ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕು ಮತ್ತು ಪರಂಪರೆ

-ಸುಧೀಂದ್ರ ಕುಲಕರ್ಣಿ

ಈ ಮತ್ರ್ಯಲೋಕದಲ್ಲಿ ಸಕಲವೂ ನಾಶವಾಗುತ್ತವೆ. ಆದರೆ ಚಿಂತನೆಗಳು ಮತ್ತು ಕನಸುಗಳು ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿ ಯಾವ ಚಿಂತನೆಯೂ ನೋವಿನ ಮತ್ತು ತ್ಯಾಗದ ಸತ್ವಪರೀಕ್ಷೆಯನ್ನು ದಾಟದೆ ಪರಿಪೂರ್ಣವಾಗಿಲ್ಲ

ನೇತಾಜಿ ಸುಭಾಷ್ ಚಂದ್ರ ಬೋಸ್ ಇದೀಗ ಮತ್ತೆ ಚಾಲ್ತಿಗೆ ಬಂದಿದ್ದಾರೆ. ಇದು ಅವರ 125ನೇ ಹುಟ್ಟುಹಬ್ಬದ ಸಂದರ್ಭ. ವಿವಿಧ ರಾಜಕೀಯ ಪಕ್ಷಗಳು ನೇತಾಜಿ ಸ್ಮರಣೆಯ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಈ ಪಕ್ಷಗಳಿಗೆ ಕಾಲದ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಗಾಂಧಿ, ಪಟೇಲ್, ನೇತಾಜಿ ಯಾರಾದರೂ ಒದಗಬಹುದು! ಇತಿಹಾಸದ ಪುಟಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವುದನ್ನು, ತಮ್ಮ ಅಜೆಂಡಾಗಳ ಜೊತೆಗೆ ಜೋಡಿಸಿಕೊಳ್ಳುವುದನ್ನು, ಆ ಮೂಲಕ ಜನರ ದಿಕ್ಕು ತಪ್ಪಿಸುವುದನ್ನು ರಾಜಕಾರಣಿಗಳಿಗೆ ಹೇಳಿಕೊಡಬೇಕೇ? ಈಗ ನೇತಾಜಿ ವಿಷಯದಲ್ಲಿ ಆಗುತ್ತಿರುವುದೂ ಇದೇ.

ಇಂತಹ ಗೊಂದಲದ ಸನ್ನಿವೇಶದಲ್ಲಿ ನೇತಾಜಿ ಬದುಕು ಮತ್ತು ಬಿಟ್ಟುಹೋದ ಪರಂಪರೆಯನ್ನು ವಿವಿಧ ಕೋನಗಳಿಂದ ದಾಖಲಿಸುವ, ವ್ಯಾಖ್ಯಾನಿಸುವ ದಿಟ್ಟ ಪ್ರಯತ್ನವನ್ನು ಸುಧೀಂದ್ರ ಕುಲಕರ್ಣಿ ಅವರು ಮಾಡಿದ್ದಾರೆ. ಲೇಖಕರು ಕನ್ನಡಿಗರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ಭಾಗಗಳ ಈ ಲೇಖನದಲ್ಲಿ ನೇತಾಜಿ ಅವರ ವ್ಯಕ್ತಿತ್ವದ ನೈಜ ಗೆರೆಗಳನ್ನು ಗುರುತಿಸಬಹುದು.

 

ಭಾಗ-1

ಜಾತ್ಯತೀತ ನೇತಾಜಿ

ಕೋಮುವಾದಿ ಹೇಗಾದಾರು?

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬದುಕು ಮತ್ತು ಚಿಂತನೆಯದ್ದು ಒಂದು ದಿಕ್ಕು. ಹಿಂದೂ ರಾಷ್ಟ್ರವಾದದ್ದು ಮತ್ತೊಂದು ತದ್ವಿರುದ್ಧ ದೆಸೆ. ಇವೆರಡನ್ನು ಅಕ್ಕಪಕ್ಕ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ?

ಪರಾಕ್ರಮ ದಿನ. ಇದು ಭಾರತಮಾತೆಯ ಮಹಾನ್ ಮಕ್ಕಳಲ್ಲಿ ಒಬ್ಬರಾದ ನೇತಾಜಿಯವರ 125ನೇ ಜನ್ಮದಿನಾಚರಣೆಯನ್ನು ಆಚರಿಸುವ ಒಂದು ಸೂಕ್ತ ರೀತಿ. ಅouಡಿಚಿge ಎನ್ನುವ ಪದಕ್ಕಿಂತ ಬೇರಾವ ಪದವೂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತ್ಯುನ್ನತ ಮಿಲಿಟರಿ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬದುಕನ್ನು ವಿವರಿಸಲಾರವು. 

ಬ್ರಿಟಿಷ್ ಸಾಮ್ರಾಜ್ಯಹಶಾಹಿ ವಿರುದ್ಧ ನೇತಾಜಿಯವರಂತೆ ಕಲಿತನದಿಂದ ಅಪಾಯಕಾರಿ ಹೋರಾಟವನ್ನು ಹೊತ್ತುಕೊಂಡ ಇನ್ನೊಬ್ಬ ಭಾರತೀಯ ವ್ಯಕ್ತಿ ಇದ್ದಾರೆಯೆ? ಇಲ್ಲ ಎಂದೇ ಹೇಳಬೇಕು. ದೇಶವಿದೇಶಗಳಲ್ಲಿ ಸಂಚರಿಸಿ, ಪ್ರಬಲ ವಸಾಹತುಶಾಹಿ ಶಕ್ತಿಯೊಂದಿಗೆ ಸೆಣಸಲು ಸೈನ್ಯವೊಂದನ್ನು ಕಟ್ಟಿದ ಬೇರೆ ಯಾರಾದರೂ ಭಾರತೀಯ ದೇಶಭಕ್ತರಿದ್ದಾರೆಯೆ? ಇಲ್ಲ.

ನೇತಾಜಿಯವರು ಕೇವಲ ಒಬ್ಬ ಹೆಮ್ಮೆಯ ರಾಷ್ಟ್ರೀಯ ನಾಯಕ ಮಾತ್ರರಲ್ಲ. ಜಗತ್ತಿನಾದ್ಯಂತ ಅವರನ್ನು 20ನೆಯ ಶತಮಾನದ ಮಹಾನ್ ನಾಯಕರುಗಳಲ್ಲಿ ಒಬ್ಬರೆಂದು ಗುರುತಿಸಬೇಕಿತ್ತು. ಹಾಗಾಗಲಿಲ್ಲ. ನೇತಾಜಿಯವರನ್ನು ಕ್ರಾಂತಿಕಾರಿ ಸ್ಥೈರ್ಯ ಮತ್ತು ತ್ಯಾಗದ ಪ್ರತಿಮೆಯಾಗಿ ಭಾರತವು ಕಡೆಯಲಾಗದ್ದಕ್ಕೆ ಕಾರಣಗಳೇನೆಂದರೆ, ನಮ್ಮ ದೇಶದ ಎಡ ಪಂಥೀಯ ಮತ್ತು ಬಲ ಪಂಥಗಳಿಗೆ ಸೇರಿದ ನಮ್ಮ ರಾಜಕಾರಣಿಗಳು ಹಾಗು ಬುದ್ಧಿಜೀವಿಗಳು ತೊಡಗಿಕೊಂಡ ಅನಾವಶ್ಯಕ ವಿವಾದಗಳು ಮತ್ತು ತಪ್ಪುತಪ್ಪು ವ್ಯಾಖ್ಯಾನಗಳು.

ಅವರಿಗೆ ಸಲ್ಲಬೇಕಿದ್ದ ಮಾನ್ಯತೆಯನ್ನು ನಮ್ಮ ದೇಶವನ್ನು ಸತತವಾಗಿ ಒಂದಷ್ಟು ಕಾಲ ಆಳಿದ ಕಾಂಗ್ರೆಸ್ ಸರ್ಕಾರಗಳು ಸಲ್ಲಿಸಲಿಲ್ಲ. ನೆಹರು ಕುಟುಂಬದ ಬಗ್ಗೆ ಕಾಂಗ್ರೆಸ್ಸಿನವರಿಗಿದ್ದ ಅತಿಯಾದ, ಸ್ವಲ್ಪ ಮಟ್ಟಿನ ದಾಸ್ಯ ಮನೋಭಾವದ ಆರಾಧನೆ ಮತ್ತು ಭಟ್ಟಂಗಿತನಗಳು ಕೂಡ ಇಲ್ಲಿ ಪಾತ್ರವಹಿಸಿವೆ.

ಕಾಂಗ್ರೆಸ್ಸೇತರ ಎಡ ಪಂಥೀಯರು, ವಿಶೇಷವಾಗಿ ಭಾರತೀಯ ಕಮ್ಯೂನಿಸ್ಟರು ನೇತಾಜಿಯವರನ್ನು ಸಂಪೂರ್ಣ ತಪ್ಪಾಗಿ ಗ್ರಹಿಸಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಎದುರು ಯುದ್ಧ ಮಾಡುವುದಕ್ಕಾಗಿ ಜರ್ಮನಿ ಮತ್ತು ಜಪಾನಿನ ಸಹಾಯವನ್ನು ಕೋರಿದ್ದರು ಎಂಬ ಕಾರಣಕ್ಕೇ ನೇತಾಜಿಯವರನ್ನು ಮೊನ್ನೆ ಮೊನ್ನೆವರೆಗೂ ಕಮ್ಯೂನಿಸ್ಟರು ದೂಷಿಸುತ್ತಿದ್ದರು.

ಇತ್ತೀಚೆಗೆ ಸಂಘ ಪರಿವಾರವು ನೇತಾಜಿಯವರನ್ನು ತಮ್ಮ ಕೇಸರಿ ದೈವಮಂದಿರದ ಒಬ್ಬ ದೈವವನ್ನಾಗಿ ಸೇರಿಸಿಕೊಳ್ಳಲು ತನ್ನ ವ್ಯರ್ಥ ಪ್ರಯತ್ನವನ್ನು ಜೋರಾಗಿ ಮಾಡುತ್ತಿದೆ. ಇದು ಇನ್ನೂ ಸಮಸ್ಯಾತ್ಮಕ ವಿಷಯ. ಏಕೆಂದರೆ, ಸಂಘವು ನೇತಾಜಿಯವರು ಏನನ್ನು ಪ್ರತಿನಿಧಿಸುತ್ತಿದ್ದರೋ ಅವೆಲ್ಲವುಗಳನ್ನು ಸುಳ್ಳಾಗಿಸಲು ಮತ್ತು ವಿರೂಪಗಳಿಸಲು ಬಯಸುತ್ತದೆ. ನೇತಾಜಿಯವರೊಬ್ಬ ಶ್ರದ್ಧಾವಂತ ಹಿಂದುವಾಗಿದ್ದರು ನಿಜ. ಜೊತೆಗೆ ಅವರಲ್ಲಿ ಸಂತನಂಥ ಸ್ವ-ಪರಿತ್ಯಜನೆಯ ಒಂದು ಎಳೆಯೂ ಇತ್ತು. ಅವರು ಭಗವದ್ಗೀತೆಯ ಮತ್ತು ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರಭಾವಿತರಾಗಿದ್ದರು.

ಅದಾಗ್ಯೂ ಹಿಂದು ಮುಸ್ಲಿಂ ಐಕ್ಯತೆಯ ತಮ್ಮ ಪ್ರತಿಪಾದನೆಯಲ್ಲಿ ಅವರು ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಭಾರತವನ್ನು `ಹಿಂದು ರಾಷ್ಟ್ರ’ವಾಗಿ ಪರಿವರ್ತಿಸುವ ಸಂಘದ ಕಾರ್ಯಸೂಚಿಯು ನೇತಾಜಿಯವರ ಸೆಕ್ಯುಲರ್ ಮತ್ತು ಒಳಗೊಳ್ಳುವಿಕೆಯ ಸಿದ್ಧಾಂತವಾಕ್ಕೆ ತದ್ವಿರುದ್ಧವಾಗಿದೆ. ನೇತಾಜಿಯವರ `ಭಾರತೀಯ ರಾಷ್ಟ್ರೀಯವಾದ’ಕ್ಕೆ ಸಂಘದ ಕಾರ್ಯಸೂಚಿಯು ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ಆದ್ದರಿಂತ ಅವರು ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು. ಹಿಂದು ಬಲಪಂಥೀಯತೆಯ ಸಾಮ್ರಾಜ್ಯಶಾಹೀ-ವಿರೋಧಿ ಬದ್ಧತೆಯು ಸಂಘದವರಲ್ಲಿ ಸೊರಗುತ್ತಿದೆ. ಇಂಥ ಸಂದರ್ಭದಲ್ಲಿ, ನೇತಾಜಿಯವರ ಬದುಕು ಮತ್ತು ಪರಂಪರೆಗಳ ದ್ಯೋತಕವಾದ ಅಂತಾರಾಷ್ಟ್ರೀಯತೆ ಮತ್ತು ಮಾನವೀಯತೆಗಳನ್ನು ಪ್ರಚುರಪಡಿಸುವುದಕ್ಕೆ ಹಿಂದು ಬಲಪಂಥೀಯತೆಯು ಆಸಕ್ತಿ ತೋರಿಸುವ ಸಾಧ್ಯತೆಯೂ ಇಲ್ಲ.

ಇದೆಲ್ಲ ಶೋಚನೀಯ

ನೇತಾಜಿಯವರ ಅಂತಾರಾಷ್ಟ್ರೀಯತಾವಾದವು ಹಿಂದುತ್ವ ರಾಷ್ಟ್ರೀಯತಾವಾದದ ಸಂಕುಚಿತ ವ್ಯಾಖ್ಯಾನವನ್ನು ಪ್ರಶ್ನಿಸುತ್ತದೆ. ಈ `ಪರಾಕ್ರಮಿ’ ನಾಯಕನ ಅಮರ ಪರಂಪರೆಯು ಇಂದಿನ ಭಾರತ ಮತ್ತು ಇಂದಿನ ಜಗತ್ತಿನ ದೊಡ್ಡದೊಡ್ಡ ಸಮಸ್ಯೆಗಳನ್ನು ಎದುರಿಸಲು ಹೇಗೆ ಸಹಾಯ ಮಾಡಬಹುದು?

ಮೊದಲಿಗೆ, ನೇತಾಜಿಯವರು ತಮ್ಮ ಕಾರ್ಯಸೂಚಿಗಾಗಿ ¥sóÁ್ಯಸಿಸ್ಟ್ ಜರ್ಮನಿ ಮತ್ತು ಜಪಾನಿನ ಬೆಂಬಲವನ್ನು ಆಶಿಸಿದ್ದು ಅವರ ಪರಂಪರೆಯನ್ನು ಮಲಿನಗೊಳಿಸಿತು ಎಂಬ ತಪ್ಪುಕಲ್ಪನೆಯನ್ನು ತೊಲಗಿಸಬೇಕು. ಇದೊಂದು ಸಂಕೀರ್ಣವಾದ ವಿಷಯ. ಇಂಥ ವಿಷಯಗಳ ಬಗ್ಗೆ ಇತಿಹಾಸದ ತೀರ್ಮಾನಗಳನ್ನು ಕಪ್ಪು ಬಿಳುಪಿನಲ್ಲಿ ನೋಡಲಾಗುವುದಿಲ್ಲ. ನೇತಾಜಿಯವರ ಆದ್ಯ ಉದ್ದೇಶವು ಭಾರತದ ಮೇಲಿದ್ದ ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸುವುದಾಗಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ.   

ಜರ್ಮನಿ, ಇಟಲಿ ಮತ್ತು ಜಪಾನಿನಿಂದ ಬೆಂಬಲವನ್ನು ನೇತಾಜಿಯವರು ಆಶಿಸಿದ್ದರೂ-ಪಡೆದಿದ್ದರೂ, ಅವರು ಯಾವತ್ತೂ ಪೈಶಾಚಿಕ ಜಗದೃಷ್ಟಿಯನ್ನಾಗಲಿ ದುಷ್ಕೃತ್ಯಗಳನ್ನಾಗಲಿ ಬೆಂಬಲಿಸಲಿಲ್ಲ.

ಎರಡನೆಯದಾಗಿ, ಸಂಕುಚಿತ, ಸ್ವಾರ್ಥಮಯ, ಪ್ರತ್ಯೇಕತೆಯ ಮತ್ತು ದುರಹಂಕಾರಭರಿತ ರಾಷ್ಟ್ರೀಯವಾದದ ಕಲ್ಪನೆಗಳು ಜಗತ್ತಿನ ಹಲವು ಕಡೆಗಳಲ್ಲಿ ಮತ್ತು ಭಾರತದಲ್ಲಿ ಹಾಗೂ ನಮ್ಮ ಅಕ್ಕಪಕ್ಕದ ದೇಶಗಳಲ್ಲೂ ತಲೆಯೆತ್ತುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನೇತಾಜಿಯವರ ಅಂತಾರಾಷ್ಟ್ರೀಯ ಮತ್ತು ಮಾನವೀಯ ಗಾಢವಾದ ಬದ್ಧತೆಯು ಬಹಳ ಭರವಸೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ.

ಸೆಕ್ಯುಲರ್ ಮತ್ತು ಸಮಾಜವಾದಿ ಬೋಸ್

ಮೂರನೆಯದಾಗಿ, ಸಮಾನತಾವಾದದ ಆದರ್ಶಗಳ ಮೇಲೆ ಕೆಸರೆರಚುವುದು ¥sóÁ್ಯಷನ್ ಆಗಿರುವ ಮತ್ತು ಜಗತ್ತಿನ ಬಹುತೇಕ ರಾಷ್ಟ್ರಗಳು ವಿಪರೀತವಾದ ಸಮಾಜೋ-ಆರ್ಥಿಕ ಅಸಮಾನತೆಯನ್ನು ಪ್ರದರ್ಶಿಸುತ್ತಿರುವ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ.

ಆದ್ದರಿಂದ ನೇತಾಜಿಯವರು ಸಮಾಜವಾದದ ಒಬ್ಬ ಪ್ರಬಲ ಅನುಯಾಯಿಯಾಗಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಹೌದು, ಭಾರತೀಯ ಕಮ್ಯೂನಿಸ್ಟರಂತೆ ನೇತಾಜಿಯವರು ಮಾಕ್ರ್ಸಿಸ್ಟ್ ಸಮಾಜವಾದವನ್ನು ಸಮರ್ಥಿಸಲಿಲ್ಲ. ಬದಲಿಗೆ ಅವರು `ಸಾಮ್ಯವಾದ’ದ ಪರಿಕಲ್ಪನೆಯನ್ನು ಬೆಳಸಿದರು. ಇದು ಸಾಮಾಜಿಕ ಹೊಂದಾಣಿಕೆ, ಅನುಕಂಪ ಮತ್ತು ಪರಸ್ಪರ ಕ್ಷೇಮಪಾಲನೆಗಳ ಕುರಿತಂಥ ಪುರಾತನ ಭಾರತೀಯ ಆಧ್ಯಾತ್ಮಿಕ ಬೋಧನೆಗಳಿಂದ ಸ್ಫೂರ್ತಿ ಪಡೆದಿದೆ.

ಇದನ್ನು ನಾವು, “ಭಾರತೀಯ ಗುಣಲಕ್ಷಣಗಳ ಸಮಾಜವಾದ” ಎಂದೂ ಕರೆಯಬಹುದು.

ನಾಲ್ಕನೆಯ ಮತ್ತು ಬಹಳ ಮುಖ್ಯವಾದ ವಿಷಯ ಏನೆಂದರೆ, ನೇತಾಜಿಯವರು ಸೆಕ್ಯುಲರ್ ಮತ್ತು ಒಳಗೊಳ್ಳುವಂಥ ಭಾರತೀಯ ಆಲೋಚನೆಗಳಿಗೆ ತೀವ್ರ ಮತ್ತು ಅಚಲವಾದ ಬದ್ಧತೆಯುಳ್ಳವರಾಗಿದ್ದರು. ಅವರು ನಿರಂತರವಾಗಿ ಹಿಂದುಗಳನ್ನು, ಮುಸ್ಲಿಮರನ್ನು, ಸಿಖ್ಖರನ್ನು, ಕ್ರಿಶ್ಚಿಯನ್ನರನ್ನು, ಮತ್ತು ಎಲ್ಲ ಜಾತಿಗಳನ್ನು, ವರ್ಗಗಳನ್ನು ಹಾಗು ಧರ್ಮಗಳನ್ನು ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿಸಲು ಶ್ರಮಿಸಿದರು. ಅವರು ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿಯ ಸಂಯೋಜನೆಯು ಇದಕ್ಕೆ ಅತ್ಯುತ್ತಮ ಮಾದರಿ.

ನೇತಾಜಿಯವರನ್ನು `ಕೇಸರಿ’ ನಾಯಕನನ್ನಾಗಿ ಎಂದೂ ಪರಿಗಣಿಸಲಾಗುವುದಿಲ್ಲ.

ನೇತಾಜಿಯವರನ್ನು ಕೇಸರಿ ನಾಯಕನನ್ನಾಗಿ ಬಿಂಬಿಸುವ ಹಿಂದುತ್ವ ಶಕ್ತಿಗಳ ಪ್ರಯತ್ನ ಏಕೆ ಅಸಫಲ ಎಂಬುದಕ್ಕೆ ಕೆಲವು ವಾಸ್ತವ ಸಂಗತಿಗಳು ಹೀಗಿವೆ.

ಟಿಪ್ಪು ಸುಲ್ತಾನ್ ಕುರಿತಂತೆ ನೇತಾಜಿಯವರಿಗೆ ಬಹಳ ಅಭಿಮಾನವಿತ್ತು. ಇಂದು ಸಂಘ ಪರಿವಾರವು ಟಿಪ್ಪುವಿಗೆ “ರಾಷ್ಟ್ರ ವಿರೋಧಿ” ಎಂಬ ಮಸಿ ಬಳಿಯುತ್ತಿದೆ. ಐಎನ್‍ಎ ಸಮವಸ್ತ್ರದಲ್ಲಿ ಟಿಪ್ಪುವಿನ ಲಾಂಛನÀವಾದ ನೆಗೆಯುತ್ತಿರುವ ಹುಲಿ ಹೆಮ್ಮೆಯ ಪ್ರದರ್ಶನವಾಗಿತ್ತು. ಇದು ಬ್ರಿಟಿಷರ ವಿರುದ್ಧ ಟಿಪ್ಪು ನಡೆಸಿದ ಸಶಸ್ತ್ರ ದಂಗೆಯ ಪ್ರತೀಕವಾಗಿತ್ತು.

ಆಜಾದ್ ಹಿಂದ್ ಚಳುವಳಿಯ ಧ್ಯೇಯಮಂತ್ರವು ಮೂರು ಉರ್ದು ಪದಗಳಾಗಿದ್ದುವು ಅವು -ಇತ್ಮದ್ (ನಂಬಿಕೆ), ಇತ್ತೇಫಾಕ್ (ಒಗ್ಗಟ್ಟು) ಮತ್ತು ಕುರ್ಬಾನಿ (ಬಲಿದಾನ).

ದೇಶಕ್ಕೆ ಅವರು ಕೊಟ್ಟ ಘೋಷಣೆ, “ಜೈ ಹಿಂದ್” ಆಗಿತ್ತು. “ಜೈ ಹಿಂದು” ಆಗಿರಲಿಲ್ಲ.

ಅಖಂಡ ಭಾರತ ಚಳವಳಿಯಿಂದ ಮುಸ್ಲಿಮರನ್ನು ದೂರವಿಡುವ ಜಿನ್ನಾರ ರಾಜಕೀಯವನ್ನು ಹೇಗೆ ನೇತಾಜಿಯವರು ಒಪ್ಪಲಿಲ್ಲವೋ ಹಾಗೆಯೇ ವಿ.ಡಿ.ಸಾವರ್ಕರರ ಹಿಂದುತ್ವವನ್ನೂ ಅವರು ಒಪ್ಪಲಿಲ್ಲ.

ನೇತಾಜಿಯವರ ಐಎನ್‍ಎಯಲ್ಲಿ ಹಿಂದು ಮತ್ತು ಮುಸ್ಲಿಂ ಸೈನಿಕರ ನಡುವಿನ ಒಗ್ಗಟ್ಟಿನ ಬಾಂಧವ್ಯ ಹೇಗಿತ್ತು ಎಂಬುದನ್ನು ಸಾರುವ ಒಂದು ಸಂಗತಿ ಬಹಳ ಆಸಕ್ತಿಕರವಾಗಿದೆ. ನೇತಾಜಿಯವರ ಮರಣಾನಂತರ ಕೆಂಪು ಕೋಟೆಯಲ್ಲಿ ಬಂಧಿತರಾಗಿದ್ದ ಐಎನ್‍ಎ ಹೋರಾಟಗಾರ ಖೈದಿಗಳ ಗುಂಪೊಂದನ್ನು ಗಾಂಧಿಯವರು ಭೇಟಿ ಮಾಡುತ್ತಾರೆ. ಆ ಸಂದರ್ಭದಲ್ಲಿ ಐಎನ್‍ಎ ಹೋರಾಟಗಾರರು ತಾವು ಐಎನ್‍ಎನಲ್ಲಿ ಯಾವುದೇ ರೀತಿಯ ಜಾತಿಮತಗಳ ಭಿನ್ನಭೇದವನ್ನು ಅನುಭವಿಸಿಲ್ಲ ಎಂಬುದನ್ನು ತಿಳಿಸುತ್ತಾರೆ. “ಆದರೆ ಇಲ್ಲಿ, `ಹಿಂದು ಟೀ’ ಮತ್ತು `ಮುಸ್ಲಿಂ ಟೀ’ಗಳನ್ನು ನೋಡಬೇಕಾಗಿದೆ” ಎಂದು ದೂರುತ್ತಾರೆ. ಅದಕ್ಕೆ ಗಾಂಧಿಯವರು, “ನೀವು ಹೇಗೆ ಅದನ್ನು ಸಹಿಸುತ್ತೀರಿ?” ಎಂದು ಪ್ರಶ್ನಿಸುತ್ತಾರೆ. “ನಾವು ಸಹಿಸುತ್ತಿಲ್ಲ, `ಹಿಂದು ಟೀ’ ಮತ್ತು `ಮುಸ್ಲಿಂ ಟೀ’ಗಳನ್ನು ಅರ್ಧರ್ಧ ಬೆರಸಿ ಕುಡಿಯುತ್ತೇವೆ. ಊಟವನ್ನೂ ಸಹ” ಅನ್ನುತ್ತಾರೆ ಐಎನ್‍ಎ ಸೈನಿಕರು. “ಬಹಳ ಒಳ್ಳೆಯದು” ಎನ್ನುತ್ತಾರೆ ಗಾಂಧೀಜಿಯವರು.

ಮಹಾತ್ಮಾ ಗಾಂಧಿಯವರಿಗೆ ಮಾಡಿದ ಹಾಗೆಯೇ ನೇತಾಜಿಯವರನ್ನೂ ಕೇವಲ ಒಂದು ಮೀಮ್ (meme)ಗೆ ಇಳಿಸಲಾಗುವುದಿಲ್ಲ. 

ನೇತಾಜಿಯವರು ಎಂದೂ ಕೇಸರಿ ನಾಯಕನಾಗುವುದು ಸಾಧ್ಯವಿಲ್ಲ ಏಕೆ ಎಂಬುದನ್ನು ಸುಗತ ಬೋಸ್ ಅವರ `ಹಿಸ್ ಮೆಜೆಸ್ಟಿಸ್ ಆಪೊನೆಂಟ್’ ಪುಸ್ತಕದ ಕೆಳಗಿನ ಪ್ರಖರ ಸಾಲುಗಳನ್ನು ಉದ್ಧರಿಸುವುದು ಈ ಗೌರವಾರ್ಪಣೆಯ ಸೂಕ್ತ ಸಮಾಪ್ತಿ ಎನಿಸುತ್ತದೆ ನನಗೆ.

ವಲ್ಲಭಭಾಯಿ ಪಟೇಲ್ ಅವರ ಮೇಲೆ ಸಾಧಿಸಿದಂತೆ ಸುಳ್ಳು ಹಕ್ಕು ಸಾಧನೆಯನ್ನು ಸುಭಾಷ್ ಚಂದ್ರ ಬೋಸ್ ಅವರ ರಾಜಕೀಯ ಪರಂಪರೆಯ ಮೇಲೆ ಸಾಧಿಸುವುದು ಸುಲಭವಲ್ಲ. ಬಹುಸಂಖ್ಯಾವಾದದೊಂದಿಗೆ ಪ್ರಜಾಪ್ರಭುತ್ವವನ್ನು ಮತ್ತು ಏಕರೂಪವನ್ನು ಏಕತೆಯೊಂದಿಗೆ ಗೊಂದಲಿಸಿಕೊಂಡು ಸಮಕಾಲೀನ ಭಾರತದ ಸರ್ಕಾರವು ಭಾರತೀಯ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದ ಅತ್ಯುತ್ತಮ ಪರಂಪರೆಗಳಿಗೆ ಬೆನ್ನು ಹಾಕುತ್ತಿದೆ. ಹೇಗೆಂದರೆ, ಇವರು ನಮ್ಮನಾಳಿದ ವಸಾಹತುಶಾಹಿ ಸರ್ಕಾರದಂತೆಯೇ ಹೆಚ್ಚು ಹೆಚ್ಚಾಗಿ ವರ್ತಿಸುತ್ತಿದ್ದಾರೆ. ವಸಾಹತುಷಾಹಿ ಯುಗದ ಕಾನೂನುಗಳಲ್ಲದ ಕಾನೂನುಗಳನ್ನೇ ಅವಲಂಬಿಸುತ್ತಿದ್ದಾರೆ. ಕೆಲವುಸಾರಿ ಅದರಂತೇ ನಡೆದುಕೊಳ್ಳುತ್ತಿದ್ದಾರೆ.

ಕೇಂದ್ರದಿಂದ ದಬ್ಬಾಳಿಕೆಯಿಂದ ಕೂಡಿದ ನಿಯಂತ್ರಣಗಳ ಮೂಲಕ ಭಾರತದ ವೈವಿಧ್ಯಮಯ ಜನರಿಂದ ಸ್ವಾಮಿನಿಷ್ಠೆಯನ್ನು ಹಿಂಡಿಕೊಳ್ಳಲು ಬಯಸುತ್ತಿದ್ದಾರೆ. ಆ ಮೂಲಕ ಭಾರತದ ಒಕ್ಕೂಟಕ್ಕೆ ಸೇರಿದ್ದೇವೆ ಎಂಬ ಭಾವನೆಯನ್ನು ಪೋಷಿಸುವುದಕ್ಕಿಂತ ಹೆಚ್ಚಿನ ಪ್ರತ್ಯೇಕತೆಯನ್ನು ಪ್ರೇರೇಪಿಸುತ್ತಿದ್ದಾರೆ. ರಾಜಕೀಯ ನೀತಿಗಳು ಕುಸಿಯುತ್ತಿರುವ ಇಂಥ ಸಂದರ್ಭದಲ್ಲೇ ಮಹಾತ್ಮಾ ಗಾಂಧಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬದುಕುಗಳು ಸಂದೇಶಗಳಾಗಿ ನವೀಕರಿಸಿದ ಪ್ರಾಧಾನ್ಯವನ್ನು ಪಡೆಯುತ್ತವೆ.

ಹೇಗೆ ಗಾಂಧಿಯವರ ಮೌಲ್ಯಗಳನ್ನು ಕೇವಲ ಸ್ವಚ್ಛತಾ ಆಂದೋಲನಕ್ಕೆ ಇಳಿಸಲಾಗುವುದಿಲ್ಲವೋ ಹಾಗೆಯೇ ನೇತಾಜಿಯವರ ಧಾರ್ಮಿಕ ಸಾಮರಸ್ಯ ಕುರಿತ ಅಚಲ ಬದ್ಧತೆಯಿಂದ ವಿಮುಖಗೊಂಡು, ನೇತಾಜಿಯವರ ಮಿಲಿಟರಿ ನಾಯಕತ್ವವನ್ನು ಹಾಡಿ ಹೊಗಳುವುದು ಪೊಳ್ಳುತನ ಅನಿಸುತ್ತದೆ. ಸರ್ಕಾರದ ಖಾಲಿ ಪ್ರಚಾರಾಡಂಬರ ಮತ್ತು ಖೊಟ್ಟಿ ಚರಿತ್ರೆಯ ವಿರೂಪಗಳಿಂದ ಈ ಎರಡು ಆದರ್ಶಪ್ರಾಯ ಜೀವನಗಳನ್ನು ಈಗ ರಕ್ಷಿಸಬೇಕಿದೆ.

ಭಾಗ-2

ನೇತಾಜಿ ಭಾರತದ ಚೆ ಗೆವಾರ

ಚೆ ಅವರಿಗಿಂತ ನೇತಾಜಿಯವರು ಕಡಿಮೆಯೇನಲ್ಲ ಎಂಬುದನ್ನು ಭಾರತ ಮತ್ತು ಜಗತ್ತು ಗುರುತಿಸಲೇಬೇಕು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಚೆ ಗೆವಾರ ಅವರಿಗಿಂತ ಹೆಚ್ಚಿನ ಕ್ರಾಂತಿಕಾರಿ.

ನನಗೆ ಹೀಗನಿಸಿದ್ದು ನೇತಾಜಿಯವರಿಗೆ ಸೇರಿದ ಸ್ಮಾರಕವಸ್ತುಗಳ ಮುಂದೆ ನಿಂತಿದ್ದಾಗ.  ನೇತಾಜಿಯವರು 1941 ಮತ್ತು 1945ರ ನಡುವೆ ದೂರದ ಯೂರೋಪ್ ಮತ್ತು ಏಶಿಯಾದ ಪ್ರದೇಶಗಳಲ್ಲಿ ಭಾರತದ ವಿಮೋಚನೆಗಾಗಿ ಕ್ರಾಂತಿಕಾರಿ ಹೋರಾಟದಲ್ಲಿ ತೊಡಗಿದ್ದರು. ಅವರ ನಂಬಲಸಾಧ್ಯವಾದ ಧೀರ ಸಾಹಸಗಳ ನೆನಪಿನ ವಸ್ತುಗಳ ಮ್ಯೂಸಿಯಮ್ಮಿನಲ್ಲಿ ಮಂತ್ರಮುಗ್ಧನಾಗಿ ನಿಂತಿದ್ದಾಗ ಹೀಗೆ ನನಗನಿಸಿತು. ಆದರೆ, ತಕ್ಷಣವೇ “ಇಲ್ಲ. ಚೆ ಗೆವಾರ ಅವರು ಲ್ಯಾಟಿನ್ ಅಮೆರಿಕದ ಸುಭಾಷ್ ಚಂದ್ರ ಬೋಸ್ ಅನ್ನುವುದೇ ಹೆಚ್ಚು ಸೂಕ್ತ” ಎಂದು ತಿದ್ದಿಕೊಂಡೆ. ಚೆ ಅವರು ನನ್ನ ಹದಿಹರೆಯದ ದಿನಗಳಿಂದ ನನ್ನ ನಾಯಕರಾಗಿದ್ದಾರೆ. ಆದರೆ, ಅದೊಂದು ಕ್ಷಣ, ನನಗೆ ಸಾಕ್ಷಾತ್ಕಾರದ ಕ್ಷಣವಾಗಿತ್ತು.

ಹೀಗೆ ಆಗಿದ್ದು ಕಳೆದ ವರ್ಷ. ಕೊಲ್ಕತ್ತದ ನೇತಾಜಿ ಬೋಸ್ ಮ್ಯೂಸಿಯಂನಲ್ಲಿ. ನೇತಾಜಿಯವರ ಅಣ್ಣನವರಾದ ಶರತ್ ಚಂದ್ರ ಬೋಸ್ ಅವರ ಮೊಮ್ಮಗನಾದ ಪ್ರೊಫೆಸರ್ ಸುಗತ ಬೋಸ್ ಅವರ ಆಹ್ವಾನದ ಮೇರೆಗೆ ಹೋಗಿದ್ದಾಗ. ಅದೊಂದು ಭಾರತದ ಅತ್ಯುತ್ತಮ ಜೀವನಚರಿತ್ರೆ ಕುರಿತ ವಸ್ತು ಸಂಗ್ರಹಾಲಯವಾಗಿದೆ.

ನೇತಾಜಿಯವರ ಜೀವನಚರಿತ್ರೆ ಕುರಿತ ವಸ್ತು ಸಂಗ್ರಹಾ ಲಯವು ಅವರನ್ನು ಕುರಿತು ಏನನ್ನು ತಿಳಿಸುತ್ತದೆ?

ಎಲ್ಜಿನ್ ಸ್ಟ್ರೀಟ್‍ನಲ್ಲಿರುವ ನೇತಾಜಿಯವರ ಪೂರ್ವಿಕರ ಮನೆಯಲ್ಲಿರುವ ಈ ಸಂಗ್ರಹಾಲಯವು ನಮ್ಮ ಲೆಜಂಡರಿ (ದಂತಕಥಾ) ನಾಯಕನ ಚೇತನವನ್ನು ಜೀವಂತವಾಗಿಟ್ಟಿದೆ. ಬೋಸ್ ಮನೆತನದ ಪ್ರಖ್ಯಾತ ಸದಸ್ಯರುಗಳು ಕೈಗೊಂಡಿರುವ ಈ ಸಂಗ್ರಹಾಲಯದ ಸಂರಕ್ಷಣೆ, ಬದ್ಧತೆ ಮತ್ತು ಅರ್ಪಣಾ ಮನೋಭಾವಗಳಿಗೆ ಧನ್ಯವಾದಗಳು. ಡಾ.ಸಿಸಿರ್ ಕುಮಾರ್ ಬೋಸ್ (ಸುಗತ ಬೋಸ್; ಸುಮಂತ್ರ ಬೋಸ್, ರಾಜ್ಯಶಾಸ್ತ್ರ ವಿಜ್ಞಾನಿ, ಲಂಡನ್ ಸ್ಕೂಲ್ ಆ¥sóï ಎಕನಾಮಿಕ್ಸ್; ಮತ್ತು ಡಾ. ಶರ್ಮಿಳಾ ಬೋಸ್, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಕಾಡೆಮಿಕ್ ಇವರುಗಳ ತಂದೆ) ಸ್ಥಾಪಿಸಿದರು. ಇವರ ಪತ್ನಿ ಕೃಷ್ಣಾ ಬೋಸ್ (ಇವರು ಸಹ ಒಬ್ಬ ದೊಡ್ಡ ವಿದ್ವಾಂಸೆ ಹಾಗೂ ಪಾರ್ಲಿಮೆಂಟೇರಿಯನ್) ಹಲವಾರು ದಶಕಗಳ ಕಾಲ ಈ ಸಂಗ್ರಹಾಲಯವನ್ನು ಬೆಳೆಸಿದರು. ಇದು ನಿಜವಾಗಲೂ ದೇಶಪ್ರೇಮದ ಯಾತ್ರೆಯ ಒಂದು ಪುಣ್ಯಕ್ಷೇತ್ರ.

ಈ ಸಂಗ್ರಹಾಲಯದ ನನ್ನ ಅನುಭವದಲ್ಲಿ ಎದ್ದು ಕಂಡಿದ್ದೇನೆಂದರೆ, ಭಾರತದ ರಾಷ್ಟ್ರೀಯ ವಿಮೋಚನಾ ಚಳುವಳಿಗೆ ನೇತಾಜಿಯವರ ಅಂತಾರಾಷ್ಟ್ರೀಯ ಪ್ರಯತ್ನದಲ್ಲಿ ಕಂಡುಬರುವ ಅಗಾಧತೆ.

ನನ್ನನ್ನು ಇದು, ಚೆ ಮತ್ತು ನೇತಾಜಿಯವರನ್ನು ಮನಸ್ಸಿನಲ್ಲಿಯೇ ಪರಸ್ಪರ ಹೋಲಿಸಿ ನೋಡುವಂತೆ ಮಾಡಿತು. ಇತಿಹಾಸದ ಮಹಾನ್ ವ್ಯಕ್ತಿತ್ವಗಳನ್ನು ಪರಸ್ಪರ ಹೋಲಿಸುವುದು ಅಪೇಕ್ಷಣೀಯವಲ್ಲ. ಅದರೆ, ಕೆಲವು ಸಾರಿ ಇದು ಕಲಿಕೆಯೂ ಆಗಬಹುದು. ಹೀಗಾಗಿ, `ಪರಾಕ್ರಮ’ ಎಂಬ ಅಳತೆಗೋಲಿನಲ್ಲಿ ನೇತಾಜಿಯವರು ಚೆ ಅವರಿಗಿಂತ ಎತ್ತರದಲ್ಲಿ ನಿಲ್ಲುತ್ತಾರೆ ಎಂದು ನನಗನಿಸಿತು.

ನೇತಾಜಿಯವರು ಚೆ ಅವರಿಗಿಂತ ಹೆಚ್ಚಿನ ಕ್ರಾಂತಿಕಾರಿ, ಏಕೆ?

ಈ ವಿಷಯ ಸ್ವಲ್ಪ ವಿವರಣೆಯನ್ನ ಬಯಸುತ್ತದೆ. ಚೆ, ಜಗತ್ತಿನಾದ್ಯಂತ, ಅಂತಾರಾಷ್ಟ್ರೀಯತೆಯ ಒಂದು ಲಾಂಛನ ಆಗಿದ್ದಾರೆ ಎಂಬುದರಲ್ಲಿ ಎರಡನೆಯ ಮಾತಿಲ್ಲ. ಅರ್ಜಂಟೈನಾದಲ್ಲಿ ಹುಟ್ಟಿ ಒಬ್ಬ ಯುವ ಆದರ್ಶವಾದಿ ಡಾಕ್ಟರ್ ಆಗಿದ್ದ ಇವರು ಕ್ಯೂಬಾದ ಕ್ರಾಂತಿಯಲ್ಲಿ (1959) ಪಾಲ್ಗೊಳ್ಳಲು ತೆರಳಿದರು; ಫಿಡೆಲ್ ಕ್ಯಾಸ್ಟ್ರೋ ಅವರ ಗಳಸ್ಯ ಕಾಮ್ರೇಡ್ ಮತ್ತು ಗೆಳೆಯನೂ ಆದರು. ಕ್ಯಾಸ್ಟ್ರೋ ಅವರ ನಾಯಕತ್ವದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಕ್ಯೂಬಾದ ಕ್ರಾಂತಿಯ ಯಶಸ್ಸಿಗೇ ತೃಪ್ತಿ ಪಟ್ಟುಕೊಳ್ಳದೆ, ಚೆ ಅವರು ಲ್ಯಾಟಿನ್ ಅಮೆರಿಕದಲ್ಲಿರುವ ದೇಶಗಳನ್ನು ಸಂಯುಕ್ತ ಸಂಸ್ಥಾನ ಬೆಂಬಲಿತ ಸರ್ವಾಧಿಕಾರಿ ಆಡಳಿತಗಳಿಂದ ಬಿಡುಗಡೆಗೊಳಿಸಲು ಬಯಸಿದರು. ದಣಿವರಿಯದ ಈ ಕ್ರಾಂತಿಕಾರಿಯು ಬೊಲಿವಿಯಾದ ಅರಣ್ಯದೊಳಕ್ಕೆ ನುಸುಳಿ ಸಶಸ್ತ್ರ ಧೀರ ಪ್ರತಿರೋಧವನ್ನು ಸಂಘಟಿಸಿದರು. 1967ರಲ್ಲಿ ಸಿಐಎ ಏಜೆಂಟರಿಂದ ಹತರಾದರು.

ಅವರ ಹತ್ಯೆಯಾದ ಐದು ದಶಕಗಳನಂತರವೂ, ಚೆ ಅವರ ಬದುಕು, ಜಗತ್ತಿನಾದ್ಯಂತ, ಉತ್ತಮ ಜಗತ್ತಿನ ಕನಸು ಕಾಣುವ ಜನರಿಗೆ ಸ್ಫೂರ್ತಿಯಾಗೇ ಮುಂದುವರೆದಿದೆ. ನಗಣ್ಯ ಅನಿಸಿದರೂ ಇಲ್ಲೊಂದು ಭಾವಪೂರ್ಣ ವಿಷಯವಿದೆ-ಯುವಜನ ತಮ್ಮ ಟಿ ಶರ್ಟ್‍ಗಳ ಮೇಲೆ ಧರಿಸುವ ಚೆಯವರ ಚಿತ್ರಗಳು ಒಂದು ಸೂಚಕ ಅಂದುಕೊಂಡರೆ, ಬೇರಾವ ಜಾಗತಿಕ ನಾಯಕರೂ, ಸಿನೆಮಾ ತಾರೆಯರೂ ಸಹ, ಚೆ ಅವರ ಜನಪ್ರಿಯತೆಯ ಹತ್ತಿರವೂ ಬರಲಾಗುವುದಿಲ್ಲ.

ನೇತಾಜಿಯವರು ಭಾರತಕ್ಕೆ ಬೆಂಬಲವನ್ನು ಸಂಚಯಿಸಿದರು; ಪೂರ್ತಿ ಏಶಿಯಾದೊಂದಿಗೆ ಒಗ್ಗಟ್ಟನ್ನೂ ತೋರಿಸಿದರು. ನೇತಾಜಿಯವರು ಕೇವಲ ಭಾರತದ ವಿಮೋಚನೆಗಾಗಿ ಮಾತ್ರವಲ್ಲ, ವಸಾಹತು ಹಿಡಿತದಿಂದ ಏಶಿಯಾದ ಎಲ್ಲ ಜನರ ಬಿಡುಗಡೆಗಾಗಿ ಹೋರಾಡಿದರು ಮತ್ತು ತಮ್ಮ ಬದುಕನ್ನು ಅರ್ಪಿಸಿದರು. ದುಃಖಕರ ವಿಷಯವೆಂದರೆ, ನೇತಾಜಿಯವರ ಅಂತಾರಾಷ್ಟ್ರೀಯ ಸಾಹಸಗಳು ಚೆ ಅವರಿಗಿಂತ ಹೆಚ್ಚಿನ ಅಚ್ಚರಿಭರಿತ ಸ್ಫೂರ್ತಿದಾಯಕವಾಗಿದ್ದರೂ ಭಾರತದ ಹೊರಗೆ ಅವರು ಅಷ್ಟೇನೂ ಗೊತ್ತಿರಲಿಲ್ಲ. 1942ರ ಫೆಬ್ರವರಿಯಲ್ಲಿ ಯೂರೋಪಿನಲ್ಲಿ ಮಾಡಿದ ತಮ್ಮ ಮೊದಲ ರೇಡಿಯೋ ಭಾಷಣದಲ್ಲಿ, “ಭಾರತದ ವಿಮೋಚನೆಯ ಮೂಲಕ ಏಶಿಯಾ ಮತ್ತು ಜಗತ್ತು ಮಾನವ ಬಿಡುಗಡೆಯ ವಿಸ್ತೃತ ಗುರಿಯೆಡೆಗೆ ಸಾಗುತ್ತದೆ” ಎಂದಿದ್ದರು.

ಶಾಂತಿಯ ಜಾಗತಿಕ ಮೌಲ್ಯಗಳಲ್ಲಿ ಬೇರೂರಿರುವ ಅಂತಾರಾಷ್ಟ್ರೀಯ ವ್ಯವಸ್ಥೆಯೊಂದರ ಸ್ಥಾಪನೆಗಾಗಿ ನೇತಾಜಿಯವರು ಬಹಳ ಶ್ರಮಿಸಿದ್ದರು.

ಇದನ್ನರಿಯಲು ನೇತಾಜಿಯವರ ಕುರಿತ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡುವುದು ಒಂದು ಉತ್ತಮ ದಾರಿ. ಇನ್ನೊಂದು ದಾರಿಯೆಂದರೆ, ಪ್ರೊಫೆಸರ್ ಸುಗತ ಬೋಸರ ಶ್ಲಾಘನೀಯ ಜೀವನ ಚರಿತ್ರೆ, `ಹಿಸ್ ಮೆಜೆಸ್ಟೀಸ್ ಅಪೋನೆಂಟ್- ಸುಭಾಷ್‍ಚಂದ್ರ ಬೋಸ್ ಅಂಡ್ ಇಂಡಿಯಾಸ್ ಸ್ಟ್ರಗಲ್ ಎಗೆನ್ಸ್ಟ್ ಎಂಪೈರ್’, ಅನ್ನು ಓದುವುದು. ನೇತಾಜಿಯವರು ಜಪಾನ್, ಮಲಯ, ಥಾಯ್ ಲ್ಯಾಂಡ್, ಬರ್ಮಾ, ವಿಯೆಟ್‍ನಾಮ್ ಮತ್ತು ಚೈನಾದಲ್ಲೆಲ್ಲ ಓಡಾಡಿದ್ದಾರೆ. ಹೋದಲ್ಲೆಲ್ಲ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವನ್ನು ಕೋರುತ್ತಿದ್ದರು. ಜೊತೆಗೆ ಏಶಿಯಾದ ಎಲ್ಲ ಜನತೆಗಳ ನ್ಯಾಯಯುತ ಆಶೋತ್ತರಗಳೊಂದಿಗೆ ಒಗ್ಗಟ್ಟನ್ನು ಅಭಿವ್ಯಕ್ತಿಸುತ್ತಿದ್ದರು. ಗಾಂಧಿ ಮತ್ತು ರಬೀಂದ್ರನಾಥ ಟ್ಯಾಗೋರರಂತೆ ಚೈನಾ ಮತ್ತು ಜಪಾನುಗಳ ನಡುವಿನ ಘರ್ಷಣೆಯಿಂದ ನೇತಾಜಿಯವರು ವ್ಯಥೆ ಪಟ್ಟಿದ್ದರು ಮತ್ತು `ಗೌರವಯುತ ಶಾಂತಿ’ಯ ಮೂಲಕ ಜಪಾನ್ ಚೈನಾದಿಂದ ತನ್ನ ತುಕುಡಿಗಳನ್ನು ಹಿಂಪಡೆಯುತ್ತದೆ ಎಂದು ನಂಬಿದ್ದರು.

ಭಾಗ-3

ಪರಾಕ್ರಮವೇ ಮೈದಳೆದ ಕೊನೆಯ ದಿನಗಳು

ನೇತಾಜಿಯವರು ಭಾರತದಿಂದ ತಪ್ಪಿಸಿಕೊಂಡು ಹೋದ ಘಟನಾವಳಿಗಳು ಅವರ `ಚಲೋದಿಲ್ಲಿ’ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಸಬ್ ಮರೀನ್ ಸಾಹಸಗಳಿಂದ ಕೂಡಿವೆ. ಇವು ಅವರ ಪರಾಕ್ರಮವನ್ನು ತೋರಿಸುತ್ತವೆ.

ನೇತಾಜಿಯವರು `ಪರಾಕ್ರಮ’ವೇ ಮೈವೆತ್ತವರು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಅವರ ಬದುಕಿನ ಕೊನೆಯ ಘಟ್ಟದ ಸಾಹಸಗಾಥೆಯ ಒಂದು ಶೀಘ್ರ ಅವಲೋಕನ ಮಾಡೋಣ. ಅವರಿಗಾಗ ಕೇವಲ 43 ವರ್ಷ ವಯಸ್ಸು -ಆಗಲೇ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಎರಡು ಸಲ ಅಧ್ಯಕ್ಷರಾಗಿದ್ದರು -ಅಷ್ಟೊತ್ತಿಗೆ ಅವರು ಬ್ರಿಟಿಷ್ ಸಾಮ್ರಾಜ್ಯವಾದದ ಶತ್ರುಗಳೊಂದಿಗೆ ಕೈ ಜೋಡಿಸಿ, ವಿದೇಶಿ ನೆಲದಲ್ಲಿ ಭಾರತೀಯ ಸೈನ್ಯಪಡೆಯನ್ನು ಕಟ್ಟಿ, ಮಹಾತ್ಮಾ ಗಾಂಧಿಯವರು ದೇಶದೊಳಗೆ ಮನ್ನಡೆಸುತ್ತಿದ್ದ ಚಳವಳಿಯೊಂದಿಗಿನ ಸಹಯೋಗದಲ್ಲಿ ತಾಯ್ನಾಡನ್ನು ವಿಮೋಚನೆಗೊಳಿಸಲು ಹೊರಗಿನಿಂದ ದೇಶದೊಳಕ್ಕೆ ವಿಜಯೀ ಪ್ರವೇಶ ಮಾಡುವ ನಿರ್ಧಾರ ಮಾಡಿದ್ದರು.

ಕೆಲವು ಭಿನ್ನಾಭಿಪ್ರಾಯಗಳಿದ್ದೂ ನೇತಾಜಿಯವರು ಮಹಾತ್ಮರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಪ್ರತಿಯಾಗಿ ಗಾಂಧಿಯವರು ತಮ್ಮ “ಬಂಡುಕೋರ ಮಗ”ನೆಡೆಗೆ ಬಹಳ ಪ್ರೀತಿ ಮತ್ತು ಅಭಿಮಾನವನ್ನು ಹೊಂದಿದ್ದರು. ನೇತಾಜಿಯವರನ್ನು ಗಾಂಧೀಯವರು “ದೇಶಪ್ರೇಮಿಗಳ ನಡುವಿನ ರಾಜಕುಮಾರ” ಎಂದು ಹೊಗಳಿದ್ದರು. ಗಾಂಧಿಯವರನ್ನು, “ರಾಷ್ಟ್ರಪಿತ” ಎಂದು ಮೊದಲು ಕರೆದವರೇ ನೇತಾಜಿ. ಗಾಂಧಿ ಮತ್ತು ನೇತಾಜಿಯವರ ಸಂಬಂಧ ಕುರಿತು ಬಹಳ ತಪ್ಪು ಕಲ್ಪನೆ ಮತ್ತು ದೊಡ್ಡ ಮಟ್ಟದ ನೇತ್ಯಾತ್ಮಕ ಪ್ರಚಾರ ನಡೆದಿದೆ. ಇದನ್ನು ಕುರಿತು ನನ್ನ ಮುಂದಿನ ಲೇಖನದಲ್ಲಿ ಹೇಳುವೆ.

ಬರ್ಲಿನ್ ತಲುಪಲು ನೇತಾಜಿಯವರು ಭಾರತದಿಂದ ನಾಟಕೀಯವಾಗಿ ತಪ್ಪಿಸಿಕೊಂಡು ಹೋಗಿದ್ದು:

1939ರಲ್ಲಿ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ತಮ್ಮ ಬಂದೂಕುಗಳನ್ನು ಬ್ರಿಟನ್ ಮತ್ತಿತರ ಮಿತ್ರರಾಷ್ಟ್ರಗಳ ವಿರುದ್ಧ ತಿರುಗಿಸಿದ್ದುವು. ನೇತಾಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಳಸಿಕೊಳ್ಳಲು ಒಂದು ಅವಕಾಶವನ್ನು ಈ ಸನ್ನಿವೇಶದಲ್ಲಿ ಕಂಡರು. “ದೇಶದೊಳಗಿನ ಹೋರಾಟವು ದೇಶದ ಹೊರಗಿನ ಹೋರಾಟದೊಂದಿಗೆ ಮೇಳೈಸಬೇಕು” ಎಂದು ನೇತಾಜಿ ನಂಬಿದ್ದರು. ಜನವರಿ 16, 1941ರಂದು ಅವರು ಕಲ್ಕತ್ತಾದ ತಮ್ಮ ಗೃಹ ಬಂಧನದಿಂದ ತಪ್ಪಿಸಿಕೊಂಡರು. ಅವರ ಅಣ್ಣನ ಮಗ ಸಿಸಿರ್ ಕುಮಾರ್ ಬೋಸ್ ಅವರು ಬಿಹಾರದ ಗೊಮೊಹ್ ಎಂಬ ರೈಲು ನಿಲ್ದಾಣಕ್ಕೆ ನೇತಾಜಿಯವರನ್ನು ಕಾರಿನಲ್ಲಿ ಕರೆದೊಯ್ದರು. ಅಲ್ಲಿಂದ ನೇತಾಜಿಯವರು ವೇಷಮರೆಸಿಕೊಂಡು ದೆಹಲಿ, ಪೇಶಾವರ್, ಕಾಬೂಲ್, ಸಮರ್ಕಂಡ್ ಮತ್ತು ಮಾಸ್ಕೊ ಮೂಲಕ ಬರ್ಲಿನ್ ತಲುಪಿದರು.

ಅಲ್ಲಿ ಜರ್ಮನಿಯ ರಾಜಧಾನಿಯಲ್ಲಿ `ಫ್ರೀ ಇಂಡಿಯ ಸೆಂಟರ್’ ಮತ್ತು `ಫ್ರೀ ಇಂಡಿಯ ರೇಡಿಯೋ’ಗಳನ್ನು ಸ್ಥಾಪಿಸಿದರು. ಆ ರೇಡಿಯೋ ಮೂಲಕ ದಿನಾ ನಾಲ್ಕು ಗಂಟೆಗಳ ಕಾಲ ಇಂಗ್ಲಿಷ್ ಮತ್ತು ಇತರ ಏಳು ಭಾಷೆಗಳಲ್ಲಿ -ಹಿಂದುಸ್ಥಾನಿ (ಹಿಂದಿ ಮತ್ತು ಉರ್ದುವಿನ ಒಂದು ಮಿಶ್ರ ಭಾಷೆ), ಬೆಂಗಾಲಿ, ತಮಿಳು, ತೆಲುಗು, ಮಲೆಯಾಳಿ, ಗುಜರಾತಿ, ಪರ್ಶಿಯನ್ ಮತ್ತು ಪುಶ್ತು ಭಾಷೆಗಳಲ್ಲಿ ನೇತಾಜಿಯವರ ಭಾಷಣಗಳು ಪ್ರಸಾರವಾಗುತ್ತಿದ್ದುವು. ಅವರ ರೇಡಿಯೋ ಭಾಷಣಗಳು ಇಲ್ಲಿ ಭಾರತದಲ್ಲಿ, ವಸಾಹತುಶಾಹಿ ಸರ್ಕಾರ ಮಾಡುತ್ತಿದ್ದ `ಕ್ವಿಟ್ ಇಂಡಿಯ’ ಚಳುವಳಿಯ ದಮನದಿಂದ ಕಿಚ್ಚೆದ್ದಿದ್ದ ಜನರ ಮೈ ನವಿರೇಳಿಸುತ್ತಿದ್ದುವು. 

ನೇತಾಜಿಯವರ ಅಸಾಮಾನ್ಯ ಸಬ್ ಮರಿನ್ ಸಾಹಸಕ್ಕೆ ಸಹಾಯ ಮಾಡಿದ ಹಿಟ್ಲರ್:

ಆದರೆ ನೇತಾಜಿಯವರಿಗೆ ತಮ್ಮ ಸೇನೆ ಬ್ರಿಟಿಷನ್ನು ಸೋಲಿಸುವುದಕ್ಕಾಗಿ ಭಾರತಕ್ಕೆ ಹತ್ತಿರವಾಗಿ ಇರಬೇಕಿತ್ತು. ಆ ವೇಳೆಗೆ ಜಪಾನ್, ಬ್ರಿಟಿಷ್ ವಸಾಹತುಗಳನ್ನು ಒಂದು ಕಡೆಯಿಂದ ಆಕ್ರಮಿಸಿಕೊಂಡು ಭಾರತವನ್ನು ಸಮೀಪಿಸುತ್ತಿತ್ತು. 1942ರ ಫೆಬ್ರವರಿಯಲ್ಲಿ ಸಿಂಗಪುರ ಪತನವಾಗಿತ್ತು.

ಹೀಗಾಗಿ, ಹಿಟ್ಲರನ ಸಹಾಯದಿಂದ ನೇತಾಜಿಯವರು 8 ಫೆಬ್ರವರಿ, 1943ರಂದು ಜರ್ಮನಿಯ ಯು-19 ಎಂಬ ಸಬ್‍ಮೆರೀನ್ ಒಳಪ್ರವೇಶಿಸಿದರು. ಒಂದು ಸಾಹಸಮಯ ಸಮುದ್ರಯಾನವನ್ನು ಆಗ್ನೇಯ ಏಶಿಯಾ ದಿಕ್ಕಿನಲ್ಲಿ ಆರಂಭಿಸಿದರು. ಜೊತೆಯಾಗಿ ಒಬ್ಬ ವ್ಯಕ್ತಿಯನ್ನು ಮಾತ್ರ ಕರೆದೊಯ್ಯಬಹುದು ಎಂದಾಗ ತಮ್ಮ ನಂಬಿಕೆಯ ಕಾಮ್ರೇಡ್ ಅಬೀದ್ ಹಸನ್ ಅವರನ್ನು ಜೊತೆ ಮಾಡಿಕೊಂಡರು.

ಆ ಸಬ್‍ಮೆರೀನ್ ಆಫ್ರಿಕ ಖಂಡವನ್ನು ಬಳಸಿಕೊಂಡು ಹಿಂದು ಮಹಾಸಾಗರವನ್ನು ಪ್ರವೇಶಿಸಿತು. ಆ ವೇಳೆಗೆ ಜಪಾನ್, ಅವರದೇ ಆದ ಐ-19 ಎಂಬ ಸಬ್ ಮೆರೀನ್ ಅನ್ನು ನೇತಾಜಿಯವರ ಮುಂದಿನ ಹೆಜ್ಜೆಯ ಪ್ರಯಾಣಕ್ಕಾಗಿ ಕಳುಹಿಸಿತ್ತು. ಮಡಗಾಸ್ಕರ್ ಬಳಿಯ ಸಮುದ್ರ ತೀರದಲ್ಲಿ ಜರ್ಮನ್ ಸಬ್ ಮೆರೀನ್ ಇಂದ ಹೊರಬಂದು ಬೋರ್ಗರೆಯತ್ತಿದ್ದ ಒರಟು ಸಮುದ್ರದಲ್ಲಿ ತೆಪ್ಪವೊಂದನ್ನು ಹತ್ತಿ ಜಪಾನಿನ ಸಬ್‍ಮೆರೀನ್‍ಗೆ ಹಾರಿಕೊಂಡರು.

ಸುಗತ ಬೋಸರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ ಅಂದು, “ಒಂದು ಅದ್ಭುತ ಮಿಲಿಟರಿ ಸಾಹಸ ಕೈಗೂಡಿತು: ಎರಡನೆಯ ಮಹಾಯುದ್ಧದ ಬಖೈರಿನಲ್ಲಿ ಒಂದು ಸಬ್‍ಮೆರೀನ್ ಇಂದ ಇನ್ನೊಂದು ಸಬ್‍ಮೆರೀನ್‍ಗೆ ಪ್ರಯಾಣಿಕರನ್ನು ಸಾಗಿಸಿದ ಏಕೈಕ ದಾಖಲೆ ಇದು. ಅದೂ ವಾಯುಬಲ ಮತ್ತು ಜಲಬಲದಲ್ಲಿ ಶತ್ರುಗಳು ಬಹಳ ಪ್ರಬಲರಾಗಿದ್ದ ನೀರಿನಲ್ಲಿ”. ಈ ಪಯಣವು ಬಹಳ ಅಪಾಯಕಾರಿಯಾಗಿತ್ತು. ಏಕೆಂದರೆ ಚರ್ಚಿಲ್ ಸರ್ಕಾರವು 1941ರಲ್ಲೇ ನೇತಾಜಿಯವರ ಹತ್ಯೆಗೆ ಆದೇಶ ಒಂದನ್ನು ಹೊರಡಿಸಿತ್ತು.  

ನೇತಾಜಿಯವರು ಜರ್ಮನಿಯನ್ನು ಬಿಟ್ಟ ಮೂರು ತಿಂಗಳ ನಂತರ ಐ-29 ಸಬ್‍ಮೆರೀನ್, 6 ಮೆ, 1943ರಂದು ಇಂಡೊನೇಶಿಯಾದ ಸಬಂಗ್ ಎಂಬ ಬಂದರನ್ನು ತಲುಪಿತು. ನಂಬಲಸಾಧ್ಯವಾದ ಈ ಪಯಣದಲ್ಲಿ ನೇತಾಜಿಯವರು ತಮ್ಮ ಗುರುತನ್ನು ಮೂರು ಬೇರೆ ಬೇರೆ ಹೆಸರುಗಳ ಮೂಲಕ ಮರೆ ಮಾಡಿಕೊಂಡಿದ್ದರು -ಜಿಯಾಉದ್ದೀನ್ (ಆಫ್‍ಘನ್), ಮಜೊಟ್ಟ (ಇಟಲಿ) ಮತ್ತು ಮತ್ಸುದ (ಜಪಾನ್).

ಆಜಾದ್ ಹಿಂದ್ ಫೌಜ್

ರಣಗರ್ಜನೆ (ಐಎನ್‍ಎ) -“ದಿಲ್ಲಿ ಚಲೊ!”

ನಂತರದ್ದು ಅಸಾಧಾರಣ ಧೈರ್ಯದ ಕಾರ್ಯಾಚರಣೆ. ಜಪಾನಿನ ಬೆಂಬಲದಿಂದ ನೇತಾಜಿಯವರು ತಮ್ಮ ಆಜಾದ್ ಹಿಂದ್ ಫೌಜûನ್ನು (ಇಂಡಿಯನ್ ನ್ಯಾಷನಲ್ ಆರ್ಮಿ) ವಿಸ್ತರಿಸಿಕೊಂಡರು. ಐಎನ್‍ಎ ಮೊದಲನೆಯ ಡಿವಿಷನ್ ಅನ್ನು ಮೂರು ರೆಜಿಮೆಂಟುಗಳನ್ನಾಗಿ ಸಂಯೋಜಿಸಲಾಯಿತು. ಆ ರೆಜಿಮೆಂಟುಗಳಿಗೆ ನೇತಾಜಿಯವರೇ ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು ಮತ್ತು ಮೌಲಾನ ಅಬ್ದುಲ್ ಕಲಂ ಆಜಾದ್ ಅವರ ಹೆಸರುಗಳನ್ನಿಟ್ಟರು. 21 ಅಕ್ಟೋಬರ್ 1943ರಲ್ಲಿ “ಸಿಂಗಪುರದಲ್ಲಿ ಸ್ವತಂತ್ರ ಭಾರತ ”ದ ತತ್ಕಾಲೀನ ಸರ್ಕಾರವನ್ನು- ಭಾರತೀಯ ಕ್ರಾಂತಿ ಯಶಸ್ವಿಗಳಿಸಲೆಂಬ ಆಶಯದೊಂದಿಗೆ-ರಚಿಸಿದರು. ಅದರ ರಣಘೋಷವು, “ಚಲೋ ದಿಲ್ಲಿ” ಎಂದಾಗಿತ್ತು. 1944ರಲ್ಲಿ ಅವರು ತತ್ಕಾಲೀನ ಸರ್ಕಾರದ ಪ್ರಧಾನ ಕಾರ್ಯಾಲಯವನ್ನು ಸಿಂಗಪುರದಿಂದ ಬರ್ಮಾಕ್ಕೆ ಸ್ಥಳಾಂತರಿಸಿದರು.

ಎರಡು ತಿಂಗಳ ನಂತರ ಭಾರತ ಮತ್ತು ಬರ್ಮಾದ ಗಡಿಯನ್ನು ದಾಟಿ ಈಶಾನ್ಯ ಭಾರತದೆಡೆಗೆ ಐಎನ್‍ಎ ಪಡೆ ಸಾಗತೊಡಗಿತು. ಅಲ್ಲಿಂದ ಕೊಲ್ಕೊತ್ತಾ, ಮತ್ತೆ ಮುಂದಕ್ಕೆ ದೆಹಲಿಯನ್ನು ತಲುಪುವುದು ಸಾಧ್ಯವೆನಿಸಿತ್ತು. 

ಆದರೆ ಮುಂದಿನ ನಡೆಯನ್ನು ಬ್ರಿಟಿಷ್ ಭಾರತೀಯ ಪಡೆ ತಡೆಗಟ್ಟಿಬಿಟ್ಟಿತು. ಇಂಫಾಲ ಮತ್ತು ಕೊಹಿಮಾದಲ್ಲಿ ಅಮೆರಿಕದ ವಾಯುಬಲ ಬೆಂಬಲದೊಂದಿಗೆ ಜಪಾನ್ ಮತ್ತು ಐಎನ್‍ಎ ಸೈನ್ಯವನ್ನು ಹಿಂದೆಸರಿಸುವಲ್ಲಿ ಬ್ರಿಟಿಷ್ ಪಡೆ ಯಶಸ್ವಿಯಾಯಿತು. “ದೆಹಲಿಗೆ ದಾರಿ ಹಲವು” ಎಂದು ಘೋಷಿಸಿ ನೇತಾಜಿಯವರು ಗಂಡಾಂತರದ ಹಿನ್ನಡೆಯನ್ನು ಅನುಭವಿಸಬೇಕಾಯಿತು. ಅಲ್ಲಿಂದ ರಂಗೂನಿಗೆ, ಟೋಕಿಯೋಗೆ, ಸಿಂಗಪುರಕ್ಕೆ, ಬ್ಯಾಂಕಾಕ್‍ಗೆ ಸಯ್ಗಾನ್‍ಗೆ, ಟಾಯ್ಪಿಗೆ… ಅಯ್ಯೋ ದುರಂತ ಅಂತಿಮದೆಡೆಗೆ ಹೊರಟೇಬಿಟ್ಟರು. 1945ರ ಆಗಸ್ಟ್ 18ರಂದು ಟಾಯ್ಪಿಯಿಂದ ಟೋಕಿಯೋಗೆ ಅವರನ್ನು ಹೊತ್ತೊಯ್ಯುಬೇಕಿದ್ದ ಜಪಾನಿ ಯುದ್ಧ ವಿಮಾನವು ಮೇಲೇರುತ್ತಿದ್ದಂತೆಯೆ ಕುಸಿದುಬಿಟ್ಟಿತು.

ನೇತಾಜಿಯವರ ಯೂರೋಪಿನಿಂದ ಏಶಿಯದ ಸಬ್ ಮೆರಿನ್ ಪಯಣದಲ್ಲಿ ಅಬೀದ್ ಹಸನ್, ಅವರ ಆತ್ಮವಾಗಿದ್ದರೆ ಈ ದುರಂತಮಯ ಅಂತಿಮ ವಿಮಾನಯಾನದಲ್ಲಿ ಸಹಪ್ರಯಾಣಿಕನಾಗಿದ್ದುದು ಹಬಿಬೂರ್ ರಹ್ಮಾನ್. ಅಂತಿಮ ಕ್ಷಣಕ್ಕೆ ಮುನ್ನ ನೇತಾಜಿಯವರು ಹಬೀಬರೊಂದಿಗೆ ಹಿಂದೂಸ್ಥಾನಿಯಲ್ಲಿ, ತಮ್ಮ ಕೊನೆ ಉಸಿರಿರುವರೆಗೆ ತಾವು ಭಾರತದ ವಿಮೋಚನೆಗಾಗಿ ಹೋರಾಡಿದೆ ಎಂದು ಹೇಳಿದ್ದರು. ಹಬೀಬ್ ತಾಯಿನಾಡಿಗೆ ಹೋಗಿ ತಮ್ಮ ದೇಶವಾಸಿಗಳು ಭಾರತದ ಸ್ವಾತಂತ್ರ ಹೋರಾಟವನ್ನು ಮುಂದುವರೆಸಬೇಕು ಎಂದು ತಿಳಿಸಬೇಕು ಮತ್ತು ಭಾರತ ಶೀಘ್ರದಲ್ಲೇ ಸ್ವತಂತ್ರವಾಗುತ್ತದೆ ಎಂದೂ ಹೇಳಿದ್ದರು.

ಭವಿಷ್ಯಸೂಚಕ ಅಂತಿಮವಾಣಿ. ಎರಡು ವರ್ಷಗಳ ನಂತರ ದೆಹಲಿಯ ಕೆಂಪು ಕೋಟೆಯ ಮೇಲೆ ಯೂನಿಯನ್ ಜ್ಯಾಕ್ (ಬ್ರಿಟಿಷ್ ರಾಷ್ಟ್ರಧ್ವಜ) ಕೆಳಗಿಳಿದು ನಮ್ಮ ತ್ರಿವರ್ಣ ಧ್ವಜವು ವಿಜಯಶಾಲಿಯಾಗಿ ಮೇಲೇರಿತು.

Leave a Reply

Your email address will not be published.