ಪಂಡಿತರ ದಾರಿಯಲ್ಲಿ ಅನುಸಂಧಾನ

-ಡಾ. ರಾಜೇಗೌಡ ಹೂಸಹಳ್ಳಿ

ರಾಜಸೂಯ ಯಾಗಕ್ಕೆ ತಯಾರಿ ಮಾಡುವಾಗ ಹಿಮಾಲಯ ಬೆಟ್ಟ ಸಾಲಿನ ಕಣಿವೆ ಜಂಬೂ ನದಿ ತೀರದ ಬಂಗಾರದ ನಿಕ್ಷೇಪಗಳನ್ನು ಎತ್ತಿ ತಂದು ಬೆಟ್ಟದಂತೆ ರಾಶಿ ಮಾಡಿ ಘಟೋತ್ಕಜನ ಸೈನ್ಯದೊಂದಿಗೆ ಅರ್ಜುನ ಸಾಗಿಸುವುದನ್ನು ಪಂಪ ನಿಸರ್ಗ ಹರಣದ ನಮ್ಮ ವರ್ತಮಾನದ ಸೂಕ್ಷ್ಮಗಳನ್ನೆಲ್ಲ ಅಂದೇ ಹೇಳಿಬಿಟ್ಟಿದ್ದಾನೆ. ಇದು ಇಂದಿನ ಗಣಿ ಹಾಗೂ ಅರಣ್ಯ ಲೂಟಿಗೆ ಭವಿಷ್ಯ ನುಡಿದಂತಿದೆ.

ಕನ್ನಡದ ಆದಿಮಹಾಕವಿ ಸ್ವಾಭಿಮಾನದಿಂದ ‘ಮುನ್ನಿನ ಕಬ್ಬ ಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮುಮಾದಿ ಪುರಾಣ ಮಹಾಪ್ರಬಂಧಮುಂ’ ಎಂಬ ಮಾತನ್ನು ಹಾಗೂ ತನ್ನ ಸ್ವವಿವರಗಳನ್ನು ತನ್ನ ‘ಪಂಪಭಾರತ’ದ ಕಡೆಯದಾದ ಹದಿನಾಲ್ಕನೆಯ ಆಶ್ವಾಸದಲ್ಲಿ ಹೇಳುತ್ತಾನೆ. ಇದೇ ಆಶ್ವಾಸದಲ್ಲಿ ‘ಉಪಖ್ಯಾನ ಕಥೆಗಳೊಳಮೊಂದುಂ ಕುಂದಲೀಯದೆ ಪೇಳ್ವೆಂ’ ಎಂದು ವ್ಯಾಸಭಾರತವನ್ನು ಎಷ್ಟು ಬೇಕೋ ಅಷ್ಟು ಸಂಗ್ರಹಗೊಳಿಸಿದ ಪಟ್ಟಿ ನೀಡುತ್ತಾನೆ. ಪಂಪನ ರಾಜಾಶ್ರಯದಾತ ಅರಿಕೇಸರಿಯೊಡನೆ ಅರ್ಜುನನ್ನು ಕಥಾನಾಯಕನನ್ನಾಗಿ ಮಾಡಿಕೊಂಡು ನೀಡಿದ ಮಹಾಕಾವ್ಯವಿದು. ಇಡೀ ಕುರುಕ್ಷೇತ್ರ ಇದು ಮಾನವ ಕುಲದ ಮನೆಮನೆಯ ಕಥನ. ಧೃತರಾಷ್ಟ್ರನ ಕುರುಡು ಪ್ರೀತಿ ಒಂದೆಡೆಯಾದರೆ ಭೀಷ್ಮನು ಮಕ್ಕಳು ಮೊಮ್ಮಕ್ಕಳೊಡನೆ ಸಮರ ಮಾಡುವ ವ್ಯಸನ ಇನ್ನೊಂದುಕಡೆ.

ಇದಕ್ಕೆ ಸಂವಾದಿಯಾಗಿ ಶಿವರಾಮಯ್ಯನವರು ಕೆಂಜಿರುವೆಗಳು ಪರಸ್ಪರ ಹೋರಾಡಿ ಕೊಂದುಕೊಂಡು ಉಂಡೆಗಟ್ಟಿಕೊಂಡು ಸತ್ತ ಸಾವಿನ ಘಟನೆಯನ್ನು ದಾಖಲಿಸುತ್ತಾರೆ. ಪಂಪನ ಈ ಕುರುಕ್ಷೇತ್ರ ಭಾಗ ಕಾವ್ಯದ ಜೀವಾಳ. ರನ್ನ ಇದನ್ನೆ ಖಂಡಕಾವ್ಯವಾಗಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಂದು ಸೀರು ಸಹಾ ಉಳಿಯದಂತೆ ಖಾಂಡವ ದಹನ ಮಾಡುವುದು. ರಾಜಸೂಯ ಯಾಗಕ್ಕೆ ತಯಾರಿ ಮಾಡುವಾಗ ಹಿಮಾಲಯ ಬೆಟ್ಟ ಸಾಲಿನ ಕಣಿವೆ ಜಂಬೂ ನದಿ ತೀರದ ಬಂಗಾರದ ನಿಕ್ಷೇಪಗಳನ್ನು ಎತ್ತಿ ತಂದು ಬೆಟ್ಟದಂತೆ ರಾಶಿ ಮಾಡಿ ಘಟೋತ್ಕಜನ ಸೈನ್ಯದೊಂದಿಗೆ ಅರ್ಜುನ ಸಾಗಿಸುವುದನ್ನು ಪಂಪ ನಿಸರ್ಗ ಹರಣದ ನಮ್ಮ ವರ್ತಮಾನದ ಸೂಕ್ಷ್ಮಗಳನ್ನೆಲ್ಲ ಅಂದೇ ಹೇಳಿಬಿಟ್ಟಿದ್ದಾನೆ. ಇದು ಇಂದಿನ ಗಣಿ ಹಾಗೂ ಅರಣ್ಯ ಲೂಟಿಗೆ ಭವಿಷ್ಯ ನುಡಿದಂತಿದೆ. ಪರಾಶರ ಮುನಿ ಮತ್ಸಗಂಧಿಯ ಸಮಾಗಮ ಕುರಿತು ‘ದಿವ್ಯ ಮುನಿಗಳ್ಗೆಗೆಯ್ದೊಡಂ ತೀರದೇ? ಎಂದು ಮುನಿಗಳನ್ನೂ ಸಹಾ ಬಿಡದೆ ವ್ಯಕ್ತಿ ಗುಣಾವಗುಣಗಳನ್ನು ಹಂಗಿಸಿ ಬಿಡುತ್ತಾನೆ.

ಪಂಪನ ಬೆನ್ನು ಹತ್ತಿ ಹೊರಟ ಮೈಸೂರು ಪ್ರಾಚ್ಯ ಇಲಾಖೆಯ ಮುಖ್ಯಾಧಿಕಾರಿ ಆಗಿದ್ದ ಮಿ|| ರೈಸ್ ಅವರು ಆರ್.ನರಸಿಂಹಚಾರ್ಯರ ಸಹಾಯದಿಂದ 1898ರಲ್ಲಿ ಮೊದಲ ಬಾರಿ ಪ್ರಕಟಿಸಿದರು.
ಅನಂತರ ಕನ್ನಡ ಸಾಹಿತ್ಯ ಪರಿಷತ್ ಅತಿರಥಮಹಾರಥಿಗಳು ಸಂಸ್ಕರಿಸಿ ನೀಡಿದ ಕೊಡುಗೆ ಇದು. ಅನಂತರ ವ್ಯಾಪಕವಾಗಿ ಡಿ.ಎಲ್.ನರಸಿಂಹಾಚಾರ್ಯರು ಅನ್ವಯಾನುಕ್ರಮ ಅರ್ಥ, ಟೀಕೆಗಳ ಸಮೇತ ಒಂದು ಸಂಶೋಧನಾ ಆವರಣದಲ್ಲಿ 1977ರಲ್ಲಿ ನೀಡಿದರು. ತದನಂತರ ಎಲ್.ಬಸವರಾಜು ಅವರು ಕೆಲವು ಪಾಠಾಂತರಗಳೊಡನೆ ಅಧ್ಯಯನವನ್ನು ಮುಂದುವರಿಸಿದರು.

ಪ್ರಸ್ತುತ ಶಿವರಾಮಯ್ಯನವರು ಡಿಎಲ್‍ಎನ್ ಹಾಗೂ ಎಲ್.ಬಸವರಾಜು ಅವರ ಶಿಷ್ಯರಾಗಿ ಪ್ರಾಚೀನ ಕಾವ್ಯಗಳ ಅಧ್ಯಯನ ಪರಂಪರೆಯ ತಲೆಮಾರಿನ ವಕ್ತಾರರಾಗಿ ‘ಪಂಪಭಾರತ’ ಅಧ್ಯಯನವನ್ನು ಮುಂದುವರಿಸುವ ಕಿರಿಯರಿಗೆ ದಾಟಿಸುವ ವಿಧಾನವನ್ನು ಕನ್ನಡ ಪುಸ್ತಕ ಪ್ರಾಧಿಕಾರವು ವಹಿಸಿದಾಗ ಬಹು ಶ್ರದ್ಧೆಯಿಂದ ಅಪಾರ ಪಾಂಡಿತ್ಯ ಅನುಭವದಿಂದ ಮೂರನೇ ಮಾದರಿಯಾಗಿ ಕನ್ನಡಿಗರಿಗೆ ನೀಡಿದ್ದಾರೆ. ಇದು ಅತ್ಯಂತ ಶ್ರಮದ ಹಾಗೂ ಸೂಕ್ಷ್ಮಮತಿಯ ಕೆಲಸ. ಅತ್ತ ಮಹಾಕವಿ ಪಂಪನ ಬೆನ್ನು ಹತ್ತಿ ನಡೆದ ಪಂಡಿತರ ದಾರಿ; ಇತ್ತ ಕಿರಿಯರಿಗೆ ತಿಳಿಸಿಕೊಡುವ ವರ್ತಮಾನದ ಅನುಸಂಧಾನ. ಇವೆಲ್ಲವೂ ಪ್ರೊಫೆಸರ್‍ರವರ ಶ್ರಮದಲ್ಲಿವೆ.

ಪ್ರಸ್ತುತ ಷ.ಶೆಟ್ಟರ್ ಅವರು ಕನ್ನಡದ ಭಾಷಾ ಪರಂಪರೆ ಹುಡುಕುತ್ತಾ ತಮಿಳು ಮೂಲಕ್ಕೆ ತಾಗಿ ಹೊರಟಿರುವ ಈ ಜಾಡಿನ ಪುರಂ-ಅಗಂ ಸಂಗಂ ಸಾಹಿತ್ಯದ ಛಾಯೆಗಳನ್ನು ಪಂಪಭಾರತದಲ್ಲಿ ಶಿವರಾಮಯ್ಯನವರು ಗುರುತಿಸಿದ್ದಾರೆ. ಪಂಪ ಕಾವ್ಯ ರಚಿಸುವಷ್ಟರಲ್ಲಿ ಸಂಸ್ಕೃತದ ಪ್ರಾಬಲ್ಯ ನಿಜ. ಹೀಗಿದ್ದರೂ ಪಂಪನು ‘ದೇಶಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು’ ಎಂದು ಹೇಳಿಕೊಂಡಿರುವುದನ್ನು ಶಿವರಾಮಯ್ಯನವರು ವಿಸ್ತಾರವಾಗಿ ಪಠ್ಯ, ಅರ್ಥ, ಗದ್ಯಾನುವಾದ ಹಾಗೂ ಇವರದೇ ರೀತಿಯಲ್ಲಿ ‘ವಿಶೇಷ ವಿಚಾರ’ ವೆಂದು ಪ್ರತಿ ಪದ್ಯ ಹಾಗೂ ವಚನದಡಿಯಲ್ಲಿ ಹೊಸದಾಗಿ ಅಧ್ಯಯನ ಮಾರ್ಗ ಮಾಡಿಕೊಂಡಿದ್ದಾರೆ. ಸಿದ್ದಯ್ಯಶೆಟ್ಟಿಯ ಜನಪದ ಮಹಾಕಾವ್ಯವನ್ನು ದೇವದತ್ತಪಟ್ಟನಾಯಕರ ‘ಜಯಭಾರತ’ವನ್ನು ಅನುಸಂಧಾನ ಮಾಡಿದ್ದಾರೆ. ಸುಮಾರು 100 ಪುಟಗಳ ಪ್ರಸ್ತಾವನೆಯನ್ನು ಮೊದಲ ಸಂಪುಟದ ಆದಿಯಲ್ಲಿ ಬರೆಯುತ್ತ ಅವರ ಅನುಭವ ಹಾಗೂ ವಿದ್ವತ್ತಿನ ಹಿನ್ನೆಲೆಯಲ್ಲಿ ಮಹಾಕವಿ ಪಂಪನನ್ನು ಪರಿಚಯಿಸುತ್ತಾರೆ. ಅನೇಕ ಕಡೆ ಡಿಎಲ್‍ಎನ್ ಅವರ ಅನ್ವಯಾರ್ಥಗಳನ್ನು ಪ್ರಶ್ನೆಗಳನ್ನು ಶಿವರಾಮಯ್ಯನವರು ಸರಿಪಡಿಸಿ ಹೇಳುತ್ತಾರೆ. ಉದಾಃ ನಾಲ್ಕನೇ ಆಶ್ವಾಸದ 17ನೇ ಪದ್ಯ. ಪಂಪಕವಿಯ ಪರಿಸರ ಪ್ರಜ್ಞೆ ಇನ್ನಿತರ ವಿಚಾರಗಳೆಲ್ಲವೂ ಇವರ ಅಧ್ಯಯನದಲ್ಲಿ ಮಹಾಕಾವ್ಯ ಹುಗಲು ನೆರವು ಮಾಡಿಕೊಡುತ್ತವೆ. ಒಟ್ಟಿನಲ್ಲಿ ಮಹಾಕವಿ ಪಂಪಭಾರತವನ್ನು ಅಧ್ಯಯನಕ್ಕಾಗಿ ನೆರವು ನೀಡುವ ಸಂಪುಟಗಳಿವು. ‘ಗ್ರಂಥ ಸಂಪಾದನೆ ಹಾಗೂ ಅಧ್ಯಯನ’ಗಳೆಂಬ ಮಾದರಿಗೆ ಬಹುದೊಡ್ಡ ಕೊಡುಗೆಯಿದು.

ಪಂಪಭಾರತ
ಸಂ.1 ಮತ್ತು ಸಂ.2
ಪ್ರೊ.ಶಿವರಾಮಯ್ಯ
ಪುಟ: 802 ಮತ್ತು 814,
ಬೆಲೆ: ರೂ.1500
ಕನ್ನಡ ಪುಸ್ತಕ ಪ್ರಾಧಿಕಾರ 2018, ಬೆಳ್ಳಿ ಹೊತ್ತಿಗೆ ಪ್ರಕಟಣೆ.

Leave a Reply

Your email address will not be published.