ನೆಹರೂ ರಾಜಕೀಯ ತತ್ವಜ್ಞಾನ

– ರಾಜಾರಾಮ ತೋಳ್ಪಾಡಿ

   ನಿತ್ಯಾನಂದ ಬಿ. ಶೆಟ್ಟಿ

ಪಂಡಿತ್ ಜವಾಹರಲಾಲ್ ನೆಹರೂ ಈ ದೇಶದ ಮಹಾನ್ ನಾಯಕರಲ್ಲೊಬ್ಬರು. ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕತ್ವ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರದ ಜೊತೆಗೆ ನೆಹರೂ; ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿಯಾಗಿ ದೇಶವನ್ನು ಆಧುನಿಕತೆ ಮತ್ತು ಅಭಿವೃಧ್ಧಿಯ ಪಥದಲ್ಲಿ ಮುನ್ನಡೆಸಿದ್ದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅವರ ಚಿಂತನೆ ಹಾಗೂ ಕ್ರಿಯಾಚರಣೆಗಳ ವೈಶಿಷ್ಟ್ಯ ಮತ್ತು ಇತಿಮಿತಿಗಳೇನು? ಎನ್ನುವುದರ ಕುರಿತು ವಿದ್ವಾಂಸರ ಸಣ್ಣ ಗುಂಪನ್ನು ಹೊರತುಪಡಿಸಿದರೆ ಉಳಿದವರು ಅಷ್ಟಾಗಿ ಚಿಂತನೆ ನಡೆಸಿದಂತಿಲ್ಲ. ನೆಹರೂರವರ ಕುರಿತು ಕಟ್ಟುಕಥೆದಂತಕಥೆ ಮತ್ತು ಅಶ್ಲೀಲ ಚಿತ್ರ-ಕಥೆಗಳೇ ತುಂಬಿರುವ ಸದ್ಯದ ಭಾರತೀಯ ರಾಜಕಾರಣದ ಸನ್ನಿವೇಶದಲ್ಲಿ ಪ್ರಸ್ತುತ ಲೇಖನ ನೆಹರೂರವರ ಕುರಿತು ಕೆಲವು ಮುಖ್ಯವಾದ ಅಂಶಗಳನ್ನು ಮುಂದಿಡಬಯಸುತ್ತದೆ.

ನೆಹರೂರವರ ಮೂರು ಮುಖ್ಯ ಪುಸ್ತಕಗಳ ಮೂಲಕವೇ ಚರ್ಚೆಯನ್ನು ಆರಂಭಿಸಬಹುದು. ನೆಹರೂರವರ ಅಗಾಧ ಬರವಣಿಗೆಯಲ್ಲಿ ಗ್ಲಿಮ್‍ಸೆಸ್ ಆಫ್ ವಲ್ಡ್ ಹಿಸ್ಟರಿ (ಜಾಗತಿಕ ಇತಿಹಾಸದ ನೋಟಗಳು), ದಿ ಡಿಸ್ಕವರಿ ಆಫ್ ಇಂಡಿಯಾ (ಭಾರತ ದರ್ಶನ), ಹಾಗೂ ಆನ್ ಆಟೋಬಯಾಗ್ರಫಿ (ಆತ್ಮಚ ರಿತ್ರೆ) ಎಂಬ ಕೃತಿಗಳು ನೆಹರೂ ಚಿಂತನೆಯ ಸಮಗ್ರ ನೋಟವನ್ನು ನಮ್ಮ ಮುಂದಿಡುತ್ತದೆ. ಸ್ವಾತಂತ್ರ್ಯ ಹೋರಾಟದ ಕಾವಿನಲ್ಲೇ ಬರೆದ ಈ ಪುಸ್ತಕಗಳು ಓರ್ವ ಚಿಂತಕನಾಗಿ ನೆಹರೂ ಯಾವ ವಿನ್ಯಾಸದಲ್ಲಿ ಯೋಚಿಸುತ್ತಾರೆ ಎನ್ನುವುದಷ್ಟೇ ಅಲ್ಲದೆ ಭಾರತದ ಪೂರ್ವಾಪರಗಳನ್ನು ವಿಶಾಲವಾದ ಚಾರಿತ್ರಿಕ ದೃಷ್ಟಿಯಲ್ಲಿ ಗುರುತಿಸುತ್ತವೆ.

ರಾಜಕೀಯ ಶಾಸ್ತ್ರಜ್ಞ ಸುದೀಪ್ತೊ ಕವಿರಾಜ್ ನೆಹರೂರವರ ಮೂರು ಪುಸ್ತಕಗಳನ್ನು ವಿಶ್ಲೇಷಿಸುತ್ತಾ ಜಾಗತಿಕ ಇತಿಹಾಸದ ನೋಟಗಳು ನೆಹರೂರವರ ವಿಶ್ವದೃಷ್ಟಿಯನ್ನೂ ಭಾರತ ದರ್ಶನ ಅವರ ರಾಷ್ಟ್ರದ ಪರಿಕಲ್ಪನೆಯನ್ನೂ ಆತ್ಮಚರಿತ್ರೆ ನೆಹರೂರವರ ವೈಯಕ್ತಿಕವಾದ ಸ್ವಂತಿಕೆಯ ಸ್ವರೂಪವನ್ನೂ ಪ್ರತಿನಿಧಿಸುತ್ತದೆ ಎನ್ನುತ್ತಾರೆ. ಅಂದರೆ ವಿಶ್ವ-ರಾಷ್ಟ್ರ-ಸ್ವ ಎಂಬ ಮೂರು ಒಂದನ್ನೊಂದು ಒಳಗೊಳ್ಳುವ ವರ್ತುಲಗಳಲ್ಲಿ ನೆಹರೂರವರ ಚಿಂತನೆ ಅನಾವರಣಗೊಳ್ಳುತ್ತವೆ ಎನ್ನುತ್ತಾರೆ ಸುಧೀಪ್ತೂ.  ನೆಹರೂ ಕುರಿತು ಅಧ್ಯಯನವನ್ನು ನಡೆಸಿದ ಇತಿಹಾಸ ತಜ್ಞ ಬಿಪಿನಚಂದ್ರ; 1926 ರಿಂದ 1936ರ ನಡುವಿನಲ್ಲಿ ಕ್ರಾಂತಿಕಾರೀ ಮಾತುಗಳನ್ನು ಆಡುತ್ತಿದ್ದ ತರುಣ ನಾಯಕನಾಗಿ, ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಶ್ನೆಗಳನ್ನು ಮುಂಚೂಣಿಗೆ ತರುತ್ತಿದ್ದ ಚಿಂತಕನಾಗಿ, ಅಂತೆಯೇ ಕಾಂಗ್ರೆಸ್ ಪಕ್ಷದ ಒಳಗಿರುವ ಬಲಪಂಥೀಯ ನಾಯಕತ್ವದ ಸಂಕುಚಿತ ವಿಚಾರಗಳನ್ನು ನಿರ್ಭೀತಿಯಿಂದ ವಿರೋಧಿಸುತ್ತಿದ್ದ ಮುತ್ಸದ್ದಿಯಾಗಿ ರೂಪುಗೊಂಡ ನೆಹರೂ ವ್ಯಕ್ತಿತ್ವದ ಚಲನಶೀಲತೆಯ ಬಗ್ಗೆ ಬರೆಯುತ್ತಾರೆ.

ಭಾರತೀಯ ಸಂವಿಧಾನದ ಕುರಿತು ಆಳವಾದ ಅಧ್ಯಯನ ನಡೆಸಿದ ಸಂಶೋಧಕ ಗ್ರೆನ್‍ವಿಲ್ ಆಸ್ಟಿನ್, ‘ಭಾರತದ ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ನೆಹರೂ ವಹಿಸಿದ ನಾಯಕತ್ವ ಹಾಗೂ ನೀಡಿದ ಕಾಣ್ಕೆ ಅಪರಿಮಿತವಾದದ್ದು. ಭಾರತ ಸಂವಿಧಾನದ ತಾತ್ವಿಕ
ರೂಪುರೇಷೆಗಳನ್ನು ನಿರೂಪಿಸಿದ ಮೂವರು ಪ್ರಮುಖರಲ್ಲಿ ನೆಹರೂ ಒಬ್ಬರು. ಇನ್ನಿಬ್ಬರು ಮಹನೀಯರು ಡಾ.ಅಂಬೇಡ್ಕರ್ ಮತ್ತು ರಾಜೇಂದ್ರ ಪ್ರಸಾದ್. ಭಾರತವನ್ನು ಒಂದು ಪ್ರಜಾತಾಂತ್ರಿಕ ಸಂಸದೀಯ ಸೆಕ್ಯುಲರ್ ಗಣರಾಜ್ಯವಾಗಿ ರೂಪಿಸುವಲ್ಲಿ ನೆಹರೂ ಯಾವ ಬಗೆಯ ಪಾತ್ರವನ್ನು ವಹಿಸಿದ್ದರು ಎಂಬುದಕ್ಕೆ ಸಂವಿಧಾನ ಸಭೆಯ ಚರ್ಚೆಗಳು, ನಡಾವಳಿಗಳು ಹಾಗೂ ನಿಲುವಳಿಗಳು ಸಾಕ್ಷಿಯಾಗಿ ಉಳಿದಿವೆ’ ಎನ್ನುತ್ತಾರೆ.

ಭಾರತದ ಸಂವಿಧಾನ ನಮ್ಮ ಬಹು ಸಂಸ್ಕೃತಿಯ ನೆಲೆಗಟ್ಟನ್ನು ಪ್ರತಿನಿಧಿಸುವ, ಪ್ರಜಾತಾಂತ್ರಿಕ ಆಕಾಂಕ್ಷೆಗಳನ್ನು ಪ್ರತಿಪಾದಿಸುವ ಹಾಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಾಳಜಿಗಳನ್ನು ಎತ್ತಿಹಿಡಿಯುವ ದಟ್ಟವಾದ, ಸಂಕೀರ್ಣವಾದ ಹಾಗೂ ಸ್ಫುಟವಾದ ರಾಜಕೀಯ ಪಠ್ಯ. ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಸಮಾಜ ಸುಧಾರಣೆಯ ಒತ್ತಾಯಗಳು ಹಾಗೂ ಪುರೋಭಿವೃದ್ಧಿ ಅಭಿಲಾಷೆಗಳನ್ನು ಸಮನ್ವಯಗೊಳಿಸುವ ನಮ್ಮ ಸಂವಿಧಾನ ಇಡಿಯ ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ರಾಜಕೀಯ ಮೀಮಾಂಸಾ ಕೃತಿ. ಅದು ಹಾಗೆ ರೂಪುಗೊಳ್ಳಲು ಅಂಬೇಡ್ಕರ್ ಜೊತೆ ನೆಹರೂರವರ ಪರಿಶ್ರಮ ಕೂಡಾ ಮಹತ್ವವಾದುದು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ನೆಹರೂ ಭಾರತದ ಪ್ರಪ್ರಥಮ ಪ್ರಧಾನಮಂತ್ರಿಯಷ್ಟೇ ಅಲ್ಲ. ಅವರು ಆಧುನಿಕ ಭಾರತದ ನಿರ್ಮಾತೃರೂ ಆಗಿದ್ದರು. ಆ ಕಾರಣಕ್ಕಾಗಿ ಅವರು ಪ್ರಾತಃಸ್ಮರಣೀಯರೂ ಆಗಿದ್ದಾರೆ. ಭಾರತ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಪಂಚವಾರ್ಷಿಕ ಯೋಜನೆಗಳ ಚೌಕಟ್ಟಿನಲ್ಲಿ ಔದ್ಯೋಗಿಕ ನೆಲೆಯ ಆಧುನಿಕ ಮಾರ್ಗ ತುಳಿಯುವುದರಲ್ಲಿ ನೆಹರೂರವರ ಪಾತ್ರ ಮಹತ್ವಪೂರ್ಣವಾಗಿದೆ. ಒಂದರ್ಥದಲ್ಲಿ ಇಂದು ನಾವು ಗುಣಗಾನ ಮಾಡುವ ಅಥವಾ ವಿರೋಧಿಸುವ ‘ಅಭಿವೃದ್ಧಿ’ ಎನ್ನುವ ಮಹಾನ್ ಮಂತ್ರ ಮತ್ತು ಯಂತ್ರದ ಭಾರತೀಯ ರೂವಾರಿ ನೆಹರೂರವರೇ ಆಗಿದ್ದಾರೆ. 17 ವರ್ಷಗಳ ಅವರ ರಾಜಕೀಯ ನಾಯಕತ್ವ ಭಾರತವನ್ನು ಇಂದಿಗೂ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಉಳಿಸಿಕೊಳ್ಳುವಲ್ಲಿ ಮಹತ್ವದ ಭೂಮಿಕೆಯನ್ನು ನಿಭಾಯಿಸಿತು ಎನ್ನಬಹುದು.

ಸಂಕೀರ್ಣವಾಗಿರುವ ನೆಹರೂರವರ ರಾಜಕೀಯ ಚಿಂತನೆಯಲ್ಲಿ ಮೂರು ಪರಸ್ಪರಾವಲಂಬೀ ಅಂಶಗಳನ್ನು ಕಾಣಬಹುದು. ಅವುಗಳನ್ನು ರಾಷ್ಟ್ರೀಯವಾದ, ಪ್ರಜಾಸತ್ತೆ ಹಾಗೂ ಸೆಕ್ಯುಲರ್‍ವಾದ ಎಂದು ಗುರುತಿಸಬಹುದು. ನೆಹರೂರವರ ರಾಜಕೀಯ ಚಿಂತನೆ ಆಧುನಿಕತೆ ಎನ್ನುವ ಬಲವಾದ ತಾತ್ವಿಕತೆಯ ಚೌಕಟ್ಟಿನಲ್ಲಿ ರೂಪುಗೊಂಡಿರುವುದು. ಎಲ್ಲ ಅರ್ಥಗಳಲ್ಲಿ ಆಧುನಿಕವೇ ಆಗಿರುವ ರಾಷ್ಟ್ರೀಯತೆಯ ಪರಿಕಲ್ಪನೆ ನೆಹರೂರವರ ಭಾರತ ದರ್ಶನದಲ್ಲಿ ಎದ್ದು ಕಾಣಿಸುತ್ತದೆ. ಭಾರತ ದರ್ಶನ ಭಾರತದ ರಾಷ್ಟ್ರೀಯತ್ವವನ್ನು ವಿಜೃಂಭಿಸುವ ಒಂದು ಗ್ರಂಥ. ಸಾಂಪ್ರದಾಯಿಕ ಅರ್ಥದಲ್ಲಿ ನೆಹರೂ ಇತಿಹಾಸಕಾರರಲ್ಲದಿದ್ದರೂ ಒಂದು ಆಗಿದ್ದಾರೆ. 17 ವರ್ಷಗಳ ಅವರ ರಾಜಕೀಯ ನಾಯಕತ್ವ ಭಾರತವನ್ನು ಇಂದಿಗೂ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಉಳಿಸಿಕೊಳ್ಳುವಲ್ಲಿ ಮಹತ್ವದ ಭೂಮಿಕೆಯನ್ನು ನಿಭಾಯಿಸಿತು ಎನ್ನಬಹುದು. ಸಂಕೀರ್ಣವಾಗಿರುವ ನೆಹರೂರವರ ರಾಜಕೀಯ ಚಿಂತನೆಯಲ್ಲಿ ಮೂರು ಪರಸ್ಪರಾವಲಂಬೀ ಅಂಶಗಳನ್ನು ಕಾಣಬಹುದು. ಅವುಗಳನ್ನು ರಾಷ್ಟ್ರೀಯವಾದ, ಪ್ರಜಾಸತ್ತೆ ಹಾಗೂ ಸೆಕ್ಯುಲರ್‍ವಾದ ಎಂದು ಗುರುತಿಸಬಹುದು. ನೆಹರೂರವರ ರಾಜಕೀಯ ಚಿಂತನೆ ಆಧುನಿಕತೆ ಎನ್ನುವ ಬಲವಾದ ತಾತ್ವಿಕತೆಯ ಚೌಕಟ್ಟಿನಲ್ಲಿ ರೂಪುಗೊಂಡಿರುವುದು. ಎಲ್ಲ ಅರ್ಥಗಳಲ್ಲಿ ಆಧುನಿಕವೇ ಆಗಿರುವ ರಾಷ್ಟ್ರೀಯತೆಯ ಪರಿಕಲ್ಪನೆ ನೆಹರೂರವರ ಭಾರತ ದರ್ಶನದಲ್ಲಿ ಎದ್ದು ಕಾಣಿಸುತ್ತದೆ. ಭಾರತ ದರ್ಶನ ಭಾರತದ ರಾಷ್ಟ್ರೀಯತ್ವವನ್ನು ವಿಜೃಂಭಿಸುವ ಒಂದು ಗ್ರಂಥ. ಸಾಂಪ್ರದಾಯಿಕ ಅರ್ಥದಲ್ಲಿ ನೆಹರೂ ಇತಿಹಾಸಕಾರರಲ್ಲದಿದ್ದರೂ ಒಂದು
ವಿಶಿಷ್ಟವಾದ ಭಾರತದ ಇತಿಹಾಸವನ್ನು ಅವರು ಭಾರತ ದರ್ಶನದಲ್ಲಿ ನಮ್ಮ ಮುಂದೆ ಇರಿಸುತ್ತಾರೆ. ಅದು ಅವರ ಸೈದ್ಧಾಂತಿಕ ಒತ್ತಾಸೆಯ ಹಾಗೂ ರಾಜಕೀಯ ಆಯ್ಕೆಯ ಇತಿಹಾಸ. ಭಾರತೀಯ ಚರಿ ತ್ರೆಯ ಎಲ್ಲ ಪ್ರಮುಖ ಕಾಲಘಟ್ಟಗಳನ್ನು ಈ ಗ್ರಂಥದಲ್ಲಿ ತಮ್ಮ ಗಮನಕ್ಕೆ ತಂದುಕೊಳ್ಳುವ ನೆಹರೂ ಕೆಲವು ಸನ್ನಿವೇಶ, ಘಟನೆ, ವ್ಯಕ್ತಿ ಹಾಗೂ ಅವು ಪ್ರತಿನಿಧಿಸುವ ವಿಚಾರಗಳ ಕುರಿತು ವಿಶೇಷ ಆಸಕ್ತಿ ತಳೆಯುತ್ತಾರೆ. ಉದಾಹರಣೆಗೆ ಅಕ್ಬರನ ದೀನ್-ಇ-ಲಾಹಿ, ಕಬೀರನ ಧರ್ಮದೃಷ್ಟಿ, ಅಶೋಕನ ಶಾಂತಿಪ್ರಿಯತೆ, ಮೀರಾಳ ಕೃಷ್ಣಭಕ್ತಿ, ವಿಜಯನಗರದ ವೈಭವ ಮೊದಲಾದವುಗಳ ಬಗೆಗಿನ ನಿರೂಪಣೆ ನೆಹರೂರವರ ರಾಷ್ಟ್ರಕಲ್ಪನೆಯ ಮಾದರಿಯನ್ನು ನಮ್ಮ ಮುಂದಿರಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಕಾವಿನಲ್ಲಿ ರಾಷ್ಟ್ರ ನಿಮಾರ್ಣದ ಹುರುಪಿನಲ್ಲಿ ಭಾರತದ ಚರಿತ್ರೆಯನ್ನು ಭಾರತದರ್ಶನದಲ್ಲಿ ಮರುನಿರೂಪಿಸುವ ನೆಹರೂ ಘಟನೆಗಳನ್ನು ವಿವರಿಸುವುದು ಮಾತ್ರವಲ್ಲದೇ ಪ್ರತಿಪಾದನೆಗಳನ್ನೂ ಮಾಡುತ್ತಾರೆ.

ನೆಹರೂರವರ ರಾಷ್ಟ್ರೀಯತೆಯ ಕಲ್ಪನೆ ಆಳವಾದ ಸಂಸ್ಕೃತಿಕ ಕಾಳಜಿಗಳಲ್ಲಿ ನೆಲೆಯೂರಿದ ಕಲ್ಪನೆ. ನೆಹರೂರವರ ಸಂಸ್ಕೃತಿನಿಷ್ಠ ಭಾರತದ ರಾಷ್ಟ್ರೀಯತೆಯ ಕಲ್ಪನೆಗೂ, ಈಗಿನ ಜಬರ್ದಸ್ತಿನ ಸ್ವರದ ಸಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆಗೂ ಇರುವ ಅಗಾಧ ಮತ್ತು ಮೂಲಭೂತ ವ್ಯತ್ಯಾಸವನ್ನು ನಾವು ಜಾಗರೂಕತೆಯಿಂದ ತಿಳಿದುಕೊಳ್ಳಬೇಕು.

ಭಾರತದರ್ಶನದ ಪ್ರಮುಖ ಪ್ರತಿಪಾದನೆ ಭಾರತೀಯ ಸಮಾಜದ ಬಹು ಸಂಸ್ಕೃತಿಯತೆಗೆ ಸಂಬಂಧಿಸಿದ್ದು. ನೆಹರೂ ಪ್ರಕಾರ, ಭಾರತದ ಸಂಸ್ಕೃತಿಕ ಹಾಗೂ ಸಾಮಾಜಿಕ ವೈವಿಧ್ಯ ಸಂಭ್ರಮೋತ್ಸವಕ್ಕೆ ಅರ್ಹವಾದ ವಿದ್ಯಮಾನ. ಭಾರತೀಯ ಸಮಾಜ ಬಹು ಸಂಸ್ಕೃತಿಯ ಆಗಿರುವುದ ರಿಂದಲೇ ಅದು ಇಂದಿನವರೆಗೆ ಅಖಂಡವಾಗಿ ಉಳಿದುಕೊಂಡು ಬಂದಿದೆ. ಇದರ ವೈವಿಧ್ಯಕ್ಕೆ ಧಕ್ಕೆಯಾದಾಗ ಭಾರತೀಯ ಸಮಾಜ ವಿಘಟನೆಗೊಳ್ಳುತ್ತದೆ ಎಂದು ನಂಬಿದ ನೆಹರೂ ಈ ಬಹು ಸಂಸ್ಕೃತಿಯತೆಯ ಆಧಾರದಲ್ಲಿ ಭಾವಶೀಲ ರಾಷ್ಟ್ರದ ಕಲ್ಪನೆಯನ್ನು ಮಾಡುತ್ತಾರೆ. ಭಾರತದರ್ಶನದಲ್ಲಿ ನೆಹರೂ ಮುಂದಿಡುವ ಭಾರತ ಒಂದು ಸಂಸ್ಕೃತಿಕ ಭಾರತ. ನೆಹರೂರವರ ರಾಷ್ಟ್ರೀಯತೆಯ ಕಲ್ಪನೆ ಆಳವಾದ ಸಂಸ್ಕೃತಿಕ ಕಾಳಜಿಗಳಲ್ಲಿ ನೆಲೆಯೂರಿದ ಕಲ್ಪನೆ. ನೆಹರೂರವರ ಸಂಸ್ಕೃತಿನಿಷ್ಠ ಭಾರತದ ರಾಷ್ಟ್ರೀಯತೆಯ ಕಲ್ಪನೆಗೂ, ಈಗಿನ ಜಬರ್ದಸ್ತಿನ ಸ್ವರದ ಸಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆಗೂ ಇರುವ ಅಗಾಧ ಮತ್ತು ಮೂಲಭೂತ ವ್ಯತ್ಯಾಸವನ್ನು ನಾವು ಜಾಗರೂಕತೆಯಿಂದ ತಿಳಿದುಕೊಳ್ಳಬೇಕು. ನೆಹರೂ ಪ್ರತಿಪಾದಿಸುವ ಸಂಸ್ಕೃತಿ ನಿಷ್ಠ ರಾಷ್ಟ್ರೀಯತೆ ಎಲ್ಲರನ್ನೊಳಗೊಂಡದ್ದು. ಜೊತೆಗೆ ಸೆಕ್ಯುಲರ್ ಸ್ವರೂಪದ್ದು. ಅದರ ನೆಲೆಗಟ್ಟು ಪ್ರಜಾಸತ್ತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯ. ಆದರೆ ಸಂಸ್ಕೃತಿಕ ರಾಷ್ಟ್ರೀಯತೆ, ಶ್ರೇಣೀಕೃತ ನೆಲೆಯ ಅಸಮಾನ ಸಮಾಜದ ಪರಿಕಲ್ಪನೆ. ಅದು ನಿರ್ದಿಷ್ಟ ಸಂಸ್ಕೃತಿಯ ಶ್ರೇಷ್ಠತೆಯ ನೆಲೆಯಲ್ಲಿ ಇತರ ಸಂಸ್ಕೃತಿಕ ಅಸ್ಮಿತೆಗಳ ಶರಣಾಗತಿಯನ್ನು ಒತ್ತಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ನೆಹರೂ ರಾಷ್ಟ್ರೀಯತೆಯನ್ನು, ‘ವಿಮರ್ಶಾತ್ಮಕ  ಸಂಸ್ಕೃತಿನಿಷ್ಠ ರಾಷ್ಟ್ರೀಯತೆ’ಯೆಂದು ನಿರೂಪಿಸಬಹುದು.

ನೆಹರೂ ರಾಜಕೀಯ ಚಿಂತನೆಯಲ್ಲಿ ವ್ಯಕ್ತಗೊಳ್ಳುವ ಇನ್ನೊಂದು ಅಂಶ ಭಾರತದ ಪ್ರಜಾತಂತ್ರಕ್ಕೆ ಸಂಬಂಧಿಸಿದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ನಿಹಿತವಾಗಿದ್ದ ಪ್ರಜಾತಂತ್ರದ ಕಲ್ಪನೆಯನ್ನು ಸ್ವಾತಂತ್ರೋತ್ತರ ಭಾರತದಲ್ಲಿ ರೂಢಮೂಲಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಸಂವಿಧಾನ ರಚನೆಯ ಚಟುವಟಿಕೆಗಳಿಂದಾರಂಭಿಸಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಷ್ಟ್ರಸಂಘಟನೆ ಹಾಗೂ ಸಾಮಾ ಜಿಕ ಮರುಸಂಘಟನೆಯ ಪ್ರಕ್ರಿಯೆಯಲ್ಲಿ ನೆಹರೂ ಪ್ರಜಾತಂತ್ರವನ್ನು ಸಾಮಾಜಿಕ-ರಾಜಕೀಯ ವಾಸ್ತವವಾಗಿ ಪರಿವರ್ತಿಸುವಲ್ಲಿ ಅವಿರತವಾಗಿ ದುಡಿದಿದ್ದಾರೆ. ಪ್ರಜಾತಂತ್ರ, ಭಾರತದಲ್ಲಿ ನೆಲೆಯೂರುವಂತೆ ಮಾಡಲು ನೆಹರೂ ನಡೆಸಿದ ಪ್ರಯತ್ನಗಳನ್ನು ಗಮನಿಸುವಲ್ಲಿ ನಾವು ಉದಾಸೀನ ತೋರಿದ್ದೇವೆ. ನೆಹರೂರವರನ್ನು ಆಧುನಿಕತೆ ಹಾಗೂ ಅಭಿವೃದ್ಧಿಯ ಮಹಾನ್ ನಾಯಕರಾಗಿ ಗುರುತಿಸುತ್ತೇವೆಯೇ ಹೊರತು ಪ್ರಜಾತಂತ್ರದ ಅನುಷ್ಠಾನಕ್ಕಾಗಿ ಅವರು ನಡೆಸಿದ ಸತತ ಪ್ರಯತ್ನಗಳನ್ನು ನಾವು ಅಷ್ಟಾಗಿ ಗಮನಿಸಿದಂತಿಲ್ಲ.

ಈ ಹಿನ್ನೆಲೆಯಲ್ಲಿ ಎರಡು ಅಂಶಗಳನ್ನು ಮುಂದಿಡಬೇಕಾಗುತ್ತದೆ. ಒಂದು, ಬಹಳ ಸ್ಪಷ್ಟವಾದ ಅರ್ಥದಲ್ಲಿ ನೆಹರೂ ಸಂಸದೀಯ ಶೈಲಿಯ ಪ್ರಜಾತಂತ್ರದ ಪ್ರತಿಪಾದಕ. ಸಂವಿಧಾನ ರಚನೆಯ ಸಭೆಯಲ್ಲಿ ಭಾರತ ಯಾಕೆ ಸಂಸದೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದಕ್ಕೆ ನೆಹರೂ ನೀಡುವ ಕಾರಣ ಪ್ರಜಾಸತ್ತಾತ್ಮಕ ಪ್ರತಿನಿಧಿತ್ವಕ್ಕೆ ಸಂಬಂಧಿಸಿದ್ದು. ಅವರ ದೃಷ್ಟಿಯಲ್ಲಿ ಸಂಸದೀಯ ವ್ಯವಸ್ಥೆಯೊಂದೇ ಭಾರತದಂತಹ ಸಂಕೀರ್ಣ ಸಮಾಜದ ಸಂಸ್ಕೃತಿಕ ಹಾಗೂ ಸಾಮಾಜಿಕ ಬಹುರೂಪಗಳನ್ನು ಯಶಸ್ವಿಯಾಗಿ ಪ್ರತಿನಿಧಿಸಬಲ್ಲುದು. ಈ ಅರ್ಥದಲ್ಲಿ ಭಾರತದ ಸಂಸದೀಯ ವ್ಯವಸ್ಥೆ ಬ್ರಿಟಿಷ್ ಸಂಸದೀಯ ವ್ಯವಸ್ಥೆಯ ತದ್ರೂಪಿ ಎನ್ನುವ ವಾದ ಸಮಂಜಸವಾದುದ್ದಲ್ಲ. ನೆಹರೂ ತನ್ನ ಅನೇಕ ಸಹೋದ್ಯೋಗಿಗಳೊಂದಿಗೆ ಸಂವಿಧಾನ ಸಭೆಯ ಚರ್ಚೆಗಳಲ್ಲಿ ಪಾಲ್ಗೊಂಡು ಸಂಸದೀಯ ವ್ಯವಸ್ಥೆ ಒಂದು ಸಹಮತದ ವ್ಯವಸ್ಥೆಯಾಗಿ ಭಾರತದ ಸಂವಿಧಾನದಲ್ಲಿ ನೆಲೆಯೂರುವುದಕ್ಕೆ ಅಪಾರವಾದ ಬೌದ್ಧಿಕ ಪರಿಶ್ರಮವನ್ನು ನಡೆಸಿದ್ದರು. ಈ ಸುದೀರ್ಘ ಕಾಲಾವಧಿಯಲ್ಲಿ; ಇಂದಿಗೂ ಭಾರತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಮುಂದುವರಿದುಕೊಂಡು ಬಂದಿದೆ ಎನ್ನುವ ಸಂಭ್ರಮವನ್ನು ನಾವು ದಕ್ಷಿಣೇಷ್ಯಾದ ಇತರೆ ಸಮಾಜಗಳಲ್ಲಿ ಕಂಡುಬರುತ್ತಿರುವ ಪ್ರಕ್ಷುಬ್ದತೆಯ ಜೊತೆಗೆ ತುಲನೆ ಮಾಡಿ ನೋಡಬೇಕು.

ನೆಹರೂ ಅವರ ಪ್ರಜಾತಾಂತ್ರಿಕ ಕಾಳಜಿಯಲ್ಲಿ ವ್ಯಕ್ತಗೊಳ್ಳುವ ಇನ್ನೊಂದು ಪ್ರಮುಖ ಅಂಶ ಅವರ ಸೆಕ್ಯುಲರ್ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. ಸೆಕ್ಯುಲರ್ ಪರಿಕಲ್ಪನೆ ನೆಹರೂರವರಿಗೆ ಬಹಳ ಆಪ್ತವಾದುದು. ಅದು ಅವರ ಪ್ರಜಾತಾಂತ್ರಿಕ ದೃಷ್ಟಿಕೋನದ ಅವಿಭಾಜ್ಯ ಭಾಗವೂ ಹೌದು. ನೆಹರೂರವರ ಪ್ರಕಾರ ಬಹುಸಂಸ್ಕೃತೀಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಮುಂದೆ ಉದ್ಭವಿಸಬಹುದಾದ ಎಲ್ಲ ಬಗೆಯ ಸಂಸ್ಕೃತಿಕ-ಧಾರ್ಮಿಕ-ಸಾಮಾಜಿಕ ಸಂಕಟ/ಸಂಘರ್ಷಗಳಿಗೆ ಭಾರತದ ರಾಜ್ಯವ್ಯವಸ್ಥೆ ಅಳವಡಿಸಿಕೊಳ್ಳಬೇಕಾದ ಸೆಕ್ಯುಲರ್ ಪಥ ದಲ್ಲಿ ಪರಿಹಾರವಿದೆ. ಅಂತೆಯೇ ಅದು ರಾಜ್ಯ ತನ್ನ ಆಡಳಿತದ ನಿರ್ವಹಣೆಯಲ್ಲಿ ಪಾಲಿಸಲೇಬೇಕಾದ ನಿರ್ದೇಶನ ತತ್ವ. ನೆಹರೂರವರ ದೃಷ್ಟಿಯಲ್ಲಿ ಸಂಸ್ಕೃತಿಕ ಒಡಕುಗಳನ್ನು, ಸಾಮಾಜಿಕ ಬಿರುಕುಗಳನ್ನು ಹಾಗೂ ಧಾರ್ಮಿಕ ಸಂಘರ್ಷಗಳನ್ನು ಭಾರತದಲ್ಲಿ ಯಶಸ್ವಿಯಾಗಿ ಪರಿಹರಿಸಬೇಕೆಂದರೆ ಸೆಕ್ಯುಲರ್ ನೀತಿಯನ್ನು ಅನುಸರಿಸಬೇಕು.

ದುಷ್ಪರಿಣಾಮವನ್ನೂ ಬೀರಬಲ್ಲುದು. ನೆಹರೂರವರ ಸೆಕ್ಯುಲರ್ ಚಿಂತನೆಯನ್ನು ಕಟುವಾಗಿ ಟೀಕಿಸುವ ಕೆಲವು ವಿದ್ವಾಂಸರು ಸೆಕ್ಯುಲರ್ ಚಿಂತನೆ ಪಾಶ್ಚಿಮಾತ್ಯ ಸಂದರ್ಭದಿಂದ ಹೇಗೆ ಮೂಡಿಬಂತು ಮತ್ತು ಅದು ಭಾರತೀಯ ಸಮಾಜಕ್ಕೆ ಯಾಕೆ ಪರಕೀಯವಾದದ್ದು ಎಂದು ವಾದಿಸುತ್ತಾರೆ. ನೆಹರೂ ಪ್ರತಿಪಾದಿಸಿದ ಸೆಕ್ಯುಲರ್ ನೀತಿಯ ಬಗ್ಗೆ ಏನೇ ಗೊಣಗಾಟವಿದ್ದರೂ; ಅದರ ಕಾರ್ಯಸೂಚಿ ಭಾರತೀಯ ಸಮಾಜದ ಮರುಸಂಘಟನೆಯ ಪರಿಪ್ರೇಕ್ಷ್ಯದಲ್ಲಿ ಅತ್ಯಂತ ಮಹತ್ವಪೂರ್ಣವಾದುದು.

ನೆಹರೂ ಪರಿಕಲ್ಪಿಸಿದ ವಿಮರ್ಶಾತ್ಮಕ ಸಂಸ್ಕೃತಿನಿಷ್ಠ ರಾಷ್ಟ್ರೀಯತೆಯನ್ನು ಮರುಶೋಧಿಸುವುದು, ಅವರು ತೀವ್ರ ಕಾಳಜಿಯಿಂದ ಪ್ರತಿಪಾದಿಸಿದ ಪ್ರಜಾತಂತ್ರದ ಮೌಲ್ಯ ಮತ್ತು ಆಶಯಗಳನ್ನು ನಮ್ಮವನ್ನಾಗಿಸುವುದು ಮತ್ತು ನೆಹರೂ ಸಾರ್ಥಕ ಸಮಾಜದ ಸದ್ಗುಣವೆಂದು ಭಾವಿಸಿದ ಸೆಕ್ಯುಲರ್ ಚಿಂತನೆಯನ್ನು ಅದರ ಇತಿಹಾಸ ಮತ್ತು ಸಮಸ್ಯೆಗಳ ನಡುವೆಯೂ ಭವಿಷ್ಯದ ಭಾರತದ ದಾರಿದೀಪ ಎಂದು ಅರ್ಥ ಮಾಡಿಕೊಳ್ಳುವುದು – ಈ ಕಷ್ಟದ ದಾರಿಗಳ ಮೂಲಕ ನೆಹರೂರವರನ್ನು ನಾವು ಮತ್ತೆ ಸಮೀಪಿಸಬೇಕಾಗಿದೆ.

*ರಾಜಾರಾಮ ತೋಳ್ಪಾಡಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರು. ನಿತ್ಯಾನಂದ ಬಿ.ಶೆಟ್ಟಿಯವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಇಬ್ಬರೂ ಕಳೆದ ಒಂದು ವರ್ಷದಿಂದ ಸಾರ್ವಜನಿಕ ವಲಯದ ಅನೇಕ ವಿಷಯಗಳ ಬಗ್ಗೆ ಜೊತೆಯಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

Leave a Reply

Your email address will not be published.