ನೆನೆವುದೆನ್ನ ಮನಂ ನಮ್ಮೂರ ಮೊಹರಂ

ಊರಿನ ಹಿಂದೂ ಮುಸಲ್ಮಾನರೆಲ್ಲರೂ ಒಂದಾಗಿ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆಯಲ್ಲ… ಅದು ನೀಡುವ ಸಂದೇಶವೇ ಬೇರೆ!

ಹುರುಕಡ್ಲಿ ಶಿವಕುಮಾರ

ನಮ್ಮೂರು ಬಾಚಿಗೊಂಡನಹಳ್ಳಿಯ ಮೊಹರಂ ಹಬ್ಬದ ಕೊನೆಯ ದಿನವನ್ನು ನಾನು ಎಂದಿಗೂ ತಪ್ಪಿಸಿಕೊಳ್ಳಲಾರೆ. ಬೇರೆ ಯಾವ ಕೆಲಸವಿದ್ದರೂ ನಾನು ಆ ಕಡೆ ಗಮನ ಕೊಡದೇ ಅಂದು ಸಾಯಂಕಾಲದ ಮೊಹರಂ ಮೆರವಣಿಗೆಗೆ ತಪ್ಪದೇ ಹಾಜರಾಗಿಬಿಡುವೆ. ಸಾಹಿತಿಯೆಂದೂ, ಪತ್ರಕರ್ತನೆಂದೂ, ರೈತ ಹೋರಾಟಗಾರನೆಂದೂ ನಮ್ಮ ಊರಲ್ಲಿ ಹೆಸರಾದ ನಾನು ಈ ಮೊಹರಂ ಮೆರವಣಿಗೆಯ ಮುಂದೆ ನಿಂತು ತದೇಕ ಚಿತ್ತದಿಂದ ವೀಕ್ಷಿಸುವುದನ್ನು ಕಂಡು ನಮ್ಮೂರ ಜನರೆಲ್ಲ ಆಶ್ಚರ್ಯಪಡುವುದೂ ಉಂಟು. ಈತ ಇಷ್ಟೆಲ್ಲಾ ವಯಸ್ಸು ಕಳೆದರೂ ಸಣ್ಣ ಮಕ್ಕಳ ಥರ ಮೆರವಣಿಗೆಯ ಮುಂದೆ ನಿಂತು ನೋಡುತ್ತಾನಲ್ಲ ಎಂಬುದು ಅವರ ಆಶ್ಚರ್ಯಕ್ಕೆ ಕಾರಣವಾಗಿದೆ.

ಇರಲಿ, ಆದರೆ ಈ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ನಮ್ಮೂರ ಜನ ನಶೆ ಏರಿಸಿಕೊಂಡು ಮನಸೋ ಇಚ್ಛೆ ಕುಣಿಯುವುದು ಇದೆಯಲ್ಲಾ…! ಅದನ್ನು ನಾನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲಾರೆ. ಏಕೆಂದರೆ ಅಷ್ಟೊಂದು ಗಮ್ಮತ್ತು ಅದರಲ್ಲಿದೆ.

ನಮ್ಮ ಬದುಕನ್ನು ಆರ್ಥಿಕ ಲೆಕ್ಕಾಚಾರಗಳು ನಿಯಂತ್ರಿಸುತ್ತವೆ ಎನ್ನುತ್ತಾರೆ ಕಾರ್ಲ್ಮಾರ್ಕ್ಸ್; ನಮ್ಮ ಬದುಕನ್ನು ಲೈಂಗಿಕ ಸಂವೇದನೆಗಳು ನಿಯಂತ್ರಿಸುತ್ತವೆ ಎನ್ನುತ್ತಾರೆ ಯೂಂಗ್. ಈ ಎರಡೂ ವಾದಗಳಲ್ಲಿಯ ಸತ್ಯಾಂಶಗಳ ಆಚೆಗೆ ಬೇರೆ ಇನ್ನೇನೋ ಪಾರಂಪರಿಕ, ಸ್ಥಳೀಯ ನಂಬಿಕೆಗಳೂ, ವ್ಯಕಿಗತ ಸಂವೇದನೆಗಳೂ ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ ಎಂಬುದು ನನ್ನ ವಾದ. ಹೀಗೇ… ಏನೇನೋ ಮಾನಸಿಕ ನಿಯಂತ್ರಣಕ್ಕೆ ಒಳಪಟ್ಟ ವ್ಯಕ್ತಿಯೋರ್ವ ಈ ಎಲ್ಲಾ ನಿಯಂತ್ರಣಗಳನ್ನು ಮೀರಿ ತಾನೇ ತಾನಾಗಿ, ಸರ್ವ ಸ್ವತಂತ್ರನಾಗಿ, ಮೈ ಮರೆತು ಕುಣಿಯುವುದಿದೆಯೆಲ್ಲಾ… ವ್ಹಾ…! ಅಷ್ಟೊಂದು ಮುಕ್ತತೆ ಈ ಮೊಹರಂ ಮೆರವಣಿಗೆಗೆ ಇದೆ. ಹೀಗಾಗಿ ನಾನು ಸಾಮಾನ್ಯ ವ್ಯಕ್ತಿಯಂತೆ ಈ ಮೆರವಣಿಗೆಯ ಮುಂದೆ ತಾಸುಗಟ್ಟಲೆ ನಿಂತು ನೋಡುತ್ತೇನೆ.

ಹ್ಞಾ… ಅಂದಹಾಗೆ ನಮ್ಮೂರ ನೃತ್ಯಪಟುಗಳ ವೈವಿಧ್ಯಮಯ ಕುಣಿತಗಳನ್ನು ನೀವು ಬೇರೆ ಎಲ್ಲೂ ಕಾಣಲಾರಿರಿ! ಅಷ್ಟೇ ಏಕೆ ಈ ಕುಣಿತಗಳೂ ಕೂಡ ಒಂದು ವರ್ಷವಿದ್ದಂತೆ ಮರುವರ್ಷ ಇರುವುದಿಲ್ಲ! ಅದೇ ವ್ಯಕ್ತಿ ಮತ್ತೆ ಮರುವರ್ಷ ಹೊಚ್ಚಹೊಸತೇ ಆದ ಪಟ್ಟಿನಿಂದ ಕುಣಿಯುತ್ತಾನೆಯೇ ಹೊರತು ಯಾವ ಹಳಸಲು ಕುಣಿತವನ್ನು ಪ್ರದರ್ಶಿಸಲಾರ. ಅಷ್ಟೊಂದು ನಿಚ್ಚಂ ಪೊಸತು ನಮ್ಮೂರ ಮೊಹರಂ ಕುಣಿತ. ಒಂದು ವೇಳೆ ಈ ನೃತ್ಯಪಟುಗಳು ಹಳೆಯ ಭಂಗಿಯಲ್ಲೇ ಕುಣಿದರೂ ಅದರಲ್ಲೇನೋ ಹೊಸತು ಇದ್ದೇ ಇರುತ್ತದೆ. ಅದನ್ನು ಆಸ್ವಾದಿಸುವ ಮನಸ್ಸು ನಿಮಗಿರಬೇಕಷ್ಟೆ. ಹೀಗೆ ನಮ್ಮೂರ ಕೆಲವು ನೃತ್ಯ ಪಟುಗಳ ನೃತ್ಯ ಶೈಲಿಯನ್ನು ಸ್ವಲ್ಪ ಸಂಕ್ಷೇಪವಾಗಿಯೇ ನಾನಿಲ್ಲಿ ನೀಡಬಯಸುವೆ.

ನಮ್ಮೂರ ನೇಕಾರ ಶಿವಕುಮಾರ ಒಬ್ಬ ಸಾಮಾನ್ಯ ಆಟೋ ಡ್ರೈವರ್. ಅಂದಾಜು ಮೂವತ್ತೈದರ ವಯಸ್ಸು. ಈತ ಈ ಮೊಹರಂ ಕೊನೆದಿನದ ಮೆರವಣಿಗೆಯಲ್ಲಿ ‘ಟವೆಲ್ ಕುಣಿತ’ಕ್ಕೆ ಹೆಸರುವಾಸಿ. ಟವೆಲ್ ಕುಣಿತವೆಂದರೆ ಬೇರೆ ಏನೂ ಅಲ್ಲ. ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಮೆರವಣಿಗೆ ಸ್ಥಳಕ್ಕೆ ಬಂದರೆ ಸಾಕು, ಅಲ್ಲಿ ಆಗಲೇ ಹಲಗೆಯ ಬಡಿತಕ್ಕೆ ಸಮನಾಗಿ ಹೆಜ್ಜೆ ಹಾಕುವವರು ಇದ್ದೇ ಇರುತ್ತಾರೆ. ಅವರೊಂದಿಗೆ ಮೆಲ್ಲಗೆ ಸೇರಿಕೊಂಡು ಹೆಗಲ ಮೇಲಿನ ಟವೆಲನ್ನೇ ಎರಡೂ ಕೈಗಳಿಂದ ಮೇಲಕ್ಕೆತ್ತಿ ಹಿಡಿದು ಹಲಗೆಯ ಬಡಿತಕ್ಕೆ ಸಮನಾಗಿ ಹೆಜ್ಜೆ ಹಾಕಿದರೆ ಸಾಕು. ಅದೇ ಒಂದು ನೃತ್ಯ ಪ್ರದರ್ಶನವಾಗಿಬಿಡುತ್ತದೆ. ನೋಡುಗರಿಗೆ ಅದೇ ಒಂದು ಚಂದ. ಒಮ್ಮೊಮ್ಮೆ ಈ ಟವೆಲನ್ನು ಶಿವಕುಮಾರ್ ತನ್ನ ಸೊಂಟಕ್ಕೆ ಕಟ್ಟಿಕೊಂಡು ಕುಣಿಯುವುದೂ ಉಂಟು.

ಇದರ ನಂತರ ಈ ಮೆರವಣಿಗೆಗೆ ಕ್ಯಾದಿಗಿಹಳ್ಳಿಯ ಮರಿಯಪ್ಪ ಸೇರಿಕೊಳ್ಳುತ್ತಾನೆ. ಈತನದು ‘ತೋರು ಬೆರಳಿನ ಕುಣಿತ’. ಅಂದರೆ ಎರಡೂ ಕೈಗಳಲ್ಲಿನ ತೋರು ಬೆರಳುಗಳನ್ನಷ್ಟೆ ನಿಮಿರಿಸಿ ಉಳಿದ ನಾಲ್ಕೂ ಬೆರಳುಗಳುಗಳನ್ನು ಮಡಚಿ ಹಲಗೆಯ ಬಡಿತಕ್ಕೆ ಹೆಜ್ಜೆ ಹಾಕುವುದು ಈತನ ಶೈಲಿ. ಮರಿಯಪ್ಪ ಈಚೆಗೆ ಟ್ಯಾಕ್ರಿ (ಟ್ರ್ಯಾಕ್ಟರ್ ಶಬ್ದದ ಕನ್ನಡ ರೂಪ) ಕಂಪನಿಯ ಏಜಂಟನಾಗಿದ್ದರೂ, ಹಾಗೇನೂ ಬೀಗದೆ ಈ ಜನಸಾಮಾನ್ಯರ ಕುಣಿತದ ಮೆರವಣಿಗೆಯಲ್ಲಿ ಸಂತಸದಿಂದಲೇ ಪಾಲ್ಗೊಳ್ಳುತ್ತಾನೆ. ಆ ಭಾವಸಾಮರಸ್ಯವನ್ನು ನೀವು ಕಣ್ಣಾರೆ ಕಂಡೇ ಆನಂದಿಸಬೇಕು. ತನ್ನ ತೋರುಬೆರಳನ್ನು ಅತ್ತಿತ್ತ ಓಡಾಡಿಸುತ್ತ ಈತ ಕುಣಿಯುವುದೇ ಒಂದು ಚಂದ.

ಕಲಾಯ್‌ಗಾರ್ ಭಕ್ಷಿಯದು ‘ಕರಡಿ ಕುಣಿತ’. ಭಕ್ಷಿ ಇನ್ನೂ ಮೂವತ್ತರ ಪ್ರಾಯದ ಧಾಂಡಿಗ ಯುವಕ. ವೃತ್ತಿಯಿಂದ ರೈತ. ಕರಡಿಯ ಹಾಗೆ ಎರಡೂ ಕೈಗಳನ್ನು ಡೊಂಕಾಗಿಸಿಕೊಂಡು ಕುಣಿಯುವುದು ಈತನ ವಿಶೇಷ. ತನ್ನ ಕಾಲುಗಳನ್ನೂ ಕೂಡ ಕರಡಿಯ ಹಾಗೆಯೆ ಬಳುಕಿಸಿ ಈತ ಕುಣಿಯತೊಡಗಿದರೆ ಹುಡುಗರೆಲ್ಲಾ ಹೋ… ಎಂದು ಕೂಗತೊಡಗುತ್ತಾರೆ. ಆ ಹುಡುಗರ ಗುಂಪಿನಲ್ಲಿ ಆತನ ಸಣ್ಣ ಸಣ್ಣ ಮಕ್ಕಳೂ ಅವರ ಸ್ನೇಹಿತರೂ ಇರುತ್ತಾರೆ. ಅವರೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಈ ಮಕ್ಕಳ ಮುಖದಲ್ಲಿನ ಮುಗ್ಧ ಹಸನ್ಮುಖತೆಯನ್ನು ಹೇಗೆ ವರ್ಣಿಸುವುದು?

ಪರಿಶಿಷ್ಟ ಜಾತಿಯ ಕೃಷ್ಣ ಕೂಡ ಮೂವತ್ತರ ವಯಸ್ಸಿನವನೇ. ಈತನದು ‘ಹುಲಿ ಕುಣಿತ’. ಹಲಗೆಯ ಮೇಳದ (ಕಡಿಮೆ ಎಂದರೂ ನಾಲ್ಕು ಹಲಗೆಗಳ ಬಡಿತ) ನಾದಕ್ಕೆ ಸರಿಯಾಗಿ ಹುಲಿಯಂತೆ ಅಬ್ಬರಿಸಿ ನಿಧಾನಕ್ಕೆ ಕುಣಿಯುವುದು ಈತನ ವಿಶೇಷ. ತನ್ನ ಕೈಗಳನ್ನೇ ಹುಲಿಯ ಮುಂಗಾಲಿನಂತೆ ಪರಿವರ್ತಿಸಿ, ನಾಲಿಗೆಯನ್ನು ಮುಂಚಾಚಿ ಗಡ್ರ… ಎಂದು ಆಗಾಗ ಹೂಂಕರಿಸುತ್ತಾ ಕುಣಿಯುವುದು ಈತನ ವಿಶೇಷ. ಈತ ಆಗಾಗ ಹಲಗೆ ಬಡಿಯುವವರು ಲಯ ತಪ್ಪಿದರೆ ಅವರ ಮೇಲೆಯೇ ಕಣ್ಣು ಕೆಂಪಾಗಿಸುವುದೂ ಉಂಟು. ಅಷ್ಟೊಂದು ನಿಗಾ ಹಲಗೆ ಬಡಿತದ ಮೇಲೆ ಈತನಿಗಿರುತ್ತದೆ.

ಅಂದಾಜು ನಲವತ್ತರ ವಯಸ್ಸಿನ ಗೋಣೆಪ್ಪನದೂ ‘ಕುಕ್ಕುರುಗಾಲ್ ಕುಣಿತ’ ವೆಂದೇ ಹೆಸರುವಾಸಿ. ಕುಕ್ಕುರುಗಾಲ್ ಕುಣಿತವೆಂದರೆ- ಬಹಿರ್ದೆಸೆಗೆ ಕುಳಿತಂತೆ ಕುಳಿತಿದ್ದು ಅಲ್ಲಿಂದಲೇ ಕುಪ್ಪಳಿಸುತ್ತಾ ಸುತ್ತು ಹಾಕುವುದು. ಮೆರವಣಿಗೆಯ ತೀರ ಮುಂದೆ ಈತನ ಕಲಾ ಪ್ರದರ್ಶನ ಏರ್ಪಟ್ಟಿರುತ್ತದೆ. ಏಕೆಂದರೆ ಈತ ಕುಕ್ಕರುಗಾಲಲ್ಲಿ ಕುಳಿತಿದ್ದು ತನ್ನ ಕಲಾ ಪ್ರದರ್ಶನ ನೀಡುವಾಗ ಬೇರೆ ನೃತ್ಯಪಟುಗಳ ಕಾಲು ತುಳಿತಕ್ಕೆ ಈತ ಸಿಲುಕಬಾರದಲ್ಲ! ಅಲ್ಲದೆ ಆ ಗುಂಪಿನಲ್ಲಿ ಈತನ ಕುಣಿತವನ್ನು ನೋಡಲು ಬೇರೆಯವರಿಗೂ ಸಾಧ್ಯವಾಗಬೇಕಲ್ಲ. ಹೀಗಾಗಿ ಗೋಣೆಪ್ಪ ಒಬ್ಬನೇ ಏಕಾಂಗಿಯಾಗಿ ಮೆರವಣಿಗೆಯ ಅನತಿ ದೂರದಲ್ಲಿದ್ದು ತನ್ನ ಕಲಾ ಪ್ರದರ್ಶನವನ್ನು ನೀಡುತ್ತಿರುತ್ತಾನೆ. ಅಲ್ಲಿಯೂ ಕೂಡ ಪ್ರೇಕ್ಷಕರ ಕೊರತೆಯೇನೂ ಇರುವುದಿಲ್ಲ. ವಾರೆವ್ಹಾ… ಎಂಬ ಶಾಬಾಶ್‌ಗಿರಿಯೂ ಅಲ್ಲಿ ಲಭಿಸುತ್ತಿರುತ್ತದೆ.

ಮಾಲ್ವಿಯಿಂದ ಈಚೆಗೆ ನಮ್ಮೂರಿಗೆ ವಲಸೆಬಂದ ತೆಳ್ಳನೆಯ ವಹಾಬ್‌ಸಾಬ್‌ನದೂ ನಲವತ್ತರ ವಯಸ್ಸು. ಈತ ಕೂಡ ನಮ್ಮೂರಲ್ಲಿ ಟ್ಯಾಕ್ರಿ ಡ್ರೈವರ್ ಆಗಿ ಉದ್ಯೋಗಸ್ಥ. ಈತನದು ‘ರಾಜಾ ಕುಣಿತ’. ಅಂದರೆ ಒಂದು ಕೈಯನ್ನು ಕತ್ತಿಯಂತೆ ಬೀಸಿ ಬೀಸಿ ಯುದ್ಧದ ಸನ್ನಿವೇಶವನ್ನೇ ಈತ ಕಟ್ಟಿಕೊಡುತ್ತಾನೆ. ಮತ್ತೊಂದು ಕೈಯನ್ನು ಆಗಾಗ ತನ್ನ ಸೊಂಟದ ಮೇಲಿಟ್ಟುಕೊಂಡು ಯುದ್ಧ ಶೂರ ಮಹಾರಾಜರಂತೆ ಕೈಬೀಸುವುದು ನೋಡಲು ತುಂಬ ಸೊಗಸಾಗಿರುತ್ತದೆ.

ಇತನ ಬಿಳಿಗೆಂಪಿನ ಮುಖದಲ್ಲಿಯ ಕರ‍್ರನೆ ಮೀಸೆ ಮತ್ತು ಬಿಗಿದ ಹುಬ್ಬುಗಳನ್ನು ನೋಡಿದರೆ ‘ಮಯೂರ’ ಸಿನಿಮಾದ ಡಾ.ರಾಜ್‌ಕುಮಾರ ನೆನಪಾಗುತ್ತಾರೆ. ಇತನ ಈ ಪರಿಯ ಕುಣಿತವೂ ಎದುರಾಳಿಗಳನ್ನು ಬೆಚ್ಚಿ ಬೀಳಿಸುವಂತಿರುತ್ತದೆ. ಯಾರೂ ಬೆಚ್ಚಿ ಬೀಳದಿದ್ದರೂ ಹಾಗೆ ನಟಿಸುವವರು ಅಲ್ಲಿ ಇದ್ದೇ ಇರುತ್ತಾರೆ! ಅದೇ ಮಕ್ಕಳಿಗೆ ತುಂಬಾ ಸಂತೋಷ ನೀಡುತ್ತದೆ.

ನನ್ನ ವಾರಿಗೆಯ ಪರಿಶಿಷ್ಟ ಜಾತಿಯ ಯಮೂನೂರಪ್ಪನದು ‘ಪೊಲೀಸ್ ಕುಣಿತ’. ಪೊಲೀಸರ ಹಾಗೆ ಖಾಕಿ ಪ್ಯಾಂಟು ತೊಟ್ಟು, ಮಾಸಿದ ಅಂಗಿಯಾದರೂ ಅದನ್ನೇ ಟಕ್ ಮಾಡಿಕೊಂಡು, ಒಂದು ಟೋಪಿ ಹಾಕಿಕೊಂಡು, ಲಾಠಿ ಬೀಸುತ್ತಾ ಈತ ಕುಣಿಯತೊಡಗಿದರೆ ನಿಂತ ಜನರೆಲ್ಲಾ ಗೊಳ್ಳೆಂದು ನಗುತ್ತಿರುತ್ತಾರೆ. ಒಂದೊಮ್ಮೆ ಈತನಿಗೆ ತನ್ನ ಜೀವನದಲ್ಲಿ ಪೊಲೀಸರಿಂದ ಕಿರಿಕಿರಿಯಾಗಿದ್ದರಿಂದಲೋ… ಏನೋ ಈತ ಪ್ರತಿ ವರ್ಷವೂ ಪೊಲೀಸ್ ವೇಷ ಧರಿಸಿ ಮನಸಾರೆ ಕುಣಿದು ಆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಅಂತೂ ಹುಡುಗರು ಈ ಕುಣಿತವನ್ನು ನೋಡಿ ಖುಷಿ ಪಡುತ್ತಾರೆ, ಸೀಟಿ ಹೊಡೆಯುತ್ತಾರೆ ಕೂಡ. ಈತನ ಈ ಕುಣಿತ ನೋಡಲು ಈತನ ಹೆಂಡತಿಯೂ ಅಲ್ಲಿಗೆ ಬಂದಿರುತ್ತಾಳೆ.

ಬಾಬು ಕೂಡ ನಲವತ್ತೈದರ ವಯಸ್ಸಿನವನು. ಈತನದು ‘ಕುಂಡಿ ಕುಣಿತ’ವೆಂದೇ ಗುರುತಿಸಲ್ಪಟ್ಟಿದೆ. ಹಾ… ಇದೇನಿದು ಕುಂಡಿ ಕುಣಿತವೆಂದಿರೋ…? ಕೇಳಿ. ಕುಂಡಿ ಕುಣಿತವೆಂದರೆ ಬೇರೆ ಏನೂ ಅಲ್ಲ. ತನ್ನ ಕುಂಡಿಯನ್ನು ಅತ್ತಿಂದಿತ್ತ-ಇತ್ತಿಂದತ್ತ ಬಳುಕಿಸಿ ಕುಣಿಯುವುದೇ ಆಗಿದೆ. ಹಾಗಂತ ಇದೇನೂ ಸುಲಭ ಕಲೆಯಲ್ಲ! ಎಂದೂ ಹಾಗೆ ಕುಂಡಿಯನ್ನು ಬಳುಕಿಸದೆ ಅಂದು ಮಾತ್ರ ಬಳುಕಿಸಿ ಬಳುಕಿಸಿ ಕುಣಿಯೋದು ತುಂಬ ತ್ರಾಸದಾಯಕವೆಂದೇ ನನ್ನ ಅಭಿಪ್ರಾಯ. ಇರಲಿ, ಜನ ಈ ಕುಣಿತವನ್ನೂ ನೋಡಿ ಆನಂದಿಸುತ್ತಾರೆ. ಹಾಗೆ ನೋಡಿದರೆ ಕುಂಡಿ ಮಣಿಸುವುದು ಈತನ ಉದ್ದೇಶವಲ್ಲ. ಸೊಂಟಕ್ಕೆ ಕಟ್ಟಿಕೊಂಡ ಎತ್ತುಗಳ ‘ಗಳಗಂಟೆ’ ಸರವನ್ನು ಗಿಲ್‌ಗಿಲ್ ಎಂದು ನುಡಿಸೋದು ಈತನ ಮುಖ್ಯ ಉದ್ದೇಶ. ಆದರೆ ಹಾಗೆ ಗಂಟೆ ಸರವನ್ನು ಗಿಲ್‌ಗಿಲ್ ಎನ್ನಿಸಲು ತನ್ನ ಸೊಂಟವನ್ನು ಬಳುಕಿಸುವಾಗ ಹಿಂಬದಿಯಿಂದ ನೋಡುವವರಿಗೆ ಅದು ಕುಂಡಿಯ ಬಳುಕಾಟದಂತೆ ಕಾಣಿಸುತ್ತದೆ. ಹೀಗಾಗಿ ಕುಂಡಿ ಕುಣಿತವೆಂಬುದು ಜನತೆ ಇಟ್ಟ ಹೆಸರಾಗಿದೆಯೇ ಹೊರತು ಅದು ಬಾಬುಸಾಬ್‌ನ ಅಭಿರುಚಿಯಲ್ಲ.

ಈಗ್ಗೆ ಐವತ್ತು ವರ್ಷಗಳ ಹಿಂದೆ ನಮ್ಮೂರಿಗೆ ವಲಸೆ ಬಂದು ನಮ್ಮೂರಿನವನೇ ಆಗಿರುವ ನಂದಿಬೇವೂರು ಹನುಮಂತನದು ‘ಬ್ರೇಕ್ ಡ್ಯಾನ್ಸ್’ ಎಂದೇ ಖ್ಯಾತಿಯಾಗಿದೆ. ಹ್ಞಾ… ನಮ್ಮ ಸಿನಿಮಾಗಳಲ್ಲೂ ಈ ಬ್ರೇಕ್ ಡ್ಯಾನ್ಸ್ ಬಂದು ನಲವತ್ತು ವರ್ಷಗಳ ಮೇಲಾಗಿದೆ. ಹೀಗಾಗಿ ಈಗ ಈ ಡ್ಯಾನ್ಸ್ ಶೈಲಿಯೂ ತುಂಬ ಹಳೆಯದೇ ಆಗಿದೆ. ಆದರೆ ಹನುಮಂತನಿಗೆ ಮಾತ್ರ ಈ ಶೈಲಿ ಹಳೆಯದೆನಿಸಿಲ್ಲ! ಅಥವಾ ಆತ ಬೇರೆ ಶೈಲಿ ಕಲಿತಿಲ್ಲವೆಂದೇ ಅರ್ಥ. ಹೀಗಾಗಿ ಹನುಮಂತ ತನ್ನ ಕೈಗಳನ್ನು ಮಡಚುತ್ತಾ… ತನ್ನ ಕಾಲುಗಳನ್ನು ಮಣಿಸುತ್ತಾ… ತಲೆಯನ್ನು ಬಳಕಿಸುತ್ತಾ ತನ್ನ ಪಾಡಿಗೆ ತಾನು ಬ್ರೇಕ್ ಡ್ಯಾನ್ಸ್ ಮಾಡತೊಡಗಿದರೆ ನಿಂತ ಜನ ಅತ್ತಿತ್ತ ಕದಲುವುದೇ ಇಲ್ಲ! ತಾಸೆರಡು ತಾಸು ಈ ಬ್ರೇಕ್ ಡ್ಯಾನ್ಸ್ ನಡೆÀದೇ ಇರುತ್ತದೆ; ಪ್ರೇಕ್ಷಕರ ಶಿಳ್ಳೆಯೂ ಮೊಳಗುತ್ತಲೇ ಇರುತ್ತದೆ.

ಗುಡಿ ಹಿಂದಲ ಪಕೀರಪ್ಪ ಮತ್ತು ಬ್ಯಾಲಾಳು ಲೋಕಪ್ಪನವರದು ‘ಕೈ… ಕೈ… ಕುಣಿತ’. ಅಂದರೆ ಈ ಇಬ್ಬರೂ ಎದುರು ಬದುರಾಗಿ ನಿಂತು ತಮ್ಮ ತಮ್ಮ ಕೈಗಳನ್ನು ಪರಸ್ಪರ ಹಿಡಿದುಕೊಂಡು ಹಲಗೆಯ ಬಡಿತದ ಲಯಕ್ಕೆ ಅನುಗುಣವಾಗಿ ಕುಣಿಯಬೇಕು. ಇದೂ ಕೂಡ ನೋಡುಗರಲ್ಲಿ ತಮಾಷೆ ಅನ್ನಿಸುತ್ತದೆ. ಆದರೆ ಹೀಗೆ ಗೆಳೆಯರಿಬ್ಬರು ಕೈ ಕೈ ಹಿಡಿದು ನಿಜ ಜೀವನದಲ್ಲಿ ಬಾಳುವೆ ಮಾಡೋದು ಎಂಥ ಕಷ್ಟದ ಮೈತ್ರಿ?! ಸೌಹಾರ್ದಕ್ಕೆ ಭಂಗ ಬಂದಿರುವ ಇಂದಿನ ದಿನಗಳಲ್ಲಿ ಈ ಕುಣಿತ ಎಂಥದೋ ಅನುಬಂಧವನ್ನು ನೆನಪಿಗೆ ತರುತ್ತದೆಯಲ್ಲವೆ?

ಹೀಗೆ ನಮ್ಮೂರ ಮೊಹರಂ ಹಬ್ಬದ ಕೊನೆ ದಿನದ ಮೆರವಣಿಗೆಯ ವೈವಿಧ್ಯಮಯ ಜಾನಪದ ಕುಣಿತಗಳನ್ನು ನೋಡುವುದೇ ಒಂದು ಅನುಭವ. ಸರಿ ಸುಮಾರು ಎರಡು ತಾಸು ಈ ಮೆರವಣಿಗೆ ನಡೆಯುತ್ತದೆ. ಇವರಲ್ಲದೆ ಬೇರೆ ಇನ್ನಿತರರೂ ಕೂಡ ತಮ್ಮ ತಮ್ಮ ಕಲಾ ಪ್ರತಿಭೆಗೆ ಅನುಸಾರವಾಗಿ ಕುಣಿದು ಕುಪ್ಪಳಿಸುತ್ತಾರೆ. ಆ ಉತ್ಸಾಹ… ಆ ಹುಮ್ಮಸ್ಸು… ಆ ಉಮೇದಿ… ಛೇ ಛೇ ಬಣ್ಣಿಸಲಸದಳವು.

ಝಡ್ಡ್… ಝಡ್ಡ್… ಝಡ್ಡ್/ಝಡ್ಡಿನಕು, ಝಡ್ಡಿನಕು/ಢಣ್ಣಿನಕ್, ಢಣ್ಣಿನಕ್, ಢಣ್ಣಿನಕ್… ಎಂದು ಹಲಗೆ (ತಮಟೆ) ನುಡಿಯುತ್ತಿರುತ್ತದೆ. ಆ ಹಲಗೆ ವಾದಕರೂ ಕೂಡ ಪರಿಣತರೇ ಆಗಿರುತ್ತಾರೆ. ಆ ಬಾರಿಸುವಿಕೆಗೂ ಕೂಡ ಒಂದು ಪದಗತಿಯ ಲಯವಿರುತ್ತದೆ. ಈ ಛಂದೋಬದ್ಧ ನಾದಕ್ಕೆ ಸಮನಾಗಿ ನೃತ್ಯಪಟು ಹೆಜ್ಜೆ ಹಾಕಬೇಕು. ಅದು ಮಾತ್ರ ಕುಣಿತವೆನಿಸಿಕೊಳ್ಳುತ್ತದೆ. ಪ್ರೇಕ್ಷಕರಿಗೂ ಕೂಡ ಹಿಡಿಸುತ್ತದೆ. ಇವರ ಮುಂದೆ ಸಿನಿಮಾ ನಟರ ಕುಣಿತ ಏನೇನೂ ಅಲ್ಲ ಎಂಬುದೇ ನನ್ನ ಅನಿಸಿಕೆ. ಎಲ್ಲಕ್ಕೂ ಮಿಗಿಲಾಗಿ ಇಲ್ಲಿ ಯಾರಿಗೂ ಯಾವ ನಿರ್ಬಂಧವೂ ಇರುವುದಿಲ್ಲ! ತುಂಬ ಮುಕ್ತವಾಗಿ ತಮತಮಗೆ ತೋಚಿದಂತೆ ಕುಣಿಯುವ ಸ್ವಾತಂತ್ರ್ಯವಿರುತ್ತದೆ.

ಹಲಗೆಯ ಬಡಿತದ ಲಯಕ್ಕೆ ಸರಿ ಹೊಂದುವಂತೆ ಹೆಜ್ಜೆ ಹಾಕುವವರೂ, ಕೈ ಬೀಸುವವರೂ ಮಾತ್ರ ಪ್ರತಿಭಾವಂತ ನೃತ್ಯಪಟುವೆನಿಸಿಕೊಳ್ಳುತ್ತಾರೆ. ಈ ಥರದ ಪ್ರಮಾಣ ಪತ್ರ (ಅಂಥದೇನೂ ಇರುವುದಿಲ್ಲ) ಕೊಡುವವರು ಕೂಡ ಜನ ಸಾಮಾನ್ಯರೇ ಆಗಿರುತ್ತಾರೆ. ಅವರು ಅದನ್ನು ಮುಗಳ್ನಗುತ್ತಲೋ, ಕಣ್ಣಿನಲ್ಲಿ ಮಿಂಚಿಸುತ್ತಲೋ, ಸಂತೋಷ ವ್ಯಕ್ತಪಡಿಸುತ್ತಾರೆಯಷ್ಟೆ. ಕಾಡಿನ ಕುಸುಮವನ್ನು ಯಾರು ಗಮನಿಸುತ್ತಾರೆ? ಆ ಬೀದಿಯಲ್ಲಿ ಹಾದು ಹೋಗುವವರು ತಾನೆ? ಹಾಗೆ ನಮ್ಮೂರ ಈ ನೃತ್ಯಪಟುಗಳ ಕುಣಿತವನ್ನು ನಮ್ಮವರೇ ನೋಡಿ ಆನಂದಿಸುತ್ತಾರೆ. ಅಂಥವರಲ್ಲೊಬ್ಬ ನಾನಾಗುವ ಆನಂದವನ್ನು ನಾನು ಎಂದೂ ಕಳೆದುಕೊಳ್ಳಲಾರೆ. ಅದಕ್ಕಾಗಿಯೇ ನೆನೆವುದೆನ್ನ ಮನಂ; ಮೊಹರಂ ಎನ್ನುತ್ತೇನೆ ನಾನು.

ನಾನು ಮೊದಲೇ ಹೇಳಿದ ಹಾಗೆ ಸರ್ವ ಸ್ವತಂತ್ರವಾಗಿ, ಮೈಮರೆತು ಕುಣಿಯುವುದಿದೆಯಲ್ಲ ಅದಕ್ಕೆ. ಬಹುಶಃ ಬೇರೆ ಎಲ್ಲಿಯೂ ಅವಕಾಶವಿರುವುದಿಲ್ಲ. ಶ್ರಮಜೀವಿಗಳು ಹೀಗೆ ಒಂದೆಡೆ ಸೇರಿ ಸ್ವಲ್ಪ ನಶೆ ಏರಿಸಿಕೊಂಡು (ಕೆಲವರು ಮಾತ್ರ) ಮೆರವಣಿಗೆಯ ಉದ್ದಕ್ಕೂ ಕುಣಿದು, ಯಾರು ಮೆಚ್ಚುತ್ತಾರೆಂದು ಗಮನಿಸದೇ ತಮ್ಮಷ್ಟಕ್ಕೆ ತಾವೇ ಕುಣಿಯುತ್ತಾರೆ. ಇಲ್ಲಿ ಇವರಿಗೆಲ್ಲಾ ಸಂಗಡಿಗರಾಗಿ ಸಾಥ್ ಕೊಡುವವರು ಕೂಡ ಅವರವರ ಗೆಳೆಯರೇ ಆಗಿರುತ್ತಾರೆ. ಇವರ ಕುಣಿತವನ್ನು ಕಂಡು ಆನಂದಿಸುವವರೂ ಅವರವರ ಬಂಧುಗಳೂ, ಸ್ನೇಹಿತರೂ, ಹೆಂಡತಿಯರೂ, ಮಕ್ಕಳೂ, ಮುದುಕರೂ ಆಗಿರುತ್ತಾರೆ. ಇಂಥ ಮುಕ್ತ ವಾತಾವರಣ ಬೇರೆ ಎಲ್ಲಿ ನೋಡಲು ಸಾಧ್ಯ?

ಚಿಕ್ಕಂದಿನಿಂದಲೂ ಈ ಮೊಹರಂ ಮೆರವಣಿಗೆಯನ್ನು ನೋಡುತ್ತಾ ಬಂದ ನನಗೆ ಆಗಾಗ ನಮ್ಮ ಕಾಲದ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರು ಪ್ರತಿಪಾದಿಸುವ ಮುಕ್ತತೆಯ ಮನಸ್ಸಿನ ದರ್ಶನವಾಗುವುದೂ ಉಂಟು! ಯಾವ ಪೂರ್ವಗ್ರಹಿಕೆಗೂ ಒಳಪಡದೆ ಕೇವಲ ಸಂತೋಷಕ್ಕಾಗಿ, ಸಂತೋಷದಿಂದ ಕುಣಿದು, ಜಾತಿ, ಮತ ಭೇದಭಾವಗಳನ್ನು ಮೀರಿ ಎಲ್ಲರೊಳಗೊಂದಾಗಿ ಕುಣಿಯುವುದಿದೆಯಲ್ಲ ಅಂಥ

ಶ್ರೇಷ್ಠ ಕಲೆಯನ್ನು ಬೇರೆ ಎಲ್ಲಿ ನೋಡಲು ಸಾಧ್ಯ? ಮೊಹರಂ ಆಚರಣೆಯನ್ನು ಮುಸ್ಲಿಂರು ಸಂಭ್ರಮದಿಂದ ಆಚರಿಸುವುದಿಲ್ಲ, ಅದು ಅವರಿಗೆ ದುಃಖದ ಆಚರಣೆ. ಆದರೆ ಜನ ಸಾಮಾನ್ಯರಿಗೆ ಆ ಯಾವ ಗೋಜಲೂ ನೆನಪಿಗೆ ಬಾರದೆ ಹಿಂದೂ ಮುಸ್ಲಿಮರೆಲ್ಲರೂ ಒಂದಾಗಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆಯಲ್ಲ…! ಅದು ನೀಡುವ ಸಂದೇಶವೇ ಬೇರೆ.

ಮೆರವಣಿಗೆಯನ್ನು ನೋಡುತ್ತಾ ನಿಂತ ನಮ್ಮೂರ ಸಮಷ್ಟಿ ಜನ ಚಪ್ಪಾಳೆ ತಟ್ಟಿ, ಸಂತೋಷಪಟ್ಟು, ಭಾವೈಕ್ಯತೆಯ ಸಂದೇಶ ಹೊತ್ತು ತಮ್ಮ ತಮ್ಮ ಮನೆಗೆ ತೆರಳುತ್ತಾರೆ, ನಾನೂ ಕೂಡ.

Leave a Reply

Your email address will not be published.