ನ್ಯಾಯಾಲಯಗಳ ಕಲಾಪಗಳನ್ನು ವಿಡಿಯೋ ಪ್ರಸಾರ ಮಾಡಲು ತಡವೇತಕೆ?

ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಭಾರತೀಯ ನ್ಯಾಯಾಂಗವು ಈವರೆಗೆ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿರುವ ಕಲಾಪಗಳ ವಿಡಿಯೋ ಚಿತ್ರೀಕರಣ ಮತ್ತು ಸಾರ್ವಜನಿಕ ಪ್ರಸಾರವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ.

ನಾನು 2008ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಲಿಖಿತ ಮನವಿಯೊಂದನ್ನು ಮಾಡಿದ್ದೆ. ಅದು ಬಹಳ ಸರಳ ಮತ್ತು ಸಾಧಾರಣ ಮನವಿ. ಕೆಲವು ಪತ್ರಿಕೆಗಳಲ್ಲೂ ಆ ಮನವಿಯ ಬಗ್ಗೆ ವರದಿ ಮಾಡಲಾಯಿತು. ಅದೇ ವರ್ಷ ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಅಂತಹುದೇ ಮನವಿಯನ್ನು ಮಾಡಿದೆ. ಸುಮಾರು 12 ವರ್ಷಗಳ ನಂತರವೂ ಆ ಮನವಿ ಕೇವಲ ಕಡತದಲ್ಲೇ ಉಳಿದಿದೆ.

ನಮ್ಮ ನ್ಯಾಯಾಲಯಗಳ ಕಲಾಪಗಳನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಪ್ರಕರಣಕ್ಕೆ ಸಂಬAಧಪಟ್ಟ ಕಕ್ಷಿದಾರರು ಮತ್ತು ನ್ಯಾಯವಾದಿಗಳಿಗೆ ಚಿತ್ರೀಕರಿಸಿದ ವಿಡಿಯೋವನ್ನು ನೀಡಬೇಕೆಂಬುದು ಆ ಮನವಿಯ ಸಾರ. ಇದನ್ನು  2002 ದಿಂದಲೂ ನಾನು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಾ ಬಂದಿದ್ದೇನೆ. ಸಣ್ಣಪುಟ್ಟ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಸಾರ್ವಜನಿಕ ವೀಕ್ಷಣೆಗಾಗಿ ಪ್ರಸಾರ ಮಾಡಬೇಕೆಂದು ನಾನು ಹೇಳುತ್ತಲೇ ಬಂದಿದ್ದೇನೆ. ಹಲವು ದಶಕಗಳ ಹಿಂದೆ ಧ್ವನಿ ಮತ್ತು ದೃಶ್ಯಗಳನ್ನು ಸೆರೆಹಿಡಿಯುವ ತಂತ್ರಜ್ಞಾನವು ಸಮರ್ಪಕವಾಗಿ ಬೆಳೆದುನಿಂತ ಬೆನ್ನಲ್ಲೇ ಪ್ರಜಾಪ್ರಭುತ್ವವಿರುವ ಅನೇಕ ರಾಷ್ಟ್ರಗಳು ತಮ್ಮ ನ್ಯಾಯಾಂಗದ ಕಲಾಪಗಳನ್ನು ಚಿತ್ರೀಕರಿಸಿ ಸಾರ್ವಜನಿಕ ವೀಕ್ಷಣೆಗೆ ನೀಡುತ್ತಲೇ ಬಂದಿವೆ.

ಭಾರತದ ನ್ಯಾಯಾಲಯಗಳು ಮಾತ್ರ ತಮ್ಮ ಕಲಾಪಗಳ ಚಿತ್ರೀಕರಣಕ್ಕೆ ನಿರರ್ಥಕ ಪ್ರತಿರೋಧ ಒಡ್ಡುತ್ತಲೇ ಬಂದಿದ್ದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ನ್ಯಾಯಾಲಯಗಳ ಆ ಪ್ರತಿರೋಧವನ್ನು ಕಡಿಮೆ ಮಾಡುವ ಇಂಗಿತದಿಂದ ತಮ್ಮ ಕಲಾಪಗಳ ಧ್ವನಿಮುದ್ರಣಕ್ಕೆ ಅವಕಾಶ ಕೇಳಿದರೆ ನ್ಯಾಯಾಲಯವು ಸಕಾರಾತ್ಮಕವಾಗಿ ಸ್ಪಂದಿಸಬಹುದೆಂಬ ಕುತೂಹಲದಿಂದ 2003 ರಲ್ಲಿ ನನ್ನ ಮನವಿಯನ್ನು ಕರ್ನಾಟಕ ಮತ್ತು ದೆಹಲಿಯ ಉಚ್ಚ ನ್ಯಾಯಾಲಯದ ಮುಂದಿಟ್ಟಿದ್ದೆ. ಆ ನ್ಯಾಯಾಲಯಗಳಲ್ಲಿ ನಾನು ವಾದ ಮಂಡಿಸುವ ನನ್ನ ಪ್ರಕರಣಗಳ ಧ್ವನಿ ಮುದ್ರಣಕ್ಕೆ ಅನುಮತಿಯನ್ನು ನಿರಾಕರಿಸಬಾರದಾಗಿ ನಾನು ಮನವಿ ಮಾಡಿದ್ದೆ. ಧ್ವನಿ ಮುದ್ರಣವನ್ನು ಕಲಾಪಕ್ಕೆ ಯಾವುದೇ ಅಡಚಣೆಯಿಲ್ಲದೆ ನನ್ನ ಖರ್ಚಿನಲ್ಲಿ ನೆರವೇರಿಸಲು ಕೋರಿದ್ದೆ.

ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನನ್ನ ಮನವಿಯನ್ನು ಲಿಖಿತ ಪತ್ರದ ಮೂಲಕ ತಿರಸ್ಕರಿಸಿದರು. ಅಂತಹ ವ್ಯವಸ್ಥೆಯನ್ನು ನ್ಯಾಯಾಲಯವು ಅಲ್ಲಿಯವರೆಗೆ ಅಳವಡಿಸಿಕೊಳ್ಳದೇ ಇರುವ ಕಾರಣವನ್ನು ಅದು ನೀಡಿತು. ಕರ್ನಾಟಕ ಉಚ್ಚ ನ್ಯಾಯಾಲಯವು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆದರೂ ಈ ನಿಟ್ಟಿನಲ್ಲಿ ನನ್ನ ಸಾರ್ವಜನಿಕ ಹೋರಾಟವು ಮುಂದುವರೆಯುತ್ತಲೇ ಬಂತು. ಕಾರಣವಿಷ್ಟೇ: ನ್ಯಾಯಾಂಗ ಕಲಾಪಗಳ ಧ್ವನಿಮುದ್ರಣ ಮತ್ತು ಚಿತ್ರೀಕರಣವನ್ನು ವಿರೋಧಿಸಲು ಯಾವುದೇ ಅರ್ಥಪೂರ್ಣ ಕಾರಣವನ್ನು ಪ್ರಜಾಪ್ರಭುತ್ವವೆಂದು ಕರೆಸಿಕೊಳ್ಳುವ ವ್ಯವಸ್ಥೆಯೊಳಗೆ ಕಲ್ಪನೆ ಮಾಡಿಕೊಳ್ಳುವುದು ಕಷ್ಟ ಮಾತ್ರವಲ್ಲ ಅಸಾಧ್ಯವೆಂದೇ ಹೇಳಬೇಕಾಗುತ್ತದೆ.

ಭಾರತದಲ್ಲಿನ ಈಗಿನ ನ್ಯಾಯಾಂಗ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದು ಬ್ರಿಟಿಷರು. ಭಾರತದ ಈಸ್ಟ್ ಇಂಡಿಯಾ ಕಂಪನಿಯ ಚಟುವಟಿಕೆಗಳು ಹೆಚ್ಚಾದಂತೆಲ್ಲಾ ನೌಕರರು ಮತ್ತು ಅಧಿಕಾರಿಗಳ ನಡುವೆ ಶಿಸ್ತು ಮೂಡಿಸಲು ಮತ್ತು ವ್ಯಾಜ್ಯಗಳ ಪರಿಹಾರಕ್ಕಾಗಿ ಕೆಲವು ನ್ಯಾಯಾಲಯಗಳ ಸ್ಥಾಪನೆ ಅನಿವಾರ್ಯವಾಯಿತು. ಇಂಗ್ಲೆಂಡಿನಲ್ಲಿ ಆ ಹೊತ್ತಿಗಾಗಲೇ ಬಲಿಷ್ಠಗೊಂಡಿದ್ದ ನ್ಯಾಯಾಂಗದ ಮಾದರಿಯಲ್ಲೇ ಭಾರತದ ನೆಲದಲ್ಲಿ ಬ್ರಿಟಿಷರು ಸ್ಥಾಪಿಸಿದ ನ್ಯಾಯಾಲಯಗಳು ಕಾರ್ಯ ಆರಂಭಿಸಿದವು. ಪ್ರಾರಂಭದಲ್ಲಿ ಇಂಗ್ಲಿಷ್ ಕಾನೂನುಶಾಸ್ತ್ರದ ತತ್ವಗಳನ್ನೇ ಪ್ರಮುಖ ಬುನಾದಿಯನ್ನಾಗಿ ಅಳವಡಿಸಿಕೊಂಡ ಇಲ್ಲಿನ ನ್ಯಾಯಾಲಯಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಪ್ರಚಲಿತವಿದ್ದ ವ್ಯಾವಹಾರಿಕ ನೀತಿಗಳು ಮತ್ತು ಧರ್ಮ ಸೂತ್ರಗಳನ್ನು ಪರಿಗಣಿಸಿ ಅನುಸರಿಸಿ ನ್ಯಾಯದಾನ ಮುಂದುವರೆಸಿದವು.

ಭಾರತದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಿAದ ಮುಕ್ತಗೊಳಿಸಿ ಬ್ರಿಟನ್ ಸಾಮ್ರಾಜ್ಯಕ್ಕೆ ನೇರವಾಗಿ ಹಸ್ತಾಂತರಿಸಿದ ಬ್ರಿಟನ್ ಸಂಸತ್ತಿನ ‘ಭಾರತ ಸರ್ಕಾರ ಕಾಯ್ದೆ 1858’ನ್ನು ಭಾರತದ ಮೊದಲ ಸಂವಿಧಾನವೆಂದು ಕರೆಯುತ್ತೇವೆ. ಅಲ್ಲಿಯವರೆಗೆ ಭಾರತದ ಆಡಳಿತವನ್ನು ನಡೆಸುತ್ತಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನು ಬ್ರಿಟನ್ ಸರ್ಕಾರವು ವಿವಿಧ ರೀತಿಯಲ್ಲಿ ನಿಯಂತ್ರಿಸುತ್ತಿತ್ತು. ಅಷ್ಟೊತ್ತಿಗೆ ನ್ಯಾಯಾಂಗಗಳಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ನ್ಯಾಯಾಧೀಶರ ಪಾತ್ರದ ಬಗ್ಗೆ ಖ್ಯಾತ ಕಾನೂನುಶಾಸ್ತ್ರ ತಜ್ಞರಾದ ಚೆರಿಮಿ ಬೆಂಧಮ್ ವ್ಯಾಖ್ಯಾನಿಸಿದ್ದು ಹೀಗೆ: “ನ್ಯಾಯಾಂಗದ ಕಲಾಪದಲ್ಲಿ ನಿಜಕ್ಕೂ ಎಲ್ಲರಿಗಿಂತಲೂ ಹೆಚ್ಚಾಗಿ ಪರೀಕ್ಷೆಗೆ ಗುರಿಯಾಗುವವನು ನ್ಯಾಯಾಧೀಶರೇ ಆಗಿರುತ್ತಾರೆ”.

ಇಂಗ್ಲೆAಡಿನಲ್ಲಿದ್ದಂತೆ ನಮ್ಮಲ್ಲಿ ಸ್ಥಾಪನೆಗೊಂಡ ನ್ಯಾಯಾಲಯಗಳು ತೆರೆದ ಅಥವಾ ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ ಸ್ಥಳಗಳಲ್ಲಷ್ಟೇ ನಡೆಯಬೇಕಿತ್ತು. ಯಾವುದೇ ಕಾನೂನನ್ನು ಹೊರಹಾಕುವ ಉದ್ದೇಶವು ಸಾರ್ವಜನಿಕ ಉದ್ಧಾರ, ಒಳಿತು ಅಥವಾ ನಿಯಂತ್ರಣ ಒಳಗೊಂಡಿರುವುದರಿAದ ಆ ಕಾನೂನು ಬಗೆಗಿನ ಗೊಂದಲವನ್ನು ಬಗೆಹರಿಸಬೇಕಾದ ಎಲ್ಲ ವ್ಯಾಜ್ಯಗಳನ್ನು ಸಾರ್ವಜನಿಕರ ಸಮಕ್ಷಮದಲ್ಲೇ ನಡೆಸಬೇಕಾದ್ದು ನ್ಯಾಯಾಲಯಗಳ ಮೂಲಧರ್ಮವಾಗಿತ್ತು. ತೀವ್ರಮಟ್ಪದ ಗೌಪ್ಯ ಅಥವಾ ರಾಜ್ಯ ರಹಸ್ಯಗಳನ್ನು ಒಳಗೊಂಡ  ಕೆಲವೇ ಪ್ರಕರಣಗಳಲ್ಲಷ್ಟೇ ನಮ್ಮ ನ್ಯಾಯಾಲಯಗಳು ಸಾರ್ವಜನಿಕ ವೀಕ್ಷಣೆ ನಿರಾಕರಿಸಿ ಕೇವಲ ಅಂತಹ ಪ್ರಕರಣಗಳಿಗೆ ಸಂಬAಧಿಸಿದ ವ್ಯಕ್ತಿಗಳಿಗೆ ಕಲಾಪವನ್ನು ವೀಕ್ಷಿಸಲು ಅವಕಾಶ ಕಲ್ಪಿಸಬಹುದಾಗಿದೆ. ಹಾಗಾಗಿ ಕೇವಲ ಕಲಾಪಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರ ಕಲಾಪದಲ್ಲಿ ಭಾಗವಹಿಸುವ ಮಾದರಿಯ ನ್ಯಾಯಾಲಯಗಳ ಪರಿಕಲ್ಪನೆಯೇ ನಮ್ಮ ನ್ಯಾಯಶಾಸ್ತçದಲ್ಲಿಲ್ಲ.

ಮುಕ್ತ ಸಾರ್ವಜನಿಕ ವೀಕ್ಷಣೆ ಅಂದರೆ, ಪರಿಹಾರವಾಗುತ್ತಿರುವ ವ್ಯಾಜ್ಯಕ್ಕೆ ನೇರ ಸಂಬಂಧವಿರದ ಮತ್ತು ಕಲಾಪದ ವೀಕ್ಷಣೆಯ ಆಸಕ್ತಿ ಹೊಂದಿದ ಎಲ್ಲರಿಗೂ ಅವಕಾಶ ಕಲ್ಪಿಸುವುದು. ಸಾರ್ವಜನಿಕರ ಸಮಕ್ಷಮದಲ್ಲಿ ಕಾರ್ಯಾನಿರ್ವಹಿಸುವುದು ನ್ಯಾಯಾಲಯಗಳ ಧರ್ಮ. ಅಂತೆಯೇ ತಂತ್ರಜ್ಞಾನ ಆವಿಷ್ಕಾರದ ಪರಿಣಾಮವಾಗಿ ಧ್ವನಿ ಮತ್ತು ದೃಶ್ಯ ಚಿತ್ರಣದ ವ್ಯವಸ್ಥೆಯು ಸುಧಾರಿಸುತ್ತಿದ್ದಂತೆ ಪ್ರಜಾಪ್ರಭುತ್ವ ಅನುಸರಿಸುವ ಅನೇಕ ರಾಷ್ಟ್ರಗಳು ತಮ್ಮ ನ್ಯಾಯಾಂಗದ ಕಾರ್ಯಕಲಾಪಗಳನ್ನು ದೃಶ್ಯ ಮಾಧ್ಯಮದ ಮೂಲಕ ಸೆರೆಹಿಡಿದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿವೆ.

ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಲಿಖಿತ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ, ಅದಕ್ಕೆ ಸಂಬAಧಿಸಿದ ವಾದವಿವಾದವನ್ನು ನ್ಯಾಯಾಧೀಶರು ಆಲಿಸುವ ಪ್ರಕ್ರಿಯೆಯ ಗುಣಮಟ್ಟವು ನ್ಯಾಯದಾನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ತನ್ನ ಕಲಾಪಗಳ ವಿಡಿಯೋ ಚಿತ್ರೀಕರಣಕ್ಕೆ ನಮ್ಮ ನ್ಯಾಯಾಲಯಗಳು ಒಡ್ಡಿರುವ ಪ್ರತಿರೋಧದ ಹಿಂದಿನ ಕಾರಣವನ್ನು ಅರಿಯಲು ನನಗಂತೂ ಈವರೆಗೆ ಸಾಧ್ಯವಾಗಿಲ್ಲ.

ಕಳೆದ ವರ್ಷದವರೆಗೆ ದೇಶದೆಲ್ಲೆಡೆ ಕೈಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ನಮ್ಮ ನ್ಯಾಯಾಲಯಗಳು ವಿಡಿಯೋ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ವರದಿಯಾಗಿದೆ. ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಬಹುತೇಕ ನ್ಯಾಯಾಲಯಗಳು ಮುಚ್ಚಿದ್ದು ತುರ್ತು ಪ್ರಕರಣಗಳನ್ನಷ್ಟೇ ಕೈಗೆತ್ತಿಕೊಳ್ಳುತ್ತಿವೆ. ಅಂತಹ ಬಹುತೇಕ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಕೇವಲ ಪ್ರಕರಣಕ್ಕೆ ಸಂಬAಧಿಸಿದವರು ಮಾತ್ರ ಆ ಪ್ರಕರಣವನ್ನು ವೀಕ್ಷಿಸುವಂತೆ ನಿರ್ಬಂಧ ಹೇರಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಮುನ್ನ ಅಷ್ಟೇನೂ ಮುಕ್ತವಾಗಿರದಿದ್ದ ನ್ಯಾಯಾಲಯಗಳು ಈಗ ಇನ್ನಷ್ಟು ಮುಕ್ತತೆಯನ್ನು ಕಳೆದುಕೊಂಡಿವೆ.

ದೇಶದೆಲ್ಲೆಡೆ ಸುಮಾರು 20 ಲಕ್ಷ ವಕೀಲರಿದ್ದರೂ ನ್ಯಾಯಾಂಗ ಕಲಾಪಗಳನ್ನು ವಿಡಿಯೋ ಚಿತ್ರೀಕರಣಕ್ಕೆ ಒಳಪಡಿಸಬೇಕೆಂಬ ಬೇಡಿಕೆಯನ್ನು ಮಂಡಿಸುವ ವಕೀಲರ ಸಂಖ್ಯೆ ತೀರಾ ಕಡಿಮೆ. ನ್ಯಾಯಾಂಗದ ಕಲಾಪಗಳು ಪಾರದರ್ಶಕತೆಯನ್ನು ಮೈಗೂಡಿಸಿಕೊಂಡಿವೆಯೆಂದು ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡುವಂತೆ ಮಾಡಾಬೇಕಾದದ್ದು ಎಲ್ಲ ವಕೀಲರ ಧರ್ಮ. ಬಹುತೇಕ ವಕೀಲರು ಈ ನಿಟ್ಟಿನಲ್ಲಿ ಮೌನ ತಾಳಿದಿರುವುದು ನಮ್ಮ ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕ್ಷೀಣಿಸಿದೆ.

ನ್ಯಾಯದಾನ ನಿಷ್ಪಕ್ಷಪಾತವಾಗಿ ಮತ್ತು ವಸ್ತುನಿಷ್ಠವಾಗಿ ನಡೆಯಬೇಕೆಂಬುದು ಎಲ್ಲರಿಗೂ ತಿಳಿದಿದೆ. ಹಾಗೆ ನಡೆಯಬೇಕಾದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲ ವ್ಯಕ್ತಿಗಳು ಪ್ರಾಮಾಣಿಕವಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ನಿಮಗೆ ಗೊತ್ತಿರಲಿ ಕಕ್ಷಿದಾರನು ಬೇಕೆಂತಲೇ ಅಥವಾ ನಿರ್ಲಕ್ಷ್ಯದಿಂದ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಅಥವಾ ಸುಳ್ಳು ಹೇಳಿಕೆ ನೀಡಿದ್ದಲ್ಲಿ ಆತನಿಗೆ 7 ವರ್ಷಗಳವರೆಗೂ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಲು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಬಗೆಯ ಪ್ರಕರಣಗಳೇ ನಮ್ಮಲ್ಲಿ ವಿರಳ. ನ್ಯಾಯಾಂಗ ಪ್ರಕ್ರಿಯೆಗಳನ್ನು ನಡೆಯುತ್ತಿರುವಾಗಲೇ ಅವುಗಳನ್ನು ಸೆರೆಹಿಡಿಯದೆ ಇರುವುದು ಇಂತಹ ವೈಫಲ್ಯಕ್ಕೆ ದೊಡ್ಡ ಕಾರಣವಾಗಿದೆ. ಹೀಗೆ ನ್ಯಾಯಾಂಗ ಪ್ರಕರಣಗಳಿಗೆ ಮೂಲಭೂತವಾಗಿ ಬೇಕಿರುವ ಪ್ರಾಮಾಣಿಕತೆಯ ಬುನಾದಿಯೇ ದುರ್ಬಲವಾಗಿ ಹೋದಾಗ, ಆ ವ್ಯವಸ್ಥೆಯು ಹಳ್ಳ ಹಿಡಿಯಲೇ ಬೇಕಾಗುತ್ತದೆ. ಕೆಲವು ಕೋಟಿ ಪ್ರಕರಣಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಗುರಿಯಿಲ್ಲದೆ ಕೊಳೆಯುತ್ತಾ ಸಾಗುತ್ತಿರುವುದಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಕಲಾಪಗಳನ್ನು ಚಿತ್ರೀಕರಿಸದೇ ಇರುವ ಕಾರಣವೂ ಪ್ರಮುಖವಾಗಿದೆ.

ಮನುಷ್ಯನ ಅಸಾಧಾರಣ ಮಿದುಳಿಗೂ ಕೆಲವು ಇತಿಮಿತಿಗಳಿವೆ. ಮೊದಲ ಬಾರಿ ಅರಿವಿಗೆ ಬಂದ ಮಾಹಿತಿಯು ಮುಂದಿನ 24 ರಿಂದ 72 ಗಂಟೆಯ ಒಳಗೆ ಗಣನೀಯವಾಗಿ ಮರೆತು ಹೋಗುತ್ತದೆ. ದಿನನಿತ್ಯ ಹತ್ತಾರು ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳವ ನ್ಯಾಯಾಧೀಶರಿಗೆ ಪ್ರಕರಣವೊಂದರಲ್ಲಿ ನಡೆದ ವಾದ ವಿವಾದಗಳನ್ನು ಹಲವಾರು ದಿನಗಳ ನಂತರ ಮನಸ್ಸಿನಲ್ಲಿ ಸಮರ್ಪಕವಾಗಿ ಪರಿಷ್ಕರಿಸಿ ತೀರ್ಪು ನೀಡಲು, ನಡೆದ ವಾದ ವಿವಾದಗಳ ನೈಜ ಮುದ್ರಣ ಅತ್ಯವಶ್ಯಕ ವಾಗುತ್ತದೆ. ವಿಡಿಯೋ ಚಿತ್ರೀಕರಣದಿಂದ ದೂರ ಉಳಿದಿರುವ ನ್ಯಾಯಾಲಯದ ಕಲಾಪಗಳಲ್ಲಿ ನಾವು ಒಂದು ಅಂಶವನ್ನು ಮೇಲ್ಮನವಿಯ ವಾದಗಳಲ್ಲಿ ಪದೇ ಪದೇ ಗಮನಿಸುತ್ತೇವೆ

ಅದೇನೆಂದರೆ ಕೇಳಹಂತದ ನ್ಯಾಯಾಲಯವು ಸೋತ ವರ್ಗದ ವಕೀಲರ ವಾದಗಳನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸದೇ ಸೋತ ಕಕ್ಷಿದಾರನನ್ನು ನ್ಯಾಯದಾನದಿಂದ ವಂಚಿಸಿದೆ ಎಂದು. ನಮ್ಮ ನ್ಯಾಯಾಂಗ ಪ್ರಕರಣದಲ್ಲಿ ಅವುಗಳ ಚಿತ್ರೀಕರಣ ಮತ್ತು ಪ್ರಸಾರ ಅಪಾರ ಪಾತ್ರ ವಹಿಸಿವೆ. ವಕೀಲನಾದವನು ನ್ಯಾಯಾಲಯದಲ್ಲಿ ಕ್ಷುಲ್ಲಕ ವ್ಯಾಜ್ಯ ಇಲ್ಲವೇ ನಿರರ್ಥಕ ವಾದದಲ್ಲಿ ತೊಡಗುವುದನ್ನು ವಿಡಿಯೋ ಚಿತ್ರೀಕರಣವು ಗಣನೀಯವಾಗಿ ತಡೆಯಬಲ್ಲದು. ವಕೀಲನಾದವನು ಕಾನೂನಿನ ಜ್ಞಾನ, ಪ್ರಾಮಾಣಿಕತೆ ಮತ್ತು ದಕ್ಷತೆಯಲ್ಲಿ ಹಿಂದೆ ಸರಿದಲ್ಲಿ ಆತನು ಸಾರ್ವಜನಿಕವಾಗಿ ಅವಹೇಳನೆಗೆ ಗುರಿಯಾಗುವ ನಿಶ್ಚಯ ಸಾಧ್ಯತೆಯನ್ನು ಎಲ್ಲಿಯವರೆಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ಮನಗಾಣುವುದಿಲ್ಲವೋ ಅಲ್ಲಿಯವರೆಗೂ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೀಗೆಯೇ ಡೋಲಾಯ ಪರಿಸ್ಥಿತಿಯೇ ಮುಂದುವರೆಯುವುದು ಸ್ವಾಭಾವಿಕ.

ಕೊನೆಯದಾಗಿ ನ್ಯಾಯಾಧೀಶನಾದವನು ಮುಂದಿರುವ ಪ್ರಕರಣವನ್ನು ವಸ್ತುನಿಷ್ಠವಾಗಿ ಬಗೆಹರಿಸುತ್ತಾನೆಯೇ ಇಲ್ಲವೇ ಎಂಬುದನ್ನು ಆತ ಕಲಾಪಗಳಲ್ಲಿ ಹೊರಬಂದ ವಾದವಿವಾದಗಳನ್ನು ಸಮರ್ಪಕವಾಗಿ ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಪರಿಗಣಿಸಿದ್ದಾನೆ ಎಂಬುದನ್ನು ಆಧರಿಸಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ನ್ಯಾಯಾಂಗದ ಕಲಾಪಗಳ ವಿಡಿಯೋ ಚಿತ್ರೀಕರಣ ಮತ್ತು ಸಾರ್ವಜನಿಕ ಪ್ರಸಾರದ ಅಲಭ್ಯತೆಯು ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ಮೂಡಬೇಕಾದ ವಿಶ್ವಾಸಾರ್ಹತೆಯನ್ನು ತಡೆಹಿಡಿದಿದೆ.

ಇಷ್ಟಾದರೂ ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಭಾರತೀಯ ನ್ಯಾಯಾಂಗವು ಈವರೆಗೆ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿರುವ ಕಲಾಪಗಳ ವಿಡಿಯೋ ಚಿತ್ರೀಕರಣ ಮತ್ತು ಸಾರ್ವಜನಿಕ ಪ್ರಸಾರವನ್ನು ಶೀಘ್ರದಲ್ಲಿ ನೆರವೇರುತ್ತದೆಯೆಂಬ ಆಶಾಭಾವನೆಯನ್ನು ನಾನು ಹೊಂದಿದ್ದೇನೆ.

*ಲೇಖಕರು ಸರ್ವೋಚ್ಚ ನ್ಯಾಯಾಲಯದ ಖ್ಯಾತ ವಕೀಲರು; ಜನಪರ ಕಾಳಜಿಯ ಚಿಂತಕರು. ಸುದ್ದಿ ವಾಹಿನಿಗಳ ಸಮಕಾಲೀನ ಚರ್ಚೆಗಳಲ್ಲಿ ಭಾಗವಹಿಸಿ ಸಭ್ಯ ಧಾಟಿಯಲ್ಲಿ ತಜ್ಞ ವಿಚಾರ ಮಂಡಿಸುತ್ತಾರೆ.

Leave a Reply

Your email address will not be published.