ಪಂಥಗಳಲಿ ಹಂಚಿಹೋಗುತ್ತಿದೆಯೇ?

ಸಾಹಿತ್ಯ

ಡಿಜಿಟಲ್ ಮಾಧ್ಯಮವು ಇಷ್ಟು ಪ್ರಬಲವಾಗಿರುವ ಈ ದಿನಗಳಲ್ಲಿ ಸಾಹಿತ್ಯಕ್ಷೇತ್ರದ ಇತರ ವಿಚಾರಗಳು ಕೂಡ ಪರಿಣಾಮಕಾರಿಯಾಗಿ ಚರ್ಚೆಯಾಗಬಹುದಿತ್ತು. ಆದರೆ ಇಂತಹ ಆರೋಗ್ಯಕರ ಚರ್ಚೆಗಳು ತಮ್ಮ ಬಿಸಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ.

ಇಂದು ನಮ್ಮ ಸಾಮಾಜಿಕ ಜಾಲತಾಣಗಳನ್ನು ನೋಡಿದಾಗಲೆಲ್ಲಾ ಬದುಕು ಹಲವು ತುಣುಕುಗಳಲ್ಲಿ ಚದುರಿಹೋದಂತೆ ಕಾಣುತ್ತಿದೆ.

ನಾನು ಚಿಕ್ಕವನಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಹದಿನೈದು ನಿಮಿಷಗಳ ವಾರ್ತಾಪ್ರಸಾರವನ್ನು ನೋಡುತ್ತಿದ್ದೆ. ಅದು ಬಿಟ್ಟರೆ ಆಕಾಶವಾಣಿ ಮತ್ತು ಪತ್ರಿಕೆಗಳಿದ್ದವು. ದಿನಕ್ಕಿಂತಿಷ್ಟು ಅವಧಿ ಸುದ್ದಿಗಳನ್ನು ಓದಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದಷ್ಟೇ ಇಲ್ಲಿ ಉದ್ದೇಶವಾಗಿರಲಿಲ್ಲ. ಅದು ಸಮಯದ ಸದುಪಯೋಗವೆಂಬ ಯೋಚನಾ ಲಹರಿಯೂ ನಾವು ಬೆಳೆಯುತ್ತಿದ್ದ ಪರಿಸರದಲ್ಲಿತ್ತು. ಒಟ್ಟಿನಲ್ಲಿ ಬದುಕು ಸರಳವಾಗಿತ್ತು. ಆದರೆ ಇಂದು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ವೀಕ್ಷಿಸಲು ಅರ್ಧ ತಾಸು ವ್ಯಯಿಸಿದರೆ ಈ ಸುದ್ದಿ ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲಿಸಲು ಎರಡು ಹೆಚ್ಚುವರಿ ತಾಸುಗಳು ಸೋರಿಹೋಗುತ್ತವೆ. ಹಾಗೆಂದು ಫೇಕ್ ನ್ಯೂಸ್ ಗಳು ಇತ್ತೀಚೆಗಷ್ಟೇ ಬಂದಿದ್ದು ಅಂತೇನೂ ನಾನು ಹೇಳುತ್ತಿಲ್ಲ. ಪಕ್ಷವೊಂದರ ಶಕ್ತಿಕೇಂದ್ರಗಳಲ್ಲಿ ಕುಳಿತಿದ್ದ ಕೆಲವರು ಇದನ್ನು ತಮ್ಮ ಪಕ್ಷದ ರಾಜಕೀಯ ಲಾಭಕ್ಕಾಗಿ ರಹಸ್ಯವಾಗಿ ಮಾಡುತ್ತಿದ್ದರೇನೋ. ಆದರೆ ಸದ್ಯದ ಅಗ್ಗದ ಇಂಟರ್ನೆಟ್ಟಿನ ಜಮಾನಾದಲ್ಲಿ ಇದನ್ನೇ ಇಂದು ಗಲ್ಲಿಗೊಬ್ಬರಂತೆ ಮಾಡುತ್ತಿದ್ದಾರೆ. ನಮ್ಮದು Post-truth ಯುಗವಂತೆ!

ಇತ್ತೀಚೆಗೆ ಸಾಹಿತ್ಯದ ಓದಿನ ಬಗ್ಗೆ ಮಾತಾಡುತ್ತಿದ್ದಾಗ ನನ್ನ ಪರಿಚಿತರೊಬ್ಬರು ಹಿರಿಯ ಸಾಹಿತಿಯೊಬ್ಬರ ಬಗ್ಗೆ ಮಾತಾಡುತ್ತಾ ಅವರ ಸಾಹಿತ್ಯವನ್ನು ಓದುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು. ಅಂಥದ್ದೇನಿದೆ ಎಂದು ಮತ್ತಷ್ಟು ಕೆದಕಿದಾಗ ಆ ಸಾಹಿತಿ ಇವರು ನಂಬಿದ್ದ ಪಂಥೀಯ ವಿಚಾರಧಾರೆಯವರಲ್ಲವಂತೆ. ತಮಾಷೆಯೆಂದರೆ ಅವರ ಕೃತಿಗಳು ಓದಲೇಕೆ ಯೋಗ್ಯವಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಅವರ ಯಾವ ಸಾಹಿತ್ಯವನ್ನೂ ಓದಿರಲಿಲ್ಲ. ತಾನು ಒಂದನ್ನೂ ಓದಿಲ್ಲ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಲೂ ಇರಲಿಲ್ಲ.

ಬಹುಶಃ ಅವರು ಸಾಮಾಜಿಕ ಜಾಲ ತಾಣಗಳ ಪಂಥೀಯ ವಿಚಾರಧಾರೆಗಳ ಪ್ರವಾಹದಲ್ಲಿ ಕೊಂಚ ಹೆಚ್ಚೇ ಹರಿದು ಹೋಗಿದ್ದರೇನೋ. ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಸಾಹಿತ್ಯಲೋಕಕ್ಕೆ ಇಂತಹ ವಿಮರ್ಶಕರು ಸಿಗುತ್ತಿರುವುದು ಇದೇ ಮೊದಲು. ಈ ಬಗೆಯ ವಿಮರ್ಶೆಯಿಂದಾಗಿ ವಿಮರ್ಶಕನಿಗೆ ಲಾಭವಿದೆಯೋ, ಇಲ್ಲವೋ ಎಂಬುದು ಬೇರೆ ಮಾತು. ಆದರೆ ಲೇಖಕನಿಗಂತೂ ತನ್ನ ಬೆಳವಣಿಗೆಯ ವಿಚಾರದಲ್ಲಿ ನಯಾಪೈಸೆಯ ಉಪಯೋಗವೂ ಇಲ್ಲ.

ಉದಾಹರಣೆಗೆ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನೆಮಾ ಮತ್ತು ಕರ್ಣಿಸೇನಾದ ರಂಪಾಟವನ್ನೇ ನೋಡೋಣ. ಸಿನೆಮಾ ಚಿತ್ರೀಕರಣದ ಹಂತದಲ್ಲಿದ್ದಾಗಲೇ ರಜಪೂತರನ್ನು ಚಿತ್ರದಲ್ಲಿ ಅವಮಾನಿಸಲಾಗಿದೆ ಎಂದು ಕರ್ಣಿಸೇನಾ ಬೊಬ್ಬಿಟ್ಟಿತ್ತು. ಕೆಲ ಪುಂಡರು ಎಬ್ಬಿಸಿದ ರಾಡಿಯಿಂದ ಅನಗತ್ಯ ಪ್ರಚಾರವನ್ನು ಪಡೆದುಕೊಂಡು ಚಿತ್ರವು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿದ್ದು ಸುಳ್ಳಲ್ಲ. ನನಗಂತೂ ಚಿತ್ರವನ್ನು ವೀಕ್ಷಿಸಿ ಹೊರಬಂದಾಗ ಈ ಪುಂಡರ ಮೂರ್ಖತನದ ಬಗ್ಗೆ ಅನುಕಂಪ ಮೂಡಿತ್ತು.

ಯಾವ ಅಜೆಂಡಾ ಇಟ್ಟುಕೊಂಡು ಕರ್ಣಿಸೇನೆಯು ಚಿತ್ರದ ವಿರುದ್ಧ ದಂಗೆಯೆದ್ದಿತ್ತೋ ಅದರ ಒಂದಂಶವೂ ಚಿತ್ರದಲ್ಲಿರಲಿಲ್ಲ. ಬದಲಿಗೆ ಬನ್ಸಾಲಿಯವರು ತೆರೆಯ ಮೇಲೆ ತೀರಾ ಕಪ್ಪು-ಬಿಳುಪಿನ ಧಾಟಿಯಲ್ಲಿ ರಜಪೂತರನ್ನು ಮತ್ತು ಸುಲ್ತಾನನನ್ನು ತೋರಿಸಿ ಚಿತ್ರಪ್ರೇಮಿಗಳಲ್ಲಿ ಅಚ್ಚರಿಯನ್ನು ತಂದಿದ್ದಲ್ಲದೆ ಪರೋಕ್ಷವಾಗಿ ಕರ್ಣಿಸೇನಾ ನಗೆಪಾಟಲಿಗೀಡಾಗುವಂತೆಯೂ ಮಾಡಿದ್ದರು. ಕರ್ಣಿಸೇನಾ ಈ ಮುಖಭಂಗವನ್ನು ಹೇಗೆ ಸಹಿಸಿಕೊಂಡಿತು ಎಂಬ ಯೋಚನೆ ಆಗಾಗ ಬರುತ್ತದಾದರೂ ಈ ಇಡೀ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗಾದ ನಷ್ಟವನ್ನು ಲೆಕ್ಕಹಾಕಿದಾಗ ವ್ಯವಸ್ಥೆಯ ಬಗ್ಗೆಯೇ ಹತಾಶಭಾವ ಮೂಡುತ್ತದೆ.

ಈತ್ತೀಚೆಗೆ ಅಕ್ಷಯ್ ಮನ್ವಾನಿಯವರು ಬರೆದ ಸಾಹಿರ್ ಲೂಧಿಯಾನ್ವಿಯವರ ಜೀವನಕಥನವನ್ನು ಓದುತ್ತಿದ್ದಾಗ ಅದರಲ್ಲಿ ಪ್ರಗತಿಪರ ಲೇಖಕರ ಚಳವಳಿಯ ಬಗ್ಗೆ ಬರೆದಿದ್ದನ್ನು ಗಮನಿಸಿದೆ. ಲೇಖಕರು ಸೃಜನಶೀಲವಾದದ್ದನ್ನು ಸೃಷ್ಟಿಸುವುದು ಅದೆಷ್ಟು ಮುಖ್ಯವೋ, ಸಮಾಜದ ಸಮಸ್ಯೆಗಳ ಬಗ್ಗೆ ಕಳಕಳಿಯಿರುವುದೂ ಅಷ್ಟೇ ಮುಖ್ಯ ಎಂಬ ಹಿರಿಯ ಹಿಂದಿ ಲೇಖಕರಾಗಿದ್ದ ಮುನ್ಷಿ ಪ್ರೇಮ್‍ಚಂದ್ ಅವರ ಹೇಳಿಕೆಯೂ ಸೇರಿದಂತೆ ಟ್ಯಾಗೋರರ ಮಾತುಗಳು ಮತ್ತು ಲೂಧಿಯಾನ್ವಿಯವರ ಇಂಕ್ವಿಲಾಬ್ ಕವಿತೆಗಳ ಬಗ್ಗೆ ಇಲ್ಲಿ ಉಲ್ಲೇಖವಿದೆ.

ಸಾಹಿರ್ ಇಪ್ಪತ್ತಮೂರರ ವಯಸ್ಸಿನಲ್ಲಿದ್ದಾಗಲೇ ಅವರ ಮೊದಲ ಕವನ ಸಂಕಲನವು ಭಾರೀ ಯಶಸ್ಸು ಗಳಿಸಿದ್ದು ಹೌದಾದರೂ ಅವರು ಆರ್ಥಿಕವಾಗಿ ಸದೃಢರಾಗಿದ್ದು ಕೆಲ ವರ್ಷಗಳ ನಂತರ ಚಿತ್ರರಂಗಕ್ಕೆ ಬಂದ ನಂತರವೇ. ತನ್ನ ಕಥೆಗಳಲ್ಲಿ ಸಾಮಾಜಿಕ ನ್ಯಾಯದ ಕೆಂಡ ಕಾರುತ್ತಿದ್ದ ಮಾಂಟೋನ ಸ್ಥಿತಿಯೂ ಇದೇ ಆಗಿತ್ತು. ಆದರೆ ಬಡತನ, ಅಶ್ಲೀಲತೆಧರ್ಮದ್ರೋಹದ ಹುಸಿ ಆರೋಪಗಳು ಆ ಕಾಲದ ಲೇಖಕರ ರಾಜಕೀಯ ವಿಚಾರಗಳಿಗೆ, ಚಳವಳಿಗಳಿಗೆ ಮತ್ತು ತಮ್ಮ ನಿಲುವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಲ್ಲಿ ಅಡ್ಡಿಯನ್ನುಂಟುಮಾಡಿರಲಿಲ್ಲ. ಏಕೆಂದರೆ ಸಾಹಿರ್ ಲೂಧಿಯಾನ್ವಿಯವರ ವಿಚಾರಗಳು ಎಲ್ಲರಿಗೂ ಅರಗಿಸಿಕೊಳ್ಳುವಂತಿರದಿದ್ದರೂ ಆ ದಿನಗಳಲ್ಲಿ ಆತನನ್ನು ಓರ್ವ ಪ್ರತಿಭಾವಂತ ಕವಿಯೆಂದು ಗುರುತಿಸುತ್ತಿದ್ದರೇ ಹೊರತು ಕಮ್ಯೂನಿಸ್ಟ್ ಅನುಯಾಯಿಯೆಂದಲ್ಲ.

ಎಡಪಂಥೀಯ ವಿಚಾರಧಾರೆಯನ್ನು ಆ ಮಟ್ಟಿಗೆ ತನ್ನ ಕವಿತೆಗಳಲ್ಲಿ ತರುತ್ತಿದ್ದ ಸಾಹಿರ್ ಇಂದು ಬದುಕಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಯೋಚಿಸುವಾಗಲೇ ಗಾಬರಿಯಾಗುತ್ತದೆ. ಇದು ಇತರ ಪಂಥೀಯ ಅನುಯಾಯಿಗಳ ವಿಚಾರದಲ್ಲೂ ಸತ್ಯ. ಕನ್ನಡದ್ದೇ ಹಲವು ಹಿರಿಯ, ಅನುಭವಿ ಲೇಖಕರು ತಮ್ಮ ವಿಚಾರಗಳನ್ನು ಅಪರೂಪಕ್ಕೊಮ್ಮೆ ವ್ಯಕ್ತಪಡಿಸುತ್ತಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಯಾಗುವ ಅವರ ಬೆಂಬಲಿಗರ ಅಟ್ಟಹಾಸ ಮತ್ತು ವಿರೋಧಿಗಳ ಆಕ್ರೋಶಗಳನ್ನು ನೋಡಿದರೆ ನಮ್ಮ ಸುದ್ದಿವಾಹಿನಿಗಳಿಗೆ ಆಗಾಗ ನೆನಪಾಗುವ ‘ಮಹಾಪ್ರಳಯ’ ಇನ್ನೇನು ಹತ್ತಿರದಲ್ಲಿದೆ ಎಂಬಂತೆ ಭಾಸವಾಗುತ್ತದೆ. ಹಾಗೆಂದು ಸದಾ politically correct ಆಗಿರುವುದು ಸಾಧ್ಯವೂ ಇಲ್ಲ. ‘ನಾನಿಂದು ಹಾಲು ಕುಡಿದೆ’, ಎಂದು ಸ್ಟೇಟಸ್ ಹಾಕಿದರೆ ನೀವು ಸುರಕ್ಷಿತ. ನೀವು ಗೋವಿನ ಹಾಲು ಕುಡಿದಿರೋ, ಮತ್ಯಾವುದರ ಹಾಲು ಕುಡಿದಿರೋ ಎಂದು ಬರೆದರೆ ಮಾತ್ರ ಇದಕ್ಕಾಗಿಯೇ ಕಾಯುತ್ತಿರುವ ವರ್ಗವೊಂದು ನಿಮ್ಮನ್ನು ಒಂದು ಪಂಥಕ್ಕೆ ನಿರ್ದಾಕ್ಷಣ್ಯವಾಗಿ ತಳ್ಳಿ ಅಲ್ಲಿ ಪ್ರತಿಷ್ಠಾಪಿಸಿರುತ್ತದೆ.

ಹೀಗಾಗಿ ಇಂದು ಸೃಜನಶೀಲ ವ್ಯಕ್ತಿಯೊಬ್ಬ ಏನನ್ನಾದರೂ ಸೃಷ್ಟಿಸುತ್ತಿದ್ದಾನೆ ಎಂದರೆ ಆತ ಸಮಪ್ರಮಾಣದಲ್ಲಿ ಹೊಗಳಿಕೆ ಮತ್ತು ತೆಗಳಿಕೆಗಳನ್ನು ಅಪ್ಪಿಕೊಳ್ಳಲು ಸಿದ್ಧನಾಗಿರಬೇಕು. ಹಾಗೆ ನೋಡಿದರೆ ಈ ಜಂಜಾಟಗಳಿಂದ ಲೇಖಕನೊಬ್ಬ ಒಂದಷ್ಟು ಸುರಕ್ಷಿತ ದೂರವನ್ನು ಕಾಯ್ದುಕೊಂಡರಷ್ಟೇ ಆತ ಅರ್ಥಪೂರ್ಣವಾದ ಏನನ್ನಾದರೂ ಸೃಷ್ಟಿಸಬಲ್ಲ. ಯಾವ ಕಡೆ ಓಲೈಕೆಗಿಳಿದರೂ ಆತ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ವಿಶಾಲ ಆಗಸವನ್ನು ಒಂದು ಭೂತಗನ್ನಡಿಯ ವೃತ್ತಕ್ಕೆ ಕುಗ್ಗಿಸಿರುತ್ತಾನೆ. ಯಾರದ್ದೋ ಮುಲಾಜಿಗೆ ಬಿದ್ದು ಈಗ ಸಾಹಿತ್ಯ ಸೃಷ್ಟಿಯಾಗಬೇಕಾಗುತ್ತದೆ.

ಚಪ್ಪಾಳೆಯ ಸದ್ದಿಗಿಂತ ಅದು ಯಾರ ಕೈಯ ಚಪ್ಪಾಳೆ ಎಂಬುದು ಮುಖ್ಯವಾಗುತ್ತದೆ. ಹಾಗೆಂದು ಇವೆಲ್ಲದರಿಂದ ದೂರವಿರುವ ಲೇಖಕನೊಬ್ಬ ಮಹಾಮೌನದ ಪ್ರಭಾವಳಿಯಲ್ಲಿ ಸುಖವಾಗಿದ್ದಾನೆ ಎಂಬುದೂ ಸತ್ಯವಲ್ಲ. ಆತನ ಮೌನವೂ ಕೂಡ ಎಲ್ಲೋ ಬಿಕರಿಯಾಗುತ್ತಿರುತ್ತದೆ. ನಕಲಿ ಪ್ರೊಫೈಲುಗಳ ಮುಖವಾಡ ಹಾಕಿ ತೊಡೆ ತಟ್ಟಿಕೊಳ್ಳುವ ವೀರರಿಂದ ಆತ ಹೇಡಿಯೆಂದು ಇನ್ನೆಲ್ಲೋ ಕರೆಸಿಕೊಳ್ಳುತ್ತಿರುತ್ತಾನೆ.

ಹಾಗೆ ನೋಡಿದರೆ ಡಿಜಿಟಲ್ ಮಾಧ್ಯಮವು ಇಷ್ಟು ಪ್ರಬಲವಾಗಿರುವ ಈ ದಿನಗಳಲ್ಲಿ ಸಾಹಿತ್ಯಕ್ಷೇತ್ರದ ಇತರ ವಿಚಾರಗಳೂ ಕೂಡ ಪರಿಣಾಮಕಾರಿಯಾಗಿ ಚರ್ಚೆಯಾಗಬಹುದಿತ್ತು. ಆದರೆ ಇಂಥಾ ಆರೋಗ್ಯಕರ ಚರ್ಚೆಗಳು ತಮ್ಮ ಬಿಸಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಉದಾಹರಣೆಗೆ ಇತ್ತೀಚೆಗೆ ನಡೆದ ಕರ್ನಾಟಕ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಕಂಡುಬಂದ ಅವ್ಯವಸ್ಥೆಗಳ ಬಗ್ಗೆ ಬಹಳಷ್ಟು ಪ್ರಕಾಶಕರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅದು ಸ್ಟಾಲ್ ಗಳನ್ನು ಹಾಕಿಕೊಳ್ಳುವುದರಿಂದ ಹಿಡಿದು ಇತರೆ ಲೋಪದೋಷಗಳವರೆಗೂ ಹಬ್ಬಿಕೊಂಡು ಸವಿವರವಾಗಿಯೇ ಇತ್ತು. ಆದರೆ ಈ ಚರ್ಚೆಗಳು ನಿರೀಕ್ಷಿತ ಮಟ್ಟದಲ್ಲಿ ಫಲ ಕಾಣಲಿಲ್ಲ. ಸಾಹಿತ್ಯ ಸಮ್ಮೇಳನವು ಮುಗಿದ ಬೆನ್ನಿಗೇ ಎಲ್ಲವೂ ಮರೆತುಹೋಯಿತು. ಪತ್ರಿಕೆಗಳು ಕೂಡ ಅವುಗಳನ್ನು ಬಾಕ್ಸ್ ಐಟಮ್ ಗಳಿಗಷ್ಟೇ ಸೀಮಿತವಾಗಿರಿಸಿ ‘ಇವೆಲ್ಲಾ ಇದ್ದಿದ್ದೇ’ ಎಂಬ ಧಾಟಿಯಲ್ಲಿ ಪ್ರಕಟಿಸಿ ಕೈತೊಳೆದುಕೊಂಡಿದ್ದವು.

ಅಷ್ಟಕ್ಕೂ ಸಾಹಿತಿ ದೂರದ ಗಾಜಿನ ಅರಮನೆಯಲ್ಲೇನೂ ಕೂತು ಬರೆಯುವವನಲ್ಲ. ಹೀಗಾಗಿ ಸಾಮಾಜಿಕ ಚೌಕಟ್ಟಿನಲ್ಲಿ ಆತನ ರಾಜಕೀಯ ನಿಲುವುಗಳು ವೈಯಕ್ತಿಕವಾದರೂ ಅದು ಅಸ್ತಿತ್ವದಲ್ಲಿರುವುದು ಮತ್ತು ತನ್ನ ಸಾಹಿತ್ಯಪ್ರಕಾರದ ರೂಪದಲ್ಲಿ ಆಗಾಗ ಜನಸಾಮಾನ್ಯರ ಮುಂದೆ ಬರುವುದು ಸಹಜ. ಆದರೆ ಸಮಸ್ಯೆಯಾಗುವುದು ಸಾಹಿತಿಯೊಬ್ಬನ ರಾಜಕೀಯ ನಿಲುವುಗಳು ಆತನ ಸಾಹಿತ್ಯಕ್ಕಿಂತಲೂ ಹೆಚ್ಚು ಮುಖ್ಯವೆಂಬ ಭ್ರಮೆಯು ಸೃಷ್ಟಿಯಾದಾಗ ಮಾತ್ರ. ಹಿಂದೆಲ್ಲಾ ಪತ್ರಿಕೆಗಳಲ್ಲಿ ಬರುತ್ತಿದ್ದ ಕೃತಿವಿಮರ್ಶೆಗಳು ಶ್ರೀಮಂತವಾಗಿದ್ದವಂತೆ. ಕೃತಿಯ ವಿಮರ್ಶೆಯೊಂದು ಓದುಗನಲ್ಲಿ ಆಸಕ್ತಿಯನ್ನು ಮೂಡಿಸುವಂತಿದ್ದರೆ ಲೇಖಕನಿಗೆ ತನ್ನ ಮೌಲ್ಯಮಾಪನದಂತಿತ್ತು. ಇದರಿಂದ ಲೇಖಕನೊಬ್ಬನಿಗೆ ತನ್ನ ಕ್ರಾಫ್ಟ್ ಅನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತಿತ್ತೇನೋ!

ಆದರೆ ಇಂದು ಲೇಖಕನೊಬ್ಬನ ಸಾಹಿತ್ಯವು ಚರ್ಚೆಗೊಳಪಡುವುದಕ್ಕಿಂತ ಹೆಚ್ಚಾಗಿ ಆ ಲೇಖಕ ಯಾವ ಬ್ರಾಂಡಿನ ಸಿಗರೇಟು ಸೇದುತ್ತಾನೆ, ಈ ಲೇಖಕಿಯ ಬಾಯ್-ಫ್ರೆಂಡ್ ಕಳೆದ ವಾರ ಏನು ಮಾಡುತ್ತಿದ್ದ… ಎಂಬಲ್ಲಿಗೆ ಪುಸ್ತಕಗಳ ಆಯ್ಕೆ ಬಂದು ನಿಂತಿದೆ. ಇಂದು ಬಹಳಷ್ಟು ಮಂದಿ ಓದುಗರು ತಮಗೆ ಹೊಂದಿಕೆಯಾಗದ ಪಂಥದ ಲೇಖಕನೊಬ್ಬನ ಕೃತಿಯನ್ನು ಕುತೂಹಲಕ್ಕೆಂದು ಕಣ್ಣೆತ್ತಿಯೂ ನೋಡುವುದಿಲ್ಲ. ಲೇಖಕರು ತಮ್ಮ ಓರಗೆಯ ಲೇಖಕರ ಕೃತಿಗಳ ಬಗ್ಗೆ ಓದಿ ಈ ಬಗ್ಗೆ ಬರೆಯುವುದು, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯಾಗಿಬಿಟ್ಟಿದೆ. ಅಪರೂಪಕ್ಕೆ ‘ಆ’ ಪಂಥದ ಲೇಖಕನೊಬ್ಬನಿಗೆ ‘ಈ’ ಪಂಥದ ಹೊಸ ಲೇಖಕನೊಬ್ಬನ ಕೃತಿಯು ಇಷ್ಟವಾದರೂ ಆತ ಈ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುವಂತಿಲ್ಲ. ಹಾಗೆ ಮಾಡಿದರೆ ಆತ ತನ್ನ ಹಿಂಬಾಲಕರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಮುಂದಿನ ತಿಂಗಳು ಹಿರಿಯ ಲೇಖಕರೊಬ್ಬರ ಹೊಸ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ ಎಂಬುದು ಸುದ್ದಿಯಾದರೆ ಒಂದಷ್ಟು ಜನ ಸೇರಿಕೊಂಡು ಆ ಹಿರಿಯ ಲೇಖಕ ಇಪ್ಪತ್ತು ವರ್ಷಗಳ ಹಿಂದೆ ತನ್ನ ಕೃತಿಯಲ್ಲಿ ಸೃಷ್ಟಿಸಿದ್ದ ಪಾತ್ರವೊಂದನ್ನು ಇಟ್ಟುಕೊಂಡು ಈಗ ಆತನನ್ನು ಹಿಗ್ಗಾಮುಗ್ಗಾ ಜರೆಯುತ್ತಿರುತ್ತಾರೆ. ಆತನ ಮುಂದಿನ ಪುಸ್ತಕ ಯಾವುದಕ್ಕೂ ಲಾಯಕ್ಕಲ್ಲ ಎಂದು ಷರಾ ಬರೆಯುತ್ತಾರೆ. ಹೀಗೆ ಪ್ರಸಕ್ತ ಸಾಹಿತ್ಯಲೋಕದ ಈಗಿನ ಟ್ರೆಂಡ್ ಗಳ ಬಗೆಗಿನ ಸಾಮಾನ್ಯ ಜ್ಞಾನವುಳ್ಳ ಯಾರೇ ಆದರೂ ಇಂದು ಯಾವ ಪತ್ರಿಕೆಯಲ್ಲಿ ಯಾವ ಲೇಖಕನ ಯಾವ ಕೃತಿಯ ಪರಿಚಯವು ಪ್ರಕಟವಾಗಬಹುದು ಎಂಬುದನ್ನು ಸರಿಯಾಗಿ ಊಹೆ ಮಾಡಬಲ್ಲ.

ಸಾಹಿತ್ಯವು ಸುದ್ದಿಯಾಗಬಾರದು ಅಂತೇನಿಲ್ಲ. ಆದರೆ ಕ್ಷಣಿಕ ‘ಸೆನ್ಸೇಶನಲ್’ ಆಗಲಷ್ಟೇ ಸೀಮಿತವಾದರೆ ಅದಕ್ಕಿಂತ ವಿಪರ್ಯಾಸ ಬೇರೊಂದಿಲ್ಲ. ಕಪ್ಪು-ಬಿಳುಪು ಚಿಂತನೆಗಳೇ ಮುಖ್ಯವಾಗುತ್ತಿರುವ ಈ ಕಾಲದಲ್ಲಿ ಬದುಕು ತನ್ನ ಬಣ್ಣ ಕಳೆದುಕೊಳ್ಳದಿರಲಿ ಎಂಬುದೇ ಆಶಯ.

*ಲೇಖಕರು ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು, ವೃತ್ತಿಯಿಂದ ಇಂಜಿನಿಯರು. ಪ್ರವೃತ್ತಿಯಿಂದ ಲೇಖಕರು ಮತ್ತು ಅಂಕಣಕಾರರು. ಆಫ್ರಿಕಾ ಪ್ರವಾಸ ಕಥನವಾಗಿರುವ ‘ಹಾಯ್ ಅಂಗೋಲಾ!’ ಚೊಚ್ಚಲ ಕೃತಿ. ಪ್ರಸ್ತುತ ಹರಿಯಾಣಾದ ಗುರುಗ್ರಾಮದ ನಿವಾಸಿ. 

Leave a Reply

Your email address will not be published.