ನೇಮಕಾತಿ-ಬಡ್ತಿಗೆ ಬಂತು ಮಹತ್ವ ಹರಾಜಾಯ್ತು ಪಿ.ಎಚ್.ಡಿ. ಮಾನ!

-ಡಾ.ಸಿ.ಕೆ.ರೇಣುಕಾರ್ಯ

ವಿಶ್ವವಿದ್ಯಾಲಯಗಳು ತಮ್ಮ ಮೂಲ ಕರ್ತವ್ಯ ಮರೆತು ಎಷ್ಟೋ ಕಾಲವಾಗಿರುವುದರಿಂದ, ಅವುಗಳ ಕಾರ್ಯದ ಒಂದು ಭಾಗವಾದ ಸಂಶೋಧನೆ ಸಹ ತನ್ನ ಮೌಲ್ಯ ಕಳೆದುಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೀಗಾಗಿಯೇ, ಮೈಸೂರು ವಿವಿಯ ಕುಲಪತಿಗಳೊಬ್ಬರು ಪಿ.ಎಚ್.ಡಿ. ಪ್ರಬಂಧಗಳನ್ನು ಬಚ್ಚಲ ನೀರಿಗೆ ಹೋಲಿಸಿದ್ದಾರೆ!

ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರ ನೇಮಕಾತಿ ಮತ್ತು ಬಡ್ತಿ, ಪಿ.ಎಚ್.ಡಿ.ಯೊಡನೆ ಗಂಟು ಹಾಕಿಕೊಂಡಿರುವುದರಿಂದ, ಹೇಗಾದರೂ ಮಾಡಿ ಪಿ.ಎಚ್.ಡಿ. ಸಂಪಾದಿಸಬೇಕೆಂಬ ಮನೋಭಾವ ಸಹಜವಾದದ್ದೇ. ಆದರೆ ಈ ಪಿ.ಎಚ್.ಡಿ. ಪಡೆಯುವುದು ಹೇಗೆ? ಇದರ ಮಾನದಂಡಗಳು ಯಾವುವು ಎನ್ನುವುದನ್ನು ನೋಡಿದಾಗ ಇಡೀ ಪ್ರಕ್ರಿಯೆಯ ಹುಳುಕುಗಳು ಮುನ್ನೆಲೆಗೆ ಬರುತ್ತವೆ.

ಪಿ.ಎಚ್.ಡಿ.ಯ ಮಾನದಂಡಗಳನ್ನು ಯು.ಜಿ.ಸಿ. ನಿಗದಿ ಮಾಡುತ್ತದೆ. ಸಾಮಾನ್ಯವಾಗಿ ಈ ಸಂಸ್ಥೆ ಗೊತ್ತುಮಾಡುವ ನಿಯಮಗಳನ್ನು ಭಾರತದ ಎಲ್ಲ ವಿಶ್ವವಿದ್ಯಾಲಯಗಳೂ ಅನುಸರಿಸುತ್ತವೆ. ಈ ಕೇಂದ್ರೀಕೃತ ಸಂಸ್ಥೆ, ಪಿ.ಎಚ್.ಡಿ.ಯ ಗುಣಮಟ್ಟವನ್ನು ನಿರ್ಧರಿಸುವುದರ ಬಗ್ಗೆ ಚಕಾರವೆತ್ತುವುದಿಲ್ಲ. ಅದು ವಿಶ್ವವಿದ್ಯಾಲಯಗಳಿಗೆ, ಅದರಲ್ಲೂ, ಅಲ್ಲಿನ ಪ್ರಾಧ್ಯಾಪಕರಿಗೆ ಸಂಬಂಧಿಸಿದ ವಿಷಯ. ಹೀಗಾಗಿ ಪಿ.ಎಚ್.ಡಿ.ಗಳ ಗುಣಮಟ್ಟಕ್ಕೆ ಸಂಪೂರ್ಣವಾಗಿ ತಿಲಾಂಜಲಿ ಕೊಡುವುದು ವಿಶ್ವವಿದ್ಯಾಲಯಗಳಿಗೆ ಬಹಳ ಸುಲಭವಾದ ವಿಷಯವಾಗಿದೆ.  

ವಿಶ್ವವಿದ್ಯಾಲಯಗಳು ಪ್ರತಿ ಪ್ರಾಧ್ಯಾಪಕನೂ ಇಂತಿಷ್ಟು ವಿದ್ಯಾರ್ಥಿಗಳನ್ನು ಸಂಶೋಧನೆಗೆ ತೆಗೆದುಕೊಳ್ಳಬಹುದೆಂದು (ಸಾಮಾನ್ಯವಾಗಿ 8-10 ವಿದ್ಯಾರ್ಥಿಗಳು) ನಿಗದಿ ಮಾಡುತ್ತದೆ. ಅಧ್ಯಾಪಕರ ನೇಮಕಕ್ಕೆ ಮತ್ತು ಅವರ ಬಡ್ತಿಗೆ ಪಿ.ಎಚ್.ಡಿ. ಮಾನದಂಡವಾಗಿರುವುದರಿಂದ, ಮಾರ್ಗದರ್ಶಕರನ್ನು ಪಡೆಯಲು ಇಂದು ತುಂಬಾ ನೂಕುನುಗ್ಗಲು. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನುಸುಳುವುದು ಗುಟ್ಟಾದ ವಿಷಯವೇನಲ್ಲ. ಪ್ರತಿಯೊಬ್ಬ ಸಂಶೋಧಕನಿಂದ (ಕೆಲವು ಅಪವಾದಗಳನ್ನು ಬಿಟ್ಟು) ಮಾರ್ಗದರ್ಶಕರು 1 ರಿಂದ 2 ಲಕ್ಷ ರೂಪಾಯಿ ಲಂಚ ಪಡೆಯುತ್ತಾರೆ. 3 ರಿಂದ 5 ವರ್ಷಗಳ ಅವಧಿಯಲ್ಲಿ ಸಂಶೋಧನೆಯನ್ನು ಮುಗಿಸಬೇಕಾಗಿರುತ್ತದೆ. ಹೀಗಾಗಿ ಸಂಶೋಧನೆಗೆ ಅತ್ಯಂತ ಸುಲಭವಾದ ಮಾರ್ಗಗಳನ್ನು ಮಾರ್ಗದರ್ಶಕರು ಮತ್ತು ಅಭ್ಯರ್ಥಿಗಳು ಹುಡುಕಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅಂಶಗಳೆಂದರೆ,            ಈಗಾಗಲೇ ಸಂಶೋಧನೆ ನಡೆದು, ಪಿ.ಎಚ್.ಡಿ. ಬಂದಿರುವ, ವಿಷಯವನ್ನೇ ಆಯ್ಕೆ ಮಾಡಿಕೊಂಡು, ಅಲ್ಪ ಸ್ವಲ್ಪ ಅಂಕಿ-ಸಂಖ್ಯೆಗಳನ್ನು ಬದಲಿಸಿ ಪ್ರೌಢ ಪ್ರಬಂಧ ತಯಾರಿಸುವುದು.  ಉದಾಹರಣೆಗೆ: A study of poverty alleviation programmes in Mandya  District ಇದನ್ನೇ ಸ್ವಲ್ಪ ಬದಲಿಸಿ A study of poverty  alleviation programmes in Mysore District  A study of cropping pattern in Chitradurga District ಇದನ್ನೇ ಸ್ವಲ್ಪ ಬದಲಿಸಿ A study of cropping pattern in  Davanagere District ಇತ್ಯಾದಿ.

ಇನ್ನೂ ಸುಲಭದ ಕೆಲವು ವಿಷಯಗಳನ್ನು ನೋಡುವುದಾದರೆ, ‘……ರವರ ಸಾಹಿತ್ಯದಲ್ಲಿ ಶೃಂಗಾರ’, ‘……ರವರ ಸಾಹಿತ್ಯದಲ್ಲಿ ರಸೋಭಿನ್ನತೆ’, ‘……ರವರ ಜೀವನ ಮತ್ತು ಕೃತಿ’, ‘……ರವರ ಕೃತಿಗಳಲ್ಲಿ ಗ್ರಾಮೀಣ ಸೊಗಡು’ …ಇತ್ಯಾದಿ.

ಈ ವಿಷಯಗಳಿಗೆ ಮಹತ್ವವಿದೆ ಎಂದಾದರೂ, ಗುಣಮಟ್ಟದ ದೃಷ್ಟಿಯಿಂದ ಅಥವಾ ಸಂಶೋಧನೆಯ ವ್ಯಾಖ್ಯೆಯ ದೃಷ್ಟಿಯಿಂದ ಇವು ಸಂಶೋಧನೆಯೆಂದು ಪರಿಗಣಿತವಾಗುವುದು ಸಾಧ್ಯವಿಲ್ಲ. ಸಂಶೋಧನೆಯ ವ್ಯಾಖ್ಯೆಯೆಂದರೆ ಅದು ‘ಜ್ಞಾನದ ಪರಿಧಿಯನ್ನು ವಿಸ್ತರಿಸಬೇಕು (It should push forward the frontiers of knowledge). ನಾವು ನಮ್ಮ ಸಂಸ್ಥೆಯನ್ನು ‘ವಿಶ್ವವಿದ್ಯಾಲಯ’ ಎಂದು ಕರೆಯಬೇಕಾದರೆ ಅದು ವಿಶ್ವದಲ್ಲಿ ಒಂದು ವಿಷಯದ ಬಗ್ಗೆ ಯಾರೇ ಜ್ಞಾನದ ಪರಿಧಿಯನ್ನು ವಿಸ್ತರಿಸಲು ಯತ್ನಿಸುವರೋ ಅವರನ್ನು ತಣಿಸುವಂತಿರಬೇಕು. 

ಪಿ.ಎಚ್.ಡಿ.ಗೆ ಅಷ್ಟು ಮಹತ್ವವಿಲ್ಲದಿದ್ದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ವಾಂಸರು ಮಹತ್ವದ ಸಂಶೋಧನೆಯನ್ನು ನಡೆಸುತ್ತಿದ್ದುದು ಒಂದು ಮುಖ್ಯವಾದ ವಿಷಯ. ಮಹಾರಾಜಾ ಕಾಲೇಜಿನಲ್ಲಿ ಇಂತಹ ವಿದ್ವಾಂಸರ ಪರಂಪರೆಯೇ ಆಗಿಹೋದದ್ದು ಎಲ್ಲರಿಗೂ ತಿಳಿದ ವಿಷಯವೇ. ಕೆಲವೇ ಹೆಸರುಗಳನ್ನು ನೆನಪಿಸಿಕೊಳ್ಳಬಹುದಾದರೆ, ಡಿ.ಎಲ್.ನರಸಿಂಹಾಚಾರ್, ಯಾಮುನಾಚಾರ್ಯ, ಪುರುಷೋತ್ತಮ, ಕುವೆಂಪು, ತ.ಸು.ಶಾಮರಾಯರು, ಸಿ.ಡಿ.ನರಸಿಂಹಯ್ಯ, ಎಸ್.ಎಸ್.ರಾಘವಾಚಾರ್, ಎಸ್.ಅನಂತನಾರಾಯಣ ಮುಂತಾದವರ ಜ್ಞಾನಸಂಪತ್ತು ಮತ್ತು ಸಂಶೋಧನೆ ತುಂಬಾ ಮಹತ್ವವದದ್ದು. ಇದೇ ಪರಂಪರೆಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹ ನೋಡುತ್ತೇವೆ.

ಅಧ್ಯಾಪಕರ, ನೇಮಕ ಮತ್ತು ಬಡ್ತಿಗೆ ಪಿ.ಎಚ್.ಡಿ. ಅವಶ್ಯಕವೆಂದು ಯು.ಜಿ.ಸಿ. ನಿಗದಿ ಮಾಡಿದ ಮೇಲೆ, ಪಿ.ಎಚ್.ಡಿ.ಯ ಗುಣಮಟ್ಟ ಸಂಪೂರ್ಣವಾಗಿ ಕುಸಿದಿರುವುದನ್ನು ಕಾಣುತ್ತೇವೆ. ಇದು ಇಡೀ ಭಾರತಕ್ಕೆ ಅನ್ವಯವಾಗುವ ಮಾತು. ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳನ್ನು ಬೋಧನೆ ಮತ್ತು ಸಂಶೋಧನೆ ವಿಭಾಗವೆಂದು ನಾಮಕರಣ ಮಾಡಲಾಗಿದೆ. ಸಂಶೋಧನೆಯ ದೃಷ್ಟಿಯಿಂದ ಈ ವಿಭಾಗಗಳು, ಪಿ.ಎಚ್.ಡಿ.ಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಇಂದು ನಮ್ಮ ದೇಶದಲ್ಲಿ 29,42,700 ಡಾಕ್ಟರೇಟ್ ವಿದ್ಯಾರ್ಥಿಗಳಿದ್ದಾರೆ, 895 ಪಿ.ಎಚ್.ಡಿ. ಪ್ರದಾನ ಮಾಡುವ ಸಂಸ್ಥೆಗಳಿವೆ. 

ಅನೇಕರಿಗೆ ಈ ಡಾಕ್ಟರೇಟ್ ಪದವಿಗಳಿಂದ ಏನು ಪ್ರಯೋಜನ ಎನ್ನುವುದು ತಿಳಿದಿಲ್ಲ. ಒಂದು ಉದಾಹರಣೆ ಕೊಡುವುದಾದರೆ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಸಂಖ್ಯ ವಿದ್ಯಾರ್ಥಿಗಳು ಪಿ.ಎಚ್.ಡಿ. ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಸಹ ವಿಭಾಗದಲ್ಲಿ ಜಾಗವಿಲ್ಲ. ಅವರು ಬೆಳಗ್ಗೆ ವಿಭಾಗಕ್ಕೆ ಬಂದು ಸಹಿ ಮಾಡಿ, ಲೈಬ್ರರಿಗೆ ಹೋಗುತ್ತೇವೆಂದು ಹೊರಟು ಹೋಗುತ್ತಾರೆ. ಹಲವರು, ತಮ್ಮ ಪಿ.ಎಚ್.ಡಿ. ಪೂರೈಸುವುದಿಲ್ಲ ಸಹ. ತಮ್ಮ ಯೌವನದ ಐದು ವರ್ಷಗಳನ್ನು ಅನವಶ್ಯಕವಾಗಿ ವ್ಯರ್ಥ ಮಾಡಿಕೊಳ್ಳುತ್ತಾರೆ.

ನನ್ನ ಅನುಭವದ ಒಂದೆರಡು ವಿಷಯಗಳು:

ಒಂದು ದಿನ ಬೆಳಗ್ಗೆ ನಮ್ಮ ಮನೆಗೆ ನನ್ನ ಸಹೋದ್ಯೋಗಿ ಕಿರಿಯ ಅಧ್ಯಾಪಕರು ಬಂದರು. ಅವರು ಪಿ.ಎಚ್.ಡಿ ಮಾಡಬೇಕಿತ್ತು. ನನ್ನ ಮಾರ್ಗದರ್ಶನ ಕೋರಿ ಬಂದ ಅವರು, “ಸರ್, ನನಗೆ ಪ್ರಮೋಷನ್‍ಗೆ ಅನುಕೂಲವಾಗುವ ಒಂದು ಟಾಪಿಕ್ ಸೂಚಿಸಿ” ಎಂದರು. “ಆ ರೀತಿಯ ಸಂಶೋಧನಾ ವಿಷಯಗಳು ಯಾವುದೂ ಇರುವುದಿಲ್ಲ” ಎಂದೆ. ಅವರು “ಸಾರ್ ಕಠಿಣವಾದ ವಿಷಯವನ್ನು ತೆಗೆದುಕೊಂಡರೆ ಪಿ.ಎಚ್.ಡಿ. ಮುಗಿಸುವುದು ಕಷ್ಟವಾಗುತ್ತದೆ. ರೀಡರ್ ಹುದ್ದೆಗೆ ಪ್ರಕಟಣೆ ನೀಡುತ್ತಿದ್ದಾರೆ. ಇಂಟರ್‍ವ್ಯೂ ವೇಳೆಗೆ ನಾನು ಪಿ.ಎಚ್.ಡಿ ಮುಗಿಸಿರಬೇಕು. ಅನುಕೂಲವಾಗುವ ಒಂದು ವಿಷಯವನ್ನು ನೀವು ಸೂಚಿಸಬೇಕು ಹಾಗೂ ನನಗೆ ತಾವೇ ಮಾರ್ಗದರ್ಶನ ಮಾಡಬೇಕು” ಎಂದು ಕೇಳಿಕೊಂಡರು. ಇದು ಅಧ್ಯಾಪಕರ ಬಡ್ತಿಗೆ ಪಿ.ಎಚ್.ಡಿ. ಅರ್ಹತೆಯನ್ನು ಗೊತ್ತು ಮಾಡಿರುವುದರ ಫಲ.

ಹಿಂದೆ ಮೈಸೂರು ವಿವಿಯಲ್ಲಿ, Ph.D. thesis evaluator ಆಗಿ ದೇಶದ ಹೊರಗಿನವರು ಒಬ್ಬರು ಇರುತ್ತಿದ್ದರು (ಈಗ ಅದನ್ನು ಸಹ ಕೈ ಬಿಡಲಾಗಿದೆ). ಅವರು ಒಮ್ಮೆ ಮೌಲ್ಯಮಾಪನ ಮಾಡುತ್ತಾ ವಿಶ್ವವಿದ್ಯಾಲಯಕ್ಕೆ ಹೀಗೆ ಬರೆದಿದ್ದರು:

“I reject this thesis. Also, I request the university not to send this thesis again to any English-speaking world, in case the thesis is resubmitted”

ನಮ್ಮಲ್ಲಿ, thesis external examinerಗೆ ಹೋಗದೆ, ಆ ಪ್ರೌಢಪ್ರಬಂಧಕ್ಕೆ ಪಿ.ಎಚ್.ಡಿ. ಕೊಡಬಹುದೆಂಬ ಶಿಪಾರಸು ಬಂದಿರುವ ಸುದ್ದಿ ಸಹ ಪ್ರಚಾರದಲ್ಲಿತ್ತು. ಅದು ಆಶ್ಚರ್ಯದ ವಿಷಯವೇನಲ್ಲ! 

*ಲೇಖಕರು ಮೈಸೂರಿನ ಮಹಾಜನಾ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು, ಅರ್ಥಶಾಸ್ತ್ರ ಪ್ರಾಧ್ಯಾಪಕರು.

 

ಬಾಕ್ಸ್

ಪಿ.ಎಚ್.ಡಿ.ಗೆ ಮೌಲ್ಯ ತರಲು ಏನು ಮಾಡಬಹುದು?

  1. ಪಿ.ಎಚ್.ಡಿ.ಯನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ, ನೇಮಕ ಮತ್ತು ಬಡ್ತಿಯ ಮಾನದಂಡ ಮಾಡಿರುವುದನ್ನು ತೆಗೆದು ಹಾಕಬೇಕು. NET ಪಾಸಾಗಿರುವವರನ್ನು ಅಧ್ಯಾಪಕರನ್ನಾಗಿ ನೇಮಕ ಮಾಡಿಕೊಳ್ಳಬಹುದು. ಆದರೆ, ಅವರು, 5-10 ವರ್ಷ ಬೋಧಾನುಭವ ಪಡೆದ ಮೇಲೆ ಬಡ್ತಿಗೆ ಅರ್ಹರಾಗಬೇಕು. ಅದೂ ಈ ಅವಧಿಯಲ್ಲಿ ಅವರು ಗುಣಮಟ್ಟದ ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಿದ್ದರೆ ಮಾತ್ರ. ಸಂಶೋಧನೆ ಗುಣಮಟ್ಟದ್ದೇ ಎನ್ನುವುದನ್ನು ನಾನಾ ಮಾನದಂಡಗಳಿಂದ ಪರೀಕ್ಷಿಸಬೇಕು.
  2. ಪಿ.ಎಚ್.ಡಿ.ಯನ್ನು ಇಂತಿಷ್ಟೇ ವರ್ಷಗಳಲ್ಲಿ ಮುಗಿಸಬೇಕೆಂಬ ನಿಯಮವನ್ನು ತೆಗೆದುಹಾಕಬೇಕು. ಸಂಶೋಧನೆ ಜೀವಿತ ಅವಧಿಯ ಕೈಂಕರ್ಯ. ತಮ್ಮ ಅಧ್ಯಾಪನ ವೃತ್ತಿಯ ಯಾವುದೇ ಘಟ್ಟದಲ್ಲಿ ಅಧ್ಯಾಪಕರು ಅದನ್ನು ಮುಗಿಸಿಕೊಳ್ಳಬಹುದು. 
  3. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಅಥವಾ ISECನಂತಹ ಸಂಸ್ಥೆಗಳಲ್ಲಿ ಮಂಡಿಸಲಾಗುವ ಪಿ.ಎಚ್.ಡಿ. ಪ್ರಬಂಧಗಳು ಕನ್ನಡದಲ್ಲೇ ಇರಬೇಕು. ವಿಶ್ವಾದ್ಯಂತ ನಡೆಯುತ್ತಿರುವುದು ಹೀಗೆಯೇ. ನಮ್ಮ ಭಾಷೆಯಲ್ಲಿ ಮಾತ್ರ ಸಂಶೋಧನಾತ್ಮಕವಾಗಿ ಚಿಂತಿಸಬಹುದು ಎನ್ನುವ ವಿಷಯ ನಿರ್ವಿವಾದ. ಅಗತ್ಯವಿರುವವರು (ಅವರ ಸಂಖ್ಯೆ ಕಡಿಮೆಯೇ) ಅದನ್ನು ಬೇರೆ ಭಾಷೆಗೆ ಅನುವಾದ ಮಾಡಿಸಿಕೊಳ್ಳುತ್ತಾರೆ. ಬೇರೆ ದೇಶದ ಅನೇಕ ಸಂಶೋಧಕರು ಮೈಸೂರು ವಿಶ್ವವಿದ್ಯಾಲಯದ ಓರಿಯಂಟ್ ಲೈಬ್ರರಿಗೆ ಬಂದು ಸಂಶೋಧನೆ ಮಾಡುವುದನ್ನು ನಾನು ನೋಡಿದ್ದೇನೆ. ಹಾಗೆಯೇ ನಮ್ಮ ವಿಶ್ವವಿದ್ಯಾಲಯದ ಅನೇಕರು ರಷ್ಯಾಕ್ಕೆ ಹೋಗಿ ಅಲ್ಲಿ ಭಾಷೆ ಕಲಿತು ಪಿ.ಎಚ್.ಡಿ. ಮುಗಿಸಿ ಬಂದಿರುವುದನ್ನು ನೋಡಿದ್ದೇನೆ. ಆದ್ದರಿಂದ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಮೋಹ ಹೋಗಬೇಕಾದ್ದು ಅತ್ಯಗತ್ಯ.
  4. ಸಾಧ್ಯವಾದಷ್ಟು ಸ್ಥಳೀಯ ಸಮಸ್ಯೆಗಳನ್ನು ಕುರಿತಂತೆ ಸಂಶೋಧನೆ ನಡೆಯಬೇಕು. ನಮ್ಮ ಸಮಾಜದ ಇತಿಹಾಸ, ಸಂಸ್ಕೃತಿ, ಆರ್ಥಿಕತೆ, ರಾಜಕೀಯ, ಕಲೆ, ಮುಂತಾದ ವಿಷಯಗಳ ಮೇಲೆ ಸಂಶೋಧನೆ ನಡೆಯಬೇಕು ಮತ್ತು ಫಲಿತಾಂಶಗಳು ಎಲ್ಲರಿಗೂ ಲಭ್ಯವಿರಬೇಕು. ಉದಾಹರಣೆಗೆ, ಚೈನಾದಲ್ಲಿ ಷಾಂಗೈನ Jiao ong universityಯ ಶೇ.75ರಷ್ಟು ವಿದ್ಯಾರ್ಥಿಗಳು ತಮ್ಮ ಪಿ.ಎಚ್.ಡಿ. ಪ್ರಬಂಧ ಆನ್‍ಲೈನ್‍ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಕೃತಿಚೌರ್ಯ ನಡೆಯುವುದು ಅಸಾಧ್ಯ. ಯು.ಜಿ.ಸಿ. ಶೋಧಗಂಗಾದ ಮೂಲಕ ಕೃತಿಚೌರ್ಯಕ್ಕೆ ತಡೆಹಾಕಲು ಯತ್ನಿಸಿದ್ದರೂ ಇದು ಅಷ್ಟು ಸಫಲತೆಯನ್ನು ಕಂಡಂತಿಲ್ಲ.
  5. ಅತ್ಯಂತ ಉತ್ತಮವಾದ ಅಧ್ಯಾಪಕರು ಸಂಶೊಧನೆ ಮಾಡದೇ ಇರಬಹುದು. ಆದರೆ ವಿದ್ಯಾರ್ಥಿಗಳ ದೃಷ್ಟಿಯಿಂದ ಬೋಧನೆಗೆ ಸಹ ಪಿ.ಎಚ್.ಡಿ.ಯಷ್ಟೇ ಒತ್ತು ಅಗತ್ಯ. ಹೀಗಾಗಿ ಅಧ್ಯಾಪಕರಿಗೆ ಬಡ್ತಿ ನೀಡುವಾಗ ಅವರ ಬೋಧನಾನುಭವ, ಅವರು ಹೇಗೆ ಪಾಠ ಮಾಡಿದ್ದಾರೆ ಎನ್ನುವುದರ ಬಗ್ಗೆ ಒತ್ತು ನೀಡುವುದು ತುಂಬಾ ಅಗತ್ಯ.
  6. ಹೊಸ ಶಿಕ್ಷಣ ನೀತಿ ಸಂಶೋಧನಾ ವಿಶ್ವವಿದ್ಯಾಲಯಗಳು, ಬೋಧನಾ ವಿಶ್ವವಿದ್ಯಾಲಯಗಳು, ಮತ್ತು ಇವೆರಡೂ ಇರುವ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹೊರಟಿದೆ. ಇದು ಒಳ್ಳೆಯ ಆಲೋಚನೆ. ಇದರ ಜೊತೆಗೆ ಸಂಶೋಧನೆಗೇ ಒತ್ತು ಕೊಡುವ ISEC, IISC ಗಳಂತಹ ಸಂಸ್ಥೆಗಳನ್ನು ಹೆಚ್ಚಾಗಿ ಸ್ಥಾಪಿಸಬೇಕು. ಈ ಸಂಸ್ಥೆಗಳು ಬೋಧನೆಗೆ ಒತ್ತುಕೊಡುವ ವಿಶ್ವವಿದ್ಯಾನಿಲಗಳ ಜೊತೆ ಒಡಂಬಡಿಕೆ ಮಾಡಿಕೊಂಡು ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರೆ, ಬೋಧನೆ ಮತ್ತು ಸಂಶೋಧನೆಗಳೆರಡಕ್ಕೂ ಒತ್ತು ಕೊಟ್ಟಂತಾಗುತ್ತದೆ.

Leave a Reply

Your email address will not be published.