‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’: ಸಂಯಮದ ಸಮೀಕ್ಷೆ ಬೇಕಿತ್ತು

-ಪ್ರೊ.ಶಿವರಾಮಯ್ಯ

ಪ್ರಸ್ತುತ ಬರಹದಲ್ಲಿ ಶ್ರೀಧರರು ಎತ್ತುತ್ತಿರುವ ಪ್ರಶ್ನೆ ಅಸಂಬದ್ಧವೂ ಅತಾರ್ಕಿಕವೂ ಲಘುತರವೂ ಆಗಿದ್ದು ಇವರು ಕಾವ್ಯದ ಅಂತರಂಗಕ್ಕೆ ಪ್ರವೇಶಿಸಿದಂತೆಯೇ ಕಂಡುಬರುವುದಿಲ್ಲ.

ಶ್ರೀಧರ ಆರ್.ವಿ ಅವರು ಕಳೆದ ಸಂಚಿಕೆಯ ಹಳಗನ್ನಡ ಕಾಲಂನಲ್ಲಿ ‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’ ಎಂಬ ಲೇಖನವನ್ನು ಬರೆದಿರುತ್ತಾರೆ. ಪಂಪನ ಒಂದು ಪ್ರಸಿದ್ಧ ಪದ್ಯ ‘ಇದರೊಳ್ ಶ್ವೇತಾತ ಪತ್ರ? ಸ್ಥಗಿತ – (ಪಂಪಭಾರತ ೧೨-೧೫೬) ಎಂಬುದು. ಇನ್ನೂ ಸಂಶೋಧನಾ ವಿದ್ಯಾರ್ಥಿಯಾಗಿರುವ ಶ್ರೀಧರರು ಈ ಪದ್ಯವನ್ನು ಆಧುನಿಕ ಸ್ತ್ರೀವಾದಿ ಪರಿಕಲ್ಪನೆಗೆ ಒಗ್ಗಿಸಿ ಬಗ್ಗಿಸಿ ನೋಡುವ ಪ್ರಯತ್ನ ಮಾಡಿರುವುದು ಮೆಚ್ಚತಕ್ಕ ಸಂಗತಿಯೇ. ಯಾಕೆಂದರೆ, ಕನ್ನಡ ಸಾಹಿತ್ಯವನ್ನು ಅದರಲ್ಲೂ, ಹಳಗನ್ನಡ ಸಾಹಿತ್ಯದ ಓದಿನಿಂದ ದೂರಸರಿಯುತ್ತಿರುವ ಇಂದಿನ ಯುವ ಪೀಳಿಗೆ ನಮ್ಮ ಮುಂದಿದೆ. ಹಾಗಾಗಿ ಶ್ರೀಧರ ಅಂಥವರು ಹಳಗನ್ನಡದತ್ತ ಆಸಕ್ತಿ ತೋರಿಸುತ್ತಿರುವುದನ್ನು ಕಂಡರೆ ಯಾರಿಗೆ ತಾನೆ ಮೆಚ್ಚದಿರಲಾಗುತ್ತದೆ?

ಆದರೆ, ಪ್ರಸ್ತುತ ಬರಹದಲ್ಲಿ ಶ್ರೀಧರರು ಎತ್ತುತ್ತಿರುವ ಪ್ರಶ್ನೆ ಅಸಂಬದ್ಧವೂ ಅತಾರ್ಕಿಕವೂ ಲಘುತರವೂ ಆಗಿದ್ದು ಇವರು ಕಾವ್ಯದ ಅಂತರಂಗಕ್ಕೆ ಪ್ರವೇಶಿಸಿದಂತೆಯೇ ಕಂಡುಬರುವುದಿಲ್ಲ. ಇವರ ಮುಖ್ಯ ಪ್ರಶ್ನೆ ‘ದ್ರೌಪದಿಯ ಕೇಶಪಾಶ ಪ್ರಪಂಚ ಮಾತ್ರವೇ ಮಹಾಭಾರತಕ್ಕೆ ಆದಿಯಾಯಿತೆ? ಎಂಬುದು. ಅದನ್ನು ಹೊರತುಪಡಿಸಿ ಮತ್ಯಾವ ಕಾರಣಗಳು ಇಲ್ಲವೆ? ಎಂದು ಪ್ರಶ್ನಿಸಿಕೊಳ್ಳುವ ಇವರು ಅದಕ್ಕೆ ಕಾರಣವಾದ ಇನ್ನೂ ಅನೇಕ ಘಟನೆಗಳನ್ನು ಹೇಳುತ್ತಾರೆ. ಸರಿಯೆ. ಅವುಗಳಲ್ಲಿ ಮುಖ್ಯವಾದವು ದುರ‍್ಯೋಧನ ಹುಟ್ಟಿದಾಗಿನ ಅಪಶಕುನ; ಭೀಮನಿಗೆ ಹಾವು ಕಚ್ಚಿಸಿದ್ದು, ವಿಷದ ಲಡ್ಡುಗೆ ತಿನ್ನಿಸಿದ್ದು; ಅರಗಿನ ಮನೆಯಲ್ಲಿ ಪಾಂಡವರನ್ನು ಸುಡಲು ಯತ್ನಿಸಿದ್ದು; ದ್ರೌಪದಿಯ ಮುಡಿಹಿಡಿದು ದುಶ್ಯಾಸನ ಸಭಾಮಧ್ಯಕ್ಕೆ ಎಳೆತಂದದ್ದು ಇತ್ಯಾದಿ.

ಇವೆಲ್ಲವೂ ಮಹಾಭಾರತಕ್ಕೆ ಆನುಷಂಗಿಕ ಕಾರಣಗಳೇ ಸರಿ. ಅಲ್ಲ ಎಂದವರಾರು? ಶ್ರೀಧರರು ಇನ್ನೂ ಕೆಲವನ್ನು ಹೆಸರಿಸಿಲ್ಲ. ಆರಂಭದಲ್ಲಿ ಪರಾಶರ ಮುನಿ ಯಮುನಾ ನಡುಗಡ್ಡೆಯಲ್ಲಿ ಮತ್ಸ್ಯಗಂಧಿಯನ್ನು ಕೂಡಿದ್ದು; ಶಂತನು ಆಮೇಲೆ ಆ ಹುಡುಗಿಯನ್ನು ಬಯಸಿದ್ದು; ಭೀಷ್ಮನ ಪ್ರತಿಜ್ಞೆ; ಚಿತ್ರವೀರ್ಯ ವಿಚಿತ್ರವೀರ್ಯರ ವಿಧವೆ ಸೊಸೆಯರಲ್ಲಿ ವ್ಯಾಸನಿಂದ ಧೃತರಾಷ್ಟ್ರ, ಪಾಂಡು ಜನಿಸಿದ್ದು; ಸಹಪಾಠಿಗಳಾದ ದ್ರುಪದ ಮತ್ತು ದ್ರೋಣರ ಬದ್ಧ ದ್ವೇಷ, ಕರ್ಣನಿಗೆ ಪರಶುರಾಮರ ಶಾಪ ಇತ್ಯಾದಿ ನೂರೆಂಟು ಪೂರಕ ಕಾರಣಗಳು ಉಂಟಲ್ಲವೆ? ಮಹಾಭಾರತ ಯುದ್ಧಕ್ಕೆ, ಕುರುಕುಲ ನಾಶಕ್ಕೆ ಈ ಎಲ್ಲವೂ ಹುರಿಗೊಂಡಿವೆ. ಆದರೆ ಅವೆಲ್ಲವೂ ಕೇವಲ ವಿದ್ಯುತ್ ಹರಿಯದ ತಾಮ್ರದ ತಂತಿ, ಅಷ್ಟೆ.

ಆದರೆ ದುಶ್ಯಾಸನನು ಅತ್ತಿಗೆಯ ಮುಡಿಗೆ ಕೈಯಿಟ್ಟದ್ದು ಮಾತ್ರ ಈ ಹುರಿಗೊಂಡ ತಾಮ್ರದ ತಂತಿಗೆ ವಿದ್ಯುತ್ ಪ್ರವಹಿಸಿದಂತಾಯಿತು. ದ್ರೌಪದಿಯ ಮುಡಿ ಕೇವಲ ಹೆಣ್ಣೊಬ್ಬಳ ಕೂದಲು ಗಂಟಲ್ಲ. ಅದು ವಿಶ್ವಾತ್ಮಕ ಎಲ್ಲ ಹೆಣ್ಣುಮಕ್ಕಳ ಮುಡಿಯ ಪ್ರತಿಮಾ ರೂಪ. ಆದ್ದರಿಂದಲೇ ಕುವೆಂಪು ಶ್ರೀಮುಡಿ ಎಂದು ಕರೆದದ್ದು. ಅದು ಕಟ್ಟಿದರೆ ಶ್ರೀಮುಡಿ; ಬಿಚ್ಚಿದರೆ ಪ್ರಳಯದ ಕಿಡಿ. (ಪದ್ಯವನ್ನು ವಿವರಿಸುವ ಮೊದಲು ಈ ಪದ್ಯದಲ್ಲಿರುವ ಒಂದು ಪಾಠ ದೋಷವನ್ನು ಗಮನಿಸಬೇಕು. ಶ್ರೀಧರ ಅವರು ತೆಗೆದುಕೊಂಡಿರುವ ಪಾಠದ ೧೨-೧೫೬ ನೇ ಪದ್ಯದ ಮೂರನೇ ಸಾಲಿನಲ್ಲಿ ಒಂದು ‘ದ’ ಅಕ್ಷರ ಲೋಪವಾಗಿದೆ. ಅದನ್ನು ಹೀಗೆ ತುಂಬಿಕೊಳ್ಳಬೇಕು. ‘ಅಗುರ್ವು+ಉರ್ವಿದುದು+ಇದುವೆ = ಅಗುರ್ವುರ್ವಿದುದಿದುವೆ’ ಎಂದಿರಬೇಕು).

ಪದ್ಯದ ಗದ್ಯಾನುವಾದ: ಈ ಮುಡಿಯಲ್ಲಿಯೆ ಬೆಳ್ಗೊಡೆಗಳು ಬೆಳಗಿನ ದಶ ದಿಕ್ಕುಗಳ ರಾಜ ಸಮೂಹವು ಕೂಡಿ ನಾಶವಾಗಿ ಹೋಯಿತು; ಇದರಲ್ಲಿಯೇ ಕುರುರಾಜ ಕುಲವು ಅಡಗಿ ಹೋಯಿತು; ಇದರಿಂದ ನನ್ನ ಪೌರುಷವು ಅತಿಶಯವೆನಿಸಿ ವೆಗ್ಗಳವಾಯಿತು; ಕಮಲನೇತ್ರೇ ದ್ರೌಪದಿಯೇ, ನೋಡು ಇದೇ ಮಹಾಭಾರತ ಯುದ್ಧಕ್ಕೆ ಆದಿಯಾಯಿತು; ಎಂದರೆ ಬೀಜವಾಯಿತು. ನಿನ್ನ ಕೇಶಪಾಶವು ಭಾವಿಸಲು ಸಾಮಾನ್ಯವೇ ಹೇಳು? (ಎನ್ನುವನು ಭೀಮ).

ವಿಶೇಷ ವಿಚಾರ: ದ್ರೌಪದಿಯ ಮುಡಿ ಸಾಮಾನ್ಯವಾದ ಮುಡಿಯಲ್ಲ; ಅದು ಶ್ರೀಮುಡಿ, ರಾಜಸೂಯ ಯಾಗ ಸಂದರ್ಭದಲ್ಲಿ ಮಂತ್ರಾಕ್ಷತೆಗಳಿಂದ, ಪುಣ್ಯ ಜಲಗಳಿಂದ ಪವಿತ್ರವಾದ ಶ್ರೀಮುಡಿ ಎನ್ನುತ್ತಾನೆ-ಕುಮಾರವ್ಯಾಸ. ಕನ್ನಡ ಸಾಹಿತ್ಯ ರಂಗದಲ್ಲಿ ದ್ರೌಪದಿಯ ಈ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾಕಲಿಗಳು; ಇನ್ನಿಬ್ಬರು ಮಹಾಕವಿಗಳು: ಭೀಮ, ದುಶ್ಯಾಸನನ; ಪಂಪ, ನಾರಾಣಪ್ಪ; ಒಬ್ಬ ಮುಡಿ ಬಿಚ್ಚಿದ ಕಲಿ, ಇನ್ನೊಬ್ಬ ಮುಡಿ ಕಟ್ಟಿದ ಕಲಿ. ಮಹಾಭಾರತವನ್ನು ದ್ರೌಪದಿಯ ಮುಡಿಬಿಚ್ಚಿ ಮುಡಿಕಟ್ಟಿದ ಪ್ರಸಂಗದ ಕಥೆಯೆಂದು ವರ್ಣಿಸಿದರೆ ಹೆಚ್ಚೇನು ಸತ್ಯ ದೂರವಾಗಲಾರದು. ಆ ಮುಡಿಕಟ್ಟಿದ ಭಯಂಕರ ಸನ್ನಿವೇಶವನ್ನು ನಮ್ಮ ಮಹಾಕವಿಗಳಿಬ್ಬರೂ ಅದ್ಭುತವಾಗಿಯೇ ವರ್ಣಿಸಿದ್ದಾರೆ. ನಾರಣಪ್ಪ ಗ್ರಾಮೀಣ ಸಹಜವಾದ ವಿಸ್ತಾರ ವಿವರ ರೀತಿಯಲ್ಲಿ; ಪಂಪ ಮಹಾಕವಿ ಹಿತಮಿತ ಕಲಾ ಕೌಶಲ ಸಹಜವಾದ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ಚತುರರೀತಿಯಲ್ಲಿ.

ಪಂಪ ಮಹಾಕವಿ ಮೇಲಿನ ಪದ್ಯದಲ್ಲಿ ಮುಡಿಕಟ್ಟಿದ ಸನ್ನಿವೇಶವನ್ನು ಕುಮಾರವ್ಯಾಸನಿಗಿಂತ ರುದ್ರ ಭಯಂಕರವಾಗಿ ಚಿತ್ರಿಸಿರುವುದು ಕಂಡು ಬರುತ್ತದೆ. ದುಶ್ಯಾನನ ಸಾವನ್ನು ಕಂಡಾಗ ದ್ರೌಪದಿಗೂ ಸಹ ತನ್ನ ಅರಣ್ಯವಾಸದ ಮತ್ತು ಅವಮಾನದ ಸಂಕಟವೆಲ್ಲ ನೀಗಿ ಅವಳೀಗ ಕೊಂಚ ಸುಖಾನುಭವ ಹೊಂದಿದ್ದಾಳೆನಿಸುತ್ತದೆ. ಪಂಪನ ಭೀಮ ಅವಳ ಬಿಚ್ಚಿದ ಮುಡಿಯನ್ನು ಶತ್ರುವಿನ ರಕ್ತತೈಲದಿಂದ ತೊಯ್ದು, ಅವನ ಹಲ್ಲ ಬಾಚಣಿಗೆಯಿಂದ ಸಿಕ್ಕುಗಟ್ಟಿದ ಆ ಕೇಶರಾಶಿಯನ್ನು ಬಾಚಿ ಆ ವಸಗೆಗೆ ಹೂ ಮುಡಿಸಿದಂತೆ ಆ ಮುಡಿಗೆ ದುಶ್ಯಾನನ ಕರುಳಹೂವನ್ನು ಮುಡಿಸುವನು. ಕುವೆಂಪು ನಿರ್ವಚಿಸಿರುವಂತೆ ‘ಅದರ ಅಸಾಮಾನ್ಯತೆ, ಅತಿಶಯತೆ, ಶಕ್ತಿ, ಪವಿತ್ರತೆ ಮಿಡಿಯುವ ‘ಇದರೊಳ್ ಶ್ವೇತಾತ ಪತ್ರ ಸ್ಥಗಿತ ದಶದಿಶಾ ಮಂಡಲಂ ರಾಜಚಕ್ರಂ’ ಎಂಬ ಮಹಾಸ್ರಗ್ಧರೆಯ ಮಹಾರುದ್ರವೀಣೆಯ ಭವ್ಯ ಧ್ವನಿಯೊಂದನ್ನು ಮೀಂಟಿದ್ದಾನೆ.’ (ನೋಡಿ: ಕುವೆಂಪು: ದ್ರೌಪದಿಯ ಶ್ರೀಮುಡಿ)

ದ್ರೌಪದಿಯ ಶ್ರೀಮುಡಿ ಮಹಿಮೆ ಇಂತಿರುವುದರಿಂದಲೇ ಕವಿ ಅದನ್ನು ಕುರುಕ್ಷೇತ್ರ ರಣರಂಗದ ಮಧ್ಯ ಬಿಂದುವಿಗೆ ತಂದು ಆ ಕೇಶಾಗ್ನಿ ಶಮನಕ್ಕೆ ಕುರುಕುಲದ ರಕ್ತದ ಹೊಳೆಹರಿಸಿದ್ದಾನೆ. ದುಶ್ಯಾಸನನ ಎದೆಬಗೆದು ಆ ಬಿಸಿ ನೆತ್ತರನ್ನು ಅವಳ ನೆತ್ತಿಗೆ ಸುರಿದು ಅವನ ದಂತ ಬಾಚಣಿಕೆಯಿಂದ ಬಾಚಿ ಆ ಮುಡಿ ಕಟ್ಟಿದ ಭೀಮಸೇನನು ಮಹಾಸ್ರಗ್ಧರೆಯ ಮಹಾಛಂದಸ್ಸಿನ ಎಂದೂ ಬಾಡದ ರಕ್ತಾಕ್ಷರದ ಪುಷ್ಪಾಲಂಕಾರ ಮಾಡುತ್ತಾನೆ. ಅತ್ಯಾಚಾರಿ ಪುರುಷ ವರ್ಗಕ್ಕೆ ನಾಡೋಜ ನೀಡಿರುವ ‘ಅಪರಾಧ ಮತ್ತು ಶಿಕ್ಷೆಯ’ ಸ್ವರೂಪ ಇದು. ಇಂಥ ಹಿಮಾಲಯೋಪಮ ಶ್ರೀಮುಡಿಯ ಪರಿಕಲ್ಪನೆಯನ್ನು ಎಟಕಿಸಿಕೊಳ್ಳಲಾರದ ಶ್ರೀಧರ ಅವರು ‘ಈ ಪದ್ಯ ದ್ರೌಪದಿಯ ಮುಡಿಗೆ ಹೊರೆಯಾಯಿತಲ್ಲವೆ? ಅವಳಿಗೆ ಇಷ್ಟೊಂದು ಭಾರಹೊರೆಸಬೇಕಿತ್ತೆ? ಮುಂತಾಗಿ ಹೆಂಗರುಳಿನಿಂದ ಕೊರಗುವುದು ಕೇವಲ ಕಲ್ಪನಾ ದಾರಿದ್ರ್ಯವಲ್ಲದೆ ಬೇರೆಯಲ್ಲ.

ಶ್ರೀಧರ ಎತ್ತಿರುವ ಇನ್ನೊಂದು ಅನುಮಾನ. ವ್ಯಾಸನಾಗಲೀ ಕುಮಾರ ವ್ಯಾಸನಾಗಲೀ ಮಹಾಭಾರತಕ್ಕೆ ದ್ರೌಪದಿಯ ಮುಡಿಯೇ ಕಾರಣವಾಯಿತು ಎಂದು ಹೇಳಿಲ್ಲವಲ್ಲ ಎಂಬುದು. ಈ ಕುರಿತು ಪ್ರತಿಕ್ರಿಯಿಸುವುದೇ ಅನುಚಿತ. ಯಾಕೆಂದರೆ ಪಂಪನು ಕುಮಾರವ್ಯಾಸನಂತೆ ಅಕ್ಷಯ ವಸ್ತ್ರ ಪ್ರದಾನ ಮಾಡಿಸಿ, ವಿಶ್ವರೂಪ ಪ್ರದರ್ಶನ ಮಾಡಿಸಿ ಶ್ರೀಕೃಷ್ಣನ ಭಜನೆಗೆ ಕಾವ್ಯ ಬರೆದ ಕವಿಯಲ್ಲ. ಯಾಕೆಂದರೆ ಅವನ ಕಾವ್ಯದ ಲೌಕಿಕ ಉದ್ದೇಶ ತೀರ ಸ್ಪಷ್ಟವಾಗಿಯೇ ಇದೆ.

‘ಸಮಸ್ತ ಭಾರತ ಕಥಾಪ್ರಬಂಧವನ್ನು ವಿಶೇಷವಾಗಿ ಪ್ರೀತಿಸಿ ಪಠಿಸುವುದಕ್ಕೆ ಬರೆಯುವುದಕ್ಕೆ ಕೇಳುವುದಕ್ಕೆ ತೊಡಗಿದವರಿಗೆ ತನ್ನ ಇಷ್ಟಾರ್ಥವು ಕೈಗೊಡುತ್ತಿರಲು ಧೈರ್ಯವೂ ತೃಪ್ತಿಯೂ ಬಲವೂ ವಿಭವವೂ ಸೌಭಾಗ್ಯವೂ ಮೆಚ್ಚಿಗೆಯ ಸ್ತ್ರೀಯ ಸಂಭೋಗವೂ ಶಾಂತಿಯೂ ಏಳಿಗೆ ಹೊಂದಿ ಶುಭವೂ ಮಂಗಳವೂ ಆಗುತ್ತದೆ’ ಯಂತೆ.

ಕೊನೆಯ ಮಾತು

ವಿಚಾರ ಮಾಡಿ ನೋಡಿದರೆ ಪಂಪ ಎಲ್ಲ ಕಾಲಕ್ಕೂ ಸಲ್ಲುವ ಕವಿ. ದುರ್ಯೋಧನನ ಸಭಾ ಮಧ್ಯಕ್ಕೆ ಪಾಂಡವರ ಪತ್ನಿಯನ್ನು ಜುಟ್ಟು ಹಿಡಿದು ಎಳೆದು ತಂದ ದುಶ್ಯಾಸನ ಅವಳ ವಸ್ತ್ರಾಪಹರಣ ಮಾಡದೆ ಕೇವಲ ‘ಉಟ್ಟುದುವರಂ ಕೆಯ್ದಂದು (೭.೫) ಸುಮ್ಮನೆ ನಿಂತನೇಕೆ? ಏಕೆಂದರೆ, ತುಂಬಿದ ರಾಜಸಭೆಯಲ್ಲಿ ಹೆಣ್ಣೊಬ್ಬಳನ್ನು ‘ನಿರ್ವಾಣ ನಿಲ್ಲಿಸಲು’ ಪಂಪನ ಸುಸಂಸ್ಕೃತ ಮನಸ್ಸು ಒಪ್ಪಲಿಲ್ಲ. ಆಧುನಿಕ ಸ್ತ್ರೀವಾದಿ ವಿಮರ್ಶಕರು ಇದನ್ನು ಗುರ್ತಿಸಿದ್ದಾರೆಯೇ? ಪಂಪ ಕೇವಲ ಆಸ್ಥಾನ ಕವಿಯಲ್ಲ. ಲೋಕೋತ್ತರ ಕವಿ, ನಾಡೋಜ ಕವಿ.

ಆದ್ದರಿಂದ ಹಳಗನ್ನಡ ಕೃತಿಗಳ ಓದಿಗೆ ತೆರೆದುಕೊಳ್ಳುವ ಹೊಸ ಪೀಳಿಗೆಯ ಬರಹಗಾರರು ಅವಸರವಸರವಾಗಿ ಸ್ತ್ರೀವಾದಿ, ಪುರುಷವಾದಿ, ಮನುವಾದಿ ಮುಂತಾಗಿ ಪೂರ್ವಗ್ರಹ ಪೀಡಿತರಾಗಿ ಮಾತನಾಡದೆ ಸಂಯಮದಿಂದ ಧ್ಯಾನಿಸಿ ಅನುಸಂಧಾನ ಮಾಡಿ ಸಮೀಕ್ಷೆಗೆ ತೊಡಗಬೇಕು. ‘ಹಿಂದಣ ಹೆಜ್ಜೆಯನರಿದಲ್ಲದೆ ಮುಂದಣ ಹೆಜ್ಜೆಯನಿಡಲುಬಾರದು’. ಪಂಪನ ಕೃತಿಗಳ ಅನುಸಂಧಾನ ಮಾಡುವವರು ಪೂರ್ವಸೂರಿಗಳ ವಿಮರ್ಶಾ ರೀತಿ ರಿವಾಜುಗಳನ್ನು ಬಲ್ಲವರಾಗಿರಬೇಕು. ಈ ನಿಟ್ಟಿನಲ್ಲಿ ಮುಳಿಯವರ ನಾಡೋಜ ಪಂಪ: ಕುವೆಂಪು ಅವರ ತಪೋನಂದನ, ದ್ರೌಪದಿಯ ಶ್ರೀಮುಡಿ; ಪ್ರೊ.ಎಲ್.ಬಸವರಾಜು ಅವರು ಸಂಪಾದಿತ ಆದಿಪುರಾಣ, ವಿಕ್ರಮಾರ್ಜುನವಿಜಯ ಹಾಗೂ ಜಿ.ಎಸ್.ಎಸ್. ಸಂಪಾದಕತ್ವದ ‘ಪಂಪ: ಒಂದು ಅಧ್ಯಯನ’ (ಬೆಂ.ವಿ.ವಿ) ಮುಂತಾದ ಕೃತಿಗಳನ್ನು ಅಭ್ಯಾಸ ಮಾಡುವುದು ಉತ್ತಮ. ಜತೆಗೆ ಇತ್ತೀಚೆಗೆ ಬಂದ ದೇವದತ್ತ ಪಟ್ಟನಾಯಕರ (ಅನು: ಗಿರಡ್ಡಿ ಗೋವಿಂದರಾಜ) ‘ಜಯಭಾರತ’ವನ್ನೂ ಅವಲೋಕಿಸಬಹುದು.

 

Leave a Reply

Your email address will not be published.