ನ್ಯೂ ನಾರ್ಮಲ್!

ಈ ಕೋವಿಡ್ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಸಹಜ ಏರುಪೇರುಗಳು ಸಹ ಅನೇಕರಲ್ಲಿ ವಿಪರೀತ ಅನುಮಾನಗಳಿಗೆ ಕಾರಣವಾಗಿ ಭಯ ಹುಟ್ಟಿಸುತ್ತಿವೆ. ಕೆಲ ದಿನಗಳಿಂದ ನನಗೂ ಎದೆಯಲ್ಲಿ ಏನೋ ಅಸೌಖ್ಯ ಅನುಭವ ಉಂಟಾಗುತ್ತಿತ್ತು; ಅಸಿಡಿಟಿ ಇರಬಹುದೆಂದು ನಿರ್ಲಕ್ಷಿಸುತ್ತಲೇ ಬಂದಿದ್ದೆ. ಕೊನೆಗೆ ಯಾಕೋ ರಿಸ್ಕ್ ಬೇಡ ಎಂದೆನಿಸಿ ಪರಿಚಿತ ಹೃದಯತಜ್ಞ ಡಾ.ಮಹಾಂತೇಶ ಅವರನ್ನು ಸಂಪಕರ್ಿಸಿದೆ.

ಸಕ್ಕರೆ ಪ್ರಮಾಣ, ರಕ್ತದೊತ್ತಡ, ಆಕ್ಸಿಜೆನ್ ಸ್ಯಾಚುರೇಷನ್, ಇಸಿಜಿ, ಎಕ್ಸರೇ… ಇತ್ಯಾದಿ ತಪಾಸಣೆ ಮಾಡಿ ಮುಗಿಸಿದ ವೈದ್ಯರು ಕೊನೆಗೆ, `ಎಲ್ಲಾ ನಾರ್ಮಲ್’ ಎಂದು ಘೋಷಿಸಿದರು. ಅದು ನನ್ನ ವ್ಯಕ್ತಿಗತ ಅರೋಗ್ಯ ಸ್ಥಿತಿ ಮಟ್ಟಿಗೆ ಹೊರಬಿದ್ದ ಪರಿಶೀಲನೆಯ ಫಲಿತಾಂಶ. ಹಾಗಾಗಿ ಆ ಕ್ಷಣದಲ್ಲಿ ಮನಸ್ಸು ತುಸು ನಿರಾಳತೆ ಅನುಭವಿಸಿತು.

ಆದರೆ ಆಸ್ಪತ್ರೆಯಿಂದ ಮನೆಯ ತನಕ ಸಾಗಿದ ಹಾದಿಯುದ್ದಕ್ಕೂ ವೈಯಕ್ತಿಕ ಆರೋಗ್ಯದಾಚೆಯ ಹಲವು ಚಿಂತೆಯ ಎಳೆಗಳು ಗಲಿಬಿಲಿಗೆ ದೂಡಿದವು. ಸಮಷ್ಟಿಯ ಹೋಲಿಕೆಯಲ್ಲಿ ಅಣುವಿಗಿಂತ ಸಣ್ಣ ಪ್ರಮಾಣದ ನನ್ನ ಆರೋಗ್ಯ, ಬದುಕು ಅಥವಾ ಸಾವು ಗಣನೆಗೇ ಯೋಗ್ಯವಲ್ಲದಷ್ಟು ಕ್ಷುಲ್ಲಕ. ಈ ಅಲ್ಪ ಏರುಪೇರೇ ಇಷ್ಟೊಂದು ಕಂಗೆಡಿಸಬಹುದಾದರೆ ಇನ್ನು ಸಮುದಾಯದ ಒಟ್ಟು ಮೊತ್ತದಲ್ಲಿ ಇದರ ಪ್ರಭಾವ ಎಷ್ಟು ಬಲಶಾಲಿ, ಅಪಾಯಕಾರಿ ಆಗಿರಲು ಸಾಧ್ಯ ಎಂಬ ಕಲ್ಪನೆ ಇನ್ನಷ್ಟು ಕನಲುವಂತೆ ಮಾಡಿತು.

ವೈದ್ಯರ ಬಾಯಿಯಿಂದ ಹೊರಬಂದ `ಎಲ್ಲಾ ನಾರ್ಮಲ್’ ಉದ್ಗಾರದ ಜಾಗೆಯನ್ನು ಈಗ ವಿಶ್ವದ ಎಲ್ಲೆಡೆ ನಲಿದಾಡುತ್ತಿರುವ `ನ್ಯೂ ನಾರ್ಮಲ್’ ಪದ ಅತಿಕ್ರಮಿಸಿ ಕಿವಿಯಲ್ಲಿ ರಿಂಗಣಿಸತೊಡಗಿತು. ಭಯ, ಆತಂಕ, ಕಾಲ್ಪನಿಕ ಅಸೌಖ್ಯ, ಸುತ್ತಲಿನ ಸಾವುಗಳು, ಸುಲಿಗೆ, ದುಃಖತಪ್ತ ಪರಿಸರ, ಕಾರ್ಮಿಕರ ಸಂಕಟ, ನೌಕರರ ಪರದಾಟ, ಆರ್ಥಿಕ ಅಧೋಗತಿ ಎಲ್ಲವೂ ಈ `ಹೊಸ ಸಹಜತೆ’ ಪದದೊಳಗೆ ಅವಿತು ಕುಳಿತಿದ್ದವು.

ಈ ಸಂಚಿಕೆ ಮುಗಿಸುವ ಹೊತ್ತಿಗೆ ಹಾವೇರಿಯಲ್ಲಿ ನನ್ನ ಹೈಸ್ಕೂಲು ಸಹಪಾಠಿ, ಹೋಗಲೇ-ಬಾರಲೇ ಮಿತ್ರ ಸಿದ್ಧಣ್ಣ ಇನ್ನಿಲ್ಲವೆಂಬ ವಾರ್ತೆ ದಿಢಿರನೇ ಬಂದೆರಗಿತು. ಅವನ ವರ್ಣರಂಜಿತ ವ್ಯಕ್ತಿತ್ವ, ಜೀವನೋತ್ಸಾಹ, ದಶಕಗಳ ಒಡನಾಟ ನನ್ನೊಳಗೆ ಸಿನಿಮಾ ರೀಲಿನಂತೆ ಬಿಚ್ಚಿಕೊಂಡು ಹೃದಯ ಹಿಂಡಿತು. ಆದರೆ ಅಕ್ಷರಭಾಷೆಯ ಹಂಗಿನಾಚೆಗೆ ಅಸ್ತಿತ್ವ ಉಳಿಸಿಕೊಂಡಿರುವ ಇಂತಹ ಭಾವದೀಪ್ತಿಗೆ, ಹೃದಯಭಾಷೆಗೆ ಸೋಂಕು ವಾತಾವರಣದ ಆವರಣದಲ್ಲಿ ಪ್ರವೇಶವಿಲ್ಲ. ಹಾಗಾಗಿ ಅಗಲಿದ ಗೆಳೆಯನ ಮುಖವನ್ನು ಕೊನೆಯದಾಗಿ ನೋಡಲಾಗದ ಅಸಹಾಯಕತೆಯ ಲಿಪಿಯಾಗಲೀ, ವ್ಯಾಕರಣವಾಗಲೀ, ಭಾಷೆಯಾಗಲೀ ಹೊಸ ಸಹಜತೆಗೆ ಅರ್ಥವಾಗಲಾರದು.

ಇದು ಅಸಹಜತೆಯನ್ನೇ ಹೊಸ ಸಹಜತೆ ಎಂಬುದಾಗಿ ಹೆಸರಿಸಿಕೊಂಡು ಸವಾಲನ್ನು ಸಂಭ್ರಮಿಸುವ, ಸಂಕಷ್ಟಗಳನ್ನು ಸಹಿಸಿಕೊಳ್ಳುವ ಹೊಸ ಮಾರ್ಗವೋ, ಹೊಸ ತಂತ್ರವೋ ಆಗಿರಬಹುದೇ? ವ್ಯಕ್ತಿಯ, ವ್ಯವಸ್ಥೆಯ, ಸಮುದಾಯದ, ವಿಜ್ಞಾನದ, ನಿಲುವು-ನಿರ್ಧಾರದ ಅಸಹಾಯಕತೆ ಕೂಡಾ ಹೊಸ ಸಹಜತೆ ಪರಿಧಿ ಸೇರಿಬಿಟ್ಟಿತೇ…?

ಈ ಸಂಚಿಕೆಯ ಕೋವಿಡ್ ಅಂತ್ಯ ಕುರಿತ ಚರ್ಚೆಯಲ್ಲಿ ವಿದ್ವತ್ಪೂರ್ಣ ವಿಚಾರಗಳು ಮಂಡನೆಯಾಗಿವೆ. ಓದುಗರನ್ನು ಕೊರೆಯುತ್ತಿರುವ ಬಹುಪಾಲು ಶಂಕೆಗಳಿಗೆ, ಗೊಂದಲಗಳಿಗೆ ಇಲ್ಲಿಯ ಲೇಖನಗಳಲ್ಲಿ ಪರಿಹಾರದ ಹೊಳಹುಗಳು ದೊರೆಯುತ್ತವೆಂದು ಭಾವಿಸುವೆ. ಕೊನೆಗೆ ಲಸಿಕೆಯೋ, ಔಷಧಿಯೋ, ಪ್ರತಿರಕ್ಷೆಯೋ ಕೊರೊನಾ ಸೋಂಕನ್ನು ಮಣಿಸೀತು ಎಂದೇ ಭಾವಿಸೋಣ. ಅಲ್ಲಿಗೆ ವಿಜ್ಞಾನದ ಕರ್ತವ್ಯ ಮುಗಿಯುತ್ತದೆ. ಆಗಲೂ ನಾವು ಹೊಸ ಸಹಜತೆಯ ಜಾಡಿನಿಂದ ಬಿಡುಗಡೆ ಹೊಂದುವುದು, ನೈಜ ಸಹಜತೆ ಮಾರ್ಗಕ್ಕೆ ಮರಳುವತ್ತ ಶ್ರಮಿಸುವುದು ಬಾಕಿ ಉಳಿದಿರುತ್ತದೆ. 

Leave a Reply

Your email address will not be published.