ನ್ಯಾಯದಾನಕ್ಕೆ ಬೆನ್ನು ತೋರಿಸುವುದೇಕೆ?

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಸುದ್ದಿ, ಸಂಶಯ ಮತ್ತು ಸೋಜಿಗಕ್ಕೆ ಕಾರಣವಾಗಿದೆ.

ಎಂ.ಎಸ್.ಪುಟ್ಟಣ್ಣ ಅವರು ಹೊಸಗನ್ನಡ ಪುನರುಜ್ಜೀವನ ಘಟ್ಟದ ಪ್ರಸಿದ್ಧ ಲೇಖಕರು. ‘ಮಾಡಿದ್ದುಣ್ಣೊ ಮಹಾರಾಯ’, ‘ಮುಸುಕು ತೆಗೆಯೇ ಮಾಯಾಂಗನೆ’, ‘ಅವರಿಲ್ಲದೂಟ’ ಮೊದಲಾದ ಮೌಲಿಕ ಕಾದಂಬರಿಗಳ ಮೂಲಕ ಖ್ಯಾತರಾಗಿರುವ ಅವರು ಅಮಲ್ದಾರರಾಗಿ ಸರಕಾರಿ (1897) ಕೆಲಸವನ್ನೂ ಮಾಡಿದವರು. ಬ್ರಿಟೀಷರ ಕಾಲದ ಅಮಲ್ದಾರರೆಂದರೆ ಆಗ ತಾಲೂಕಿನ ದಂಡಾಧಿಕಾರಿಗಳೂ ಆಗಿದ್ದರು. ಅವರು, ಮೈಸೂರು ಕಡೆ ಅಮಲ್ದಾರರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ನಡೆಯುತ್ತದೆ.

ಒಮ್ಮೆ ಅವರ ಹೆಂಡತಿಯು, ತಮ್ಮ ಸರಕಾರಿ ಬಂಗಲೆಯ ಪಕ್ಕದಲ್ಲಿದ್ದ ಖಾಲಿ ಮನೆಯ ಕಂಪೌಂಡ್‍ನಲ್ಲಿ ಬೆಳೆದಿದ್ದ ಕರಿಬೇವಿನ ಸೊಪ್ಪನ್ನು ಹರಿದುಕೊಂಡು ಬಂದು ತಮ್ಮ ಮನೆಯ ಅಡಿಗೆಗೆ ಬಳಸಿದರಂತೆ. ಊಟ ಮಾಡುವ ಸಂದರ್ಭದಲ್ಲಿ ಈ ಸತ್ಯ ಗೊತ್ತಾದ ಪುಟ್ಟಣ್ಣನವರು, ಕದ್ದು ತಂದ ಆ ಕರಿಬೇವನ್ನು ಹಾಕಿ ಮಾಡಿದ್ದ ಅಡಿಗೆಯನ್ನು ಉಣ್ಣದೆ, ಮೊಸರು ಅನ್ನ ಉಂಡು ಕಛೇರಿಗೆ ಹೋದರಂತೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಅವರು ತಮ್ಮ ಹೆಂಡತಿಗೇ ಕಛೇರಿಯಿಂದ ಸಮನ್ಸ್ ಕಳಿಸಿ, ಕೋರ್ಟಿಗೆ ಕರೆಸಿ, ವಿಚಾರಣೆ ನಡೆಸಿ, ಪಕ್ಕದ ಮನೆಯ ಕರಿಬೇವನ್ನು ಹರಿದದ್ದು ಅಪರಾಧವೆಂದು ನಿರ್ಣಯಿಸಿ, ಅವರಿಗೆ ಒಂದು ರೂಪಾಯಿ (ಆ ಕಾಲದಲ್ಲಿ) ಜುಲ್ಮಾನೆ ವಿಧಿಸಿದರಂತೆ! ಹೆಂಡತಿ ಅಪರಾಧಿ, ಗಂಡನೇ ದಂಡಾಧಿಕಾರಿ! ಆದರೆ, ನ್ಯಾಯದಾನದ ಸಂದರ್ಭದಲ್ಲಿ ಪುಟ್ಟಣ್ಣನವರು ಗಂಡನಾಗಿರಲಿಲ್ಲ; ಅವರ ಶ್ರೀಮತಿ ಹೆಂಡತಿಯಾಗಿರಲಿಲ್ಲ. ನ್ಯಾಯದೇವತೆಯ ತಕ್ಕಡಿ ‘ಜವೆ’ಯಷ್ಟೂ ಏರುಪೇರಾಗಿರಲಿಲ್ಲ.

ಇಲ್ಲಿ ಆಪಾದಿತರ ಬಗೆಗಾಗಲಿ ಅಥವಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಹತ್ತೂ ನ್ಯಾಯಮೂರ್ತಿಗಳ ಬಗೆಗಾಗಲಿ ‘ವೈಯಕ್ತಿಕ’ವಾಗಿ ಮಾತಾಡುವುದು ನ್ಯಾಯೋಚಿತವಾಗುವುದಿಲ್ಲ.

ಈ ಘಟನೆಯನ್ನು ಸ್ಮರಿಸಿಕೊಂಡಾಗ ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಲಾಗದೆ, ಒಬ್ಬೊಬ್ಬರಾಗಿ ಒಟ್ಟು ಹತ್ತು ಜನ ನ್ಯಾಯಮೂರ್ತಿಗಳು ಹಿಂದೆ ಸರಿದ ವಿಚಿತ್ರ ಘಟನೆ ಕಣ್ಮುಂದೆ ಬರುತ್ತದೆ (ರಾಷ್ಟ್ರದಾದ್ಯಂತ ಈ ಬಗೆಯ ಹಲವಾರು ಪ್ರಕರಣಗಳು ವರದಿಯಾಗಿವೆ). ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಸುದ್ದಿ, ಸಂಶಯ ಮತ್ತು ಸೋಜಿಗಕ್ಕೆ ಕಾರಣವಾಗುತ್ತಿದೆ.

ಈ ಪ್ರಕರಣವು ನ್ಯಾಯಾಲಯದ ವಿಚಾರಣೆಯಲ್ಲಿರುವ ಕಾರಣ, ಇಲ್ಲಿ ಆಪಾದಿತರ ಬಗೆಗಾಗಲಿ ಅಥವಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಹತ್ತೂ ನ್ಯಾಯಮೂರ್ತಿಗಳ ಬಗೆಗಾಗಲಿ ‘ವೈಯಕ್ತಿಕ’ವಾಗಿ ಮಾತಾಡುವುದು ನ್ಯಾಯೋಚಿತವಾಗುವುದಿಲ್ಲ. ಆದರೆ ಇದರ ಹೊರತಾಗಿ, ಇಡೀ ನ್ಯಾಯಾಂಗವನ್ನೇ ಸಂಶಯ ದೃಷ್ಟಿಯಿಂದ ನೋಡುವಂತಾಗಿರುವ ಈ ಪ್ರಕರಣದ ಹಿಂದಿನ ನ್ಯಾಯಿಕ ಅಥವಾ ಕಾನೂನಾತ್ಮಕ ಸತ್ಯಗಳನ್ನು ತಿಳಿಯುವ ಜರೂರಂತೂ ಖಂಡಿತ ಇದೆ.

ಯಾವುದೇ ನ್ಯಾಯಮೂರ್ತಿಗಳು ತಾವು ಅಧಿಕಾರ ಸ್ವೀಕರಿಸುವಾಗ, ‘ಭಾರತದ ಸಂವಿಧಾನದ ಸಾಕ್ಷಿಯಾಗಿ ನಾನು ನಿಷ್ಪಕ್ಷಪಾತದಿಂದ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ’ ಎಂದು ಪ್ರಮಾಣ ಮಾಡಿರುತ್ತಾರೆ. ಅವರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಸಂವಿಧಾನವೇ ಮಾರ್ಗಸೂಚಿಯಾಗಿರುತ್ತದೆ ಮತ್ತು ಅದೇ ಅತ್ಯಂತ ಗಟ್ಟಿಯಾದ ರಕ್ಷಣೆಯನ್ನೂ ಒದಗಿಸುತ್ತದೆ. ಹೀಗಿರುವಾಗ, ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದರೆ ಅದು ನಮ್ಮ ಸಂವಿಧಾನಕ್ಕೇ ಮಾಡುವ ಅಪಚಾರವಾಗುವುದಿಲ್ಲವೆ?

ಒಂದು ವೇಳೆ ಆಪಾದಿತನಿಗೂ ತಮಗೂ ಏನಕೇನ ಸಂಬಂಧವೇ ಇರುವುದಾದರೆ, ಆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಾಗಲೇ ಅತ್ಯಂತ ಸ್ಪಷ್ಟವಾಗಿ ಬಹಿರಂಗಪಡಿಸಿ, ಸಕಾರಣವಾಗಿಯೇ ಹಿಂದೆ ಸರಿಯಬಹುದಲ್ಲವೆ?

ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಮೂರ್ತಿಗಳು ಕೊಡುವ ಯಾವುದೇ ನಿರ್ಣಯವು ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುವ ಕಾರಣ ಅಲ್ಲಿ ಹೆದರುವ ಅಥವಾ ಬೇರೆಯವರು ಸಂಶಯ ಪಡುತ್ತಾರೆಂದು ಭಾವಿಸುವ ಅಗತ್ಯವೇ ಇರಲಾರದಲ್ಲವೆ? ಒಂದು ವೇಳೆ ಆಪಾದಿತನಿಗೂ ತಮಗೂ ಏನಕೇನ ಸಂಬಂಧವೇ ಇರುವುದಾದರೆ, ಆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಾಗಲೇ ಅತ್ಯಂತ ಸ್ಪಷ್ಟವಾಗಿ ಬಹಿರಂಗಪಡಿಸಿ, ಸಕಾರಣವಾಗಿಯೇ ಹಿಂದೆ ಸರಿಯಬಹುದಲ್ಲವೆ? ಹಾಗೆ ಮಾಡದೆ, ಪ್ರಕರಣದ ವಿಚಾರಣೆ ನಡೆದು ಕೆಲವು ದಿನಗಳಾದ ನಂತರ ಅದರಿಂದ ಹಿಂದೆ ಸರಿದರೆ ಸಂದೇಹ ಹುಟ್ಟಲಾರದೆ? ಅಥವಾ ಒಬ್ಬರಲ್ಲ, ಇಬ್ಬರಲ್ಲ, ಸಾಲು ಸಾಲಾಗಿ ಹತ್ತು ಜನ ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯುತ್ತಾರೆಂದರೆ, ಏನರ್ಥ? ಇದರಲ್ಲಿ ಕೆಲವು ನ್ಯಾಯಮೂರ್ತಿಗಳು ತಮ್ಮ ಹಿಂಜರಿತಕ್ಕೆ ಕಾರಣಗಳನ್ನು ಏಕೆ ಕೊಟ್ಟಿಲ್ಲ? -ಇಷ್ಟೆಲ್ಲ ಪ್ರಶ್ನೆಗಳು ಇಲ್ಲಿ ಸಹಜವಾಗಿಯೇ ಹುಟ್ಟುತ್ತವೆ.

ಇಲ್ಲಿ ಮತ್ತೆ ಎಂ.ಎಸ್.ಪುಟ್ಟಣ್ಣನವರ ‘ದಂಡಾಧಿಕಾರದ ಪ್ರಾಮಾಣಿಕ’ ನಡೆ ನೆನಪಾಗುತ್ತದೆ. ತಮ್ಮ ಹೆಂಡತಿಯೇ ಅಪರಾಧಿಯೆಂದು ಖಚಿತಪಡಿಸಿ, ಅವರಿಗೂ ದಂಡ ವಿಧಿಸಿದ ಅವರ ನಿಸ್ಪಹತೆಯನ್ನು ನಮ್ಮ ನ್ಯಾಯಮೂರ್ತಿಗಳು ಪಾಲಿಸಲು ಆಗುವುದಿಲ್ಲವೆ? ಹಾಗೆ ಮಾಡಿದರೆ, ಇಡೀ ನ್ಯಾಯಾಂಗದ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆದಂತಾಗುವುದಿಲ್ಲವೆ? ಇಂಥಲ್ಲಿ ಅಗತ್ಯವಾಗುವ ‘ಮಾನಸಿಕ ದೂರ’ವನ್ನು (ಸೈಕಿಕಲ್ ಡಿಸ್ಟನ್ಸ್) ಕಾಪಾಡಿಕೊಂಡು ನಿಷ್ಪಕ್ಷಪಾತದಿಂದ ನಿರ್ಣಯ ಕೊಡುವ ಮನೋಸಾಮಥ್ರ್ಯ ನಮ್ಮ ನ್ಯಾಯಮೂರ್ತಿಗಳಿಗಿಲ್ಲವೆ? -ಇವೆಲ್ಲ ಪ್ರಶ್ನೆಗಳಿಗೆ ಉತ್ತರಗಳಿದ್ದರೆ, ಅವುಗಳನ್ನು ಬಹಿರಂಗವಾಗಿ ಜಾಹೀರುಪಡಿಸುವಲ್ಲಿ ಆತಂಕವೇನಿದೆ?

ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವ ಪ್ರಕ್ರಿಯೆಗೆ ಕಾನೂನಿನ ಸಮರ್ಥನೆಯೂ ಇರಬಹುದು. ಅಂಥ ಸಂದರ್ಭವಿದ್ದರೆ ಕಾನೂನಿನ ಸಮಝಾಯಿಸಿಯನ್ನು ಕೊಟ್ಟರೆ ಸಾರ್ವಜನಿಕರ ಸಂಶಯಗಳಾದರೂ ದೂರವಾಗಬಹುದು. ಆದರೆ, ಇದೇ ಪ್ರಕರಣದಿಂದ ಏಳು ಜನ ನ್ಯಾಯಮೂರ್ತಿಗಳು ಹಿಂದೆ ಸರಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡರು, ‘ವಿಚಾರಣೆಯಿಂದ ಹಿಂದೆ ಸರಿಯುವ ನ್ಯಾಯಮೂರ್ತಿಗಳಿಗೆ ಬಹುಶಃ ಯಾವುದೋ ಅಸಮರ್ಥತೆ ಇರುತ್ತದೆ. ಅವರ ಆತ್ಮಸಾಕ್ಷಿ ಮತ್ತು ಮನಸ್ಸು ಒಪ್ಪದಿರಬಹುದು. ಇದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಆದರೆ ಎಲ್ಲರೂ ಅಸಮರ್ಥರಾಗಿಯೇ ಇರುವುದಿಲ್ಲ. ಯಾರಾದರೂ ಒಬ್ಬರು ವಿಚಾರಣೆ ನಡೆಸಲೇಬೇಕಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

‘ತಡವಾಗಿ ದೊರಕುವ ನ್ಯಾಯದಾನವು, ನ್ಯಾಯದ ನಿರಾಕರಣೆಗೆ ಸಮ’ ಎಂಬ ಮಾತಿದೆ. ಕಾರಣವಿದ್ದೋ ಅಥವಾ ಅಕಾರಣವಾಗಿಯೋ ಹೀಗೆ ನ್ಯಾಯಮೂರ್ತಿಗಳು ಪ್ರಕರಣಗಳ ವಿಚಾರಣೆ ನಡೆಸದೇ ಹಿಂದೆ ಸರಿಯುತ್ತ ಹೋದರೆ ಅದು ನ್ಯಾಯಾಂಗದ ಉತ್ತರದಾಯಿತ್ವದಕ್ಕೇ ಭಂಗವಲ್ಲವೆ?

Leave a Reply

Your email address will not be published.