ನೂರರ ಸಂಭ್ರಮದಲ್ಲಿನ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಕೀರ್ಣ ಸೈದ್ಧಾಂತಿಕ ಸವಾಲುಗಳು

ಡಾ.ಬಿ.ಆರ್.ಮಂಜುನಾಥ್

ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಇದೀಗ ನೂರು ವರ್ಷ ತುಂಬಿದೆ. ಒಂದು ರಾಜಕೀಯ ಪಕ್ಷದ ಶತಮಾನೋತ್ಸವ ನಿಜಕ್ಕೂ ಅಷ್ಟು ದೊಡ್ಡ ಸುದ್ದಿಯಾಗಬೇಕೇ, ಅದೂ ಯಾವುದೋ ದೇಶದ್ದು? ಹೌದು, ಇದಕ್ಕೆ ಸಕಾರಣವಿದೆ.

ಚೀನಾದ ಸಂದರ್ಭದಲ್ಲಿ ಅಲ್ಲಿನ ಆಡಳಿತ ಪಕ್ಷ ಬೇರೆಯಲ್ಲ ಅಲ್ಲಿನ ವ್ಯವಸ್ಥೆ ಬೇರೆಯಲ್ಲ ಮತ್ತು ಇದೀಗ ಚೀನಾ ವಿಶ್ವದ ಎರಡನೇ ಅತಿದೊಡ್ಡ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ. ಪ್ರಬಲ ಮಿಲಿಟರಿ ಅಲ್ಲಿದೆ. ಅನೇಕ ಕ್ಷೇತ್ರಗಳಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ. ಚೀನೀಯರು ಈಗ ಎದೆಯುಬ್ಬಿಸಿ ಶತಮಾನ ನಮಗೆ ಸೇರಿದ್ದು ಎನ್ನಲಾರಂಭಿಸಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಇಲ್ಲಿಯವರೆಗೂ ಚೀನಾ ದಾಪುಗಾಲಿನಲ್ಲಿ ಮುಂದೆ ನುಗ್ಗಿದೆ. ಆದರೆ ಇನ್ನು ಮುಂದೆ ಪರಿಸ್ಥಿತಿ ಹೀಗೇ ಇರುತ್ತದೆಯೇ? ಇದನ್ನು ಉತ್ತರಿಸಲು ಚೀನಾದ ಭೂತ, ವರ್ತಮಾನ, ಭವಿಷ್ಯತ್ಗಳನ್ನು ಅವಲೋಕಿಸಬೇಕಾಗುತ್ತದೆ.

ಹಿನ್ನೆಲೆ

1980 ದಶಕದವರೆಗೂ ವಿಶ್ವದ ಎಲ್ಲೆಡೆ ಚೀನಾದ ಬಗ್ಗೆ ವಿಪರೀತ ಕುತೂಹಲ ಇತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಎಲ್ಲರಿಗೂ ಬೇಕಿತ್ತು. ಎಡಪಂಥೀಯರಲ್ಲಿ ಒಂದು ಭಾಗ ಸೋವಿಯತ್ ಒಕ್ಕೂಟದ ಬಗ್ಗೆ ಒಲವನ್ನು ಹೊಂದಿದ್ದರೆ, ಇನ್ನೊಂದು ಭಾಗಕ್ಕೆ ಚೀನಾ ಮಾತ್ರ ಸಮಾಜವಾದಿ ಪದ್ಧತಿಯನ್ನು ಮತ್ತು ಮಾಕ್ರ್ಸ್ವಾದಿ ಸಿದ್ಧಾಂತವನ್ನು ಸರಿಯಾಗಿ ಎತ್ತಿಹಿಡಿಯುತ್ತಿದೆ ಎಂಬ ಅಭಿಪ್ರಾಯವಿತ್ತು. ಆಗಷ್ಟೇ ಎಂದರೆ 1976 ರಲ್ಲಿ ದೇಶದ ಮಹಾನ್ ನಾಯಕ ಎಂದೇ ಗುರುತಿಸಲ್ಪಟ್ಟ ಮಾವೋ eóÉಡಾಂಗ್ ನಿಧನ ಹೊಂದಿದ್ದರು. ಅವರ ನಿಧನದ ನಂತರ ಹುವಾ ಗುವೊ  ಅಧಿಕಾರಕ್ಕೆ ಬಂದರು. ಎಲ್ಲಾ ಮಾವೊಕಾಲದಲ್ಲಿ ನಡೆದಂತೆಯ ನಡೆಯುತ್ತಿದೆ ಅನಿಸಿತ್ತು. ಆದ್ದರಿಂದ ಮತ್ತೊಮ್ಮೆ ಜಗತ್ತಿನ ಪ್ರತಿಕ್ರಿಯೆ ತಣ್ಣಗಾಗುತ್ತಾ ಬಂತು.

ಅಷ್ಟರಲ್ಲಿ ಎಂದರೆ 1980 ಹೊತ್ತಿಗೆ ಡೆಂಗ್ ಕ್ಷಿಯಾವೋ ಪೆಂಗ್ ಪಕ್ಷದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಬಲಿಷ್ಠರಾಗಿ ಹೊರಹೊಮ್ಮಿದರು. ಡೆಂಗ್ರವರು ಮಾವೊ ಕಾಲದಲ್ಲಿ ಪಕ್ಕಕ್ಕೆ ಸರಿಸಲ್ಪಟ್ಟವರು. ಅದಕ್ಕೆ ಕಾರಣಗಳಿವೆ. ಡೆಂಗ್ ರಾಜಕೀಯ ಗುರು ಎನ್ನಬಹುದಾದ ಲಿಯು ಶಾವೊ ಕಿ ಎನ್ನುವವರು ಚೀನಾದ ಸಾಂಸ್ಕತಿಕ ಕ್ರಾಂತಿಯ ಘಟ್ಟದಲ್ಲಿ ಎಂದರೆ 1966 ನಂತರದಲ್ಲಿ ಪಕ್ಷದ ನಾಯಕತ್ವದಿಂದ ತೀವ್ರವಾಗಿ ಟೀಕೆಗೊಳಗಾಗಿ ಪದಚ್ಯುತರಾದರು. ಒಂದು ಕಾಲದಲ್ಲಿ ಪಕ್ಷದಲ್ಲಿ ಮಾವೊ ಮತ್ತು ಪ್ರಧಾನಿ ಚೌ ಎನ್ ಲೈ ನಂತರದ ಮುಖ್ಯಸ್ಥಾನದಲ್ಲಿದ್ದ ಲಿಯು ತುಂಬಾ ಪ್ರತಿಭಾವಂತರು. 1949 ಮಹಾಕ್ರಾಂತಿಯ ಘಟ್ಟದಲ್ಲಿ ಇವರು ಮೂವರೂ ಮತ್ತು ಜನರಲ್ û ಡೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಅಂದಿನ ಚೀನಾ ಪಾಳೆಯಗಾರಿ ಪದ್ಧತಿಗೂ, ಸಾಮ್ರಾಜ್ಯಶಾಹಿ ಶೋಷಣೆಗೂ ಒಳಗಾಗಿ ಅತ್ಯಂತ ಹೀನ ಪರಿಸ್ಥಿತಿಗೆ ತುತ್ತಾಗಿದ್ದಾಗ ನಾಯಕರೆಲ್ಲಾ ಒಂದಾಗಿ 1921 ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿದ್ದರು. ಇವರೇ ನಂತರ ಪ್ರಭುತ್ವಗಳ ದಮನವನ್ನು ಎದುರಿಸಿ ವಿಮೋಚನೆಯನ್ನು ಸಾಧಿಸಲು ವಿಶ್ವವಿಖ್ಯಾತ ಕೆಂಪು ಸೈನ್ಯವನ್ನು ಕಟ್ಟಿದವರು. ತಮ್ಮ ಸೈನ್ಯಗಳೊಂದಿಗೆ ಬೆಟ್ಟ, ಗುಡ್ಡ, ಕಾಡು, ಮರುಭೂಮಿ, ನದಿಗಳನ್ನು ದಾಟುತ್ತಾ, ಹತ್ತು ಸಾವಿರ ಕಿಲೋಮೀಟರ್ ನಡೆದು (ಲಾಂಗ್ ಮಾರ್ಚ್) ಕಡೆಗೂ ಹೊಸ ಸಮಾಜವಾದವನ್ನು ಸ್ಥಾಪಿಸಿದವರು. ಅವರ ಧೈರ್ಯ, ಸಾಹಸ ಅತ್ಯಂತ ರೋಚಕ ಕಥೆ. ಸ್ವತಃ ಮಾವೊ ಕ್ರಾಂತಿಗಾಗಿ ಹೆಂಡತಿ, ಮಕ್ಕಳು, ತಮ್ಮ, ಅಜ್ಜಿ ಎಲ್ಲರನ್ನೂ ಕಳೆದುಕೊಂಡರು. ಪ್ರೀತಿಯ ದೊಡ್ಡ ಮಗನನ್ನು ಕೊರಿಯಾ ವಿಮೋಚನೆಗಾಗಿ ಕಳಿಸಿದಾಗ ಆತ ಅಲ್ಲಿ ಹುತಾತ್ಮನಾದ. ಲಿಯು ಶಾ ವೊ ಕಿ ಕೂಡ ಅಸಾಧಾರಣ ವ್ಯಕ್ತಿ. ಆತನ ಸೈದ್ಧಾಂತಿಕ ಮಟ್ಟವನ್ನು, ಅವನು ರಚಿಸಿದ ಕೃತಿಗಳನ್ನು ಸ್ವತಃ ಮಾವೊ ಗೌರವಿಸುತ್ತಿದ್ದರು.

ಡೆಂಗ್ ಗುರು ಲಿಯು

ಆದರೆ ಕ್ರಾಂತಿಯಾದ ಮೊದಲ ದಶಕದ ನಂತರ ಅವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಂತೆ ಅನಿಸುತ್ತದೆ. ಮಾವೊ ಆದಷ್ಟು ಬೇಗ ಎಲ್ಲ ಜಮೀನು, ಕೈಗಾರಿಕೆಗಳನ್ನು ವ್ಯಕ್ತಿಗತ ಮಾಲಿಕತ್ವದಿಂದ ಬಿಡುಗಡೆಗೊಳಿಸಬೇಕು ಎಂದು ಬಯಸಿದವರು. ಜನರ ಸಾಂಸ್ಕøತಿಕ ಮಟ್ಟವನ್ನು, ಸಮಾಜಕ್ಕಾಗಿ ತ್ಯಾಗ ಮಾಡಬಲ್ಲ, ಹೆಚ್ಚಿಗೆ ದುಡಿಯಬಲ್ಲ ಮನೋಭಾವವನ್ನು ಬೆಳೆಸಬೇಕು. ಮನುಷ್ಯನ ಮನಸ್ಸಿನಿಂದ ಲಾಭದ ಆಸೆ, ಸ್ವಾರ್ಥಗಳನ್ನು ನಿರ್ಮೂಲನಗೊಳಿಸಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಅವರು ಭಾವಿಸಿದರು.

ಆದರೆ ಲಿಯು ಶಾ ವೊ ಕಿ ಚಿಂತನೆ ಇದಕ್ಕಿಂತ ಭಿನ್ನ. ಅವರಿಗನ್ನಿಸಿದ್ದು ಲಾಭದ ಆಸೆ ಮತ್ತು ಮೇಲೆ ಬರಬೇಕು ಎಂಬ ವೈಯಕ್ತಿಕ ಉತ್ಸಾಹಗಳನ್ನು ಬೆಳೆಯಲು ಬಿಡಬೇಕು. ಖಾಸಗಿ ಬಂಡವಾಳದ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ದೇಶ ಸಾಕಷ್ಟು ಮುಂದುವರೆದ ಮೇಲೆ ಮಾತ್ರ ಸಾಮಾಜೀಕರಣಸೋಷಿಯಲೈಸೇಶನ್ ಸಾಧ್ಯ. ಆದ್ದರಿಂದ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲೇ ಬಂಡವಾಳದ ಮಾರ್ಗವನ್ನು ಅನುಸರಿಸಬೇಕು. ನಿಲುವಿನಿಂದಾಗಿ ಅವರಿಗೆಕ್ಯಾಪಿಟಲಿಸ್ಟ್ ರೋಡರ್(ಬಂಡವಾಳಶಾಹಿ ಮಾರ್ಗದ ಪ್ರತಿಪಾದಕ) ಎಂಬ ಹೆಸರು ಅಂಟಿಕೊಂಡಿತು. ಡೆಂಗ್ ಜಿಯೊ ಪೆಂಗ್ರು ಮಾರ್ಗವನ್ನೇ ಎತ್ತಿಹಿಡಿದು ಲಿಯು ಅವರ ಅನುಯಾಯಿಯಾಗಿದ್ದರು. ಇಂಥ ಸಂದರ್ಭದಲ್ಲಿ ಎಲ್ಲ ಹಳೆಯ ಮೌಲ್ಯಗಳನ್ನು ಎಂದರೆ ಊಳಿಗಮಾನ್ಯ ಪದ್ಧತಿಯ ಹಾಗೂ ಬಂಡವಾಳಶಾಹಿ ವ್ಯವಸ್ಥೆಯ ಮೌಲ್ಯಗಳನ್ನು ನಿರ್ಮೂಲನ ಮಾಡುವ ಘೋಷಿತ ಉದ್ದೇಶದಿಂದ ಮಾವೋ, ಸಾಂಸ್ಕøತಿಕ ಕ್ರಾಂತಿಯನ್ನು ಆರಂಭಿಸಿದರು. ಆದರೆ ಕ್ರಾಂತಿಯ ಒಂದು ಮುಖ್ಯ ಉದ್ದೇಶವೆಂದರೆ ಲಿಯು ಶಾವೊಕಿ ಬಣದ ಪ್ರಭಾವವನ್ನು ಕುಗ್ಗಿಸುವುದೇ ಆಗಿತ್ತು.

ಸಾಂಸ್ಕøತಿಕ ಕ್ರಾಂತಿಯ ಕಾಲದಲ್ಲಿ ವಿಪರೀತ ಅತಿರೇಕಗಳು, ಅತ್ಯುತ್ಸಾಹದ ದೌರ್ಜನ್ಯಗಳು ನಡೆದವು ಎಂಬ ಪ್ರಚಾರವಿದೆ. ವಿಶೇಷವಾಗಿ ಪಾಶ್ಚಾತ್ಯ ಮಾಧ್ಯಮಗಳಲ್ಲಿ ಇದನ್ನು ದಶಕಗಳಿಂದಲೂ ಹೇಳಲಾಗಿದೆ. ಸಮಯದಲ್ಲಿ ಅಧಿಕಾರದಿಂದ ದೂರವಿದ್ದ ಡೆಂಗ್ 1978 ನಂತರ ಪುನರ್ಸ್ಥಾಪಿತರಾದರು. ಈಗ ಅವರು ಮತ್ತೊಮ್ಮೆ ಆರ್ಥಿಕ ಪ್ರಗತಿಯ ಕುರಿತಾದ ತಮ್ಮ ಹಳೆಯ ಸಿದ್ಧಾಂತವನ್ನು ಮುನ್ನೆಲೆಗೆ ತಂದರು.

ಡೆಂಗ್ ಸುಧಾರಣಾ ಕ್ರಮಗಳು

ಮಾವೊ ಮತ್ತು ಚೀನಾದ ಇತರ ನಾಯಕರು ಆಕರ್ಷಕ ಘೋಷಣೆಗಳಿಗೆ ಹೆಸರುವಾಸಿ. ಅವು ಥಟ್ಟೆಂದು ಜನಮಾನಸವನ್ನು ತಲುಪುತ್ತವೆ ಮತ್ತು ಬಹಳ ಕಾಲ ಅಲ್ಲಿ ಸ್ಥಾಪಿತವಾಗುತ್ತವೆ. ‘ಬೆಕ್ಕು ಇಲಿಯನ್ನು ಹಿಡಿಯುವುದು ಮುಖ್ಯ. ಅದರ ಬಣ್ಣ ಕಪ್ಪೋ, ಬಿಳುಪೋ ಎಂಬುದು ಮುಖ್ಯವಲ್ಲ. ಇದು ಡೆಂಗ್ ಜಿಯೊವೊ ಪಿಂಗ್ ಹೆಸರಾಂತ ಹೇಳಿಕೆ. ಇದರ ಅರ್ಥ ಇಷ್ಟೇ: ಚೀನಾ ಸಂಪದ್ಭರಿತ ರಾಷ್ಟ್ರವಾಗುವುದು ಮುಖ್ಯ. ನಾವು ಎಷ್ಟರಮಟ್ಟಿಗೆ ಶುದ್ಧ ಮಾಕ್ರ್ಸ್ವಾದಕ್ಕೆ ಅಂಟಿಕೊಂಡಿದ್ದೇವೆ ಎಂಬುದು ಮುಖ್ಯವಲ್ಲ. ಆದ್ದರಿಂದ ಡೆಂಗ್ ಚೀನಾದ ಉತ್ಪಾದನಾ ವ್ಯವಸ್ಥೆ ಆಧುನಿಕವಾಗಬೇಕು ಎಂದು ಬಯಸಿದರು. ಅದಕ್ಕಾಗಿ ಮುಂದುವರೆದ ತಂತ್ರಜ್ಞಾನ ಬೇಕಾಗಿತ್ತು. ಒಂದಷ್ಟು ಬಂಡವಾಳವೂ ಬೇಕಿತ್ತು. ಇದಕ್ಕಾಗಿ ಕೆಲವೊಂದು ರಾಜಿಮಾಡಿಕೊಳ್ಳಲು ಚೀನಾ ಸಿದ್ಧವಾಯಿತು.

ಅಲ್ಲಿಯವರೆಗೂ ಜಗತ್ತಿನಾದ್ಯಂತ ಸಮಾಜವಾದಿ ಆರ್ಥಿಕತೆ ಮತ್ತು ಮಾರುಕಟ್ಟೆ ಆರ್ಥಿಕತೆ ಎಣ್ಣೆಸೀಗೇಕಾಯಿ ಎಂಬುದು ಮಾಕ್ರ್ಸ್ವಾದಿ ನಿಲುವಾಗಿದ್ದರೆ, ಡೆಂಗ್ ಈಗ ಮೊದಲಬಾರಿಸಮಾಜವಾದಿ ಮಾರುಕಟ್ಟೆ ಆರ್ಥಿಕತೆಎಂಬ ಹೊಸ ಪರಿಕಲ್ಪನೆಯನ್ನು ಮುಂದಿಟ್ಟರು. ಅದನ್ನುಚೀನಾದ ವೈಶಿಷ್ಟ್ಯಗಳೊಂದಿಗೆ ಸಮಾಜವಾದಎಂದು ಕರೆದರು. ಚೀನಾದೊಳಗೆ ಬರಲು ಅಮೆರಿಕಾ ಮೊದಲಾದ ದೇಶಗಳ ಕಂಪನಿಗಳನ್ನು ಆಹ್ವಾನಿಸಲಾಯಿತು. ಚೀನಾದ ಕಾರ್ಮಿಕ ಕಾನೂನುಗಳು ಅನ್ವಯಿಸದಿರುವ, ವಿದೇಶಿ ಬಂಡವಾಳಕ್ಕೆ ಉತ್ತೇಜನ ನೀಡುವಂಥ ವಾತಾವರಣವಿರುವಮುಕ್ತ ಆರ್ಥಿಕ ವಲಯಗಳನ್ನು ಸೃಷ್ಟಿಸಲಾಯಿತು. ಇದಕ್ಕಾಗಿ ಮುಂದಿಟ್ಟ ಘೋಷಣೆ, ‘ಒಂದು ದೇಶಎರಡು ವ್ಯವಸ್ಥೆ.

ನಾಲ್ಕು ದಶಕಗಳ ಬದಲಾವಣೆ

ಕಳೆದ ನಾಲ್ಕು ದಶಕಗಳಲ್ಲಿ ಚೀನಾ ತನ್ನ ಟೀಕಾಕಾರರುವೈರಿಗಳು ಸಹ ಬೆಕ್ಕಸಬೆರಗಾಗಿ ಮೆಚ್ಚಿಕೊಳ್ಳಬೇಕಾದ ಆರ್ಥಿಕ ಸಾಧನೆಗಳನ್ನು ಮಾಡಿಬಿಟ್ಟಿದೆ. ಚೀನಾದ ಒಟ್ಟು ರಾಷ್ಟ್ರೀಯ ಉತ್ಪನ್ನ ಈಗ 16.4 ಟ್ರಿಲಿಯನ್ ಡಾಲರ್, ಜಗತ್ತಿನ ಅಂತರ್ಜಾಲ ವಾಣಿಜ್ಯ (ಕಾಮರ್ಸ್) ಶೇಕಡಾ 44 ಭಾಗವನ್ನು ಕೇವಲ ನಾಲ್ಕು ದೈತ್ಯ ಚೀನಾ ಕಂಪನಿಗಳು ಕಬಳಿಸಿವೆ. 1980 ರಲ್ಲಿ ಚೀನಾದ ತಲಾವಾರು ಆದಾಯ 250 ಡಾಲರ್ಗಳಿದ್ದದ್ದು ಇಂದು 2020ರಲ್ಲಿ ಹತ್ತು ಸಾವಿರ ಡಾಲರ್ ತಲುಪಿದೆ ಎಂಬುದು ದಿಗ್ಭ್ರಮೆಗೊಳಿಸುವಂತಹ ಮಾಹಿತಿ. ಚೀನಾ ಈಗ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ. ಆರ್ಥಿಕತಜ್ಞ, ವರದಿಗಾರರಾದ ಸ್ವಾಮಿನಾಥನ್ ಅಂಕಲೇಸಾರಿಯ ಅಯ್ಯರ್ರವರ ಪ್ರಕಾರ ಅದು ಈಗಾಗಲೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಡಾಲರ್ಗಳ ಲೆಕ್ಕಾಚಾರದಲ್ಲಿ ಸಹ ಸದ್ಯದಲ್ಲೆ ಅಮೆರಿಕಾವನ್ನು ಮೀರಿಸಲಿದೆ. 2036ಕ್ಕೆ ಚೀನಾದ ಅರ್ಥಿಕತೆ ಅಮೆರಿಕಾವನ್ನು ಸಂಪೂರ್ಣ ಹಿಂದಿಕ್ಕಲಿದೆ ಎಂದು ಎಲ್ಲರೂ ಒಪ್ಪುತ್ತಾರೆ.

ಈಗಾಗಲೇ ಚೀನಾ ಸೌರ ವಿದ್ಯುತ್ ಕ್ಷೇತ್ರದಲ್ಲಿ ಜಗತ್ತಿನ ನಂಬರ್ ಒನ್ ಆಗಿದೆ. ಮತ್ತು ಇದು ಭವಿಷ್ಯತ್ತಿನ ಶಕ್ತಿಮೂಲವೂ ಹೌದು. ಅತ್ಯಂತ ಮಾಲಿನ್ಯ ರಹಿತ ಶಕ್ತಿಮೂಲವೂ ಹೌದು. ಉಷ್ಣ ದೇಶಗಳಲ್ಲಿ ಅತ್ಯಂತ ಅಗ್ಗವಾದ ಶಕ್ತಿ ಅನೇಕ ದೇಶಗಳ ಆರ್ಥಿಕ ಮುಂಜಿಗಿತಕ್ಕೆ ಕಾರಣವಾಗಬಹುದು. ‘ನಾಲ್ಕನೆಯಕೈಗಾರಿಕಾ ಕ್ರಾಂತಿಗೆ ಇದೇ ಪ್ರೇರಕವಾಗುತ್ತದೆ ಎಂದೂ ಹೇಳುತ್ತಾರೆ. ಬ್ಯಾಟರಿ ಸಂಗ್ರಹಣಾ ಶಕ್ತಿ ಹಾಗೂ 5-ಜಿ ತಂತ್ರಜ್ಞಾನದಲ್ಲೂ ಚೀನಾಗೆ ಪ್ರಥಮ ಸ್ಥಾನ. 2020 ಅಂತ್ಯದ ವೇಳೆಗೆ ಚೀನಾದಲ್ಲಿ ಅಂತರ್ಜಾಲದ ಬಳಕೆದಾರರ ಸಂಖ್ಯೆ ನೂರು ಕೋಟಿಗೆ ಹತ್ತಿರವಾಗಿದೆ..! 5 ಮತ್ತು 6 ನೇ ತಲೆಮಾರಿನ ತಂತ್ರಜ್ಞಾನವನ್ನು ಈಗ ಚೀನಾ ಸಾಧಿಸಿದೆ.

ಯಶಸ್ಸಿನ ಹಿಂದಿನ ಯೋಜನೆ

1949 ರಲ್ಲಿ ಚೀನಾದ ಸಮಾಜವಾದಿ ವ್ಯವಸ್ಥೆ ಸ್ಥಾಪಿತವಾಗುವಾಗ ಮಾವೊ-eóÉ-ಡಾಂಗ್ ಜನರ ಮುಂದಿಟ್ಟ ಘೋಷಣೆ, “ಚೀನಾ ಎದ್ದು ನಿಂತಿದೆ. ನೂರಾರು ವರ್ಷಗಳ ಕಾಲ ಹೊರಗಿನವರ ಶೋಷಣೆಯ ಅಡಿಯಲ್ಲಿ ನಲುಗಿದ್ದ ಜನತೆಯ ಎದುರು ಧ್ವನಿಸಿದ್ದ ಸ್ವಾಭಿಮಾನದ ಘೋಷಣೆ ಅದು. ನಂತರ ಚೀನಾಶ್ರೀಮಂತರಾಷ್ಟ್ರವಾಗಬೇಕೆಂಬ ಕನಸನ್ನು ಎತ್ತಿಹಿಡಿಯಲಾಯಿತು. ಈಗಂತೂ ಚೀನಾ ಜಗತ್ತಿನ ನಾಯಕ ರಾಷ್ಟ್ರವಾಗಬೇಕೆಂಬ ಗುರಿಯನ್ನು ಜನರ ಮುಂದಿಡಲಾಗಿದೆ.

80 ದಶಕದಲ್ಲಿ ಚೀನಾ ದಾರಿಗೆ ಹೊರಳಿ ಕೊಂಡಾಗ ಡೆಂಗ್ ಮತ್ತು ಕಮ್ಯುನಿಸ್ಟ್ ಪಕ್ಷ ಜನರ ಎದುರುನಾಲ್ಕು ಅಧುನೀಕರಣಗಳುಎಂಬ ಯೋಜನೆಯನ್ನು ಮುಂದಿಟ್ಟರು. ಅದೆಂದರೆ ಕೃಷಿ, ಕೈಗಾರಿಕೆ, ಮಿಲಿಟರಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅತ್ಯಂತ ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು. ಇದಕ್ಕನುಗುಣವಾದ ವಿಸ್ತಾರವಾದ ಯೋಜನೆ ತಯಾರಾಗಿದ್ದಲ್ಲದೆ ಶಿಕ್ಷಣವನ್ನು ಸಂಪೂರ್ಣವಾಗಿ ನವೀಕರಿಸಲಾಯಿತು. ಚೀನೀಯರು ಎಲ್ಲ ಕ್ಷೇತ್ರಗಳಲ್ಲಿನ ಯಂತ್ರಗಳನ್ನು, ಗ್ಯಾಡ್ಜೆಟ್ಗಳನ್ನೂ ಬಿಚ್ಚಿ ಅದರ ಸೂಕ್ಷ್ಮಗಳನ್ನು ಅರಿತು ಅದನ್ನು ತಾವೇ ಉತ್ಪಾದಿಸುವರಿವರ್ಸ್ ಎಂಜಿನಿಯರಿಂಗ್ನಲ್ಲಿ ನಿಷ್ಣಾತರಾದರು. ಆದರೆ ಅವರು ಇಷ್ಟಕ್ಕೇ ಸೀಮಿತವಾಗಿದ್ದರೆ ಪಾಶ್ಚಾತ್ಯ ಜಗತ್ತಿನವರ್ಕ್ಶಾಪ್(ಕಾರ್ಯಾಗಾರ) ಆಗುವುದಕ್ಕೆ ತೃಪ್ತರಾಗಬೇಕಾಗುತ್ತಿತ್ತು. ಮುಂದುವರೆದ ರಾಷ್ಟ್ರಗಳು ಅವರ ಬಗ್ಗೆ ಭಾವಿಸಿದ್ದದ್ದೂ ಹಾಗೆಯೇ. ಆದರೆ ಚೀನಾ ಸದ್ದಿಲ್ಲದೆ ಎಲ್ಲ ರಂಗಗಳಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿಗೂ ಒತ್ತು ನೀಡಿತ್ತು.

ಪರಿಸರ ನಾಶ ಮತ್ತು ಅಗ್ಗದ ಶ್ರಮ

ಮೇಲೆ ಹೇಳಿದ ಅಂಶಗಳೊಂದಿಗೆ ಇನ್ನೆರೆಡು ಅಂಶಗಳನ್ನು ಹೆಸರಿಸದಿದ್ದರೆ ಚೀನಾದಆರ್ಥಿಕ ಪವಾಡ ಚಿತ್ರಣ ಅಪೂರ್ಣವಾಗುತ್ತದೆ. ಅದೆಂದರೆ ಚೀನಾ ಜಾಗತಿಕ ಮಾರುಕಟ್ಟೆಯ ದೊಡ್ಡ ಭಾಗವನ್ನು ಕಬಳಿಸಲು ತನ್ನ ಜನರನ್ನೂ, ನೃಸರ್ಗಿಕ ಸಂಪನ್ಮೂಲಗಳನ್ನೂ ದುಡಿಸಿಕೊಂಡ ರೀತಿ.

ಚೀನಾದಲ್ಲಿ ಕಾರ್ಮಿಕರ ಹಕ್ಕುಗಳ ಮೇಲೆ ಬಹಳ ದೊಡ್ಡ ಪ್ರಹಾರ ನಡೆಯಿತು. ಅತ್ಯಂತ ಕಡಿಮೆ ಕೂಲಿಗೆ, ಅತಿ ಹೆಚ್ಚು ಗಂಟೆಗಳ ಕಾಲ, ಅನೇಕ ರಕ್ಷಣಾ ಮುನ್ನೆಚ್ಚರಿಕೆಗಳಿಲ್ಲದೆ ಅಲ್ಲಿನ ಕಾರ್ಮಿಕರನ್ನು ತನ್ನನ್ನು ತಾನು ಸಮಾಜವಾದಿ ಎಂದು ಕರೆಸಿಕೊಳ್ಳುವ ಚೀನಾ ದುಡಿಸಿಕೊಂಡಿದೆ. ಅಲ್ಲದೆ ತನ್ನ ದೇಶದ ಖನಿಜಗಳನ್ನು ಯದ್ವಾತದ್ವಾ ಹೊರಗೆ ತೆಗೆದಿದೆ, ಗಾಳಿ ಮತ್ತು ಜಲ ಮಾಲಿನ್ಯದ ಬಗ್ಗೆ ಅದು ಸ್ವಲ್ಪವೂ ಕಾಳಜಿ ವಹಿಸಲಿಲ್ಲ. ಇದರ ಕುರಿತು ಪಾಶ್ಚಾತ್ಯ ರಾಷ್ಟ್ರಗಳ ವರದಿಗಳಲ್ಲಿ ಉತ್ಪ್ರೇಕ್ಷೆ ಇರಬಹುದು, ಹೊಟ್ಟೆ ಉರಿ ಇರಬಹುದು. ಆದರೆ ಇದೆಲ್ಲಾ ಒಂದುಮಟ್ಟಿಗೆ ಸತ್ಯವೂ ಹೌದು. ಜನರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ ಎಂಬುದೂ ಸತ್ಯವೇ.

ಆದರೆ ಎಲ್ಲಾ ಕಾರಣಗಳಿಂದಲೂ ಚೀನಾದ ವ್ಯವಸ್ಥೆ ಕುಸಿದು ಬಿಡುತ್ತದೆ ಎಂದು ಪಾಶ್ಚಾತ್ಯ ರಾಜನೀತಿಜ್ಞರು, ಭವಿಷ್ಯವಾಣಿ ಹೇಳುತ್ತಲೇ ಬಂದಿದ್ದರೂ ಚೀನಾದ ರಾಜಕೀಯ ವ್ಯವಸ್ಥೆ ಭದ್ರವಾಗೇ ಇದೆ. ಇದರ ಹಿಂದಿನ ಕಾರಣಗಳೇನು?

ಚೀನಾದ ನಾಯಕರು ಜನರನ್ನು ಎದುರು ಹಾಕಿಕೊಳ್ಳಬಾರದು, ಅವರನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು ಎಂಬ ಜಾಣತನದ ಮಾರ್ಗವನ್ನೂ ಹುಡುಕಿಕೊಂಡರು. “ನದಿಯ ಪಾತ್ರದಲ್ಲಿನ ಕಲ್ಲುಗಳನ್ನು ಪಾದಗಳಿಂದ ತಡವುತ್ತಾ ನಡೆಯಬೇಕುಎಂಬುದು ಡೆಂಗ್ ಇನ್ನೊಂದು ಪ್ರಸಿದ್ಧ ಹೇಳಿಕೆ. ಎಂದರೆ ವಾಸ್ತವ ಪರಿಸ್ಥಿತಿಗಳನ್ನು ಗ್ರಹಿಸುತ್ತಾ ಒಂದೊಂದೇ ಹೆಜ್ಜೆ ಮುಂದಿಡಬೇಕೇ ಹೊರತು ಅಬ್ಬರದ ಯೋಜನೆ, ಗುರಿಗಳನ್ನು ಕೈಗಿತ್ತಿಕೊಳ್ಳಬಾರದು. ಇದರಲ್ಲಿ ಅವರು ಸಫಲರಾಗಿದ್ದಾರೆ. ಅಲ್ಲದೆ ಜನರ ಜೀವನಮಟ್ಟವನ್ನು ಮೇಲೆತ್ತುತ್ತಾ, ಅವರಿಗೆ ಹೊಸ ಸಾಧನ ಗಳನ್ನು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆಮಧ್ಯಮವರ್ಗದ ಅಪೇಕ್ಷೆಗನುಗುಣವಾಗಿ ನಗರಗಳನ್ನು ಊಹಿಸಲಾಗದ ರೀತಿಯಲ್ಲಿ ಸುಂದರಗೊಳಿಸಿದ್ದಾರೆ. ಮೂಲ ಸೌಲಭ್ಯಗಳು, ಸಂಚಾರ ಸಂಪರ್ಕಗಳನ್ನು ಸುಧಾರಿಸಿದ್ದಾರೆ.

ಆತಂಕಗಳು ಮತ್ತು ಸವಾಲುಗಳು

ಆದರೆ ಚೀನಾದ ಎದುರು ಕಠಿಣವಾದ ಸವಾಲುಗಳಿವೆ. ಹಳ್ಳಿಗಾಡಿನ ಜನರ ಆದಾಯವು ನಗರವಾಸಿಗಳ ಆದಾಯದ ಐದನೇ ಒಂದು ಭಾಗದಷ್ಟಿದ್ದು ಅವರಲ್ಲಿ ಅಸಮಾಧಾನ ಹೆಪ್ಪುಗಟ್ಟುತ್ತಿದೆ. ಇದಲ್ಲದೆ ಇಲ್ಲಿಯವರೆಗೂ ಚೀನಾದೇಶವನ್ನು ತನ್ನ ಪಾಲುದಾರ ಎಂದು ಭಾವಿಸಿದ್ದ, ಉತ್ತೇಜಿಸಿದ್ದ ಅಮೆರಿಕಾ ಈಗ ಅದನ್ನು ತನ್ನ ಪ್ರತಿಸ್ಪರ್ಧಿ, ವೈರಿ ಎಂದು ಪರಿಗಣಿಸಲಾರಂಭಿಸಿದೆ. ಇದು ಒಂದು ಮಟ್ಟಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಬಣಗಳ ರಚನೆಗೆ ಕಾರಣವಾಗಿ ಮತ್ತೊಂದು ಶೀತಲ ಸಮರ ಆರಂಭವಾಗಬಹುದು ಎಂಬ ಜಾಗತಿಕ ಆತಂಕಕ್ಕೂ ಕಾರಣ ವಾಗಿದೆ. ಚೀನಾ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಎಂಬ ಅತ್ಯಂತ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಅದಕ್ಕಾಗಿ ಅದು ಯುರೋಪ್, ಆಫ್ರಿಕಾ, ಮಧ್ಯ ಏಷ್ಯಾ, ಆಗ್ನೇಯ ಏಷ್ಯಾದತ್ತ ಅತ್ಯಂತ ಆಧುನಿಕ ಹೆದ್ದಾರಿಗಳನ್ನು ನಿರ್ಮಿಸಿ ಎಲ್ಲೆಡೆಗೆ ತನ್ನ ಅಗ್ಗದ ಆದರೆ ಅತ್ಯಂತ ಒಳ್ಳೆಯ ಗುಣಮಟ್ಟದ ಸರಕು ಸಾಮಗ್ರಿಗಳನ್ನು ಮಾರಾಟಕ್ಕೆ ಕಳಿಸಲು ಯತ್ನಿಸುತ್ತಿದೆ. ಆದರೆ ಇದೇನಾದರೂ ವಿಫಲವಾದರೆ ಚೀನಾ ತೀವ್ರ ಬಿಕ್ಕಟ್ಟಿಗೆ ಸಿಲುಕಿಹಾಕಿಕೊಳ್ಳುವುದು ಖಂಡಿತ. ಇಂಥ ಸಂದಿಗ್ಧ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಚೀನಾ ಈಗ ಆಯ್ದ ಸರಕುಗಳನ್ನು ರಫ್ತು ಮಾಡುವ ಆದರೆ ಅದೇ ಸಮಯದಲ್ಲಿ ಆಂತರಿಕ ಮಾರುಕಟ್ಟೆಯನ್ನು ಬಲಪಡಿಸಿಕೊಂಡು ಅದರ ಮೇಲೆ ಸಾಕಷ್ಟು ಅವಲಂಬಿತವಾಗುವ ಮಾರ್ಗವನ್ನೂ(ಡ್ಯೂಯಲ್ ಸಕ್ರ್ಯುಲೇಶನ್ ಕಾನ್ಸೆಪ್ಟ್) ಅನುಸರಿಸುತ್ತಿದೆ.

ಸಂಕೀರ್ಣ ಸೈದ್ಧಾಂತಿಕ ಸವಾಲು

ಸಮಾಜವಾದಿ ಎಂಬ ಹೆಸರನ್ನು ಉಳಿಸಿಕೊಂಡೇ ಇರುವ ಚೀನಾ ಸಂಪೂರ್ಣವಾಗಿ ಕಮ್ಯುನಿಸ್ಟ್ ಪಕ್ಷದ ಹಿಡಿತದಲ್ಲೇ ಇದೆ. ಆದರೆ ಪಕ್ಷದಲ್ಲಿ ಈಗ ಬಂಡವಾಳಗಾರರೂ ಸದಸ್ಯರಾಗಿದ್ದಾರೆ. ಅವರ ಪ್ರಭಾವ ದಿನಗಳೆದಂತೆ ಹೆಚ್ಚಾಗುವುದು ಸಹಜ. ವ್ಯವಸ್ಥೆ ಅನೇಕ ಸೌಲಭ್ಯಗಳನ್ನೂ, ಸೌಕರ್ಯಗಳನ್ನೂ ಜನರಿಗೆ ನೀಡಿದೆ ಎಂಬುದೇನೋ ನಿಜ, ಆದರೆ ಒಂದು ಬಂಡವಾಳಶಾಹಿ ಕಲ್ಯಾಣ ರಾಜ್ಯದ ಗುರಿಯೂ ಇದೇ ತಾನೆ. ಆರ್ಥಿಕತೆಯು ಬಂಡವಾಳಶಾಹಿ ಮಾರ್ಗದಲ್ಲಿ ವೇಗವಾಗಿ ಮುನ್ನಡೆದಾಗ ರಾಜಕೀಯ ಮೇಲ್ರಚನೆ ತನ್ನ ಗುಣವನ್ನೂ ವರ್ಗಲಕ್ಷಣವನ್ನೂ ಉಳಿಸಿ ಕೊಳ್ಳುವುದು ಸಾಧ್ಯವಿಲ್ಲ ಎಂಬುದು ತಾನೆ ಮಾಕ್ರ್ಸ್ವಾದದ ಪಾಠ. ಮತ್ತೆ ಡೆಂಗ್ ಹೇಳುತ್ತಿದ್ದ ಮಾತೊಂದು ಬಹಳ ಪ್ರಸಿದ್ಧ: “ಚೀನಾ ಎಂದಿಗೂ ಜಾಗತಿಕ ಮಹಾಶಕ್ತಿ ಆಗದು. ಅದೆಂದೂ ಉಳಿದವರನ್ನು ಶೋಷಿಸು ವುದಿಲ್ಲ, ಬಗ್ಗು ಬಡಿಯುವುದಿಲ್ಲ. ಹಾಗೇನಾದರೂ ಆದರೆ ಅಂತಹಸಮಾಜವಾದಿ ಸಾಮ್ಯಾಜ್ಯಶಾಹಿ(ಸೋಷಿಯಲ್ ಇಂಪೀರಿಯಲಿಸ್ಟ್) ಶಕ್ತಿಯನ್ನೂ ಜಗತ್ತಿನ ದುಡಿಯುವ ವರ್ಗ ಮತ್ತು ಚೀನಾದ ಜನತೆ ಒಟ್ಟಾಗಿ ಬುಡಮೇಲು ಮಾಡಬೇಕು. ಆದರೆ ತೀರಾ ಮುಂದುವರೆದ ಬಂಡವಾಳಶಾಹಿ ರಾಷ್ಟ್ರವೊಂದು ಜಗತ್ತೆಂಬ ಬೀದಿಗೆ ಬರದೆ ತನ್ನ ಅಂಗಳದಲ್ಲೇ ಆಟವಾಡುತ್ತಾ ಕೂರುತ್ತದೆಯೇ?

ಅದೇನೇ ಇರಲಿ ಈಗ ಚೀನಾದೊಳಗೆ ವಿಪರೀತ ಭ್ರಷ್ಟಾಚಾರ ತಲೆ ಎತ್ತುತ್ತಿದೆ. ಆದ್ದರಿಂದ ಅಧ್ಯಕ್ಷ ಶೀ ಜಿನ್ ಪಿಂಗ್ ಈಗ ಮತ್ತೆ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ತತ್ವಗಳ ಓದಿಗೆ ವಿಪರೀತ ಮಹತ್ವ ನೀಡುತ್ತಿದ್ದಾರೆ. ಮತ್ತೆ ಅದಕ್ಕಿಂತ ಮುಖ್ಯವಾಗಿ ಕಮ್ಯುನಿಸ್ಟ್ ಪಕ್ಷ ಈಗ ಮತ್ತೆ ಚೀನಾದ ಮಹಾನ್ ಸಾಂಸ್ಕøತಿಕ ಕ್ರಾಂತಿಯನ್ನು ಎತ್ತಿಹಿಡಿಯಲಾರಂಭಿಸಿದೆ. ಕ್ರಾಂತಿಯ ಕುರಿತಾದ ಟೀಕೆಗಳನ್ನು ಪಠ್ಯಪುಸ್ತಕದಿಂದ ತೆಗೆದುಹಾಕಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಮಾವೊ ಜೆಡಾಂಗ್ ಎಡವಿದರು ಎಂಬುದನ್ನು ಈಗ ಪಕ್ಷವು ಒಪ್ಪುತ್ತಿಲ್ಲವಂತೆ. ಮಾವೊರವರ ಕಲ್ಪನೆಗಳ ಅನುಷ್ಠಾನಕ್ಕೆ ಅಡ್ಡಿ ಉಂಟುಪಡಿಸಲಾಯಿತು. ಅದೇ ವೈಫಲ್ಯಕ್ಕೆ ಕಾರಣ ಎಂಬ ವ್ಯಾಖ್ಯಾನ ಮುನ್ನೆಲೆಗೆ ಬಂದಿದೆಯಂತೆ.

ಎಲ್ಲಾ ಪ್ರಯತ್ನಗಳ ಮೂಲಕ ಚೀನಾದ ಕಮ್ಯುನಿಸ್ಟ್ ಪಕ್ಷವು ದೇಶ ವನ್ನು ಸಮಾಜವಾದಿ ಮಾರ್ಗಕ್ಕೆ ಮರಳಿಸುತ್ತದೆ ಎನ್ನುವವರಿದ್ದಾರೆ. ಅದನ್ನು ಸಮರ್ಥಿಸುವುದು ಕಷ್ಟ. ಆದರೆ ಯತ್ನಗಳಿಂದಾಗಿ ಬಿಕ್ಕಟ್ಟು ಎಷ್ಟು ಕಾಲ ಶಮನವಾದೀತು, ಹೇಗೆ ಶಮನವಾದೀತು ಎಂಬುದು ಮಾತ್ರ ಕುತೂಹಲದ ಪ್ರಶ್ನೆ. ಜಗತ್ತು ಉಸಿರು ಬಿಗಿ ಹಿಡಿದು ಪೂರ್ವದಿಕ್ಕಿನತ್ತ ನೋಡುತ್ತಿದೆ.

ಚೈನಾವನ್ನು ರೂಪಿಸಿದ ಹಮ್ಮು ಮತ್ತು ಕೀಳರಿಮೆ!

ಸಾವಿರಾರು ವರ್ಷಗಳಿಂದಲೂ ತನ್ನ ನೆರೆಹೊರೆಯವರು ಮತ್ತು ಜಗತ್ತಿನ ಇತರ ದೇಶಗಳ ಕುರಿತಾಗಿ ಚೀನಾಕ್ಕೊಂದು ಹಮ್ಮು ಇದೆ. ಅದೇನೆಂದರೆ ತನ್ನ ನಾಗರಿಕತೆ ಇತರರಿಗಿಂತ ಉತ್ಕೃಷ್ಟವಾದುದು ಮತ್ತು ಉಳಿದವರು ಅನಾಗರಿಕರೆನ್ನುವ ಭಾವನೆ. ಆಧುನಿಕ ಪ್ರಪಂಚವನ್ನು ಚೈನಾ ರೂಪಿಸಿತು ಎನ್ನುವ ವಾದವನ್ನು ಗಂಭೀರವಾಗಿ ಮಾಡುವ ಇತಿಹಾಸಕಾರರೂ ಇದ್ದಾರೆ. ಚೈನಾದ ಚಕ್ರವರ್ತಿಯಾದ ಮಂಗೋಲ ಚೆಂಗೀಸ್ ಖಾನ ಮತ್ತು ಅವನ ವಂಶಸ್ಥರಿಂದ ಮಧ್ಯಕಾಲೀನ ಯೂರೋಪ್ ಮತ್ತು ಏಷ್ಯಾದ ಹಲವು ಭಾಗಗಳು ರಾಜಕೀಯವಾಗಿ ವಿಚಲಿತಗೊಂಡು, ಹೊಸ ಸಾಮ್ರಾಜ್ಯಶಾಹಿ ವ್ಯವಸ್ಥೆಗಳನ್ನು ರೂಪಿಸಿಕೊಂಡಿದ್ದು ಆಧುನಿಕ ಪ್ರಪಂಚ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ಪ್ರತಿಪಾದಿಸುತ್ತಾರೆ. ಮಿಗಿಲಾಗಿ, ಸಮಯದಲ್ಲಿಯೆ ಆಧುನಿಕತೆಯನ್ನು ರೂಪಿಸಿದ ಮುಖ್ಯ ತಂತ್ರಜ್ಞಾನಗಳಾದ ಕಾಗದ ಮತ್ತು ಮುದ್ರಣ ತಾಂತ್ರಿಕತೆ, ದಿಕ್ಸೂಚಿ ಮತ್ತು ಗನ್ ಪೌಡರುಗಳು ಚೈನಾದಿಂದ ಬಂದವು. ಸಾಧನೆಗಳು ಒಂದೆಡೆ ಇರಲಿ. ಇವುಗಳ ಹೊರತಾಗಿ ಕೂಡ ತಾವು ಇತರರಿಗಿಂತ ಶ್ರೇಷ್ಠರು ಎಂಬ ನಂಬಿಕೆ ಚೈನಾದ ಜನರಲ್ಲಿದೆ.

ಇದರ ಜೊತೆಗೆ ಆಧುನಿಕ ಯುಗದಲ್ಲಿ, ಅದರಲ್ಲಿಯೂ 1830ರಿಂದ 1948ರವರಗೆ ಚೈನಾವು ರಾಜಕೀಯವಾಗಿ ಅನುಭವಿಸಿದ ಹಿನ್ನಡೆಗಳು ಅದಕ್ಕೊಂದು ಕೀಳರಿಮೆಯನ್ನೂ ಹುಟ್ಟಿಸಿದೆ. ಭಾರತವೂ ಸೇರಿದಂತೆ, ಏಷ್ಯಾ, ಆಫಿû್ರಕಾ ಮತ್ತು ಅಮೆರಿಕಾಗಳ ಇತರ ದೇಶಗಳಂತೆ ಚೈನಾ ಯೂರೋಪಿನ ಸಾಮ್ರಾಜ್ಯಗಳ ವಸಾಹತು ಆಗಲಿಲ್ಲ. ಆದರೂ ಜಗತ್ತಿನ ಎಲ್ಲ ಪ್ರಮುಖ ಸಾಮ್ರಾಜ್ಯಗಳೂ ಚೈನಾವನ್ನು ತಮ್ಮ ಆಟದ ಮೈದಾನವಾಗಿಸಿಕೊಂಡು ತಮ್ಮ ಪ್ರಭಾವಿ ವಲಯವನ್ನು ಕಟ್ಟಿಕೊಂಡಿದ್ದವು. ಇಂತಹ ದೇಶಗಳ ಪಟ್ಟಿಯಲ್ಲಿ ಅದರ ನೆರೆಯ ಸಣ್ಣ ದೇಶವಾದ ಜಪಾನ್ ಸಹ ಸೇರಿತ್ತು. ಹೀಗೆ ತನ್ನ ರಾಜಕೀಯ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ಕಳೆದುಕೊಂಡದ್ದನ್ನು ಚೈನಾದ ಜನರು ಬಹುದೊಡ್ಡ ಅವಮಾನವೆಂದೆ ಭಾವಿಸಿದ್ದರು.

ಹಮ್ಮು ಮತ್ತು ಕೀಳರಿಮೆಗಳೆರಡೂ ಎರಡನೆಯ ಮಹಾಯುದ್ಧದ ನಂತರದ ಚೈನಾವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಇಂದೂ ಚೈನಾಕ್ಕಿರುವ ಜಗತ್ತನ್ನು ನಿಯಂತ್ರಿಸುವ ಮಹತ್ವಾಕಾಂಕ್ಷೆಯು ಐತಿಹಾಸಿಕ ಆಯಾಮಗಳಿಂದಲೆ ರೂಪುಗೊಂಡಿದೆ. ಮಾತು ಕಮ್ಯುನಿಸ್ಟ್ ಚೈನಾದ ಮಟ್ಟಿಗೂ ನಿಜವೆ. ನೂರು ವರ್ಷಗಳ ಹಿಂದೆ ಚೈನಾದ ಕಮ್ಯುನಿಸ್ಟ್ ಪಕ್ಷವನ್ನು ಹುಟ್ಟುಹಾಕಿದ ಯುವಕರು ಯಾರೂ ತಮ್ಮ ದೇಶವು ಪ್ರಮಾಣದಲ್ಲಿ ಜಾಗತಿಕ ಪ್ರಭಾವವನ್ನು ಗಳಿಸುತ್ತದೆ ಎಂದು ಬಹುಶಃ ನಿರೀಕ್ಷಿಸಿರಲಿಲ್ಲ.

ಆದರೆ ಕುತೂಹಲದ ವಿಷಯವೆಂದರೆ ಚೈನಾ ಸ್ಥಾನಮಾನವನ್ನು ಹೇಗೆ ಗಳಿಸಿತು ಎನ್ನುವುದು. ಇಂದಿನ ಚೈನಾವನ್ನು ನೋಡಿದರೆ ಅದು ವಿರೋಧಾಭಾಸಗಳ ಮೊತ್ತವಾಗಿಯೆ ಕಾಣುತ್ತದೆ. ಅಲ್ಲಿನ ಕಮ್ಯುನಿಸ್ಟ್ ಪಕ್ಷವು ಆಡಳಿತ ನಡೆಸುತ್ತಿರುವುದು ಜಗತ್ತಿನ ಅತಿದೊಡ್ಡ ಬಂಡವಾಳಶಾಹಿ ದೇಶವೊಂದನ್ನು. ಇಂದಿನ ಚೈನಾದಲ್ಲಿ ರಾಜಕೀಯ ಭಿನ್ನಮತಕ್ಕೆ ಸ್ಥಳವಿಲ್ಲ, ಆದರೂ ಅತ್ಯಂತ ತಾಂತ್ರಿಕತೆ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಹೊಸತನವನ್ನು ಕಟ್ಟಿಕೊಳ್ಳುವ ಉದ್ಯಮಶೀಲತೆಗೆ ಅವಕಾಶವಿದೆ. ಸೋವಿಯತ್ ಮಾದರಿಯ ಯೋಜನೆಗಳ ಮೂಲಕವೆ ಬೆಳೆಯುವ `ಕಮ್ಯಾಂಡ್ ಅರ್ಥವ್ಯವಸ್ಥೆಯನ್ನು ಚೈನಾ ಕೈಬಿಟ್ಟು ಸುಮಾರು ನಾಲ್ಕು ದಶಕಗಳೆ ಆಗಿದೆ. ಚೈನಾ ಮಾದರಿಯ ಸಮಾಜವಾದದ ಪರಿಕಲ್ಪನೆಯನ್ನು 1980 ದಶಕದಲ್ಲಿ ಮುಂದಿಟ್ಟ ಡೆಂಗ್ ಕ್ಸಾಪಿಂಗ್ ಮತ್ತು ಅವರ ಸಹಚರರು ಮಾರುಕಟ್ಟೆ ಕೇಂದ್ರಿತ ಅರ್ಥವ್ಯವಸ್ಥೆಯನ್ನು ಕಟ್ಟಿದರು. ಅದರಲ್ಲಿ ಪ್ರಭುತ್ವ ಮತ್ತು ಸರ್ಕಾರಗಳು ಮುಖ್ಯ ಪಾತ್ರ ವಹಿಸುತ್ತವೆ ಮತ್ತು ದೇಶದ ಮೇಲೆ ತಮ್ಮ ನಿರಂಕುಶ ನಿಯಂತ್ರಣವನ್ನು ಹೊಂದಿರುತ್ತವೆ. ಪ್ರಕ್ರಿಯೆಯನ್ನು ಮತ್ತಷ್ಟು ತೀವ್ರತೆಯಿಂದ ಮುಂದುವರಿಸುತ್ತಿರುವವರು ಚೈನಾದ ಈಗಿನ ನಾಯಕ ಕ್ಸಿ ಜಿನ್ಪಿಂಗ್.

ಇತಿಹಾಸಕಾರ ರಾಣಾ ಮಿತ್ತರ್ ಹೇಳುವಂತೆ ಕ್ಸಿ ಯವರ ಚೈನಾ ದೇಶದ ಗುಣಲಕ್ಷಣಗಳಿವು: ಖಚಿತ ನಿರುಂಕಶತೆ, ಧ್ಯೇಯಉದ್ದೇಶಗಳಲ್ಲಿ ಜಾಗತಿಕ ದೃಷ್ಟಿಕೋನ, ಆಕಾಂಕ್ಷೆಗಳಲ್ಲಿ ಗ್ರಾಹಕ ಕೇಂದ್ರಿಕತೆ, ತಂತ್ರಜ್ಞಾನದಲ್ಲಿ ನಾವೀನ್ಯ. ಚೈನಾ ದೇಶವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎನ್ನುವುದು ಕ್ಸಿ ಮತ್ತು ಅವರ ಸಹಚರರ ಗುರಿಯಾದರೂ ಚೈನಾದ ಜನರು ತಮ್ಮ ಸ್ಥಳವನ್ನು ಅರಿತಿರಬೇಕು ಎಂದು ಬಯಸುತ್ತಾರೆ. ಗ್ರಾಹಕರಾಗಿ ಅವರಿಗೆ ವಿನೂತನ ಮೊಬೈಲ್ ಫೆÇೀನುಗಳು, ಹೊಸ ಅಪಾರ್ಟಮೆಂಟುಗಳು, ವಿಲಾಸಿ ರಜೆಗಳು ಮತ್ತು ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಇತ್ಯಾದಿಗಳು ಲಭ್ಯವಿವೆ. ಆದರೆ ಇದು ಮಾವೊರ ಅಥವಾ ಲೆನಿನ್ನರ ಕ್ರಾಂತಿಯೆ?

ಕಡೆಯ ಮಾತು: ಕಮ್ಯುನಿಸ್ಟ ಚೈನಾದ ಜೊತೆಗೆ ಭಾರತದ ಸಂಬಂಧ ಸಂಕೀರ್ಣವಾದುದು. ನೆಹರೂ ಕಾಲದ ಸ್ನೇಹ ಬೆಳಸುವ ಪ್ರಯತ್ನಗಳು ಮತ್ತು 1960 ದಶಕದ ಗಡಿಸಮಸ್ಯೆಗಳು ಒಂದೆಡೆಯಾದರೆ, ನಮ್ಮ ಇಂದಿನ ಚರ್ಚೆಗೆ ಮತ್ತೊಂದು ಆಯಾಮವು ಮುಖ್ಯವಾಗುತ್ತದೆ. ಭಾರತದ ಎಡಪಂಥೀಯರು, ಬಲಪಂಥೀಯರು ಮತ್ತು ಮಧ್ಯಮವರ್ಗಗಳು ಚೈನಾದ ಪ್ರಯೋಗಗಳನ್ನು, ಅದು ಸಾಧಿಸಿರುವ `ಪ್ರಗತಿಯನ್ನು ಮತ್ತು ಅದನ್ನು ಸಾಧ್ಯವಾಗಿಸಿರುವ `ಶಿಸ್ತನ್ನು ಅಸೂಯೆಯಿಂದಲೆ ನೋಡುತ್ತಿವೆ. ತಮ್ಮ ಅವಲೋಕನಕ್ಕೆ ಮೂರೂ ವರ್ಗಗಳು ಒಂದಷ್ಟು ವಸ್ತುನಿಷ್ಟತೆಯನ್ನು ಮತ್ತು ನೈತಿಕ ಸ್ಪಷ್ಟತೆಯನ್ನು ತಂದುಕೊಂಡರೆ, ಚೈನಾದಿಂದ ಕಲಿಯಬಹುದಾಗಿರುವ ಪಾಠಗಳು ಹಲವಿವೆ. ಅವುಗಳಲ್ಲಿ ಒಂದಷ್ಟು ಪಾಠಗಳು ನಮಗೆ ಅಗತ್ಯವಿರುವ ಹೊಸಪಥಗಳ ಅನ್ವೇಷಣೆಗೂ ಸಹಾಯವಾಗಬಹುದು.

ಪೃಥ್ವಿದತ್ತ ಚಂದ್ರಶೋಭಿ

Leave a Reply

Your email address will not be published.