ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ ಪೌರತ್ವ ಮಸೂದೆ

ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು ತನ್ನ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದೆ.

ಲೋಕಸಭೆಯಲ್ಲಿ ಪಾರಿತವಾಗಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ಪೌರತ್ವ (ತಿದ್ದುಪಡಿ) ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಎತ್ತಿಕೊಳ್ಳದಂತೆ ಮಾಡುವಲ್ಲಿ ವಿಪಕ್ಷಗಳು ಜಯಗಳಿಸಿವೆ. ಭಾರತೀಯ ಜನತಾ ಪಕ್ಷದ ಗರಿಮೆಯ ಈ ಎರಡೂ ಕಾನೂನು ತಿದ್ದುಪಡಿಗಳನ್ನು ಚರ್ಚೆಗೆ ಹಾಗೂ ನಿರ್ಣಯಕ್ಕೆ ಎತ್ತಿಕೊಳ್ಳದಂತೆ ಅಡೆತಡೆಯೊಡ್ಡಿ ಕಾಂಗ್ರೆಸ್ ಮತ್ತಿತರ ವಿರೋಧಿ ಪಕ್ಷಗಳು ಬಿಜೆಪಿಯನ್ನು ‘ಕಟ್ಟಿಹಾಕುವ’ ಪ್ರಯತ್ನದಲ್ಲಿ ಯಶಸ್ವಿಯಾಗಿವೆ. ಪೌರತ್ವ ಕಾಯಿದೆಯನ್ನು ವಿರೋಧಿಸುವಲ್ಲಿ ಜೆಡಿಯು, ಶಿವಸೇನಾ ಮತ್ತಿತರ ಎನ್‍ಡಿಎ ಪಕ್ಷಗಳೂ ಪಾಲುದಾರರಾಗಿ ತಮ್ಮ ‘ಜಾತ್ಯತೀತ’ ನಿಲುವನ್ನು ಹೇಳಿಕೊಂಡಿವೆ.

ಹಿಂದೂಸ್ತಾನ ಪಾಕಿಸ್ತಾನವೆಂದು ದೇಶದ ವಿಭಜನೆಯ ಎಪ್ಪತ್ತು ವರ್ಷಗಳ ನಂತರವಾದರೂ ದೇಶದ ಗಡಿಯಾಚೆಗೆ ಧಾರ್ಮಿಕ ಕಾರಣಗಳಿಗಾಗಿ ಉಪದ್ರವಕ್ಕೊಳಗಾದ ನಿರಾಶ್ರಿತ ಹಿಂದೂಗಳು ಹಿಂದೂಸ್ತಾನದ ಪೌರತ್ವಕ್ಕೆ ಅರ್ಹರೆಂದು ಕೇಂದ್ರ ಸರ್ಕಾರ ಈ ಕಾನೂನು ರಚನೆಯನ್ನು ಕೈಗೆತ್ತಿಕೊಂಡಿತ್ತು. ನರೇಂದ್ರ ಮೋದಿ ಸರ್ಕಾರ 2014ರಲ್ಲಿ ತಾನು ಮಾಡಿದ್ದ ಚುನಾವಣೆ ಪ್ರಣಾಳಿಕೆಯ ಈ ಅಂಶವನ್ನು ಈಡೇರಿಸಲು ಬದ್ಧತೆ ತೋರಿ ತನ್ನ ‘ಹಿಂದೂ ರಾಷ್ಟ್ರ’ದ ಅಜೆಂಡಾ ಮುಂದುವರೆಸಿದ್ದೇನೆಂದು ಕೂಡಾ ಹೇಳಿಕೊಳ್ಳಲು ಬಯಸಿತ್ತು.

ಈ ಪೌರತ್ವ (ತಿದ್ದುಪಡಿ) ಮಸೂದೆ-2019 ರಂತೆ ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ಕಿರುಕುಳಕ್ಕೆ ಒಳಪಟ್ಟ ಯಾವುದೇ ಹಿಂದೂ, ಜೈನ್, ಬೌದ್ಧ, ಸಿಖ್ಖ್ ಹಾಗೂ ಪಾರ್ಸಿ ನಿರಾಶ್ರಿತರು ಭಾರತದ ಪೌರತ್ವವನ್ನು ಪಡೆಯಲು ಅರ್ಹರಿರುತ್ತಾರೆ. ಮೇಲಾಗಿ ಭಾರತದಲ್ಲಿ ಕಾನೂನುಬಾಹಿರವಾಗಿ ಕಳೆದ ಆರು ವರ್ಷಗಳಿಂದ ನೆಲೆಸಿರುವ ವಿದೇಶಿ ಹಿಂದೂ ಮತೀಯರು ದೇಶದ ಪೌರತ್ವಕ್ಕೆ ಸ್ವಾಭಾವಿಕವಾಗಿ ಅರ್ಹರಾಗುತ್ತಾರೆ. ಇದರೊಂದಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ನೆಲೆಸಿದ್ದ ಹಿಂದೂ-ಸಿಖ್ಖ್ ಧರ್ಮೀಯರು ತಮ್ಮ ತವರು ನಾಡಿಗೆ ಮರಳಲು ನೆರವಾಗುತ್ತದೆ. ಮುಸ್ಲಿಂ ಬಹುಮತದ ಮತ್ತು ಮುಸ್ಲಿಂ ಧರ್ಮೀಯ ಈ ನೆರೆಹೊರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತ ಮತೀಯರಿಗೆ ತನ್ನ ಹಿಂಬಾಗಿಲಾದರೂ ತೆರೆದು ಭಾರತ ಹಿಂದೂ-ಸಿಖ್ಖ್ ಧರ್ಮೀಯರನ್ನು ‘ತನ್ನವರೆಂದು’ ಹೇಳಿಕೊಳ್ಳಲು ಸಹಕಾರಿಯಾಗಿದೆ.

ಹಲವು ಕಾರಣಗಳಿಗಾಗಿ ಈ ಪೌರತ್ವ ಮಸೂದೆ ದೇಶದಲ್ಲಿ ಪ್ರಥಮವೆನ್ನಿಸುತ್ತದೆ. ಭಾರತವು ಸಂವಿಧಾನದಲ್ಲಿ ತನ್ನನ್ನು ‘ಜಾತ್ಯತೀತ’ ಎಂದು ಹೇಳಿಕೊಳ್ಳುವುದರ ಜೊತೆಗೆ ಯಾವುದೇ ವಿಷಯದಲ್ಲಿಯೂ ಹಿಂದೂಗಳಿಗೆ ವಿಶೇಷ ಸ್ಥಾನಮಾನ ನೀಡಿರಲಿಲ್ಲ. ಭಾರತವು ಹಿಂದೂ ಧರ್ಮೀಯರಿಗೆ ಇರುವ ಏಕೈಕ ದೇಶವೆಂಬ ವ್ಯಾಖ್ಯೆಯಂತೂ ಇರಲೇ ಇಲ್ಲ. ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು ತನ್ನ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದೆ.

ಈ ಕಾನೂನು ತಿದ್ದುಪಡಿಯಿಂದ ಬಿಜೆಪಿಯು ಅಸ್ಸಾಮಿನಲ್ಲಿ ಅಸೋಮ್ ಗಣ ಪರಿಷದ್, ಆಲ್ ಅಸ್ಸಾಮ್ ಸ್ಟೂಡೆಂಟ್ಸ್ ಯೂನಿಯನ್ ಹಾಗೂ ಮತ್ತಿತರ ಹಲವಾರು ಈಶಾನ್ಯ ರಾಜ್ಯಗಳ ರಾಜಕೀಯ ಮೈತ್ರಿಯನ್ನು ಕಳೆದುಕೊಳ್ಳಬೇಕಾಗಿದೆ. ಜೊತೆಗೆ ಜೆಡಿಯು ಮತ್ತಿತರ ಹಲವು ಮಿತ್ರ ಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ. ಆದರೂ ಯಾವುದೇ ರಾಜಕೀಯ ಬೆದರಿಕೆಗಳಿಗೆ ಮಣಿಯದೆ ತನ್ನ ಐದು ವರ್ಷಗಳ ಆಡಳಿತದ ಕೊನೆಯಲ್ಲಾದರೂ ಈ ಕಾನೂನು ತಿದ್ದುಪಡಿಯನ್ನು ಸಂಸತ್ತಿನ ಮುಂದಿಟ್ಟು ಭಾರತೀಯ ಜನತಾಪಕ್ಷವು ‘ಹಿಂದುತ್ವ’ ಪ್ರತಿಪಾದನೆಯೇ ತನಗೆ ಅತ್ಯಂತ ಪ್ರಾಮುಖ್ಯ ಗುರಿಯೆಂದು ಸಾಬೀತು ಪಡಿಸಿದೆ.

ಎಣಿಕೆಯಂತೆ ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಓವೈಸಿಯ ಎಮ್‍ಐಎಮ್, ಬದ್ರುದ್ದೀನ್ ಅಜ್ಮಲ್‍ರವರ ಎಐಡಿಯುಎಫ್ ಮತ್ತಿತರ ಪಕ್ಷಗಳು ಕಾನೂನು ತಿದ್ದುಪಡಿಯನ್ನು ಟೀಕಿಸಿದ್ದವು. ಧರ್ಮದ ಆಧಾರದ ಮೇಲೆ ನೀಡಬಯಸಿದ ಈ ಸವಲತ್ತನ್ನು ಕೆಲವು ಪಕ್ಷಗಳು ಟೀಕಿಸಿದ್ದರೆ ಮತ್ತೆ ಕೆಲವು ಪಕ್ಷಗಳು ನಿರಾಶ್ರಿತ ಮುಸ್ಲಿಂ ಧರ್ಮೀಯರಿಗೂ ಈ ಪೌರತ್ವ ಮಸೂದೆಯ ಸೌಕರ್ಯ ಸಲ್ಲಬೇಕೆಂದು ಕೇಳಿದ್ದವು. ತಿದ್ದುಪಡಿಯನ್ನು ಬೆಂಬಲಿಸಲಾಗದೆ ಅಥವಾ ತೀಕ್ಷ್ಣವಾಗಿ ಟೀಕಿಸಲಾಗದೆ ಕಾಂಗ್ರೆಸ್ ಪಕ್ಷವು ಮೌನಕ್ಕೆ ಶರಣಾಗಿತ್ತು.

ಆದರೆ ಮೊದಲಿನಿಂದಲೂ ಬಾಂಗ್ಲಾ ನಿರಾಶ್ರಿತ ಹಿಂದೂ ಮತ್ತು ಮುಸ್ಲಿಮರಿಬ್ಬರನ್ನೂ ಅಸ್ಸಾಮಿನಿಂದ ಹೊರಹಾಕಿ ಎಂದು ಚಳವಳಿ ಮಾಡುತ್ತಾ ಬಂದಿದ್ದ ಎಜಿಪಿ ಮತ್ತು ಅಸ್ಸಾಮ್ ಸ್ಟೂಡೆಂಟ್ಸ್ ಯೂನಿಯನ್‍ಗಳು ತಿದ್ದುಪಡಿಯ ವಿರುದ್ಧ ಬೀದಿಗೆ ಇಳಿದಿದ್ದವು. ಈ ಕಾನೂನು ತಿದ್ದುಪಡಿಯು 1985ರ ಅಸ್ಸಾಮ್ ಒಪ್ಪಂದದ ವಿರುದ್ಧವಾಗಿದೆ ಹಾಗೂ ಎನ್‍ಆರ್‍ಸಿ (ಅಸ್ಸಾಮಿನ ರಾಷ್ಟ್ರೀಯ ಪೌರತ್ವದ ರಿಜಿಸ್ಟರ್) ಉದ್ದೇಶವನ್ನು ವಿಫಲಗೊಳಿಸಲಿದೆ ಎಂದು ಈ ಅಸ್ಸಾಮಿನ ಪಕ್ಷಗಳು ತಕರಾರೆತ್ತಿವೆ. ಎನ್‍ಆರ್‍ಸಿ ಅಭ್ಯಾಸದಂತೆ ಈಗಾಗಲೇ ಅಸ್ಸಾಮಿನಲ್ಲಿ ಗುರುತಿಸಲಾಗಿರುವ 40 ಲಕ್ಷ ವಿದೇಶೀಯರಲ್ಲಿ ಹಲವು ಲಕ್ಷಾಂತರ ವಿದೇಶಿ ಹಿಂದೂ ಧರ್ಮೀಯರು ಭಾರತದ ಪೌರತ್ವ ಪಡೆಯುತ್ತಾರೆ ಹಾಗೂ ಈ ಮೂಲಕ ಎನ್‍ಆರ್‍ಸಿ ಅಭ್ಯಾಸ ವಿಫಲವಾಗುತ್ತದೆ ಎಂದೂ ಅವರು ದೂರಿದ್ದಾರೆ.

ಕಾಂಗ್ರೆಸ್ ಪ್ರಧಾನಿಗಳಾದ ನೆಹರೂ ಮತ್ತು ಮನಮೋಹನ್ ಸಿಂಗರು ಕೂಡಾ ನೆರೆಹೊರೆಯ ರಾಷ್ಟ್ರಗಳ ಅಲ್ಪಸಂಖ್ಯಾತ ಧಾರ್ಮಿಕರಿಗೆ ಆಶ್ರಯ ನೀಡುವ ಭರವಸೆ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನೆದಿದ್ದಾರೆ.

ಪೌರತ್ವ ಮಸೂದೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಧಾರ್ಮಿಕ ಕಾರಣಗಳಿಗಾಗಿ ನೆರೆಹೊರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಒಳಗಾದ ಹಿಂದೂ ಮತೀಯರಿಗೆ ಭಾರತ ಬಿಟ್ಟು ಬೇರೆಲ್ಲೂ ಹೋಗಲು ಜಾಗವಿಲ್ಲವೆಂದಿದ್ದಾರೆ. ಕಾಂಗ್ರೆಸ್ ಪ್ರಧಾನಿಗಳಾದ ನೆಹರೂ ಮತ್ತು ಮನಮೋಹನ್ ಸಿಂಗರು ಕೂಡಾ ನೆರೆಹೊರೆಯ ರಾಷ್ಟ್ರಗಳ ಅಲ್ಪಸಂಖ್ಯಾತ ಧಾರ್ಮಿಕರಿಗೆ ಆಶ್ರಯ ನೀಡುವ ಭರವಸೆ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನೆದಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಈ ವಿವಾದಾತ್ಮಕ ಕಾನೂನು ತಿದ್ದುಪಡಿ ತಂದಿದೆಯೆಂಬ ದೂರೂ ಇದೆ. ಆದರೆ ಈ ಮಸೂದೆಯನ್ನು ಕೈಗೆತ್ತಿಕೊಂಡು ಒಂದು ಕಡೆಯಲ್ಲಿ ತನ್ನ ಮತದಾರ ವರ್ಗವನ್ನು ಸಂತೃಪ್ತಿಗೋಳಿಸಲು ಬಿಜೆಪಿ ಸಮರ್ಥವಾದರೆ ಮತ್ತೊಂದು ಕಡೆಯಲ್ಲಿ ತನ್ನ ಒಕ್ಕೂಟದ ಮಿತ್ರಪಕ್ಷಗಳನ್ನು ಕಳೆದುಕೊಳ್ಳುವ ಅಪಾಯವನ್ನೂ ಎದುರಿಸಿದೆ. ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಬಹುಬೆಂಬಲವಿಲ್ಲದೆ ಈ ಮಸೂದೆ ಸದ್ಯಕ್ಕೆ ಕಸದ ಬುಟ್ಟಿಗೆ ಸೇರಿದೆ. ಏನೇ ಆದರೂ ತನ್ನ ಚುನಾವಣೆ ಪ್ರಣಾಳಿಕೆಯ ಪ್ರಮುಖ ಅಂಶವೊಂದನ್ನು ಈಡೇರಿಸುವ ಪ್ರಯತ್ನವನ್ನಂತೂ ಬಿಜೆಪಿ ಮಾಡಿದೆ.

Leave a Reply

Your email address will not be published.