ಪಂಪನ ಪದ್ಯವೊಂದರ ಪುನರ್ ವಿಮರ್ಶೆ: ಸತ್ಯವತಿಯೆಂಬ ಕುಶಲಮತಿ

ಓದುಗರು ಧರಿಸಿರುವ ಭಾವಗಳೇ ಪದ್ಯದ ಅರ್ಥವಾಗಿ ತೋರುವ ವಿಶಿಷ್ಟ ಪದ್ಯ ಇದು. ನೀವು ಕ್ರೋಧರಾಗಿ, ಈ ಪದ್ಯವನ್ನು ನೋಡಿರಿ. ಅದು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನವನ್ನು, ಒಂಟಿ ಹೆಣ್ಣಿನ ಮೇಲಿನ ಗಂಡಿನ ದಾಷ್ಟ್ರ್ಯವನ್ನು ಕಂಡು ಅಸಹ್ಯವನ್ನೂ, ಕೋಪವನ್ನು ಪ್ರಕಟಿಸುವಂತೆ, ದಿಟ್ಟ ಹೆಣ್ಣೊಬ್ಬಳ ಪ್ರತಿಭಟನೆಯ ಸಾಂಕೇತಿಕ ಪದ್ಯವಾಗಿ ಕಾಣುತ್ತದೆ.

ಸಾಹಿತ್ಯ ಪಠ್ಯವೊಂದು ತನ್ನ ಅರ್ಥವನ್ನು ದೇಶ-ಕಾಲಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಲೇ ವರ್ತಮಾನಕ್ಕೆ ಮುಖಾಮುಖಿಯಾಗುತ್ತದೆ. ಪಂಪ ಹತ್ತನೇ ಶತಮಾನದಲ್ಲಿ ಆಗಿಹೋದ ಕವಿಯಾದರೂ ಆತನ ಅಭ್ಯಾಸದ ಅವಶ್ಯಕತೆ ಇಂದಿಗೂ ಇದೆ. ಈತನ ಎರಡನೇ ಕೃತಿಯಾದ ‘ಪಂಪ ಭಾರತಂ’ (ವಿಕ್ರಮಾರ್ಜುನ ವಿಜಯಂ) ಇಂದಿಗೂ ತನ್ನ ಸಾಧ್ಯತೆಗಳನ್ನು ಹಿಗ್ಗಿಸಿಕೊಳ್ಳುತ್ತಲೇ ಸಾಗಿ ಬಂದಿರುವ ಕೃತಿ.

ಪಂಪನ ಈ ಕಾವ್ಯದ ಪದ್ಯಗಳ ಕುರಿತು ಅನೇಕ ಕನ್ನಡದ ಮನಸ್ಸುಗಳು ಪ್ರತಿಕ್ರಿಯಿಸಿವೆ. ಆ ಸಾಲಿನಲ್ಲಿ ಡಿ.ಎಲ್.ಎನ್, ಸಿ.ಪಿ.ಕೆ, ಪೂರ್ಣಚಂದ್ರ ತೇಜಸ್ವಿ, ಎನ್.ಅನಂತರಂಗಾಚಾರ್, ಜಿ.ಹೆಚ್.ನಾಯಕ, ಮೊದಲಾದವರು ಪಂಪನು ತನ್ನ ಅಪಾರ ಪ್ರತಿಭಾ ಶಕ್ತಿಯಿಂದ ಕಟ್ಟಿರುವ ‘ಮೃಗಯಾವ್ಯಾಜದಿನೊರ್ಮೆ’ ಎಂಬ ವಿಶಿಷ್ಟ ಪದ್ಯವನ್ನು ಹೊಸ ಓದಿನ ಮೂಲಕ ಚರ್ಚಿಸಿದ್ದಾರೆ. ಪ್ರತಿ ಓದಿಗೂ ಪಂಪ ತನ್ನನ್ನು ತಾನು ವಿಸ್ತರಿಸಿಕೊಳ್ಳುವ ಅಚ್ಚರಿಯನ್ನು ತಮ್ಮ ಒಳನೋಟಗಳ ಮುಖೇನ ಕಟ್ಟಿಕೊಟ್ಟಿದ್ದಾರೆ.

ಇದುವರೆಗೆ ಈ ಪದ್ಯವನ್ನು ಕುರಿತು ಬಂದಿರುವ ಬರಹಗಳು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನಕ್ಕೆ ಅಸಹ್ಯ ಪಟ್ಟುಕೊಂಡಿರುವಂತೆ, ಪಂಪನು ಈ ಪದ್ಯದಲ್ಲಿ ಬಳಸಿರುವ ಪಳಂಚಲ್ಕೆ ಮಧುಪಂಬೋಲ್, ದಿಬ್ಯಂ, ನಾಣ್ಚಿ ಮೊದಲಾದ ಪದಗಳ ಅರ್ಥವನ್ನು, ಭಾಷಾ ಪ್ರಯೋಗದ ಕಲಾಭಿಜ್ಞತೆಯನ್ನು ಕುರಿತು ಇದುವರೆಗೆ ಚರ್ಚಿಸಲಾಗಿದೆ. ಪ್ರಸ್ತುತ ಲೇಖನವು ಯೋಜನಾಗಂಧಿಯು ತನಗೆ ಎದುರಾದ ವಿಷಮ ಸನ್ನಿವೇಶವನ್ನು ನಿಭಾಯಿಸಿಲು ಬಳಸಿದ ಚತುರತೆಯ ಮೂಲಕ ‘ಮೃಗಯಾವ್ಯಾಜದಿನೊರ್ಮೆ’ ಪದ್ಯವನ್ನು ಮರು ಓದಿಗೆ ಒಳಪಡಿಸುವ ಪ್ರಯತ್ನ ಮಾಡುತ್ತದೆ.

ಓದುಗರು ಧರಿಸಿರುವ ಭಾವಗಳೇ ಪದ್ಯದ ಅರ್ಥವಾಗಿ ತೋರುವ ವಿಶಿಷ್ಟ ಪದ್ಯ ಇದು. ನೀವು ಕ್ರೋಧರಾಗಿ, ಈ ಪದ್ಯವನ್ನು ನೋಡಿರಿ. ಅದು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನವನ್ನು, ಒಂಟಿ ಹೆಣ್ಣಿನ ಮೇಲಿನ ಗಂಡಿನ ದಾಷ್ಟ್ರ್ಯವನ್ನು ಕಂಡು ಅಸಹ್ಯವನ್ನೂ, ಕೋಪವನ್ನು ಪ್ರಕಟಿಸುವಂತೆ, ದಿಟ್ಟ ಹೆಣ್ಣೊಬ್ಬಳ ಪ್ರತಿಭಟನೆಯ ಸಾಂಕೇತಿಕ ಪದ್ಯವಾಗಿ ಕಾಣುತ್ತದೆ. ಪ್ರೇಮಿಗಳಾಗಿ ಎದುರಾಗುವ ಶಂತನು-ಸತ್ಯವತಿ ಪರಸ್ಪರರ ನೋಟ ಒಂದಕ್ಕೇ ಸೋತು ಹೋಗಿ ವಿವಾಹಕ್ಕೆ ತುದಿಗಾಲಲ್ಲಿ ಒಪ್ಪಿ ನಿಲ್ಲುವ, ವಿರಹದ ಬೇಗೆಯಲ್ಲಿ ಬೆಂದು ಕೊನೆಗೂ ಅದಮ್ಯ ಪ್ರೇಮ ಗೆದ್ದುನಿಲ್ಲುವ ಸನ್ನಿವೇಶವು ಪ್ರಣಯಿಗಳಿಗಲ್ಲದೆ ಇತರರ ಓದಿಗೆ ದಕ್ಕದು.

ಆ ಪದ್ಯ ಇಂತಿದೆ:
ಮೃಗಯಾವ್ಯಾಜದಿನೊರ್ಮೆ ಶಂತನು ತೊಳಲ್ತರ್ಪಂ ಪಳಂಚಲ್ಕೆ ತ|
ನ್ಮ್ರ್ಗಶಾಬಾಕ್ಷಿಯ ಕಂಪುತಟ್ಟಿ ಮಧುಪಂಬೋಲ್ ಸೋಲ್ತು ಕಂಡೊಲ್ದು ನ||
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀಂ ಬಾ ಪೋಪಮೆಂದಂಗೆ ಮೆ|
ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ||
(ವಿಕ್ರಮಾರ್ಜುನ ವಿಜಯ, ಆಶ್ವಾಸ-1, ಪದ್ಯ-70)

ಡಿ.ಎಲ್.ಎನ್. ನೀಡಿರುವ ಪದಾರ್ಥ ವಿವರಣೆ ಹೀಗಿದೆ- “ಒರ್ಮೆ-ಒಂದು ಸಲ, ಶಂತನು, ಮೃಗಯಾ ವ್ಯಾಜದಿಂ-ಬೇಟೆಯ ನೆಪದಿಂದ, ತೊಳಲ್ತರ್ಪಂ-ಸುತ್ತಾಡಿ ಬರುತ್ತಿರುವನು, ಮೃಗಶಾಬಾಕ್ಷಿಯ-ಮರಿ ಜಿಂಕೆಯ ಕಣ್ಣಿನಂತೆ ಕಣ್ಣುಳ್ಳ ಯೋಜನ ಗಂಧಿಯ, ಕಂಪುತಟ್ಟಿ-ಸುಗಂಧವು ಅಪ್ಪಳಿಸಲು, ಮಧುಪಂಬೋಲ್-ದುಂಬಿಯಹಾಗೆ, ಸೋಲ್ತು-ಸೋತುಹೋಗಿ, ಪ್ರೀತಿಸಿ, ಕಂಡು, ಒಲ್ದು-ರಾಗಿಸಿ, ನಲ್ಮೆಗೆ ದಿಬ್ಯಂಬಿಡಿವಂತೆವೋಲ್-ಪ್ರೀತಿಯನ್ನು ಪ್ರಮಾಣಿಸುವುದಕ್ಕೆ ದಿವ್ಯವನ್ನು ಹಿಡಿಯುವಂತೆ, ಪಿಡಿದು-ಅವಳ ಕೈಯನ್ನು ಹಿಡಿದುಕೊಂಡು, ನೀಂ ಬಾ ಪೋಪಂ-ನೀನು ಬಾ ಹೋಗೋಣ, ಎಂದಂಗೆ-ಎಂದು ಹೇಳಿದವನಿಗೆ, ಮೆಲ್ಲಗೆ-ಮೃದುವಾಗಿ, ತತ್ಕನ್ಯಕೆ-ಆ ಕನ್ಯೆ, ನಾಣ್ಚಿ-ನಾಚಿ, ನೀಂ ಬೇಡುವೊಡೆ-ನೀವು ನನ್ನನ್ನು ಬಯಸುವ ಪಕ್ಷದಲ್ಲಿ, ಎಮ್ಮಯ್ಯನಂ-ನಮ್ಮ ತಂದೆಯನ್ನು, ಬೇಡಿರೇ-ಕೇಳಿರಿ, ಪ್ರಾರ್ಥಿಸಿಕೊಳ್ಳಿರಿ, ಯಾಚಿಸಿರಿ”.

‘ಪಂಪ ಒಂದು ಮೌಲ್ಯ ವಿವರಣೆ’ ಎನ್ನುವ ಲೇಖನದಲ್ಲಿ ಪೂ.ಚಂ.ತೇ. ಈ ಪದ್ಯಕ್ಕೆ ನೀಡಿರುವ ವಿವರಣೆ ಹೀಗಿದೆ: “ಒಂದು ದಿನ ಬೇಟೆಯ ನೆವದಿಂದ ಸುತ್ತಾಡಿ ಬರುತ್ತಿದ್ದ ಶಂತನು ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ ಯೋಜನಾ ಗಂಧಿಯ ವಾಸನೆಯು ಅವನನ್ನು ಮುಟ್ಟಲಾಗಿ (ಅದರಿಂದ ಆಕರ್ಷಿತನಾಗಿ) ದುಂಬಿಯ ಹಾಗೆ ಸೋತು ಹೋಗಿ ಅವಳನ್ನು ಪ್ರೀತಿಸಿದನು. ತನ್ನ ಪ್ರೀತಿಗೆ ಸಾಕ್ಷಿಯಾಗಿ ದಿವ್ಯವನ್ನು ಹಿಡಿಯುವ ಹಾಗೆ ಅವಳ ಕೈ ಹಿಡಿದು ನೀ ಬಾ ಹೋಗೋಣ ಎನ್ನಲು ಆ ಕನ್ಯೆಯು ನಾಚಿಕೊಂಡು ಮೆಲ್ಲಗೆ ನೀವು ನನ್ನನು ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ ಎಂದಳು.”

ಇದೊಂದು ಕಥನ ಕ್ರಮದಲ್ಲಿ ನಿರೂಪಿತವಾಗಿರುವ ಪದ್ಯ. ಮುಂದೆ ನಡೆಯಲಿರುವ ಮಹಾಭಾರತಕ್ಕೆ ಆದಿಯಾಗಲಿರುವ ಮತ್ತು ತನ್ನ ಕಾವ್ಯವನ್ನು ಬೆಳೆಸಲಿರುವ ಅನನ್ಯ ಸನ್ನಿವೇಶವನ್ನು ಕಟ್ಟುತ್ತಿರುವ ಪಂಪ ಈ ಪದ್ಯವನ್ನು ಆರಂಭಿಸುತ್ತಿರುವುದು ‘ಒಂದಾನೊಂದು ಕಾಲದಲ್ಲಿ’ ಎಂಬಂತಹ ಶ್ರವಣ ಕಥೆಗಳ ಆರಂಭದಂತೆ. ಏಕೆಂದರೆ ಈ ಪದ್ಯವು ಒಂದು ಬೃಹತ್ ಕಥಾನಕವನ್ನೇ ಆರಂಭಿಸುತ್ತಿದೆ. ಭೀಷ್ಮನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟನೆಗಳು ಶುರುವಾಗುವುದು ಈ ಪದ್ಯದಿಂದಲೇ. ಒಂದು ರೀತಿಯಲ್ಲಿ ಮಹಾಭಾರತಕ್ಕೆ ಹೊಸ ಚಲನೆ ತಂದುಕೊಡುವ ಸನ್ನಿವೇಶವೊಂದು ನಿರ್ಮಾಣವಾಗುತ್ತಿರುವುದು ಇಲ್ಲೇ.

ಒಮ್ಮೆ ಬೇಟೆಯಾಡಲು ಹೋಗಿದ್ದ ಶಂತನುವಿಗೆ ಸುಗಂಧದ ವಾಸನೆ ಬಡಿಯುತ್ತದೆ, ಅದನ್ನು ಅರಸಿ ಹೋದವನು ರೂಪವತಿಯಾದ ಸತ್ಯವತಿಯನ್ನು ಕಾಣುತ್ತಾನೆ ಎಂಬಲ್ಲಿಂದ ಮುಂದಕ್ಕೆ ಇಡೀ ಪದ್ಯ ಸಂಕೀರ್ಣಗೊಳ್ಳುತ್ತಾ ಸಾಗುತ್ತದೆ. ‘ನಲ್ಮೆಗೆ ದಿಬ್ಯಂಬಿಡಿವಂತೆ ವೋಲ್ ಪಿಡಿದು’ ಎಂಬ ಸಾಲನ್ನು ಗಮನಿಸಿ, ಸತ್ಯವತಿಯನ್ನು ಕಂಡು ಮೋಹಿಸಿ ಧಾವಂತದಿಂದ ಬಂದ ಶಂತನು ಅವಳನ್ನು ಹಿಡಿದು “ನೀನು ಬಾ ಹೋಗೋಣ” ಎನ್ನುತ್ತಾನೆ. (ಅವನು ಏನನ್ನು ಹಿಡಿದ ಎಂಬುದನ್ನು ಪದ್ಯವು ಹೇಳುವುದಿಲ್ಲ. ಸಿ.ಪಿ.ಕೆ.- ತಬ್ಬಿ ಹಿಡಿದು, ಅನಂತರಂಗಾಚಾರ್- ಕೈಯನ್ನು ಹಿಡಿದು) ಈಗ ಶಂತನುವಿನಲ್ಲಿರುವುದು ಯಾವ ತರಹದ ಪ್ರೀತಿ? ಒಂದು ಹೆಣ್ಣಿನ ಮೇಲೆ ಉಂಟಾಗುವ ಅನುರಾಗವನ್ನು ಪ್ರಮಾಣೀಕರಿಸಲು ಅವಳ ಕೈಯನ್ನೋ, ಮೈಯನ್ನೋ ಹಿಡಿದೇ ದಿವ್ಯ ಮಾಡಬೇಕೆ? ಹಿಡಿದ ತಕ್ಷಣದಲ್ಲಿಯೇ ಆತುರದಲ್ಲಿ ‘ನೀಂ ಬಾ ಪೋಪಂ’ ಎಂದದ್ದು ಯಾವ ಸುಖ ಪಡೆಯಲಿಕ್ಕಾಗಿ? ಇಷ್ಟೆಲ್ಲಾ ಪ್ರಶ್ನೆಗಳನ್ನು ಓದುಗನಲ್ಲಿ ಮೂಡಿಸುತ್ತದೆ ಈ ಪದ್ಯ.

ಕೈ ಹಿಡಿದು ಅಥವಾ ತಬ್ಬಿ ಹಿಡಿದು ಎಲ್ಲಿಗೋ ಕರೆಯುತ್ತಿರುವ ಈತನ ಆತುರ ಮತ್ತು ಆಕ್ರಮಣಶೀಲತೆಯನ್ನು ಕಂಡು ಹೊಳೆಯ ದಂಡೆಯಲ್ಲಿ ಒಂಟಿಯಾಗಿ ನಿಂತಿದ್ದ ಸತ್ಯವತಿ ಭೀತಿಗೊಂಡಿದ್ದಾಳೆ. ಇಲ್ಲಿ ವ್ಯಕ್ತವಾಗಿರುವ ಸತ್ಯವತಿಯ ಜಾಣತನವ ನೋಡಿ, ಅವಳನ್ನು ಕಂಡು ಮೋಹಿಸಿ ಧಾವಂತದಿಂದ ಬಂದ ರಾಜ ಪೋಷಾಕಿನ ವ್ಯಕ್ತಿಯೊಬ್ಬ ಆಕೆಯನ್ನು ಹಿಡಿದು ಎಲ್ಲಿಗೋ ಕರೆಯುತ್ತಿದ್ದಾನೆ. ಕ್ಷಣದಲ್ಲಿಯೇ ಆಕೆಯ ಬುದ್ಧಿಯು, ‘ನಾನೋ ಒಂಟಿಹೆಣ್ಣು, ಇವನೋ ಬಲಾಢ್ಯ, ನೋಡಲು ಯೋಧನೋ, ಅರಸನೋ ಇರುವಂತಿದ್ದಾನೆ. ಇವನಿಗೆ ಪ್ರತಿರೋಧ ತೋರಿದರೆ ನನ್ನನು ಬಲಾತ್ಕಾರವಾಗಿ ಹೊತ್ತಯ್ಯಬಹುದು’ ಎಂದು ಆಲೋಚಿಸಿದೆ.

ಈ ‘ಒಪ್ಪಿರುವ ನಾಚಿಕೆ’ಯ ಮೂಲಕ ತೀವ್ರವಾಗಿದ್ದ ಶಂತನುವಿನ ಹಿಡಿತದಿಂದ ತಕ್ಷಣಕ್ಕೆ ಜಾರಿಕೊಂಡಿದ್ದಾಳೆ. ಹಾಗೆ ನಟಿಸಿದ ಜಾಣೆ “ಎಮ್ಮಯ್ಯನಂ ಬೇಡಿರೇ” ಎಂದು ತನಗೆ ಬಂದ ಆಪತ್ತನು ತನ್ನ ತಂದೆಯ ಹೆಗಲಿಗೆ ವರ್ಗಾಯಿಸುವ ಮೂಲಕ ತಾನು ಕರೆದವರ ಹಿಂದೆ ಬರುವವಳಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ತಿಳಿಸುತ್ತಿದ್ದಾಳೆ.

ಏಕೆಂದರೆ ಸತ್ಯವತಿ ಈಗಾಗಲೇ ಬದುಕಿನ ಪಾಠ ಕಲಿತ ಕುಶಲಮತಿ. ಅದಕ್ಕೆಂದೇ ಆಕೆ ‘ಮೆಲ್ಲಗೆ ನಾಂಣಿ’್ಚ ತಂದೆಯನ್ನು ಬೇಡು ಎನ್ನುತ್ತಾಳೆ (ಇಲ್ಲಿನ ‘ಮೆಲ್ಲಗೆ’ ಎನ್ನುವ ಪದವು ಜಾಣತನ, ಜಾಗೃತಿ, ಸೂಕ್ಷ್ಮ, ನಾಜೂಕು, ಜೋಪಾನ ಎಂಬರ್ಥದಲ್ಲಿ ಇಂದಿಗೂ ಸಹಜವಾಗಿ ಬಳಕೆಯಾಗುತ್ತಿದೆ). ಯಾವುದೇ ಅಪಾಯಕಾರಿ ವಸ್ತುವಿನೊಂದಿಗೆ ವ್ಯವಹರಿಸುವಾಗ ನಿಧಾನವಾಗಿರುವುದೇ ಜಾಣತನ. ಇಲ್ಲಿ ಶಂತನುವಿನ ಪ್ರಭುತ್ವವೇ ಅವಳಿಗೊದಗಿರುವ ಅಪಾಯ.

ಆತುರದಿಂದ ಬಂದ ಶಂತನು ಕಣ್ಣಲ್ಲಿ ಯಾವ್ಯಾವುದೋ ಭಾವವನ್ನು ಪ್ರಕಟಿಸುತ್ತಾ “ನೀ ಬಾ ಪೋಪಂ” ಎಂದಾಗ ಅವನ ಆವೇಗಕ್ಕೆ ಹೆದರಿದ ಸತ್ಯವತಿಯು ಜಾಣತನದಿಂದ ಶಂತನುವಿನ ಮಾತಿಗೆ ತನ್ನ ಸಮ್ಮತಿ ಇರುವಂತೆ ‘ನಾಣ್ಚಿ’ದ್ದಾಳೆ. ನೀವು ಬಯಸುವುದಾದರೆ ನನ್ನಭ್ಯಂತರವಿಲ್ಲ, ನನ್ನ ತಂದೆಯ ಒಪ್ಪಿಗೆ ಪಡೆಯಿರೆಂದು ನಟಿಸಿದ್ದಾಳೆ. ಈ ‘ಒಪ್ಪಿರುವ ನಾಚಿಕೆ’ಯ ಮೂಲಕ ತೀವ್ರವಾಗಿದ್ದ ಶಂತನುವಿನ ಹಿಡಿತದಿಂದ ತಕ್ಷಣಕ್ಕೆ ಜಾರಿಕೊಂಡಿದ್ದಾಳೆ. ಹಾಗೆ ನಟಿಸಿದ ಜಾಣೆ “ಎಮ್ಮಯ್ಯನಂ ಬೇಡಿರೇ” ಎಂದು ತನಗೆ ಬಂದ ಆಪತ್ತನು ತನ್ನ ತಂದೆಯ ಹೆಗಲಿಗೆ ವರ್ಗಾಯಿಸುವ ಮೂಲಕ ತಾನು ಕರೆದವರ ಹಿಂದೆ ಬರುವವಳಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ತಿಳಿಸುತ್ತಿದ್ದಾಳೆ.

ಈ ಉಪಾಯವನ್ನು ಬಿಟ್ಟು ಸತ್ಯವತಿಯು ಕೋಪದಿಂದ, “ನಮ್ಮಪ್ಪನ ಕೇಳು ಹೋಗು” ಎಂದಿದ್ದರೆ ಶಂತನು ಸಹ ಕೋಪಗೊಂಡು ಅವಳನ್ನು ಎಲ್ಲಿಗಾದರೂ ಎಳೆದೊಯ್ಯುವ, ಹೊತ್ತೊಯ್ಯುವ ಕೆಲಸ ನಡೆಯಬಹುದೆಂಬುದನ್ನು ಯೋಚಿಸಿದ್ದಾಳೆ. ಶಂತನನ್ನು ನಿಂತಲ್ಲೇ ತಿರಸ್ಕರಿಸಿದರೆ, ಅಪಮಾನಿಸಿದರೆ ಎದುರಾಗುವ ಸಾವಾಲುಗಳು ಅವಳ ಕಣ್ಮುಂದೆ ಬಂದು ಎಚ್ಚರಿಸಿವೆ. ಹಾಗಾಗಿ ಶಂತನುವಿನ ಮಾತಿಗೆ ನಾಚಿದಂತೆ ನಟಿಸಿ ಕಪಟ ಒಲುಮೆಯನ್ನು ಪ್ರದರ್ಶಸಿ ಜಾಣತನದಿಂದ ಹಿರಿಯನೂ ಅನುಭವಿಯೂ ಆದ ದಾಶರಾಜನ ಹೆಗಲಿಗೆ ಆ ವಿಷಯ ನಿರ್ವಹಣೆಯ ಜವಾಬ್ದಾರಿಯನ್ನು ವರ್ಗಾಯಿಸಿದ್ದಾಳೆ.

ಪರಾಶರನಂಥಾ ಪರಾಶರನೇ ನನ್ನನ್ನು ಮೋಹಿಸಿ ಅವನ ಆಸೆಯನ್ನು ಪೂರೈಸಿಕೊಂಡಿದ್ದನ್ನು ನೆನೆದು ತನಗೆ ತಾನೆ ಮುಮ್ಮಲ ಮರುಗಿದ್ದಾಳೆ.

‘ನೀವು ಬಯಸುವುದಾದರೆ ನನ್ನ ತಂದೆಯನ್ನು ಕೇಳಿರಿ’ ಎನ್ನುವ ಯೋಜನಾಗಂಧಿಯು ಶಂತನೊಂದಿಗೆ ನಿಜಕ್ಕೂ ಆಕರ್ಷಣೆಗೆ ಒಳಗಾಗಿರಬಹುದು. ನಾಚಿರುವುದು ಸತ್ಯವೇ ಇರಬಹುದು. ಆದರೆ ಅದರ ಹಿಂದೆ ಇರಬಹುದಾದ ದೂರದರ್ಶಿತ್ವ ಬುದ್ಧಿಮತ್ತೆಯದ್ದು. ಅವಳು ಶಂತನುವಿನ ನಡಾವಳಿಯ ಅಸಹ್ಯಕ್ಕೆ ನಾಚಿದ್ದರೆ ಥೂ.. ಎನ್ನುತ್ತಿದ್ದಳೇ ಹೊರತು ‘ನಮ್ಮಪ್ಪನ ಕೇಳಿರಿ’ ಎಂದಲ್ಲ. ಯಾವುದೇ ಹೆಣ್ಣು ತನಗೆ ಇಷ್ಟವಾಗದೇ ಇರುವವನನ್ನು ತಂದೆಗೆ ಹೇಳುತ್ತೇನೆಂದು ಹೆದರಿಸುವವಳೇ ಹೊರತು ತಂದೆಯ ಒಪ್ಪಿಗೆ ಪಡಿ ನಾ ನಿನ್ನೊಂದಿಗೆ ಬರುತ್ತೇನೆ ಎಂದು ಹೇಳಳು. ಈಕೆ ಜಾಣತನ ಮೆರೆದಿದ್ದಳೆಯೇ ಹೊರತು ಶಂತನ ಗುಣಕ್ಕೆ ಅಸಹ್ಯ ಪಟ್ಟುಕೊಂಡಿಲ್ಲ. ಅವನ ‘ಆ’ವೇಗಕ್ಕೆ ಹೆದರಿದ್ದಾಳೆ.

ನನ್ನ ಬಾಳು ಮತ್ತೊಮ್ಮೆ ಹಿಂದಿನಂತೆ ಆಗಬಹುದು ಎಂಬ ಭೀತಿ ಸತ್ಯವತಿಗಿದೆ. ಪರಾಶರನಂಥಾ ಪರಾಶರನೇ ನನ್ನನ್ನು ಮೋಹಿಸಿ ಅವನ ಆಸೆಯನ್ನು ಪೂರೈಸಿಕೊಂಡಿದ್ದನ್ನು ನೆನೆದು ತನಗೆ ತಾನೆ ಮುಮ್ಮಲ ಮರುಗಿದ್ದಾಳೆ. ನನಗೆ ಬೇಕಿರುವುದು ಗಂಡನೇ ಹೊರತು ಗಂಡು ಅಲ್ಲ ಎಂಬ ನಿಲುವಿಗೆ ಆಕೆ ಬಂದಂದೆ ಕಾಣುತ್ತದೆ.

ಮತ್ತೊಮ್ಮೆ ಅವಳ ದೇಹಸಿರಿಯನ್ನು ಕಂಡು ಒಲಿದು ಬಂದ, ನೋಡಲು ರಾಜನಂತಿದ್ದ ಶಂತನನ್ನು ಈ ಕಾರಣದಿಂದಲೇ ಅವಳು ತಿರಸ್ಕರಿಸಿಲ್ಲ. ಆಗ ಪರಾಶರ ಈಗ ಶಂತನು ಮುಂದೆ ಯಾರಾದರೂ ಹೀಗೆ ‘ಬಂದು ಹೋಗುವಂತಾದರೆ’ ನನ್ನ ಬಾಳು ಎಂತಹದು.? ಎಂದು ಚಿಂತಿಸಿರುವ ಆಕೆ ತಂದೆಯ ಒಪ್ಪಿಗೆ ಪಡೆಯಲು ಸೂಚಿಸುವ ಮೂಲಕ ಶಂತನೊಂದಿಗೆ ವಿವಾಹವಾಗಲು ಸಿದ್ಧವಿದ್ದಾಳೆ. ಸತ್ಯವತಿಗೀಗ ಬೇಕಿರುವುದು ಹತ್ತಾರು ಜನರೆದುರಿಗಿನ ವಿವಾಹವೇ ಹೊರತು ಪರಾಶರನೊಂದಿಗೆ ನಡೆದ ಮಂಜಿನ ಗೋಡೆಗಳ ನಡುವಿನ ಸುಖವಲ್ಲ.

ಹಿಂದೊಮ್ಮೆ ತಂದೆಯ ಗಮನಕ್ಕೂ ತಾರದೆ ಪರಾಶರನೊಂದಿಗೆ ನಡೆದು ಹೋದ ಘಟನೆಯ ಭಾರ ಅವಳ ಬೆನ್ನಿಗಿದೆ. ಈಗವಳು ಹಿರಿಯರ ಗಮನಕ್ಕೆ ಇಂಥಾ ವಿಚಾರಗಳನ್ನು ತಾರದೇ ಇರಳು.

ಹಾಗಾಗಿ ಇವಳಿಗೆ ಒಲಿದು ಬಂದ ಶಂತನ ಬಗ್ಗೆ ಅಸಹ್ಯ ಪಟ್ಟುಕೊಳ್ಳದೆ ಇವನೇ ನನ್ನ ಮದುವೆಯಾದರೆ ತಪ್ಪಿಲ್ಲವೆಂದೂ, ಪರಾಶರನಂಥಾ ಸ್ವಭಾವದವನೇ ಆದರೂ ಇವನೊಂದಿಗಿನ ವಿವಾಹದಿಂದ ತನ್ನ ಬದುಕು ಎಲ್ಲ ಹೆಂಗಸರಂತೆ ಹಸನಾಗಲಿ ಎಂಬ ಆಸೆಯೂ ಅವಳ ಮನದಲ್ಲಿದೆ. ತಂದೆಯ ಒಪ್ಪಿಗೆ ಬೇಡಿಯೇ ವಿವಾಹವಾಗುವ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾಳೆ. ಹಿಂದೊಮ್ಮೆ ತಂದೆಯ ಗಮನಕ್ಕೂ ತಾರದೆ ಪರಾಶರನೊಂದಿಗೆ ನಡೆದು ಹೋದ ಘಟನೆಯ ಭಾರ ಅವಳ ಬೆನ್ನಿಗಿದೆ. ಈಗವಳು ಹಿರಿಯರ ಗಮನಕ್ಕೆ ಇಂಥಾ ವಿಚಾರಗಳನ್ನು ತಾರದೇ ಇರಳು.

ಸತ್ಯವತಿಯು ಶಂತನ ಭೇಟಿಯಲ್ಲಿ ನಡೆದದ್ದನೆಲ್ಲಾ ದಾಶರಾಜನಿಗೆ ತಿಳಿಸಿರಬಹುದು. ಮಗಳ ಪೂರ್ವಾಶ್ರಮ ಅರಿತಿದ್ದ ದಾಶರಾಜನಿಗೆ ಪರಾಶರರಂತೆ ಆತುರವಾಗಿ ಮಗಳ ಕೈಹಿಡಿದು ‘ನೀ ಬಾ’ ಎಂದವನು ನಿಜವಾಗಿಯೂ ಮಗಳನ್ನು ಬಾಳಿಸುತ್ತಾನೆಯೇ? ಅದೂ ಅಂಬಿಗ ಸ್ತ್ರೀಯನ್ನು? ಎಂಬ ಪ್ರಶ್ನೆಗಳು ಎದುರಾಗಿವೆ. ಮದುವೆಯಾದ ಮೇಲೋ.. ಆಸೆ ತೀರಿದ ಮೇಲೋ.. ಇನ್ನೊಬ್ಬಳನ್ನು ಕಂಡು ಮತ್ತೆ ಮೋಹಿಸಿ ಅವಳನ್ನು ಮದುವೆಯಾದರೆ ಇವಳ ಗತಿಯೇನು? ಎಂದು ಚಿಂತಿಸುವ ದಾಶರಾಜ ಕ್ರಮಕ್ಕೆ ಪ್ರಾಪ್ತನೂ, ಹಕ್ಕುದಾರಿಕೆಯ ವಾರಸುದಾರನೂ ಆದ ಭೀಷ್ಮನ ಬಗ್ಗೆಯೂ ಯೋಚಿಸುತ್ತಾನೆ. “ಎನ್ನ ಮಗಳಿಗೆ ಪುಟ್ಟಿದಾತಂಗೆ” ರಾಜ್ಯಾಧಿಕಾರ ಕೊಡಬೇಕೆಂಬ ಷರತ್ತು ವಿಧಿಸುತ್ತಾನೆ.

‘ಪಟ್ಟದರಾಣಿ’ ಪದವಿ ಬೇಡುವುದ ಬಿಟ್ಟು ಮಗಳ ಮಗನಿಗೆ ಪಟ್ಟವನ್ನು ಕೇಳಿರುವುದು ಗಮನಾರ್ಹ. ತನ್ನ ಮಗಳು ಸದ್ಯಕ್ಕೆ ಪಟ್ಟದ ರಾಣಿಯಾದರೂ ಮುಂದೆ ಮತ್ತ್ಯಾವುದೋ ರಾಜತಾಂತ್ರಿಕ ಕಾರಣಗಳಿಂದ ಆಕೆಯ ಮಕ್ಕಳಿಗೆ ಮತ್ತು ಸತ್ಯವತಿಗೆ ಬಂದೊದೊಗಬಹುದಾದ ತೊಂದರೆಗಳನ್ನು ಕಂಡಿದ್ದಾನೆ. ಮಗಳನ್ನು ಪಟ್ಟದರಸಿ ಮಾಡುವ ಬದಲಿಗೆ ‘ಎನ್ನ ಮಗಳಿಗೆ ಪುಟ್ಟಿದಾತಂಗೆ’ ರಾಜ್ಯಾಧಿಕಾರ ಕೊಡಬೇಕೆನ್ನುವ ಬುದ್ಧಿವಂತಿಕೆ ಮತ್ತು ಅಪಾರ ಕಾಳಜಿ ದಾಶರಾಜನಲ್ಲಿದೆ.

ಇಂತಹ ದಾಶರಾಜನಿಗೆ ನಾಣ್ಚಿದಂತೆ ನಟಿಸಿ ಶಂತನಿಂದ ತನಗೆ, ತನ್ನ ತಂದೆಗೆ ಬರಬಹುದಾದ ಅಪಾಯವನ್ನು ತಪ್ಪಿಸಿ ತನ್ನ ಬಾಳನ್ನು ಹಸನು ಮಾಡಿಕೊಳ್ಳುವ ಬುದ್ಧಿವಂತ ಮಗಳಿಲ್ಲದಿರುತ್ತಾಳೆಯೇ? ಶಂತನ ಪ್ರಭುತ್ವದ ಕೋಪಕ್ಕೆ ತುತ್ತಾಗದೆ ತನ್ನ ಬಾಳನ್ನು ಒಲುಮೆ ಮತ್ತು ಜಾಣ್ಮೆಯ ಮೂಲಕ ಪರಿಪೂರ್ಣವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಸತ್ಯವತಿ ಸಫಲಳಾಗಿದ್ದಾಳೆ. ಇದು ಭವಿಷ್ಯದ ರಾಜಮಾತೆಗೆ ಇರಬೇಕಾದ ರಾಜ ತಾಂತ್ರಿಕತೆಯೂ ಕೂಡ.

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿ.

Leave a Reply

Your email address will not be published.