ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ

ಡಿ.ಉಮಾಪತಿ

ತಮ್ಮ ಮೇಲೆ ಬೆಟ್ಟದಂತೆ ಎರಗಿ ಬರುವ ಆಪತ್ತುಗಳು ಹತ್ತಿಯಂತೆ ಕರಗಿ ಹೋಗುತ್ತವೆ ಎಂಬುದು ಮೋದಿಅಮಿತ್ ಶಾ ಜೋಡಿಯ ಗಟ್ಟಿ ನಂಬಿಕೆ. ಆಕ್ರಮಣಕಾರಿ ಆಡಳಿತಪಕ್ಷವು ದೈತ್ಯ ಸದಸ್ಯಬಲ ಹೊಂದಿರುವ ಮತ್ತು ಪ್ರತಿಪಕ್ಷಗಳು ನಿಸ್ತೇಜವಾಗಿರುವ, ಜನತಾಂತ್ರಿಕ ವ್ಯವಸ್ಥೆ ಶಿಥಿಲಗೊಂಡಿರುವ ಇಂದಿನ ಸನ್ನಿವೇಶದಲ್ಲಿ ನಂಬಿಕೆ ಇಲ್ಲಿಯವರೆಗೆ ಬಹುಮಟ್ಟಿಗೆ ನಿಜವಾಗಿದೆ. ಪೆಗಸಸ್ ಹಗರಣ ಕೂಡ ನಿಧಾನ ಸಾವನ್ನು ಕಾಣಲಿದೆ!

ಸರ್ವಾಧಿಕಾರಿ ಸರ್ಕಾರ ಸಂಸತ್ತಿನಲ್ಲಿ ಅದುಮಿ ತುಳಿದಿಟ್ಟ ಪೆಗಸಸ್ ಬೇಹುಗಾರಿಕೆ ಹಗರಣ ನ್ಯಾಯಾಂಗದ ಅಂಗಳದಲ್ಲಿ ಸದ್ದು ಮಾಡತೊಡಗಿದೆ.

ಜನತಂತ್ರದ ಅಣಕ ಜರುಗಿರುವ ಸಂಕ್ರಮಣ ಸನ್ನಿವೇಶದಲ್ಲಿ ನ್ಯಾಯಾಂಗದ ನಡೆ ಎತ್ತ ಎಂಬುದು ವಾರದೊಪ್ಪತ್ತಿನಲ್ಲಿಯೇ ಬಹಿರಂಗವಾಗುವ ಎಲ್ಲ ಸೂಚನೆಗಳಿವೆ. ಹಗರಣದ ತನಿಖೆ ಕೋರಿರುವ ಅರ್ಜಿಗಳ ಕುರಿತ ತನ್ನ ತೀರ್ಮಾನವನ್ನು ಮುಂದಿನ ವಾರ ಪ್ರಕಟಿಸುವುದಾಗಿ ಖುದ್ದು ಮುಖ್ಯನ್ಯಾಯಮೂರ್ತಿಯವರೇ ಸಾರಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿ ಉತ್ತರದಾಯಿ ಆಗಿಸುವ ಸಾಮಥ್ರ್ಯ ಇರುವುದಾದರೆ ಅದು ನ್ಯಾಯಾಂಗಕ್ಕೆ ಮಾತ್ರವೇ. ಬೇಹುಗಾರಿಕೆ ಪ್ರಭುತ್ವ ಎಂಬ ಅಪಾಯಕಾರಿ ಸ್ಥಿತಿಗೆ ಜಾರದಂತೆ ಭಾರತವನ್ನು ಹಿಡಿದೆತ್ತಿ ಕಾಪಾಡುವುದು ನ್ಯಾಯಾಂಗದಿಂದ ಸಾಧ್ಯ. ನಮ್ಮ ಗಣರಾಜ್ಯವು ತನ್ನ ಪ್ರಜೆಗಳಿಗೆ ಕೊಡಮಾಡಿರುವ ಮುಕ್ತ ಮತ್ತು ಉದಾರ ಪ್ರಭುತ್ವದ ಅಮೂಲ್ಯ ಉಡುಗೊರೆ ಅಪಹರಣವಾಗದಂತೆ ತಡೆಯಬಲ್ಲದು.

ಸರ್ವೋಚ್ಚ ನ್ಯಾಯಾಲಯದ ಮುಂದೆ ಪೆಗಸಸ್ ಹಗರಣದ ತನಿಖೆಗೆ ಒತ್ತಾಯಿಸುವ ಹಲವಾರು ಅರ್ಜಿಗಳಿವೆ. ಪೈಕಿ ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿಕುಮಾರ್ ಹಾಗೂ ಪರಂಜೊಯ್

ಗುಹಾಥಾಕುರ್ತ, ಭಾರತೀಯ ಸಂಪಾದಕರ ಗಿಲ್ಡ್, ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಎಂ.ಎಲ್.ಶರ್ಮಾ ಪ್ರಮುಖ ಹೆಸರುಗಳು. ನ್ಯಾಯಾಲಯದ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆಗೆ ನಿರ್ದೇಶನ ನೀಡಬೇಕೆಂಬುದು ಅರ್ಜಿಗಳ ಕೋರಿಕೆ.

ಸಾಂವಿಧಾನಕ ಸಂಸ್ಥೆಗಳು ಒಂದೊಂದಾಗಿ ಮೋದೀಕರಣಕ್ಕೆ ವಶವಾಗಿರುವ ದುರಂತದ ನಡುವೆ ಬೆಳಕಿನ ಭರವಸೆಯಾಗಿ ಉಳಿದದ್ದು ಸುಪ್ರೀಮ್ ಕೋರ್ಟ್ ಮಾತ್ರವೇ. ಪ್ರಜಾಪ್ರಭುತ್ವದ ಎರಡು ಅಂಗಗಳನ್ನು ಧ್ವಂಸಗೊಳಿಸಲಾಗಿದೆ. ನಾಲ್ಕನೆಯ ಅಂಗವೆಂದು ಕರೆಯಿಸಿಕೊಳ್ಳುವ ಪತ್ರಿಕಾಂಗವನ್ನೂ ಪಳಗಿಸಲಾಗಿದೆ. ಅದು ಪ್ರಚಂಡ ಪ್ರಭುವಿನ ಪರಿಚಾರಿಕೆಗೆ ನಿಂತುಬಿಟ್ಟಿದೆ. ಜನತಂತ್ರ ನೆಚ್ಚಬಹುದಾಗಿದ್ದ ನ್ಯಾಯಾಂಗವೆಂಬ ಕಟ್ಟಕಡೆಯ ಕಂಬದಲ್ಲೂ ಬಿರುಕುಗಳು ಬಾಯಿ ತೆರೆದವು. ನ್ಯಾಯಮೂರ್ತಿಗಳ ನಡೆ ನುಡಿಗಳು, ತೀರ್ಪುಗಳ ಕುರಿತು ಪ್ರಶ್ನೆಗಳೆದ್ದವು.

ಜನತೆಯ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳುವಂತಹ ಕೆಲವು ನಡೆನುಡಿಗಳು ಇತ್ತೀಚೆಗೆ ಉನ್ನತ ನ್ಯಾಯಾಂಗದಲ್ಲಿ ಕಂಡು ಬರುತ್ತಿರುವುದು ಚೇತೋಹಾರಿ ಬೆಳವಣಿಗೆ. ಸರ್ಕಾರದ ಪರವಾಗಿಯೇ ತೀರ್ಪುಗಳು ಹೊರಬೀಳುತ್ತಿವೆ ಎಂಬುದಾಗಿ ಕವಿದಿದ್ದ ಭಾವನೆ ತುಸುವಾದರೂ ಚೆದುರಿದೆ. ಮಿಶ್ರ ಸಂಕೇತಗಳು ಹೊಮ್ಮುತ್ತಿವೆ.

ಪೆಗಸಸ್ ಬೇಹುಗಾರಿಕೆಯ ಕೃತ್ಯ ಕುರಿತು ಸಂಸತ್ತಿನ ಜಂಟಿ ಸದನ ಸಮಿತಿಯ ತನಿಖೆ ನಡೆಸಬೇಕೆಂಬುದು ಪ್ರತಿಪಕ್ಷಗಳ ಆಗ್ರಹವಾಗಿತ್ತು. ಆದರೆ ಪೆಗಸಸ್ ಕುರಿತ ಪ್ರಸ್ತಾಪಕ್ಕೂ ಆಸ್ಪದ ನೀಡಲಿಲ್ಲ ಸರ್ಕಾರ. ಇಡೀ ಮಳೆಗಾಲದ ಅಧಿವೇಶನದ ಕಲಾಪ ಸರ್ಕಾರದ ಜಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಮುಂದೂಡಿಕೆಗಳಲ್ಲಿ ಕೊಚ್ಚಿ ಹೋಯಿತು. ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಬೆಂಕಿ ಬಿದ್ದ ಮನೆಯ ಗಳು ಹಿರಿದಂತೆ ತನಗೆ ಬೇಕಾದ ವಿಧೇಯಕಗಳನ್ನು ನಿಮಿಷಗಳಲ್ಲಿ ಪಾಸು ಮಾಡಿಸಿಕೊಂಡಿತು ಮೋದಿ ಸರ್ಕಾರ. ಜನತಂತ್ರದ ಮಹಾನ್ ಅಣಕವೇ ಜರುಗಿ ಹೋಯಿತು.

ಸುಪ್ರೀಮ್ ಕೋರ್ಟಿನ ಮುಂದೆ ವಿಚಾರಣಾಧೀನವೆಂಬ ಕಾರಣವನ್ನು ಮುಂದೆ ಮಾಡಲಾಯಿತು. ಸಂಸದರು ಪೆಗಸಸ್ ಕುರಿತು ಕೇಳಿದ ಪ್ರಶ್ನೆಗಳಿಗೆ ಅವಕಾಶವನ್ನೇ ನಿರಾಕರಿಸಲಾಯಿತು. ಶಶಿ ತರೂರ್ (ಕಾಂಗ್ರೆಸ್) ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಂಸದೀಯ ಸಮಿತಿಯು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳದಂತೆ ಷಡ್ಯಂತ್ರ ಹೂಡಲಾಯಿತು. ಆಳುವ ಪಕ್ಷದ ಸದಸ್ಯರು ಸಭೆಗೆ ಬಂದು ಸಹಿ ಹಾಕಿ ಹೊರನಡೆದು ಕೋರಂ ಇಲ್ಲದಂತೆ ಮಾಡಿದರು. ಕೇಂದ್ರ ಸರ್ಕಾರದ ಮೂವರು ಕಾರ್ಯದರ್ಶಿಗಳು ನೆವ ಹೇಳಿ ಸಭೆಗೆ ಬಾರದೆ ತಪ್ಪಿಸಿಕೊಂಡರು.

ತಮ್ಮ ಮೇಲೆ ಬೆಟ್ಟದಂತೆ ಎರಗಿ ಬರುವ ಆಪತ್ತುಗಳು ಹತ್ತಿಯಂತೆ ಕರಗಿ ಹೋಗುತ್ತವೆ ಎಂಬುದು ಮೋದಿಅಮಿತ್ ಶಾ ಜೋಡಿಯ ಗಟ್ಟಿ ನಂಬಿಕೆ. ಆಕ್ರಮಣಕಾರಿ ಆಡಳಿತಪಕ್ಷವು ದೈತ್ಯ ಸದಸ್ಯಬಲ ಹೊಂದಿರುವ ಮತ್ತು ಪ್ರತಿಪಕ್ಷಗಳು ನಿಸ್ತೇಜವಾಗಿರುವ, ಜನತಾಂತ್ರಿಕ ವ್ಯವಸ್ಥೆ ಶಿಥಿಲಗೊಂಡಿರುವ ಇಂದಿನ ಸನ್ನಿವೇಶದಲ್ಲಿ ನಂಬಿಕೆ ಇಲ್ಲಿಯವರೆಗೆ ಬಹುಮಟ್ಟಿಗೆ ನಿಜವಾಗಿದೆ. ಪೆಗಸಸ್ ಹಗರಣ ಕೂಡ ನಿಧಾನ ಸಾವನ್ನು ಕಾಣಲಿದೆ. ರಾಜಕೀಯ ವಿರೋಧ, ಮಾನವ ಹಕ್ಕುಗಳ ಗುಂಪುಗಳ ಪ್ರತಿರೋಧ, ಹೋರಾಟಗಾರರ ಆಂದೋಲನ ಹಾಗೂ ಸಜ್ಜನ ಸಮಾಜದ ಆಗ್ರಹಾಸ್ತ್ರಗಳು ಕೂಡ ಕಾಲಕ್ರಮೇಣ ವಿಫಲವಾಗಲಿವೆ. ಅಲ್ಲಿಯ ತನಕ ತಾನು ನಿರಾಕರಣೆಯ ನಿಲುವನ್ನು ಬಿಟ್ಟುಕೊಡಕೂಡದು ಎಂಬುದು ಜೋಡಿಯ ವಿಶ್ವಾಸ.

ಪೆಗಸಸ್ ಬೇಹುಗಾರಿಕೆ ಹಗರಣ ಕುರಿತು ನ್ಯಾಯಾಂಗ ತನಿಖೆಯ ಪಶ್ಚಿಮಬಂಗಾಳ ಸರ್ಕಾರದ ನಡೆ ಆಸಕ್ತಿಕರ ಬೆಳವಣಿಗೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮದನ್ ಬಿ.ಲೋಕೂರ ಮತ್ತು ಕೊಲ್ಕತ್ತ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯಿ ಭಟ್ಟಾಚಾರ್ಯ ಆಯೋಗದ ಸದಸ್ಯರು. ರಾಜ್ಯ ಸರ್ಕಾರವೊಂದು ತನ್ನ ಭೌಗೋಳಿಕ ವ್ಯಾಪ್ತಿಯೊಳಗೆ ಇರಿಸಿರುವ ಹೆಜ್ಜೆಗೆ ಇತಿಮಿತಿಗಳಿರುವುದು ಹೌದು. ಆದರೆ ಇತಿಮಿತಿಗಳೇ ತನಿಖೆಗೆ ನ್ಯಾಯಬದ್ಧತೆಯ ಬಲವನ್ನು ಒದಗಿಸಿಕೊಡುತ್ತವೆ. ತನಿಖೆಯು ಪೆಗಸಸ್ ಹಗರಣವನ್ನು ಸಮಾಧಿ ಮಾಡುವ ಮೋದಿ ಸರ್ಕಾರದ ದುಸ್ಸಾಹಸದ ವಿರುದ್ಧ ಉರುಳಿಸಿರುವ ರಾಜಕೀಯಕಾನೂನಾತ್ಮಕ ದಾಳ. ನ್ಯಾಯಾಂಗ ತನಿಖೆಯ ವ್ಯಾಪ್ತಿಗೆ ಜನತಂತ್ರದ ಸಾಧಕ ಬಾಧಕಗಳು, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಶಾಸಕರ ಸ್ವಾಯತ್ತತೆಯ ಅಂಶಗಳನ್ನು ಸೇರಿಸಿರುವುದು ಉತ್ತಮ ಕ್ರಮ. ಮಮತಾ ಅವರ ಚತುರ ನಡೆಯು ವಿಶಾಲ ವ್ಯಾಪ್ತಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತದೆ.

ಪಶ್ಚಿಮಬಂಗಾಳದ ತನಿಖೆಯ ಆದೇಶವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದೇಶ ರದ್ದಾಗಬೇಕೆಂದು ಬಯಸುತ್ತದೆ. ಆದೇಶವನ್ನು ರದ್ದು ಮಾಡುವಂತೆ ಗ್ಲೋಬಲ್ ವಿಲೇಜ್ ಫೌಂಡೇಶನ್ ಎಂಬ ಆರೆಸ್ಸೆಸ್ ಹಿನ್ನೆಲೆಯ ಸ್ವಯಂಸೇವಾ ಸಂಸ್ಥೆಯೊಂದು ಸುಪ್ರೀಮ್ ಕೋರ್ಟಿನ ಕದ ಬಡಿದ ಉದ್ದೇಶ ಇದೇ ಆಗಿದೆ.

ನ್ಯಾಯಾಲಯದ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆಗೆ ನಿರ್ದೇಶನ ನೀಡಬೇಕೆಂಬುದು ಅರ್ಜಿಗಳ ಕೋರಿಕೆ. ಮುಂದಿನ ವಾರವೇ ಅರ್ಜಿಗಳ ಸಂಬಂಧದಲ್ಲಿ ತೀರ್ಮಾನ ತಿಳಿಸುವುದಾಗಿ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ನ್ಯಾಯಪೀಠ ಬುಧವಾರ ಪ್ರಕಟಿಸಿದೆ. ಅರ್ಥಾತ್ ಪೆಗಸಿಸ್ ಹಗರಣದ ಹಣೆಬರೆಹ ಸದ್ಯದಲ್ಲೇ ನಿರ್ಧಾರವಾಗಲಿದೆ. ಅಲ್ಲಿಯ ತನಕ ತನ್ನ ತನಿಖೆಯನ್ನು ತಡೆಹಿಡಿಯುವಂತೆ ಸುಪ್ರೀಮ್ ಕೋರ್ಟು ಪಶ್ಚಿಮ ಬಂಗಾಳಕ್ಕೆ ಸೂಚನೆ ನೀಡಿದೆ. ಸೂಚನೆಯನ್ನು ಪಶ್ಚಿಮ ಬಂಗಾಳ ಗೌರವಾದರದಿಂದ ಸ್ವೀಕರಿಸಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ. ಆಳುವವರ ಮಗ್ಗುಲ ಮುಳ್ಳೆನಿಸುವ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಬದಿಗೆ ಸರಿಸಿರುವ ನಿದರ್ಶನಗಳಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ನೀಡಲಾಗಿರುವ ತೀರ್ಪುಗಳು ಪ್ರಶ್ನಾರ್ಹ ಎನಿಸಿವೆ.

2018 ಜನವರಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಇದೇ ಅಂಶವನ್ನು. ಸುಪ್ರೀಮ್ ಕೋರ್ಟ್ ಆಡಳಿತ ಕೊಳೆತಿದ್ದು, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ಹೇಳಿಕೆ ನೀಡಿದ್ದರು.

ದೀಪಕ್ ಮಿಶ್ರ ಅವರು ಅಂದಿನ ಮುಖ್ಯನ್ಯಾಯಮೂರ್ತಿ. ಕೇಸು ಖಟ್ಲೆಗಳನ್ನು ವಿಚಾರಣೆಗೆ ಹಂಚಿಕೊಡುವುದು ಮುಖ್ಯ ನ್ಯಾಯಮೂರ್ತಿಯ ಅಧಿಕಾರ. ಯಾವ್ಯಾವ ನ್ಯಾಯಮೂರ್ತಿಗೆ ಯಾವ್ಯಾವ ಕೇಸುಗಳನ್ನು ವಿಚಾರಣೆಗೆ ಒಪ್ಪಿಸಬೇಕೆಂಬ ತೀರ್ಮಾನದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ಆಪಾದನೆಯನ್ನು ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದರು. ನಾಲ್ವರ ಪೈಕಿ ಒಬ್ಬರಾದ ರಂಜನ್ ಗೋಗೋಯ್ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಏರಿದರು. ಆದರೆ ಆಕ್ಷೇಪಾರ್ಹ ನಡವಳಿಕೆಗಳಲ್ಲಿ, ಆಳುವವರಿಗೆ ಮಣೆ ಹಾಕುವಲ್ಲಿ ಗೋಗೋಯ್ ಅವರು ಮಿಶ್ರ ಅವರನ್ನೂ ಮೀರಿಸಿದ್ದು ಬಲು ದೊಡ್ಡ ವಿಡಂಬನೆ. ಗೋಗೋಯ್ ಮೇಲಿನ ಆಪಾದನೆಗಳು ಮಿಶ್ರ ವಿರುದ್ಧ ಮಾಡಿದ್ದ ಅಪಾದನೆಗಳಿಗಿಂತ ಹೀನ ಸ್ವರೂಪದವು!

ನೋಟು ರದ್ದಿನಂತಹ ವಿವಾದಾತ್ಮಕ ದುರಂತ ಕುರಿತು ಸುಪ್ರೀಮ್ ಕೋರ್ಟು ತುಟಿ ಬಿಚ್ಚಿಲ್ಲ. ಪ್ರಶ್ನಿಸಿದ ಅರ್ಜಿಗಳು ವಿಚಾರಣೆಯ ಬೆಳಕು ಕಾಣದೆ ಕೊಳೆಯುತ್ತಿವೆ. ‘ಎಲೆಕ್ಟೊರಲ್ ಬಾಂಡ್ ಗಳುಬಿಜೆಪಿಯ ಪಾಲಿಗೆ ಅಪಾರ ಚುನಾವಣಾ ನಿಧಿ ಒದಗಿಸುವ ವರವಾಗಿ ಪರಿಣಮಿಸಿವೆ. ಬಾಂಡ್ ಗಳನ್ನು ಪ್ರಶ್ನಿಸಿರುವ ಅರ್ಜಿಗಳಿಗೂ ವಿಚಾರಣೆಯ ಅದೃಷ್ಟ ಒದಗಿಲ್ಲ. ದೇಶದೆಲ್ಲೆಡೆ ಧಾರ್ಮಿಕ ಅಸಹಿಷ್ಣುತೆಯ ವಿಷಗಾಳಿಯನ್ನು ಹಬ್ಬಿಸಿದ ಪೌರತ್ವ ಕಾಯಿದೆ ತಿದ್ದುಪಡಿಯನ್ನು ಮತ್ತು, ಕಾಶ್ಮೀರವನ್ನು ಸಾಮೂಹಿಕ ಸೆರೆಮನೆಯಾಗಿಸಿದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ ಅರ್ಜಿಗಳು ವಿಚಾರಣೆಯೇ ನಡೆಯುತ್ತಿಲ್ಲ. ಭೀಮಾ ಕೋರೇಗಾಂವ್, ಆಧಾರ್ ನಂತಹ ವಿಷಯಗಳಲ್ಲಿ ನ್ಯಾಯಾಲಯದ ತೀರ್ಪು ನಿರಾಶಾದಾಯಕ. ಕರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಏಕಾಏಕಿ ಲಾಕ್ ಡೌನ್ ಘೋಷಿಸಿ ಲಕ್ಷಾಂತರ ಬಡ ಕಾರ್ಮಿಕರು ಸಾವಿರಾರು ಕಿ.ಮೀ.ಗಳ ದೂರವನ್ನು ಕಾಲು ನಡಿಗೆಯಲ್ಲಿ ಸವೆಸಬೇಕಾದ ವಲಸೆಯ ದುರಂತ ಜರುಗಿತು. ಕುರಿತು ಸರ್ಕಾರದ ನೀತಿ ನಿರ್ಧಾರದ ವಿರುದ್ಧ ದನಿ ಎತ್ತಲು ಮೀನ ಮೇಷ ಎಣಿಸಲಾಯಿತು.

ಗೋಗೋಯ್ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಗುಮಾಸ್ತೆಯೊಬ್ಬಾಕೆ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಆಪಾದನೆಯ ವಿಚಾರಣೆಗೆ ಆಪಾದಿತ ಗೋಗೋಯ್ ತಾವೇ ಕುಳಿತುಕೊಳ್ಳುತ್ತಾರೆ. ತಮ್ಮ ನಂತರ ಮುಖ್ಯ ನ್ಯಾಯಮೂರ್ತಿಯ ಸರದಿಯಲ್ಲಿದ್ದ ಶರದ್ ಬೋಬ್ಡೆಯವರ ನೇತೃತ್ವದ ಆಂತರಿಕ ಸಮಿತಿಯನ್ನು ನೇಮಕ ಮಾಡುತ್ತಾರೆ. ಸಮಿತಿ ತಿಪ್ಪೆ ಸಾರಿಸುವ ವರದಿ ನೀಡುತ್ತದೆ. ಮಹಿಳೆಯ ಆಪಾದನೆಯನ್ನು ಕಸದಬುಟ್ಟಿಗೆ ಎಸೆಯುತ್ತದೆ. ಒಂದರ ನಂತರ ಮತ್ತೊಂದರಂತೆ ವಿವಾದಾತ್ಮಕ ಕೇಸುಗಳು ಗೋಗೋಯ್ ನೇತೃತ್ವದ ನ್ಯಾಯಪೀಠದ ಮುಂದೆ ಬರುತ್ತವೆ. ಬಹುತೇಕ ಸರ್ಕಾರದ ಪರವಾಗಿಯೇ ಇತ್ಯರ್ಥವಾಗುತ್ತವೆ. ನಿವೃತ್ತಿಯಾದ ಕೆಲವೇ ದಿನಗಳಲ್ಲಿ ಗೋಗೋಯ್ ಅವರಿಗೆ ರಾಜ್ಯಸಭಾ ಸದಸ್ಯತ್ವದ ಉಡುಗೊರೆ ದೊರೆಯುತ್ತದೆ.

ನಡುವೆ ಲೈಂಗಿಕ ಕಿರುಕುಳದ ಆಪಾದನೆ ಮಾಡಿದ್ದ ಮಹಿಳೆಯನ್ನು ಆಕೆಯ ಪತಿ ಮತ್ತು ಕುಟುಂಬದ ಐವರು ಸದಸ್ಯರನ್ನು ಪೆಗಸಸ್ ಗೂಢಚರ್ಯೆಗೆ ಗುರಿ ಮಾಡಲಾಗುತ್ತದೆ. ನ್ಯಾಯಮೂರ್ತಿಯೊಬ್ಬರ ಹೆಸರೂ ಪೆಗಸಿಸ್ ಗೂಢಚರ್ಯೆಯ ಪಟ್ಟಿಯಲ್ಲಿದೆ. ಪೆಗಸಿಸ್ ದಾಳಿ ತನ್ನನ್ನೂ ಬಿಟ್ಟಿಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಗಮನಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಂಸತ್ತಿನಲ್ಲಿ ಪೆಗಸಿಸ್ ಹಗರಣ ಚರ್ಚೆಯ ಗೋಣು ಮುರಿದ ಆಕ್ರಮಣಕಾರಿ ಮೋದಿ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ರಕ್ಷಣಾತ್ಮಕ ಆಟ ಆಡಿದೆ. ತಾನು ಪೆಗಸಸ್ ಬೇಹುಗಾರಿಕೆ ನಡೆಸಿರುವುದು ನಿಜವೆಂದು ಪರೋಕ್ಷವಾಗಿ ಒಪ್ಪಿಕೊಂಡಿದೆ. ಆದರೆ ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ವಿವರಗಳನ್ನು ಸಾರ್ವಜನಿಕಗೊಳಿಸುವುದು ತರವಲ್ಲವೆಂದು ವಾದಿಸಿದೆ. ವಾದವನ್ನು ನ್ಯಾಯಾಲಯ ತಕ್ಕಮಟ್ಟಿಗೆ ಪುರಸ್ಕರಿಸಿದೆ.

ಮುಂದಿನ ವಾರದ ಪೆಗಸಸ್ ವಿಚಾರಣೆಗೆ ಎಲ್ಲ ಇತಿಹಾಸ ಉಂಟು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಿದೆ.

ಆದರೆ ರಾಷ್ಟ್ರದ ಸುರಕ್ಷತೆಯ ಗುರಾಣಿಯನ್ನು ಅಡ್ಡ ಹಿಡಿದಿರುವ ಕೇಂದ್ರ ಸರ್ಕಾರದ ಆಷಾಡಭೂತಿತನವನ್ನು ಪ್ರಶ್ನಿಸಬೇಕಿದೆ. ಮಿಲಿಟರಿ ಹತಾರು ಎಂದು ವರ್ಗೀಕರಿಸಲಾಗಿರುವ ಪೆಗಸಸ್ ತಂತ್ರಾಂಶದ ಬೇಹುಗಾರಿಕೆಗೆ ಪತ್ರಕರ್ತರು, ರಾಜಕಾರಣಿಗಳು, ಕೇಂದ್ರ ಸರ್ಕಾರದ ಮಂತ್ರಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ಚುನಾವಣಾ ಆಯೋಗದ ಸದಸ್ಯರನ್ನು ಗುರಿಪಡಿಸಲಾಗಿದೆ. ಇವರಿಂದ ಯಾವ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗಿತ್ತು? ಅದೆಂತಹ ಸಾರ್ವಜನಿಕ ಸುರಕ್ಷತೆಗೆ ಅಪಾಯವಿತ್ತು?

ಅಂದಿನ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ವಿರುದ್ಧ ಲೈಂಗಿಕ ಕಿರುಕುಳದ ಆಪಾದನೆ ಮಾಡಿದ್ದ ಅವರ ಕಚೇರಿಯ ಕಿರಿಯ ಗುಮಾಸ್ತೆ, ಆಕೆಯ ಪತಿ ಹಾಗೂ ಆಕೆಯ ಕುಟುಂಬದ ಐದು ಮಂದಿ ಸದಸ್ಯರ ಫೆೀನುಗಳಿಗೆ ಪೆಗಸಿಸ್ ನ್ನು ಹೊಗಿಸಲಾಗಿತ್ತು. ಏಳು ಮಂದಿಯಿಂದ ಯಾವ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ಅಥವಾ ಚೀನಾದ ದುರಾಕ್ರಮಣದ ಅದ್ಯಾವ ವಿವರಗಳು ದೊರೆಯುತ್ತಿದ್ದವು?!

ಖಾಸಗಿತನವನ್ನು ಉಲ್ಲಂಘಿಸಿ ಕಾನೂನುಬಾಹಿರ ಬೇಹುಗಾರಿಕೆಯ ಮೂಲಕ ಸಂಗ್ರಹಿಸಿದ ವಿವರಗಳನ್ನು ಸಂಸ್ಥೆಗಳನ್ನು, ಅವುಗಳ ಪದವಿಗಳಲ್ಲಿ ಕುಳಿತವರನ್ನು ತನ್ನ ಅಗತ್ಯಕ್ಕೆ ಬಾಗಿಸಿಕೊಳ್ಳುವುದನ್ನು ಬಿಟ್ಟರೆ ಸರ್ಕಾರಕ್ಕೆ ಬೇರೆ ಯಾವುದೇ ಉದ್ದೇಶವಿರುವುದು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿಯವರ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ಅವರ ಫೆೀನಿಗೆ ಪೆಗಸಸ್ ಹೊಗುವ ಅರ್ಥವೇನು? ಕೋಮುವಾದದ ದೈತ್ಯ ಧೃವೀಕರಣದ ಜೊತೆ ಜೊತೆಗೆ ಎದುರಾಳಿಯ ವ್ಯೂಹರಚನೆಯನ್ನು ಮುಂದಾಗಿ ಅರಿತು ಪ್ರತಿವ್ಯೂಹ ರಚಿಸುವ ಕೀಳು ಉದ್ದೇಶವಿದ್ದದ್ದು ಸ್ಪಷ್ಟ. ಅದು ನೂರಕ್ಕೆ ನೂರು ಚುನಾವಣೆಯನ್ನು ಕದಿಯುವ, ಜನತಂತ್ರವನ್ನು ಅಪಹರಿಸುವ ಕೃತ್ಯವೇ ವಿನಾ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವುದಲ್ಲ.

ದೇಶದ ಸುರಕ್ಷತೆಭದ್ರತೆಯ ನೆವದಲ್ಲಿ ಅನೇಕ ಅನ್ಯಾಯಗಳು ದಫನಾಗುತ್ತಿವೆ. ಪೆಗಸಿಸ್ ಸರಣಿಗೆ ಸೇರುವುದೇ, ಇಲ್ಲವೇ ಆಳುವವರ ಕೊರಳ ಕುಣಿಕೆಯಾಗಲಿದೆಯೇ? ಕಾದು ನೋಡಬೇಕಿದೆ.

Leave a Reply

Your email address will not be published.