ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು

ಇಂದಿಗೂ ಹಿರಿಯ ತಲೆಮಾರು ಸ್ತ್ರೀಯಿಂದ (ದ್ರೌಪದಿ) ಮಹಾಭಾರತವೆಂಬ ದೊಡ್ಡ ಯುದ್ಧ ನಡೆಯಿತು, ಸ್ತ್ರೀಯಿಂದ (ಸೀತೆ) ರಾಮಾಯಣದಲ್ಲಿ ಘೋರ ಯುದ್ಧ ಸಂಭವಿಸಿತು ಎಂದು ಹೇಳುತ್ತಾರೆ. ಹಾಗಾದರೆ ಪುರುಷನಿಂದ ಯಾವ ದೊಡ್ಡ ಯುದ್ಧವೂ ನಡೆದಿಲ್ಲವೇ?

ಶ್ರೀಧರ ಆರ್.ವಿ.

ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಭಾರತೀಯರ ಮನಸ್ಸನ್ನು ಸದಾ ಪ್ರಭಾವಿಸುತ್ತಿರುತ್ತವೆ. ಇವುಗಳ ಪ್ರೇರಣೆ ಮತ್ತು ಪ್ರಭಾವವನ್ನು ಕನ್ನಡ ಸಾಹಿತ್ಯ ಯಥೇಚ್ಛವಾಗಿ ಪಡೆದುಕೊಂಡಿದೆ. ಹಳಗನ್ನಡದ ಮಹತ್ವದ ಕವಿಯಾದ ಪಂಪ ಮತ್ತು ಮಧ್ಯಕಾಲೀನ ಕವಿಯಾದ ಕುಮಾರವ್ಯಾಸರು ತಮ್ಮ ಕವಿತಾಶಕ್ತಿಯಿಂದ ಮಹಾಭಾರತ ಕಾವ್ಯವನ್ನು ಹೊಸನೋಟಗಳ ಮೂಲಕ ಮರು ನಿರೂಪಿಸಿದ್ದಾರೆ.                               

ಪಂಪ ಮತ್ತು ಕುಮಾರವ್ಯಾಸ ತಮ್ಮ ಕಾವ್ಯಗಳಲ್ಲಿ (ಪಂಪ ಭಾರತಂ, ಕುಮಾರವ್ಯಾಸ ಭಾರತ) ದ್ರೌಪದಿಯ ಮುಡಿಯ ಮಹೋನ್ನತಿಯನ್ನು ಕುರಿತು ವಿವರಿಸುತ್ತಾರೆ. ಕುಮಾರವ್ಯಾಸ ದ್ರೌಪದಿಯ ಮುಡಿ ಸಾಮಾನ್ಯವಾದ ಮುಡಿಯಲ್ಲ; ಅದು ಶ್ರೀಮುಡಿ, ರಾಜಸೂಯಯಾಗ ಸಂದರ್ಭದಲ್ಲಿ ಮಂತ್ರಾಕ್ಷತೆಗಳಿಂದ, ಪುಣ್ಯ ಜಲಗಳಿಂದ ಪವಿತ್ರವಾದ ಶ್ರೀಮುಡಿ ಇಂತಹ ಶ್ರೀಮುಡಿಗೆ ಕೈಯಿಟ್ಟವರು ಬದುಕುವುದುಂಟೇ! ಎಂದರೆ, ಪಂಪ ಮಹಾಭಾರತ ಯುದ್ಧದ ಮಹಾದುರಂತಕ್ಕೆ ದ್ರೌಪದಿಯ ಮುಡಿಯೇ ಆದಿಯೆನ್ನುತ್ತಾನೆ.

ಕುವೆಂಪು ತಮ್ಮ ‘ದ್ರೌಪದಿಯ ಶ್ರೀಮುಡಿ’ ಎಂಬ ವಿಮರ್ಶಾ ಲೇಖನದಲ್ಲಿ “ಕನ್ನಡ ಸಾಹಿತ್ಯರಂಗದಲ್ಲಿ ದ್ರೌಪದಿಯ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾಕಲಿಗಳು, ಇನ್ನಿಬ್ಬರು ಮಹಾಕವಿಗಳು; ಭೀಮ, ದುಶ್ಯಾಸನ; ಪಂಪ, ನಾರಣಪ್ಪ. ಒಬ್ಬ ಮುಡಿ ಬಿಚ್ಚಿದ ಕಲಿ, ಇನ್ನೊಬ್ಬ ಮುಡಿ ಕಟ್ಟಿದ ಕಲಿ.” (ಕುವೆಂಪು, ದ್ರೌಪದಿಯ ಶ್ರೀಮುಡಿ, 2014, ಪು-1) ಎಂದು ಹೇಳುತ್ತಾರೆ. ಈ ಲೇಖನದಲ್ಲಿ ಕುವೆಂಪು ಪಂಪನ-ಕೇಶಪಾಶ ಕುಮಾರವ್ಯಾಸನ-ಶ್ರೀಮುಡಿಯ ಮಹತ್ವವನ್ನು ಚರ್ಚಿಸುತ್ತಾರೆ.

ಪ್ರಸ್ತುತ ಲೇಖನವು ಪಂಪನ ಕಾವ್ಯದ ಪದ್ಯವೊಂದನ್ನು ಆಧುನಿಕ ಕಾಲದ ಸ್ತ್ರೀವಾದಿ ಪರಿಕಲ್ಪನೆಗೆ ಒಗ್ಗಿಸಿ ನೋಡುವ ಪ್ರಯತ್ನ ಮಾಡುತ್ತದೆ. ದ್ರೌಪದಿಯ ‘ಕೇಶಪಾಶ ಪ್ರಪಂಚವೇ ಮಹಾಭಾರತ ಯುದ್ಧಕ್ಕೆ ನಾಂದಿ’ಯಾಯಿತೆಂದು ಪಂಪನು ತನ್ನ ಕಾವ್ಯದಲ್ಲಿ ನಿರೂಪಿಸಿದ್ದಾನೆ. ಈ ಮಹಾಯುದ್ಧಕ್ಕೆ ದ್ರೌಪದಿಯ ಕೇಶವನ್ನು ಹೊರತು ಪಡಿಸಿದ ಮತ್ಯಾವ ಕಾರಣಗಳೂ ಪೂರಕ ವಾತಾವರಣವನ್ನು ನಿರ್ಮಿಸಲಿಲ್ಲವೆ ಎಂಬುದರ ಪರಿಶೀಲನೆ ಇಲ್ಲಿದೆ.      

ಪಂಪನು ದ್ರೌಪದಿಯ ಕೇಶಪಾಶ ಪ್ರಪಂಚವನ್ನು ಕುರಿತು ವಿವರಿಸುವ ಪದ್ಯ ಇಂತಿದೆ.

ವ|| ಸ್ರ|| ಇದಱೊಳ್ ಶ್ವೇತಾತಪತ್ರಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ

ಪುದಿದ¿iÁ್ಕಡಿತ್ತಡಂಗಿತ್ತಿದಱೊಳೆ ಕುರುರಾಜಾನ್ವಯಂ ಮಾತ್ಪ್ರತಾಪ |

ಕ್ಕಿದ¾ೆಂದಂ ನೋಡಗುರ್ವುರ್ವಿದುದಿವೆ ಮಹಾಭಾರತಕ್ಕಾದಿಯಾಯ್ತ

ಬ್ಜದಳಾಕ್ಷೀ ಪೇ¿ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ ||

(ಪಂಪ ಭಾರತಂ, ದ್ವಾದಶಾಶ್ವಾಸಂ, ಪದ್ಯ-156)

ಗದ್ಯಾನುವಾದ: ಈ ಮುಡಿಯಲ್ಲಿಯೆ ಬೆಳ್ಗೊಡೆಗಳು ಬೆಳಗಿದ ದಶ ದಿಕ್ಕುಗಳನ್ನುಳ್ಳ ರಾಜ ಸಮೂಹವು ಕೂಡಿ ನಾಶವಾಗಿ ಹೋಯಿತು; ಇದರಲ್ಲಿಯೇ ಕುರುರಾಜ ಕುಲವು ಅಡಗಿ ಹೋಯಿತು; ಇದರಿಂದ ನನ್ನ ಪೌರುಷವು ಅತಿಶಯವೆನಿಸಿ ವೆಗ್ಗಳವಾಯಿತು; ಕಮಲನೇತ್ರೇ ದ್ರೌಪದಿಯೇ, ನೋಡು ಇದೇ ಮಹಾಭಾರತ ಯುದ್ಧಕ್ಕೆ ಆದಿಯಾಯಿತು; ಎಂದರೆ ಬೀಜವಾಯಿತು. ನಿನ್ನ ಕೇಶಪಾಶವು ಭಾವಿಸಲು ಸಾಮಾನ್ಯವೇ ಹೇಳು? (ಪ್ರೊ. ಶಿವರಾಮಯ್ಯ, ಪಂಪ ಭಾರತ ಸಂಪುಟ-2, 2018, ಆಶ್ವಾಸ ಹನ್ನೆರಡು, ಪುಟ-595)

ಭೀಮ ತನ್ನ ಮತ್ತು ದ್ರೌಪದಿಯ ಪ್ರತಿಜ್ಞೆ ಈಡೇರಿಸಿದ್ದು ಕುರುಕ್ಷೇತ್ರದ ಹದಿನಾರನೇಯ ದಿನ. ಆ ದಿನ ಭೀಮನು ದುರ್ಯೋಧನನ ಪ್ರೀತಿಯ ತಮ್ಮನಾದ ದುಶ್ಯಾಸನನ ಹೊಟ್ಟೆ ಬಗೆದು ರಕ್ತವನ್ನು ಬೊಗಸೆಯಲ್ಲೆತ್ತಿ ರಣಾಂಗಣದ ಮಧ್ಯೆ ದ್ರೌಪದಿಯ ತಲೆಗೆ ಸವರುತ್ತಾ, ದುಶ್ಯಾಸನನ ದಂತ ಪಂಕ್ತಿಯಿಂದ ಆಕೆಯ ಜಡೆ ಬಾಚಿ ಹಾಗೂ ಅವನ ಕರುಳುಗಳನ್ನು ಕಿತ್ತು ಹೂವಿನ ಮಾಲೆಯಂತೆ ಆಕೆಯ ಮುಡಿಗೆ ಮುಡಿಸುತ್ತಾನೆ. ಈ ಪ್ರಸಂಗದ ನಂತರ ಅವಳ ಕೇಶವನ್ನು ಕುರಿತು ಇಡೀ ಕುರುವಂಶದ ವಿನಾಶಕ್ಕೆ ಈ ಜಡೆಯೆ ಆದಿಯಾಯಿತು ಎಂದು ಪಂಪ ಭೀಮನಿಂದ ಹೇಳಿಸುತ್ತಾನೆ. 

ಈ ಸಾಲುಗಳನ್ನು ಗಮನಿಸಿ. “ಇದಱೊಳ್ ಶ್ವೇತಾತಪತ್ರಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ/ ಪುದಿದು¿iÁ್ಕಡಿತ್ತಡಂಗಿತ್ ಇದಱೊಳೆ ಕುರುರಾಜಾನ್ವಯಂ” ಅಂದರೆ ಈ ಮುಡಿಯಲ್ಲಿಯೆ ಬೆಳ್ಗೊಡೆಗಳು ಬೆಳಗಿದ ದಶ ದಿಕ್ಕುಗಳನ್ನುಳ್ಳ ರಾಜ ಸಮೂಹವು ಕೂಡಿ ನಾಶವಾಗಿ ಹೋಯಿತು. ಇದರಲ್ಲಿಯೇ ಕುರುರಾಜ ಕುಲವು ಅಡಗಿ ಹೋಯಿತು. (ಪಂಪ ಭಾರತ, ಸಂಪುಟ-2, ಗದ್ಯಾನುವಾದ, ಪದ್ಯ-156) ಎಂದು ಭೀಮನಿಂದ ಪಂಪ ಹೇಳಿಸುತ್ತಿದ್ದಾನೆ.

ಹದಿನೆಂಟು ದಿನಗಳ ಕಾಲ ನಡೆಯುವ ಈ ಮಹಾಭಾರತದ ಯುದ್ಧದಲ್ಲಿ ಕುರುರಾಜ ಕುಲವೊಂದೇ ಅಡಗಿ ಹೋಯಿತೇ? ಹಾಗಾದರೆ  ಕೌರವರ ಪರ (ಗಾಂಧಾರ, ಸಿಂಧೂ, ಅವಂತೀ, ತ್ರಿಗರ್ತಾಧೀಶ್ವರ ಇತ್ಯಾದಿ ಒಟ್ಟು 11 ಅಕ್ಷೋಹಿಣಿ ಸೈನ್ಯ) ಹಾಗೂ ಪಾಂಡವರ ಪರ (ಮತ್ಸ್ಯ, ಪಾಂಚಾಲ, ಪಾಂಡ್ಯ, ಅಂಗ, ವಂಗ, ಕಳಿಂಗ, ಕೊಂಗ ಇತ್ಯಾದಿ ಒಟ್ಟು 7 ಅಕ್ಷೋಹಿಣಿ ಸೈನ್ಯ) ಹೋರಾಡಲು ಬಂದ ಅನೇಕ ರಾಜಕುಲಗಳ ರಾಜರು, ಸೈನಿಕರು ಈ ದ್ರೌಪದಿಯ ಮುಡಿಯಿಂದಲೇ ಅಥವಾ ದ್ರೌಪದಿಯಿಂದಲೇ ನಾಶವಾದರೇ? ಅಥವಾ ಅವರಲ್ಲಿ ಯಾರೂ ಮರಣವೊಂದಲೇ ಇಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತವೆ. 

ಮುಂದುವರೆದ ಸಾಲುಗಳಲ್ಲಿ “ಮಾತ್ಪ್ರಾಪಕ್ಕಿದ¾Éಂ ದಂ ನೋಡಗುರ್ವುರ್ವಿದುದಿವೆ ಮಹಾಭಾರತಕ್ಕಾದಿಯಾಯ್ತ / ಬ್ಜದಳಾಕ್ಷೀ ಪೇ¿ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂ ಚಂ” ಅಂದರೆ ಇದರಿಂದ ನನ್ನ ಪೌರುಷವು ಅತಿಶಯವೆನಿಸಿ ವೆಗ್ಗಳವಾಯಿತು ಅಥವ ಹೆಚ್ಚಾಯಿತು, ಕಮಲನೇತ್ರಿ ದ್ರೌಪದಿಯೇ ನೋಡು ಇದೇ ಮಹಾಭಾರತ ಯುದ್ಧಕ್ಕೆ ಆದಿಯಾಯಿತು; ಎಂದರೆ ಬೀಜವಾಯಿತು. ನಿನ್ನ ಕೇಶಪಾಶವು ಭಾವಿಸಲು ಸಾಮಾನ್ಯವೇ ಹೇಳು? (ಪಂಪ ಭಾರತ, ಸಂಪುಟ-2, ಗದ್ಯಾನುವಾದ, ಪದ್ಯ-156)  ಎಂದು ಆದಿಕವಿ ಭೀಮನಿಂದ ಹೇಳಿಸುತ್ತಿದ್ದಾನೆ. ಹಾಗಾದರೆ ದ್ರೌಪದಿಯ ಮುಡಿಯಿಂದಲೇ ಭೀಮನಿಗೆ ಪೌರುಷ ಹೆಚ್ಚಾಯಿತೇ? ಈ ಹಿಂದೆ ಭೀಮನಿಗೆ ಕಡಿಮೆ ಪೌರುಷವಿತ್ತೇ? ನಿನ್ನ ಕೇಶಪಾಶವು ಸಾಮಾನ್ಯವೇ ಹೇಳು ಎಂದರೆ ಭೀಮನ ಗದೆ ಯುದ್ಧಭೂಮಿಯಲ್ಲಿ ಯಾರ ಸಾವಿಗೂ ಪಾಶವಾಗಲಿಲ್ಲವೇ?

ಪಂಪ ಇಡೀ ಮಹಾಭಾರತ ಯುದ್ಧದ ದೈತ್ಯಾಕಾರದ ಹಿಂಸೆಯನ್ನು ಸ್ತ್ರೀಯೊಬ್ಬಳ ಹೆಗಲಿಗೆ ಹೊರಿಸುತ್ತಾನೆ. ಆದರೆ ಸ್ತ್ರೀಯೊಬ್ಬಳೇ ಈ ಯುದ್ಧಕ್ಕೆ ಆದಿಯಾದಳೇ?  ದ್ರೌಪದಿಯ ಅಪಮಾನಕ್ಕೂ ಮೊದಲಿನ ಅನೇಕ ಕಾರಣಗಳಿವೆ. ಆ ಕಾರಣಗಳಿಂದ ಈ ಯುದ್ಧ ನಡೆದಿಲ್ಲ ಎನ್ನಲೂ ಆಗದು. ಆ ಕಾರಣಗಳಲ್ಲಿ ಮುಖ್ಯವಾದವುಗಳು ಇಂತಿವೆ. 

  • ದುರ್ಯೋಧನನ ಹುಟ್ಟಿನಿಂದ ಕುರುರಾಷ್ಟ್ರದ ಅರಮನೆಯಲ್ಲಿನ ವಿಗ್ರಹಗಳು ರೋದನ ಮಾಡಿದವು. ಬಹು ರಭಸದಿಂದ ಭೂಮಿಯು ಕಂಪಿಸಿತು. ದಿಕ್ಕುಗಳು ಹತ್ತಿ ಉರಿದವು. ಪಿಶಾಚಿಗಳ ಸಮೂಹವು ಕೂಗಿ ಕುಣಿದಾಡಿದವು. ಅತಿ ಮನೋಹರವಾದ ಸ್ಥಳಗಳಲ್ಲಿ ನರಿಯ ಗುಂಪುಗಳು ಕೂಗಿಕೊಂಡವು. ಈ ಅಪಶಕುನವನ್ನು ಭವಿಷ್ಯ ಜ್ಞಾನಿಯೂ ಬುದ್ಧಿವಂತನೂ ಆದ ವಿದುರನಿಂದ ಪಂಪ ಹೀಗೆ ಹೇಳಿಸುತ್ತಾನೆ. ಈತನೇ ನಮ್ಮ ವಂಶವನ್ನು ಹಾಳು ಮಾಡುವ ಕೇತುಗ್ರಹ ಈತನನ್ನು ಹೊರಗೆಸೆಯುವುದು ಉಚಿತ ಅನ್ನುತ್ತಾನೆ. (ಪಂಪ ಭಾರತಂ, ಪ್ರಥಮಾಶ್ವಾಸಂ, ಪದ್ಯ-133)
  • ಬಾಲ್ಯದಲ್ಲಿ ಭೀಮನನ್ನು ಹಾವುಗಳಿಂದ ಕಚ್ಚಿಸಿ ಕೊರಳಿಗೆ ದೊಡ್ಡ ಕಲ್ಲನ್ನು ಕಟ್ಟಿ ಗಂಗಾನದಿಯ ಮಡುವಿನಲ್ಲಿ ತಮ್ಮ ವಂಶವನ್ನೇ ತಳಕ್ಕೆ ಅದ್ದುವ ಹಾಗೆ ಕೌರವ ಕುಮಾರರು ಮುಳುಗಿಸುತ್ತಾರೆ. (ಪಂಪ ಭಾರತಂ, ದ್ವಿತೀಯಾಶ್ವಾಸಂ, ಪದ್ಯ-32)
  • ಕೌರವರು ಭೀಮನನ್ನು ಸಾಯಿಸಲು ವಿಷದ ಲಡ್ಡುಗಳನ್ನು ತಿನ್ನಿಸುವುದು. ‘ವಿಷದ ಲಡ್ಡುಗೆಯನಿಕ್ಕಿಯುಮೆನಿತಾನುಮುಪದ್ರವಂಗಳೊಳ್ ತೊಡರಿಕ್ಕಿಯುಂ’ (ಪಂಪ ಭಾರತಂ, ದ್ವಿತೀಯಾಶ್ವಾಸಂ, ವಚನ, ಪುಟ-136)
  • ದುರ್ಯೋಧನನು ಪಾಂಡವರು ವಾರಣಾವರ್ತಕ್ಕೆ ಹೋಗುವುದನ್ನು ಮೊದಲೇ ತಿಳಿದು ಪುರೋಚನನಿಂದ ಅರಗಿನ ಮನೆಯನ್ನು ನಿರ್ಮಿಸಿ ಅದರಲ್ಲಿ ಸುಡುವಂತೆ ಮಾಡುವುದು. (ಪಂಪ ಭಾರತಂ, ದ್ವಿತೀಯಾಶ್ವಾಸಂ, ವಚನ, ಪುಟ-164-65)
  • ಪಗಡೆಯಾಟದಲ್ಲಿ ಸಮಸ್ತವನ್ನು ಕಳೆದುಕೊಂಡ ಪಾಂಡವರು ಕೊನೆಗೆ ತಮ್ಮ ಪತ್ನಿಯನ್ನೂ ಪಣಕ್ಕಿಟ್ಟು ಸೋಲುತ್ತಾರೆ. ಆಗ ದುರ್ಯೋಧನ ಎಲ್ಲವೂ ನನ್ನ ಬಳಿ ಬಂದಾಗಿದೆ ಉಳಿದಿರುವುದು ದ್ರೌಪದಿಯೊಬ್ಬಳೇ ಆಕೆಯ ಮುಡಿಯನ್ನು ಹಿಡಿದು ಸಭಾ ಮಧ್ಯಕ್ಕೆ ಎಳೆದು ತಾ ದುಶ್ಯಾಸನ ಎಂದು ಆದೇಶಿಸುತ್ತಾನೆ. (ಪಂಪ ಭಾರತಂ, ಸಪ್ತಮಾಶ್ವಾಸಂ, ವಚನ, ಪುಟ-331-332)

ಈ ಮೇಲಿನ ಅಂಶಗಳಲ್ಲೆವೂ ಮಹಾಭಾರತದ ಯುದ್ಧಕ್ಕೆ ಮುನ್ನುಡಿಗಳಾಗಿವೆ. ದ್ರೌಪದಿಗಾದ ಅಪಮಾನ ಪಾಂಡವರಲ್ಲಿ ಬೃಹದಾಕಾರದ ಸಿಟ್ಟನ್ನು ಹುಟ್ಟಿಸಿರಬಹುದು. ಆ ಕಾರಣದಿಂದ ಪ್ರತಿಜ್ಞೆ, ಪ್ರತೀಕಾರಗಳೂ ಜನ್ಮತಾಳಿರಬಹುದು. ಆದರೆ ದ್ರೌಪದಿಯ ಅಪಮಾನದ ಹಿಂದಿರುವ ಪುರುಷ ಕೇಂದ್ರಿತ ಒಳಸಂಚೂ ಕೂಡ ಮಹಾಭಾರತಕ್ಕೆ ಒಂದು ಬಲಿಷ್ಠ ಕಾರಣವಾಗಿದೆ. ಆ ಪುರುಷ ಕೇಂದ್ರಿತ ಒಳ ಸಂಚನ್ನು ಕವಿಪಂಪ ಮಹಾಭಾರತಕ್ಕೆ ಆದಿಯೆಂದು ಕರೆಯುವುದಿಲ್ಲ. ಆ ಒಳಸಂಚಿನ ಹಿಂಸೆಯನ್ನು ತುಂಬಿದ ಸಭೆಯಲ್ಲಿ ಅನುಭವಿಸಿದ ಸ್ತ್ರೀಯನ್ನು ‘ಮಹಾಭಾರತಕ್ಕೆ ಆದಿಯಾಯ್ತು’ ಎಂದು ಕರೆದಿದ್ದಾನೆ. 

ದುರುಳ ದುಶ್ಯಾಸನ ಅಬಲೆಯಾದ ಸ್ತ್ರೀಯ ಮೇಲೆ ತನ್ನ ಶಕ್ತಿಯನ್ನು ಪ್ರದರ್ಶಿಸುವ ದುರ್ವರ್ತನೆ ಎಲ್ಲರ ಮನ ಕಲಕುತ್ತದೆ. ಆದರೆ ಪಂಪ ಈ ದುಷ್ಟನೇ ಮಹಾಭಾರತಕ್ಕೆ ಆದಿಯಾದ ಎಂದು ಕರೆದಿದ್ದರೆ ಸೂಕ್ತವಾಗುತ್ತಿತ್ತು. ಅಥವಾ ಅವಳನ್ನು ಸಭಾಮಧ್ಯಕ್ಕೆ ಎಳೆದು ತಾ ಎಂಬ ಆದೇಶವನ್ನು ನೀಡುತ್ತಿರುವ ದುರ್ಯೋಧನನೇ ನಾಂದಿಯಾದ ಎಂದು ಕರೆದಿದ್ದರೆ ಸಮಂಜಸವಾಗುತ್ತಿತ್ತು. ಅಲ್ಲದೇ ಶಕುನಿಯು ಕೌರವ ಕುಮಾರರಲ್ಲಿ ಆರಂಭದಿಂದ ಬಿತ್ತುತ್ತಾ ಬಂದಿರುವ ವಿಷ ಬೀಜದ ಕುತಂತ್ರಗಳೇ ಈ ಯುದ್ಧಕ್ಕೆ ಆದಿಯೆನ್ನಬೇಕಿತ್ತು. ಮೇಲಿನ ಗ್ರಹಿಕೆಗಳಿಂದ ಹೇಳುವುದಾದಲ್ಲಿ, ಇಲ್ಲಿ ಪಂಪ ಪುರುಷ ಪಕ್ಷಪಾತಿಯಂತೆಯೂ ಕಾಣುತ್ತಾನೆ.    

ಜೂಜು ಅಧರ್ಮವೆಂದು ತಿಳಿದಿದ್ದ ಧರ್ಮರಾಜ ಅದರ ವಿರುದ್ಧ ಪ್ರತಿಭಟಿಸಿ ಖಾಂಡವ ಪ್ರಸ್ಥಕ್ಕೆ ವಾಪಾಸ್ಸಾಗಿದ್ದರೆ ಸಮಸ್ತ ರಾಜ್ಯವನ್ನೂ, ಸೋದರರನ್ನೂ, ಪತ್ನಿಯಾದ ದ್ರೌಪದಿಯನ್ನು ಪಣಕ್ಕಿಟ್ಟು ಸೋಲುತ್ತಿರಲಿಲ್ಲ. ಅಪಮಾನಗಳೂ ಆಗುತ್ತಿರಲಿಲ್ಲ. ಪ್ರತಿಜ್ಞೆಗಳೂ ಹುಟ್ಟುತ್ತಿರಲಿಲ್ಲ. ಧರ್ಮರಾಜನ  ಜೂಜಿನ ನಿರ್ಣಯವೂ ಕೂಡ ಈ ಯುದ್ಧಕ್ಕೆ  ಕಾರಣವಾಗಿಲ್ಲ ಎನ್ನಲಾಗದು. ಈ ಮೇಲಿನ ಅಂಶಗಳು ಓದುಗರಲ್ಲಿ ಭಿನ್ನ ಯೋಚನೆಗಳನ್ನು ಮಾಡಿಸುತ್ತವೆ. 

ಮಹಾಭಾರತದ ಆರಂಭದಿಂದಲೂ ಕೇಡುಗಳನ್ನು ಪದೇ ಪದೇ ಮಾಡುತ್ತಿರುವ ಅಧರ್ಮಿಗಳಾದ ಕೌರವರಲ್ಲಿ ಯಾರೊಬ್ಬರನ್ನೂ ಪಂಪ ಈ ಹಿಂಸಾಚಾರದ ದೈತ್ಯಾಕಾರದ ಯುದ್ಧಕ್ಕೆ ಆದಿಯನ್ನಾಗಿಸುವುದೇ ಇಲ್ಲ. ದ್ರೌಪದಿ ಕೇವಲ ಅಧರ್ಮಿಗಳ ನಾಶಕ್ಕೆ ಆದಿಯಾದಳೇ? ಈ ಯುದ್ಧದಲ್ಲಿ ಕೇವಲ ಅಧರ್ಮಿಗಳ ನಾಶವಾಯಿತು ಎನ್ನಲಿಕ್ಕೂ ಆಗದು. ಸದಾ ಧರ್ಮದ ಮಾರ್ಗದಲ್ಲಿ ನಡೆಯುತ್ತಿರುವ ಭೀಷ್ಮನಂತಹ, ಗುರುದ್ರೋಣನಂತಹ, ಕರ್ಣನಂತಹ, ಅಭಿಮನ್ಯುವಿನಂತಹ ಧರ್ಮಿಗಳ ನಾಶವೂ ಆಗಿದೆ. ಹಾಗಾದರೆ ಈ ಧರ್ಮಿಗಳ ನಾಶಕ್ಕೂ ದ್ರೌಪದಿ, ಅವಳ ಮುಡಿಯೇ ಕಾರಣವಾಯಿತೇ?

ದ್ರೌಪದಿಗಾದ ಅಪಮಾನ ಮಹಾಭಾರತದ ಯುದ್ಧಕ್ಕೆ ಒಂದು ಬಲಿಷ್ಠ ಕಾರಣ. ಆದರೆ ಪಾಂಡವರು ದ್ರೌಪದಿಗಾದ ಅಪಮಾನವನ್ನು ನೆನೆಸಿಕೊಂಡು ಮಾತ್ರ ಯುದ್ಧಭೂಮಿಯಲ್ಲಿ ಶತ್ರುಗಳನ್ನು ಕೊಂದರೇ? ಮೇಲೆ ವಿವರಿಸಿದ ಹಾಗೆ ಈ ಜೂಜಿಗೂ ಮೊದಲೇ ಕುರು ಕುಮಾರರಿಂದ ಪಾಂಡವರು ಅನುಭವಿಸಿದ ಅನೇಕ ಸಾವಿನ ಅನುಭವಗಳು, ನೋವಿನ ಹಾಗೂ ಅಪಮಾನಗಳ ಆಗರ ಯುದ್ಧಭೂಮಿಯಲ್ಲಿ ಅವರ ಸ್ಮೃತಿಪಟಲಕ್ಕೆ ತಟ್ಟುತ್ತಾ ಹೋಗುತ್ತದೆ.      

ದ್ರೌಪದಿ ದುಶ್ಯಾಸನನ ನಾಶಕ್ಕೆ ಮಾತ್ರ ಪ್ರತಿಜ್ಞೆ ಮಾಡುತ್ತಾಳಷ್ಟೇ. ಇಡೀ ಕೌರವರನ್ನು ನಾಶ ಮಾಡುವವರೆಗೂ ಈ ಬಿಚ್ಚಿದ ಕೇಶವನ್ನು ಕಟ್ಟುವುದಿಲ್ಲವೆಂದು ಪಂಪ ಭಾರತದಲ್ಲೆಲ್ಲೂ ಆಕೆ ಹೇಳಿಲ್ಲ. ದ್ರೌಪದಿ ಹೇಳಿರುವುದು ‘ಮುಡಿಯಂ ಪಿಡಿದೆೞೆದಪನ’ನ್ನು ಕೊಂದು ಆತನ ಕರುಳನ್ನು ತನ್ನ ತುರುಬಿಗೆ ಮುಡಿಸುವವರೆಗೆ ಕೆದರಿದ ಜಡೆಯನ್ನು ಕಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡುತ್ತಾಳೆ. ಕವಿ ದುಶ್ಯಾಸನ, ದುರ್ಯೋಧನರ ಮೃತ್ಯುವಿಗೆ ದ್ರೌಪದಿ ಆದಿಯಾದಳು ಎಂದಿದ್ದರೆ ಆಕೆಗೆ ತಕ್ಕ ನ್ಯಾಯ ಒದಗಿಸಿದಂತಾಗುತ್ತಿತ್ತೇನೋ ಅನಿಸುತ್ತದೆ. ಇಡೀ ಭಾರತಕ್ಕೆ ಆದಿಯಾಯಿತು ಎಂದು ಹೇಳುವುದರಿಂದ ದ್ರೌಪದಿ ತನ್ನ ಮಕ್ಕಳಾದ ಉಪಪಾಂಡವರ ನಾಶಕ್ಕೂ ಆದಿಯಾಯಿತು ಎಂದ ಹಾಗೆ ಆಗುತ್ತದೆ. ಹಾಗಾದರೆ ಅವಳಿಗೆ ಕರುಳಬಳ್ಳಿಯ ಸಂಬಂಧದ ಅರಿವೇ ಇರಲಿಲ್ಲವೇ?

ಇಂದಿಗೂ ಹಿರಿಯ ತಲೆಮಾರು ಸ್ತ್ರೀಯಿಂದ (ದ್ರೌಪದಿ) ಮಹಾಭಾರತವೆಂಬ ದೊಡ್ಡ ಯುದ್ಧ ನಡೆಯಿತು. ಸ್ತ್ರೀಯಿಂದ (ಸೀತೆ) ರಾಮಾಯಣದಲ್ಲಿ ಘೋರ ಯುದ್ಧ ಸಂಭವಿಸಿತು ಎಂದು ಹೇಳುತ್ತಾರೆ. ಹಾಗಾದರೆ ಪುರುಷನಿಂದ ಯಾವ ದೊಡ್ಡ ಯುದ್ಧವೂ ನಡೆದಿಲ್ಲವೇ? ಉದಾಹರಣೆಗೆ ಸೀತಾಪಹರಣಕ್ಕೂ ಮೊದಲು ಲಕ್ಷ್ಮಣ ಶೂರ್ಪನಖೆಯ ಮೂಗು, ಕಿವಿಯನ್ನು ಕತ್ತರಿಸುದದಕ್ಕಾಗಿ  ರಾಮಾಯಣದ ಯುದ್ಧ ನಡೆಯಿತು ಎಂದು ಯಾರೂ ಹೇಳುವುದಿಲ್ಲ. ವಾಲ್ಮೀಕಿಯೂ ಕೂಡ ತನ್ನ ರಾಮಾಯಣದಲ್ಲಿ ಸೀತೆಗೆ ಆಶ್ರಯ ನೀಡಿ ಆಶೀರ್ವಾದ ಮಾಡುತ್ತಾನೆ.ಆದರೆ ಸೀತೆಯೇ ಈ ರಾಮಾಯಣದ ಯುದ್ಧಕ್ಕೆ ಆದಿಯೆಂದು ಯಾವ ಕಾಂಡದಲ್ಲಿಯೂ ಹೇಳುವುದಿಲ್ಲ. ಪ್ರಾಯಶಃ ವಾಲ್ಮೀಕಿಗೆ ಲಕ್ಷ್ಮಣನೂ ಈ ಯುದ್ಧಕ್ಕೆ ಒಂದು ಕಾರಣ ಎನ್ನುವ ಸ್ಪಷ್ಟ ಮನವರಿಕೆಯಿದ್ದಿರಬೇಕು ಅನಿಸುತ್ತದೆ.  ಮೇಲೆ ಹೇಳಿರುವ ಹಾಗೆ ಪಂಪ ಹಿರಿಯ ತಲೆಮಾರು ಹೇಳುತ್ತಿದ್ದ ಕಥೆಯ ಮಾರ್ಗವನ್ನು ಅನುಸರಿಸಿರಬಹುದು ಎಂಬ ಅನುಮಾನವೂ ಕಾಡುತ್ತದೆ.

ವ್ಯಾಸನಾಗಲೀ, ಕುಮಾರವ್ಯಾಸನಾಗಲೀ ತಮ್ಮ ಭಾರತಗಳಲ್ಲಿ ದ್ರೌಪದಿಯ ಪ್ರತಿಜ್ಞೆಯನ್ನು ಭೀಮನಿಂದ ಇಡೀ ರಣರಂಗ ಬೆರಗಿನಿಂದ ನೋಡುವಂತೆ ಈಡೇರಿಸುತ್ತಾರಾದರೂ, ಆಕೆಯೆ ಈ ಯುದ್ಧಕ್ಕೆ ಆದಿಯಾದಳು ಎಂಬ ಲೇಬಲ್‌ನ್ನು ದ್ರೌಪದಿಯ ಹಣೆಗೆ ಕಟ್ಟಿಲ್ಲ. ದ್ರೌಪದಿ ಕೇವಲ ತನ್ನ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಲೆಕ್ಕವಿಲ್ಲದಷ್ಟು ಜನರ ಬಲಿದಾನವನ್ನು ಸ್ವೀಕರಿಸಿದ್ದಳೇ? ಆಕೆಗೆ ಕೇವಲ ಈ ಯುದ್ಧದಲ್ಲಿ ತಮಗೆ ಕೇಡುಂಟು ಮಾಡಿದ ಕೌರವರು ಮಾತ್ರ ಹತರಾಗುತ್ತಾರೆಂಬ ನಂಬಿಕೆಯಾದರೂ ಇತ್ತೇ? ಎಂಬ ಪ್ರಶ್ನೆಗಳೊಂದಿಗೆ ಈ ಮೇಲಿನ ವಿವರಣೆ ತಿಳಿಸುವುದೇನೆಂದರೆ, ಪುರಾಣಗಳಲ್ಲಿ ನೆಲೆನಿಂತ ಸ್ತ್ರೀ ಪಾತ್ರಗಳು ಕಾಲದಿಂದ ಕಾಲಕ್ಕೆ ಸೃಜನಶೀಲ ಕವಿಗಳಿಂದ ಅನೇಕ ಮಾರ್ಪಾಡುಗಳೊಂದಿಗೆ ವರ್ತಮಾನಕ್ಕೆ ಮುಖಾಮುಖಿಯಾಗುವುದುಂಟು. ಆದರೆ ಆ ಬದಲಾವಣೆಗಳೆಲ್ಲವನ್ನೂ ಸಹೃದಯೀ ವರ್ಗ ಒಪ್ಪಲೇಬೇಕೆಂಬ ನಿರ್ಬಂಧವೂ ಇಲ್ಲ.            

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾರ್ಥಿ.

Leave a Reply

Your email address will not be published.