‘ನೋವು ತುಂಬಿದ ಬದುಕು’ ಕಲಿಕೆಯ ಸರಕು

-ಡಿ.ಯಶೋದಾ

ಬಂಗಾಳಿ ಮೂಲದ ಈ ಪುಸ್ತಕ ಸಣ್ಣಸಣ್ಣ ವಿಷಯಕ್ಕೆ ಹತಾಶರಾಗುವ ಮಹಿಳೆಯರಿಗೆ ಜೀವನೋತ್ಸಾಹ ತುಂಬುತ್ತದೆ. ಹಾಗೆಯೇ ಪುರುಷರಿಗೆ ಮಹಿಳೆಯರ ಕಷ್ಟದ ಬದುಕಿನ ಅರಿವು ಮೂಡಿಸುತ್ತದೆ.

 

ನೋವು ತುಂಬಿದ ಬದುಕು

ಬಂಗಾಳಿ ಮೂಲ: ಬೇಬಿ ಹಾಲ್ದಾರ್

ಕನ್ನಡಾನುವಾದ: ಕುಮಾರಪ್ಪ ಜಿ.

ಪುಟ: 148 ಬೆಲೆ: ರೂ.90

ನವಕರ್ನಾಟಕ ಪಬ್ಲಿಕೇಷನ್ಸ್

ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,

ಬೆಂಗಳೂರು-560001

ಯಾವುದೋ ಪ್ರದೇಶದ ಕುತೂಹಲಕರ ಘಟನೆ, ವ್ಯಕ್ತಿಯ ಸ್ವಾರಸ್ಯಕರ ಕಥೆ ಒಳಗೊಂಡಿರುವ ಪುಸ್ತಕ ಇನ್ಯಾರಿಗೋ ಮಾದರಿ, ಸ್ಫೂರ್ತಿ ಅಥವಾ ಪಾಠವಾಗಬಹುದು. ಅಂತಹ ಕೃತಿಗಳು ಆ ಪ್ರದೇಶದ ಭಾಷೆಗೇ ಸೀಮಿತವಾಗದೆ ಇತರ ಭಾಷೆಗಳಿಗೆ ಅನುವಾದವಾದರೆ ಹೆಚ್ಚು ಜನರನ್ನು ತಲುಪುತ್ತವೆ. ನಮ್ಮ ಜ್ಞಾನ, ಅರಿವು, ಅನುಭವ ವಿಸ್ತಾರವಾಗಬೇಕಾದರೆ ಇತರ ಭಾಷೆಯ ಸಾಹಿತ್ಯಗಳ ಓದು ಮುಖ್ಯ. ಅನುವಾದ ಸಾಹಿತ್ಯದ ಮಹತ್ವ, ಅಗತ್ಯ ಮತ್ತು ಸತ್ವಕ್ಕೆ ಸಾಕ್ಷಿಯಾಗಿದೆ ‘ನೋವು ತುಂಬಿದ ಬದುಕು’ ಕೃತಿ.

ಇದೊಂದು ಆತ್ಮಕತೆ; ಬಂಗಾಳಿ ಮೂಲದ ಕನ್ನಡ ಅನುವಾದ. ಜಿ.ಕುಮಾರಪ್ಪ ಕನ್ನಡಕ್ಕೆ ಅನುವಾದಿಸಿದ್ದಾರೆ. ಹದಿಮೂರು ವರ್ಷಕ್ಕೇ ಮದುವೆಯಾಗಿ, ಐದು ವರ್ಷಗಳಲ್ಲಿ ಮೂರು ಮಕ್ಕಳನ್ನು ಹೆತ್ತು, ಮುಗ್ಧ ಎನ್ನಲಿಕ್ಕಾಗದ ಸ್ವತಂತ್ರ ವ್ಯಕ್ತಿತ್ವ ಇರದ, ಸಣ್ಣ ಬುದ್ಧಿಯ ಗಂಡನ ಜೊತೆ ಬಾಳಲಿಕ್ಕಾಗದೆ, ದೂರದ ನಾಡಿಗೆ ಹೋಗಿ ಮನೆಕೆಲಸ ಮಾಡಿ ಬದುಕು ಕಟ್ಟಿಕೊಂಡ ಮಹಿಳೆಯ ಕತೆಯಿದು. 7ನೇ ತರಗತಿವರೆಗಿನ ವಿದ್ಯಾಭ್ಯಾಸದ ಆಧಾರದ ಮೇಲೇ ಬರೆಯುವ ಸಾಮಥ್ರ್ಯ ಗಳಿಸಿಕೊಂಡು ತನ್ನ ಆತ್ಮಕಥೆಯನ್ನು ಬರೆದು, ತನ್ನಂತಹವರೂ ಬರೆಯಬಹುದು ಎಂಬುದನ್ನು ನಿರೂಪಿಸಿದ ಬೇಬಿ ಹಾಲ್ದಾರ್ ನಿಜಕ್ಕೂ ಎಲ್ಲರಿಗೂ ಮಾದರಿ.

ಆರಂಭದ ಪುಟಗಳನ್ನು ಓದುತ್ತಿದ್ದಂತೆ ಈ ಪುಸ್ತಕದ ಭಾಷೆ ಅಷ್ಟೇನೂ ಚೆನ್ನಾಗಿಲ್ಲ ಎನ್ನಿಸುತ್ತದೆ. ಆದರೆ ಅದರಲ್ಲಿನ ಆಸೆ, ನೋವು, ನಿರೀಕ್ಷೆಗಳ ಭಾವಗಳು ಭಾಷೆಯನ್ನು ಮರೆಮಾಚುತ್ತವೆ.

ಸಣ್ಣ ವಯಸ್ಸಿನಲ್ಲೇ ಬೇಬಿಯ ಅಮ್ಮ ಅವಳ ಕೈಗೆ ಹತ್ತು ಪೈಸೆ ಇಟ್ಟುಬಿಟ್ಟು ಹೋಗುತ್ತಾಳೆ, ಮಲತಾಯಿ ಅವ್ವಳಾಗಲಿಲ್ಲ, ಅಪ್ಪನಿಗೆ ಏನೋ ಸಿಟ್ಟು, ಮನೆಯಲ್ಲಿ ಬಡತನ, ಅಕ್ಕ, ಅಣ್ಣ, ತಮ್ಮ -ದೊಡ್ಡ ಕುಟುಂಬ. ಹೆಚ್ಚು ಓದಬೇಕೆಂದುಕೊಂಡ ಬೇಬಿಗೆ ಮದುವೆ ಬಗ್ಗೆ ಏನೂ ತಿಳಿಯದೇ ಇರುವ ವಯಸ್ಸಿನಲ್ಲೇ ಮದುವೆಯಾಗುತ್ತದೆ. ಓದಿನಲ್ಲಿ ಚೂಟಿಯಾಗಿದ್ದರೂ ಅದನ್ನು ಗಮನಿಸುವವರೇ ಇರುವುದಿಲ್ಲ.

ಮದುವೆಯ ನಂತರ ಪುಸ್ತಕದ ಪರಿಚಯವೇ ಇಲ್ಲದಂತಾಗಿದ್ದ ಬೇಬಿ, ಓದು ಬಿಟ್ಟು ಸುಮಾರು 10-15 ವರ್ಷಗಳ ನಂತರ ಪತ್ರಿಕೆ, ಪುಸ್ತಕಗಳನ್ನು ಓದಲು ತೊಡಗುತ್ತಾಳೆ. ಹಾಗಾಗಿ ತನ್ನ ಜೀವನದ ಬಗ್ಗೆ ತಾನೇ ಬರೆಯುವಾಗ ಭಾಷೆಯ ಸೊಬಗನ್ನು ನಿರೀಕ್ಷಿಸುವುದೇ ತಪ್ಪಾಗುತ್ತದೆ.

ತಾನು ಬರೆದ ಪುಸ್ತಕವನ್ನು ಯಾರಿಗೆ ಅರ್ಪಿಸಬೇಕು ಎಂಬ ಗೊಂದಲದಲ್ಲಿದ್ದ ಬೇಬಿ, ಅರ್ಪಣೆಯ ಅರ್ಥವನ್ನು ನಿಘಂಟು ನೋಡಿ ತಿಳಿದುಕೊಳ್ಳಬೇಕಾಯಿತು. ಬಂಗಾಳದ ಪ್ರಸಿದ್ಧ ಕವಿ ಶಂಖ ಘೋಷ್ ಹೇಳಿರುವಂತೆ ತನ್ನ ಬದುಕಿನ ಕತೆಯ ಕುರಿತ ಬರವಣಿಗೆಯಲ್ಲಿ ಬೇರೆಯವರನ್ನು ಆಕರ್ಷಿಸುವಂತಹದು ಏನಿದೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮತ್ತು ಆಶ್ಚರ್ಯ ಪಡುವ ಬೇಬಿ ಹಾಲ್ದಾರ್‍ಗೆ ತನ್ನ ಬರವಣಿಗೆಯ ಶಕ್ತಿ ಗೊತ್ತಿಲ್ಲದೇ ಇರಬಹುದು, ಆದರೆ ತನ್ನ ಸಹಜ ದೃಷ್ಟಿಯಲ್ಲಿ ಆಕೆ ತನ್ನ ಸುತ್ತಮುತ್ತಲಿನ ಬದುಕನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ. ಹಾಗಾಗಿ ಈ ಪುಸ್ತಕದಲ್ಲಿ ಅವಳ ಕಥೆಯೇ ಮುಖ್ಯವಾಗುತ್ತದೆ.

ಮೊದಮೊದಲು ಮನೆಗೆಲಸ ಮಾಡುವುದಕ್ಕೆ ಹಿಂಜರಿಯುವ ಬೇಬಿ ಹಾಲ್ದಾರ್, ಮುಂದೆ ಆ ಕೆಲಸದಲ್ಲಿ ಪ್ರವೀಣಳೆನಿಸಿಕೊಂಡು ಆ ಕಾರಣಕ್ಕಾಗಿಯೇ ತಾತೂಷ್ ಎಂಬುವರಿಂದ ತಂದೆಯ ವಾತ್ಸಲ್ಯ ಪಡೆಯುತ್ತಾಳೆ. ಅವರ ಪ್ರೋತ್ಸಾಹದಿಂದ ಮನೆಯ ಕೆಲಸದ ನಡುವೆಯೇ ಓದುತ್ತಾಳೆÉ, ಬರೆಯುತ್ತಾಳೆ. ಜೀವನದ ಬಗ್ಗೆ ಮಮತೆ ಬೆಳೆಸಿಕೊಳ್ಳುತ್ತಾಳೆ.

 

Leave a Reply

Your email address will not be published.