ನ್ಯಾಯಾಧೀಶರ ಆಯ್ಕೆಯ ಹೊಸ ಮಾರ್ಗ ‘ಅಖಿಲ ಭಾರತ ನ್ಯಾಯಾಂಗ ಸೇವೆ’

ಹಲವಾರು ಕಾರಣಗಳಿಂದಾಗಿ ‘ಅಖಿಲ ಭಾರತ ನ್ಯಾಯಾಂಗ ಸೇವೆ’ವಿಚಾರ ನೆನೆಗುದಿಗೆ ಬಿದ್ದಿದೆ. ಯಾಕೆ ಹೀಗಾಯಿತು? ನಮ್ಮ ದೇಶದ ಅಗಾಧವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಬಗೆಯ ಕೇಂದ್ರಿತ ನ್ಯಾಯಾಂಗ ಸೇವೆಯ ಸಾಧಕ ಬಾಧಕಗಳೇನು? ಅದರ ರೂಪರೇಷೆಗಳು ಯಾವ ರೀತಿಯಲ್ಲಿರಬೇಕು?

ಇತ್ತೀಚೆಗೆ ಕೇಂದ್ರ ಸರಕಾರ ‘ಅಖಿಲ ಭಾರತ ನ್ಯಾಯಾಂಗ ಸೇವೆ’ (ಎಐಜೆಎಸ್) ಯನ್ನು 2022ರ ಹೊತ್ತಿಗೆ ಊರ್ಜಿತಗೊಳಿಸುವ ಬಗ್ಗೆ ತನ್ನ ಆಶಯವನ್ನು ವ್ಯಕ್ತಪಡಿಸಿ, ಈ ಕುರಿತಾಗಿ ರಾಜ್ಯ ಸರಕಾರಗಳೊಂದಿಗೆ   ಸಮಾಲೋಚನೆಯನ್ನು ಪ್ರಾರಂಭಿಸಿದೆ.

ಹಾಗೆನೋಡಿದರೆ ಈ ವಿಚಾರ ಹೊಸದೇನಲ್ಲ. ನಮ್ಮ ದೇಶದ ಸಂಸತ್ತು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಬಗೆಯ ನ್ಯಾಯಾಂಗ ಸೇವೆಯ ಬಗ್ಗೆ ಹಲವಾರು ಬಾರಿ ಕಾಲಕಾಲಕ್ಕೂ ತಮ್ಮ ಮತಭೇದಗಳನ್ನು ವ್ಯಕ್ತಪಡಿಸಿವೆ. ಜೊತೆಗೆ, ಈ ನ್ಯಾಯಾಂಗ ಸೇವೆಯನ್ನು ಊರ್ಜಿತಗೊಳಿಸಲು ಬೇಕಾದ ಸಂವಿಧಾನದ ತಿದ್ದುಪಡಿಯನ್ನು ಮಾಡಿವೆ. ಆದರೆ ಹಲವಾರು ಸಂವಿಧಾನಾತ್ಮಕ, ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಈ ನ್ಯಾಯಾಂಗ ಸೇವೆಯ ವಿಚಾರ ನೆನೆಗುದಿಗೆ ಬಿದ್ದಿದೆ. ಯಾಕೆ ಹೀಗಾಯಿತು? ನಮ್ಮ ದೇಶದ ಅಗಾಧವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಈ ಬಗೆಯ ಕೇಂದ್ರಿತ ನ್ಯಾಯಾಂಗ ಸೇವೆಯ ಸಾಧಕ ಬಾಧಕಗಳೇನು? ಅದರ ರೂಪರೇಷೆಗಳು ಯಾವ ತೆರನಲ್ಲಿರಬೇಕು?

ಈ ಪ್ರಶ್ನೆಗಳಿಗೆ ಸುಲಭವಾದ ಉತ್ತರಗಳಿಲ್ಲ. ಕಳೆದ ಆರು ದಶಕಗಳಲ್ಲಿ ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊAಡು ಕಾನೂನು ಆಯೋಗಗಳು, ಕೇಂದ್ರ ಕಾನೂನು ಸಚಿವರು ಮತ್ತು ಉಚ್ಚ-ಸರ್ವೋಚ್ಚ ನ್ಯಾಯಾಲಗಳು ತಮ್ಮ ವಿಚಾರಗಳನ್ನು ನ್ಯಾಯಾಂಗ ಸೇವೆಯ ಕುರಿತಾಗಿ  ಕಾಲಕಾಲಕ್ಕೂ ಮಂಡಿಸಿವೆ. ಕೇಂದ್ರ ಸರಕಾರ ಮತ್ತೊಮ್ಮೆ ಈ ವಿಚಾರವನ್ನು ಕಾರ್ಯಗತಗೊಳಿಸಲು ಮುಂದಾಗಿರುವುದು ಈ ಸೇವೆಯ ಕುರಿತಾದ ಹಲವಾರು ನಮ್ಮ ದೇಶದ ವಿಶಿಷ್ಟ ಸಂದರ್ಭಗಳ ಅರಿವಿಗೆ ನಿಲುಕಬೇಕಾದಂತಹ ಸಮಸ್ಯೆಗಳನ್ನು ಚರ್ಚೆಗೆ ಒಳಪಡಿಸಿದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸಿಕೊಂಡು ಬರುತ್ತಿರುವ ಮತ್ತು ನಮಗೆ ವಸಾಹತುಶಾಹಿಯ ಬಳುವಳಿಯಾಗಿ ಬಂದಿರುವ ‘ಅಖಿಲ ಭಾರತ ಆಡಳಿತ ಸೇವೆ’ ಎಂಬುದು ನಮ್ಮ ದೇಶವನ್ನು ಒಟ್ಟಾರೆ ಹಿಡಿದಿಡುವ ನಿಟ್ಟಿನಲ್ಲಿ ಆಡಳಿತದ ಬೆನ್ನೆಲುಬು, ಉಕ್ಕಿನ ಚೌಕಟ್ಟು ಎಂಬೆಲ್ಲ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಮಾದರಿಯಲ್ಲಿ ನ್ಯಾಯಾಂಗ ಸೇವೆಯನ್ನೂ ರೂಪಿಸುವುದರ ಬಗ್ಗೆ 1958ರಲ್ಲೇ ಹದಿನಾಲ್ಕನೆಯ ಭಾರತೀಯ ಕಾನೂನು ಆಯೋಗ ತನ್ನ ಶಿಪಾರಸ್ಸು ನೀಡಿತ್ತು. ಆದರೆ, ಆಗಿನ ಮತ್ತು ನಂತರದ ಸರಕಾರಗಳು ಇದಕ್ಕೆ ಅನುಮೋದನೆ ನೀಡಲಿಲ್ಲ. ಆದರೆ ಈ ಬಗೆಯ ಅಖಿಲ ಭಾರತ ಮಟ್ಟದ ನ್ಯಾಯಾಂಗ ಸೇವೆಯ ಆಶಯ ಕೇಂದ್ರ ಸರಕಾರದ ಗಮನದ ಪರಿಧಿಯಿಂದ ಪೂರಾ ಹೊರಬರಲಿಲ್ಲ.

ಏತನ್ಮಧ್ಯದಲ್ಲಿ ಬಂದ 1975ರ ತುರ್ತು ಪರಿಸ್ಥಿತಿ ಮತ್ತು ಆಗ ಸಂಸತ್ತು ಅನುಮೋದಿಸಿದ ವಿವಾದಾಸ್ಪದ 42ನೆಯ ಸಂವಿಧಾನ ತಿದ್ದುಪಡಿಯ ಹಲವಾರು ಎಳೆಗಳಲ್ಲಿ ಈ ನ್ಯಾಯಾಂಗ ಸೇವೆಯನ್ನು ಅನುಚ್ಚೇದ 312ರ ಪ್ರಕಾರ ಸಂಸತ್ತಿನ ರಾಜ್ಯಸಭೆಯ ಸರಳ ಬಹುಮತದೊಂದಿಗೆ ಊರ್ಜಿತಗೊಳಿಸಬಹುದು ಎಂಬುದನ್ನೂ ಸೇರಿಸಲಾಯಿತು. ಇದಕ್ಕೆ ಬೇಕಾದ ಸಂವಿಧಾನದ ಆರನೇ ಅಧ್ಯಾಯವನ್ನು (ಅನುಚ್ಚೇದ 233 ರಿಂದ 236 ರವರೆಗೆ) ಬದಲಾಯಿಸಬಹುದೆಂಬುದನ್ನೂ ಈ 42ನೇ ತಿದ್ದುಪಡಿಯಲ್ಲಿ ಸೇರಿಸಲಾಯಿತು. ನಂತರದಲ್ಲಿ ಬಂದ ಜನತಾ ಸರಕಾರ ತಂದ 44ನೇ ತಿದ್ದುಪಡಿ ಈ 42ನೆಯ ತಿದ್ದುಪಡಿಯ ಹಲವಾರು ಅಂಶಗಳನ್ನು ಅನೂರ್ಜಿತಗೊಳಿಸಿದರೂ, ಈ ನ್ಯಾಯಾಂಗ ಸೇವೆಯ ಕುರಿತಾದ ತಿದ್ದುಪಡಿಯನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ.

ಹೀಗಾಗಿ ಈಗಿನ ಮತ್ತು ಮುಂಬರುವ ಎಲ್ಲ ಸರಕಾರಗಳಿಗೂ ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ಬೇಕಾದರೆ ಪ್ರಾರಂಭಿಸುವ ಸಾಧ್ಯತೆಗಳ ಬಾಗಿಲನ್ನು ತೆರೆದಿಟ್ಟಂತಾಗಿದೆ. ಈ ಬಾಗಿಲಿನ ಮೂಲಕವೇ ಈಗಿನ ಸರಕಾರ ತನ್ನ ಈ ನಿರ್ಧಾರದ ಮೊದಲ ಹೆಜ್ಜೆಯನ್ನಿಟ್ಟಿದೆಯೆಂದರೆ ತಪ್ಪಾಗಲಿಕ್ಕಿಲ್ಲ. ಮತ್ತೆ 1986ರಲ್ಲಿ ಭಾರತೀಯ ಕಾನೂನು ಆಯೋಗ ಈ ನ್ಯಾಯಾಂಗ ಸೇವೆಯ ವಿಚಾರದ ಕುರಿತಾಗಿ ಮತ್ತೊಂದು ವಿವರವಾದ ವರದಿಯನ್ನು ನೀಡಿತ್ತು. ಈ ವರದಿಗಳನ್ನು ನಂತರದ ಸರಕಾರಗಳು ಗಮನಿಸಿದರೂ ಅದರ ಕುರಿತಾಗಿ ಯಾವುದೇ ಸ್ಪಷ್ಟವಾದ ಕ್ರಮವನ್ನು ಕೈಗೊಳ್ಳಲಿಲ್ಲ.

ನಮ್ಮ ಸಂವಿಧಾನ ನಿಗದಿಪಡಿಸುವ ಕೇಂದ್ರ-ರಾಜ್ಯ ಕ್ಯಾರ್ಯಾಂಗಗಳ ಅಧಿಕಾರಗಳ ವ್ಯಾಪ್ತಿಯನ್ನು ನಾವು ಗಮನಿಸಬೇಕು. ಈ ಪರಿಧಿಯಲ್ಲಿ, ಮೇಲೆ ಹೇಳಿದಂತೆ, ಅನುಚ್ಚೇದ 233 ರಿಂದ 236 ರವರೆಗೆ ರಾಜ್ಯಗಳ ಅಡಿಯಲ್ಲಿ ಬರುವ ಜಿಲ್ಲಾ ನ್ಯಾಯಾಧೀಶರ ನೇಮಕಾತಿಯ ವಿವರಗಳಿವೆ. ಈ ಜಿಲ್ಲಾ ನ್ಯಾಯಾಧೀಶರ ಮತ್ತು ಅವರಡಿಯಲ್ಲಿ ಬರುವ ಇತರ ಕಿರಿಯ ನ್ಯಾಯಧೀಶರ ನೇಮಕಾತಿಯನ್ನು ರಾಜ್ಯಪಾಲರು ರಾಜ್ಯ  ಸರಕಾರಗಳ ಸಲಹೆಯ ಮೇರೆಗೆ ಮಾಡುವ ಬಗ್ಗೆ ವಿವರಗಳಿವೆ. ಸಂವಿಧಾನದ ಪ್ರಕಾರ ಜಿಲ್ಲಾ ನ್ಯಾಯಾಧೀಶರ ಮತ್ತು ಅವರ ಕೆಳಗಿನ ಎಲ್ಲ ನ್ಯಾಯಪಾಲಿಕೆಗಳ ನೇಮಕಾತಿ ಆಯಾಯಾ ರಾಜ್ಯ ಸರಕಾರಗಳ ಹೊಣೆಯಾಗಿರುತ್ತದೆ. ಆದರೆ, ಸಂವಿಧಾನದ 42ನೆಯ ತಿದ್ದುಪಡಿಯ ನಂತರ ಅನುಚ್ಚೇದ 246ರ 7ನೇ ಶೆಡ್ಯೂಲ್ ಪ್ರಕಾರ `ರಾಜ್ಯ’ ದ ಪಟ್ಟಿಯಲ್ಲಿದ್ದ ಈ ನೇಮಕಾತಿ ವಿವರಗಳು ಈಗ  `ಕನ್ಕರೆಂಟ್’ ಪಟ್ಟಿಗೆ ಸೇರ್ಪಡೆಯಾಗಿವೆ. ಹೀಗಾಗಿ ಕೇಂದ್ರ ಸರಕಾರ ನ್ಯಾಯಾಂಗದ ಈ ಕೊನೆಯ ಘಟ್ಟದ ನೇಮಕಾತಿಯತ್ತ ತನ್ನ ದೃಷ್ಟಿ ಹರಿಸುವುದಕ್ಕೆ ಯಾವುದೇ ಸಂವಿಧಾನಾತ್ಮಕವಾದ ಅಥವಾ ಕಾನೂನಿನ ಅಡೆತಡೆಗಳಿಲ್ಲ.

ಉಚ್ಚ ಹಾಗೂ ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ನೇಮಕಾತಿ ಮತ್ತು ಅವರ ಅಧಿಕಾರಗಳ ಇತಿಮಿತಿಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದನ್ನು ಕೇಂದ್ರ ಸರಕಾರವು ಸರ್ವೂಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ತನ್ನ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಈ ಕುರಿತಾಗಿ ಯಾವ ಬಗೆಯ ಗೊಂದಲಗಳಿಲ್ಲ. ಉಚ್ಚ ಮತ್ತು ಸರ್ವೂಚ್ಚ ನ್ಯಾಯಾಲಯದ ನೇಮಕಾತಿಗಳು  ಸನ್ಮಾನ್ಯ ರಾಷ್ಟçಪತಿಗಳ ಆದೇಶಾನುಸಾರ ನಡೆಯುತ್ತವೆ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು.

ಈಗಿರುವ ಪರಂಪರೆಯ ಪ್ರಕಾರ ಜಿಲ್ಲಾ ನ್ಯಾಯಾಧೀಶರುಗಳು ಮತ್ತು ಅವರ ಕೆಳಗೆ ಬರುವ ಎಲ್ಲ ನ್ಯಾಯಾಂಗಳ ನೇಮಕಾತಿಗಳನ್ನು ಆಯಾಯಾ ರಾಜ್ಯದ ಸರಕಾರಗಳು ತಮ್ಮ ಉಚ್ಚ ನ್ಯಾಯಾಲಯದೊಂದಿಗೆ ಉಚಿತವಾದ ಸಮಾಲೋಚನೆ ನಡೆಸಿದ ನಂತರವೇ ಮಾಡುತ್ತಿವೆ. ಈ ನೇಮಕಾತಿಗೆ ಬೇಕಾದ ಕಾನೂನು ಕಟ್ಟಲೆಗಳನ್ನು ಎಲ್ಲ ರಾಜ್ಯ ಸರಕಾರಗಳು ತಮ್ಮ ಪ್ರಾದೇಶಿಕ ಅವಶ್ಯಕತೆಗಳನುಗುಣವಾಗಿ ರೂಪಿಸಿಕೊಂಡಿವೆ. ಕೆಲ ರಾಜ್ಯಗಳು, ಮುಖ್ಯವಾಗಿ ಉತ್ತರಪೂರ್ವ ರಾಜ್ಯಗಳು, ಹಿಂದುಳಿದ ಮತ್ತು ಆದಿವಾಸಿ ಜನಾಂಗದವರಿಗೆ ನೇಮಕಾತಿಯಲ್ಲಿ ಹೆಚ್ಚಿನ ಪ್ರಾಶಸ್ತ÷್ಯ ನೀಡಿದ್ದರೆ, ಕೆಲ ರಾಜ್ಯಗಳು ಮಹಿಳೆಯರಿಗೆ ಶೇಕಡಾ ಮೂವತ್ತಕ್ಕೂ ಹೆಚ್ಚಿನ ಜಾಗೆಗಳನ್ನು ನೀಡಿವೆ.

ಇನ್ನೂ ಮುಖ್ಯವಾಗಿ, ಹೆಚ್ಚಿನ ರಾಜ್ಯಗಳು ಈ ಎಲ್ಲ ನೇಮಕಾತಿಗಳಲ್ಲಿ ತಮ್ಮ ಸ್ಥಾನೀಯ ಭಾಷೆ, ಸಂಸ್ಕçತಿ ಮತ್ತು ಸಂಪ್ರದಾಯಗಳನ್ನು ಅರಿತವರಿಗೆ ಹೆಚ್ಚಿನ ಪ್ರಾಶಸ್ತ÷್ಯ ನೀಡುವ ಬಗ್ಗೆ ಕಾಳಜಿ ತೋರಿಸಿವೆ. ಇದಕ್ಕಿರುವ ಕಾರಣಗಳನ್ನೂ ನಾವು ಗಮನಿಸಬೇಕು. ಈ ಕೆಳಸ್ತರದ ನ್ಯಾಯಪಾಲಿಕೆಗಳು ಆಯಾಯಾ ರಾಜ್ಯಗಳಲ್ಲಿರುವ ಎಲ್ಲ ಸ್ತರಗಳ ಜನಸಮುದಾಯಗಳನ್ನು ಮೊದಲ ಬಾರಿಗೆ ತಟ್ಟುವ, ಮಾತನಾಡಿಸುವ ಕೆಲಸವನ್ನು ಮಾಡುವಂತವು. ಹೀಗಾಗಿ ಇಲ್ಲಿ ನೇಮಕಾತಿ ಹೊಂದುವ ನ್ಯಾಯಮೂರ್ತಿಗಳಿಗೆ ಸ್ಥಳೀಯ ಭಾಷೆ, ಸಂಸ್ಕತಿ ಮತ್ತು ಸಭ್ಯತೆಯ ಅರಿವಿರುವುದು ಅತ್ಯಂತ ಅಗತ್ಯವಾಗಿದೆ. ಈ ಬಗೆಯ ಎಲ್ಲ ಅಗತ್ಯತೆಗಳನ್ನು ಈಗಿರುವ ರಾಜ್ಯ ಮಟ್ಟದ ನೇಮಕಾತಿ ನಿಯಮಗಳು ಪೂರೈಸುತ್ತವೆ ಎಂಬುದನ್ನು ನಾವು ಗಮನಿಸಬೇಕು.

ನ್ಯಾಯಾಂಗದ ಈ ಕೊನೆಯ ಘಟ್ಟದ ನೇಮಕಾತಿಗಳನ್ನು ಅಖಿಲ ಭಾರತ ನ್ಯಾಯಾಂಗ ಸೇವೆಯಡಿ ತರುವ ಬಗ್ಗೆ ಸರಕಾರಕ್ಕಿರುವ ಕಾರಣ ಮತ್ತು ಕಾಳಜಿಗಳೇನು ಎಂಬುದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಇದರಲ್ಲಿ ಮೊದಲನೆಯದು, ನ್ಯಾಯಾಂಗ ಎದುರಿಸುತ್ತಿರುವ ಇನ್ನೂ ಇತ್ಯರ್ಥ ವಾಗದೆ ಉಳಿದಿರುವ ಸುಮಾರು ಎರಡು ಕೋಟಿಗೂ ಮೀರಿ ಇರುವ ಮೊಕದ್ದಮೆಗಳೆಂದು ಹೇಳಲಾಗುತ್ತಿದೆ.  ಇನ್ನೂ ಮುಖ್ಯವಾಗಿ ಹಲವಾರು ರಾಜ್ಯಗಳು ಈ ಕೆಳಸ್ತರದ ನ್ಯಾಯಪಾಲಿಕೆಗಳಿಗೆ ಬೇಕಾದ ನ್ಯಾಯಾಧೀಶರುಗಳನ್ನು ನೇಮಕಾತಿ ಇಂದಿಗೂ ಮಾಡದೆ ಇರುವುದು. ಒಂದು ಅಂದಾಜಿನ ಪ್ರಕಾರ ಸುಮಾರು 5000 ತಳಮಟ್ಟದ ನ್ಯಾಯಧೀಶರ ಹುದ್ದೆಗಳು ರಾಜ್ಯಗಳಲ್ಲಿ ಇನ್ನೂ ಭರ್ತಿಯಾಗಿಲ್ಲ.

ಇದರಿಂದಾಗಿ ನ್ಯಾಯಪಾಲಿಕೆಯ ಮೂಲಭೂತ ಉದ್ದೇಶವಾದ ನಿಗಧಿತ ವೇಳಾಪಟ್ಟಿಯ ನ್ಯಾಯಪಾಲನೆಗೆ ಧಕ್ಕೆಯುಂಟಾಗಿದೆ. ಇದರಿಂದಾಗಿ ನ್ಯಾಯಾಲಯದ ಕಟ್ಟೆ ಹತ್ತಿದವರಿಗೆ ಕೊನೆಯ ತೀರ್ಪಿಗಾಗಿ ಹತ್ತಾರು ವರ್ಷಗಳ ಕಾಲ ಕಾಯುವ ಪ್ರಸಂಗ. ಇದು ಒಂದು ಬಗೆಯಲ್ಲಿ ನ್ಯಾಯಾಂಗ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲು. ಈ ಸವಾಲಿಗೆ ಉತ್ತರವಾಗಿ ಮತ್ತು ಈ ಎಲ್ಲ ಮೊಕದ್ದಮೆಗಳನ್ನು ನಿರ್ಧಿಷ್ಟ ಕಾಲಾವಧಿಯಲ್ಲಿ ಬಗೆ ಹರಿಸಲು ಜಿಲ್ಲಾ ಮತ್ತು ಕೆಳಗಿನ ಸ್ತರದ ಎಲ್ಲ ನ್ಯಾಯಾಲಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದು.  ಇದನ್ನು ಅಖಿಲ ಭಾರತ ನ್ಯಾಯಾಂಗ ಸೇವೆಯ ಅಡಿಯಲ್ಲಿ ತಂದರೆ ಈ ಎಲ್ಲ ಹುದ್ದೆಗಳಿಗೆ ದೇಶದ ಪ್ರತಿಭಾಶಾಲಿಗಳು ಬರುವಂತಾಗಬಹುದು. ಯಾಕೆಂದರೆ, ಈ ಅಖಿಲ ಭಾರತ ಸೇವೆ ಈ ಹುದ್ದೆಗಳಿಗೆ ನೇಮಕಾತಿ ಹೊಂದುವವರಿಗೆ ಹೆಚ್ಚಿನ ಹಣಕಾಸಿನ ಮತ್ತು ಇತರ ಹಲವಾರು ಸವಲತ್ತುಗಳನ್ನು ನೀಡುತ್ತದೆ. ಈ ನೇಮಕಾತಿಗಳಲ್ಲಿ ನಡೆಯುತ್ತಿವೆ ಎನ್ನಲಾದ ಹಲವಾರು ಭ್ರಷ್ಟ ಸಂಕಷ್ಟಗಳು ದೂರವಾಗಬಹುದು.

ಆದರೆ, ಈ ಮೇಲಿನ ಎಲ್ಲ ವಾದಗಳಲ್ಲಿ ಹುರುಳಿಲ್ಲವೆಂಬುದು ಲಭ್ಯವಿರುವ ಅಂಕಿ-ಅಶಗಳಿದ ಸಾಭೀತಾಗುತ್ತದೆ. ಈ 5000 ಗಳಷ್ಟು ಖಾಲಿಯಿರುವ ಹುದ್ದೆಗಳ ಸಿಂಹಪಾಲು ಉತ್ತರದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಗುಜರಾತ ಮತ್ತು ಮಧ್ಯಪ್ರದೇಶಗಳಲ್ಲಿದೆ. ದಕ್ಷಿಣದ ಮತ್ತು ಉತ್ತರಪೂರ್ವ ರಾಜ್ಯಗಳು ಈ ಎಲ್ಲ ಕೆಳಸ್ತರದ ಹುದ್ದೆಗಳನ್ನು ಹೆಚ್ಚುಕಡಿಮೆ ಪೂರ್ತಿಯಾಗಿ ತುಂಬಿವೆ. ಇನ್ನೂ ಮುಖ್ಯವಾಗಿ ದಕ್ಷಿಣದ ಮತ್ತು ಉತ್ತರಪೂರ್ವ ರಾಜ್ಯಗಳು ತಮ್ಮ ಹುದ್ದೆಯ ನೇಮಕಾತಿಯಲ್ಲಿ  ತಮ್ಮ ರಾಜ್ಯದವರಿಗೆ ಮತ್ತು ತಮ್ಮ ಸ್ಥಾನೀಯ ಭಾಷೆಯನ್ನು ಬಲ್ಲವರಿಗೆ ಮೊದಲ ಆದ್ಯತೆ ನೀಡಿವೆ. ಸರಕಾರದ ನಿಯಮಗಳ ಪ್ರಕಾರವೇ ಎಲ್ಲ ವರ್ಗದವರಿಗೆ ಅರಕ್ಷಣೆಯನ್ನು ನೀಡಿವೆ. ಇನ್ನೂ ಒಂದು ಸಮಸ್ಯೆಯೆಂದರೆ, ಈ ಅರಕ್ಷಣೆಯ ನಕ್ಷೆಯೆಂಬುದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಬೇರೆಬೇರೆಯಾಗುತ್ತದೆ. ಅಂದರೆ, ಕೇಂದ್ರ ಸರಕಾರ ನೀಡುವ ಅರಕ್ಷಣೆಯನ್ನು ಪಡೆಯುವ ಸಮುದಾಯಗಳು ರಾಜ್ಯ ಸರಕಾರಗಳಲ್ಲಿ ಬೇರೆಬೇರೆಯಾಗಿರುತ್ತವೆ. ಹೀಗಾಗಿ ರಾಜ್ಯ ಸರಕಾರಗಳು ಮತ್ತು ಅಲ್ಲಿನ ಹಲವಾರು ಜನಸಮುದಾಯಗಳು ಈ ಅಖಿಲ ಭಾರತ ನ್ಯಾಯಾಂಗ ಸೇವೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಿಲ್ಲ.

ನ್ಯಾಯಾಂಗ ಸೇವೆಯ ಕಾರ್ಯದ ಪರಿಧಿ ಆಡಳಿತ ಸೇವೆಯ ಕಾರ್ಯದ ಪರಿಧಿಗಿಂತ ಭಿನ್ನವಾದದ್ದೆಂಬುದನ್ನು ನಾವು ಗಮನಿಸಬೇಕು. ನ್ಯಾಯಾಂಗದ ಸೇವೆ, ಅದರಲ್ಲೂ ತಳಮಟ್ಟದ ನ್ಯಾಯಾಂಗ ಸೇವೆಯಲ್ಲಿರುವವರಿಗೆ ಸ್ಥಾನೀಯ ಭಾಷೆ ಮತ್ತು ಸಂಸ್ಕೃತಿಯ ಅರಿವಿರುವುದು ಅನಿವಾರ್ಯವಾಗುತ್ತದೆ. ಅದಿರದಿದ್ದರೆ, ಒಂದು ಪ್ರದೇಶದ ರೀತಿರಿವಾಜುಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಅಸಾಧ್ಯವಾಗುತ್ತದೆ.

ಆಡಳಿತ ಸೇವೆಯಲ್ಲಿರುವವರು ಈ ಬಗೆಯ ಕಾನೂನಿನ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಕಾನೂನಿನ ರೀತ್ಯಾ ಆಡಳಿತವನ್ನು ನಡೆಸುವುದಷ್ಟೇ ಅವರ ಕೆಲಸ. ತಳಮಟ್ಟದ ನ್ಯಾಯಾಂಗದ ನ್ಯಾಯಧೀಶರು ಜಿಲ್ಲಾ, ತಾಲೂಕು ಮತ್ತು ಹೋಬಳಿಗಳಲ್ಲಿ ಎದುರಿಸಬೇಕಾದ ಸವಾಲುಗಳು ಬರೀ ಕಾನೂನಿನದ್ದಷ್ಟೇ ಅಲ್ಲ, ಅದು ಕಾನೂನನ್ನು ಅರಿತುಕೊಂಡು ಅದರ ವಿವರಗಳನ್ನು ಮತ್ತು ವಿವರಣೆಗಳನ್ನು ಜನರಿಗೆ ತಿಳಿಯುವ ರೀತಿಯಲ್ಲಿ ತಲುಪಿಸುವ ಕೆಲಸವೂ ಸಹ ಅವರದ್ದಾಗಿರುತ್ತದೆ. ‘ಅಖಿಲ ಭಾರತ ನ್ಯಾಯಾಂಗ ಸೇವೆ’ಯಿಂದ ಆಯ್ಕೆಯಾಗಿ ಬರುವವರು ಕಾನೂನಿನಲ್ಲಿ ವಿಶೇಷ ಪರಿಣತಿಯನ್ನು ಪಡೆದಿರಬಹುದಾದರೂ ಸ್ಥಾನೀಯ ಭಾಷೆಯ ಮತ್ತು ಸಂಸ್ಕೃತಿಯ ಅರಿವಿಲ್ಲದಿರುವುದರಿಂದ ಅವರು ತಮ್ಮ ತೀರ್ಪುಗಳಲ್ಲಿ ಕೆಳಸ್ತರದ ವಾಸ್ತವಿಕತೆಯನ್ನು ಸಂಪೂರ್ಣವಾಗಿ ಬಿಂಬಿಸಲು ಅಸಮರ್ಥರಾಗಿರುತ್ತಾರೆ.

ಭಾರತದ ವಿವಿಧ ಭಾಗಗಳಿಂದ ಬಂದ ಅಖಿಲ ಭಾರತ ಸೇವೆಯವರು ತಮ್ಮ ಕಾರ್ಯ ನಿರ್ವಹಣೆಗೆ ಬೇಕಾದಷ್ಟು ಸ್ಥಾನೀಯ ಭಾಷೆಯನ್ನು ಕಲಿತರೂ ಅವರಿಗೆ ಅಲ್ಲಿನ ಸಂಸ್ಕೃತಿಯ ಅರಿವು ಮತ್ತು ಸೊಗಡು ಇರುವುದಿಲ್ಲ. ಅಲ್ಲದೆ ಈ ಕೆಳಸ್ತರದ ನ್ಯಾಯಪಾಲಿಕೆಗಳು ಯಾವುದೇ ಮೊಕದ್ದಮೆಯ (ಸಿವಿಲ್ ಅಥವಾ ಕ್ರಿಮಿನಲ್) ಪೂರಾ ವಿವರಗಳನ್ನು ದಾಖಲಿಸುವ ಮೊದಲ ಮೆಟ್ಟಿಲಾಗಿರುತ್ತದೆ. ಈ ಮೊದಲ ದಾಖಲೆಗಳನ್ನು ಮುಂದೆ ಉಚ್ಚ ಮತ್ತು ಸರ್ವೊಚ್ಚ ನ್ಯಾಯಾಲಯಗಳು ತಮ್ಮ ತೀರ್ಪಿನಲ್ಲಿ ಬಳಸಿಕೊಳ್ಳುವುದರಿಂದ ಈ ಬಗೆಯ ಸ್ಥಾನೀಯ ಅರಿವು ತುಂಬಾ ಮುಖ್ಯವಾಗುತ್ತದೆ.

ಮೇಲಿನ ಎಲ್ಲ ಕಾರಣಗಳಿಗಾಗಿ ‘ಅಖಿಲ ಭಾರತ ನ್ಯಾಯಾಂಗ ಸೇವೆ’ಯನ್ನು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ವಿರೋಧಿಸುತ್ತಿವೆ. ಹೆಚ್ಚಿನ ಹಿಂದಿ ಭಾಷಾ ರಾಜ್ಯಗಳು ಇದನ್ನು ಬೆಂಬಲಿಸುವ ಕಾರಣಗಳು ಮೇಲೆ ನಮೂದಿಸಿದ ಎಲ್ಲ ಅಂಶಗಳಿಗಾಗಿ ಅಲ್ಲವೆಂಬುದು ಒಂದು ವಿಪರ್ಯಾಸ. ಹೆಚ್ಚಿನ ಹಿಂದಿ ಮಾತನಾಡುವ ರಾಜ್ಯಗಳು ಕೆಳಸ್ತರದ ನ್ಯಾಯಾಂಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿವೆಯೆಂಬುದು ಹಲವಾರು ಅಧ್ಯಯನಗಳ ಮೂಲಕ ಸಾಬೀತಾಗಿದೆ.

ಹೀಗಾಗದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೊತೆಜೊತೆಯಾಗಿ ನಮ್ಮ ರಾಷ್ಟçದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಬಲ್ಲ ಈ ಕೆಳಸ್ತರದ ನ್ಯಾಯಾಂಗಗಳಿಗೆ ಬೇಕಾದ ಸವಲತ್ತುಗಳ ಜೊತೆಗೆ ಅದರ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ರೀತಿಯ ಅಖಿಲ ಭಾರತ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಬೇಕು. ಅದು ಸಾಧ್ಯವಾಗದಿದ್ದರೆ, ಈಗಿರುವ ರಾಜ್ಯ ಮಟ್ಟದ ನ್ಯಾಯಂಗ ಸೇವೆಗಳನ್ನು ಹಾಗೆಯೆ ಇರಿಸಿಕೊಂಡು, ಅದನ್ನು ಮತ್ತಷ್ಟು ಬಲಪಡಿಸುವ ಕೆಲಸ ತ್ವರಿತವಾಗಿ ಆಗಬೇಕು.

*ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು.

Leave a Reply

Your email address will not be published.