ನೇರ ಮತ್ತು ದಿಟ್ಟ ನುಡಿಗಳು

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ

ಮಾರ್ಚ್ ತಿಂಗಳ ‘ಸಮಾಜಮುಖಿ’ಯಲ್ಲಿ ಪ್ರಕಟವಾಗಿರುವ ಬಹುತೇಕ ಲೇಖನಗಳು ತುಂಬಾ ಸೊಗಸಾಗಿ ಮೂಡಿಬಂದಿವೆ. ಅದರಲ್ಲೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಮಠ-ಮೀಸಲಾತಿ-ರಾಜಕಾರಣ’ ಲೇಖನ ಹಾಗೂ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಕುರಿತ ಲೇಖನಗಳು ನೇರ ಮತ್ತು ದಿಟ್ಟವಾಗಿ ವಿಷಯವನ್ನು ಪ್ರತಿಪಾದಿಸಿರುವುದರಿಂದ ಇನ್ನೂ ಹೆಚ್ಚು ಸೊಗಸಾಗಿವೆ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮ ಲೇಖನದಲ್ಲಿ ಸಾಮಾನ್ಯರು ಹೇಳಲು ಹಿಂಜರಿಯುವ ವಿಷಯಗಳನ್ನು ಯಾವ ಮತ್ತು ಯಾರ ಮುಲಾಜು ಇಲ್ಲದೆ ನೇರವಾಗಿ ಹೇಳಿದ್ದಾರೆ. ಆ ಮೂಲಕ ಮಠಗಳ, ಸ್ವಾಮಿಗಳ ಕರ್ತವ್ಯವನ್ನು ಜ್ಞಾಪಿಸಿದ್ದಾರೆ. ಸ್ವತಃ ಮಠಾಧೀಶರಾದ ಪಂಡಿತಾರಾಧ್ಯರು ಮಠಗಳ ಮತ್ತು ಮಠಾಧೀಶರ ಆಳ-ಅಗಲಗಳನ್ನು ಅರಿತಿರುವುದರಿಂದ ಆ ಕುರಿತು ಮಾತನಾಡುವ ನೈತಿಕ ಬಲ ಅವರಿಗಿದೆ. ಅದರಿಂದ ಸಾಮಾನ್ಯರ ಅಭಿಪ್ರಾಯಗಳಿಗಿಂತ ಮಠಾಧೀಶರ ಮಾತುಗಳಿಗೆ ಹೆಚ್ಚಿನ ಮಹತ್ವ ಇದೆ.

ಸಾಮಾನ್ಯ ಜನರೋ, ಮಠದ ಭಕ್ತರೋ, ತಪ್ಪಿ ನಡೆದಾಗ ಅವರನ್ನು ತಿದ್ದುವ ಹೊಣೆ ಮಠಾಧೀಶರಿಗಿರುವಂತೆ, ಮಠಾಧೀಶರೇ ತಪ್ಪಿ ನಡೆದಾಗ ಅಂಥವರನ್ನು ತಿದ್ದುವ ನೈತಿಕ ಜವಾಬ್ದಾರಿ ಮತ್ತೊಬ್ಬ ಹಿರಿಯ ಮತ್ತು ಅನುಭವಿ ಸ್ವಾಮಿಯದಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಪಂಡಿತಾರಾಧ್ಯರ ಲೇಖನವನ್ನು ನೋಡಬೇಕಿದೆ. ಅವರು ಲೇಖನದಲ್ಲಿ ಒಂದು ಕಡೆ ‘ಕಾವಿ ಧರಿಸಿದವರು ಅರಿಷಡ್ವರ್ಗಗಳನ್ನು ತ್ಯಾಗ ಮಾಡಬೇಕು, ಮಠಾಧೀಶರು ಬೇಡುವವರಾಗದೆ ಮಾರ್ಗದರ್ಶಕರಾಗಿರಬೇಕು, ರಾಜಕೀಯ ಮಾಡದೆ ರಾಜಕೀಯ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದ್ದಾರೆ. ಅಂದರೆ ಕೆಲವು ಮಠಾಧೀಶರು ಅರಿಷಡ್ವರ್ಗಗಳಿಂದ ಮುಕ್ತರಾಗಿಲ್ಲ, ಸರ್ಕಾರದ ಮುಂದೆ ಮಿಸಲಾತಿ ಬೇಡಿಕೆ ಮುಂದಿಟ್ಟಿದ್ದಾರೆ, ಕಾವಿಯ ಮರೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದು ಮಠದ ಸ್ವಾಮಿಗಳಿಗೆ ಶೋಭೆಯಲ್ಲ ಎಂದು ಪಂಡಿತಾರಾಧ್ಯರು ಪ್ರಸ್ತುತ ಲೇಖನದಲ್ಲಿ ಎಚ್ಚರಿಸಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಕುರಿತಂತೆ ಪ್ರಕಟವಾಗಿರುವ ಒಂಬತ್ತು ಲೇಖನಗಳು ಸಂಘದ ಹುಟ್ಟು, ಬೆಳವಣಿಗೆ, ಆ ಕುರಿತ ಮೌಲ್ಯಯುತ ಪುಸ್ತಕಗಳು, ಸಂಘದ ವೈರುಧ್ಯಗಳು ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಇದರಿಂದ ಹತ್ತಾರು ಪುಸ್ತಕಗಳನ್ನು ಓದಿ ಪಡೆಯಬಹುದಾದ ಮಾಹಿತಿಯನ್ನು ಈ ಲೇಖನಗಳೇ ನೀಡುತ್ತವೆ. ಎಲ್ಲ ಲೇಖಕರಿಗೆ ಹಾಗೂ ‘ಸಮಾಜಮುಖಿ’ ಬಳಗಕ್ಕೆ ಧನ್ಯವಾದಗಳು.

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ

Leave a Reply

Your email address will not be published.