ನ್ಯಾಯಾಲಯ ಜನಪರ ತೀರ್ಪು ನೀಡಲಿ

-ಡಾ.ಮಹಾಬಲೇಶ್ವರ ರಾವ್

ಹೊಸ ವರ್ಷಕ್ಕೆ ಹೊಸ ಠರಾವುಗಳನ್ನು ಘೋಷಿಸಿ ಒಂದೆರಡು ದಿನಗಳ ಮಟ್ಟಿಗೆ ಸಂಭ್ರಮಿಸಿ ಮರೆಯುವವರೇ ಹೆಚ್ಚು. ನಾನಂತೂ ಯಾವತ್ತೂ ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಸ್ವಾಗತಿಸಿದ್ದೇ ಇಲ್ಲ. ಆದರೆ ನೀವು ಕೇಳಿದಿರೆಂದು ಈ ಕೆಲವು ಮಾತುಗಳು.

ಕೊರೊನಾ ದೆಸೆಯಿಂದ ಜಾಗತಿಕ ಶಿಕ್ಷಣ ವ್ಯವಸ್ಥೆ, ಅರ್ಥ ವ್ಯವಸ್ಥೆ, ರಾಜಕೀಯ, ಸಾಮಾಜಿಕ, ಸಾಂಸ್ಕöÈತಿಕ ವ್ಯವಸ್ಥೆ ಉಧ್ವಸ್ಥಗೊಂಡಿದೆ. ಜೀವ ಜೀವನ ಗಂಡಾOತರದಲ್ಲಿದೆ. ಹೊಸ ವರ್ಷದಲ್ಲಾದರೂ ಪರಿಸ್ಥಿತಿ ತಿಳಿಯಾಗಲಿ. ಜನರ ಮೊಗದಲ್ಲಿ ಮಂದಹಾಸ ಅರಳಲಿ. ಬೆಂದು ಬಸವಳಿದ ಕೂಲಿಕಾರ್ಮಿಕರಿಗೆ, ವಲಸೆಕಾರ್ಮಿಕರಿಗೆ ಮರಳಿ ಉದ್ಯೋಗ ದೊರೆಯಲಿ. ಸೂಕ್ತ ಮುಂಜಾಗರುಕತಾ ಕ್ರಮಗಳೊಂದಿಗೆ ಜನಜೀವನ ಸರಿಯಾದ ಹಳಿಗಳಿಗೆ ಮರಳಲಿ. ಹೋರಾಟದ ಹಾದಿಯಲ್ಲಿರುವ ರೈತರಿಗೆ ನ್ಯಾಯ ಸಿಗಲಿ.

ಮಹಿಳೆಯರ ಮೇಲಿನ ದೌರ್ಜನ್ಯ, ಕೋಮು ಘರ್ಷಣೆಗಳು ಇನ್ನಿಲ್ಲವಾಗಲಿ. ಅಭಿವ್ಯಕ್ತಿ ಸ್ವಾತಂತ್ರ÷್ಯ ಮತ್ತು ಅಭಿಪ್ರಾಯ ಸ್ವಾತಂತ್ರ÷್ಯದ ಮೇಲಿನ ದಬ್ಬಾಳಿಕೆ ಕಡಿಮೆಯಾಗಿ ಆನಂದ್ ತೇಲ್ತುಂಬ್ಡೆ, ವರವರ ರಾವ್ ಮುಂತಾದ ಸಾಮಾಜಿಕ ಕಾರ್ಯಕರ್ತರು ಸೆರೆಮನೆಯಿಂದ ಬಿಡುಗಡೆಗೊಳ್ಳಲಿ. ನಮ್ಮ ನ್ಯಾಯಾಲಯಗಳು ಜನಪರವಾದ ತೀರ್ಪುಗಳನ್ನು ನೀಡಲಿ. ಯಾವುದೇ ತೀರ್ಪು ನೀಡುವ ಮುನ್ನ ಸಂವಿಧಾನ ಖಾತ್ರಿಪಡಿಸಿದ ಹಕ್ಕುಗಳು ಹಾಗೂ ಸೋತು ಸುಣ್ಣವಾದ, ಮಾತಿನ ಹಕ್ಕುಗಳನ್ನು ಕಳೆದುಕೊಂಡ, ಮಾತೇ ಆಡಲಾರದ ಸಾಮಾನ್ಯ ಜನತೆ ನ್ಯಾಯಾಧೀಶರ ಕಣ್ಮುಂದೆ ಬರಲಿ.

ಪಕ್ಷದ ನೆಲೆಯಲ್ಲಿ ಗೆದ್ದುಬಂದ ಸರಕಾರಗಳು ಪಕ್ಷದ ಹಿತವನ್ನು ಗೌಣವಾಗಿಸಿ, ಮುಂದಿನ ಚುನಾವಣೆಯ ಸೋಲುಗೆಲವಿನ ಲೆಕ್ಕಾಚಾರಮಾಡದೆ ಈ ನಾಡಿನ ಸಂತ್ರಸ್ತರ, ಹಿಂದುಳಿದವರ ಏಳಿಗೆಗೆ ಯೋಗ್ಯವಾದ ಕಾನೂನುಗಳನ್ನು ಮಾಡಲಿ; ಅಲ್ಪಸಂಖ್ಯಾತರನ್ನು, ಬುದ್ಧಿಜೀವಿಗಳನ್ನು ದೇಶದ್ರೋಹಿ ಗಳು, ನಗರ ನಕ್ಸಲರು ಎಂದು ಕೆಟ್ಟದಾಗಿ ಚಿತ್ರಿಸಿ ಸಾಮಾಜಿಕ ಅಪನಂಬಿಕೆ, ಅವಿಶ್ವಾಸ ಹಾಗೂ ತಪ್ಪು ತಿಳಿವಳಿಕೆ ಮೂಡಿಸದಿರಲಿ. ಕಳೆದ ಹತ್ತು ತಿಂಗಳುಗಳಿAದ ವಿದ್ಯಾರ್ಥಿಗಳ ಮುಖ ಕಾಣದ ಶಾಲೆಕಾಲೇಜುಗಳು ಬೇಗನೆ ತೆರೆಯಲಿ. ಶಿಕ್ಷಕರಾದ ನಾವು ವಿದ್ಯಾರ್ಥಿಗಳನ್ನು ಕಂಡು ಮಾತನಾಡುವ, ಸಂವಾದಿಸುವ, ಚರ್ಚಿಸುವ ಮತ್ತು ಕಲಿಸುವ ವಾತಾವರಣ ಮೂಡಲಿ. ವಿದ್ಯಾರ್ಥಿಗಳು ಹೊಸ ಹುರುಪಿನಿಂದ ಕಲಿಯುವ, ಕಲಿಕೆಯ ಒಡೆಯರಾಗುವ, ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳುವ, ರೂಢಿಗತ ವಿಚಾರಗಳನ್ನು ಗಟ್ಟಿಯಾಗಿ ಪ್ರಶ್ನಿಸುವ ಸಂದರ್ಭ ಒದಗಲಿ.

ಸಾವಿರಾರು ಟೀಕೆ ಟಿಪ್ಪಣಿಗಳಿಗೆ ಒಳಗಾದ ನೂತನ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವಿವೇಕ ಹಾಗೂ ತರಾತುರಿಯಿಂದ ಜಾರಿಗೆ ಕೊಡದೆ ಸಾವಧಾನದಿಂದ ಭಿನ್ನ ಧ್ವನಿಗಳನ್ನು ಕೇಳಿಸಿಕೊಂಡು ಮರುವಿಮರ್ಶೆ ಮಾಡುವ ವಿವೇಕ ಮತ್ತು ಪ್ರಜಾಪ್ರಭುತ್ವೀಯ ದೃಷ್ಟಿ ಮೊಳೆಯಲಿ. ಸರಕಾರಿ, ಅನುದಾನಿತ, ಖಾಸಗಿ, ಅರೆಕಾಲಿಕ, ಅತಿಥಿ ಶಿಕ್ಷಕರೆಲ್ಲರನ್ನೂ ಸಮಾನವಾಗಿ ಗೌರವಿಸುವ, ಅವರ ಸ್ಥಿತಿಗತಿಗಳನ್ನು ಸುಧಾರಿಸುವ ಸದ್ಬುದ್ಧಿ ಸರಕಾರಗಳಿಗೆ ಒದಗಲಿ. ನಿರೀಕ್ಷೆಯ ಪಟ್ಟಿಯನ್ನು ಎಷ್ಟೂ ಬೆಳೆಸಬಹುದು; ಕಣ್ಣಿಗೆ ರಾಚುವ ಕಠೋರ ವಾಸ್ತವ ಇದೆಲ್ಲ ಸಾಕಾರಗೊಂಡೀತೇ? ಎಂದು ಪ್ರಶ್ನಿಸುತ್ತಲೇ ಇರುತ್ತದೆ.

Leave a Reply

Your email address will not be published.