ಪಂಚರಾಜ್ಯ ಚುನಾವಣೆಗಳು: ರಾಷ್ಟ್ರ ರಾಜಕಾರಣ ಪ್ರಭಾವಿಸಬಹುದೇ?

ಭಾರತೀಯ ಜನತಾ ಪಾರ್ಟಿ ಅಸ್ಸಾಮಿನಲ್ಲಿ ಅಧಿಕಾರ ಉಳಿಸಿಕೊಂಡು, ಬಂಗಾಳವನ್ನು ಗೆಲ್ಲಲು ಬಯಸುತ್ತದೆ. ಇನ್ನು ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದ್ದರೆ ಸಾಕು. ಪುದುಚೆರಿಯಲ್ಲಿ ಆಳುವ ಪಕ್ಷಗಳ ಪೈಕಿ ಒಂದೆನಿಸಿಕೊಂಡರೆ ತೃಪ್ತ. ಕೇರಳದಲ್ಲಿ ತನ್ನ ಇರುವನ್ನು ಇನ್ನಷ್ಟು ಹರವಿಕೊಂಡರೆ ಅದೂ ಸಾಧನೆಯೇ. ಬಂಗಾಳವನ್ನು ಗೆದ್ದರೆ ಅದು ಬಲು ದೊಡ್ಡ ಪಾರಿತೋಷಕ.

ಡಿ.ಉಮಾಪತಿ

ದೇಶ ಮತ್ತೊಂದು ಆಘೋಷಿತ ದೀರ್ಘಾವಧಿ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವ ಸಂದೇಹಗಳಿವೆ. ಜನತಂತ್ರ ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿವೆ. ಮುಂಬರುವ ದಿನಗಳು ಇನ್ನಷ್ಟು ದುರ್ಭರವಾಗುವ ಸೂಚನೆಗಳು ಗೋಚರಿಸಿವೆ. ಅವು ಧರಿಸಬಹುದಾದ ಸರ್ವಾಧಿಕಾರದ ಚಹರೆಗಳ ಕುರಿತು ಆತಂಕದ ಕಂಪನಗಳು ಹರಿದಿವೆ.

ಇಂತಹ ಸನ್ನಿವೇಶದಲ್ಲಿ ನಾಲ್ಕು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಜರುಗುತ್ತಿರುವ ಚುನಾವಣೆಗಳ ಫಲಿತಾಂಶಗಳು ನೀಡುವ ಸಂದೇಶಗಳು ನಿರ್ಣಾಯಕ ಕಥಾನಕವನ್ನು ಕಟ್ಟಲಿವೆ. ಲೋಕಸಭಾ ಚುನಾವಣೆಗಳು ಇನ್ನೂ ದೂರದಲ್ಲಿವೆ. ಆದರೆ ಈ ನಡುವೆ ನಡೆಯುವ ಎಲ್ಲ ವಿದಾನಸಭಾ ಚುನಾವಣೆಗಳ ಫಲಿತಾಂಶಗಳು ರಾಷ್ಟ್ರೀಯ ರಾಜಕಾರಣವನ್ನು ಒಂದಲ್ಲ ಒಂದು ರೀತಿಯಿಂದ ಪ್ರಭಾವಿಸುವುದು ನಿಶ್ಚಿತ.

ಅಸ್ಸಾಮ್, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.28ರಿಂದ ಶೇ.32ರಷ್ಟಿದೆ. ಹಿಂದೂ-ಮುಸ್ಲಿಮ್ ಧ್ರುವೀಕರಣದ ಬಿಜೆಪಿ ರಾಜಕಾರಣಕ್ಕೆ ಫಲವತ್ತು ನೆಲಗಳು. ತಮಿಳುನಾಡಿನಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಶೇ.5.86 ಮಾತ್ರ. ಜೊತೆಗೆ ದ್ರಾವಿಡ ರಾಜಕಾರಣ ಬೇರೂರಿದ ಭೂಮಿ. ಬಿಜೆಪಿಯ ಆಟಕ್ಕೆ ಇದು ಮೈದಾನವಲ್ಲ.

ಭಾರತೀಯ ಜನತಾ ಪಾರ್ಟಿ ಅಸ್ಸಾಮಿನಲ್ಲಿ ಅಧಿಕಾರ ಉಳಿಸಿಕೊಂಡು, ಬಂಗಾಳವನ್ನು ಗೆಲ್ಲಲು ಬಯಸುತ್ತದೆ. ಇನ್ನು ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದ್ದರೆ ಸಾಕು. ಪುದುಚೆರಿಯಲ್ಲಿ ಆಳುವ ಪಕ್ಷಗಳ ಪೈಕಿ ಒಂದೆನಿಸಿಕೊಂಡರೆ ತೃಪ್ತ. ಕೇರಳದಲ್ಲಿ ತನ್ನ ಇರುವನ್ನು ಇನ್ನಷ್ಟು ಹರವಿಕೊಂಡರೆ ಅದೂ ಸಾಧನೆಯೇ. ಬಂಗಾಳವನ್ನು ಗೆದ್ದರೆ ಅದು ಬಲು ದೊಡ್ಡ ಪಾರಿತೋಷಕ. ಬಿಜೆಪಿ-ಸಂಘಪರಿವಾರದ ರಾಜಕೀಯ ಮತ್ತು ಸೈದ್ಧಾಂತಿಕ ಕಾರ್ಯಸೂಚಿಗೆ ಭಾರೀ ರಭಸ ಲಭಿಸೀತು.

ರಾಷ್ಟ್ರರಾಜಕಾರಣದಲ್ಲಿ ಪಾತಾಳ ತಲುಪಿರುವ ಕಾಂಗ್ರೆಸ್ಸಿಗೆ ಅಸ್ಸಾಮನ್ನು ಮರಳಿ ಗೆದ್ದುಕೊಳ್ಳುವುದು, ತಮಿಳುನಾಡಿನಲ್ಲಿ ಡಿ.ಎಂ.ಕೆ. ಹೆಗಲೇರಿ ಅಧಿಕಾರ ಹಿಡಿಯುವುದು, ಮೊನ್ನೆ ಮೊನ್ನೆ ಚುನಾವಣೆಯ ಹೊಸ್ತಿಲಿನಲ್ಲಿ ಕಳೆದುಕೊಂಡ ಪುದುಚೆರಿ ಸರ್ಕಾರ ಬಿಜೆಪಿಯ ಜೋಳಿಗೆಗೆ ಉರುಳದಂತೆ ತಡೆಯುವುದು ಹಾಗೂ ಬಂಗಾಳದಲ್ಲಿ ಮುಳುಗದಂತೆ ತೇಲುವುದು ಅನಿವಾರ್ಯ. ಉಳಿದಂತೆ ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಜನಪ್ರಿಯ ಎಡರಂಗ ಸರ್ಕಾರದ ಓಟವನ್ನು ತಡೆದು ತಾನು ಅಧಿಕಾರ ಹಿಡಿಯುವುದು ಕಾಂಗ್ರೆಸ್ಸಿನ ಅತೀವ ಅನಿವಾರ್ಯ. ರಾಹುಲ್ ಗಾಂಧಿ ಕೇರಳದಿಂದ ಆರಿಸಿ ಬಂದಿರುವ ಸಂಸದರಾದ ಕಾರಣ ಅಲ್ಲಿನ ಸೋಲು ಕೆಲ ಕಾಲವಾದರೂ ಅವರ ಹೆಗಲೇರಿ ಕಾಡೀತು.

ಬಂಗಾಳವನ್ನು ಕೈವಶ ಮಾಡಿಕೊಳ್ಳುವ ಜಿದ್ದಿನಿಂದ ಧನಬಲ, ತೋಳ್ಬಲ, ಕೇಂದ್ರದ ಅಧಿಕಾರದಂಡ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಪಕ್ಷಾಂತರ ರಾಜಕಾರಣದ ತಂತ್ರಗಳು ವ್ಯೂಹಗಳನ್ನು ಪಣಕ್ಕೆ ಒಡ್ಡಿ ಕಾದಾಡಿದೆ ಆಕ್ರಮಣಕಾರಿ ಬಿಜೆಪಿ. 2019ರ ಲೋಕಸಭಾ ಚುನಾವಣೆಗಳಲ್ಲಿ 42 ಸ್ಥಾನಗಳ ಪೈಕಿ 18 ಕ್ಷೇತ್ರಗಳನ್ನು ಗೆದ್ದು ಇತಿಹಾಸ ರಚಿಸಿತ್ತು ಬಿಜೆಪಿ. ಇಂತಹ ಪ್ರಚಂಡ ದೋರ್ದಂಡ ಬಿಜೆಪಿಯ ವಿರುದ್ಧ ಮಮತಾ ಅವರದು ಕೆಚ್ಚಿನ ಕಾದಾಟ. ಸತತ ಎರಡು ಸಲ ಗೆದ್ದು ಮೂರನೆಯ ಬಾರಿಯೂ ತೀವ್ರ ಸೆಣಸಿನಲ್ಲಿದೆ ತೃಣಮೂಲ ಕಾಂಗ್ರೆಸ್ಸು.

ಮಾರ್ಚ್ ಮೊದಲ ವಾರ ಹೊರಬಿದ್ದಿದ್ದ Times Now-C-Voter ಸಮೀಕ್ಷೆಯು ಮಮತಾ ಗೆಲುವು ಸಲೀಸೆಂದು ಸಾರಿತ್ತು. ಇತ್ತೀಚೆಗೆ ಪ್ರಕಟವಾಗಿರುವ ABP News- CNX ಸಮೀಕ್ಷೆಯೂ ಮಮತಾ ಅವರಿಗೆ ಮತ ಹಾಕಬಯಸುವವರ ಪ್ರಮಾಣವೇ (ಶೇ.40.07) ಹೆಚ್ಚೆಂದು ಸಾರಿದೆ. ಆದರೆ ಬಿಜೆಪಿ ಗೆಲುವಿನ ಗಮ್ಯದತ್ತ ಮಮತಾ ಬೆನ್ನ ಹಿಂದೆಯೇ (ಶೇ.37.75) ದಾಪುಗಾಲಿಡತೊಡಗಿದೆ. ಈ ಕಾಳಗದಲ್ಲಿ ಮಮತಾ ಗೆದ್ದರೆ ಬಿಜೆಪಿಯ ಆಕ್ರಮಣದ ವಿರುದ್ಧ ಸೆಣೆಸುವ ಪ್ರಾದೇಶಿಕ ಪಕ್ಷಗಳ ನೈತಿಕ ಸ್ಥೈರ್ಯ ಹೆಚ್ಚಲಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಗದ್ದುಗೆಯ ಮೇಲೆ ಕಣ್ಣಿಟ್ಟಿದ್ದ ಮಮತಾ ಬಿಜೆಪಿ ವಿರೋಧಿ ಪಕ್ಷಗಳನ್ನೆಲ್ಲ ಒಂದು ವೇದಿಕೆಗೆ ತರುವ ಗಂಭೀರ ಪ್ರಯತ್ನ ನಡೆಸಿದ್ದುಂಟು. ಆದರೆ ಮೋದಿಯವರ ಘನ ಗೆಲುವು ಈ ಲೆಕ್ಕಾಚಾರಗಳನ್ನು ಬೀಸಿ ಒಗೆಯಿತು. ಈ ಚುನಾವಣೆಯಲ್ಲಿ ಗೆದ್ದರೆ ಮಮತಾ ತಮ್ಮ ಹಳೆಯ ಪ್ರಯತ್ನವನ್ನು ಪುನಃ ಮುಂದುವರೆಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ರಾಜಕಾರಣ ಗರಿಗೆದರೀತು.

ತಮಿಳುನಾಡಿನಲ್ಲಿ ಕರುಣಾನಿಧಿಯವರಿಲ್ಲದ ಮೊದಲ ವಿಧಾನಸಭಾ ಚುನಾವಣೆಯಿದು. ಅವರ ಮಗ ಮತ್ತು ಡಿಎಂಕೆಯ ಉತ್ತರಾಧಿಕಾರಿ ಎಂ.ಕೆ.ಸ್ಟ್ಯಾಲಿನ್ ಅವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆಯೂ ಹೌದು. ಅಣ್ಣಾ ಡಿ.ಎಂ.ಕೆ.ಯನ್ನು ನಿಯಂತ್ರಿಸುತ್ತಿರುವ ತೆರೆಮರೆಯ ಸೂತ್ರಧಾರಿಯಾಗಿ ತಮಿಳುನಾಡಿನಲ್ಲಿ ಬಿಜೆಪಿಯ ಶಕ್ತಿ- ಪ್ರಭಾವವನ್ನು ಪರೀಕ್ಷಿಸುವ ಚುನಾವಣೆ. ಜಯಲಲಿತಾ ಇಲ್ಲದ ಅಣ್ಣಾ ಡಿ.ಎಂ.ಕೆ.ಯನ್ನು `ಅಪಹರಿಸುವ’ ಅದರ ಆರಂಭಿಕ ಹವಣಿಕೆ ಸಫಲ ಆಗಲಿಲ್ಲ. ಜಯಲಲಿತಾ ಉತ್ತರಾಧಿಕಾರಿ ಆಗಬಯಸಿದ್ದ ಶಶಿಕಲಾ ಈಗಲೂ ಅಧಿಕಾರ ಗದ್ದುಗೆಯ ಸುತ್ತ ಹೊಂಚು ಹಾಕಿದ್ದಾರೆ. ಈಕೆಯ ಕೈಗೊಂಬೆಯಾಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತವರು ಈಡಪ್ಪಾಡಿ ಪಳನಿಸ್ವಾಮಿ.  ಮತ್ತೊಂದು ಬಣವಾಗಿ ಸಿಡಿದು ದೂರವಾಗಿದ್ದ ತಮ್ಮದೇ ಪಕ್ಷದ ಮತ್ತೊಬ್ಬ ನಾಯಕ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜೊತೆಗೆ ಸಂಧಾನ ಮಾಡಿಕೊಂಡ ನಂತರ ಶಶಿಕಲಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸ್ವಾಮಿ ಮತ್ತು ಸೆಲ್ವಂ ಅವರನ್ನು ಹತ್ತಿರ ತಂದಿದ್ದು ಬಿಜೆಪಿಯೇ. ಹತ್ತು ವರ್ಷದಿಂದ ಅಧಿಕಾರದಲ್ಲಿರುವ ಅಣ್ಣಾ ಡಿ.ಎಂ.ಕೆ. ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಬೇಕಿದೆ. ಹತ್ತು ವರ್ಷಗಳಿಂದ ಅಧಿಕಾರ ದೊರೆಯದ ಡಿ.ಎಂ.ಕೆ. ಈ ಬಾರಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.

ಶಶಿಕಲಾ ಅವರು ಅಣ್ಣಾ ಡಿಎಂಕೆಯನ್ನು ಗೆಲ್ಲಿಸುವ ಸ್ಥಿತಿಯಲ್ಲೇನೂ ಇಲ್ಲ. ಆದರೆ ಸೋಲಿಸಬಲ್ಲರು. ಪಕ್ಷದ ಪ್ರಧಾನಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿರುವ ಕ್ರಮವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಕಾನೂನು ಸಮರ ಕೇವಲ ಪ್ರಧಾನಕಾರ್ಯರ್ಶಿ ಹುದ್ದೆಯದಲ್ಲ. ಪಕ್ಷದ ಐತಿಹಾಸಿಕ ಎರಡೆಲೆಗಳ ಚುನಾವಣಾ ಚಿಹ್ನೆಯನ್ನು ನಿಯಂತ್ರಿಸುವವರು ಯಾರು ಎಂಬುದು ತೀರ್ಮಾನವಾಗಲಿದೆ.

ತಮಿಳುನಾಡಿನ ದಕ್ಷಿಣ ಮತ್ತು ಮಧ್ಯಭಾಗದ ಸೀಮೆಯಲ್ಲಿ ತೇವರ್ ಸಮುದಾಯ ರಾಜಕೀಯವಾಗಿ ಪ್ರಭಾವಶಾಲಿ ಜನಾಂಗ. ಪಾರಂಪಾರಿಕವಾಗಿ ಅಣ್ಣಾ ಡಿ.ಎಂ.ಕೆ.ಯನ್ನು ಬೆಂಬಲಿಸುವ ಜನ. ಶಶಿಕಲಾ ಇದೇ ಜನಾಂಗಕ್ಕೆ ಸೇರಿದವರು. ಉಪಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಕೂಡ ಇದೇ ಜಾತಿಯವರು. ಹೀಗಾಗಿ ಪಕ್ಷದಲ್ಲಿ ಮೂಡುವ ಸಣ್ಣ ಒಡಕೂ ಅಣ್ಣಾ ಡಿ.ಎಂ.ಕೆ.ಗೆ ಆತಂಕ ಒಡ್ಡಬಲ್ಲದು.

ಪುದುಚೇರಿ ಪರಂಪರಾಗತವಾಗಿ ಕಾಂಗ್ರೆಸ್-ಡಿ.ಎಂ.ಕೆ. ಭದ್ರಕೋಟೆ. ಈ ಕೋಟೆಯಲ್ಲಿ ಬಿರುಕು ಮೂಡಿಸಿದ್ದು ಕಾಂಗ್ರೆಸ್ಸಿಗರೇ ಆಗಿದ್ದ ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ. ತಮ್ಮದೇ ಪಕ್ಷ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ಸನ್ನು ಕಟ್ಟಿಕೊಂಡರು. ಇತ್ತೀಚೆಗೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಸದಸ್ಯರು ರಂಗಸ್ವಾಮಿಯವರ ಜೊತೆ ಕೈಗೂಡಿಸುವ ಸಾಧ್ಯತೆ ಇದೆ. ಕಿರಣ್ ಬೇಡಿಯವರನ್ನು ಉಪರಾಜ್ಯಪಾಲರನ್ನಾಗಿ ನೇಮಿಸಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್-ಡಿ.ಎಂ.ಕೆ. ಸರ್ಕಾರವನ್ನು ಎಡೆಬಿಡದೆ ಕಾಡಿತ್ತು ಬಿಜೆಪಿ. ಕಡೆಗೆ ತಾನು ನಾಮಕರಣ ಮಾಡಿದ ಮೂವರು ಶಾಸಕರು ಮತ್ತು ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರ ನೆರವಿನಿಂದ ಸರ್ಕಾರವನ್ನು ಇತ್ತೀಚೆಗೆ ಕೆಡವಿತು ಕೂಡ. ಈ ಸಾಧನೆಯ ಮೂಲಕ ರಂಗಸ್ವಾಮಿ ಪಕ್ಷ ಮತ್ತು ಅಣ್ಣಾ ಡಿ.ಎಂ.ಕೆ. ಸಹಕಾರದಿಂದ ಸರ್ಕಾರ ರಚಿಸುವ ಹವಣಿಕೆಯಲ್ಲಿದೆ. ಇತ್ತ ಡಿ.ಎಂ.ಕೆ. ಕೂಡ ರಂಗಸ್ವಾಮಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದೆ. ರಂಗಸ್ವಾಮಿ ಒಲಿದವರಿಗೆ ಸರ್ಕಾರವೂ ಒಲಿದೀತು ಎಂಬ ಪರಿಸ್ಥಿತಿ ಪುದುಚೇರಿಯದು.

ಪಶ್ಚಿಮಬಂಗಾಳ-ತ್ರಿಪುರಾವನ್ನು ಕಳೆದುಕೊಂಡ ನಂತರ ಎಡಪಕ್ಷಗಳ ಪಾಲಿಗೆ ಉಳಿದಿರುವ ರಾಜ್ಯ ಕೇರಳವೊಂದೇ. ಇಲ್ಲಿನ ಮತದಾರರು ಕಳೆದ ನಲವತ್ತು ವರ್ಷಗಳಲ್ಲಿ ಪ್ರತಿ ಚುನಾವಣೆಯಲ್ಲೂ ಸರ್ಕಾರವನ್ನು ಬದಲಿಸಿದ್ದಾರೆ. ಒಮ್ಮೆ ಎಡಪಕ್ಷಗಳ ಜನತಾಂತ್ರಿಕ ಒಕ್ಕೂಟ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಜನತಾಂತ್ರಿಕ ಒಕ್ಕೂಟದ ಸರದಿ. ಈ ಬಾರಿ ಈ ಪ್ರವೃತ್ತಿ ಅಳಿಯುವುದೇ ಉಳಿಯುವುದೇ ಎಂಬ ಕುತೂಹಲವನ್ನು ಕೇರಳದ ಚುನಾವಣೆ ಕಾಯ್ದುಕೊಂಡಿದೆ.

ಅಸ್ಸಾಮಿನಲ್ಲಿ ಬಿಜೆಪಿಗೆ ಸ್ಪರ್ಧೆಯೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಅಪಾರ ಬದಲಾವಣೆಯಾಗಿದೆ. ಕಾಂಗ್ರೆಸ್ಸು ತೀವ್ರ ಪ್ರತಿಸ್ಪರ್ಧೆ ನೀಡುವಷ್ಟು ಚಿಗಿತುಕೊಂಡು ಚುನಾವಣೆಯಲ್ಲಿ ಕುತೂಹಲ ಹುಟ್ಟಿಸಿದೆ. ಅಕ್ರಮ ವಲಸೆಯ ವಿರುದ್ಧ ಹಿಂಸಾಚಾರದಲ್ಲಿ ಕುದಿಯತೊಡಗಿದ್ದ ಅಸ್ಸಾಮನ್ನು ಬಿಜೆಪಿ ಗೆದ್ದುಕೊಂಡದ್ದು ಎನ್.ಆರ್.ಸಿ. ದಾರಿಯಿಂದ. ಅಸ್ಸಾಮಿನ ಬಹುತೇಕ ವಲಸಿಗರು ಮುಸಲ್ಮಾನರು. ಹೀಗಾಗಿ ಅವರನ್ನು ಎತ್ತಂಗಡಿ ಮಾಡಿಸುವಲ್ಲಿ ಬಿಜೆಪಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ರಾಷ್ಟ್ರೀಯ ಪೌರತ್ವ ಯಾದಿಯನ್ನು (ಎನ್.ಆರ್.ಸಿ.) ಜಾರಿಗೆ ತಂದಿತು. ಆದರೆ ಬಿಜೆಪಿಯ ಈ ಲೆಕ್ಕಾಚಾರ ಕೈ ಕೊಟ್ಟಿತ್ತು. ವಲಸಿಗರ ಪೈಕಿ ಹಿಂದೂ ಬಂಗಾಳಿಗಳೂ ಗಣನೀಯ ಸಂಖ್ಯೆಯಲ್ಲಿದ್ದರು. ಅವರೆಲ್ಲ ಬಿಜೆಪಿಯ ಬೆಂಬಲಿಗರು. ಆದರೆ ಅವರನ್ನು ಎನ್.ಆರ್.ಸಿ.ಯಿಂದ ಹೊರಗಿಡಲಾಗಿತ್ತು.

ಬಿಜೆಪಿಯ ಪಾಲಿಗೆ ಹೊಸ ಸವಾಲು ಹೆಡೆ ಬಿಚ್ಚಿತ್ತು. ಪರಿಹಾರವಾಗಿ ಹಿಂದು ವಲಸಿಗರ ರಕ್ಷಣೆಗೆಂದೇ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ತಂದಿತು. ಸಮಸ್ಯೆ ಬಗೆಹರಿಯಲಿಲ್ಲ. ಹಿಂದುಗಳಾದರೇನು, ಮುಸಲ್ಮಾನರಾದರೇನು, ವಲಸಿಗರು ವಲಸಿಗರೇ ಎಂಬುದು ಅಸ್ಸಾಮಿಗಳ ಆಕ್ರೋಶ. ಈ ದೌರ್ಬಲ್ಯವನ್ನು ಕಾಂಗ್ರೆಸ್ಸು ತನ್ನ ಪ್ರಾಬಲ್ಯವನ್ನಾಗಿ ತಿರುಗಿಸಿಕೊಳ್ಳತೊಡಗಿದೆ. ತಮ್ಮ ಪಕ್ಷ ಆರಿಸಿ ಬಂದರೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರುವುದಿಲ್ಲವೆಂದು ಆಶ್ವಾಸನೆ ನೀಡಿದ್ದಾರೆ ರಾಹುಲ್ ಗಾಂಧಿ. ಎನ್.ಆರ್.ಸಿ. ಕುರಿತು ಮೌನ ವಹಿಸಿದ್ದಾರೆ.

ಬಂಗಾಳದ ಕಾಳಗದಲ್ಲಿ ಒಕ್ಕೂಟದ ಭವಿಷ್ಯ

ಮೋದಿ ಮತ್ತು ಮಮತಾ ದೀದಿ ನಡುವೆ ಬಂಗಾಳದಲ್ಲಿ ಜರುಗಿರುವ ಜಿದ್ದಾ ಜಿದ್ದಿನ ಕದನ ತೀವ್ರ ಬಲಪಂಥ ಮತ್ತು ನಡುಪಂಥದ ನಡುವಣ ಸಂಘರ್ಷದಂತೆ ಕಾಣಬಹುದು. ಆದರೆ ಈ ಪರದೆ ಹರಿದರೆ ಕಾಣುವುದು ಅಧಿಕಾರ ಮತ್ತು ಪ್ರತಿಷ್ಠೆಗಳ ಹಣಾಹಣಿಯೇ. ಮೋದಿ ಮತ್ತು ದೀದಿ ಇಬ್ಬರೂ ಸರ್ವಾಧಿಕಾರಿಗಳೇ. ವಿಡಂಬನೆ, ಟೀಕೆ ಮತ್ತು ಪ್ರಶ್ನೆಗಳನ್ನು ಇಬ್ಬರೂ ಸಹಿಸುವವರಲ್ಲ. ಪ್ರತಿಪಕ್ಷಗಳನ್ನು ಸಂಹರಿಸಬೇಕಾದ ಶತ್ರುಗಳೆಂದೇ ಪರಿಗಣಿಸುವವರು.

ಬಿಜೆಪಿಯ ಬಳಿ ಮಮತಾಗೆ ಸಾಟಿಯಾಗುವ ಸ್ಥಳೀಯ ಬಂಗಾಳಿ ಚಹರೆ ಇಲ್ಲ. ಹೀಗಾಗಿ ತೃಣಮೂಲ ಮತ್ತು ಬಿಜೆಪಿ ನಡುವಣ ಕದನ ಮುಖ್ಯಮಂತ್ರಿ ಮಮತಾ ಮತ್ತು ಪ್ರಧಾನಮಂತ್ರಿ ಮೋದಿ ನಡುವಣ ನೇರ ಕದನವಾಗಿ ಪರಿಣಮಿಸಿದೆ. ಪ್ರಾದೇಶಿಕ ಪಕ್ಷಗಳ ಜನಪ್ರಿಯ ಮುಖ್ಯಮಂತ್ರಿಯನ್ನು ಹೊಂದಿರುವ ರಾಜ್ಯಗಳ ವಿಧಾನಸಭೆ ಚುನಾವಣೆ ಗೆಲ್ಲುವಲ್ಲಿ ಮೋದಿ ಚಹರೆ ಕೆಲಸ ಮಾಡಿಲ್ಲ. ಈ ಮಾತಿಗೆ ಇತ್ತೀಚಿನ ಉದಾಹರಣೆಗಳು ಒಡಿಶಾ ಮತ್ತು ದೆಹಲಿ. ಛತ್ತೀಸಗಢ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಝಾರ್ಖಂಡ ವಿಧಾನಸಭೆಗಳನ್ನು ಮೋದಿಯವರು ಗೆದ್ದುಕೊಡಲಾಗಲಿಲ್ಲ.

ಮಮತಾ ದೀದಿ ಮೋದಿ ಸರ್ಕಾರದ ಕೋಮುವಾದದ ಕುರಿತು ದೊಡ್ಡ ಪ್ರವಚನಗಳನ್ನು ಬಿಗಿದಿದ್ದಾರೆ. ಆದರೆ ಬಂಗಾಳದಲ್ಲಿ ಈ ಹಿಂದೆ ಎಡರಂಗ ಸರ್ಕಾರದ ವಿರುದ್ಧ ಸೆಣೆಸುವಾಗ ಅವರು ಬಿಜೆಪಿಯ ಜೊತೆ ಕೈ ಜೋಡಿಸಿದ್ದರಲ್ಲ! ಕೇಂದ್ರದಲ್ಲಿ ಅಧಿಕಾರ ಹಂಚಿಕೊಂಡದ್ದೂ ನಿಜ. ಎಡರಂಗದ ಕೋಟೆಯೇನೋ ನುಚ್ಚು ನೂರಾಯಿತು. ಆದರೆ ತಾವು ಈ ಹಿಂದೆ ಕೈ ಕಲೆಸಿ ಬೆಳೆಸಿದ್ದ ಅದೇ ಬಿಜೆಪಿ ತಮ್ಮನ್ನು ನುಂಗಲು ಬಾಯಿ ತೆರೆದಿರುವ ಅರಿವು ದೀದಿಗೆ ಮೂಡಿದ್ದು ಬಹು ತಡವಾಗಿ. ಬಂಗಾಳದಲ್ಲಿ ಬಿಜೆಪಿ ಬೆಳೆಯಲು ಅದರ ದುರ್ಬಲ ಬೇರುಗಳಿಗೆ ಮುಸಲ್ಮಾನರ ಅತಿ ತುಷ್ಟೀಕರಣದ ನೀರು ಗೊಬ್ಬರ ಉಣಿಸಿದ ದೀದಿಯೂ ಅಪರಾಧಿ.

ಬಾಂಗ್ಲಾ ದೇಶದ ವಲಸಿಗರೂ ಸೇರಿದಂತೆ ಬಂಗಾಳದಲ್ಲಿನ ಮುಸಲ್ಮಾನರ ಪ್ರಮಾಣದ ಅನಧಿಕೃತ ಅಂದಾಜು ಶೇ.30. ನ್ಯಾಯಮೂರ್ತಿ ಸಚ್ಚರ್ ವರದಿಯ ಪ್ರಕಾರ ಅತಿ ಬಡ ಮುಸಲ್ಮಾನರಿರುವ ರಾಜ್ಯಗಳಲ್ಲಿ ಬಂಗಾಳವೂ ಒಂದು. ಈ ಸಮುದಾಯದ ದೈನಂದಿನ ಬದುಕನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಡಿದೆತ್ತುವ ದಾರಿಯನ್ನು ಬಿಟ್ಟು ತುಷ್ಟೀಕರಣದ ಸುಲಭದ ಹಾದಿ ಹಿಡಿಯಿತು ಮಮತಾ ಸರ್ಕಾರ. ಕಾಳಿ ಮಾತೆಯ ಬಂಗಾಳಿ ಉಪರಾಷ್ಟ್ರೀಯತೆಯ ವಿರುದ್ಧ ಶ್ರೀರಾಮನ ರಾಷ್ಟ್ರೀಯತೆಯನ್ನು ಎತ್ತಿ ಕಟ್ಟಿತು ಬಿಜೆಪಿ.

ಎಡಪಂಥೀಯರು ಮತ್ತು ಜಾತ್ಯತೀತವಾದಿಗಳ ಗಢವೆನಿಸಿದ್ದ ಪಶ್ಚಿಮ ಬಂಗಾಳವನ್ನು ಗೆಲ್ಲುವುದು ಮೋ-ಶಾ ಜೋಡಿ ಮತ್ತು ಸಂಘಪರಿವಾರಕ್ಕೆ ಪ್ರತಿಷ್ಠೆಯ ಸವಾಲು. ತನ್ನದೇ ಆದ ಅಸ್ಮಿತೆ, ಹೆಮ್ಮೆ, ವಿಶಿಷ್ಟ ಸಾಂಸ್ಕೃತಿಕ ಬೌದ್ಧಿಕ ಪರಂಪರೆ ಹೊಂದಿರುವ ರಾಜ್ಯವಿದು. ಪೂರ್ವಭಾರತದ ಬಹುದೊಡ್ಡ ಭೌಗೋಳಿಕ ಪ್ರದೇಶ.

42 ಲೋಕಸಭಾ ಸ್ಥಾನಗಳನ್ನು ಹೊಂದಿರುವ  ದೊಡ್ಡ ರಾಜ್ಯದ ಮೇಲೆ ಗೆಲುವಿನ ಬಾವುಟ ಹಾರಿಸುವುದು ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ನಿರ್ಣಾಯಕ. ಇಲ್ಲಿನ ಗೆಲುವು ಮೋಶಾ ಜೋಡಿಗೆ ಅಜೇಯದ ಪ್ರಭಾವಳಿಯನ್ನು ಕಟ್ಟಲಿದೆ. 2024ರಲ್ಲಿ ಮೂರನೆಯ ಅವಧಿಗೂ ದೆಹಲಿ ಗದ್ದುಗೆ ವಶಪಡಿಸಿಕೊಳ್ಳಲು ನೆರವಾಗಲಿದೆ. ಇಲ್ಲಿ ಗೆಲುವು ಬೃಹತ್ ರಾಜ್ಯ ಉತ್ತರಪ್ರದೇಶದ 2022ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಮೇಲೆ ದಟ್ಟ ಪ್ರಭಾವ ಬೀರುವುದು ನಿಶ್ಚಿತ. 2014ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶವನ್ನು ಮೋಶಾ ಜೋಡಿ ಗುಡಿಸಿ ಹಾಕಿ ಕೇಂದ್ರ ಸರ್ಕಾರವನ್ನು ತನ್ನ ಉಡಿಗೆ ಹಾಕಿಕೊಂಡಿತ್ತು. ಆದರೆ ಈ ಜೋಡಿಯ ಪ್ರಚಂಡ ಸಾಮಥ್ರ್ಯ ಮತ್ತೊಮ್ಮೆ ಸಂಶಯಾತೀತವಾಗಿ ಸಾಬೀತಾಗಿದ್ದು 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸಿದ ಅಸಾಧಾರಣ ಗೆಲುವಿನಿಂದ. ಈ ಗೆಲುವೇ 2019ರ ಲೋಕಸಭಾ ಚುನಾವಣೆಗಳ ಗೆಲುವಿಗೆ ಸೋಪಾನವಾಯಿತು.

ಇದೇ ರೀತಿ 2022ರಲ್ಲಿ ಜರುಗಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವು 2024ರಲ್ಲಿ ಮೋದಿಯವರ ಸತತ ಮೂರನೆಯ ಗೆಲುವಿನ ಸಾಧ್ಯತೆಯನ್ನು ಹೊಳಪಾಗಿಸಲಿದೆ. ಮುಂದಿನ ವರ್ಷ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅನಾಯಾಸವಾಗಿ ಗೆಲ್ಲಬೇಕಿದ್ದರೆ ಈಗಿನ ಪಶ್ಚಿಮ ಬಂಗಾಳದ ರಣಾಂಗಣದಲ್ಲಿ ಗೆಲ್ಲುವುದು ಬಲು ಮುಖ್ಯ. ಈವರೆಗೆ ತನ್ನ ಅಂಕೆಗೆ ಸಿಕ್ಕಿರದ ಬಂಗಾಳದಲ್ಲಿ ಕೇಸರಿ ಪಟಪಟಿಸುವುದು ಬಿಜೆಪಿ-ಸಂಘಪರಿವಾರದ ಪಾಲಿಗೆ ಭಾರೀ ದೊಡ್ಡ ಸೈದ್ಧಾಂತಿಕ ಗೆಲುವು. ನೈತಿಕ ಸ್ಥೈರ್ಯವನ್ನು ನೂರು ಪಟ್ಟು ಹಿಗ್ಗಿಸುವ ವಿಜಯ.

ಹಿಂಸಾಚಾರ ದಬ್ಬಾಳಿಕೆ ಬಳಸಿ ಬಿಜೆಪಿಯನ್ನು ಹಿಮ್ಮೆಟ್ಟಿಸುವ ತೃಣಮೂಲದ ತಂತ್ರ ಫಲ ನೀಡಲಿಲ್ಲ. ಇನ್ನು ಕೋಮವಾದಿ ಹಿಂಸಾಚಾರದ `ಆಟ’ ಬಿಜೆಪಿಗೆ ಹೊಸದಲ್ಲ. ನಾಜೂಕಿನ ಈ ಆಟದಲ್ಲಿ ಅದನ್ನು ಸೋಲಿಸುವುದು ಸುಲಭವಲ್ಲ… ದೀದಿಯ ಮುಸ್ಲಿಂ ತುಷ್ಟೀಕರಣದ ವಿರುದ್ಧ ಅದು ಹಿಂದೂಗಳನ್ನು ಎತ್ತಿ ಕಟ್ಟುವ ತನ್ನ ಆಟ ಆರಂಭಿಸಿ ವರ್ಷಗಳೇ ಉರುಳಿವೆ. ರಾಮನವಮಿ ಮತ್ತು ಹನುಮ ಜಯಂತಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದ ಸಾವಿರಾರು ಮೆರವಣಿಗೆಗಳನ್ನು ಸಂಘಟಿಸಿತ್ತು. ಸರಸ್ವತೀಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿತು.

ಇನ್ನು ಅಧಿಕಾರಕ್ಕೆ ಬಂದ ನಂತರ ದೀದಿ ಎಡಪಕ್ಷಗಳ ಮೇಲೆ ನಡೆಸಿದ ನಿರ್ದಯೀ ದಾಳಿ ಆಕೆಯ ಬುಡವನ್ನೇ ಅಲುಗಿಸತೊಡಗಿದೆ. ತೃಣಮೂಲದ ರಕ್ತದಾಹೀ ಸೇಡಿನ ಬೆಂಕಿಯ ಝಳದಲ್ಲಿ ತತ್ತರಿಸಿದ ಎಡಪಕ್ಷಗಳ ಬೆಂಬಲಿಗ ಮತ್ತು ಕಾರ್ಯಕರ್ತರ ಪಡೆ ಸಾವಿರ ಸಾವಿರ ಸಂಖ್ಯೆಯಲ್ಲಿ ಪಲಾಯನ ಮಾಡಿ ಬಿಜೆಪಿಯಲ್ಲಿ ಆಶ್ರಯ ಪಡೆಯಿತು. ನೆಲಕಚ್ಚಿರುವ ಎಡಪಕ್ಷ ಮತ್ತು ಕಾಂಗ್ರೆಸ್ ರಾಜಕೀಯ ಆವರಣವನ್ನು ಬಿಜೆಪಿ ತುಂಬಿತು. ಹಿಂದುತ್ವದ ರಾಜಕಾರಣಕ್ಕೆ ಅಪರಿಚಿತ ಎನಿಸಿದ್ದ ಸೀಮೆಯಲ್ಲಿ ತನ್ನ ಬೇರುಗಳನ್ನು ಇಳಿಸಲಾರಂಭಿಸಿತ್ತು.

ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನ ಜನಸಂಖ್ಯೆಯ ಪ್ರಮಾಣ ಶೇ.30. ಈ ಹಿಂದೆ ಎಡರಂಗವನ್ನು ಬೆಂಬಲಿಸುತ್ತಿದ್ದರು. ನಂತರ ತೃಣಮೂಲದತ್ತ ಹೊರಳಿದರು. 2016ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ 294ರ ಪೈಕಿ 211 ಸೀಟು ಗೆದ್ದಿತ್ತು. ಈ ಪೈಕಿ 98 ಸೀಟುಗಳನ್ನು ಮುಸಲ್ಮಾನರ ಒಲವಿಲ್ಲದಿದ್ದರೆ ಗೆಲ್ಲಲಾಗುತ್ತಿರಲಿಲ್ಲ. ಈ ಸೀಟುಗಳಲ್ಲಿ ಮುಸಲ್ಮಾನರ ಮತಗಳ ಪ್ರಮಾಣ ಶೇ.20ರಿಂದ ಶೇ.30ರಷ್ಟಿತ್ತು ಎನ್ನಲಾಗಿದೆ.

34 ವರ್ಷ ಹರೆಯದ ಅಬ್ಬಾಸ್ ಸಿದ್ದೀಖಿ ಹೂಗ್ಲಿ ಜಿಲ್ಲೆಯ ಪುರ್ಫುರಾ ಷರೀಫ್ ಧಾರ್ಮಿಕ ಕ್ಷೇತ್ರದ ಪ್ರಭಾವೀ ಮೌಲ್ವಿ. ದಕ್ಷಿಣ ಬಂಗಾಳದ ಮುಸ್ಲಿಮ್ ಬಹುಳ ಪ್ರದೇಶಗಳಲ್ಲಿ ಜನಪ್ರಿಯ. ಈತ ಹುಟ್ಟಿ ಹಾಕಿರುವ ಹೊಸ ರಾಜಕೀಯ ಪಕ್ಷ ಇಂಡಿಯನ್ ಸಕ್ಯೂಲರ್ ಫ್ರಂಟ್ (ಐಎಸ್ ಎಫ್). ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳು ಐ.ಎಸ್.ಎಫ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ದಕ್ಷಿಣ ಬಂಗಾಳದಲ್ಲಿ ತೃಣಮೂಲದ ಮುಸ್ಲಿಂ ಬೆಂಬಲ ನೆಲೆಗಳಲ್ಲಿ ಐ.ಎಸ್.ಎಫ್. ಕಾರಣದಿಂದಾಗಿ ಬಿರುಕು ಉಂಟಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಬರುವುದಿಲ್ಲ.

ಬಿಜೆಪಿ ಬೆದರಿಕೆಯ ಹಿನ್ನೆಲೆಯಲ್ಲಿ ತಾವು ನೆಚ್ಚಬಹುದಾದ ಪಕ್ಷ ತೃಣಮೂಲವೊಂದೇ ಎಂಬುದು ಬಂಗಾಳದ ಬಹುತೇಕ ಮುಸಲ್ಮಾನರ ಭಾವನೆ. ಕಳೆದ ಹತ್ತು ವರ್ಷಗಳಲ್ಲಿ ತಮ್ಮ ಪರಿಸ್ಥಿತಿ ಏನೂ ಸುಧಾರಿಸಿಲ್ಲ ಎಂದು ಭ್ರಮನಿರಸನಗೊಂಡಿರುವ ಮುಸಲ್ಮಾನರೂ ಇದ್ದಾರೆ. ಆದರೆ ಎನ್.ಆರ್.ಸಿ. (ರಾಷ್ಟ್ರೀಯ ನಾಗರಿಕರ ರಿಜಿಸ್ಟರು) ಎಂಬ ಬಿಜೆಪಿಯ ಕಾರ್ಯಸೂಚಿಯು ತಮ್ಮ ಬೆನ್ನು ಹತ್ತಿ ಬೇಟೆಯಾಡುವ ಭಯ ಮುಸಲ್ಮಾನರಲ್ಲಿ ನೆಲೆಸಿದೆ. ಶೇ.ಒಂದು ಅಥವಾ ಎರಡರಷ್ಟು ಮುಸಲ್ಮಾನರು ಈ ಭಯದಿಂದ ಹೊರಬಂದು ತೃಣಮೂಲ ಕುರಿತು ತಮ್ಮ ಅತೃಪ್ತಿ ಸೂಚಿಸಿದರೆ ಮಮತಾ ತೊಂದರೆಗೆ ಸಿಲುಕಲಿದ್ದಾರೆ. ಆದರೆ ಮುಸ್ಲಿಮ್ ಮತಗಳು ಒಡೆಯುವ ಸೂಚನೆ ಈವರೆಗೆ ಕಂಡು ಬಂದಿಲ್ಲ.

ಪೂರ್ವ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ದಲಿತ ಸಮುದಾಯ ಮತುವಾ ಅಥವಾ ನಾಮಶೂದ್ರ. ದೇಶವಿಭಜನೆಯ ನಂತರ ಪಶ್ಚಿಮ ಬಂಗಾಳಕ್ಕೆ ವಲಸೆ ಬರಲಾರಂಭಿಸಿದರು. ಬಾಂಗ್ಲಾದೇಶ ರಚನೆಯ ನಂತರವೂ ಈ ವಲಸೆ ಮುಂದುವರೆಯಿತು. ಇಂದು ಪಶ್ಚಿಮ ಬಂಗಾಳದ ಮತುವಾ ಮತದಾರರ ಪ್ರಮಾಣ ಶೇ.17. ಉತ್ತರ-ದಕ್ಷಿಣ 24 ಪರಗಣ ಜಿಲ್ಲೆಗಳು, ನಾದಿಯಾ, ಹೌರಾ, ಕೂಚ್ ಬಿಹಾರ್, ಮಾಲ್ದಾ ಜಿಲ್ಲೆಗಳ 40-45 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರತ್ಯಕ್ಷ ಮತ್ತು 30 ಸೀಟುಗಳ ಮೇಲೆ ಪರೋಕ್ಷ ಪ್ರಭಾವ ಬೀರಬಲ್ಲ ಜನಾಂಗ. ಮೋದಿ ಸರ್ಕಾರದ ಎನ್.ಆರ್.ಸಿ. ಇವರನ್ನು ಕಂಗೆಡಿಸಿತ್ತು. ಎನ್.ಆರ್.ಸಿ.ಯಿಂದ ಹಿಂದುಗಳು-ಬೌದ್ಧರು- ಸಿಖ್ಖರು-ಜೈನ ವಲಸೆಗಾರರನ್ನು ಬಚಾವು ಮಾಡಲು ತರಲಾದ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿ ಮಾಡಿ ತಮಗೆ ಪೌರತ್ವ ನೀಡಬೇಕೆಂದು ಆಗ್ರಹಿಸಿ ಹೆಚ್ಚು ಕಡಿಮೆ ಬಿಜೆಪಿಯತ್ತ ಮುಖ ಮಾಡಿ ನಿಂತಿರುವ ಸಮುದಾಯವಿದು. ಈ ಹಿಂದೆ ತೃಣಮೂಲವನ್ನು ಬೆಂಬಲಿಸಿತ್ತು. ಈ ಸಮುದಾಯದಲ್ಲಿ ಬಿಜೆಪಿ ಮತ್ತು ತೃಣಮೂಲ ಬಣಗಳೂ ಉಂಟು. ಈ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಎಲ್ಲ ಪ್ರಯತ್ನಗಳಲ್ಲಿ ತೊಡಗಿದೆ.

ಹಿಂಸಾತ್ಮಕ ಹೋರಾಟಕ್ಕೂ ಹಿಂಜರಿಯದ ಸಂಘಟನಾ ಶಕ್ತಿಯನ್ನು ತೃಣಮೂಲವು ಎಡಪಕ್ಷಗಳಿಂದ ಕಸಿದುಕೊಂಡಿತು. ರಾಜ್ಯಾದ್ಯಂತ ಅದರ ಬೇರುಮಟ್ಟದ ಸಂಘಟನೆ ಪ್ರಚಂಡ.  ಎಡಪಕ್ಷಗಳ ಕಾರ್ಯಕರ್ತರು, ಕಟ್ಟರ್ ಬೆಂಬಲಿಗರು ತೃಣಮೂಲದ ಪ್ರತೀಕಾರದ ಕಿಚ್ಚಿನಲ್ಲಿ ಬೇಯಲಾರದೆ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಸೇರಿದ್ದಾರೆ. ಜೊತೆಗೆ ಬಿಜೆಪಿಯೂ ಸೇರಿದಂತೆ ಸಂಘಪರಿವಾರ ಕಳೆದ ಹತ್ತು ವರ್ಷಗಳಿಂದ ಬಂಗಾಳದಲ್ಲಿ ಬೇರು ಮಟ್ಟದಿಂದ ಸಂಘಟನೆಯನ್ನು ಬೆಳೆಸಿ ನಿಲ್ಲಿಸಿದೆ. ಆದರೆ ತೃಣಮೂಲದ ಸಂಘಟನೆಯನ್ನು ಅದು ಸರಿಗಟ್ಟುವುದು ಸಾಧ್ಯವಿಲ್ಲ. ಬಿಜೆಪಿ- ಸಂಘಪರಿವಾರಕ್ಕೆ ಇದರ ಚಿಂತೆಯಿಲ್ಲ. ಎಡರಂಗದ 34 ವರ್ಷಗಳ ಆಡಳಿತವನ್ನು ಮಮತಾ ಬುಡಮೇಲು ಮಾಡಿದಾಗ ತೃಣಮೂಲದ ಬಳಿ ಹೇಳಿಕೊಳ್ಳುವಂತಹ ಸಂಘಟನಾ ಶಕ್ತಿ ಇರಲಿಲ್ಲ. ಪರಿವರ್ತನೆಯನ್ನು ಬಯಸಿದ್ದ ಜನಶಕ್ತಿಯೇ ಮಮತಾ ಪಾಲಿನ ಸಂಘಟನಾಶಕ್ತಿಯಾಯಿತು. ಈಗಲೂ ಅದೇ ಪರಿಸ್ಥಿತಿ ತನ್ನ ಪರವಾಗಿದೆ ಎನ್ನುವುದು ಬಿಜೆಪಿಯ ವಾದ.

ತಾನು ಜಾರಿ ಮಾಡಿರುವ ಜನಕಲ್ಯಾಣ ಕಾರ್ಯಕ್ರಮಗಳು ಚುನಾವಣೆಯಲ್ಲಿ ತನ್ನ ಕೈ ಹಿಡಿಯಲಿವೆ. ಅಲ್ಪಸಂಖ್ಯಾತರ ಬಹುಪಾಲು ಮತಗಳು ಮತ್ತು ಬಹುಸಂಖ್ಯಾತರ ಅಲ್ಪಸಂಖ್ಯೆಯ ಮತಗಳು ತನ್ನನ್ನು ದಡ ಮುಟ್ಟಿಸಲಿವೆ ಎಂಬುದು ತೃಣಮೂಲದ ಆತ್ಮವಿಶ್ವಾಸ. ಬಿಜೆಪಿ ಬಂಗಾರದ ಬಂಗಾಳವನ್ನು (ಶೋನಾರ್ ಬಾಂಗ್ಲಾ) ನಿರ್ಮಿಸುವ ಕನಸನ್ನು ಮತದಾರರ ಕಣ್ಣ ಮುಂದೆ ಹರವಿದೆ. ಕೈಗಾರಿಕೆಗಳನ್ನು ತಂದು ಮೂಲಸೌಲಭ್ಯಗಳು, ಉದ್ಯೋಗಗಳನ್ನು ಸೃಷ್ಟಿಸುವ ವಚನ ನೀಡುತ್ತಿದೆ. ಜೊತೆ ಜೊತೆಗೆ ಪಕ್ಷಾಂತರ ಮತ್ತು ಹಿಂದು ಮುಸ್ಲಿಮ್ ಧ್ರುವೀಕರಣ ರಾಜಕಾರಣವನ್ನು ಬಡಿದೆಬ್ಬಿಸಿ ನಿಲ್ಲಿಸತೊಡಗಿದೆ. ಶೇ.60ರಷ್ಟು ಹಿಂದುಗಳು ತನ್ನ ಪರ ಮತ ಚಲಾಯಿಸುವ ಭರವಸೆ ಹೊಂದಿದೆ.

ಬಂಗಾಳದಲ್ಲಿ ಬಿಜೆಪಿ ತಲೆಯೆತ್ತಿದ ವೇಗ ಚಕಿತಗೊಳಿಸುವಂತಹುದು. ಈ ಬೆಳವಣಿಗೆಗೆ ಖುದ್ದು ಮಮತಾ ಅವರ ಪರೋಕ್ಷ ಕೊಡುಗೆಯೂ ಇದ್ದೀತು. ಎಡರಂಗದ ಕೋಟೆಯನ್ನು ಕೆಡವಿಕೊಟ್ಟದ್ದೇ ಅಕೆ. ಎಡರಂಗದ ಶೂನ್ಯವನ್ನು ಬಿಜೆಪಿ ಬಾಚಿ ಕಬಳಿಸಿ ಆವರಿಸಿಬಿಟ್ಟಿತು. 2014ರಲ್ಲಿ ಬೀಸಿದ ಮೋದಿ ಗಾಳಿ ಬಂಗಾಳದಲ್ಲಿ ಕೆಲಸ ಮಾಡಲಿಲ್ಲ. 42ರ ಪೈಕಿ ಬಿಜೆಪಿ ಗೆದ್ದ ಸೀಟುಗಳು ಎರಡೇ ಎರಡು. ಗಳಿಸಿದ್ದ ಶೇಕಡಾವಾರು ಮತಗಳು 16. ಈ ಮೊದಲು 2011ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಮತಗಳ ಪ್ರಮಾಣ ಶೇ.4.1. 2016ರ ವಿಧಾನಸಭಾ ಚುನಾವಣೆಗಳಲ್ಲಿ ಈ ಪಕ್ಷದ ಶೇಕಡಾವಾರು ಮತಗಳು 10.1ಕ್ಕೆ ಕುಸಿದವು. 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ.41ಕ್ಕೆ ಜಿಗಿದಿತ್ತು. 18 ಸೀಟುಗಳನ್ನು ಗೆದ್ದಿತ್ತು. ಎಡಪಕ್ಷಗಳು ಮತ್ತು ಕಾಂಗ್ರೆಸ್ಸು ಧೂಳೀಪಟವಾದ ಕಾರಣ ಬಿಜೆಪಿಯ ಮತಗಳಿಕೆ ಹೆಚ್ಚಿತು ಎಂದು ಸಮಾಧಾನಪಟ್ಟುಕೊಂಡಿತು ತೃಣಮೂಲ.

ಒಂದು ವೇಳೆ ತಾನು ಸೋತರೂ ತನ್ನ ಭದ್ರ ನೆಲೆಯನ್ನಂತೂ ಬಿಜೆಪಿ ಸ್ಥಾಪಿಸಿಬಿಟ್ಟಿದೆ. ಹಿಂದು-ಮುಸ್ಲಿಮ್ ಎಂಬ ಪ್ರತ್ಯೇಕ ಅಸ್ಮಿತೆಗಳನ್ನು ಬಂಗಾಳದ ರಾಜಕಾರಣದಲ್ಲಿ ಬಹುಕಾಲ ನಿಲ್ಲುವಂತೆ ಒಡಮೂಡಿಸಿದೆ. ಸವರ್ಣೀಯರು ಆದರಿಸುವ ಈ ಕೇಸರಿ ಪಕ್ಷವು ಬಂಗಾಳದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬೆಂಬಲದಿಂದ ಎದ್ದು ನಿಂತಿರುವುದು ಗಮನಿಸಬೇಕಿರುವ ವಿಶೇಷ ವಿದ್ಯಮಾನ.

ಮಮತಾ ಬ್ಯಾನರ್ಜಿ ನೆಲಕ್ಕಂಟಿ ಜಿದ್ದಿನಿಂದ ಕಾದಾಡುವ ಜಿಗುಟು ಹೆಣ್ಣುಮಗಳು. ಆಕೆಯನ್ನು ಸೋಲಿಸುವುದು ಅಷ್ಟು ಸಲೀಸಲ್ಲ.

Leave a Reply

Your email address will not be published.