ನೆಲ-ಜಲ ಬಳಕೆಗೊಂದು ನೀತಿ ಇರಬೇಕಲ್ಲವೇ?

ವನ್ಯಜೀವಿ ದಾಳಿ ಸಮಸ್ಯೆಗಳೆಲ್ಲವನ್ನೂ ಒಂದೇ `ರಾಮಬಾಣ’ದಿಂದ ಪರಿಹರಿಸಲಾಗದು. ಆಯಾ ಪ್ರದೇಶಕ್ಕನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ರೈತರಿಗೆ ನಿಜಕ್ಕೂ ಬೇಕಾದದ್ದು, ಸಶಕ್ತ ಹಾಗೂ ಜನಸಹಭಾಗಿತ್ವದ ಅರಣ್ಯ ಸಂರಕ್ಷಣಾ ನೀತಿ. ದೂರಗಾಮಿ ದೃಷ್ಟಿಕೋನವುಳ್ಳ ವಿವೇಕಪೂರ್ಣ ನೀತಿಯೊಂದಕ್ಕಾಗಿ ನಾವು ಪ್ರಯತ್ನಿಸಬೇಕಿದೆ.

ಡಾ.ಕೇಶವ ಎಚ್. ಕೊರ್ಸೆ  

ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಲ್ಲಿ ಸರ್ಕಾರ ಹಾಗೂ ಜನರೂ ಕೂಡ ಹೊಣೆಗಾರರೇ?

ಸರ್ಕಾರದ ಜವಾಬ್ದಾರಿ ಇದ್ದೇ ಇದೆ. ನಾಡಿನ ಜಲಮೂಲವಾದ ಪಶ್ಚಿಮಘಟ್ಟದಲ್ಲಿ ಅದೆಷ್ಟು ಅರಣ್ಯ ಛಿದ್ರವಾಗುತ್ತಿದೆಯೆಂದರೆ, ಅಭಯಾರಣ್ಯಗಳ ಹೊರಗೆ ಒಂದೆರಡು ಚ.ಕಿ.ಮಿ. ವಿಸ್ತೀರ್ಣದ  ಸಹಜ ಕಾಡು ಕಾಣುವುದೂ ದುಸ್ತರವಾಗುತ್ತಿದೆ. ಮಲೆನಾಡಿನಲ್ಲಿ ಅನೆಯಂಥ ಸಸ್ತನಿಗಳ ವಲಸೆದಾರಿಗಳನ್ನು ಒತ್ತುವರಿ, ಹೊಸ ವಿದ್ಯುತ್ ಮಾರ್ಗಗಳು ಹಾಗೂ ಹೊಸ ರಸ್ತೆಗಳು ತುಂಡರಿಸಿಹಾಕುತ್ತಿವೆ. ರೈತರ ಹೆಸರಿನಲ್ಲಿ ಬಲಾಢ್ಯರು ಈಗಲೂ ಹೊಸದಾಗಿ ಅರಣ್ಯ ಒತ್ತುವರಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಜನರು ಅಪೇಕ್ಷಿಸದೆಯೂ, ಮಲೆನಾಡಿನ ಕಾಡನ್ನು ಸೀಳಿ ಸಾಗುವ ಹೊಸ-ಹೊಸ ಹೆದ್ದಾರಿಗಳು ಹಾಗೂ ರೈಲುಮಾರ್ಗ ಯೋಜನೆಗಳಿಗೆ ಮಂಜೂರಾತಿ ಸಿಗುತ್ತಿದೆ. ಅಕ್ರಮ ಕ್ವಾರಿ-ಗಣಿಗಳು ಮಲೆನಾಡಿನ ಹೊಳೆತೊರೆಗಳ ಮಡಿಲನ್ನು ಕತ್ತರಿಸುತ್ತಿವೆ. ಗೋಮಾಳ-ಕಿರುಅರಣ್ಯಗಳ ಹುಲ್ಲುಗಾವಲುಗಳಲ್ಲಿ ಈಗಲೂ ಅಕೇಶಿಯಾದಂಥ ಏಕಸಸ್ಯ ನೆಡುತೋಪುಗಳು ನಿರ್ಮಾಣವಾಗುತ್ತಿದ್ದು, ಹಳ್ಳಿಗರ ದನಗಳಿಗೆ ಮೇವೂ ದೊರಕದ ಪರಿಸ್ಥಿತಿಯಿದೆ. ಇವೆಲ್ಲವುಗಳ ಒಟ್ಟೂ ಪರಿಣಾಮವೆಂದರೆ, ನೈಜ ಕಾಡಿನ ವಿಸ್ತಾರ ಶೇ.10ಕ್ಕಿಂತಲೂ ಕಡಿಮೆಯಾಗಿರುವದು!

ಅತ್ಯಂತ ಸೂಕ್ಷ್ಮ ಪರಿಸರದ ಮಲೆನಾಡು ಹಾಗು ಕರಾವಳಿ ಪ್ರದೇಶದಲ್ಲಿ, ದೂರದೃಷ್ಟಿಯುಳ್ಳ ವೈಜ್ಞಾನಿಕ ನೆಲ-ಜಲ-ಕಾಡಿನ ನಿರ್ವಹಣಾ ನೀತಿಯೊಂದರ ಆಧಾರದಲ್ಲಿಯೇ ಅಭಿವೃದ್ಧಿಕಾರ್ಯಗಳನ್ನು ರೂಪಿಸಬೇಕಿತ್ತು. ಆದರೆ, ಇಂಥ ಚಿಂತನೆಗಳು ಹಾಗೂ ವಿವೇಕ ಸರ್ಕಾರಿ ನೀತಿ ಹಾಗೂ ಕಾರ್ಯಕ್ರಮಗಳಲ್ಲಿ ಇಲ್ಲದಿರುವದರಿಂದಲೇ, ಹಲವು ಬಗೆಯಲ್ಲಿ ಮಾನವ ನಿರ್ಮಿತ ಸಮಸ್ಯೆಗಳು ಉದ್ಭವಿಸುತ್ತಿವೆ. ಸಣ್ಣಮಳೆಗೂ ನದಿಯಲ್ಲಿ ನೆರೆ, ಒಂದು ರಭಸದ ಮಳೆಗೆ ಭೂಕುಸಿತ, ಚೆನ್ನಾಗಿ ಮಳೆಬಿದ್ದ ವರ್ಷವೂ ಬೇಸಿಗೆಯಲ್ಲಿ ನೀರಿಗೆ ಬರ… ಇವೆಲ್ಲ ಸಾರುವುದು ಈ ವಿದ್ಯಮಾನವನ್ನೇ ಅಲ್ಲವೇ?

ಹಳ್ಳಿಗಳಲ್ಲಿ ವನ್ಯಪ್ರಾಣಿಗಳ ಹಾವಳಿ ತೀರಾ ಹೆಚ್ಚುತ್ತಿರುವುದು ಕೂಡ ಪರಿಸರದ ಈ ಅನಾರೋಗ್ಯದ ಪರಿಣಾಮವೇ. ಸರ್ಕಾರಕ್ಕೆ ಇದು ಅರ್ಥವಾಗಿಲ್ಲ ಎಂದಲ್ಲ. ಆದರೆ, ಸರ್ಕಾರದ ಬೃಹತ್ ವ್ಯವಸ್ಥೆಯನ್ನು ಈ ನಿಟ್ಟಿನಲ್ಲಿ ಎಚ್ಚರಿಸಬೇಕಾದ ಕಾರ್ಯವಾಗುತ್ತಿಲ್ಲ ಎಂದು ತೋರುತ್ತದೆ. ರೈತರು, ಪಂಚಾಯತ-ರಾಜ್ ವ್ಯವಸ್ಥೆ, ವಿದ್ಯಾವಂತ ಯುವಜನತೆ, ಜನಪ್ರತಿನಿಧಿಗಳು, ವಿಜ್ಞಾನಿಗಳು- ಇವರೆಲ್ಲ, ಸಮಷ್ಟಿಯಲ್ಲಿ ಈಗಲಾದರೂ ಈ ಜವಾಬ್ದಾರಿ ನಿರ್ವಹಿಸಬೇಕಿದೆ.

ಮೇಲುನೋಟಕ್ಕೇ ಅರ್ಥವಾಗುವ ಈ ಸಮಸ್ಯೆಯನ್ನು ಇನ್ನೂ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆಯಿದೆಯೇ? ಇದಕ್ಕೊಂದು ಸಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆಯೇ?

ಅರಣ್ಯ-ಪರಿಸರದ ನಾಶ ಹಾಗೂ ಅರಣ್ಯದ ಛಿದ್ರೀಕರಣದಿಂದ ಕಾಡಿನ ವನ್ಯಪ್ರಾಣಿಗಳು ನಾಡಿಗೆ ದಾಳಿಯಿಡುತ್ತಿವೆ ಎಂಬುದನ್ನು ಹಲವಾರು ಅಧ್ಯಯನಗಳು ಸಾಬೀತುಮಾಡಿವೆ. ಇದರಲ್ಲಿ ಗೊಂದಲವಿಲ್ಲ. ಆದರೆ, ಇದು ಒಂದು ಸಾಮಾನ್ಯ ಜ್ಞಾನವಾಯಿತು. ಆದರೆ, ಇದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರಬಲ್ಲದು. ಬೆಳೆಯುವ ಬೆಳೆ, ಆ ಪ್ರದೇಶದ ಕಾಡು ಹಾಗೂ ಅಲ್ಲಿನ ವನ್ಯಜೀವಿಗಳು-ಇವನ್ನೆಲ್ಲ ಅವಲಂಬಿಸಿ, ಒಂದೊಂದು ಪ್ರದೇಶದಲ್ಲೂ ಈ ಸಮಸ್ಯೆಯ ಸ್ವರೂಪ ಮತ್ತು ಪರಿಣಾಮ ಬೇರೆಬೇರೆಯಾಗಿರಬಲ್ಲದು. ಹೀಗಾಗಿ, ಪ್ರದೇಶಾವಾರು ಈ ಸಮಸ್ಯೆಗಳನ್ನು ವೈಜ್ಞಾನಿಕ ಅಧ್ಯಯನಗಳ ಮೂಲಕ ನಿಶ್ಚಿತವಾಗಿ ದಾಖಲಿಸುವ ಅಗತ್ಯವಿದೆ (Man-Animal Conflict Zones Mapping).

ಉದಾಹರಣೆಗೆ, ಮಂಗ, ನವಿಲು, ಕಾಡೆಮ್ಮೆ, ಜಿಂಕೆ, ಕಡವೆ, ಮೊಲ, ಕಾಡುಹಂದಿ, ಮುಳ್ಳುಹಂದಿ, ಬಾವಲಿ, ಕೆಂದಳಿಲು-ಇವು ಒಂದೊಂದರ ದಾಳಿಯೂ, ಪ್ರದೇಶವೊಂದಕ್ಕೆ ವಿಶಿಷ್ಟವಾಗಿರುತ್ತವೆ. ಇದನ್ನು ಅರ್ಥೈಸಿಕೊಂಡಾಗ ಮಾತ್ರ, ಆ ಪ್ರದೇಶಕ್ಕೆ ಸೂಕ್ತವಾದ ನಿರ್ವಹಣಾ ದಾರಿಯನ್ನು ಕಂಡುಕೊಳ್ಳಲು ಸಾಧ್ಯ. ಹೀಗಾಗಿ, ಪ್ರದೇಶವಾರು ಕೃಷಿ ಮತ್ತು ಅರಣ್ಯ ಪರಿಸರದ ಪರಿಸ್ಥಿತಿ ಹಾಗೂ ಕಾಡುಪ್ರಾಣಿ ದಾಳಿಯ ಸ್ವರೂಪ, ಗಂಭೀರತೆ ಹಾಗೂ ಆವರ್ತನೆ- ಇವೆಲ್ಲವುಗಳ ಅಧ್ಯಯನಾಧಾರದಲ್ಲಿ ಸಶಕ್ತ ಮಾಹಿತಿಕೋಶ (Conflict Pattern Database) ರೂಪಿಸಿದರೆ ಇದು ಸುಲಭವಾಗಬಲ್ಲದು.

ಆದರೆ, ಒಂದು ಸಂಗತಿಯನ್ನು ಗಮನಿಸಬೇಕಿದೆ. ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಎಂಬ ಹಠ ಸಲ್ಲದು. ಕೃಷಿ, ಅರಣ್ಯ ಹಾಗೂ ವನ್ಯಪ್ರಾಣಿಗಳು- ಈ ಮೂರೂ ಪರಿಸರದಲ್ಲೂ ನಿರಂತರವಾಗಿ ಆಂತರಿಕ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇವನ್ನಾಧರಿಸಿ ಬೆಳೆಯುವ ಬೆಳೆ, ಅವುಗಳ ಬೆಳವಣಿಗೆ, ಅವನ್ನರಸಿ ಬರುವ ವನ್ಯಜೀವಿಗಳು- ಇವೆಲ್ಲವುಗಳೂ ಬದಲಾಗುತ್ತವೆ.

ಹೀಗಾಗಿ, ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣಾ ನೀತಿಯನ್ನು ಕಾಲಕಾಲಕ್ಕೆ ಮರುಪರಿಶೀಲಿಸುತ್ತ ಅಗತ್ಯ ಬದಲಾವಣೆ ಮಾಡಿಕೊಳ್ಳುವ ಸಂದರ್ಭಗಳು ಇದ್ದೇ ಇರುತ್ತವೆ. ಕೃಷಿಯು ಅರಣ್ಯ ಹಾಗೂ ಪರಿಸರದ ಒಟ್ಟೂ ಆರೋಗ್ಯವನ್ನು ಕಡೆಗಣಿಸಿ ಮುನ್ನಡೆಯಲಾರದು ಎಂಬ ಸತ್ಯವನ್ನು ಮರೆಯಲಾಗದು. ಬೇಸಾಯವೂ ಕೂಡ ಎಲ್ಲ ನಿಸರ್ಗದ ಚಕ್ರೀಯ ನಿಯಮಗಳಿಗೆ ಒಳಪಟ್ಟಿದೆಯಲ್ಲವೇ?

ನಾಡಿನ ಕಾಡಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆಯೇ? ಈ ಕುರಿತು ವೈಜ್ಞಾನಿಕ ಅಧ್ಯಯನಗಳು ಆಗಬೇಕಿವೆಯೇ? ಸಂಖ್ಯೆ ಹೆಚ್ಚಾಗಿರುವುದೇ ಆದಲ್ಲಿ, ಅವುಗಳ ಸಂಖ್ಯೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆಯೇ?

ನಾಡಿನ ಕಾಡಿನಲ್ಲಿ ವನ್ಯಜೀವಿಗಳ ಪರಿಸ್ಥಿತಿಯ ಕುರಿತು ಹಲವು ಆಯಾಮಗಳಲ್ಲಿ ವೈಜ್ಞಾನಿಕ ಅಧ್ಯಯನಗಳು ಆಗಿವೆ. ಅವುಗಳ ಪ್ರಕಾರ ಬಹುತೇಕ ವನ್ಯಪ್ರಾಣಿಗಳ ಸಂಖ್ಯೆಯಲ್ಲಿ ಬಹಳ ಏರಿಕೆಯೇನೂ ಆಗಿಲ್ಲ. ಆನೆ, ಚಿರತೆ, ಕಾಡುಕೋಣ, ಇವೆಲ್ಲವುಗಳ ದಾಳಿಯಾಗುತ್ತಿರುವದು ಖಂಡಿತವಾಗಿಯೂ ಅವುಗಳ ಆವಾಸಸ್ಥಾನ ನಾಶವಾಗುತ್ತಿರುವದರಿಂದಲೇ. ಸಾಕಷ್ಟು ಆಹಾರ, ನೀರು ದೊರೆಯದೆ ಅವು ಊರಿಗೆ ದಾಂಗುಡಿ ಇಡುವುದು ಸಹಜವಲ್ಲವೇ?

ಆದರೆ, ಮಂಗ ಹಾಗೂ ನವಿಲಿನ ಸಂಖ್ಯೆಯಲ್ಲಿ ಮಾತ್ರ ವೃದ್ಧಿಯಾಗುತ್ತಿರುವ ಅಂಶ ಅಧ್ಯಯನಗಳಿಂದ ಹೊರಹೊಮ್ಮುತ್ತಿದೆ. ಕಾಡಿನಿಂದ ಹೊರಬಂದ ಇವುಗಳ ಕುಟುಂಬಗಳು, ಜಮೀನಿನಲ್ಲಿ ಸಿಗುವ ಸುಲಭದ ಆಹಾರಕ್ಕೆ ಬಹುಬೇಗ ಒಗ್ಗಿಕೊಳ್ಳುತ್ತಿವೆ. ಹೀಗಾಗಿ, ಅವುಗಳ ವಂಶಾಭಿವೃದ್ಧಿ ಸಂಖ್ಯೆಯೂ ಹೆಚ್ಚುತ್ತಿದೆ.

ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲೇಬೇಕಾದಲ್ಲಿ, ಯಾವ ಮಾರ್ಗ ಸೂಕ್ತ? ಅವನ್ನು ಹಿಡಿದು ಕಾಡಿಗೆ ಬಿಡುವುದೋ? ಅಥವಾ ಸಂತಾನ ನಿಯಂತ್ರಣ ತಂತ್ರಗಳನ್ನು ಅಳವಡಿಸಿಕೊಳ್ಳುವುದೋ? ಅಥವಾ ಒಂದು ಮಿತಿಯಲ್ಲಿ ಅವನ್ನು ಸಾಯಿಸುವುದೋ? ಅಥವಾ ವನ್ಯಜೀವಿಗಳಿಂದ ಅಪಾರ ಸಂಕಷ್ಟ ಎದುಸಿರುತ್ತಿರುವ ಜಿಲ್ಲೆಗಳ ರೈತರನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸುವುದೋ?

ವನ್ಯಜೀವಿ ದಾಳಿ ಸಮಸ್ಯೆಗಳೆಲ್ಲವನ್ನೂ ಒಂದೇ “ರಾಮಬಾಣ” (Silver Bullet)ದಿಂದ ಪರಿಹರಿಸಲಾಗದು. ಆಯಾ ಪ್ರದೇಶಕ್ಕನುಗುಣವಾಗಿ, ಬೆಳೆಯುವ ಬೆಳೆಯನ್ನು ಅವಲಂಬಿಸಿ, ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಾಡಿನ ವಿಸ್ತಾರ ಕಡಿಮೆಯಾಗಿ, ಕೃಷಿಯೇ ಎಲ್ಲೆಲ್ಲೂ ವಿಸ್ತರಿಸತೊಡಗಿರುವುದರಿಂದ, ಒಂದು ಹಂತದವರೆಗೆ ಈ ಬೆಳೆನಾಶ ಸಹಜ. ಆದರೆ, ಅದನ್ನು ಮಿತಗೊಳಿಸುವ ಜಾಣ್ಮೆ ನಮ್ಮದಾಗಬೇಕಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಬಹು-ಆಯಾಮಗಳ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಈ ಕೆಳಗಿನ ನಾಲ್ಕು ಅಂಶಗಳು ಪ್ರಮುಖವೆಂದು ತೋರುತ್ತದೆ: 

  1. ಬೆಳೆಹಾನಿಯಾದಾಗ ವಾಸ್ತವ ಬೆಳೆಹಾನಿಯನ್ನು ಪರಿಗಣಿಸಿ ರೈತರಿಗೆ ತಕ್ಷಣದಲ್ಲಿ ಸೂಕ್ತ ಪರಿಹಾರ ನೀಡುವ ವೈಜ್ಞಾನಿಕ ನೀತಿಯೊಂದು ಜಾರಿಗೆ ಬರಬೇಕಾಗಿದೆ. ಮೊದಲೇ ಹೇಳಿದಹಾಗೆ, ಕಾಡುಪ್ರಾಣಿ ದಾಳಿಯ ಸ್ವರೂಪ, ಗಂಭೀರತೆ ಹಾಗೂ ಆವರ್ತನೆಗಳ ಸಶಕ್ತ ಮಾಹಿತಿಕೋಶ ರೂಪಿಸಿದ್ದಾದರೆ, ಇದು ಸುಲಭವಾಗಬಲ್ಲದು. ತಮ್ಮಜೊತೆ ಸರ್ಕಾರವಿದೆ ಎಂಬ ವಿಶ್ವಾಸ ಮೂಡಿದರೆ, ವನ್ಯಪ್ರಾಣಿ ನಿಯಂತ್ರಣದಲ್ಲಿ ಹಳ್ಳಿಗರ ಪಾಲುಗಾರಿಕೆಯೂ ಹೆಚ್ಚಾಗಬಲ್ಲದು. ಆದರೆ, ಇದೀಗ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆ ಕಾಯ್ದೆ (1972) ಅನ್ವಯ ಬೆಳೆಹಾನಿಗೆ ಅನುಕಂಪದ ಆಧಾರದಲ್ಲಿ ನೀಡುತ್ತಿರುವ ಹಣಕಾಸು ನೆರವಿನ ಪದ್ಧತಿಯು ವಿವಿಧ ಕಾಲಘಟ್ಟದಲ್ಲಿ ಇಲಾಖೆಯು ಹೊರಡಿಸಿದ ಸುತ್ತೋಲೆಗಳನ್ನು ಮಾತ್ರ ಆಧರಿಸಿರುವುದರಿಂದ, ಆ ನಿಯಮಗಳಲ್ಲಿ ಹಲವಾರು ಗೊಂದಲಗಳು ಹಾಗೂ ಕೊರತೆಗಳಿವೆ. ಇವನ್ನೆಲ್ಲ ಸರಿಪಡಿಸಿ, ಸಮಗ್ರದೃಷ್ಟಿಯ “ವನ್ಯಪ್ರಾಣಿಗಳಿಂದಾದ ಬೆಳೆಹಾನಿ ಪರಿಹಾರ” ಕುರಿತಾಗಿ ಹೊಸ ಕಾನೂನೊಂದನ್ನು ರೂಪಿಸಬೇಕಾದ ಅಗತ್ಯವಿದೆ.
  2. ಕಾಡುಪ್ರಾಣಿಗಳನ್ನು ಸಾಯಿಸದೆ ಹೊಲಗದ್ದೆಗಳಿಂದ ದೂರವಿಡುವ ಪಾರಂಪರಿಕ ಕೌಶಲ್ಯಗಳನ್ನು ಮುನ್ನೆಲೆಗೆ ತರುವ ಕಾರ್ಯವೂ ಆಗಬೇಕು. ವಿವಿಧ ನಮೂನೆಯ ಬೆದರುಗೊಂಬೆಯಿರಿಸಿ ಪ್ರಾಣಿ-ಪಕ್ಷಿಗಳನ್ನು ಓಡಿಸುವುದು, ಶಬ್ದಮಾಡಿ ಹಂದಿ, ಜಿಂಕೆಗಳನ್ನು ಬೆದರಿಸುವುದು, ಪಟಾಕಿ ಶಬ್ದದಿಂದ ಅನೆ ಬಾರದಂತೆ ನೋಡಿಕೊಳ್ಳುವುದು, ಒಣಮೀನು-ಮೆಣಸಿನಪುಡಿಯೆರಚಿ ಮಂಗನನ್ನು ಬೆದರಿಸುವುದು-ಇತ್ಯಾದಿ ಹಲವಾರು ತಂತ್ರಗಳು ಕೃಷಿಕರಿಗೆ ಗೊತ್ತಿವೆ. ರಾತ್ರಿಪಹರೆ ಮಾಡಿ ಬೆಳೆಯನ್ನು ಕಾಯ್ದುಕೊಳ್ಳುವ ಹಳ್ಳಿಗರು ಈಗಲೂ ಇದ್ದಾರೆ. ಈ ಬಗೆಯ ಸೂಕ್ತ ಪರಿಸರಸ್ನೇಹಿ ಕ್ರಮಗಳನ್ನು ಹಳ್ಳಿಗರು ಸಾಮೂಹಿಕವಾಗಿ ಅಳವಡಿಸಿಕೊಳ್ಳುವ ಸೂಕ್ತ ಚೌಕಟ್ಟೊಂದನ್ನು ರೂಪಿಸಬೇಕಿದೆ. ನರೇಗಾ ಯೋಜನೆಯಡಿ ರೈತರ ಸ್ವಸಹಾಯ ಗುಂಪುಗಳು ಅಥವಾ ಗ್ರಾಮ ಅರಣ್ಯ ಸಮಿತಿಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಲು ಸಾಧ್ಯವಿದೆ. ಪಂಚಾಯತಿ ಮಟ್ಟದಲ್ಲಿ ಈ ಬಗೆಯ ನವೀನ ಚಿಂತನೆಗೆ ಆದ್ಯತೆ ದೊರೆತರೆ, ಪರಿಹಾರದ ಹೊಸದಾರಿಗಳು ತೆರೆಯಬಲ್ಲವು. 
  3. ತೀರಾ ಅಗತ್ಯವಿದ್ದರೆ, ಕೆಲವೊಮ್ಮೆ ಪ್ರಾಣಿಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಡುವ ಕಾರ್ಯವನ್ನೂ ಸೀಮಿತವಾಗಿ ಹಮ್ಮಿಕೊಳ್ಳಬೇಕಾಗುತ್ತದೆ. ಈಗಾಗಲೇ ಹೈಕೋರ್ಟ್ ಆದೇಶದಂತೆ ರಚಿಸಿರುವ “ಆನೆ-ಕಾರ್ಯಪಡೆ”ಯ ತಜ್ಞರ ಶಿಫಾರಸ್ಸಿನಂತೆ, ಮಲೆನಾಡಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಇಪ್ಪತ್ತಕ್ಕೂ ಮಿಕ್ಕಿ ದಾಳಿಕೋರ ಆನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ. ಇದು ಆನೆ, ಚಿರತೆ, ಹುಲಿಗಳಂಥ ಪ್ರಾಣಿಗಳಲ್ಲಿ ಅನಿವಾರ್ಯ. ಉಳಿದಂತೆ, ಇದರ ಪ್ರಾಯೋಗಿಕತೆ ಕಡಿಮೆ. ಸ್ಥಳೀಯವಾಗಿ, ಮಂಗನಕಾಟಕ್ಕೆ ಇದನ್ನು ಒಂದು ತಾತ್ಕಾಲಿಕ ಪರಿಹಾರವಾಗಿ ಮಾತ್ರ ಬಳಸಬಹುದು.
  4. ರಾಜ್ಯಾದ್ಯಂತದ ಪರಿಸ್ಥಿತಿಯನ್ನು ಗಮನಿಸಿ ಹೇಳುವುದಾದರೆ, ಇಂದು ರೈತರು ಅತೀವ ಸಂಕಷ್ಟ ಎದುರಿಸುತ್ತಿರುವುದು ಮಂಗನಕಾಟದಿಂದಾಗಿ. ಇವುಗಳ ಸಂಖ್ಯೆ ಹೆಚ್ಚಾಗಿರುವುದೂ ನಿಜ. ಇವುಗಳಿಂದಾದ ಬೆಳೆನಷ್ಟವು ಹಲವು ನೂರುಕೋಟಿ ರೂಪಾಯಿಗಳಿಗೂ ಮಿಕ್ಕುತ್ತಿವೆ ಎಂದು ಸ್ಥಳಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ, ನಿಯಮಿತವಾಗಿ ಕೆಲವು ಮಂಗಗಳನ್ನು ಹಿಡಿದು, ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ, ಅವನ್ನು ಪುನಃ ಕಾಡಿಗೆ ಬಿಡುವ ನೀತಿ ಕೈಗೊಳ್ಳಬೇಕಾದ ಕಾಲ ಈಗ ಬಂದಿದೆ. ನೆನಪಿಡೋಣ, ಇದು ಮಂಗನಿಗೆ ಮಾತ್ರ ಸೂಕ್ತ. ತಜ್ಞರ ಉಸ್ತುವಾರಿಯಲ್ಲಿ, ಸೂಕ್ತ ನಿಯಮಾವಳಿಗಳು ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಇದನ್ನು ಪ್ರತಿ ಜಿಲ್ಲೆಯಲ್ಲೂ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬೇಕಿದೆ. ಆರಂಭಿಸಿದ ಮೂರು-ನಾಲ್ಕು ವರ್ಷಗಳಲ್ಲಿ ಈ ದಾರಿಯ ಸರಿ-ತಪ್ಪುಗಳು ಅರಿವಿಗೆ ಬರುತ್ತವೆ. ಅದರ ಆಧಾರದಲ್ಲಿ, ಮುಂದಿನ ದಾರಿ ನಿರ್ಣಯಿಸಲು ಸಾಧ್ಯವಾಗುತ್ತದೆ. ಇದನ್ನು ಕೊನೆಯ ಮತ್ತು ಸೀಮಿತ ಅಸ್ತ್ರವನ್ನಾಗಿ ಮಂಗನ ವಿಷಯದಲ್ಲಿ ಮಾತ್ರ ಕೈಗೊಳ್ಳುವ ಕುರಿತು ಈಗ ತೀವ್ರ ಚಿಂತನೆ ಮಾಡಬೇಕಿದೆ.

ಇವೆಲ್ಲವೂ ಸಮಗ್ರವಾಗಿ ಅನುಷ್ಠಾನವಾದರೆ, ವನ್ಯಜೀವಿಗಳಿಂದ ಸಂಕಷ್ಟ ಎದುಸಿರುತ್ತಿರುವ ಪ್ರದೇಶಗಳ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಗ ಅವರನ್ನು ಸ್ಥಳಾಂತರ ಮಾಡುವ ಅಥವಾ ಪುನರ್ವಸತಿ ಮಾಡುವ ಪ್ರಶ್ನೆಯೇ ಉದ್ಭವಿಸುವದಿಲ್ಲ. ವಾಸ್ತವವಾಗಿ, ಅದು ಸಾಧುವೂ ಅಲ್ಲ.

ರೈತರಿಗೆ ನಿಜಕ್ಕೂ ಬೇಕಾದ್ದು, ಸಶಕ್ತ ಹಾಗೂ ಜನಸಹಭಾಗಿತ್ವದ ಅರಣ್ಯ ಸಂರಕ್ಷಣಾ ನೀತಿಯೊಂದರ ಅನುಷ್ಠಾನವೇ. ಕಾಡಿನ ವಿಸ್ತಾರ ಹೆಚ್ಚಾಗಿ, ಅಲ್ಲಿ ಹಣ್ಣುಹಂಪಲು, ಹುಲ್ಲು, ಬಿದಿರು ಇವೆಲ್ಲ ಸಾಕಷ್ಟು ಲಭ್ಯವಾಗತೊಡಗಿದರೆ ಹಾಗೂ ಕೆರೆ-ತೊರೆಗಳಲ್ಲಿ ನೀರು ದೊರೆಯುವಂತಾದರೆ, ಕಾಡುಪ್ರಾಣಿ ಹಾವಳಿಯ ತೀವ್ರತೆ ಖಂಡಿತಾ ಕಡಿಮೆಯಾದೀತು. ಆ ಬಗೆಯ ದೂರಗಾಮಿ ದೃಷ್ಟಿಕೋನವುಳ್ಳ ವಿವೇಕಪೂರ್ಣ ನೀತಿಯೊಂದಕ್ಕಾಗಿ ನಾವು ಪ್ರಯತ್ನಿಸಬೇಕಿದೆ.

*ಲೇಖಕರು ಪಶ್ಚಿಮಘಟ್ಟದ ಜೈವಿಕಪರಿಸರ, ಜೀವವೈವಿಧ್ಯ, ನೈಸರ್ಗಿಕ ಸಂಪನ್ಮೂಲಗಳ ಹರಿವು ಹಾಗೂ ಮಾನವ ಸಮಾಜದ ನಡುವಿನ ಸಂಬಂಧ ಕುರಿತು ಸಂಶೋಧನೆಯಲ್ಲಿ ತೊಡಗಿರುವ ಸಂರಕ್ಷಣಾ ಜೀವಶಾಸ್ತ್ರಜ್ಞರು; ಎರಡೂವರೆ ದಶಕ ಪ್ರಾಧ್ಯಾಪಕರಾಗಿದ್ದರು, ಸುಸ್ಥಿರ ಬದುಕಿನ ಪ್ರತಿಪಾದಕರು, ಶಿರಸಿಯಲ್ಲಿ ಸ್ವತಃ ಕೃಷಿಯಲ್ಲಿ ನಿರತರು.

Leave a Reply

Your email address will not be published.