಿ ಅವರು ಪ್ರಯತ್ನಿಸುತ್ತಿರುವಂತಿದೆ.

ವಾಸ್ತವವಾದಿ ಕಾದಂಬರಿಯಲ್ಲಿ ಕಾಲ ಹಾಗೂ ದೇಶಕ್ಕೆ ಸಂಬಂಧಿಸಿದಂತೆ ಕತೆಯನ್ನು ನಿರೂಪಿಸುವುದಕ್ಕೆ ಹಲವು ಬಗೆಯ ದಾರಿಗಳಿರುತ್ತವೆ. ಇಲ್ಲಿ ಕಾದಂಬರಿಕಾರರು ಕಥನಕ್ಕಾಗಿ ಒಂದು ದಿನದ ಅವಧಿಯನ್ನು ಆಯ್ದುಕೊಂಡಿದ್ದು ವಿಶೇಷವಾಗಿದೆ. ಕಿರು ಅವಧಿಯಲ್ಲಿಯೇ ಪ್ರಧಾನ ಕಥಾನಕದ ಜೊತೆಯಲ್ಲಿ ಕೆಲವರ ನೆನಪುಗಳಿಂದ ಕೆಲವು ಕತೆಗಳು ಹರಿದಾಡಿವೆ. ಶಿವಲೀಲಾ, ಅಕ್ಕಮ್ಮ ಹಾಗೂ ಶ್ರೀದೇವಿ ಇವು ಕಥನದ ಮುಖ್ಯ ಪಾತ್ರಗಳು. ಅಕ್ಕತಂಗಿಯರು ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಗರಗಳನ್ನು ಸೇರಿರುತ್ತಾರೆ. ಆದರೆ ತಮ್ಮ ಬಾಲ್ಯವನ್ನು ಹಳ್ಳಿಯಲ್ಲಿಯೇ ಕಳೆದಿರುತ್ತಾರೆ; ನಾಲ್ಕೈದು ವರ್ಷಗಳ ತರುವಾಯದಲ್ಲಿ ತಮ್ಮ ಅಪ್ಪಅಮ್ಮರನ್ನು ಕಾಣಲು ಹಳ್ಳಿಗೆ ಬರುತ್ತಾರೆ; ಇವರನ್ನು ಕರೆಸಲು ಗೌರಿ ನೋಪಿ ಪೂಜೆಯು ಒಂದು ನೆಪವಾಗಿರುತ್ತದೆ. ಒಂದೆಡೆ ನೋಪಿ ಪೂಜೆಯ ಸಿದ್ಧತೆಗಳು ಭರದಿಂದ ಸಾಗುತ್ತವೆ; ಇನ್ನೊಂದೆಡೆ ಮಹಿಳೆಯರು ತಮ್ಮ ವೈವಾಹಿಕ ಬದುಕು ಛಿದ್ರಗೊಂಡಿರುವುದನ್ನು ನಿವೇದಿಸಿಕೊಳ್ಳುತ್ತಾರೆ. ಇವರು ತಮ್ಮದಲ್ಲದ ತಪ್ಪುಗಳಿಗೆ ಪರಿತಪಿಸುವ ಸನ್ನಿವೇಶಗಳು ಮನಕಲಕುತ್ತವೆ.

ಸದಾಶಿವಪ್ಪನವರೇ ತಮ್ಮ ಹಿರಿಯ ಮಗಳಾದ ಶಿವಲೀಲಾಳಿಗೆ ಮದುವೆಯ ಹುಡುಗನನ್ನು ನಿರ್ಧರಿಸುತ್ತಾರೆ. ಅಪ್ಪ ನೋಡಿದ ಹುಡುಗನನ್ನು ಶಿವಲೀಲಾ ಒಪ್ಪಿಕೊಳ್ಳುತ್ತಾಳೆ. ಮದುವೆಯಾದ ಕೆಲವು ತಿಂಗಳುಗಳಲ್ಲಿಯೇ ಗಂಡಹೆಂಡಿರಲ್ಲಿ ವೈಮನಸ್ಸು ಉಂಟಾಗುತ್ತದೆ. ಯಾಕೆಂದರೆ ಗಂಡನೇ ಕುಟುಂಬದಲ್ಲಿ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವವನಾಗಿರುತ್ತಾನೆ. ಇದರಿಂದಾಗಿ ಶಿವಲೀಲಾಳ ಆರ್ಥಿಕ ಸ್ವಾತಂತ್ರ್ಯ ಹರಣವಾಗುತ್ತದೆ. ಆಕೆ ಗಂಡನ ಕುಟುಂಬದವರಿಗಾಗಿಯೇ ದುಡಿಯುಂತಾಗುತ್ತದೆ. ತಾನು ಗರ್ಭಿಣಿ ಎಂದು ಹೇಳಿದಾಗಲೂ ಗಂಡ ಪ್ರೀತಿಯಿಂದ ಸ್ಪಂದಿಸುವುದಿಲ್ಲ. ಪುರುಷ ಪ್ರಧಾನತೆಯ ಹಿಂಸೆ, ಕಿರುಕುಳ, ಕ್ರೌರ್ಯಗಳಿಂದ ಶಿವಲೀಲಾ ರೋಸಿ ಹೋಗುತ್ತಾಳೆ. ಆಕೆಯ ಮನಸ್ಸು ಕದಡಿದ ನೀರಿನಂತೆ ಪ್ರಕ್ಷುಬ್ಧವಾಗುತ್ತದೆ. ಇದರಿಂದ ವಿಮೋಚಿತಳಾಗಲು ನಿರ್ಧರಿಸುತ್ತಾಳೆ. ಸ್ವತಂತ್ರ ಬದುಕಿಗಾಗಿ ವಿಚ್ಛೇದನದ ಮೊರೆ ಹೋಗುತ್ತಾಳೆ. ಧೈರ್ಯದಿಂದ ಏಕಾಂಗಿಯಾಗಿಯೇ ತಾನು ಹೆತ್ತ ಮಗುವಿನ ಲಾಲನೆಪಾಲನೆಯ ಸಂಪೂರ್ಣ ಹೊಣೆಯನ್ನು ಹೊರುತ್ತಾಳೆ. ಹಿನ್ನೆಲೆಯಲ್ಲಿ ಶಿವಲೀಲಾ ದಿಟ್ಟತನದ ಹೆಣ್ಣಾಗಿ ತೋರುತ್ತಾಳೆ.

ಕಾದಂಬರಿಯಲ್ಲಿ ಮತ್ತೊಂದು ಪ್ರಮುಖ ಪಾತ್ರ ಅಕ್ಕಮ್ಮಳದ್ದು. ಬ್ಯಾಂಕ್ ಉದ್ಯೋಗಿಯಾಗಿರುವ ಅಕ್ಕಮ್ಮಗೆ ಕಾಲೇಜು ಉಪನ್ಯಾಸಕನೊಬ್ಬನ ಪರಿಚಯವಾಗುತ್ತದೆ. ಇದು ಸ್ನೇಹಕ್ಕೆ ತಿರುಗುತ್ತದೆ; ಸ್ನೇಹವು ಪ್ರೇಮವಾಗಿ ರೂಪಾಂತರವಾಗುತ್ತದೆ. ಅಕ್ಕಮ್ಮ ತನ್ನ ತಾಯಿತಂದೆಯರ ಹಂಗಿಲ್ಲದೆ ತಾನು ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ತಾನಾಗಿಯೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧಳಾಗಿ ಕಾಣುತ್ತಾಳೆ. ಅಕ್ಕಮ್ಮ ಆತನೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗುತ್ತಾಳೆ; ಸಂಗತಿಯನ್ನು ನಂತರದಲ್ಲಿ ತಾಯಿತಂದೆಯರಿಗೆ ತಿಳಿಸುತ್ತಾಳೆ.

ಕೆಲವೇ ದಿನಗಳಲ್ಲಿ ತಾನು ಮದುವೆಯಾದ ಹುಡುಗ ಲಂಪಟನೆಂದು ತಿಳಿಯುತ್ತದೆ. ಮನೆಗೆಲಸದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಕಮ್ಮಳ ಗಮನಕ್ಕೆ ಬರುತ್ತದೆ. ಕಾಲೇಜಿನಲ್ಲಿಯು ಆತನ ಮೇಲೆ ಲೈಂಗಿಕ ದೌರ್ಜನ್ಯದ ಆಪಾದನೆಗಳು ಕೇಳಿ ಬರುತ್ತವೆ. ಇದರಿಂದ ಅಕ್ಕಮ್ಮ ಆಘಾತಕ್ಕೆ ಒಳಗಾಗುತ್ತಾಳೆ. ಇವುಗಳ ಬಗ್ಗೆ ಪ್ರಶ್ನಿಸಿದಾಗ ಆತ ಕುಪಿತನಾಗಿ ಹೊರಟು ಹೋಗುತ್ತಾನೆ. ಅಕ್ಕಮ್ಮ ಆತನಿಂದ ವಿಚ್ಛೇದನ ಪಡೆಯುತ್ತಾಳೆ. ಇದರ ನಂತರದಲ್ಲಿ ಸಿದ್ಧಾರ್ಥ ಎಂಬ ಹುಡುಗನ ಪರಿಚಯವಾಗುತ್ತದೆ; ಆತನಿಂದ ಒಂದು ಮಗುವನ್ನು ಪಡೆಯುತ್ತಾಳೆ. ಆದರೆ ಹುಡುಗನ ತಂದೆ ತಾಯಿಗಳು ವಿಚ್ಛೇದಿತಳಾದ ಅಕ್ಕಮ್ಮಳನ್ನು ಮದುವೆಯಾಗಲು ಅಡ್ಡಿಯಾಗುತ್ತಾರೆ. ಹೀಗಾಗಿ ಅಕ್ಕಮ್ಮ ಸಿಂಗಲ್ ಮದರ್ ಆಗಿಯೇ ತನ್ನ ಮಗುವನ್ನು ಪೋಷಿಸುವ ಜವಾಬ್ದಾರಿ ಹೊರುತ್ತಾಳೆ.

ಕಾದಂಬರಿಯಲ್ಲಿ ಬರುವ ಮೂರನೇ ಮುಖ್ಯ ಪಾತ್ರವೆಂದರೆ ಶ್ರೀದೇವಿಯದ್ದು. ಈಕೆ ಕಾಲೇಜಿನಲ್ಲಿ ಸಹಾಯಕ ಅಧ್ಯಾಪಕಳಾಗಿ ಕೆಲಸಕ್ಕೆ ಸೇರುತ್ತಾಳೆ. ಈಕೆ ತುಂಬಾ ದುಡುಕಿನ ಸ್ವಭಾವದವಳಾಗಿರುತ್ತಾಳೆ. ಶ್ರೀದೇವಿ ತನ್ನ ಸಹೋದ್ಯೋಗಿ ಅರುಣನಿಂದ ಆಕರ್ಷಿತಳಾಗುತ್ತಾಳೆ. ಇಬ್ಬರೂ ಪರಸ್ಪರವಾಗಿ ಚರ್ಚಿಸಿ ಮದುವೆಯ ಬಂಧನ ಬೇಡವೆಂದು ತೀರ್ಮಾನಿಸಿಕೊಳ್ಳುತ್ತಾರೆ. ‘ಒಲವಿನ ಕೂಟಕ್ಕೆ ಯಾವುದರ ಹಂಗು ಬೇಕಿಲ್ಲಎನ್ನುವುದಕ್ಕೆ ಬದ್ಧರಾಗಿಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇರುತ್ತಾರೆ. ಆದರೆ ಶ್ರೀದೇವಿಯ ಕಟ್ಟಳೆಗಳು ಒಂದೊಂದಾಗಿ ಶುರುವಾಗುತ್ತವೆ. ಇಲ್ಲಿ ಹುಡುಗನೇ ಆಕೆಯ ವಿಚಿತ್ರ ನಡಾವಳಿಯಿಂದ ಪರಿತಪಿಸುವಂತಾಗುತ್ತದೆ. ಶ್ರೀದೇವಿಯೇ ವಿನಾಕಾರಣವಾಗಿ ಸಂಬಂಧವನ್ನು ಮುರಿದುಕೊಳ್ಳುತ್ತಾಳೆ. ಶ್ರೀದೇವಿಯ ನಿರ್ಧಾರಗಳು ಸ್ಥಿರವಾಗಿರುವುದಿಲ್ಲ; ಅವು ಬದಲಾಗುತ್ತಲೇ ಹೋಗುತ್ತವೆ. ಇವುಗಳ ಪರಿಣಾಮ ಅರುಣನ ಮೇಲಾಗುತ್ತದೆ. ಕಾದಂಬರಿಯಲ್ಲಿ ಈತನದ್ದು ಅತ್ಯಂತ ಅಮಾಯಕ ಪಾತ್ರವಾಗಿದೆ.

ಕಾದಂಬರಿಯಲ್ಲಿ ಮುಖ್ಯ ಪಾತ್ರಗಳಾಗಿ ಬರುವ ಮೂವರು ಮಹಿಳೆಯರ ಸ್ಥೂಲವಾದ ಚಿತ್ರಣವಿದು. ಅವರ ಬದುಕಿನ ಘಟನೆಗಳು ಅವರ ನೆನಪುಗಳ ಮೂಲಕ ನಿರೂಪಿತವಾಗಿವೆ. ಮದುವೆಯು ಹೆಣ್ಣಿನ ಮನಸ್ಸು ಮತ್ತು ದೇಹವನ್ನು ಗಂಡಿನ ಸ್ವತ್ತಾಗಿಸುತ್ತದೆ. ಆದರೆ ತಮ್ಮದಲ್ಲದ ಕೃತ್ಯಗಳಿಂದ ಇವರ ಮನೋಸ್ಥೈರ್ಯ ಕುಗ್ಗಿ ಹೋಗುವಂತಾಗುತ್ತದೆ. ಗಂಡಸರು ಎಸಗುವ ಪ್ರಮಾದಗಳಿಂದ ತಾವು ಬಲಿಪಶುಗಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗಂಡಸರಿಂದಾಗಿ ತಾವೇಕೆ ಇಂತಹ ಹೊರೆಯನ್ನು ಅನುಭವಿಸಬೇಕೆನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾರೆ. ಶಿವಲೀಲಾ ಮತ್ತು ಅಕ್ಕಮ್ಮ ತಮ್ಮ ಗಂಡಂದಿರನ್ನು ಪ್ರಶ್ನಿಸುವುದರಿಂದಲೇ ದಾಂಪತ್ಯದಲ್ಲಿ ಬಿರುಕು ಬಿಡುತ್ತದೆ. ಅವರು ತಮ್ಮ ಗಂಡಂದಿರ ಮರ್ಜಿಗಾಗಿ ಕಾಯದೇ ಮದುವೆ ಸಂಬಂಧವನ್ನು ಮುರಿದುಕೊಂಡು ಹೊರ ಬೀಳುತ್ತಾರೆ. ಇವರ ಮೂಲಕ ಕಾದಂಬರಿ ಹೆಣ್ನೋಟವನ್ನು ಮಂಡಿಸುತ್ತಿರುವುದು ಸ್ಪಷ್ಟವಾಗಿದೆ.

ಹಿನ್ನೆಲೆಯಲ್ಲಿಗೌರಿಯರುಕೃತಿಯನ್ನು ಕನ್ನಡ ಕಾದಂಬರಿ ಪರಂಪರೆಯ ಭಿತ್ತಿಯಲ್ಲಿಟ್ಟು ನೋಡಿದರೆ ಕೊಂಚ ನಿರಾಶೆಯೇ ಆಗುತ್ತದೆ. ಮೂವರು ಮಹಿಳೆಯರು ವೈವಾಹಿಕ ಕಟ್ಟುಪಾಡುಗಳಿಂದ ಹೊರ ಬರುವುದರಲ್ಲಿ ಅವರ ಗಟ್ಟಿತನ ವ್ಯಕ್ತವಾಗಿದೆ. ಆದರೆ ಮಹಿಳೆಯರು ತಮ್ಮದೇ ಏಕಮುಖಿ ನಿಲುವುಗಳಿಗೆ ಬದ್ಧರಾಗುತ್ತಾರೆ. ಮಹಿಳೆಯರ ನಿಲುವುಗಳು ಪುರುಷ ಸಂಬಂಧಗಳನ್ನು ಬರಿಒಪ್ಪುವುದುಮತ್ತುತಿರಸ್ಕರಿಸುವುದುಎಂಬಷ್ಟಕ್ಕೆ ಸೀಮಿತವಾಗಿವೆ. ಅದರಲ್ಲಿಯೂ ಮುಖ್ಯವಾಗಿ ಶ್ರೀದೇವಿಯ ಒಪ್ಪುವಿಕೆ ಮತ್ತು ತಿರಸ್ಕಾರಕ್ಕೆ ಗುರಿಯಾಗುವ ಅರುಣನ ಪಾತ್ರ ಚಿತ್ರಣವು ತೀರ ಅಸಹಾಯಕನ್ನಾಗಿಸಿದೆ. ಇಬ್ಬರು ಮಹಿಳೆಯರ ಬದುಕಿನಲ್ಲಿ ಬರುವ ಗಂಡುಗಳ ಸ್ವಭಾವ ಹಾಗೂ ನಡತೆ ಕಾದಂಬರಿಯಲ್ಲಿ ಋಣಾತ್ಮಕವಾಗಿಯೇ ಚಿತ್ರಿತವಾಗಿದೆ. ಇಷ್ಟು ಸರಳೀಕರಣದ ನೆಲೆಯಲ್ಲಿ ಗಂಡುಹೆಣ್ಣಿನ ದೈಹಿಕ ಸಂಬಂಧಗಳನ್ನು ನೋಡುವುದು ಕೂಡ ಸಮಸ್ಯಾತ್ಮಕವಾಗಿದೆ.

ನುಗಡೋಣಿ ಅವರ ಅನೇಕ ಸಣ್ಣ ಕತೆಗಳಲ್ಲಿ ಹಳ್ಳಿಯ ಕೂಡು ಕುಟುಂಬಗಳು ವಿಘಟಿತವಾಗುವ ಬಗೆಯು ಅತ್ಯಂತ ಸೂಕ್ಷ್ಮವಾಗಿ ಹಾಗೂ ಪರಿಣಾಮಕಾರಿಯಾಗಿ ಬಂದಿದೆ. ‘ಗೌರಿಯರುಕಾದಂಬರಿಯು ಅವರ ಸಣ್ಣ ಕತೆಗಳಿಗಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. ನುಗಡೋಣಿಯವರು ಕಾದಂಬರಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಛಿದ್ರಗೊಂಡಿರುವ ಕೌಟುಂಬಿಕ ಸಂಬಂಧಗಳನ್ನು ಬೆಸೆಯುವ ಪ್ರಯತ್ನ ಮಾಡುತ್ತಾರೆ. ಪ್ರಾಯಶಃ ಕಾರಣಕ್ಕಾಗಿಯೇ ಸದಾಶಿವಪ್ಪನ ಪಾತ್ರವನ್ನು ವಿಸ್ತರಿಸಲಾಗಿದೆ. ಆತನೇ ಅನೇಕರಿಗೆ ಪೋಷಕನಾಗುತ್ತಾನೆ; ಆತನ ಉದಾರತೆಯ ಮತ್ತು ಮಾನವೀಯ ಕಾರಣಕ್ಕಾಗಿ ಮಲ್ಲಪ್ಪ ಹಾಗೂ ಎಲ್ಲಮ್ಮ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ಲೇಖನದ ಆರಂಭದಲ್ಲಿ ಹೇಳಿದಂತೆ ಕಾದಂಬರಿಯಲ್ಲಿ ಪ್ರಧಾನ ಕಥನದ ಜೊತೆಯಲ್ಲಿ ಇನ್ನೂ ಹಲವು ಪಾತ್ರಗಳ ಕತೆಗಳು ಕೂಡ ಸೇರಿಕೊಂಡಿವೆ. ರೈತನಾಗಿ ಸೋತಿರುವ ಸದಾಶಿವಪ್ಪನ ತಮ್ಮ ಶಿವಲಿಂಗಪ್ಪನ ಕತೆಯಿದೆ; ಆತ್ಮಹತ್ಯೆ ಮಾಡಿಕೊಂಡ ಕಲ್ಯಾಣಿಯ ಗಂಡನ ಕತೆಯಿದೆ; ಶರಣಬಸವ ಸರ್ಕಾರಿ ನೌಕರಿಗಾಗಿ ನಡೆಸುವ ಪ್ರಯತ್ನದ ಕತೆಗೂ ಇಲ್ಲಿ ಜಾಗವಿದೆ; ಇವೆಲ್ಲ ಪಾತ್ರಗಳು ಕಾದಂಬರಿಯಲ್ಲಿ ಜೀವಂತಿಕೆಯಿಂದ ಮಿಡಿಯುತ್ತವೆ. ಆದರೆ ಪುಟ್ಟ ಕ್ಯಾನ್ವ್ಯಾಸ್ ಹೊಂದಿರುವ ಕಾದಂಬರಿಯಲ್ಲಿ ಪಾತ್ರಗಳು ಕಿಕ್ಕಿರಿದಿವೆ. ಓದುವಾಗ ಕೂಡ ಕೆಲವು ಪಾತ್ರಗಳ ಸಂಬಂಧವು ಅಲ್ಲಲ್ಲಿ ಕನೆಕ್ಟ್ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ.

ಶ್ರೀದೇವಿ ತನ್ನೊಂದಿಗೆ ಕರೆದುಕೊಂಡು ಬಂದ ಮಂಜುಳಾ ಕೂಡ ಇಲ್ಲಿದ್ದಾಳೆ. ಕಾದಂಬರಿಯ ಕಥಾನಕದಲ್ಲಿ ಪಾತ್ರದ ಅಗತ್ಯ ಹಾಗೂ ಔಚಿತ್ಯ ಸ್ಪಷ್ಟವಾಗುವುದಿಲ್ಲ. ಸದಾಶಿವಪ್ಪನ ತೋಟವನ್ನು ತಮಗೆ ಮಾರಾಟ ಮಾಡಬೇಕೆಂದು ಪೀಡಿಸುವವರು ಮತ್ತು ಅದರಿಂದ ಆತ ತಪ್ಪಿಸಿಕೊಳ್ಳುವ ಉಪಾಯಗಳ ಬಗ್ಗೆ ಒಂದು ಅಧ್ಯಾಯವೇ ಕಾದಂಬರಿಯಲ್ಲಿದೆ. ಇದು ಹಳ್ಳಿಗಳಲ್ಲಿಯು ರಿಯಲ್ ಎಸ್ಟೇಟ್ ದಂಧೆ ಹಾಗೂ ರೆಸಾರ್ಟ್ಗಳು ತಲೆಯೆತ್ತುತ್ತಿರುವ ಆಕ್ರಮಶೀಲತೆಯನ್ನು ಹೇಳುತ್ತಿರುವುದು ಸರಿ. ಆದರೆ ಕಾದಂಬರಿಯ ಶಿಲ್ಪದ ದೃಷ್ಟಿಯಿಂದ ಅಧ್ಯಾಯವು ಹೊರಗೆ ನಿಲ್ಲುತ್ತದೆ.

ಗೌರಿಯರುಕಾದಂಬರಿಯ ಅತ್ಯುತ್ತಮ ಪ್ರಸಂಗವೆಂದರೆ ಕೊನೆಯಲ್ಲಿ ಬರುವ ನೋಪಿ ಪೂಜೆಯ ಆಚರಣೆ. ಆಚರಣೆಯ ಸಂಭ್ರಮದಲ್ಲಿ ನಗರಗಳಿಂದ ಆಗಮಿಸಿರುವ ಶಿವಲೀಲಾ, ಅಕ್ಕಮ್ಮ, ಶ್ರೀದೇವಿ ಹಾಗೂ ಇತರರು ಪಾಲ್ಗೊಳ್ಳುತ್ತಾರೆ. ಸಾಂಪ್ರದಾಯಿಕ ಆಚರಣೆಯಲ್ಲಿ ಬಹುತೇಕರ ಕಣ್ಣು ಮಹಿಳೆಯರ ಮೇಲಿರುತ್ತದೆ. ಪೂಜೆಯ ಸಂದರ್ಭದಲ್ಲಿ ಹೂಗಾರ ಮಹಿಳೆಯು ನೀಡುವ ಕುಂಕುಮವನ್ನು ತಮ್ಮ ಮಾಂಗಲ್ಯಗಳಿಗೆ ಹಚ್ಚಿಕೊಳ್ಳುವಂತೆ ಸೂಚಿಸಲಾಗುತ್ತದೆ. ಆದರೆ ಮಹಿಳೆಯರು ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಸಂದರ್ಭದಲ್ಲಿ ಊರಿನ ಅನೇಕ ಹಿರಿಯ ಹೆಂಗಸರಿಂದ ಗಂಡ ಬಿಟ್ಟವರೆಂದು ಮೂದಲಿಸುವ ವ್ಯಂಗ್ಯದ ಮಾತುಗಳು ತೂರಿ ಬರುತ್ತವೆ. ಅವುಗಳಿಗೆ ಮಹಿಳೆಯರು ಪ್ರತಿಕ್ರಿಯಿಸುವುದಿಲ್ಲ. ಆರ್ಥಿಕವಾಗಿ ಸ್ವತಂತ್ರರಾಗಿರುವ ಹಾಗೂ ತಮ್ಮ ಬದುಕಿನ ಆಯ್ಕೆಗಳಿಗೆ ತಾವೇ ಹೊಣೆಗಾರರಾಗಿರುವ ಮಹಿಳೆಯರು ಅತ್ಯಂತ ದಿಟ್ಟರಾಗಿದ್ದನ್ನು ಧ್ವನಿಸುತ್ತದೆ.

ಶಿವರಾಮ ಕಾರಂತರಸರಸಮ್ಮನ ಸಮಾಧಿಕಾದಂಬರಿಯು ಗಂಡು ಮತ್ತು ಹೆಣ್ಣಿನ ನಡುವಿನ ದಾಂಪತ್ಯದ ಚಂಚಲ ಸಂಬಂಧಗಳನ್ನು ಚಿತ್ರಿಸಿದೆ. ಬಿಗಿಯಾದ ಬಂಧ ಹಾಗೂ ಹಲವು ಕಣ್ನೋಟಗಳ ನಿರೂಪಣೆಯನ್ನು ಹೊಂದಿರುವ ಕಾದಂಬರಿಯು ದಾಂಪತ್ಯದ ಸಮಸ್ಯೆಯನ್ನು ಸಾಮಾಜಿಕ ಕಟ್ಟಳೆ, ಆಚರಣೆ, ಧರ್ಮ, ಪುರಾಣಗಳ ಸಂಕೀರ್ಣವಾದ ನೆಲೆಯಲ್ಲಿ ಹಿಡಿದಿಟ್ಟಿದೆ. ಕಾದಂಬರಿಯಲ್ಲಿ ಸರಸಮ್ಮನ ಸಮಾಧಿಯು ಒಂದು ಸಾಕ್ಷಿ ಪ್ರಜ್ಞೆಯಾಗಿದೆ; ಅದರ ಎದುರಿನಲ್ಲಿ ಹಲವು ಪಾತ್ರಗಳು ತಮ್ಮ ಬದುಕಿನ ದುರಂತವನ್ನು ನಿಕಷಕ್ಕೆ ಒಡ್ಡಿಕೊಳ್ಳುತ್ತವೆ. ಹಿನ್ನೆಲೆಯಲ್ಲಿಗೌರಿಯರುಕಾದಂಬರಿಯಲ್ಲಿ ನೋಪಿಯ ಆಚರಣೆಯು ವಿವರಗಳಿಂದ ತುಂಬಿ ಹೋಗಿದೆ; ಕಣ್ಣಿಗೆ ಕಟ್ಟುವ ಹಾಗೆ ವರ್ಣಿತವಾಗಿದೆ. ಆದರೆ ಅದರ ಹಿನ್ನೆಲೆಯಲ್ಲಿ ಮೂವರು ಮಹಿಳೆಯರ ಆಂತರಿಕ ಸಂಘರ್ಷಗಳು ಸ್ಫುಟವಾಗಿ ಚಿಮ್ಮುವುದಿಲ್ಲ. ಅವರು ತಮ್ಮನ್ನಷ್ಟೇಕೇಂದ್ರವಾಗಿಸಿಕೊಂಡಿದ್ದಾರೆ. ಮಹಿಳೆಯರ ನಿರ್ಧಾರಗಳಿಂದ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಕೆಲವು ಪರಿಣಾಮಗಳು ತಲೆದೋರುತ್ತವೆ. ಆದರೆ ಅವರು ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಕಾದಂಬರಿಯ ಶಕ್ತಿಯೂ ಹೌದು; ಮಿತಿಯೂ ಹೌದು.

ಸಣ್ಣ ಕತೆಗಳನ್ನು ಬರೆದವರಿಗೆ ಕಾದಂಬರಿಯ ಬರವಣಿಗೆ ಸುಲಭವೆಂದು ಹೇಳಲಾಗದು; ಅಥವಾ ಕಾದಂಬರಿಗಳನ್ನು ಬರೆದವರಿಗೆ ಸಣ್ಣ ಕತೆಗಳನ್ನು ಬರೆಯುವುದು ಸಲೀಸು ಎಂದು ಕೂಡ ಹೇಳಲು ಬರುವುದಿಲ್ಲ. ಕಾರಣವೆಂದರೆ ಸಾಹಿತ್ಯದ ಎರಡೂ ಪ್ರಕಾರಗಳು ಭಿನ್ನವಾದ ಶಿಲ್ಪ ಹಾಗೂ ಕುಶಲತೆಯನ್ನು ಅಪೇಕ್ಷಿಸುತ್ತವೆ. ನಿಟ್ಟಿನಲ್ಲಿಗೌರಿಯರುಕಾದಂಬರಿಯು ಹೊಸ ಕಾಲಘಟ್ಟದ ಸಾಮಾಜಿಕ ಬಿಕ್ಕಟ್ಟುಗಳನ್ನು ನಿರೂಪಿಸಿದೆ. ಭಾಷಾ ಪ್ರಯೋಗಶೀಲತೆಯ ನೆಲೆಯಿಂದ ಕಾದಂಬರಿಯನ್ನು ನೋಡಿದರೆ ಅಲ್ಲಲ್ಲಿ ಶಿಥಿಲಗೊಂಡಿದೆ. ಹೊಸ ಕಥನಕ್ಕೆ ಪೂರಕವಾದ ನವೀನ ಭಾಷೆಯನ್ನು ಹುಟ್ಟಿಸಿಕೊಳ್ಳಲು ಲೇಖಕರಿಗೆ ಸಾಧ್ಯವಾಗಿಲ್ಲ. ಕನ್ನಡದ ಮಹತ್ವದ ಸಣ್ಣ ಕತೆಗಾರರಾಗಿರುವ ನುಗಡೋಣಿಯರ ಕಾದಂಬರಿ ಎಂದಾಗ ಸಹಜವಾಗಿಯೇ ಓದುಗರಲ್ಲಿ ದೊಡ್ಡ ನಿರೀಕ್ಷೆಗಳಿರುತ್ತವೆ. ಸದರಿ ಕಾದಂಬರಿಯು ಮಹತ್ವಾಕಾಂಕ್ಷೆಯ ವಸ್ತುವನ್ನು ಹೊಂದಿದೆ; ಆದರೆ ಮತ್ತಷ್ಟು ಕಲಾತ್ಮಕತೆಯ ಹೊಳಪನ್ನು ಪಡೆಯಲು ಸಾಧ್ಯವಾಗಿದ್ದರೆ ಕೃತಿಯ ಗುಣಮಟ್ಟ ಇನ್ನಷ್ಟು ಎತ್ತರದಲ್ಲಿರುತ್ತಿತ್ತು.

ಹೊಸ ಪುಸ್ತಕ

ಮಹಾಮಾರಿ ವೈರಸ್ ಜಗತ್ತು ಕೋವಿಡ್-19

ಡಾ.ಎಂ.ವೆಂಕಟಸ್ವಾಮಿ

ಪುಟ: 142 ಬೆಲೆ: ರೂ.140

ಪ್ರಥಮ ಮುದ್ರಣ: 2021

ಟೆಕ್ಫಿಜ್ ಇಂಕ್ ಪ್ರಕಾಶನ

ಸಂಪರ್ಕ: 9902026518

ಪುಸ್ತಕದಲ್ಲಿ ಇಡೀ ಜಗತ್ತನ್ನೇ ನಲುಗಿಸಿದ ಕೊರೋನಾ ವೈರಸ್ಸಿನ ಜೊತೆಗೆ ಹಿಂದೆ ಮನುಕುಲವನ್ನು ಅಲುಗಾಡಿಸಿದ ವಿವಿಧ ವೈರಸ್ಗಳ ಇತಿಹಾಸವಿದೆ. ವೈರಾಲಜಿ ಎಂದರೆ ಏನು, ಉಪಯುಕ್ತ ವೈರಸ್ಗಳು, ವುಹಾನ್ ವೈರಾಲಜಿ ಇನ್ಸ್ಟಿಟ್ಯೂಟ್ ಹಾಗೂ ಭವಿಷ್ಯದಲ್ಲಿ ಮನುಷ್ಯ ಕುಲವನ್ನು ಕಾಡಲಿರುವ ವೈರಸ್ಗಳು ಹಾಗೂ ಅವುಗಳನ್ನು ಹೇಗೆ ಎದುರಿಸ ಬೇಕು ಎಂದು ಸರಳವಾಗಿ ವಿವರಿಸುವ ಪುಸ್ತಕ ಇದಾಗಿದೆ.


ಊರೆಂಬುದು

ಊರಾಗುತ್ತಿದ್ದ ಪರಿ

ಡಾ.ವೆಂಕಟೇಶ್ ಇಂದ್ವಾಡಿ

ಪುಟ: 174 ಬೆಲೆ: ರೂ.140

ಪ್ರಥಮ ಮುದ್ರಣ: 2017

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಲೇಖಕರು ತಮ್ಮ ಬಾಲ್ಯದ ಮೂಲಕ ತಮ್ಮ ಹಳ್ಳಿಯ ಪರಿಸರವನ್ನು ಕಟ್ಟಿಕೊಡುತ್ತಾ ಹೋಗಿದ್ದಾರೆ. ನಮ್ಮ ತಾತ, ಮುತ್ತಾತಂದಿರು ಬದುಕಿದ್ದು ಹೇಗೆ, ಊರ ಹಬ್ಬಗಳು, ದೇವರುಗಳು, ಊರಿನ ವ್ಯಕ್ತಿತ್ವಗಳ ಮೂಲಕ ಕಳೆದು ಹೋಗುತ್ತಿರುವ ಅಪ್ಪಟ ಹಳ್ಳಿ ಬದುಕನ್ನು ಕಟ್ಟಿಕೊಡುತ್ತಾ ಹೋಗುತ್ತದೆ ಪುಸ್ತಕ. ಊರನ್ನು ಕಟ್ಟಿದ ಅನೇಕ ಜನಸಾಮಾನ್ಯರ ಬದುಕಿನ ಕಥನವನ್ನು ಪುಸ್ತಕದಲ್ಲಿ ಹಿಡಿದಿಡಲಾಗಿದೆ.


ವಿಪ್ಲವ

ಕಾದಂಬರಿ

ಡಾ..ನಾಗರಾಜ್

ಪುಟ: 428 ಬೆಲೆ: ರೂ.390

ಪ್ರಥಮ ಮುದ್ರಣ: 2020

ಮಡಿಲು ಪ್ರಕಾಶನ

ಸಂಪರ್ಕ: 9844212231

ಕಾದಂಬರಿಯ ಕಥಾ ವಸ್ತು, ನೈಜ ಘಟನೆಗಳು ಎಂದೂ ಹೇಳಲಾರೆ, ಬದಲಾದ ಮನುಷ್ಯನ ವರ್ತನೆಯನ್ನು ಇಲ್ಲಿ ಹಿಡಿದಿಟ್ಟಿದ್ದೇನೆ ಎಂದು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ನಮ್ಮ ಸಮಾಜದ ಬೇರುಗಳಾದ ಕುಟುಂಬ, ಅದರ ಮೌಲ್ಯಗಳು ಸೇರಿದಂತೆ ಹೊಸಾ ದಿಕ್ಕಿಗೆ ಎಳೆದುಕೊಂಡು ಹೋಗುತ್ತಿರುವ ಬದುಕಿನ ಚಿತ್ರಣ ಸೇರಿದಂತೆ ದೇಹ ಸೌಂದರ್ಯ ಹಾಗೂ ಒಳಗಿನ ಆತ್ಮದ ಅನ್ವೇಷಣೆಯ ಪ್ರಯತ್ಮಗಳು ಇಲ್ಲಿವೆ.


ಗಾಂಧಿಯ ಗಡಿಪಾರು

ಲೇಖನಗಳು

ಹಡವನಹಳ್ಳಿ ವೀರಣ್ಣಗೌಡ

ಪುಟ: 80 ಬೆಲೆ: ರೂ.80

ಪ್ರಥಮ ಮುದ್ರಣ: 2021

ಅಪೂರ್ವ ಪ್ರಕಾಶನ

ಸಂಪರ್ಕ: 9845381834

ಗಾಂಧೀಯವರ ಕುರಿತಾದ ಎರಡು ಲೇಖನಗಳು, ಆತಂಕವಾದ ಮತ್ತು ಭಾರತೀಯತೆ, ಅನ್ನದಾತನ ಬದುಕುಬವಣೆ, ಮಹಿಳಾ ಸಬಲೀಕರಣದ ಹೆಜ್ಜೆಗಳು, ದೇಶಪ್ರೇಮದ ವ್ಯಾಖ್ಯಾನ, ಪೌರಕಾರ್ಮಿಕನೆಂಬ ಜಲಗಾರ ಎನ್ನುವ ಶೀರ್ಷಿಕೆಗಳಿಂದಲೇ ಇಲ್ಲಿನ ಲೇಖನಗಳು ಗಮನ ಸೆಳೆಯುತ್ತವೆ. ಈಗಾಗಲೇ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳ ಗುಚ್ಚ ಇದಾಗಿದ್ದು, ಲೇಖಕರು ತಮ್ಮ ಅನುಭವಕ್ಕೆ ಬಂದ ಕೆಲವು ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡುವ ಕೆಲಸ ಮಾಡಿದ್ದಾರೆ.


ಹರನೆಂಬುದೇ ಸತ್ಯ

ಹಳಗನ್ನಡ ಕಾವ್ಯಗಳನ್ನು ಕುರಿತು

ಹೊಸಾ ನೋಟಗಳು

ಕೃಷ್ಣಮೂರ್ತಿ ಹನೂರು

ಪುಟ: 152 ಬೆಲೆ: ರೂ.100

ಪ್ರಥಮ ಮುದ್ರಣ: 2021

ಲೋಹಿಯಾ ಪ್ರಕಾಶನ, ಬಳ್ಳಾರಿ.

ಸಂಪರ್ಕ: 9900750549

ದೇಸಿ ಚಿಂತನೆಗಳನ್ನು ಕನ್ನಡಕ್ಕೆ ಅನ್ವಯಿಸಿ ಅಧ್ಯಯನ ಮಾಡಿ ಹೊರಬಂದಿರುವ ವಿದ್ವತ್ಪೂರ್ಣ ಲೇಖನಗಳ ಸಂಗ್ರಹ ಪುಸ್ತಕ. ಹಳೆಗನ್ನಡ ಕಾವ್ಯಗಳನ್ನು ಏಕೆ ಓದಬೇಕು ಎನ್ನುವುದು ಇಲ್ಲಿ ಮನವರಿಕೆಯಾಗುತ್ತದೆ. ಕನ್ನಡ ಮಣ್ಣಿನ ಪರಂಪರೆಯನ್ನು ಕೃತಿ ಅತ್ಯಂತ ಸಂಯಮದಿಂದ ಶೋಧಿಸುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ಹಳಗನ್ನಡದ ಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿಯ ವಿಕಸನವನ್ನು ಅಧ್ಯಯನ ಮಾಡಲಾಗಿದೆ.

ಕೃತಿಯ ಜೊತೆಗೆ ಸವಿತಾ ನಾಗಭೂಷಣ ಅವರಕಡೇ ಮಾತುಎನ್ನುವ ರೈತ ಗೀತೆ ಪುಸ್ತಕವನ್ನು ಉಚಿತವಾಗಿ ಕೊಡಲಾಗಿದೆ.


ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ಮತ್ತು ಇತರ ಕಥೆಗಳು

.ಹರೀಶ್

ಪುಟ: 256 ಬೆಲೆ: ರೂ.250

ಪ್ರಥಮ ಮುದ್ರಣ: 2020

ವರ್ಣ ಪ್ರಕಾಶನ

ಸಂಪರ್ಕ: 9880442804

ಸಂಕಲನ 9 ಕಥೆಗಳನ್ನು ಒಳಗೊಂಡಿದ್ದು, ಮಧ್ಯಮ ವರ್ಗದ ಜನರ ಸಂಸಾರದ ಒಳಗಿನ ಕಥನಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಗಂಡೆಂಗ್ಸು, ಅಚ್ಚಮಲ್ಲಿಗೆ, ಹೊಸಮನೆ, ವಿಧವೆ, ಪೃಥೆ ಎನ್ನುವ ಕಥೆಗಳಿದ್ದು, ಎಲ್ಲರಿಂದ ಕಡೆಗಣಿಸಲ್ಪಟ್ಟ ಪಾತ್ರಗಳನ್ನು ಪ್ರೀತಿಸಬೇಕು ಎಂದು ಅನ್ನಿಸಿದ ಕಾರಣ ಕಥೆಗಳು ಜೀವ ತಳೆದಿವೆ, ಇಲ್ಲಿರುವ ಪಾತ್ರಗಳು ನಿಮ್ಮ ಸುತ್ತ ಇರುವಂತಹವು ಎಂದು ಸ್ವತಃ ಲೇಖಕರೇ ಹೇಳಿದ್ದಾರೆ. ಬದುಕಿನಲ್ಲಿ ಸಿಕ್ಕ ಸಣ್ಣಸಣ್ಣ ಸಂತೋಷಗಳು, ಸಂಗತಿಗಳೆ ಇಲ್ಲಿನ ಕಥೆಗಳ ಜೀವದ್ರವ್ಯ.


ಸ್ವಾತಂತ್ರ್ಯ ಹೋರಾಟದಲ್ಲಿ ನಾಡವರು

ಶಾಂತಾರಾಮ ನಾಯಕ ಹಿಚಕಡ

ಪುಟ: 328 ಬೆಲೆ: ರೂ.300

ಸಂಪರ್ಕ: 8762614796

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅಂಕೋಲಾ ತಾಲೂಕಿನ ಮಹನೀಯರ ಕುರಿತು ನೆನಪಿನ ಕೃತಿ ಇದು.

ಅಲ್ಲದೇ ಸ್ವಾತಂತ್ರ್ಯ ಹೋರಾಟದಲ್ಲಿ ದಾಖಲಾಗದ ಅನೇಕ ವಿಚಾರಗಳನ್ನು ಲೇಖಕರು ಕೃತಿಯ ಮೂಲಕ ಕಟ್ಟಿ ಕೊಟ್ಟಿದ್ದಾರೆ, ಮೈನವಿರೇಳಿಸುವ ಘಟನಾವಳಿಂದ ಕೂಡಿದ, ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಲು ಹೋರಾಡಿದ ಅಸಂಖ್ಯಾತ ಜನರ ಕಥೆ ಇಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗದಲ್ಲಿ ನೆಲೆಸಿರುವ ನಾಡವರಕಥನ ಎಂದರೂ ತಪ್ಪಾಗಲಾರದು. ಒಂದು ತಲೆಮಾರಿನ ಚಿತ್ರಣ ಕಟ್ಟಿ ಕೊಡುವ ಕೆಲಸವನ್ನು ಲೇಖಕರು ಪುಸ್ತಕದ ಮೂಲಕ ಮಾಡಿದ್ದಾರೆ.


ಸಾಕು ಬೆಳಕಿನ ಮಾತು

ಕವಿತೆಗಳು

ವಿಜಯಶ್ರೀ ಹಾಲಾಡಿ

ಪುಟ: 128 ಬೆಲೆ: ರೂ.130

ಪ್ರಥಮ ಮುದ್ರಣ: 2020

ದೇಸಿ ಪುಸ್ತಕ ಪ್ರಕಾಶನ

ಸಂಪರ್ಕ: 9448439998

ಪ್ರಾಪಂಚಿಕ ಬದುಕು ಕವಿಯನ್ನು ಕಾಡಿಸಿ ಕವಿತೆ ಬರೆಸಿಕೊಳ್ಳುತ್ತದೆ ಎಂದು ಕವಿ ತಮ್ಮ ಪರಿಚಯದಲ್ಲೇ ಹೇಳಿಕೊಂಡಂತೆ, ಹೊಸಾ ಭಾಷೆ, ಸಿದ್ಧ ಮಾದರಿಯ ಚೌಕಟ್ಟುಗಳನ್ನು ಮೀರಲು ಇಲ್ಲಿನ ಕವನಗಳು ಪ್ರಯತ್ನಿಸುತ್ತವೆ. ಹೆಣ್ಣೊಬ್ಬಳ ಅಂತರಂಗದ ಅನಾವರಣ, ಸಂಕೀರ್ಣ ಅನುಭವಗಳು,ಜೀವ ಪ್ರೀತಿ ಸೇರಿದಂತೆ ಬದುಕಿನ ಸೂಕ್ಷ್ಮ ಅನುಭವಗಳ ಗುಚ್ಚವನ್ನು ರೂಪಕಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡಲಾಗಿರುವ 77 ಕವಿತೆಗಳು ಸಂಕಲನದ ಮೂಲಕ ಹೊರಬಂದಿವೆ.


ಸಾಕ್ರೆಟಿಸ್ ಮತ್ತಿತರ ಕತೆಗಳು

ಸಿ.ಎಸ್.ದ್ವಾರಕಾನಾಥ್

ಪುಟ: 136 ಬೆಲೆ: ರೂ.140

ಪಾಂಚಾಲಿ ಪಬ್ಲಿಕೇಷನ್ಸ್

ಸಂಪರ್ಕ: 9900119080

ಇನ್ನೂ ಮುನ್ನೆಲೆಗೆ ಬಾರದ, ಯಾರೂ ಕಾಣದ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳ ವ್ಯಥೆಯನ್ನೆ ಕತೆಗಳನ್ನಾಗಿ ಮಾಡಿ ಹೆಣೆಯಲಾಗಿದೆ. ಎಸ್ ಆರ್ ಕೆ ಮೆನ್ಸ್ ಬ್ಯೂಟಿಪಾರ್ಲರ್, ಮಿಸಾಂಡ್ರಿ, ಸಲ್ಮಾ, ಭಾನುಮತಿ, ಮಗಳು ಫಾತಿಮಾ ಸೇರಿದಂತೆ 10 ಕತೆಗಳು ಇಲ್ಲಿವೆ. ಹತ್ತು ಕತೆಗಳಿಗೂ ಹತ್ತು ಮಂದಿ ಖ್ಯಾತ ಕಲಾವಿದರು ರೇಖಾ ಚಿತ್ರಗಳನ್ನು ಬರೆದಿರುವುದು ಇಲ್ಲಿನ ವಿಶೇಷ. ಅಲೆಮಾರಿ, ಆದಿವಾಸಿ, ಅಸ್ಪೃಶ್ಯ ಜಗತ್ತಿನ ಸಾಕಷ್ಟು ಅಜ್ಞಾತ ಕತೆಗಳನ್ನು ನಾನು ಅಕ್ಷರಗಳಲ್ಲಿ ಕಟ್ಟಿ ಕೊಡಲು ಹೊರಟಿದ್ದೇನೆ ಎಂಬುದು ಲೇಖಕರ ಮಾತು.


ಪರಮಪದ ಸೋಪಾನಪಟ

ಆರು ನೋಟಗಳ ಒಂದು ನಿಶಾನಾಟಕ

ಅಕ್ಷರ ಕೆ.ವಿ.

ಪುಟ: 68 ಬೆಲೆ: ರೂ.80

ಅಕ್ಷರ ಪ್ರಕಾಶನ, ಹೆಗ್ಗೋಡು.

ಸಂಪರ್ಕ: 9480280401

ಹಲವು ವರ್ಷಗಳಿಂದ ನನ್ನ ತಲೆಯಲ್ಲಿ ಕೂತು ಬೇರೆ ಬೇರೆಬೇರೆ ರೂಪಗಳಲ್ಲಿ ಹೊರಗೆ ಬರಲಿಕ್ಕೆ ಹವಣಿಸುತ್ತಿದ್ದ ನಾಟಕವು ಈಗ ಪ್ರಸ್ತುತ ರೂಪದಲ್ಲಿ ಮೈದಾಳಿಕೊಂಡಿದೆ ಎಂದು ನಾಟಕದ ಕರ್ತೃ ಪ್ರಾರಂಭದಲ್ಲಿ ಹೇಳಿಕೊಂಡಿದ್ದಾರೆ. ಆರು ಅಂಕಗಳನ್ನು ಹೊಂದಿರುವ ನಾಟಕ ಇದಾಗಿದ್ದು ಅಸಂಗತ ಸನ್ನಿವೇಶಗಳನ್ನು ವಿವರಿಸುತ್ತಾ ಗೋಪಾಲಕೃಷ್ಣ ಅಡಿಗರ ಕವಿತೆಯೊಂದಿಗೆ ಮುಕ್ತಾಯವಾಗುತ್ತದೆ.


ರಠಈಕ

ಆತ್ಮಕತೆ

ರವಿ ಹಂಜ್

ಪುಟ: 272 ಬೆಲೆ: ರೂ.250

ಮೊದಲ ಮುದ್ರಣ: 2021

ಸಂವಹನ ಪ್ರಕಾಶನ

ಸಂಪರ್ಕ: 0821-2476019

ಮಾನವ ಹುಟ್ಟು ಕುತೂಹಲಿ. ಎಲ್ಲರಂತೆಯೇ ಅವನು ನೋಡುತ್ತಾ, ಮುಟ್ಟುತ್ತಾ, ನೆಕ್ಕುತ್ತಾ ಕುತೂಹಲವನ್ನು ತಣಿಸುತ್ತಾ ಬೆಳೆವ ಪರಿಯೇ ಮಾನವತೆಯ ಮೂಲ ಅಂತಹ ಸಾಮಾನ್ಯ ಬಾಲಕ, ಮಾನವ ಸಹಜ ಕುತೂಹಲದಿಂದ ತನ್ನ ಸುತ್ತಲಿನ ತನ್ನ ಸುತ್ತಲಿನ ಸಮಾಜವನ್ನು ನೋಡುತ್ತಾ, ಕೇಳುತ್ತ, ಮುಟ್ಟುತ್ತಾ ಹೇಗೆ ಸಮಾಜದ ಅಂಗವಾಗಿ ಬೆಳೆದ ಎಂಬಂತಹ ನಮ್ಮದೂ ಇದೇ ಕತೆಯೆನಿಸುವ ಸಾಮಾನ್ಯ ಕತೆಯ ಒಂದು ತುಣುಕು ಜೀವನಕತೆಯಾಗಿದೆ ಎಂದು ಸ್ವತಃ ಲೇಖಕರೇ ಹೇಳಿದ್ದಾರೆ.

Leave a Reply

Your email address will not be published.