ನ್ಯಾಯಾಲಯದಲ್ಲಿ ಆನ್‌ಲೈನ್ ಕಲಾಪ ಸಾಧ್ಯವೇ?

ಆನ್‌ಲೈನ್ ಮೂಲಕ ನ್ಯಾಯಾಲಯದ ಕಾರ್ಯಕಲಾಪ ನಡೆಸಿದಲ್ಲಿ ಅವಸರದ ಪ್ರಕ್ರಿಯೆಯಿಂದ ವ್ಯಾಜ್ಯದಾರರಿಗೆ ಹಾನಿಯಾಗುವುದೇ ಹೆಚ್ಚು.

ನ್ಯಾಯಾಲಯದ ಕಾರ್ಯಕಲಾಪಗಳನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವೇ? ಈಗಿರುವ ಯಾರೂ ನಿರೀಕ್ಷಿಸದ ಅನಿವಾರ್ಯ ಸಂದರ್ಭದಲ್ಲಿ ಈ ಪ್ರಶ್ನೆ ಅಮುಖ್ಯವೆನಿಸಲಾರದು.

ಕಳೆದ 38 ವರ್ಷಗಳಿಂದ ವಕೀಲನಾಗಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿರುವ ನನ್ನಂಥವರು ನ್ಯಾಯಾಂಗದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ, ಅನುಕೂಲತೆ, ಅನಾನುಕೂಲತೆ, ಅನಿವಾರ್ಯತೆ ನೋಡುತ್ತಲೇ ಬಂದಿದ್ದೇವೆ. ನಮ್ಮ ವೃತ್ತಿಯ ಪ್ರಾರಂಭದ ದಿನಗಳಲ್ಲಿ ಇದ್ದ ವ್ಯವಸ್ಥೆಗೂ ಇತ್ತೀಚಿನ ದಿನಗಳಲ್ಲಿಯ ಕಾರ್ಯಕಲಾಪಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದಿನ ದಿನಗಳಲ್ಲಿ ವಾಜ್ಯಗಳು ಪ್ರಾರಂಭವಾಗಿ ಅದರಲ್ಲೂ ನಿರ್ದಿಷ್ಟವಾಗಿ ಸಿವಿಲ್ ಪ್ರಕರಣಗಳು ಕೆಳ ನ್ಯಾಯಾಲಯಗಳಲ್ಲಿ ನಿರ್ಣಯಗೊಂಡರು ಅಲ್ಲಿಗೆ ಕೊನೆಗೊಳ್ಳದೆ ವಾಜ್ಯದಾರರ ಅರೆತಿಳಿವಳಿಕೆ, ಹಠ, ಛಲ, ಅಸೂಯೆ, ರೊಚ್ಚು, ಹೊಂದಾಣಿಕೆ ಸ್ವಭಾವದ ಕೊರತೆಯಿಂದಾಗಿ ಮೇಲ್ಮನವಿಯ ಮೇಲೆ ಮತ್ತೆ ಮೇಲ್ಮನವಿಗಳನ್ನು ಮೇಲ್ಪಟ್ಟ ನ್ಯಾಯಾಲಯಗಳಿಗೆ ಸಲ್ಲಿಸುತ್ತ ಜೀವನ ಪರ್ಯಂತ ಸೂಕ್ತ ಪರಿಹಾರ ಕಾಣದೆ ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ವಾಜ್ಯಗಳು ಬಾಕಿ ಇರುವಾಗಲೇ ವಾಜ್ಯದಾರರು ಆ ಕೊರಗಿನಲ್ಲೇ ಮರಣಿಸಿದ್ದು ಇದೆ. ಎಷ್ಟೋ ಸಂದರ್ಭಗಳಲ್ಲಿ ಸಿವಿಲ್ ವಾಜ್ಯಗಳು ಕ್ರಿಮಿನಲ್ ಕೇಸ್‌ಗಳಿಗೆ ಕಾರಣವಾಗಿ ಹೊಡೆದಾಟ, ಬಡೆದಾಟ, ಹಿಂಸಾತ್ಮಕ ನಡೆಗೆ ಕಾರಣವಾಗಿ ಅವು ಸಹ ದೀರ್ಘಕಾಲದ ವ್ಯಾಜ್ಯಗಳಾಗಿ ಹಿಂಸೆಯ ಕರಾಳ ರೂಪವಾಗಿವೆ.

ಅಂದಿನ ಸಂದರ್ಭಗಳಲ್ಲಿ ಹೇಳಿಕೆ, ಪ್ರತಿಹೇಳಿಕೆ, ಸಾಕ್ಷಿ, ಪಾಟೀಸವಾಲು, ವಾದ ಮಂಡಿಸುವಿಕೆ ಎಂತೆಲ್ಲಾ ವರ್ಷಗಳೇ ಉರುಳುತ್ತಿದ್ದವು. ಕೆಲವೊಮ್ಮೆ ದಶಕಗಳೂ ಉರುಳಿದ ಉದಾಹರಣೆಗಳು ಸಾಕಷ್ಟು ಇವೆ. ಯಾವುದೇ ಸಿವಿಲ್, ಕ್ರಿಮಿನಲ್ ಪ್ರಕರಣಗಳಲ್ಲಿ ಮೌಖಿಕ ಸಾಕ್ಷಿಗಳು ಬಹಳ ಮುಖ್ಯವಾಗಿರುತ್ತವೆ. ಪಾಟೀಸವಾಲಿನ ಮುಖ್ಯ ಉದ್ದೇಶ ಸತ್ಯವನ್ನು ಸಾಕ್ಷಿಯ ಬಾಯಿಂದ ಹೊರತರಿಸುವುದು. ನಿಪುಣ ವಕೀಲನು ತನ್ನ ಜಾಣ್ಮೆಯಿಂದ ಪಾಟೀಸವಾಲು ಮಾಡಿದಾಗ ಸತ್ಯ, ಸಾಕ್ಷಿದಾರನಿಂದ ಅವನಿಗೆ ಗೊತ್ತಿಲ್ಲದೆ ಹೊರಬರುತ್ತದೆ. ಅನೇಕ ಸಂದರ್ಭಗಳಲ್ಲಿ ನುರಿತ ವಕೀಲನು ಪಾಟೀಸವಾಲಿನ ಸಮಯದಲ್ಲಿ ಸಾಕ್ಷಿಯು ಕಟಕಟೆಯಲ್ಲಿದ್ದಾಗ ತೀರಾ ಅವನ ಹತ್ತಿರದಲ್ಲಿ ನಿಂತುಕೊಂಡು ಅವನ ಕಣ್ಣಲ್ಲಿ ಕಣ್ಣಿಟ್ಟು ಮೃದು ಮಾತಿನಿಂದ ಅವನದೇ ಧಾಟಿಯಲ್ಲಿ ಮಾತನಾಡುತ್ತ ವಿಷಯವನ್ನು ಹೊರತರಬಹುದು. ಕೆಲವೊಮ್ಮೆ ಗಟ್ಟಿ, ಒರಟು ಧ್ವನಿಯಿಂದ ಸಾಕ್ಷಿದಾರನನ್ನು ಗಲಿ-ಬಿಲಿಗೊಳಿಸಿ ಸತ್ಯ ಹೊರತರಬಹುದು. ಇಂಥ ಚತುರತೆ, ಚಾಕಚಕ್ಯತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಧ್ಯವಾಗದ ಮಾತು.

ಆ ದಿನಗಳಲ್ಲಿ ವಾದ ಮಂಡನೆಗೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಲಯಗಳ ತೀರ್ಪುಗಳು, ಕಾನೂನು ಪತ್ರಿಕೆಗಳ ಮೂಲಕ (ಲಾ-ಜರ್ನಲ್) ಸಿಗಬೇಕಾದರೆ ಸುಮಾರು ತಿಂಗಳುಗಳೇ ಬೇಕಾಗುತ್ತಿತ್ತು. ತೀರ್ಪುಗಳಾದರೂ ಕನಿಷ್ಠವೆಂದರೆ 80 ರಿಂದ 120 ಪುಟಗಳಷ್ಟಿರುತ್ತಿದ್ದವು. ‘ಜಸ್ಟೀಸ್ ಡಿಲೈಡ್ ಇಸ್ ಜಸ್ಟೀಸ್ ಡಿನೈಡ್’ ಅನ್ನುವ ಕಾರಣಕ್ಕೆ  ನ್ಯಾಯಾಂಗದಲ್ಲಿ ಕ್ರಮೇಣ ಸುಧಾರಣೆಗಳಾಗುತ್ತಾ ಬಂದು, ಲೋಕ ಆದಾಲತ್, ಜನತಾ ನ್ಯಾಯಾಲಯಗಳ ಸ್ವರೂಪ ಪಡೆದು ವ್ಯಾಜ್ಯಗಳು ಅನಾವಶ್ಯಕ ವಿಳಂಬವಾಗುವುದನ್ನು ತಪ್ಪಿಸಲು ಸಹಾಯಕವಾಯಿತು. ಜನತೆಗೆ ತಿಳಿವಳಿಕೆ ನೀಡುವುದಕ್ಕಾಗಿ ಸರ್ಕಾರ ನ್ಯಾಯಾಂಗ ಇಲಾಖೆ ಸಾಕಷ್ಟು ಪರಿಶ್ರಮವಹಿಸಿ ಕಾನೂನು ಸಲಹಾ ಕೇಂದ್ರಗಳನ್ನು ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಥಾಪಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಮತ್ತೂ ಸುಧಾರಣೆಯ ಹೆಜ್ಜೆಯಾಗಿ ಮೀಡಿಯೇಶನ್, ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಯಿತು.

ಇವೆಲ್ಲವುಗಳ ಜೊತೆಗೆ ದೀನದಲಿತರು, ದುರ್ಬಲರು, ಬಡವರು, ಅನಾಥರು, ಸ್ತ್ರೀಯರು, ವೃದ್ಧರು ಮುಂತಾದವರಿಗೆ ಕಾನೂನು ರಕ್ಷಣೆ ಸಿಗಬೇಕೆಂಬ ಉದ್ದೇಶದಿಂದ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಹಿಂದೆ ತಿಂಗಳುಗಟ್ಟಲೆ ಕಾಯಬೇಕಾಗಿದ್ದ ವಾದ ಮಂಡನೆಗೆ ಬೇಕಾದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳು ಇದೀಗ ತ್ವರಿತವಾಗಿ ಅಂತರ್‌ಜಾಲದಲ್ಲಿ ತಕ್ಷಣ ಸಿಗುತ್ತಿವೆ. ಆಗ 80-120 ಪುಟಗಳಲ್ಲಿ ಇರುತ್ತಿದ್ದ ತೀರ್ಪುಗಳು ಇದೀಗ 20-50 ಪುಟಗಳಲ್ಲಿ ಸಿಗುತ್ತಿವೆ. ಬೆರಳಚ್ಚುಗಳ ಮೂಲಕ ಸಿಗಬೇಕಿದ್ದ ದಾಖಲೆಗಳು ಇದೀಗ ನೆರಳಚ್ಚು ಮೂಲಕ ತಕ್ಷಣ ಸಿಗುತ್ತಿವೆ.  ನ್ಯಾಯಾಲಯದ ನಡವಳಿಕೆಗಳು ವೇಗ ನಡಿಗೆಯಲ್ಲಿ ಹೊರಟಿದ್ದರೂ, ವಾಜ್ಯಗಳು ಕಡಿಮೆಯಾಗಿಲ್ಲ, ವಾಜ್ಯದಾರರೂ ಕಡಿಮೆಯಾಗಿಲ್ಲ.

ಇದೀಗ ಇಂಥ ದುರ್ಬರ ಸಂದರ್ಭದಲ್ಲಿ ನ್ಯಾಯಾಲಯದ ಕಲಾಪಗಳು ಆನ್‌ಲೈನ್ ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವೆ ಎನ್ನುವುದು ಯಕ್ಷ ಪ್ರಶ್ನೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಸರಳ ಸುಲಭ ರೂಪದಲ್ಲಿಲ್ಲ. ‘ಜಸ್ಟೀಸ್ ಹರೀಡ್ ಇಸ್ ಜಸ್ಟೀಸ್ ಬರೀಡ್’ ಅನ್ನುವ ಉಕ್ತಿಯನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ನ್ಯಾಯಾಧೀಶನಾಗಿರುವ ವ್ಯಕ್ತಿಯು ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿನ್ವಯ ಕೆಲಸ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಯಾವುದೇ ರೀತಿಯಲ್ಲಿ ಅನ್ಯಾಯವಾದಾಗ ನ್ಯಾಯಾಲಯಕ್ಕೆ ಮೊರೆ ಹೋಗುವುದು ಸಹಜ. ಯಾವುದೇ ನ್ಯಾಯಾಲಯಕ್ಕೆ ಹೋದರು ಸೂಕ್ತ ದಾಖಲೆ, ಪುರಾವೆ, ಸಾಕ್ಷಿಗಳಿಲ್ಲದೆ ಕೋರ್ಟ್ ಮೆಟ್ಟಿಲು ಹತ್ತಲಾರ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷಿ ಪುರಾವೆಗಳನ್ನು ಸೂಕ್ತವಾಗಿ ಪರಿಶೀಲಿಸಿ ವಾದ ಪ್ರತಿವಾದಗಳನ್ನು ಪರಿಗಣಿಸಿ ಯೋಗ್ಯ ತೀರ್ಪುಗಳನ್ನು ನೀಡಬೇಕಾಗುತ್ತದೆ.

ಅನ್‌ಲೈನ್ ಕಾರ್ಯಕಲಾಪ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಕಲಾಪಗಳನ್ನು ಕೆಲವು ನಿರ್ದಿಷ್ಟ ಪರಿಮಿತಿಗೆ ಸಂಬಂಧಪಟ್ಟಂತೆ ಮಾತ್ರ ಮಾಡಬಹುದಾಗಿದೆ.

ಉದಾಹರಣೆಗೆ: ತಳ ಮತ್ತು ಕೆಳ ನ್ಯಾಯಾಲಯಗಳಲ್ಲಿ ಆನ್ ಲೈನ್ ಮೂಲಕ ದಾವಾ ಮತ್ತು ತಕರಾರುಗಳನ್ನು ಸಲ್ಲಿಸಲು ವಾದ ಮಂಡನೆ, ಮುದ್ದತ್ತು ಪಡೆಯುವುದಕ್ಕೆ ಮಾತ್ರ ಸೀಮಿತವಾಗಬಲ್ಲದು, ನ್ಯಾಯಾಲಯದ ತೀರ್ಪಿನ ಪ್ರತಿ, ದಾಖಲೆ ಪ್ರತಿಗಳನ್ನು ಪಡೆಯಬಹುದಾಗಿದೆ ಅಷ್ಟೆ. ವಿದ್ಯುನ್ಮಾನದ ಮೂಲಕ ದಾವೆಯನ್ನು ನೋಂದಾಯಿಸಬಹುದಾಗಿದೆ. ಆದರೆ ಈ ವ್ಯವಸ್ಥೆಯು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿರುವ ವಕೀಲರಿಗೆ, ನ್ಯಾಯಾಧೀಶರಿಗೆ ದಾಖಲೆಗಳನ್ನು ಭೌತಿಕವಾಗಿ ವೀಕ್ಷಿಸುವ  ಪ್ರಮೇಯ ಇಲ್ಲದೆ ಇರುವುದರಿಂದ, ಬರೀ ವಾದ ಮಂಡನೆ ಕಲಾಪವನ್ನು ಮಾಡಬೇಕಾಗಿರುವುದರಿಂದ ಅಂತಹ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಿಡಿಯೋ, ಅಡಿಯೋ ಮೂಲಕ ಕಾರ್ಯಕಲಾಪಗಳು ಸರಿಯಾಗಬಹುದೇ ಹೊರತು, ತಳ ಮತ್ತು ಕೆಳ ನ್ಯಾಯಾಲಯಗಳಲ್ಲಿ ಅನ್ ಲೈನ್ ಕಾರ್ಯಕಲಾಪಗಳು ಸರಿ ಹೊಂದುವುದಿಲ್ಲ.

ಕೋವಿಡ್-19 ರ ಕಾರಣದಿಂದ ನ್ಯಾಯಾಲಯದಲ್ಲಿ ಜನದಟ್ಟಣೆ ತಡೆದು, ವ್ಯಕ್ತಿಗತ ಅಂತರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯ ಅವಶ್ಯಕತೆ ಇರುವುದರಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ವಿದೇಶಗಳಲ್ಲಿರುವಂತೆ ನಮ್ಮ ದೇಶದಲ್ಲಿಯ ವ್ಯವಸ್ಥೆ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಂಗ ಕಾರ್ಯ ಕಲಾಪ ಕಾರ್ಯರೂಪಕ್ಕೆ ತರಲು ಇನ್ನೂ ಬಹಳ ಸಿದ್ಧವಾಗಬೇಕಿದೆ.

ಟ್ರಾಫಿಕ್ ಪೆನಾಲ್ಟಿ ವಿಧಿಸುವುದಕ್ಕೆ ನ್ಯಾಯಾಲಯಗಳೇ ಬೇಕಿಲ್ಲ. ಅದನ್ನು ಆನ್‌ಲೈನ್ ಮೂಲಕ ಸಾರಿಗೆ ಇಲಾಖೆಯವರು ಅಥವಾ ಟ್ರಾಫಿಕ್ ಪೊಲೀಸರು ಮಾಡಬಹುದು. ಇತರ ಸಣ್ಣಪುಟ್ಟ ಅಪರಾಧಗಳಿಗೆ (ಪೆಟ್ಟಿಕೇಸ್) ಗಳಿಗೆ ಸಂಬಂಧಪಟ್ಟಂತೆ ದಂಡ ಕಟ್ಟಿಸುವ ಪ್ರಕ್ರಿಯೆಗಳನ್ನು ಮಾಡಲು ಸೂಕ್ತ ದಂಡಾಧಿಕಾರಿಗಳನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನೇಮಿಸಬಹುದು. ಅದಕ್ಕೆ ಅವಶ್ಯವಿರುವ ಸೂಕ್ತ ತಿದ್ದುಪಡಿಯನ್ನು ಸಂಬಂಧಪಟ್ಟ ಕಾನೂನಿನಲ್ಲಿ ಮಾಡಬೇಕಾಗುತ್ತದೆ.

ವಿದೇಶಗಳಲ್ಲಿ ಅದರಲ್ಲೂ ಯು.ಕೆ.ನಲ್ಲಿ ಕರೋನ ವೈರಸ್ ಕಾಯ್ದೆ 2020 ಜಾರಿ ಮಾಡಿದ್ದು ಅದಕ್ಕೆ ಸಂಬಂಧಪಟ್ಟಂತೆ ಇತರ ವಿವಿಧ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗಿದೆ. ಆ ಮೂಲಕ ವಿಡಿಯೋ ಆಡಿಯೋ ಮೂಲಕ ಕಾರ್ಯಕಲಾಪ ನಡೆಸಲಾಗುತ್ತಿದೆ. ಇದರ ಉದ್ದೇಶ ಅನಾವಶ್ಯಕವಾಗಿ ಮುದ್ದತ್ ನೀಡದೇ ವಿಳಂಬ ನೀತಿಯನ್ನು ತಡೆಗಟ್ಟಲು ಇರುವುದಾದರೂ, ಅಂತಹ ವ್ಯವಸ್ಥೆ ಭಾರತಕ್ಕೆ ಸೂಕ್ತವಲ್ಲ. ಸಧ್ಯ ಭಾರತದ ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 3.2 ಕೋಟಿ ಪ್ರಕರಣಗಳು ಬಾಕಿ ಇವೆ. ಅವುಗಳಲ್ಲಿ ಸುಮಾರು 38 ಲಕ್ಷ ಪ್ರಕರಣಗಳು ಚೆಕ್ಕುಗಳ ಅಮಾನತ್ತಿಗೆ ಸಂಬಂಧಪಟ್ಟಂತೆ ಮತ್ತು ಸುಮಾರು 8.5 ಲಕ್ಷ ಪ್ರಕರಣಗಳು ಮೋಟಾರು ಅಪಘಾತ ಪರಿಹಾರ ಪ್ರಕರಣಗಳಿರುತ್ತದೆ.  ಆನ್‌ಲೈನ್ ಮೂಲಕ ಕಾರ್ಯಕಲಾಪ ನಡೆಸಿದಲ್ಲಿ ಅವಸರದ ಪ್ರಕ್ರಿಯೆಯಿಂದ ವ್ಯಾಜ್ಯದಾರರಿಗೆ ಹಾನಿಯಾಗುವುದೇ ಹೆಚ್ಚು.

ಪ್ರಸ್ತುತ ಪರಿಸ್ಥಿತಿಯಲ್ಲಿ ಕಳೆದ 2-3 ವರ್ಷಗಳಿಂದ ಸಾಕ್ಷಿ ಹೇಳಿಕೆಗಳನ್ನು ತಳ ಮತ್ತು ಕೆಳ ನ್ಯಾಯಾಲಯದಲ್ಲಿ ಪ್ರಮಾಣ ಪತ್ರದ ಮೂಲಕ ನ್ಯಾಯಾಲಯದಲ್ಲಿ ಹಾಜರಿದ್ದು ಸಲ್ಲಿಸಬಹುದಾಗಿದೆ. ಪಾಟೀ ಸವಾಲನ್ನು ಮಾತ್ರ ಭೌತಿಕ ಹಾಜರಿಯಿಂದ ಎದುರಿಸಬೇಕಿದೆ. ಗ್ರಾಹಕರ ವೇದಿಕೆಯಲ್ಲಿ ದೂರುದಾರನು ಪ್ರಮಾಣ ಪತ್ರದ ಮೂಲಕ ಸಾಕ್ಷಿಯು ಕೋರ್ಟ್ ನಲ್ಲಿ ಹಾಜರಿದ್ದು ಸಲ್ಲಿಸಬೇಕು. ಪಾಟೀಸವಾಲು ಅವಶ್ಯವಿದ್ದಲ್ಲಿ ಮಾತ್ರ ಎದುರುದಾರನು ಪ್ರಶ್ನೆಗಳ ರೂಪದಲ್ಲಿಯ ಪಾಟೀ ಸವಾಲುಗಳನ್ನು ಲಿಖಿತ ಮೂಲಕ ಹಾಜರು ಪಡಿಸಿದಾಗ ಲಿಖಿತ ಮೂಲಕವೇ ಉತ್ತರ ಪಡೆಯಬಹುದಾಗಿದೆ. ಆದರೆ, ಅಲ್ಲಿ ಸಹ ಈ ಪ್ರಕ್ರಿಯೆಯಿಂದ ಪರಿಣಾಮಕಾರಿಯಾಗಿ ಸಿಗಬೇಕಾದ ನ್ಯಾಯ ದೊರೆಯತ್ತಿಲ್ಲ.

ಪ್ರಸ್ತುತ ಸಂದರ್ಭದಲ್ಲಿ ಜನದಟ್ಟಣೆಯನ್ನು ತಡೆಯಲು ಮತ್ತು ಸಾಮಾಜಿಕ ಮತ್ತು ವ್ಯಕ್ತಿಗತ ಅಂತರ ಕಾಪಾಡುವ ದೃಷ್ಟಿಯಿಂದ ಸಂಪೂರ್ಣ ನ್ಯಾಯಾಲಯದ ಕಲಾಪಗಳನ್ನು ಅನ್‌ಲೈನ್ ಮೂಲಕ ನಡೆಸುವುದು ಸೂಕ್ತವೂ ಅಲ್ಲ ಸಮಂಜಸವೂ ಅಲ್ಲ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು ಇ-ಕಮಿಟಿ ಛೇರ‍್ಮನ್‌ರಾದ ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟಂತೆ, “ಭವಿಷ್ಯದಲ್ಲಿ ತೆರೆದ ನ್ಯಾಯಾಲಯ ಹಾಗೂ ವರ್ಚುವಲ್ ನ್ಯಾಯಾಲಯಗಳ ಮಿಶ್ರಣ ರೂಪದ ವ್ಯವಸ್ಥೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು’’ ಅನ್ನುವುದು ಒಪ್ಪಿಕೊಳ್ಳಬೇಕಾದ ಮಾತು.

ಸದ್ಯ ನ್ಯಾಯಾಲಯಗಳಲ್ಲಿ ಬಹಳಷ್ಟು ಪ್ರಕರಣಗಳು ಬಾಕಿ ಇದ್ದರೂ ಸಹ ಆನ್ ಲೈನ್ ಕಾರ್ಯಕಲಾಪಗಳಿಗಿಂತ, ವ್ಯಾಜ್ಯದಾರರಿಗೆ ಸಾಕಷ್ಟು ತಿಳಿವಳಿಕೆ ಮತ್ತು ರಾಜೀಸಂಧಾನ ಮಧ್ಯಸ್ಥಿಕೆ ರೀತಿಯಲ್ಲಿ ಪ್ರಕರಣಗಳನ್ನು ಅಂತಿಮಗೊಳಿಸುವುದು ಬಹಳ ಸಮಂಜಸ ಮತ್ತು ಸೂಕ್ತ. ಆ ಕಾರಣ ತಕ್ಷಣವೇ ಆನ್ ಲೈನ್ ಮೂಲಕ ನ್ಯಾಯಾಲಯದ ಕಾರ್ಯಕಲಾಪಗಳನ್ನು ಜಾರಿಗೆ ತರದೆ ಹಂತ-ಹಂತವಾಗಿ ಪರಿಣಾಮವನ್ನು ಅವಲೋಕಿಸಿ ಹೆಜ್ಜೆಯಿಡುವುದು ಸರಿಯಾದ ಮಾರ್ಗವೆನ್ನಿಸುತ್ತದೆ.

*ಲೇಖಕರು ದಾವಣಗೆರೆಯ ಹಿರಿಯ ವಕೀಲರು, ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು.

Leave a Reply

Your email address will not be published.