ನೆಮ್ಮದಿಯ ನಾಳೆಗೆ ಕನಿಷ್ಟ ನಿರೀಕ್ಷೆಗಳು

-ಡಾ.ವಿನತೆ ಶರ್ಮ

2021 ಹೊಸವರ್ಷವೇ ಸರಿ. ಅದಕ್ಕೆ ಏನಾದರೂ ಸ್ವಲ್ಪ ಹೊಸತನವನ್ನು ಸೇರಿಸೋಣ ಎಂದು ಮನಸ್ಸು ಆಶಿಸಿದರೂ ಅದೇ ಮನಸ್ಸು ಹಿಂಜರಿಯುತ್ತದೆ. ಪ್ರೈಮರಿ ಶಾಲೆಯಲ್ಲಿ ಉರು ಹೊಡೆದ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ಧೋಪದೇಶ ಸುಳಿಯುತ್ತದೆ. ಈ ಕೊರೋನ ವೈರಸ್ ಹಾವಳಿ ತುಂಬಿದ 2020 ಕಠಿಣ ವರ್ಷದ ಬಿಸಿಯ ಹಬೆ ಇನ್ನೂ ನಮ್ಮನ್ನೆಲ್ಲಾ ಆವರಿಸಿರುವುದರಿಂದ ಏನನ್ನೂ ಆಶಿಸುವುದು ಬೇಡ, ಒಂದಷ್ಟು ನಿರೀಕ್ಷೆಗಳಾದರೂ ಇದ್ದರೆ ಸೈ, ಮನುಷ್ಯ ಸ್ವಭಾವವಲ್ಲವೇ.

ಎಲ್ಲರಿಗೂ ಯಾವುದೇ ಭೇದಭಾವವಿಲ್ಲದೆ ಆರೋಗ್ಯಭಾಗ್ಯವಿರಲಿ. ಇದು ನನ್ನ ಮೊದಲ ನಿರೀಕ್ಷೆ ಮತ್ತು ಅಪೇಕ್ಷೆ ಕೂಡ. 2020ರಲ್ಲಿ ನನ್ನ ತವರಿನ ಕಡೆಯ ಸಂಬಂಧಿಕರಲ್ಲಿ ಹಲವರು ಆರೋಗ್ಯ ಸಮಸ್ಯೆಗಳಿಂದ ತೀರಿಕೊಂಡರು. ಸಾಯುವಂಥಾ ವಯಸ್ಸೇನೂ ಅಲ್ಲ. ಇದೇ ರೀತಿ ಸಾಯಬಾರದ ವಯಸ್ಸಿನಲ್ಲಿ, ತೀರಾ ಗಂಭೀರವಾದ ಕಾರಣವಿಲ್ಲದೆ ಈ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಜನ ಸತ್ತಿದ್ದಾರೆ.

ಅವರಲ್ಲಿ ಹೆಚ್ಚಿನವರು ಆರೋಗ್ಯಸೇವೆ ಮತ್ತು ಸೌಲಭ್ಯಗಳನ್ನು ಪಡೆಯಲಾಗದವರು. ಅದು ಅವರ ತಪ್ಪಲ್ಲ. ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪುವಂತೆ ಮಾಡುವುದು, ಆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸರಕಾರದ ಜವಾಬ್ದಾರಿ. ಅದುವೇ ಒಂದು ಆರೋಗ್ಯವಂತ ಸಮಾಜದ ಲಕ್ಷಣ ಕೂಡ. ಹಾಗಾಗಿ, ಸಮರ್ಪಕ ಸಾರ್ವಜನಿಕ ಆರೋಗ್ಯ ಸೇವೆ ನನ್ನ ಮೊದಲ ನಿರೀಕ್ಷೆ.

ನನ್ನ ಎರಡನೇ ನಿರೀಕ್ಷೆ ಕೂಡ ಆರೋಗ್ಯಕ್ಕೆ ಸೇರಿದ್ದು. ಆದರೆ ಅದಕ್ಕೆ ಶಾಂತಿ ಕೂಡ ಅಂಟಿಕೊಂಡಿದೆ. ನನ್ನ ಕೆಲಸದ ಕ್ಷೇತ್ರ ಮಾನಸಿಕ ಆರೋಗ್ಯ. ನಾನು ಆರೋಗ್ಯವಿಷಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದು ಮತ್ತು ಆರೋಗ್ಯವೆಂಬುದು ಒಬ್ಬ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಅದು ಬಹು ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂಬ ಕಾರಣವೂ ಇದೆ. ನಮ್ಮ ಆರೋಗ್ಯ ನಮ್ಮ ಪ್ರಪಂಚದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರ ಕ್ಷೇತ್ರಗಳ ನಾನಾ ಅಂಶಗಳ ಜೊತೆ ಆಳವಾದ ಸಂಬಂಧವನ್ನು ಹೊಂದಿದೆ.

ಉದಾಹರಣೆಗೆ ಅಮೆರಿಕೆಯಲ್ಲಿ ತಯಾರಾದ ಒಂದು `ಹಿಡಿ-ಹೊಡಿ-ಆಯುಧಗಳು-ಕೊಲ್ಲು-ಗೆಲ್ಲು’ ಎಂಬ ಹಿಂಸಾತ್ಮಕ ಮತ್ತು ಸ್ಪರ್ಧಾತ್ಮಕ ಕಂಪ್ಯೂಟರ್ ಗೇಮ್ ಜನಪ್ರಿಯವಾಗಿ ಪ್ರಪಂಚದ ಕೋಟಿಕೋಟಿ ಮಕ್ಕಳನ್ನು ಸೆಳೆಯಬಹುದು. ಆ ಗೇಮ್ ಅವರನ್ನು ವಶಪಡಿಸಿಕೊಂಡು ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಗಳು ಬಹಳಷ್ಟಿವೆ. ಕಂಪ್ಯೂಟರ್ ಮುಂದೆ ಕೂತು ಪದೇಪದೇ ಅಂತಹ ಪ್ರೋಗ್ರಾಮುಗಳನ್ನು ಬಳಸಿದರೆ ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯೂ ಅಸಮರ್ಪಕವಾಗುತ್ತದೆ. ನನ್ನ ಕೆಲಸದ ಫೋಕಸ್ ಇರುವುದು ನೈಸರ್ಗಿಕ ಪರಿಸರದ ಜೊತೆ ಹೆಚ್ಚುಹೆಚ್ಚು ಸಂಬಂಧವನ್ನು ಬೆಳೆಸಿಕೊಂಡು ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳುವುದು. ಜೊತೆಗೆ ನೈಸರ್ಗಿಕ ಪ್ರಪಂಚದ ಎಲ್ಲಾ ಜೀವಿಗಳನ್ನೂ ಗೌರವಿಸುತ್ತಾ ಅವುಗಳಲ್ಲಿ ನಾವೂ ಕೂಡ ಒಂದು ಎಂಬ ಪ್ರಜ್ಞೆಯನ್ನು, ಜಾಣ್ಮೆಯನ್ನು ರೂಢಿಸುವುದು.

ನನ್ನ ಮೇಲಿನ ನಿರೀಕ್ಷೆಯಲ್ಲಿ ಹಲವಾರು ಅಂಶಗಳು ಅಡಕವಾಗಿವೆ. ಪರಿಸರ ಸಂರಕ್ಷಣೆ, ಸಮತೋಲನದಲ್ಲಿ ನಮ್ಮ ಪಾತ್ರ ಎಂಬುದು ಒಂದಾದರೆ ಅವಕ್ಕೆ ತಳುಕು ಹಾಕಿಕೊಂಡಿರುವುದು ಸರಕಾರಗಳ ಪಾಲಿಸಿಗಳು ಮತ್ತು ಪ್ರೋಗ್ರಾಮುಗಳು. ಒಂದು ಸರಕಾರ ತನ್ನ ದೇಶದ ಹಸಿರು ವಲಯವನ್ನು ಹೆಚ್ಚಿಸುವುದು, ಕಾಡುಗಳನ್ನು ಕಾಪಾಡುವುದು, ಗಣಿಗಾರಿಕೆಯನ್ನು ನಿಲ್ಲಿಸುವುದು, ನವೀಕರಿಸಬಹುದಾದ ಇಂಧನಗಳನ್ನು ಬಳಸುವುದು ಇತ್ಯಾದಿಗಳನ್ನು ಬದ್ಧತೆಯಿಂದ ಪಾಲಿಸಿದರೆ ಅದರ ನೇರ ಮತ್ತು ದೂರದ ಒಳ್ಳೆಯ ಪರಿಣಾಮಗಳು ನಮ್ಮದಾಗುತ್ತವೆ. ಅದು ಆರೋಗ್ಯವೇ ಆಗಬಹುದು ಅಥವಾ ನೆಮ್ಮದಿ ಮತ್ತು ಸಂತೋಷವೇ ಆಗಬಹುದು.

ನನ್ನ ಮೂರನೇ ಮತ್ತು ಕೊನೆಯ ನಿರೀಕ್ಷೆ ನಮ್ಮೆಲ್ಲರ ನೆಮ್ಮದಿ, ಶಾಂತಿ ಮತ್ತು ಸಂತೋಷಕ್ಕೆ ಸೇರಿದ್ದು. ಈ ವಿಷಯವನ್ನು ಕುರಿತು ಪಶ್ಚಿಮ ದೇಶಗಳಲ್ಲಿ ಅಧ್ಯಯನಗಳು ನಡೆದಿವೆ. ಭೂತಾನ್ ದೇಶದ ಸಮಾಜದಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಸಂತೋಷವಿದೆಯಂತೆ. ಯೂರೋಪಿನ ಉತ್ತರ ಭಾಗದ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಹೆಚ್ಚಿನ ಮಟ್ಟದ ನೆಮ್ಮದಿ ಮತ್ತು ಶಾಂತಿಯಿದೆಯಂತೆ. ಸ್ವಲ್ಪ ಗಮನಿಸಿದರೆ, ಈ ದೇಶಗಳು ಒಬ್ಬರ ಮೇಲೊಬ್ಬರು ಜಗಳಕ್ಕೆ ಹೋಗುವುದಿಲ್ಲ, ತಮ್ಮ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಪರಿಸರಕ್ಕೆ ಬಹು ಹತ್ತಿರವಾದ ಜೀವನಶೈಲಿಯನ್ನು ಹೊಂದಿದ್ದಾರೆ. ನಿಸರ್ಗವೇ ಅವರಲ್ಲಿ ಶಾಂತಿ, ಸಮಾಧಾನ ಮತ್ತು ನೆಮ್ಮದಿಯನ್ನು ತುಂಬಿದೆಯೇನೋ ಎನ್ನಿಸುತ್ತದೆ.

ಹೊಸವರ್ಷ ನಮ್ಮಲ್ಲಿ ಹೊಸತನವನ್ನು ತರಲಿ. ನಮ್ಮ ಸಮಾಜಗಳಲ್ಲಿರುವ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಒಡಕುಗಳನ್ನು ನಿವಾರಿಸಲಿ. ನಮ್ಮ ಹುಲುಮನಸ್ಸುಗಳಲ್ಲಿರುವ ವಿಭಜನಾತ್ಮಕ ಮನೋದೃಷ್ಟಿಯನ್ನು ತೊಲಗಿಸಲಿ.

Leave a Reply

Your email address will not be published.